ಅಂಕಣ

ಜೀವನ ಕಟ್ಟಿದ ಸಮಾಜಕ್ಕಿಂದು ನೀಡಬೇಕಿದೆ ನಿನ್ನ ಕೊಡುಗೆಯೊಂದು…

ಅದು 1988 ರ ಮಳೆಗಾಲ. ಮುಂಬೈ ನ ಮೆಡಿಕಲ್ ಶಾಪೊಂದರ ಗೋಡೆಯ ಮೇಲೆ ಟಿವಿ ಸೀರಿಯಲ್ ಒಂದರ ಪೋಸ್ಟರ್ ಚಿಟ-ಪಟ ಮಳೆಗೆ ನೆನೆದು ಕರಗುತ್ತಿರುತ್ತದೆ. ‘FAUJI’ ಎಂಬ ಶೀರ್ಷಿಕೆಯ ಆ ಪೋಸ್ಟರ್ನಲ್ಲಿ ಎಣ್ಣೆ ಮೆತ್ತಿದ್ದ ಮುಖ, ಗೇರಣ್ಣಿನ ಆಕೃತಿಯ ಮೂಗು,  ಹಾಗು ಹುಬ್ಬಿದ ತುಟಿಗಳೊಟ್ಟಿಗೆ ಮಿಲಿಟರಿ ಸಮವಸ್ತ್ರ ಧರಿಸಿ ನಿಂತಿದ್ದ ನಾಯಕನನ್ನು ಕಂಡು ಅಲ್ಲಿ ನೆರೆದಿದ್ದ ಜನ ಗೇಲಿಮಾಡುತ್ತಿದ್ದರೆ ಇತ್ತ ಕಡೆ ಯುವಕನೊಬ್ಬ ಸುರಿಯುತ್ತಿದ್ದ ಮಳೆಯಲ್ಲಿಯೇ ಓಡಿಬಂದು ಏದುಸಿರು ಬಿಡುತ್ತಾ ಮೆಡಿಕಲ್ ನ ಒಳಗೆ ನುಗ್ಗುತ್ತಾನೆ. ದುಃಖದ ಛಾಯೆ ಅವನ ಮುಖದಲ್ಲಿ ಎದ್ದು ಕಾಣುತ್ತಿದ್ದರೆ ಅತ್ತು ಬೇಸತ್ತ ಕಣ್ಣುಗಳಿಂದ ಕಣ್ಣೀರು ಮಳೆಯಂತೆಯೇ ನಿಧಾನವಾಗಿ ಜಿನುಗುತ್ತಿರುತ್ತವೆ. ಆತ ಬಂದವನೇ  ಅವಸರವಸರದಲ್ಲಿ ಔಷಧವನ್ನು ಪಡೆದು ತನ್ನ ಕೊಳಕು ಪ್ಯಾಂಟಿನ ನಾಲ್ಕೂ ಜೇಬುಗಳಿಂದ ಒಂದೊಂದೇ ನೋಟುಗಳನ್ನು ಎಳೆದು ಕೊಡುತ್ತಿದ್ದರೆ ಆತನ ಕೈ ಗಡಗಡನೆ ನಡುಗುತ್ತಿರುತ್ತದೆ. ಇತ್ತಕಡೆ ಪೋಸ್ಟರನ್ನು ನೋಡಿ  ಗೇಲಿಮಾಡುತ್ತಿದ್ದ ಗುಂಪಿನ ಮಾತುಗಳು ಅವನ ಕಿವಿಗಳಿಗೆ ಸ್ಪಷ್ಟವಾಗಿ ಕೇಳುತ್ತಿದ್ದರೂ ಆತ ಮರುಮಾತನಾಡದೆ ಔಷಧವನ್ನು ಪಡೆದು  ಮತ್ತದೇ ಮಳೆಯಲ್ಲಿ ಓಡಿ ಮರೆಯಾಗುತ್ತಾನೆ. ಚಿತ್ರದ ಪೋಸ್ಟರನ್ನು ನೋಡಿ ಗೇಲಿ ಮಾಡುತ್ತಿದ್ದವನೊಬ್ಬ ಇವನನ್ನು ನೋಡಿ ಒಮ್ಮೆಲೇ ಮಾತು ಬಾರದ ಕಲ್ಲಿನಂತಾಗಿಬಿಡುತ್ತಾನೆ. ಕರಗುತ್ತಿದ್ದ ಪೋಸ್ಟರ್ ನ ಇನ್ನೂ ಸಮೀಪಕ್ಕೆ ಹೋಗಿ ಪರೀಕ್ಷಿಸುತ್ತಾನೆ….ಅಲ್ಲಿಂದ ಓಡಿದ ಆ ಯುವಕ ನೇರವಾಗಿ ದೆಹಲಿಗೆ ಹೊರಡುತ್ತಿದ್ದ ತನ್ನ ಗೆಳೆಯನ ಮನೆಗೆ ಬಂದು, ತಂದಿದ್ದ ಔಷಧವನ್ನು ಅವನ ಕೈಲಿತ್ತು ಆದಷ್ಟು ಬೇಗ ತನ್ನ ಅಮ್ಮನಿಗೆ ತಲುಪಿಸಬೇಕೆಂದು ಕೇಳಿಕೊಳ್ಳುತ್ತಾನೆ. ಕಾಯಿಲೆಯಿಂದ ನರಳುತ್ತಿರುವ ಅಮ್ಮ ಬೇಗ ಗುಣವಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾನೆ. ಅಶ್ರುಧಾರೆಗಳು ಒಮ್ಮೆಲೇ ಭೋರ್ಗರೆದು ಕೆನ್ನೆಗಳ ಮೇಲೆ ಹರಿಯತೊಡಗುತ್ತವೆ.
ಇಂದು ಆತ ಬೆಳೆದು ದೊಡ್ಡವನಾಗಿದ್ದಾನೆ. ಅದು ಯಾವ ಪರಿಯೆಂದರೆ  ಈತನ ಒಂದು ನೋಟವನ್ನು ಕಣ್ತುಂಬಿಕೊಳ್ಳಲು ಹಗಲು ರಾತ್ರಿಯೆನ್ನದೆ ಘಂಟೆಗಳ ಕಾಲ ಗೋಡೆಯ ಮೇಲೆ  ತಟಸ್ಥವಾಗುವ ಹಲ್ಲಿಗಳಂತೆ ಈತನ ಮನೆಯ ಹೊರಗೆ ಕಾದು ನಿಲ್ಲುವ ಲಕ್ಷ ಲಕ್ಷ ಯುವಕ ಯುವತಿಯರಿದ್ದಾರೆ. ಜಾಹಿರಾತು ಕಂಪನಿಗಳೂ ಸಹ ಈತನ ಒಂದು ಸಹಿಗೆ ಸಿಹಿಯನ್ನು ಹೊತ್ತೊಯ್ಯುವ ಇರುವೆಗಳಂತೆ ಸಾಲುಗಟ್ಟಿ ನಿಂತುಕೊಳ್ಳುತ್ತವೆ. ಚಿತ್ರದ ನಿರ್ದೇಶಕ ನಿರ್ಮಾಪಕರಿಗಂತೂ ಈತ ಕೈಗೆಟುಕದ ಕೊಹಿನೂರ್ ವಜ್ರ ವೇ ಸರಿ. ಅಂದು ಚಿತ್ರಗಳಲ್ಲಿ ಒಂದು ಸಣ್ಣ ಅವಕಾಶಕ್ಕಾಗಿ ಹವಣಿಸುತ್ತಿದ್ದ ಆತ ಇಂದು ತನ್ನ ಸ್ವಂತ ಚಿತ್ರ ನಿರ್ಮಾಣ ಸಂಸ್ಥೆಯನ್ನೇ ಸ್ಥಾಪಿಸಿ ಅಂತಹ ಸಾವಿರಾರು ಯುವಕರಿಗೆ ಅವಕಾಶವನ್ನು ನೀಡುವ ಮಟ್ಟಕೆ ಬೆಳೆದಿದ್ದಾನೆ! ಪರದೆಯ ಮೇಲಿನ  ಗುಣಗಳಷ್ಟೇ ಗಮನಿಸುವ ಸಿನಿಪ್ರಿಯರಿಗಂತೂ ಈತನೇ ಆರಾಧ್ಯ ದೈವ. ಈತನ ನಟನೆಯೇ ಅಂಥಹದ್ದು. ಕಣ್ಣುಗಳನ್ನೇ ಮಾತಿಗಿಳಿಸಿದಂತೆ ಮಾಡುವ ನಟನೆ, ಪಾತ್ರಗಳಿಗೆ ನೈಜ ಜೀವ ತುಂಬುವ ಕಲೆ, ಕೇಳಿದಷ್ಟು ಸಾಕೆನಿಸದ ಮಾತಿನ ಶೈಲಿ ಹಾಗು ಅದಕ್ಕೆ ಪೂರಕವಾದ ನವಿರಾದ ಧ್ವನಿ ಅಲ್ಲದೆ ಇವೆಲ್ಲ ಗುಣಗಳಿಗೂ ಕಿರೀಟಪ್ರಾಯವಾಗಿರುವ ಈತನ ಪ್ರಬುದ್ಧವಾದ ಹಾಸ್ಯಪ್ರಜ್ಞೆ ಇಂದು ಈತನನ್ನು ದೇಶದ ಅತಿ ಉನ್ನತ ನಾಯಕ ನಟರಲೊಬ್ಬನನ್ನಾಗಿ ಮಾಡಿದೆ. ಕಿಂಗ್ ಖಾನ್, ಬಾದ್ ಷ ಆಫ್ ಬಾಲಿವುಡ್, ದಿ ಕಿಂಗ್ ಆಫ್ ರೋಮ್ಯಾನ್ಸ್ ಎಂಬೆಲ್ಲ ಹೆಸರುಗಳಿಂದ ಪ್ರಸಿದ್ದಿ ಹೊಂದಿರುವ ಈತ ಅಂದು ಮಲಗಲು ಒಂದು ಸೂರಿಲ್ಲದೆ ಮುಂಬೈ ಎಂಬ ಮಾಯಾನಗರಿಗೆ ಬಂದು, ರೈಲ್ವೆ ನಿಲ್ದಾಣಗಳಲ್ಲಿ ಮಲಗೆದ್ದು, ಸಿನಿಮಾ ಲೋಕದಲ್ಲಿ ಅವಕಾಶವನ್ನು ಪಡೆದು, ಸಿಕ್ಕ ಸಿಕ್ಕ ಪಾತ್ರಗಳನ್ನೆಲ್ಲ ಮಾಡುತ್ತಾ ತನ್ನ ನೆಲೆಯನ್ನು ಗಟ್ಟಿಗೊಳಿಸಿಗೊಂಡು ಇಂದು ತಾನೇ ಒಂದು ‘ಬ್ರಾಂಡ್’ ಎನ್ನಿಸಿಕೊಳ್ಳುವ ಮಟ್ಟಕ್ಕೆ ಬೆಳೆದ ಪರಿಯಂತೂ ಯಾವ ಚಿತ್ರಕಥೆಗೂ ಕಮ್ಮಿಯಿಲ್ಲ. ಈತ ಬೆಳೆದು ಬಂದ ಹಾದಿಯಲ್ಲಿ ಪ್ರತಿ ಹೆಜ್ಜೆಗೂ ಸವಾಲುಗಳು ಜೊತೆಗೆ ಕಷ್ಟಗಳು ಒಂದರಿಂದೊಂದು ಪುಟಿದೆದ್ದು ನಿಲ್ಲುತ್ತಿದ್ದವು. ಅದು ತನ್ನ ಹದಿನೈದನೇ ವಯಸ್ಸಿಗೆ ತಾನು ಅತಿಯಾಗಿ ಪ್ರೀತಿಸುತಿದ್ದ ತಂದೆಯನ್ನು ಕಳೆದುಕೊಂಡದ್ದಾಗಿರಬಹುದು  ಅಥವಾ  ಕೆಲವರ್ಷಗಳಲ್ಲೇ ತಾಯಿಯನ್ನೂ ಕಳೆದುಕೊಂಡು ಮತ್ತಷ್ಟು ಸೊರಗಿದ ದಿನಗಳಾಗಿರಬಹುದು ಅಥವಾ ಸಿನಿಮಾಗಳಲ್ಲಿ ಕೊಂಚ ಉತ್ತಮ ಪಾತ್ರಗಳು ಸಿಗತೊಡಗಿದಾದ ತನ್ನ ಗೇಲಿಮಾಡಿ ಅವಮಾನವನ್ನು ಮಾಡಲೆತ್ನಿಸುತ್ತಿದ್ದ ಸಹನಟರಾಗಿರಬಹುದು ಅಥವಾ ಹಸಿದ ಹೊಟ್ಟೆಗೆ ಕನಿಷ್ಠ ಹಿಟ್ಟಿಲ್ಲದೆ ಸೊರಗಿದ ಘಳಿಗೆಯಾಗಿರಬಹುದು ಒಟ್ಟಿನಲ್ಲಿ ಈತ ಕಷ್ಟದ ದಿನಗಳನ್ನು ಮುಷ್ಠಿ ಕಟ್ಟಿ ಸೋಲಿಸಿ ಬೆಳೆದ ಛಲಗಾರ. ಈತನ ಸಿನಿಮಾಗಳು ಅದೆಷ್ಟೇ ಪ್ರಸಿದ್ದಿ ಹೊಂದಿದರೂ ಈತ ಇಷ್ಟವಾಗುವುದು ಇಂತಹ ಎಲ್ಲ ಅಡೆತಡೆಗಳನ್ನು ಮೆಟ್ಟಿ ಬೆಳೆದು ಬದುಕನ್ನು ಕಟ್ಟಿಕೊಂಡ ಪರಿಯಿಂದ. ಗಾಡ್ ಫಾದರ್ ಗಳೆಂಬ ಆಧಾರಗಳಿಲ್ಲದೆ ಚಿತ್ರರಂಗದಲ್ಲಿ ಇಂದು ಸೂಪರ್ ಸ್ಟಾರ್ ಗಳೆನ್ನಿಸಿಕೊಂಡಿರುವ ಕೆಲವೇ ಕೆಲವು ನಟರಲ್ಲಿ ಈತನೂ ಒಬ್ಬ.
ತನ್ನ ಬುದ್ದಿ ಬಲಿತ ಮೇಲೆ ಕೆಲವೇ ವರ್ಷಗಳು ತಂದೆಯೊಟ್ಟಿಗಿದ್ದರೂ ಆ ಕೊಂಚ ಸಮಯದಲ್ಲೇ ಸಾಕಷ್ಟು ವಿಚಾರಗಳನ್ನು ಅವರಿಂದ ಕಲಿಯುತ್ತಾನೆ. ಇಂದಿನ ಈತನ ‘ಡೌನ್ ಟು ಅರ್ಥ್’ ಗುಣಕ್ಕೆ ಅಂದು ತಂದೆಯೊಟ್ಟಿಗಿನ ವಿಚಾರಪೂರ್ವಕ ಒಡನಾಟ ಹಾಗು ಅವರಿಂದ ಕಲಿತ ನಮ್ರತೆಯ ಗುಣಗಳೇ ಹೆಚ್ಚಾಗಿ ಕಾರಣವಾಗಿರುತ್ತದೆ. ಅಲ್ಲದೆ ಈತನಿಗೆ  ಒಮ್ಮೆ ಯಾವುದಾದರೊಂದು ವಿಷಯದಲ್ಲಿ ಗೀಳು ಹತ್ತಿಕೊಂಡರೆ ಆ ವಿಷಯದಲ್ಲಿ ಏನಾದರೊಂದು ಸಾಧಿಸಿದ ನಂತರವೇ ನೆಮ್ಮದಿಯ ನಿಟ್ಟುಸಿರು. ಉದಾಹರಣೆಗೆ ತನ್ನ ಕಾಲೇಜು ದಿನಗಳಲ್ಲಿ ಕ್ರಿಕೆಟ್, ಫುಟ್ ಬಾಲ್ ಹಾಗು ಹಾಕಿಯಲ್ಲಿ ಆಸಕ್ತಿಯನ್ನು ಮೂಡಿಸಿಕೊಂಡ ಈತ, ತದಾ ನಂತರ ತನ್ನನ್ನು ಅದೆಷ್ಟರ ಮಟ್ಟಿಗೆ ಈ ಆಟಗಳಲ್ಲಿ ತೊಡಗಿಸಿಕೊಂಡನೆಂದರೆ ಶಾಲಾ ಕಾಲೇಜುಗಳಲ್ಲಿ ಪಠ್ಯ ಹಾಗು ಪಠ್ಯೇತರ ವಿಷಯಗಳಲ್ಲಿ ಅವಿರತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವರ್ಷದ ಕೊನೆಯಲ್ಲಿ ಕೊಡುವ ‘ಸ್ವಾರ್ಡ್ ಆಫ್ ಹಾನರ್’ ಪ್ರಶಸ್ತಿಯನ್ನು ಪಡೆಯುತ್ತಾನೆ. ಫುಟ್ ಬಾಲ್ ಹಾಗು ಕ್ರಿಕೆಟ್ ನಲ್ಲಿ ಕಾಲೇಜು ತಂಡದ ನಾಯಕನೂ ಆಗುತ್ತಾನೆ.
ಇಂದು ನಡುರಾತ್ರಿಯಲ್ಲಿ ತನಗರಿಯದಂತೆ ಒದಗಿ ಬರುವ ಸ್ಟಾರ್ಡಮ್ ಎಂಬ ಹುಚ್ಚು ಹಸಿವಿನಿಂದ ಕಂಗೆಟ್ಟು, ಜೊತೆಗಿದ್ದವರ ಮರೆತೇ ಬಿಟ್ಟು, ವರ್ಷಕೊಂದರಂತೆ ಬದಲಾಹಿಸಿಕೊಳ್ಳುವ ವಸ್ತುಗಳಂತೆ ಆಗಿರುವ ಅದೆಷ್ಟೋ ಚಿತ್ರರಂಗದ ನಟ ನಟಿಯರ ದಾಂಪತ್ಯ ಹಾಗು ಸಾಮಾಜಿಕ ಜೀವನಗಳಲ್ಲಿ ಇಂದು ಇವನದು ಅಕ್ಷರ ಸಹ ಬೌಧಿಕ ನಡತೆ. ಅದು ತನ್ನ ಕಷ್ಟಗಾಲದಲ್ಲಿ ಜೊತೆಗಿದ್ದು ಕೈ ಹಿಡಿದು ನೆಡೆದು ಬಂದ ಮಡದಿಯಾಗಲಿ ಅಥವಾ ಜೇಬು ತೂತುಬಿದ್ದ ಮಡಕೆಯಾದಾಗಲೂ ಬೆನ್ನ ಹಿಂದಿದ್ದು ನೆಡೆಸಿ ದಡವನ್ನು ತಲುಪಿಸಿದ ಸ್ನೇಹಿತರಾಗಲಿ ಯಾರನ್ನೂ ಸಹ ಈತ ಮರೆತಿಲ್ಲ. ಅಲ್ಲದೆ ಜಾತಿ, ಮತ ಅಂದ ಚೆಂದದ ಹಿಂದಿರುವ ಪ್ರೀತಿಯನ್ನೆಂದೂ ನಂಬದ ಈತ ತನ್ನ ಮಕ್ಕಳಲ್ಲೂ ಆ ಗುಣಗಳು ಬರಲಿ ಎಂದು ಬಯಸುತ್ತಾನೆ. ಮನೆಯಲ್ಲಿ ಕುರಾನ್ ಹಾಗು ಭಗವದ್ಗೀತೆಯನ್ನು ಒಟ್ಟೊಟ್ಟಿಗೆ ತನ್ನ ಮಕ್ಕಳಿಗೆ ಕಲಿಯಲು ಅನುವುಮಾಡಿಕೊಡುತ್ತಾನೆ. ಈತ ಸಮಾಜಕ್ಕೆ ಮಾದರಿಯಾಗುವುದು ಇವೇ ಕೆಲವು ಗುಣಗಳಿಂದ ಹಾಗು ಜೊತೆಗೆ ತನ್ನ ಅಭೂತಪೂರ್ವ ಚಿತ್ರಗಳಿಂದ ಹಾಗು ಅವುಗಳಿಗೆ ಜೀವ ತುಂಬುವ ತನ್ನ ಅಮೋಘ ನಟನೆಯಿಂದ. ದಿಲ್ ಸೆ, ಹೇ ರಾಮ್, ಅಶೋಕ, ಕಲ್ ಹೊ ನ ಹೊ, ಸ್ವದೇಶ್, ಚಕ್ ದೇ, ಮೈ ನೇಮ್ ಈಸ್ ಖಾನ್,  ಹೀಗೆ ಹಲವು  ಚಿತ್ರಗಳು ಕೇವಲ ಚಿತ್ರಗಳಾಗಿರದೆ ಹಲವರ ಜೀವನವನ್ನು ರೂಪಿಸಿರುವ ಪಠ್ಯಗಳಾಗಿವೆ. ಪ್ರೀತಿ, ಸ್ನೇಹ, ಛಲ, ವಿನಯತೆ, ಗಾಂಭೀರ್ಯತೆ ಎನ್ನುವ ಹಲವಾರು ಭಾವಗಳನ್ನು ಒಟ್ಟೊಟ್ಟಿಗೆ ಮೂಡಿಸಬಲ್ಲ ಈತನ ಉತ್ಕೃಷ್ಟ ನಟನೆ ನಿರ್ದೇಶಕರ ಕನಸ್ಸನ್ನು ನನಸಾಗುವಂತೆ ಪರದೆಯ ಮೇಲೆ ಮೂಡಿಸಿ ತನ್ನ ಹಾಗು ಚಿತ್ರದ ಹೆಸರನ್ನೂ ನೋಡುಗರಲ್ಲಿ ಅಮರವಾಗಿಸಿದ್ದಾನೆ. ಜನರ ಮನೆಮಾತಾಗಿದ್ದಾನೆ.
ಆದರೆ,
ಒಬ್ಬ ನಟ ಆತ ಯಾವುದೇ ಸ್ಥರದಲ್ಲಿರಲಿ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿಯಾದರೂ ನೋಡುಗರ ಮೇಲೆ ತನ್ನ ಪ್ರಭಾವವನ್ನು ಬೀರುತ್ತಿರುತ್ತಾನೆ. ತನಗರಿಯದಂತೆ ಸಾಮಾಜಿಕ ಜವಾಬ್ದಾರಿ ಎಂಬ ಕಾಣದ ಬೇತಾಳವನ್ನು ಹೆಗಲೇರಿಸಿಕೊಂಡಿರುತ್ತಾನೆ. ಭಾರತದಂತಹ ಮುಗ್ದ ದೇಶದ ಎಳೆಯ ಮನಗಳ ಮೇಲೆ, ಅದೂ ಪ್ರಸ್ತುತ ಸಿನಿಮೀಯ ಜಗತ್ತಿನಲ್ಲಿ ಇಂತಹ ನಟರ ಪ್ರತಿ ನಡೆಯೂ ವಿಪರ್ಯಾಸವೆನಿಸಿದರೂ ಹಲವರಿಗೆ ದಾರಿದೀಪಗಳಾಗಿರುವುದು ಸುಳ್ಳೇನೂ ಅಲ್ಲ. ನಟರೇನೋ ಚಿತ್ರದ ಮಟ್ಟಿಗೆ ತಮ್ಮನ್ನು ಹುಚ್ಚರನ್ನಾಗಿ, ರೌಡಿಗಳಾಗಿ, ಮಾದಕ ವ್ಯಸನಿಗಳಾಗಿ, ಕಳ್ಳರಾಗಿ, ಸುಳ್ಳರಾಗಿ ತಮಗೆ ಬಂದ ಯಾವುದೇ ಪಾತ್ರವಾದರೂ ಅದಕೊಂದ್ದು  ಜೀವ ತುಂಬಿ, ನಟಿಸಿ, ಪ್ರೇಕ್ಷಕರನ್ನು ರಮಿಸಿ ನಂತರ ಆ ಪಾತ್ರವನ್ನು ಮರೆತು ಬೇರೊಂದು ಪಾತ್ರವನ್ನು ಹಿಡಿಯತೊಡಗುತ್ತಾರೆ. ಆದರೆ ಪ್ರೇಕ್ಷಕ? ಆ ಚಿತ್ರ ಹಾಗು ಅದರೊಳಗಿನ ಪಾತ್ರವನ್ನು ಜೀವನೋಪಾಯಕ್ಕೆ ಕೂಡಿಡುವ ಆಸ್ತಿಯಂತೆ ತನ್ನೊಳಗೆ ಬೆಳೆಸಿಕೊಳ್ಳುತ್ತಾನೆ. ಕೆಲವರಂತೂ ಪ್ರತಿ ದಿನವೂ ಆ ಪಾತ್ರಗಳ ಮಂತ್ರವನ್ನೇ ಜಪಿಸುತ್ತಿರುತ್ತಾರೆ. ತಾನು ಆ ಪಾತ್ರಗಳಂತೆ ಮಾರ್ಪಾಡಾಗಲು ಪ್ರಯತ್ನಿಸುತ್ತಾರೆ.
ಅಲ್ಲದೆ ಇಂದು ಲಕ್ಷಾಂತರ ಜನರನ್ನು ಕೇವಲ ಒಂದಿಷ್ಟು ಪದಗಳಲ್ಲೇ (ಡೈಲಾಗ್) ಪರಿವರ್ತಿಸಬಲ್ಲ ದೊಡ್ಡ ನಟಿಮಣಿಗಳು ನಿಜಜಗತ್ತಿನಲ್ಲಿ ಕ್ಯಾಮೆರಗಳೆಂಬ ಕಪ್ಪು ಡಬ್ಬದ ಮುಂದೆ ಬಂದರಂತೂ ಅವಕ್ಕೆ ಜಗತ್ತೇ ಮರೆಯಾಗಿಬಿಡುತ್ತದೆ. ಬೇಡವೆಂದೆಡೆಯಲ್ಲ ಹರಿದು ಬರಿದಾಗುವ ವಸ್ತ್ರಗಳು, ಹೊಲಸು ಮಾತುಗಳನ್ನೇ ಹಾಸ್ಯ ಪ್ರಜ್ನೆಗಳೆಂದು ನಂಬಿ ಹಲ್ಲು ಕಿರಿಯುವ ಕಿರುತೆರೆ ನಟರು, ಇಂತಿಷ್ಟೂ ಸಾಮನ್ಯಜ್ಞಾನವಿಲ್ಲದಿದ್ದರೂ ಇತರರನ್ನು ಅರ್ಥವಾರಿಯದ ತರ್ಕದ ಆಧಾರದ ಮೇಲೆ ಮನಬಂದಂತೆ ಜರಿಯುವ (ಟ್ವಿಟ್ಟರ್ ಮೂಲಕ) ಮೀಸೆ ಚಿಗುರದ ನಟರು, ನಿಜ ಜಗತ್ತಿನಲ್ಲೇ ನಟಿಸಿ, ನಟಿಸಬೇಕಾದ ಕಡೆ ತಿಣುಕಾಡಿ ಹಣ ಸುರಿದಾದರೂ ಸರಿ ಪ್ರಶಸ್ತಿ ಎಂಬ ಗರಿಯನ್ನು ಮುಡಿಗೇರಿಸಿಕೊಳ್ಳಲು ಆವಣಿಸುವ ನಟ ನಟಿಯರು ಇಂದು ಕೋಟಿ ಕೋಟಿ ಜನರ ಹಾಟ್ ಫೇವರೆಟ್. ಪ್ರತಿಭೆಗಿಂತಲೂ ಹೆಚ್ಚಾಗಿ ಪ್ರಸಿದ್ಧಿಯೇ ಇವರನ್ನು ಈ ಮಟ್ಟಕ್ಕೆ ತಂದಿರುತ್ತದೆ ಎಂದರೆ ಸುಳ್ಳಾಗಲಾರದು. ಇಂಥವರನ್ನು ತದೇಕಚಿತ್ತವಾಗಿ ಅನುಸರಿಸುವ ಹಾಗು ಆದರ್ಶ ವ್ಯಕ್ತಿಗಳನ್ನಾಗಿ ಮಾಡಿಕೊಳ್ಳುವ  ನೋಡುಗ ಅದೆಷ್ಟರ ಮಟ್ಟಿಗೆ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂಬುದೇ ಇಲ್ಲಿನ ಪ್ರೆಶ್ನೆ.
ಇನ್ನು ನಮ್ಮ ನಾಯಕನ ವಿಷಯಕ್ಕೆ ಬಂದರೆ ಆತನಿಗಿಂದು 50 ವಸಂತಗಳೇ ಕಳೆದಿವೆ. ಈತ ಚಿತ್ರರಂಗದಲ್ಲಿ ಈಗಲೂ ಸಹ ಅತಿ ಬೇಡಿಕೆಯ ನಟ. ಪರಿಣಾಮ ಆತ ತನ್ನ ಕೇಶರಾಶಿಯನ್ನು ಮುದುಡಿ ಜುಟ್ಟೊಂದನ್ನು ಕಟ್ಟಿದ್ದರೆ ದೇಶದಲ್ಲಿ ಕೋಟಿ ಕೋಟಿ ಜುಟ್ಟುಗಳು ಮಿರ-ಮಿರನೆ ಮೂಡುತ್ತವೆ. ಆತ ಬಿದ್ದು ಮೂಳೆ ಮುರಿದುಕೊಂಡು ಕೈಗೆ ಬ್ಯಾಂಡೇಜ್ ಒಂದನ್ನು ಕಟ್ಟಿಕೊಂಡರೆ ಇತ್ತ ನೂರಾರು ಜನ ಕ್ಲಿನಿಕ್ ಗಳ ಮುಂದೆ ಸಾಲು ಗಟ್ಟಿ ನಿಲ್ಲುತ್ತಾರೆ, ತಾವೂ ಅವನಂತೆ ಕೈಗೆ ಬಿಳಿಯ ಬ್ಯಾಂಡೇಜ್ ಅನ್ನು ಕಟ್ಟಿ ಬೀಗಲು ಹವಣಿಸುವ  ಹುಚ್ಚು ಅಭಿಮಾನಿಗಳು. ಇಷ್ಟೆಲ್ಲಾ  ಬಗೆಯಲ್ಲಿ ತನ್ನನು ಅನುಸರಿಸುವ ದೊಡ್ಡ ಬಳಗವನ್ನೇ ಹೊಂದಿರುವ ಈತ ಸಾರ್ವಜನಿಕ ಮಟ್ಟದಲ್ಲಿ ಎಷ್ಟರ ಮಟ್ಟಿಗೆ ಪ್ರಭುದ್ಧನಾಗಿರಬೇಕೆಂದು ತಿಳಿಹೇಳುವವರ್ಯಾರು? ದೇಶದ ಪ್ರಧಾನಿ ಹಾಗು ರಾಷ್ಟ್ರಪತಿಗಳು ಒಂದೇ ವೇದಿಕೆಯ ಮೇಲೆ ಆಸೀನವಾಗಿರುವಾಗ ಮೊದಲ ಸಂಬೋಧನೆ ಎಂದಿಗೂ ರಾಷ್ಟ್ರಪತಿಯನ್ನು ಕುರಿತು ಆಗಿರಬೇಕೆಂದು, ತನಗೆ  ನೀಲಿ ಚಿತ್ರಗಳ ನಾಯಕನಾಗಬೆನೆಂಬ ಆಸೆ ಅದು ಸ್ವಂತದ ವಿಷಯ, ಆದರೆ ಅದನ್ನು ಸಾರ್ವಜನಿಕವಾಗಿ ಹೇಳಿ ಅಭಿಮಾನಿಗಳಲ್ಲಿದೇಶವಾಸಿಗಳಲ್ಲಿ ಗೊಂದಲವನ್ನುಂಟುಮಾಡುವ ಅವಶ್ಯಕತೆಯಾದರೂ ಏನಿದೆ ಎಂದು ಈತನಿಗೆ ಬಿಡಿಸಿ ಹೇಳುವವರ್ಯಾರು? ಸಾವಿರಾರು ಜನರು ಸೇರಿರುವಾಗ, ಮೈಕೆಂಬ ಮಹಾ ಅಸ್ತ್ರ ಕೈಯ್ಲಲಿರುವಾಗ, ಇಂತಹ ದೊಡ್ಡ ನಟರ ಬಾಯಿಯಿಂದ ಹೊರಡುವ ಪ್ರತಿ ಮಾತುಗಳು ಮುತ್ತುಗಳಂತೆ, ನೆಡೆಯುವ ಪ್ರತಿ ಹೆಜ್ಜೆಯೂ ಮೈಲಿಗಲ್ಲಿನಂತೆ ಎಂಬ ಜವಾಬ್ದಾರಿ ಇನ್ನೂ ಹೆಚ್ಚಾಗಿ ಈತನಲ್ಲಿ ಮೂಡಬೇಕಿದೆ.
ಈತನ ಚಿತ್ರಗಳ ವಿಷಯದಲ್ಲೂ ಬದಲಾಗಬೇಕಾದ ಅಂಶಗಳು ಬಹಳಷ್ಟಿವೆ. ಡಾನ್ ಗಳನ್ನು, ಕಳ್ಳ ಕಾಕರನ್ನು, ಸಾರಾಯಿ ದಂಧೆಯನ್ನು ಮಾಡುವ ದರೋಡೆಕೋರರನ್ನು ಹಿರಿ ಹಿರಿ ಹಿಗ್ಗಿಸಿ ತೋರುವ ಚಿತ್ರಗಳಿಗೆ ಈತನಂತಹ ನಟರು ನಾಯಕನಾಗುತ್ತಿರುವು ದೇಶೀ ಚಿತ್ರರಂಗಕ್ಕೆ ಬರಬಡಿದ ಸೂಚನೆ! ಇವುಗಳೇನಿದ್ದರೂ ಬುದ್ದಿ ಚಿಗುರೊಡೆಯದ ಅಥವಾ ಸಾಮಾಜಿಕ ಕಳಕಳಿಇಲ್ಲದ ಅಥವಾ ಚಿತ್ರನಿರ್ಮಾಣವನ್ನೇ ‘ದಂಧೆ’ಯಾಗಿಸಿಕೊಂಡಿರುವ  ಚಿತ್ರ ‘ವಿ’ರಚನಾಕಾರರಿಗೆ ಮಾತ್ರ ಸೀಮಿತ. ಇಂತಹ ಪಾತ್ರಗಳು ಹಾಗು ಚಿತ್ರಗಳು ಕಷ್ಟದ ಎಲ್ಲ ಮಜಲುಗಳನ್ನು ಜಡಿದು ಮೇಲೆ ಬಂದು ಜೀವನಸ್ಪೂರ್ತಿದಾಯಕವಾಗುವ ನಮ್ಮ ನಾಯಕನ ವ್ಯಕ್ತಿತ್ವದವರಂತವರಿಗಲ್ಲ. ಕಳೆದ ಏಳೆಂಟು ವರ್ಷಗಳಿಂದ ಈತನ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ಸ್ಪಷ್ಟವಾಗಿ ಅರಿವಿಗೆ ಬರುತ್ತದೆ. ‘ಮೈ ನೇಮ್ ಇಸ್ ಖಾನ್’ ಚಿತ್ರದ ನಂತರ ಈತನ ಯಾವ ಚಿತ್ರವೂ ಇಂದು ನೋಡಿ ಮುಂದೊಂದು ದಿನ ನೆನಪಿನಲ್ಲುಳಿಯುವ ಮಟ್ಟಕ್ಕಿಲ್ಲ. ಕಾರಣ ಹಲವು. ಪ್ರಮುಖವಾಗಿ ಇಂದಿಗೂ ಸಹ ಕೇವಲ ವ್ಯಕ್ತಿ ಕೇಂದ್ರಿತ ಪಾತ್ರಗಳನ್ನೇ ಅರಸಿ ಹೋಗುತ್ತಿರುವುದು ಅಲ್ಲದೆ ಸಮಾಜಮುಖಿ ಹಾಗು ಅರ್ಥಪೂರ್ಣ ಲೊ ಬಜೆಟ್ ಚಿತ್ರಗಳಿಂದ ವಿಮುಖನಾಗಿರುವುದು.
ವಯಸ್ಸಿಗೆ ತಕ್ಕಂತೆ ಪಾತ್ರಗಳನ್ನು ಮಾಡಬೇಕೆಂಬ ಯಾವುದೇ ಬೇಲಿಗಳು ನಟನ ಪ್ರಪಂಚದಲ್ಲಿಲ್ಲದಿದ್ದರೂ, ಹಣದ ಆಸೆಯನ್ನು ತೊರೆದು ಇಲ್ಲಿಯವರೆಗೂ ತನ್ನನು ನಂಬರ್ ಒನ್ ನಟನನ್ನಾಗಿ ಮಾಡಿದ ಆತನ ಹುಚ್ಚು ಅಭಿಮಾನಿಗಳ ಹಿತದೃಷ್ಟಿಯಿಂದಲಾದರೂ ಚಿತ್ರಗಳನ್ನು ಆರಿಸಿಕೊಳ್ಳುವಾಗ ಈತ ಯೋಚಿಸಬೇಕಾಗಿದೆ. ಅಮಿರ್ ನ ದಂಗಲ್, ತಾರೆ ಝಮೀನ್ ಪರ್, ಲಗಾನ್, ಸರ್ಫಾರೋಶ್  ಚಿತ್ರಗಳಾಗಿರಬಹುದು ಅಥವಾ ಏರ್ ಲಿಫ್ಟ್, ಸ್ಪೆಷಲ್ 26, ಹಾಲಿಡೇ ಗಳಂತಹ ಅಕ್ಷಯ್ ಕುಮಾರ್ ನ ಚಿತ್ರಗಳಾಗಿರಬಹುದು ಇವುಗಳು ನೋಡುಗರಲ್ಲಿ ಒಂದು ಹೊಸ ವಿಚಾರಧಾರೆಯನ್ನು ಪುಟಿದೇಳಿಸುತ್ತವೆ. ದೇಶದ ಬಗ್ಗೆ ಅಲ್ಲದೆ ಸಾಮಾಜಿಕ  ಕಳಂಕಗಳ ಬಗ್ಗೆ ಅರಿವು ಮೂಡಿಸುತ್ತವೆ. ಇಲ್ಲಿ ನಿರ್ದೇಶಕ ಹಾಗು ಕಥೆಗಾರರ  ಕೊಡುಗೆ ಬಹಳಷ್ಟು ಇದ್ದರೂ ಅವುಗಳು ಹೆಚ್ಚಾಗಿ ಪರಿಣಾಮ ಬೀರುವುದು ಇಂತಹ ಅಗ್ರ ನಟರು ಅವುಗಳಿಗೊಂದು ಜೀವವನ್ನು ತುಂಬಿದಾಗ. ದೇಶ, ನಾಡು ಹಾಗು ಸಂಸ್ಕೃತಿಯ ಪ್ರತೀಕವಾದಂತಹ ಚಿತ್ರಗಳು ಇಂದು ಹೆಚ್ಚಾಗಿ ಮೂಡಬೇಕಿದೆ. ‘ಸ್ವದೇಶ್’ ಚಿತ್ರದ ನಾಯಕ ಮೋಹನ್ ತನ್ನ ಐಶಾರಾಮಿ ಕೆಲಸವನ್ನು ಬಿಟ್ಟು ದೇಶದ ಉನ್ನತಿಗೆ ಮರಳಿ ತಾಯ್ನಾಡಿಗೆ ಬಂದಂತೆ ಇಂದು ಜನರ ಜೇವನವನ್ನು ಮಾರ್ಪಡಿಸಬಲ್ಲ ಚಿತ್ರಮಾಧ್ಯಮವೆಂಬ ಮಹಾ ಅಸ್ತ್ರದ ಮೂಲಕ ಮತ್ತೊಮ್ಮೆ ನೈತಿಕ ಹಾಗು ಸಾಮಾಜಿಕ ಕಳಕಳಿಯ ಚಿತ್ರಗಳನ್ನು ನಮ್ಮ ನಾಯಕ ನೀಡಬೇಕಿದೆ. ‘ಕಿಂಗ್ ಆಫ್  ರೋಮ್ಯಾನ್ಸ್’ ಇಂದು ‘ಕಿಂಗ್ ಆಫ್ ಗುಡ್ ಥಿಂಗ್ಸ್’ ಸಹ ಆಗಬೇಕಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!