Featured ಅಂಕಣ

ಬವಣೆಯ ಬದುಕಿನಲ್ಲಿ ತಾವರೆಗಳಂತರಳಿದ ಸ್ಫೂರ್ತಿಯ ಕಿರಣಗಳು

ಮೇರಿ ಕ್ಯೂರಿ, ಅನ್ನಿ ಬೆಸೆಂಟ್,  ಬೆನಝೀರ್ ಭುಟ್ಟೋ, ಇಂದಿರಾ ಗಾಂಧಿ, ಕಿತ್ತೂರ್ ರಾಣಿ ಚೆನ್ನಮ್ಮ, ಸರೋಜಿನಿ ನಾಯ್ಡು, ಕಲ್ಪನಾ ಚಾವ್ಲಾ, ಸಾನಿಯಾ ಮಿರ್ಜಾ ಅಥವಾ ಇತ್ತೀಚಿನ ನಮ್ಮ ಮಹಿಳಾ ಹಾಕಿ ತಂಡ ಇತ್ಯಾದಿ ಇತ್ಯಾದಿ. ಪ್ರತಿ ವರ್ಷ ಮಾರ್ಚ್ 8 ಬಂತೆದರೆ ಹೆಚ್ಚಾಗಿ ಕೇಳಿಬರುವ ಹೆಸರುಗಳಿವು. ತಮ್ಮ ಸ್ವಂತ ಶ್ರಮದಿಂದ ಹಾಗು ಬಿಡದ ಛಲದಿಂದ ಸಮಾಜವೇ ಅಡ್ಡಿಬಂದರೂ ಜಗ್ಗದೆ ಯಾರ ಮಾತಿಗೂ ಕುಗ್ಗದೆ ಕಲೆ, ಸಾಹಿತ್ಯ, ಕ್ರೀಡೆ, ವಿಜ್ಞಾನ ಹಾಗು ಸ್ವಾತಂತ್ರ್ಯ ಚಳುವಳಿಯಂಬ ಹಲವು ವಿಷಯಗಳಲ್ಲಿ ಸಾಧನೆಗೈಯಲು ಗಂಡು ಹೆಣ್ಣೆಂಬ ತಾರತಮ್ಯವಿಲ್ಲವೆಂಬುದನ್ನು ಜಗತ್ತಿಗೆ ತೋರಿಕೊಟ್ಟ ಹಲವು ಹೆಸರುಗಳಲ್ಲಿ ಕೆಲವುಗಳಿವು. ಪ್ರತಿಯೊಂದು ಹೆಸರಿನ ಹಿಂದಿರುವ ಸಾಹಸವನ್ನು ಹೆಣ್ಣೆಂಬ ಪ್ರತಿಯೊಂದು ಶಕ್ತಿಯ ಜ್ವಾಲೆಯೂ ತಿಳಿಯಲೇ ಬೇಕು. ತಮ್ಮ ಜೀವನದಲ್ಲಿ ಸಾಧ್ಯವಾದಷ್ಟನ್ನು ಅಳವಡಿಸಿಕೊಳ್ಳಬೇಕು.

ಇದು ಓದು ಬರಹ ಕಲಿತು, ಸುದ್ದಿ ಸಮಾಚಾರವನ್ನು ನೋಡಿ ಬೆಳೆಯುವ ಹೆಣ್ಣು ಮಕ್ಕಳಿಗಾಯಿತು. ಆದರೆ ಇದರಿಂದ ವಿಮುಖರಾದವರು? ಅವರಿಗೆ ಇವರುಗಳ ಬಗ್ಗೆ ಹೇಳುವವರ್ಯಾರು? ಓದು ಬರಹ ಬಾರದ ಮಾತ್ರಕ್ಕೆ ಇಂದು ಅದೆಷ್ಟೋ ಮಹಿಳೆಯರಿಗೆ ಇಂತಹ ಹಲವರ ಸದೃಢ ಜೀವನ ಪ್ರೇರಣೆಯಾಗದೆ ಉಳಿಯುತ್ತದೆಯೇ? ಅಥವ ಕೋಳಿ ಕೂಗುವ ಮುನ್ನವೇ ಎದ್ದು ಊರಿನ ಎಪಿಎಂಸಿ ಗೆ ಹೋಗಿ, ತರಕಾರಿ ಹಾಗು ಸೊಪ್ಪನ್ನು ಕೊಂಡು, ಕುಕ್ಕೆಗೆ ತುಂಬಿ ಎಂಟು ಘಂಟೆಯಾಗುವಷ್ಟರಲ್ಲಿ ಊರೆಲ್ಲ ಸುತ್ತಿ, ಗಂಟಲು ಒಣಗುವಂತೆ ಅರಚಿ, ಚೌಕಾಶಿ ಮಾಡುವ ಶ್ರೀಮಂತರೊಟ್ಟಿಗೆ ವಾದಿಸಿ, ಕುಕ್ಕೆಯನ್ನು ಖಾಲಿಮಾಡಿ ಬಿರಬಿರನೇ ಮನೆಗೆ ಬಂದು ತಿಂಡಿಯನ್ನು ಮಾಡಿಟ್ಟು, ಮಕ್ಕಳನ್ನು ಸ್ಕೂಲಿಗೆ ಹೊರಡಿಸಿ, ಮನೆಗೆಲಸವನ್ನು ಮಾಡಿ ಬಾಗಿಲಿಗೆ ಬೀಗವನ್ನು ಜಡಿದು ಮತ್ತೊಬ್ಬರ ಮನೆಯ ಮುಸುರೆ ತಿಕ್ಕಿ, ಅಷ್ಟೋ ಇಷ್ಟೋ ಹೊಟ್ಟೆಗೆ ತಿಂದು, ಸಂಜೆ ಕುಡಿದು ಬರುವ ಗಂಡನೊಟ್ಟಿಗೆ ಕಾದಾಡಿ, ಮಲಗೆದ್ದು ನಾಳೆ ಪುನಹ ಅದೇ ಹುರುಪಿನಲ್ಲಿ ಜೀವನವನ್ನು ಶುರುಮಾಡುವ ಕಾಳಮ್ಮ, ನಿಂಗಮ್ಮ ಅಥವ ಜಯಕ್ಕಂದಿರೂ ಸಹ ಸ್ಪೂರ್ತಿಯ ಸೆಲೆಯಾಗಬಲ್ಲರೇ? ಬಹುಕಾರ್ಯ ವಲ್ಲಭೆಯರಾದ ಇವರುಗಳಿಗೂ ಆತ್ಮಸ್ಥೈರ್ಯ ತುಂಬಿ ಬೆನ್ನ ಹಿಂದೆ ನಿಂತು ಬೆಳೆಸಿದರೆ ಇಂದು AC ಕೋಣೆಗಳ ಒಳಗೆ ಲ್ಯಾಪ್ಟಾಪ್ ಮುಂದೆ ಮೈ ಬಗ್ಗಿಸದೆ ಕೆಲಘಂಟೆಗಲಷ್ಟೇ ಕೂತು ಮಾಡುವ ಕೆಲಸದಲ್ಲೇ ಬೇಸತ್ತುನನ್ನ ಬದುಕೇ ಹೈರಾಣಾಯಿತುಎಂದು ಬೊಬ್ಬೆಹಾಕುವ ಹಲವರಿಗೆ ಪ್ರಶ್ನಾರ್ಥಕವಾಗಬಲ್ಲರೇ? ಹೌದೆನ್ನುತ್ತವೆ ನಿಜ ಜೀವನದ ಕೆಲವು ದಂತಕಥೆಗಳು.

 

ಅಂದು 5 ರೂಪಾಯಿಯ ದಿನಗೂಲಿ ಮಹಿಳೆ ಇಂದು ಸಾಫ್ಟ್ ವೇರ್ ಕಂಪೆನಿಯೊಂದರ ಸಿ.ಇ.ಓ!!

ಸ್ಥಳ : ಮೈಲಾರನ್, ಆಂಧ್ರಪ್ರದೇಶ  

ಅತಿ ಬಡ ಕುಟುಂಬದಲ್ಲಿ ಹುಟ್ಟಿಬೆಳೆದ ಈಕೆ ತನ್ನ ಹದಿನಾರನೇ ವಯಸ್ಸಿಗೆ ಮದುವೆಯ ಬಂಧನಕ್ಕೊಳಗಾಗುತ್ತಾಳೆ. ಮುಂದಿನ ಎರೆಡು ವರ್ಷಗಳಲ್ಲಿಯೇ ಎರಡು ಮಕ್ಕಳ ತಾಯಿ. ಬಡತನದ ಜೊತೆಗೆ ಬಲಿಯದ ಬುದ್ದಿ, ಅಷ್ಟರೊಳಗೇ ಮಕ್ಕಳು. ಜೀವನದ ಸಂಕೋಲೆಯಲ್ಲಿ ಬೇಯಲು ಇನ್ನೇನು ಬೇಕು? ಬಡತನದ ಬೇಗೆಗೆ ಬೇಸತ್ತು 5 ರೂಪಾಯಿಯ ದಿನಗೂಲಿ ಕೆಲಸಕ್ಕೆ ಸೇರಿ ಮುಂದೆ ಸತತವಾಗಿ 5 ವರ್ಷ ಕೂಲಿಕಾರ್ಮಿಕೆಯಾಗಿ ದುಡಿಯುತ್ತಾಳೆ. ಜೀವನ, ದೇಶದ ಅದೆಷ್ಟೋ ಕೋಟಿ ಮಹಿಳೆಯರಂತೆ ಅಂಧಕಾರದ ಕೂಪದೊಳಗೆ ಹುದುಗಿ ಮರೆಯಾಗತೊಡಗಿತ್ತು. ಆದರೆ ಕಾಣದ ಶಕ್ತಿಯೊಂದು ಪ್ರತಿಬಾರಿಯೂ ಈಕೆಯನ್ನು ಪ್ರೇರೇಪಿಸುತ್ತಿತ್ತು. ಯಾವುದೊ ಜನ್ಮದ ಪುಣ್ಯವೆಂಬಂತೆ ತನ್ನ ಹತ್ತನೇ ತರಗತಿಯನ್ನು ಪೂರ್ಣಗೊಳಿಸಿಕೊಂಡಿದ್ದು ಈಕೆಗೆ ವರದಾನವಾಗಿ ಪರಿಣಮಿಸಿತು. ಪರಿಣಾಮವಾಗಿ 1988 ರಲ್ಲಿ ವಯಸ್ಕ ಶಿಕ್ಷಣ ಶಿಕ್ಷಕಿಯಾಗಿ ಕೆಲಸವೊಂದು ದೊರಕಿತು. ಆಗ ಸಿಗುತ್ತಿದ್ದ ಸಂಬಳ ತಿಂಗಳಿಗೆ ಕೇವಲ 120 ರೂಪಾಯಿ.

ಅಷ್ಟರಲ್ಲೇ ಹೊಟ್ಟೆ ಬಟ್ಟೆಯನ್ನು ಕಟ್ಟಿ ಸಂಸಾರವನ್ನು ಬೆಳೆಸಿ ನಂತರ ರಾಷ್ಟೀಯ ಸೇವಾ ಕಾರ್ಯಕರ್ತೆಯಾಗಿ ದುಡಿಯುತ್ತಾಳೆ. ಅಲ್ಲಿಂದ ಮುಂದೆ ತನ್ನ ಪತಿ ಮಹಾಶಯನ ವಿರೋಧದ ನಡುವೆಯೂ ತನ್ನ ಹಳ್ಳಿಯಿಂದ ಪುಟ್ಟ ಮಕ್ಕಳೊಟ್ಟಿಗೆ ಅವುಗಳ ಜೀವನದ ದೊಡ್ಡ ಕನಸ್ಸನ್ನು ಹೊತ್ತು ನಗರಕ್ಕೆ ಬಂದು ಕರಕೌಶಲ ವಸ್ತುಗಳ ತಯಾರಿಯ ತರಬೇತಿಯನ್ನು ಪಡೆಯುತ್ತಾಳೆ.ಅಲ್ಲಿಂದ ಮುಂದೆ ಗ್ರಂಥಾಲಯವೊಂದರ ನಿರ್ವಾಹಕಿಯಾಗಿ ಕೆಲಸವನ್ನು ಗಿಟ್ಟಿಸಿಕೊಳ್ಳುತ್ತಾಳೆ. ಅಲ್ಲಿ ಪುಸ್ತಕಗಳ ನಡುವಿನ ಒಡನಾಟ ಅವಳಿಗೆ ಅರ್ಧಕ್ಕೆ ನಿಂತು ಹೋಗಿದ್ದ ತನ್ನ ಓದಿನ ಆಸೆಯನ್ನು ಪುನಃ ಚಿಗುರೊಡೆಸಿರಬೇಕು. ಹತ್ತಿರದಲ್ಲೇ ಇದ್ದ ವಾರಾಂತ್ಯದ ಶಾಲೆಗೆ ಸೇರಿಯೇ ಬಿಡುತ್ತಾಳೆ. ಹೀಗೆ ಹಿಂತಿರುಗದೆ ಮುಂದೆ ಮುಂದೆ ನೆಡೆದ ಈಕೆಗೆ ಕೊನೆಗೆ 18 ತಿಂಗಳ ಕರಾರಿನಡಿ ಶಿಕ್ಷಕಿಯಾಗಿ ಕೆಲಸವೊಂದು ಸಿಗುತ್ತದೆ. ಸ್ಥಳ ಆಕೆ ವಾಸಿಸುತ್ತಿದ್ದ ಪ್ರದೇಶದಿಂದ 70 ಕಿಲೋಮೀಟರು! ಬರುತ್ತಿದ್ದ ಸಂಬಳ ಹೆಚ್ಚುಕಡಿಮೆ ಪ್ರಯಾಣಕ್ಕಾಗಿಯೇ ಸಾಕಾಗುತ್ತಿತ್ತು. ಆದರೇನಂತೆ? ಛಲ ಬಿಡದ ಈಕೆ ಪ್ರಯಾಣಿಸುತ್ತಿದ್ದ ರೈಲಿನಲ್ಲಿಯೇ ಶಿಕ್ಷಕಿಯಾದರೂ ಯಾವುದೇ ತಾತ್ಸಾರವಿಲ್ಲದೆ ಸೀರೆಗಳನ್ನು ಮಾರತೊಡಗುತ್ತಾಳೆ.

ಗುರಿ ಏನೆಂದು ಸ್ಪಷ್ಟವಾಗಿಲ್ಲದಿದ್ದರೂ ದಿನದಿಂದ ದಿನಕ್ಕೆ ಹೊಸತೊಂದು ವಿಷಯವನ್ನು ಕಲಿಯುವ ಗುಣವನ್ನು ಪಾರಂಗತ ಮಾಡಿಕೊಂಡ ಈಕೆ ಹಲವು ವರ್ಷಗಳ ತನ್ನ ಸತತ ಪರಿಶ್ರಮದ ಬಳಿಕ 1994 ರಲ್ಲಿ ಮಂಡಲ ಪಂಚಾಯಿತಿಯ ಹೆಣ್ಣು ಮಕ್ಕಳ ಅಭಿವೃದ್ಧಿಯ ಅಧಿಕಾರಿಯಾಗುತ್ತಾಳೆ! ಜೀವನದುದ್ದಕ್ಕೂ ತುಳಿದ ಶಕ್ತಿಗಳಿಗೊಂದು ದಿಟ್ಟ ಉತ್ತರವನ್ನು ಕೊಡುತ್ತಾಳೆ. ತನ್ನೂರಿನ ಹಲವು ಹೆಣ್ಣುಮಕ್ಕಳಿಗೆ ಆಶಾಕಿರಣವಾಗುತ್ತಾಳೆ. ಆದರೆ ಇವಳ ಓಟ ಅಲ್ಲಿಗೆ ನಿಲ್ಲುವುದಿಲ್ಲ. 1998 ರಲ್ಲಿ ಅಮೇರಿಕೆಯಿಂದ ಬಂದ ತನ್ನ ನೆಂಟರಿಷ್ಟರಲ್ಲೊಬ್ಬರನ್ನು ಕಂಡು ತನಗೂ ಹಾಗು ಅವರಿಗೂ ಇರುವ ಜೀವನ ಶೈಲಿಯ ವ್ಯತ್ಯಾಸವನ್ನು ಅರಿಯುತ್ತಾಳೆ. ಅವರ ಕೆಲಸ ಕಾರ್ಯ ಹಾಗು ಪ್ರಸ್ತುತ ಜಾಗತಿಕ ಸ್ಥಿತಿಗತಿಗಳನ್ನು ಕೇಳಿ ತಿಳಿದ ಈಕೆ ಆಗಷ್ಟೇ ಬೆಳೆಯುತ್ತಿದ್ದ  ಸಾಫ್ಟ್’ವೇರ್ ಉದ್ಯಮವೇ ತನ್ನ ಮುಂದಿನ ಗುರಿ ಎಂದು ತನ್ನನು ತಾನು ಒಪ್ಪಿಸಿಕೊಳ್ಳುತ್ತಾಳೆ.

ಆಂಧ್ರಪ್ರದೇಶದ ಹಳ್ಳಿಯೊಂದರಲ್ಲಿ ಕುಂಟಬಿಲ್ಲೆ, ಕಣ್ಣಾಮುಚ್ಚೆಗಳನ್ನು ಆಡುತ್ತಿದ್ದ ಹೆಣ್ಣುಮಕ್ಕಳಿಗೆ ನೀತಿಯ ಪಾಠವನ್ನು ಹೇಳಿಕೊಡುತ್ತಿದ್ದ ಹುಡುಗಿಯೊಬ್ಬಳ ಪರಿಯ ಕನಸ್ಸನ್ನು ಕಾಣುವ ಧೈರ್ಯವನ್ನು ಎಲ್ಲರು ಮೆಚ್ಚಲೇಬೇಕು. ಕನಸ್ಸನ್ನು ಕಟ್ಟಿಕೊಂಡು ಅದರಲ್ಲೇ ಮೈಮರೆಯದ ಈಕೆ ಕೂಡಲೇ ಅದಕ್ಕೆ ಪೂರಕವಾದ ತರಬೇತಿಯನ್ನು ಹೈದರಾಬಾದಿನಲ್ಲಿ ಪಡೆಯುತ್ತಾಳೆ. ನೋಡನೋಡುತ್ತಲೇ 2000 ನೆಯ ವರ್ಷದಲ್ಲಿ ಅಮೆರಿಕೆಯ ವಿಮಾನವನ್ನು ಏರುತ್ತಾಳೆ. ಕೂಲಿಕಾರ್ಮಿಕೆಯಾಗಿ ಒಂದೊತ್ತು ಊಟಕ್ಕೂ ಪರದಾಡಿ ಬೆಳೆದ ದಿಟ್ಟ ಮಹಿಳೆ. ಅಂದು ಅಮೇರಿಕಾದ ನೆಲವನ್ನು ತುಳಿದಾಗಲೂ ಸವಾಲುಗಳೇನು ಈಕೆಗೆ ಸಲೀಸಾಗಿರಲಿಲ್ಲ. ಅದು ಕಮ್ಯುನಿಕೇಷನ್ ಪ್ರಾಬ್ಲಮ್ ಗಳಾಗಿರಬಹುದು ಅಥವಾ ಕೆಲಸವೊಂದು ಸಿಗುವವರೆಗೂ ವಸತಿ ಹಾಗು ಊಟದ ಕೊರತೆಯಾಗಿರಬಹುದು, ಎಲ್ಲವನ್ನು ಅಂದು ಧೈರ್ಯದಿಂದ ಈಕೆ ಎದುರಿಸಿದ ಆಕೆ ಅಲ್ಲಿಯೂ ಅರೆಕಾಲಿಕ ಕೆಲಸಗಳ ಸಹಾಯದೊಂದಿಗೆ ಜೀವನವನ್ನು ಕಟ್ಟಿಕೊಂಡು ಬದುಕಿ ಮುಂದೊಂದು ದಿನ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಮಾನವ ಸಂಪನ್ನೂಲ ವಿಭಾಗದಲ್ಲಿ ಕೆಲಸವನ್ನು ಗಳಿಸಿಕೊಂಡುಬಿಡುತ್ತಾಳೆ. ಇಷ್ಟೆಲ್ಲಾ ಹೀಜಾಡಿ ಸೆಣೆಸಾಡಿ ಬೆಳೆದ ಈಕೆಗೆ ಮುಂದಿನ ಹಾದಿ ಮಾತ್ರ ತುಸು ಸುಗಮವಾಗಿಯೇ ಆಗಿತ್ತು. ನೋಡ ನೋಡುತ್ತಲೇ ಹಂತ ಹಂತವಾಗಿ ಬೆಳೆದ ಈಕೆ ಪರಿಚಯದವರೊಬ್ಬರ ಸಹಬಾಗಿತ್ವದೊಂದಿಗೆ ತನ್ನದೇ ಒಂದು ಕಂಪನಿಯನ್ನು ಕಟ್ಟಿ ಬೆಳೆಸುತ್ತಾಳೆ. ಇಂದು ಕಂಪನಿಯಲ್ಲಿ ನೂರಾರು ಇಂಜಿನಿಯರ್ ಗಳು ಈಕೆಯ ಕೈ ಕೆಳಗೆ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಜೀವನ ಅದೆಷ್ಟೇ ಕಾಡಿದರು ಸೋಲದಿರು ಎಂದು ಸಾರುವ ಜೀವನ ಚರಿತೆಯ ಧೀರ ಮಹಿಳೆಯ ಹೆಸರು  ಅನಿಲ ಜ್ಯೋತಿ ರೆಡ್ಡಿ. ಇಂದು ಕೇವಲ ಕಷ್ಟಗಳನ್ನೇ ದೊಡ್ಡಗಾಗಿಸಿ ಪ್ರತಿಭೆಯನ್ನು ಮರೆಮಾಡಿಕೊಂಡಿರುವ ಹಲವರಿಗೆ ಜ್ಯೋತಿಯವರ ಯಶಸ್ಸಿನ ಜ್ಯೋತಿಗಿಂತ ಬೇರೆ ಯಾವ ಸ್ಫೂರ್ತಿ ಬೇಕು?ಅಂದು ಕಲ್ಲೊಡೆಯುವ ಪೋರಿ ಇಂದು  ಹಳ್ಳಿಯನ್ನೇ ಸರಪಂಚಳಾಗಿ ಮುನ್ನಡೆಸುವ ನಾರಿ!!

ಅದು ಎಂಬತ್ತರ ದಶಕ. ರಾಜಸ್ತಾನದ ಪುಹರು ಹಳ್ಳಿಯ ರಸ್ತೆಬದಿಯೊಂದರಲ್ಲಿ ಕಲ್ಲನ್ನು ಒಡೆಯುತ್ತಿದ್ದ ಹೆಣ್ಣುಮಕ್ಕಳ ಗುಂಪಿನೊಳಗೆ ಗುಜು ಗುಜು ಸದ್ದೊಂದು ಶುರುವಾಗತೊಡಗಿತ್ತು. ದಿನವಿಡೀ ಬೆವರಿನ ನದಿಯನ್ನೇ ಹರಿಸಿ ಕಲ್ಲನ್ನು ಒಡೆದರೂ ಹೇಳಿದ ದಿನಗೂಲಿಯ ರೊಕ್ಕವನ್ನೇ ಕೊಡದೆ ಸತಾಯಿಸುತ್ತಿದ್ದ ಮೇಸ್ತ್ರಿಗಳ ವಿರುದ್ಧವಾದ ಬವಣೆಯ ಸದ್ದು ಅದಾಗಿತ್ತು. ಆದರೆ ಅಲ್ಲಿದ ಯಾರೊಬ್ಬರಲ್ಲೂ ಎದ್ದು ನಿಂತು ನ್ಯಾಯ ಕೇಳುವ ಧೈರ್ಯವಿರಲಿಲ್ಲ. ಇದು ಕೆಲ ದಿನಗಳ ಕಾಲ ಹಾಗೆಯೆ ನಡೆಯಿತು. ಆದರೆ ಒಂದು ದಿನ ಇದ್ದಕಿದ್ದ ಹಾಗೆ ಹೆಣ್ಣುಹುಡುಗಿಯೊಬ್ಬಳು ತನ್ನೊಟ್ಟಿಗೆ ಇನ್ನೂ ಕೆಲವರನ್ನು ಕಟ್ಟಿಕೊಂಡು ಅನ್ಯಾಯದ ವಿರುದ್ಧ ಪುಟಿದೇಳುತ್ತಾಳೆ. ಮೇಸ್ತ್ರಿಗಳ ವಿರುದ್ಧ, ಮಾಲೀಕರ ವಿರುದ್ಧ ಘೋಷಣೆಯನ್ನು ಕೂಗುತ್ತಾಳೆ. ಹೋರಾಟ ಅಂದಿನ ದಿನಕ್ಕೆ ಮಾತ್ರ ಸೀಮಿತವಾಗಿರದೆ ಮುಂದೆ ಹಲವು ದಿನಗಳ ಕಾಲ ಮುಂದುವರೆಯುತ್ತದೆ ಹಾಗು ಜಿಲ್ಲೆಯ ಹಲವೆಡೆ ಸದ್ದನ್ನು ಮಾಡುತ್ತದೆ.

ರಾಜಸ್ಥಾನದ ಮಹಿಳೆಯರೆಂದರೆ ಸೀರೆಯ ಸೆರಗಿನೊಳಗೆ ತಲೆಯನ್ನು ಅಡಗಿಸಿಕೊಂಡು ಗಂಡಂದಿರು, ಅಪ್ಪಂದಿರು ಹೇಳುವ ಮಾತುಗಳನ್ನು ವೇದವಾಕ್ಯಗಳಂತೆ ಪಾಲಿಸಿ ಬದುಕುವರು ಎಂದು ಅರಿತಿದ್ದ ಅದೆಷ್ಟೋ ದಪ್ಪ ಮೀಸೆಯ ಗಂಡಸರಿಗೆ ಅಂದು ಈಕೆಯ ನಡೆ ಇರುಸು ಮುರುಸನ್ನು ತಂದೊಡ್ಡಿತು. ಸಹಜವಾಗಿಯೇ ಹಲವರು ಈಕೆಯ ವಿರುದ್ಧ ಕತ್ತಿ ಮಸೆಯತೊಡಗಿದರು. ಆದರೆ ಅವೆಲ್ಲ ಬೆದರಿಕೆಗಳಿಗೆ ಈಕೆ ಸುತಾರಾಂ ಜಗ್ಗುವುದಿಲ್ಲ. ಇಟ್ಟ ನೆಡೆಯನ್ನು ಹಿಂದಿಡುವ ಮಾತೆ ಇರಲಿಲ್ಲ. ಕೊನೆಗೆ NGO ಒಂದರ ಸಹಕಾರದ ಮೂಲಕ ವಿವಾದ ಕೋರ್ಟಿನವರೆಗೂ ಹೋಗಿ, ವಾದದಲ್ಲಿ ಜಹಿಸಿ ತಮ್ಮ ಪೂರ್ಣ ವೇತನವನ್ನು ಪಡೆದುಕೊಳ್ಳುವಲ್ಲಿ ಈಕೆ ಹಾಗು ಇವಳ ತಂಡ ಯಶಸ್ವಿಯಾಯಿತು. ಅಂದು ತನ್ನ ಧೈರ್ಯ ಹಾಗು ನಾಯಕತ್ವದ ಗುಣಗಳಿಂದ ಪುರುಷ ಪ್ರಧಾನ ಆಡಳಿತವರ್ಗವನ್ನೇ ತಬ್ಬಿಬ್ಬು ಮಾಡಿದ ಈಕೆ ತನ್ನೂರಿನ ಅದೆಷ್ಟೋ ಮಹಿಳೆಯರಿಗೆ ಆಶಾಕಿರಣವಾದಳು. ಮುಂದೆ ಓದುವ ಆಸೆ ಚಿಗುರಿ ಕಾಲೇಜನ್ನು ಸೇರಿ ವಯಸ್ಕ ಶಿಕ್ಷಣ, ಕಂಪ್ಯೂಟರ್ ಶಿಕ್ಷಣವನ್ನು ಪಡೆದು ಊರಿನ ಇತರ ಹೆಣ್ಣುಮಕ್ಕಳಿಗೂ ಕಲಿಯಲು ಹುರಿದುಂಬಿಸುತ್ತಾಳೆ. ಊರಿನ ಮಹಿಳೆಯರ ಧ್ವನಿಯಾಗುತ್ತಾಳೆ. ತದಾನಂತರ ಊರಿನ ಗ್ರಾಮ ಪಂಚಾಯಿತಿಯ ಸದಸ್ಯೆಯಾಗಿ ನೇಮಕಗೊಳ್ಳುತ್ತಾಳೆ. ಪುರುಷ ಪ್ರಧಾನ ಅಂದಿನ ಸಮಾಜದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯೆ ಒಂದೆಡೆ ಇರಲಿ ಕೊನೆ ಪಕ್ಷ ತಲೆಯ ಮೇಲಿನ ಸೆರಗೇನಾದರೂ ಅಪ್ಪಿ ತಪ್ಪಿ ಕೆಳಗೆ ಜಾರಿದರೂ ವಿಸ್ಕಿ ಪ್ರಿಯರಿಗೆ ದ್ರಾಕ್ಷಿಯ ಸರಬತ್ತಿನ ಪೆಗ್ ಮಾಡಿ ಕೊಟ್ಟಾಗ ನೋಡುವಂತೆ ನೋಡುತಿದ್ದರು. ಆದರೆ ಅಲ್ಲಿನ ಜನರ ಅದೃಷ್ಟವೋ ಎಂಬಂತೆ ಹಾಳು ಹಳ್ಳವಿಡಿದಿದ್ದ ತನ್ನ ಹಳ್ಳಿಗೆ ಮೊದಲ ಸರಪಂಚೆಯಾಗಿ ಆಯ್ಕೆಯಾಗುವುದರ ಮೂಲಕ ಎಲ್ಲರನ್ನೂ ಬಾಯ್ ಚುಪ್ ಮಾಡಿಸುತ್ತಾಳೆ. ನಂತರ ದೇಶ ವಿದೇಶಲ್ಲೂ ಈಕೆ ಹೆಸರು ಹರಿದಾಡುತ್ತದೆ. ಸರಪಂಚೆಯಾಗಿ ಈಕೆ ಮಾಡಿದ ಕೆಲಸವನ್ನು ಇಂದು ಊರಿಗೆ ಊರೇ ಹೇಳಿ ಕೊಂಡಾಡುವ ಮಟ್ಟದಲ್ಲಿದೆ. ಅಂದು ರಸ್ತೆ ಬದಿಯಲ್ಲಿ ಕಲ್ಲು ಹೊಡೆಯುವುದರಿಂದ ಹಿಡಿದು ಇಂದು ಸರಪಂಚೆಯಾಗಿ ಕಂಪ್ಯೂಟರ್ ನ ಕೀಲಿಗಳನ್ನು ಪಟಪಟ ಕುಕ್ಕುವ ಶ್ರೀ. ನೋರ್ಟಿ ಬಾಯಿ ಯಾವ IT ಉದ್ಯೋಗಿಗೂ ಕಡಿಮೆ ಹೇಳಿ?ಈಕೆ ನಿಜ ಬದುಕಿನಸ್ಲಂ ಡಾಗ್ ಮಿಲಿಯನೇರ್’!!

The President, Shri Pranab Mukherjee presenting the Padma Shri Award to Smt. Kalpana Saroj, at an Investiture Ceremony-II, at Rashtrapati Bhavan, in New Delhi on April 20, 2013.

ಅಂದು 2013 ನೇ ಸಾಲಿನ ವಾಣಿಜ್ಯ ಹಾಗು ಕೈಗಾರಿಕಾ ಕ್ಷೇತ್ರದಲ್ಲಿನ ಅತ್ಯುನ್ನತ ಸಾಧನೆಗಾಗಿ ಪದ್ಮಶ್ರೀ ಪ್ರಶಸ್ತಿಗೆ ಹೆಸರಿಸಲ್ಪಟ್ಟ ಕಲ್ಪನಾ ಸರೋಜ್ ಅವರು ಪ್ರಣವ್ ಮುಖರ್ಜಿ ಯವರಿಂದ ಪ್ರಶಸ್ತಿಯನ್ನು ಪಡೆಯುವಾಗ ರಾಷ್ಟ್ರಪತಿ ಭವನದಲ್ಲಿ ಚಪ್ಪಾಳೆಗಳ ಸದ್ದು ತುಸು ಹೆಚ್ಚಾಗಿಯೇ ಮೂಡತೊಡಗಿತು. ಕಾರಣ ಅಂದಿನ ಆ ಪದ್ಮಶ್ರೀ ಪ್ರಶಸ್ತಿ ಕೇವಲ ಆಕೆಯ ವ್ಯಾವಹಾರಿಕ ಸಾಧನೆಗಲ್ಲದೆ ಹೆಣ್ಣೆಂಬ ಮಹಾ ಶಕ್ತಿಯ ಮಿತಿಯನ್ನು ಸಮಾಜಕ್ಕೆ ತೋರಿಸಿಕೊಟ್ಟ ಆಕೆಯ ಸಾಹಸದ ವ್ಯಕ್ತಿತ್ವಕ್ಕೂ ಕನ್ನಡಿ ಹಿಡಿದಂತಿದ್ದಿತು. ಬಾಲ್ಯವೆಲ್ಲ ಜಾತಿಪದ್ಧತಿಯ ಕೂಪದಲ್ಲಿ ಬೆಂದು ತನ್ನ ಹನ್ನೆರಡನೇ ವಯಸ್ಸಿಗೆ ಮದುವೆಯಾಗಿ ಮುಂಬೈಯ ಸ್ಲಂ ವೊಂದರ ಕಿರು ಕೋಣೆಯ ಗಂಡನ ಮೆನೆಗೆ ಬಂದ ಈಕೆ ಅಕ್ಷರ ಸಹ ನರಕದ ಯಾತನೆ ಅನುಭವಿಸಬೇಕಾಯಿತು. ದೈಹಿಕವಾಗಿ, ಮಾನಸಿಕವಾಗಿ ಜರ್ಜರಿತಳಾದ ಈಕೆಯನ್ನು ಅಪ್ಪ ಆರು ತಿಂಗಳ ನಂತರ ನೋಡಲು ಬಂದು ಈಕೆಯ ಮೂಳೆಗೆ ಅಂಟಿಕೊಂಡ ಚಕ್ಕಳದಂತಿದ್ದ ದೇಹಸ್ಥಿತಿಯನ್ನು ಕಂಡು ತನ್ನ ತಪ್ಪಿನ ಅರಿವಾಗಿ ಕೂಡಲೇ ಅಲ್ಲಿಂದ ತವರು ಮನೆಗೆ ಕರೆದುಕೊಂಡು ಹೋಗುತ್ತಾನೆ. ಆದ ಮಾತ್ರಕ್ಕೆ ಆಕೆಯ ಗೋಳೇನು ತೀರಲಿಲ್ಲ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎಂಬ ಮಾತು ಮನೆಯವರಿಗಿಂತ ಮನೆಯೊರಗಿನವರಿಗೇ ಬಲು ಇಷ್ಟ. ಸಿಕ್ಕ ಸಿಕ್ಕಲೆಲ್ಲ ಅಣಕಿಸುವುದು, ಕಿಚಾಯಿಸುವುದು, ಕಿಸಿ ಕಿಸಿ ಎಂದು ಸುಖಾ ಸುಮ್ಮನೆ ನಗುವ ಗುಂಪುಗಳು ಯಾಕೋ ಈಕೆಗೆ ತನ್ನನು ಅವಮಾನದ ಬುಡಕ್ಕೆ ಕಟ್ಟಿ ಹಾಕಿದಂತಾಗುತ್ತದೆ. ದುಃಖ, ಸಂಕಟ ಹಾಗು ಹತಾಶೆಗೆ ಮಣಿದು ಜೀವನವೇ ಬೇಡವೆಂದು ಈಕೆ ವಿಷವನ್ನು ಸೇವಿಸುತ್ತಾಳೆ. ಇನ್ನೇನು ಕೊನೆಯುಸಿರೆಳೆಯಲು ಕ್ಷಣಗಣನೆ ಆರಂಭವಾಯಿತೆನ್ನುವುದರೊಳಗೆ ಅದೃಷ್ಟವಶಾತ್ ಬದುಕುಳಿಯುತ್ತಾಳೆ. ಕಾಡಿದ ಸಮಾಜಕ್ಕೆ ಧಿಟ್ಟ ಉತ್ತರವನ್ನು ನೀಡಲು ಮತ್ತೊಂದು ಅವಕಾಶವನ್ನು ಪಡೆಯುತ್ತಾಳೆ. ಅಲ್ಲಿಂದ ಶುರುವಾದ ಈಕೆಯ ಸಾಧನೆಯ ಸ್ತರಗಳು ಇಂದಿಗೂ ಮುಂದುವರೆಯುತ್ತಲೇ ಬಂದಿವೆ.

ಅಂದು ತಾನು ಬದುಕುಳಿದು, ಮೇಲೆದ್ದು ಜೀವನದಲ್ಲೇನಾದರೂ ಸಾಧಿಸಬೇಕೆಂಬ ಹಠದೊಂದಿಗೆ ಪುನ್ಹ ಮುಂಬೈ ಗೆ ಬಂದಿಳಿದ ಈಕೆ ಗಾರ್ಮೆಂಟ್ ಕಂಪನಿ ಯೊಂದರಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಅಲ್ಲಿಂದ ಮುಂದೆ ದರ್ಜಿಯ (Tailoring) ಉದ್ಯಮ ನಂತರ ಪರಿಶಿಷ್ಟ ಜಾತಿಯವರಿಗೆ ಸರ್ಕಾರದದಿಂದ ಸಿಗುವ ಸಾಲ ಯೋಜನೆಯಿಂದ ಪೀಠೋಪಕರಣಗಳ ಉದ್ಯಮಕ್ಕೂ ಏಕಾಂಗಿಯಾಗಿ ಕೈಹಾಕಿ ಯಶಸ್ವಿಯಾಗುತ್ತಾಳೆ. ತದನಂತರ ಕೂಡಿಟ್ಟ ಹಣದಿಂದ ಜಾಗವೊಂದನ್ನು ಖರೀದಿಸಿ ಇತರ ಉದ್ಯಮ ಸಹವರ್ತಿಗಳೊಡನೆ ಕೂಡಿ ವ್ಯಾಪಾರೀ ಮಳಿಗೆಯೊಂದನ್ನು ನಿರ್ಮಿಸಿಯೇ ಬಿಡುತ್ತಾಳೆ. ಅಲ್ಲಿಂದ ಮುಂದಕ್ಕೆ ಈ ಅವಿರತ ಮಹಿಳೆಯ ಹೆಜ್ಜೆಗಳೆಲ್ಲಾ ದಂತಕಥೆಗಳಂತಾದವು. ಇಂದು ‘ಕಾಮಿನಿ ಟ್ಯೂಬ್ಸ್’ ಕಂಪನಿಯ ಸಿ.ಇ.ಓ ಆಗಿರುವ ಈಕೆ, ರಿಯಲ್ ಎಸ್ಟೇಟ್ ಹಾಗು ತನ್ನ ಸ್ವಂತ ಚಿತ್ರ ನಿರ್ಮಾಣ ಸಂಸ್ಥೆಯಿಂದ ಚಿತ್ರಗಳನ್ನೂ ನಿರ್ಮಿಸುವ ಮಟ್ಟಕ್ಕೆ ಬೆಳೆದಿದ್ದಾಳೆ ಎಂದರೆ ಕಷ್ಟಗಳ ಸರಮಾಲೆಯಿಂದ ಕುಸಿದು ಬಿದ್ದಿರುವ ಕೋಟ್ಯಂತರ ಹೆಣ್ಣುಮಕ್ಕಳ ರೋಮು ರೋಮುಗಳು ಎದ್ದು ನಿಲ್ಲದೆ ಇರಲಾರವು!

ಇಂದು ಸಮಾಜದ ಮುಂದಿರುವ ಇಂತಹ ಹಲವಾರು ಉದಾಹರಣೆಗಳಿಂದ ಒಂದು ವಿಷಯ ಮಾತ್ರ ಸ್ಪಷ್ಟ. ಹೆಣ್ಣು ಮನಸ್ಸು ಮಾಡಿದರೆ ಆಕೆಗೆ ಸಾಧ್ಯವಾಗದೆ ಇರದ ಮತ್ತೊಂದು ವಿಷಯವಿಲ್ಲ. ಅಲ್ಲದೆ ಶಿಕ್ಷಣವೆಂಬ ಸ್ಪಾರ್ಕ್ ಅನ್ನು ಅವಳ ಮಂದಗತಿಯ ನಡೆಗೆ ತುಂಬಿದರೆ ಅವಳ ನಂತರದ ಓಟಕ್ಕೆ ಸರಿಸಾಟಿ ಮತ್ತೊಬ್ಬರಿಲ್ಲ ಎಂಬುವುದು. ಇಂದು ಅಪ್ಪ ಕೂಡಿಟ್ಟ ದುಡ್ಡಿನಲ್ಲೇ ಊಟ ಬಟ್ಟೆ ವಿದ್ಯಾಭ್ಯಾಸವನ್ನು ಮುಗಿಸಿ ಯಾವುದೊ ಒಂದು ಕಂಪೆನಿಗಳಲ್ಲಿ ಕೆಲಸವೊಂದನ್ನು ಗಿಟ್ಟಿಸಿಕೊಂಡು ಅದನ್ನೇ ಮಹಾನ್ ಸಾಧನೆ ಎಂಬುವ ಮಟ್ಟಕ್ಕೆ ಪೋಸನ್ನು ನೀಡುವ ಅದೆಷ್ಟೋ ಯುವಕ ಯುವತಿಯರಿಗೆ ಇಂತಹ ಹಲವರು ಜೀವನದ ರೋಲ್ ಮಾಡೆಲ್ ಗಳಾಗಬೇಕು. ಅಲ್ಲದೆ ಸ್ತ್ರೀ ಪರ ಹೋರಾಟವೆಂದರೆ ಕೇವಲ ಶೋಷಣೆಗೊಳಗಾದ ಹೆಣ್ಣಿನ ಭಾವಚಿತ್ರದ ಮುಂದೆ ನಿಂತು, ರಾಜಕಾರಣಿಗಳು, ಮಾಧ್ಯಮಗಳು ಹಾಗು ಸರ್ಕಾರಗಳ ವಿರುದ್ಧ ಘೋಷಣೆಯನ್ನು ಕೂಗಿ ಸಾಧ್ಯವಾದಷ್ಟೂ ತಮ್ಮ ಬೇಳೆಕಾಳುಗಳನ್ನು ಬೇಹಿಸಿಕೊಳ್ಳುವ ಆಸೆಯಾಗಿದೆಯೇ ಹೊರತು, ಬರುವ ಕಷ್ಟಗಳನ್ನು ದೈರ್ಯದಿಂದ ಎದುರಿಸುವುದನ್ನು ಕಲಿಸುವ ಸಾಮಾಜಿಕ ಕಳಕಳಿಯಿರುವ ಸಂಸ್ಥೆಗಳು ವಿರಳವಾಗತೊಡಗಿವೆ. ಸಾಧನೆಯ ಹಾದಿಯಲ್ಲಿ ಗಂಡು ಹೆಣ್ಣಿಗೆ ಸಮವೆಂದು ತೋರಿಸುವುದು ಕೇವಲ ಗಂಡಸು ತೊಡುವ ಹರಿದು ಬರಿದ ಜೀನ್ಸ್ ಪ್ಯಾಂಟ್ ಹಾಗು ಲೋಳಕು ಶರ್ಟ್ ಅನ್ನು ತಾನೂ ತೊಟ್ಟರೆ ಮಾತ್ರ ಸಾಧ್ಯವೆಂದು ಅರಿಯುತ್ತಿರುವ ಅದೆಷ್ಟೋ ಎಜುಕೇಟೆಡ್ ಮಹಿಳೆಯರು ಹೇಳುವ ಮಹಿಳಾ ಅಭಿವೃದ್ಧಿಯ ಮಂತ್ರವೆಲ್ಲಿ, ದಿನ ಬೆಳಗೆದ್ದು ಯಂತ್ರಗಳಂತೆ ದುಡಿದು ಗಂಡನ ಹಾಗು ಮಕ್ಕಳ ಸಾಧನೆಗೆ ಹೆಗಲಾಗುವ ವಿದ್ಯಾಹೀನ ಗೃಹಿಣಿಯ ಶ್ರಮವೆಲ್ಲಿ?

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!