Featured ಅಂಕಣ

ಆಸ್ಕರ್ : ಮರುಭೂಮಿಯ ಓಯಸಿಸ್`ನಂತೇಕೆ?

89 ವರ್ಷದ ಸುದೀರ್ಘ ಇತಿಹಾಸ. ದೇಶ ವಿದೇಶಗಳ ಸಾವಿರಾರು ಸ್ಪರ್ಧಿಗಳು. ಜಗತ್ತಿನ ಪ್ರತಿಯೊಬ್ಬ ಸಿನಿ ತಾರೆಯ ಮಹತ್ತರವಾದ ಕನಸು. ಕರಿ ಸೂಟು-ಬೂಟಿನ ಉಡುಗೆಯಿಂದ ಮಾತಿಗಿಳಿಯುವ ನಿರೂಪಕರು. ಅಲ್ಲಿ ನಿರೂಪಣೆಯ ಅವಕಾಶ ಸಿಕ್ಕರೂ ಅದೇ ಮಹಾನ್ ಸಾಧನೆ! ಅತಿ ಕ್ಲಿಷ್ಟವಾದ ಆಯ್ಕೆಯ ವಿಧಾನ. ಪ್ರಶಸ್ತಿಯ 24 ವರ್ಗಗಳು. ಪ್ರಶಸ್ತಿಯ ಮೊತ್ತ ಮಾತ್ರ ಶೂನ್ಯ!  3.8 ಕೆಜಿಯ ಪ್ರತಿಮೆ. ಹೆಸರು ಆಸ್ಕರ್.

 

ಆಸ್ಕರ್ ಎಂದಾಕ್ಷಣ ಮೇಲಿಂದ ಮೇಲೆ ಕಣ್ಣ ಮುಂದೆ ಮೂಡುವ ವಿಚಾರಗಳಿವು. ವಿಶ್ವದ ಕಲಾ ಜಗತ್ತಿನ ಮಹತ್ತರವಾದ ಪುರಸ್ಕಾರಗಳಲ್ಲಿ ಒಂದಾಗಿರುವ ಆಸ್ಕರ್ ಚಲನಚಿತ್ರ, ನಟನೆ, ನಿರ್ದೇಶನ, ಸಂಗೀತ, ಛಾಯಾಗ್ರಹಣ,ವಸ್ತ್ರಾಲಂಕಾರ ಎಂಬ ಒಟ್ಟು 24 ವರ್ಗಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಎಲ್ಲ ಚಿತ್ರಗಳ  ಕಲಾತ್ಮಕ ಸಾಧನೆಗಳಿಗೆ ಸಮಾನ ವೇದಿಕೆಯನ್ನು ನೀಡುತ್ತಾ ಬಂದಿದೆ. ಮೇ 11,1929 ರಂದು ಅಮೇರಿಕಾದಲ್ಲಿ ಹುಟ್ಟಿಕೊಂಡ ‘ಅಕಾಡೆಮಿ ಆಫ್ ಮೋಷನ್ ಪಿಚ್ಚರ್ ಆರ್ಟ್ಸ್ ಅಂಡ್  ಸೈನ್ಸ್’ನ ಮೂಲಕ ಆಸ್ಕರ್ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಉತ್ತಮ ಚಿತ್ರ ನಿರ್ಮಾಣ ಪಟ್ಟಿಯಲ್ಲಿ ಇಟಲಿ ಇಲ್ಲಿಯವರೆಗೂ 14 ಬಾರಿ ಪ್ರಶಸ್ತಿಯನ್ನು ಗೆದ್ದು ಅಗ್ರಸ್ಥಾನವನ್ನು ಕಾಯ್ದಿರಿಸಿಕೊಂಡಿದೆ. ಒಂದು ಕಾಲಕ್ಕೆ ಪ್ರೇಮಿಗಳ ಪ್ರೇರಣೆಯಾಗಿದ್ದ  ‘ಟೈಟಾನಿಕ್’  ಚಿತ್ರ ಅದು ನಾಮಾಂಕಿತಗೊಂಡ ಹನ್ನೊಂದೂ ವರ್ಗಗಳಲ್ಲಿ ಪ್ರಶಸ್ತಿಯನ್ನು ಗೆದ್ದು ಇಂತಹ ಸಾಧನೆಗೈದಿರುವ ಕೆಲವೇ ಚಿತ್ರಗಳಲ್ಲಿ ಒಂದೆನಿಸಿದೆ. ಕ್ಯಾಥೆರಿನ್ ಹೆಪ್ಬುರ್ನ್ ಎಂಬ ಅಮೇರಿಕಾದ ನಟಿ ಹನ್ನೆರೆಡು ಬಾರಿ ನಾಮಾಂಕಿತಗೊಂಡು ನಾಲ್ಕು ಬಾರಿ ಉತ್ತಮ ನಟಿಯಾಗಿ ಪ್ರಶಸ್ತಿಯನ್ನು ಗೆದ್ದಿರುವುದು ಇಂದಿಗೂ ವಿಶ್ವದಾಖಲೆಯಾಗಿಯೇ ಉಳಿದಿದೆ.

ಭಾರತದ ಚಿತ್ರಗಳ ವಿಚಾರಕ್ಕೆ ಬಂದರೆ ‘ಆಸ್ಕರ್’ಪ್ರಶಸ್ತಿ ಎಂಬುದು ಮರುಭೂಮಿಯ ಓಯಸಿಸ್ ಆಗಿರುವುದು ಆಟವಾಡುವ ಮಕ್ಕಳಿಗೂ ತಿಳಿದಿರುವ ವಿಷಯ. ಇಲ್ಲಿಯವರೆಗೂ ಭಾರತದಿಂದ ಸುಮಾರು 49 ಚಿತ್ರಗಳನ್ನು ಆಸ್ಕರ್’ಗಾಗಿ ಆರಿಸಿ ಕಳುಹಿಸಲಾಗಿದೆಯಾದರೂ ಪ್ರಶಸ್ತಿಗೆ ನಾಮಾಂಕಿತಗೊಂಡವು ಕೇವಲ ಮೂರೇ ಮೂರು! ಅವುಗಳಲ್ಲಿ ಗೆದ್ದವು ಮಾತ್ರ ಶೂನ್ಯ!! ಉಳಿದ ಚಿತ್ರಗಳೆಲ್ಲ ಇತರೆ ಪರಭಾಷಾ ಚಿತ್ರಗಳ ಮುಂದೆ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾದವು. ವೈಯ್ಯಕ್ತಿಕ ಪ್ರಶಸ್ತಿಗಳ ವಿಷಯದಲ್ಲೂ ನಮ್ಮದು ಅದೇ ಸಾಧನೆ. ಇಂದಿನವರೆಗು  ನಾಲ್ಕು ಆಸ್ಕರ್ ಗಳು ಭಾರತೀಯರಿಗೆ ಬಂದರೂ ಅವುಗಳು ಸಾಧ್ಯವಾದದ್ದು ಇತರೆ ದೇಶದ ನಿರ್ದೇಶಕ ನಿರ್ಮಾಪಕರ ಚಿತ್ರಗಳ ಮೂಲಕವೇ ಎಂಬುದು ಗಮನದಲ್ಲಿರಬೇಕಾದ ವಿಚಾರ.

40,000 ಚಿತ್ರಮಂದಿರಗಳಿರುವ ಅಮೇರಿಕದಲ್ಲಿ ವಾರ್ಷಿಕವಾಗಿ ನಿರ್ಮಾಣಗೊಳ್ಳುವ ಚಿತ್ರಗಳು ಸುಮಾರು 600 ರ ಆಸುಪಾಸು. ಆದರೆ  ಕೇವಲ 14,000 ಚಿತ್ರಮಂದಿರಗಳಿರುವ ನಮ್ಮಲ್ಲಿ ವಾರ್ಷಿಕವಾಗಿ ಜೀವ ಪಡೆಯುವ ಚಿತ್ರಗಳ ಸಂಖ್ಯೆ ಬರೋಬ್ಬರಿ1200 ಅಥವಾ ಅದಕ್ಕಿಂತಲೂ ಹೆಚ್ಚು! ಅಲ್ಲದೆ ಪ್ರತಿಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಕರ್ ಅನ್ನು ದೋಚಿಕೊಳ್ಳುವರು ಅಮೆರಿಕದವರೇ ಎಂಬುದು ಆ ಚಿತ್ರಗಳು ಹಾಗು ಅವುಗಳ ಹಿಂದಿರುವ ಕೌಶಲ್ಯವನ್ನು ಗಮನಿಸಿದರೆ  ತಿಳಿಯಪಡುತ್ತದೆ. ಆದರೆ ನಮ್ಮಲ್ಲಿ ಕಡಲೆ ಮಿಠಾಯಿಯಂತೆ ಚಿತ್ರಗಳನ್ನು ಮಾಡಿ ಎಸೆದರೂ ಕನಿಷ್ಠ ಒಂದು ಚಿತ್ರವಾದರೂ ಆಸ್ಕರ್’ನ ಗುರಿ ಮುಟ್ಟದಿರುವುದು ವಿಪರ್ಯಾಸದ ಸಂಗತಿ. ಹಾಗಾದರೆ ನಮ್ಮ ಈ ಸಾವಿರಾರು ಚಿತ್ರಗಳು ಎಡವುತ್ತಿರುವುದು ಎಲ್ಲಿ?ಅವುಗಳಲ್ಲಿ ಇರುವ ದೋಷಗಳಾದರು ಎಂತಹದ್ದು? ಒಂದು ಪಕ್ಷ ನಮ್ಮ ಚಿತ್ರಗಳಲ್ಲಿ ದೋಷಗಳಿರುವುದು ನಿಜವೇ ಆಗಿದ್ದಲ್ಲಿ ಅದನ್ನು ಸರಿಪಡಿಕೊಳ್ಳಲು ನಮಗೆ ಅರ್ಧ ಶತಮಾನವೇ ಸಾಕಾಗಲಿಲ್ಲವೇ? ಅಥವ ಮಿಂಚಿನಂತೆ ಬಂದು ಮರೆಯಾಗುವ ಉತ್ತಮ  ಚಿತ್ರಗಳನ್ನು ಆರಿಸಿ ಕಳಿಸುವ ಕ್ಷಮತೆ, ಚತುರತೆ ನಮ್ಮ ಆಯ್ಕೆದಾರರಿಗಿವೆಯೇ?

ದೇಶದ ಅತಿ ಉತ್ತಮ ಚಿತ್ರವೆಂದು ಗುರುತಿಸಲ್ಪಡುವುದು ಅದಕ್ಕೊಂದು ರಾಜ್ಯ, ರಾಷ್ಟ್ರೀಯ ಅಥವಾ ಯಾವುದಾದರೊಂದು ಅಂತಾರಾಷ್ಟ್ರೀಯ ಪ್ರಶಸ್ತಿ ದೊರೆತಾಗ.(ಪ್ರಶಸ್ತಿಗಳನ್ನು ಪಡೆಯದೆಯೇ ಉತ್ತಮ ಚಿತ್ರಗಳು ಎನಿಸಿಕೊಂಡಿರುವ ಹಲವು ಚಿತ್ರಗಳಿರುವಾಗ ಈ ಮಾತು ಪೂರಾ ನಿಜವೆಂದು ಹೇಳಲಾಗದು.ಆದರೂ ಸಹಸ್ರ ಚಿತ್ರಗಳ ಸರೋವರದಲ್ಲಿ ಮೇಲ್ನೋಟಕ್ಕೆ ಅತಿ ಉತ್ತಮ ಚಿತ್ರಗಳ ವಿಂಗಡಣೆಗಾಗಿ ಈ ಮಾತನ್ನು ಆಧಾರವನ್ನಾಗಿ ಇಟ್ಟುಕೊಳ್ಳೋಣ.) ಇಂತಹ ಪ್ರಶಸ್ತಿಗಳಿಗೆ ಆರಿಸಲ್ಪಡುವ ಹೆಚ್ಚಿನ ಚಿತ್ರಗಳು ಜೀವನ ಮೌಲ್ಯಗಳೊಟ್ಟಿಗೆ ಸಾಮಾಜಿಕ ಸಮಸ್ಯೆಗಳನ್ನೂ ಬಿಂಬಿಸುವ ಚಿತ್ರಗಳಾಗಿರುತ್ತವೆ. ನೋಡುಗನನ್ನು ಒಂದು ಹೊಸ ವಿಚಾರಧಾರೆಯತ್ತ ಮುಖ ಮಾಡಿಸುತ್ತವೆ. ನಾವುಗಳು ಇಲ್ಲಿಯವರೆಗೂ ಆಸ್ಕರ್’ಗೆ ಕಳಿಸಿರುವ ಒಟ್ಟು 49 ಚಿತ್ರಗಳಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿರುವ ಚಿತ್ರಗಳ ಸಂಖ್ಯೆ ಕೇವಲ ಮೂರೋ ನಾಲ್ಕೋ ಅಷ್ಟೇ. ಅಂದರೆ ಆರಿಸಿ ಕಳಿಸಿರುವ ಸುಮಾರು 95% ಗಿಂತ ಹೆಚ್ಚಿನ ಸಿನಿಮಾಗಳ ಗುಣಮಟ್ಟ ಹೇಗಿರಬಹುದು ಹಾಗು ಅಂತಹ ಚಿತ್ರಗಳ ಮೌಲ್ಯಮಾಪನ  ಎಷ್ಟರ ಮಟ್ಟಿಗೆ ಆಗಿರಬಹುದು  ಎಂದು ನಾವು ಊಹಿಸಬಹುದು. ಅಲ್ಲದೆ ಅವುಗಳಲ್ಲಿ ಸುಮಾರು 70% ಚಿತ್ರಗಳು ಬಾಲಿಹುಡ್ ಚಿತ್ರಗಳೇ ಆಗಿವೆ. ಅರ್ಥಾತ್ ನಮ್ಮ ದೇಶದ ಅರ್ಧಕ್ಕಿಂತ ಹೆಚ್ಚಿನ ಇತರೆ ಚಿತ್ರ ಮಂಡಳಿಗಳಿಗೆ (ಕನ್ನಡ,ಮಲಯಾಳಂ, ತಮಿಳು, ತೆಲುಗು, ಬೆಂಗಾಲಿ, ಮರಾಠಿ ಇತ್ಯಾದಿ)  ಆಸ್ಕರ್’ನ ಸ್ತರದ ಚಿತ್ರಗಳನ್ನು ಮಾಡುವ ಕ್ಷಮತೆ ಇಲ್ಲವೆಂದಾಯಿತು, ಅಲ್ಲವೇ!?

 

ವಾಸ್ತವವಾಗಿ ಆಸ್ಕರ್’ಗಾಗಿ  ಚಿತ್ರಗಳನ್ನು ಆಯ್ಕೆ ಮಾಡುವ ಕೈಗಳು ಹೆಚ್ಚಾಗಿ ಬಾಲಿವುಡ್’ನ ಪೋಷಣೆಯಿಂದಲೇ ಬೆಳೆದಿರುತ್ತವೆ. ಹಾಗಾಗಿ ಆ ಚಿತ್ರಗಳಿಗೇ ಮಣೆಯನ್ನು ಅಚ್ಚುಗಟ್ಟಾಗಿ, ಹೆಚ್ಚಾಗಿ ಹಾಕಲಾಗುತ್ತದೆ. ಪರಿಣಾಮ ಇತರೆ ಭಾಷೆಯ ಚಿತ್ರಗಳು ಕಡೆಗಾಣಿಸಲ್ಪಡುತ್ತವೆ. ಉದಾಹರಣೆಗೆ 1970 ಹಾಗು 75 ರಲ್ಲಿ ಮೂಡಿಬಂದ ‘ಸಂಸ್ಕಾರ’ ಹಾಗು’ಚೋಮನ ದುಡಿ’ ಕನ್ನಡ ಚಿತ್ರಗಳು ಅಂದು ಹಲವು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು, ರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದು ಎಲ್ಲೆಡೆ ಸದ್ದು ಮಾಡಿದರೂ ದೇಶದಿಂದ ಆಸ್ಕರ್’ಗೆ ನಾಮಕಿಂತಗೊಳ್ಳಲು ಮಾತ್ರ ವಿಫಲವಾದವು. ಇಲ್ಲಿಯವರೆಗೂ ಬೆಂಗಾಲಿ, ಮಲಯಾಳಂ ಹಾಗು ಕನ್ನಡ ಚಿತ್ರಗಳ ರಾಷ್ಟೀಯ ಪ್ರಶಸ್ತಿಗಳನ್ನು ಒಂದೆಡೆ ಗುಡ್ಡೆ ಹಾಕಿದರೆ ನಮಗೆ ಸುಮಾರು ಮೂವತ್ತರಿಂದ ಮೂವತ್ತೈದು ಸಿಗಬಹುದು! ಆದರೂ ಈ ಚಿತ್ರಗಳು ಆಸ್ಕರ್’ನ ರೇಸ್ ನಲ್ಲಿ ಕಂಡದ್ದು ಮಾತ್ರ ತೀರಾ ವಿರಳ.

ಕಲೆಯ ಹಲವು ಪ್ರಕಾರಗಳಲ್ಲಿ ಚಿತ್ರ ನಿರ್ಮಾಣವೆಂಬುದು ಅತಿ ಮಹತ್ತರವಾದುದು. ಸಾಹಿತ್ಯ,ಸಂಗೀತ, ಕಥೆ,ನಟನೆ ಎಂಬ ಹಲವಾರು ಕಲಾ ವಿಭಾಗಗಳು ಒಟ್ಟಿಗೆ ಬೆರೆತು ಅರಳುವ ಮತ್ತೊಂದು ಪ್ರಕಾರವಿಲ್ಲ.ಆಸ್ಕರ್ ನ ಮೂಲ ಉದ್ದೇಶವೂ ಇದೆ ಆಗಿರುತ್ತದೆ.ಪ್ರತಿಯೊಂದು ಕಲೆಯ ವಿಭಾಗವನ್ನು ಅತ್ಯುನ್ನತ ಸ್ತರದಲ್ಲಿ ಮೂಡಿಸಬಲ್ಲ  ಕ್ಷಮತೆಯನ್ನು ಮಾತ್ರ ಇಲ್ಲಿ ಪರಿಗಣಿಸಲಾಗುತ್ತದೆ.ಉಸಿರಾಡುವ ಗಾಳಿಗಿಂತಲೂ ಹಣವೇ ಮುಖ್ಯವಾಗಿರುವ ನಮ್ಮಲಿ ಚಿತ್ರಗಳ ಗುಣಮಟ್ಟವನ್ನು ಇಂತಹ ಹಣದ ರಾಶಿಗೆ ತುಲನೆ ಮಾಡಿ ಅತಿ ಹೆಚ್ಚು ಕೋಟಿಗಳನ್ನು ಗಳಿಸುವ ಚಿತ್ರಗಳನ್ನು ಬ್ಲಾಕ್ ಬಸ್ಟರ್  ಚಿತ್ರಗಳೆಂಬ ಬಿರುದನ್ನು ಕೊಟ್ಟುಬಿಡುತ್ತೇವೆ.ಅಲ್ಲದೆ ಒಮ್ಮೆ ಚಿತ್ರ ಬಿಡುಗಡೆಗೊಂಡು ಕೆಲವೇ ದಿನಗಳೊಳಗೆ ಅವಾರ್ಡ್ ಫಂಕ್ಷನ್’ಗಳೆಂಬ ದೊಂಬಿಯನ್ನು ಏರ್ಪಡಿಸಿ ಸ್ವಘೋಷಿತ ಪ್ರಶಸ್ತಿಗಳನ್ನು ಪಡೆದುಕೊಳ್ಳುವುದು ಸಹ ತೀರಾ ಸಹಜದ ಸಂಗತಿಯಾಗಿ ಹೋಗಿದೆ.ಇಂದಿನ ಭಾಗಶಃ ಚಿತ್ರಗಳ ಮೂಲ ಉದ್ದೇಶ ಕೇವಲ ಹಣ ಸಂಪಾದನೆಯೇ ಆಗಿರುವಾಗ ಸಾಹಿತ್ಯ ಹಾಗು ಸಂಗೀತದ ರಸವನ್ನು ಹೊಮ್ಮಿಸಿ ಚಿತ್ರವನ್ನು ಮೂಡಿಸಬೇಕೆಂಬ ಅವಶ್ಯಕತೆ ಯಾರಿಗೆ ತಾನೇ ಬೇಕು?

ಚಿತ್ರಗಳಲ್ಲಿ ಕೆಲವೊಂದು ಸಣ್ಣ ಪುಟ್ಟ ವಿಷಯಗಳನ್ನು ನಕಲು ಮಾಡಿದರೂ ಸಹ ಉತ್ತಮವಾದ ಕಥೆ ಹಾಗು ಸಾಹಿತ್ಯದ ಮುಂದೆ ಅಂತಹ ವಿಷಯಗಳು ಕುಬ್ಜವಾಗುತ್ತವೆ.ಮನೋರಂಜನೆಯ ನಿಟ್ಟಿನಲ್ಲಿ ಇದು ಸರಿ ಎನಿಸಿದರೂ ಆಸ್ಕರ್ ನ ಸ್ಥರದಲ್ಲಿ ಇಂತಹ ‘ಕಾಪಿ ಪೇಸ್ಟ್’ ಕ್ರಿಯಾಶೀಲತೆಗೆ ಅವಕಾಶವಿರುವುದಿಲ್ಲ. ಚಿತ್ರಗಳನ್ನು ಆಯ್ಕೆ ಮಾಡುವಾಗ ನಾವುಗಳು ಇಂತಹ ಕನಿಷ್ಠ ಅಂಶಗಳನ್ನೂ ಪರಿಗಣಿಸದಿರುವುದು ವಿಪರ್ಯಾಸದ ಸಂಗತಿ. ಉದಾಹರಣೆಗೆ 2012 ರಲ್ಲಿ ಆಸ್ಕರ್ ಗೆ ನಾಮಾಂಕಿತಗೊಂಡಿದ್ದ ರಣ್ ಬೀರ್ ಕಪೂರ್ ಅಭಿನಯದ ‘ಬರ್ಫಿ’ ಚಿತ್ರದ ಕೆಲವು ಹಾಸ್ಯದ ಸನ್ನಿವೇಶಗಳು ಚಾರ್ಲಿ ಚಾಪ್ಲಿನ್ ನ ಅಥವಾ ಇತರೆ ಚಿತ್ರಗಳ  ಪಕ್ಕಾ ನಕಲಾಗಿವೆ! ಅಂದು ಆಸ್ಕರ್’ನ ಆಯ್ಕೆದಾರರು ರಣಬೀರನ ನಟನೆಯನ್ನು ನೋಡಿ ಖುಷಿಪಟ್ಟಿರುವುದಕ್ಕಿಂತ ಮಿಗಿಲಾಗಿ ನಮ್ಮವರ ಬುದ್ಧಿವಂತಿಕೆಯನ್ನು ಹಾಗು ಬಂಡತನವನ್ನು ಕಂಡು ಹೆಚ್ಚಾಗಿ ನಕ್ಕಿರಬಹುದು.ಇಂತಹ ಪರಿಸರದಲ್ಲಿ ನಮ್ಮ ಚಿತ್ರಗಳು ಆಸ್ಕರ್’ಗಳನ್ನು ತಂದುಕೊಡುವವೆಂಬ ಆಶಾವಾದ ನಮಗೆ ಎಷ್ಟರ ಮಟ್ಟಿಗೆ ಸರಿ?

ಸಾಮಾಜಿಕ ಮೌಲ್ಯಗಳ ಜೊತೆಗೆ ಮನೋರಂಜನೆಗೂ ಅಷ್ಟೇ ಮಟ್ಟಿನ ಪ್ರಾಮುಖ್ಯತೆಯನ್ನು ನೀಡಿ ಮೂಡಿಸಬಲ್ಲ ಚಿತ್ರ ನಿರ್ಮಾಪಕ ನಿರ್ದೇಶಕರು ನಮ್ಮಲ್ಲಿ ಇಲ್ಲವೆಂದಲ್ಲ. ಆದರೆ ಹೊಟ್ಟೆಗೇ ಹಿಟ್ಟಿರದಿರುವಾಗ ಜುಟ್ಟಿಗೆ ಮಲ್ಲಿಗೆ ಹೂವನ್ನು ಎಲ್ಲಿಂದ ತಂದಾರು? ಪರಿಣಾಮ ನಾಯಕ ಮುಟ್ಟಿದ ಮಾತ್ರಕ್ಕೆ ವಿಲನ್ ಎಂಬ ಗುಂಡುಕಲ್ಲಿನಂತ ವ್ಯಕ್ತಿ ತರಗಲೆಯಂತೆ ಹಾರಿಹೋಗುತ್ತಾನೆ! ಕೋಟ್ಯಾಧೀಶ್ವರನ ಮಗಳಿಗೆ ಒಮ್ಮಿಂದೊಮ್ಮೆಗೆ ಚಪ್ಪಲಿ ಹೊಲಿಯುವವನ ಮೇಲೆ ಒಲವು ಹುಕ್ಕಿ ಹರಿದು ನಡುರಸ್ತೆಯಲ್ಲೇ ಚುಂಬಿಸುವ ಮಟ್ಟಿಗೂ ಬೆಳೆದುಬಿಡುತ್ತದೆ. ಕೆ.ಜಿ ಗಟ್ಟಲೆ ಮೇಕ್ ಅಪ್ ಜೊತೆಗೆ ಘಾಡವಾದ ಕೆಂಪು ಲಿಪ್ ಸ್ಟಿಕ್ ಅನ್ನು ಮೆತ್ತಿರುವ ಹುಡುಗಿ ನಾಯಕಿಯಾಗಿದ್ದಾಳೆ ಎಂದು ಯೋಚಿಸುತ್ತಿರುವಾಗಲೇ ಇದು’ಹಾರರ್ ಚಿತ್ರ’ ವೆಂಬ ಶೀರ್ಷಿಕೆ ಪರದೆಯ ಮೇಲೆ ಮೂಡುತ್ತದೆ!,ಚಿತ್ರಕಥೆಗೂ ತಮಗೂ ಸಾಸಿವೆ ಕಾಳಷ್ಟೂ ಸಂಬಂಧವಿಲ್ಲದ ಹಾಡುಗಳು ಹಾಗು ಅವುಗಳಲ್ಲಿ ಅರೆಬೆತ್ತಲಾಗಿ ಕುಣಿವ ಪಾತ್ರಗಳು ಪ್ರತ್ಯಕ್ಷವಾಗುತ್ತವೆ, ನಾಯಕನ ಮುಖದ ಮೇಲೆ ಒಮ್ಮಿಂದೊಮ್ಮೆಗೆ ಹುಲಿ ಸಿಂಹಗಳು ಬಂದು ಘರ್ಜಿಸಿ ಮರೆಯಾಗುತ್ತವೆ (ಒಂದು ವೇಳೆ ಅವೇ ಪ್ರಾಣಿಗಳು ದೇಹವಿರದ ತಮ್ಮ ರುಂಡವನ್ನೇನಾದರೂ ಹೀಗೆ ವಿಚಿತ್ರವಾದ ಭಂಗಿಯಲ್ಲೇನಾದರೂ ಕಂಡರೆ ಇದ್ದೆನೋ ಬಿದ್ದೆನೋ ಎಂದು ಹೆದರಿ ಓಟ ಕೀಳುವುದಂತು ಗ್ಯಾರೆಂಟಿ),ನಾಯಕ ತೊಡೆ ತಟ್ಟಿದ ಮಾತ್ರಕ್ಕೆ ನಾಯಿಮರಿಯಂತೆ ಬಾಲಮುದುರಿ ಹಿಂದೆ ಸರಿಯುವ ಸಾವಿರಾರು ಹಾರ್ಸ್’ಪವರ್’ನ ರೈಲು ಬಂಡಿಗಳು, ನೂರಾರು ಮೀಟರ್ ದೂರದಲ್ಲಿರುವ ಕಾರಿನ ಫ್ಯೂಯೆಲ್ ಟ್ಯಾಂಕಿನ ರಂದ್ರಕ್ಕೆ ಗುರಿಹಿಡಬಲ್ಲಂತಹ ವಿಸ್ಮಯಕಾರಿ ಕ್ರಿಯಾಶೀಲತೆಗಳು ನಮಗೆ ಆಸ್ಕರ್ ಅನ್ನು ತಂದು ಕೊಡಬಲ್ಲವೇ? 

ಒಟ್ಟಿನಲ್ಲಿ ನೋಡುಗರನ್ನು ಒಂದು ಭ್ರಮಾಪ್ರಪಂಚದೊಳಗೇ ಕೊಂಡೊಯ್ದು ಮನೋರಂಜಿಸುವ ಕಲೆ ನಮ್ಮವರಿಗಾದರೆ,ಇವುಗಳ ಹೊರತಾಗಿಯ ಚಿತ್ರಗಳನ್ನು ಕಣ್ಣೆತ್ತು ನೋಡದ ಚಾಳಿ ನಮ್ಮದು. ಆದರೆ ಇದನ್ನು ಎಂದಿನವರೆಗೆ ಸಹಿಸಲಾದೀತು?ಒಲಿಂಪಿಕ್ಸ್ ಹಾಗು ಆಸ್ಕರ್’ನಲ್ಲಿ ಹಿಂದುಳಿದಿರುವ ದೊಡ್ಡ ದೇಶವೆಂಬ ಹಣೆಪಟ್ಟಿ ಇನ್ನೂ ಎಂದಿನವರೆಗೆ ನಾವುಗಳು ಕಟ್ಟಿಕೊಂಡಿರಬೇಕು? ಅರ್ಥವರಿಯದ ಕಾರ್ಯಗಳಿಗೆ ಕೋಟಿ ಕೋಟಿ ಸುರಿದು ಹಣವನ್ನು ಪೋಲುಮಾಡುವ ನಮ್ಮ ಸರ್ಕಾರಗಳು, ಚಿತ್ರಮಂಡಳಿಗಳು ಉತ್ತಮ ಚಿತ್ರಗಳನ್ನು ಮಾಡಲು ಆರ್ಥಿಕವಾಗಿಯೂ ಹಾಗು ಅರ್ಥಪೂರ್ಣವಾಗಿಯೂ  ಸಹಕರಿಸಬೇಕಾಗಿದೆ. ಕೇಂದ್ರ ಸರ್ಕಾರದಿಂದ  ನಡೆಯುವNFDCI (National Film Development Corporation Of India) ಸಂಸ್ಥೆ  ಇಲ್ಲಿಯವರೆಗೂ ಸುಮಾರು ಮುನ್ನೂರು ಚಿತ್ರಗಳನ್ನು ನಿರ್ಮಿಸಿದೆ. ಕೇವಲ ಕಥೆ ಹಾಗು ಸಾಹಿತ್ಯಗಳೇ ಮುಖ್ಯ ಭೂಮಿಕೆಯಲ್ಲಿ ಬರುವ ಈ ಚಿತ್ರಗಳು ಭಾರತ ದೇಶವನ್ನು ವಿಶ್ವಕ್ಕೆ ಪರಿಚಯಿಸಿಕೊಟ್ಟ ಸಣ್ಣ ಸಣ್ಣ ಕಿಟಕಿಗಳಂತೆ ಕಂಡರೂ ಆಸ್ಕರ್’ನ ಮಟ್ಟಿನ ಯಶಸ್ಸು ಗಳಿಸಲು ಇವುಗಳಿಗೂ ಸಾಧ್ಯವಾಗಿಲ್ಲ. ಪರಿಣಾಮ ಇನ್ನೂ ಹೆಚ್ಚಿನ ಪ್ರಯತ್ನ ನಮ್ಮಲ್ಲಿ ಆಗಬೇಕಿದೆ. ಯಾವುದೇ ಆಡಂಬರಗಳ ಅವಶ್ಯಕತೆ ಇರದೇ ಗಾಢವಾದ ಸಾಮಾಜಿಕ ಸಂದೇಶವನ್ನೂ ಸಹ ಸಾಮಾನ್ಯನಿಗೆ ತಿಳಿಯುವಂತೆ ಅತಿ ಸರಳವಾಗಿ,ಮನೋರಂಜನೆಯ ಮೂಲಕವೇ ತಲುಪುವಂತೆ ಮಾಡುವ ನಿರ್ದೇಶಕರ ಗುಂಪು ನಮ್ಮಲ್ಲಿ ಬರಬೇಕಿದೆ. ನೂರಾ ಮೂವತ್ತು ಕೋಟಿ ಜನರಲ್ಲಿ ಒಲಿಂಪಿಕ್ಸ್’ನ ಒಂದು ಚಿನ್ನದ ಪದಕವನ್ನು ಗೆಲ್ಲಲು ತೋರುವ ಹಪಹಪಿಸುವಿಕೆ ಆಸ್ಕರ್’ನ ಒಂದು ಮೂರ್ತಿಯನ್ನೂ ಗೆಲ್ಲಲು ತೋರಿಸಬೇಕಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!