ಎಂಕ ತುಸು ವಾಚಾಳಿ. ಪ್ರತಿನಿತ್ಯ ಆತ ತನ್ನೂರಿನ ಗೂಡಂಗಡಿಯ ಮುರುಕು ಬೆಂಚಿನ ಮೇಲೆ ಕುಳಿತು, ಪೇಪರ್’ನಲ್ಲಿ ಮುಖ ಹುದುಗಿಸಿ, ಬಿಸಿ ಬಿಸಿ ಚಹಾ ಹೀರುತ್ತಾನೆ. ಓದಿದ ಕೇಳಿದ ಸುದ್ದಿಗೆ ತನ್ನದೊಂದಷ್ಟು ಒಗ್ಗರಣೆಯನ್ನೂ ಸೇರಿಸುವುದು ಆತನ ಚಾಳಿ. ಒಂಥರಾ ಸುದ್ದಿವಾಹಿನಿಗಳ ಪ್ರೈಮ್ ಟೈಮ್ ವಿಶ್ಲೇಷಣೆಯ ರೀತಿ. ಈ ಅವಸರದಲ್ಲಿ ಎಷ್ಟೋ ಬಾರಿ ಆತ ಸುದ್ದಿಯನ್ನು ಗ್ರಹಿಸುವಲ್ಲಿಯೇ ಎಡವಿ ಎಡವಟ್ಟು ಮಾಡಿಕೊಂಡಿದ್ದೂ ಇದೆ.
ಮೊನ್ನೆ ಮೊನ್ನೆ ಒಂದು ದಿನ ಆತ ಅದೇಕೋ ತುಸು ಹೆಚ್ಚೇ ಪ್ರಸನ್ನನಾಗಿದ್ದ. ಸುದ್ದಿಯೊಂದನ್ನು ಹಿಡಿದು ಕಾಯುತ್ತಿದ್ದ. ಮೋಟು ಬೀಡಿಯೊಂದಿಗೆ ಲೋಟ ಕಾಫಿ ಹೀರುತ್ತಾ ವಟಗುಟ್ಟುವವರು, ಜರ್ದಾ ಜಗಿದು ಪಿಚ್ಕಾರಿಯಂತೆ ಉಗುಳುತ್ತಾ ಪಟ್ಟಾಂಗ ಹಾರಿಸುವವರು, ಮೂರು ರುಪಾಯಿಯ ಅರ್ಧ ಚಾ ಕುಡಿದು ಐದು ರುಪಾಯಿಯ ಇಡೀ ಪೇಪರನ್ನು ಫ್ರೀಯಾಗಿ ಓದುವವರು ಹೀಗೆ ಒಬ್ಬೊಬ್ಬರಾಗಿ ಸೇರಿದರು. ಈಗ ಎಂಕ ಮೆಲ್ಲಗೆ ತನ್ನ ಮಾತಿನ ಬುಟ್ಟಿಯನ್ನು ಬಿಚ್ಚಲಾರಂಭಿಸಿದ. ಸರ್ಕಾರದ ನಿರ್ಧಾರವೊಂದು ಆತನ ಖುಷಿಗೆ ಕಾರಣವೆಂದು ಆತನ ಪೀಠಿಕೆಯಿಂದ ತಿಳಿಯಿತು. ಇನ್ನುಳಿದದ್ದನ್ನು ಎಂಕನ ಮಾತುಗಳಲ್ಲೇ ಕೇಳೋಣ.
“ನೋಡಿ ಸರ್ಕಾರಗಳಿಗೆ ನಮ್ಮಂತವರಿಗೆ ನೆರವು ನೀಡುವುದೆಂದರೆ ಅಲರ್ಜಿ. ಕೆಲವೊಮ್ಮೆ ಒಂದಷ್ಟು ನೆರವು ಸಿಕ್ಕಿದರೂ ಅರ್ಜಿ ಹಾಕಲು ಆದ ಖರ್ಚೂ ಗೀಟದು. ಆದರೆ ಸದ್ಯ ಸರ್ಕಾರ ನಮ್ಮಂಥವರ ನೆರವಿಗೆ ಬರಲು ನಿರ್ಧರಿಸಿದೆ” ಒಂದೇ ಉಸಿರಿಗೆ ಮುಖ ಅರಳಿಸಿಕೊಂಡು ಹೇಳಿದ. ಅಲ್ಲಿದ್ದವರೆಲ್ಲ ಕುತೂಹಲ ಹಾಗೂ ಆಶ್ಚರ್ಯ ದ ನೋಟ ಹರಿಸಿದರು. ಮುಂದುವರಿದು ಎಂಕ, “ನೋಡಿ, ಇದು ಬರೀ ಸಾವಿರ ಲಕ್ಷದ ಲೆಕ್ಕಾಚಾರವಲ್ಲ ಕೋಟಿ ಕೋಟಿ ಕಾಸಿನ ದೊಡ್ ಎಸ್ಟಿಮೇಟ್” ಎಂದ. ಎಲ್ಲರ ಕಿವಿ ನೆಟ್ಟಗಾಯಿತು. “ನಿರ್ಧಿಷ್ಟ ಇಲಾಖೆಯ ಯೋಜನೆಗೆ ಆಯಾ ಸಚಿವರು ಅನುದಾನ ಘೋಷಿಸುವುದು ಸಹಜ. ಆದರೆ ಸಂಪುಟದ ಬಹುತೇಕ ಸಚಿವರು ಒಂದೇ ಉದ್ಧೇಶಕ್ಕೇ ಕೋಟಿ ಕೋಟಿ ಮೀಸಲಿಟ್ಟ ಅಪರೂಪದ ಬೆಳವಣಿಗೆ” ಉತ್ಸಾಹದಿಂದ ಉಸುರಿದ. ಎಲ್ಲರೂ ಒಮ್ಮೆಗೆ ಹುಬ್ಬೇರಿಸಿದರು. “ಪ್ರಚಾರ ಬೇಡ ಎಂಬ ಕಾರಣಕ್ಕೆ ಹಣ ನೀಡಿದವರು ತಮ್ಮ ಪೂರ್ಣ ಹೆಸರು ಬರೆಯದೇ ಬರೀ ಇನಿಷಿಯಲ್’ನ್ನಷ್ಟೇ ನಮೂದಿಸಿದ ನಿಸ್ವಾರ್ಥ ನಡೆ. ಬಲಗೈ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದೆಂಬ ತತ್ವ. ಇದರಲ್ಲಿ ಪಕ್ಷಬೇಧ ಇಲ್ಲವಂತೆ” ಎಂಕ ಒಂದೇ ಸಮನೆ ಮುಕ್ತ ಕಂಠದಿಂದ ಶ್ಲಾಘಿಸತೊಡಗಿದ. ನೆರದವರ ಕಣ್ಣೋಟಗಳು ಪ್ರಶ್ನಾರ್ಥಕವಾದವು. ಒಮ್ಮತದ ಧ್ವನಿಯಲ್ಲಿ ಎಲ್ಲರೂ ಕಾತುರತೆಯಿಂದ ಯಾವುದಕ್ಕೆ ಅಂಥ ಹಣಕಾಸಿನ ನೆರವೆಂದು ಕೇಳಿದರು. “ಅಯ್ಯೋ, ಪೆದ್ದುಗಳಾ ನೀವ್ಯಾರು ನ್ಯೂಸ್ ನೋಡಲ್ವಾ? ಒಂದು ವಾರದಿಂದ ಎಲ್ಲೆಲ್ಲೂ ಅದೆ ಚರ್ಚೆ” ಎಂದವನೇ ಕೈಯಲ್ಲಿದ್ದ ಹಾಲಿನ ಹುಗ್ಗ(ಪಾತ್ರೆ)ವನ್ನು ಮುಂದಕ್ಕೆ ಚಾಚಿದ. ಅಲ್ಲಿದ್ದವರೆಲ್ಲಾ ಏನೊಂದೂ ಅರ್ಥವಾಗದೆ ಪರಸ್ಪರ ಮುಖ ನೋಡಿಕೊಂಡರು.
ಎಂಕ ಅತ್ಯುತ್ಸಾಹದಿಂದ “ಎಲಾ ಮಂಕು ದಿಣ್ಣೆಗಳಾ, ನಾನು ಇಲ್ಲಿಯವರೆಗೂ ಹೇಳಿದ್ದು ‘ಡೈರಿ’ ಅಭಿವೃದ್ಧಿಯ ಬಗ್ಗೆ. ಡೈರಿ ಅಂದ್ರೆ ಬೆಳಿಗ್ಗೆ ಸಂಜೆ ನಾವು ಹಾಲು ಹಾಕಿ ಬರ್ತೀವಲ್ವ ಅದೇ ಡೈರಿ. ಹಾಲು ಡೈರಿ. ಕಳೆದ ಕೆಲವು ದಿನಗಳಿಂದ ನ್ಯೂಸ್ ಚಾನೆಲ್’ಗಳಲ್ಲಿ ನಿತ್ಯ ಈ ಡೈರಿ ಬಗ್ಗೆಯೇ ಮಾತು-ಕತೆ, ಚರ್ಚೆ. ಕ್ಷಣಕ್ಕೊಂದು ಬ್ರೇಕಿಂಗ್ ನ್ಯೂಸ್. ಸದ್ಯ ಡೈರಿ ವ್ಯವಹಾರ ಮಾಡುವವರೂ ಕಿಂಗ್ ಮೇಕರ್ ಆಗುವ ಕಾಲ ಬಂತು” ಎನ್ನುತ್ತಾ ಹಿರಿ ಹಿರಿ ಹಿಗ್ಗಿದ. ತಕ್ಷಣ ಗುಂಪಿನಲ್ಲಿದ್ದ ತುಸು ತಿಳುವಳಿಕಸ್ಥನೊಬ್ಬ ಡೈರಿ ಮಹಾತ್ಮೆಯ ಅಸಲಿ ಕಥೆಯನ್ನು ಉಸುರಿ ಛೀಮಾರಿ ಹಾಕಿದ. ಎಂಕ ಡಯೇರಿಯಾ ಆದವರಂತೆ ಒಂದೇ ಸಮನೆ ಮನೆ ಕಡೆ ದೌಡಾಯಿಸಿದ.
ಓವರ್ ಡೋಸ್: ಸದ್ಯದ ಮಟ್ಟಿಗೆ, Dairyಯನ್ನು ದನ(ಹಸು) ಸಂಬಂಧಿ ಎನ್ನುವುದಾದರೆ, Diaryಯನ್ನು (ಕಾಳ)ಧನ ಸಂಬಂಧಿ ಎನ್ನಬಹುದು.