“ದೇವಾಲಯಗಳು ಶೋಷಣೆಯ ಕೇಂದ್ರಗಳು. ವೈದಿಕಶಾಹಿ, ಪುರೋಹಿತಶಾಹಿ ವರ್ಗ ತಮ್ಮ ಹೊಟ್ಟೆ ಹೊರೆದುಕೊಳ್ಳಲು ಬುಡಭದ್ರವಿಲ್ಲದ ಮೂಢನಂಬಿಕೆಗಳನ್ನು ಸೃಷ್ಠಿಸಿ ಶೂದ್ರಾದಿಗಳ ಅಜ್ಞಾನವನ್ನೇ ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡು ಅವರ ದುಡಿಮೆಯನ್ನೆಲ್ಲಾ ತಮ್ಮ ಸೌಕರ್ಯ, ಸೌಖ್ಯಗಳಿಗಾಗಿ ಲೂಟಿ ಹೊಡೆಯುತ್ತಾ ಬರುತ್ತಿದ್ದಾರೆ. ಹೋಮ, ಪೂಜೆ, ಸತ್ಯನಾರಾಯಣವ್ರತ ಇತ್ಯಾದಿ ಅವೈಜ್ಞಾನಿಕವಾದ ಕಂದಾಚಾರಗಳನ್ನು ಹುಟ್ಟು ಹಾಕಿ ನಮ್ಮ ಶತ್ರುಗಳಾಗಿದ್ದಾರೆ. ದೇವರು ಎನ್ನುವ ಶಕ್ತಿ ಇಲ್ಲ. ಕಳ್ಳ ಪೂಜಾರಿಗಳು ದೇವರನ್ನು ಹುಟ್ಟುಹಾಕಿದ್ದಾರೆ. ಕಳ್ಳ, ಸುಳ್ಳ ದೇವರಿಂದ ದೂರವಿರಿ. ದೇಗುಲಗಳು ಬೇರೆಯವರಿಗೆ ಅಭಿವೃದ್ಧಿ ಕೇಂದ್ರಗಳಾಗಿದ್ದರೆ, ಶೋಷಿತರ ಮಾರಣಹೋಮದ ಕೇಂದ್ರಗಳಾಗಿವೆ. ಪುರೋಹಿತಶಾಹಿಗಳು ಮುಗ್ಧ ಜನರ ನಂಬಿಕೆಯನ್ನು ಬಂಡವಾಳವನ್ನಾಗಿ ಮಾಡಿಕೊಂಡು ದೇವಾಲಯಗಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ, ದೇವಾಲಯಗಳನ್ನೆಲ್ಲಾ ಕೆಡವಿ ಗ್ರಂಥಾಲಯಗಳನ್ನು ಕಟ್ಟಿಸಿ……”
ಹೀಗೆ ಹೇಳುವ ಪ್ರಗತಿಪರರನ್ನು, ಬುದ್ಧಿಜೀವಿಗಳನ್ನು, ಸಮಾನತೆಯ ಹೋರಾಟಗಾರರನ್ನು ನೀವು ನೋಡಿಯೇ ಇರುತ್ತೀರಿ. ಅವರ ಭಾಷಣಗಳನ್ನು ಕೇಳಿಯೇ ಇರುತ್ತೀರಿ. ಅವರ ಬರಹಗಳನ್ನು ಓದಿಯೇ ಇರುತ್ತೀರಿ. ಆದರೆ ದೇವಾಲಯಗಳ ತಟ್ಟೆ ಕಾಸು ಯಾರಿಗೆ ಹೋಗಿ ಸೇರುತ್ತಿದೆ ಎನ್ನುವುದನ್ನೊಮ್ಮೆ ಕೂಲಂಕುಷವಾಗಿ ಪರಿಶೀಲಿಸಿದರೆ ನಿಮ್ಮ ಹೃದಯಕ್ಕೆ ಅಪಘಾತವಾಗುವುದಂತೂ ಖಂಡಿತ!
ನಮಗೆಲ್ಲಾ ಗೊತ್ತಿರುವಂತೆ ಹೆಚ್ಚು ಆದಾಯ ಬರುತ್ತಿರುವ ದೇವಾಲಯಗಳು ಸರ್ಕಾರದ ಮುಜರಾಯಿ ಇಲಾಖೆಗೆ ಸೇರುತ್ತವೆ. ಖಾಸಗಿ ಟ್ರಸ್ಟ್’ಗಳು ನಡೆಸುವ ದೇವಾಲಯಗಳು ಕೂಡಾ ಆದಾಯ ಚೆನ್ನಾಗಿದೆ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಯಾವುದೋ ನೆಪದಲ್ಲಿ ಸರ್ಕಾರದ ಪಾಲಾಗುತ್ತವೆ. ವಿಚಿತ್ರವೆಂದರೆ ಖಾಸಗಿ ದೇವಾಲಯಗಳು ಒಂದೇ ಒಂದು ಪೈಸೆ ದೇವಾಲಯದ ಆದಾಯವನ್ನು ಇತರ ಕಾರ್ಯಗಳಿಗೆ ಬಳಸಿಕೊಂಡಿದ್ದು ಗೊತ್ತಾದರೂ ತನ್ನ ವಶಕ್ಕೆ ತೆಗೆದುಕೊಳ್ಳುವ ಸರ್ಕಾರ ದೇವಾಲಯವನ್ನು ತನ್ನ ವಶಕ್ಕೆ ಪಡೆಯುತ್ತಿದ್ದಂತೆಯೇ ಆ ದೇವಾಲಯದ ಪೂರ್ತಿ ಆದಾಯವನ್ನೂ ಯಾವ ಕೆಲಸಕ್ಕೆ ಬೇಕಾದರೂ ಬಳಸಿಕೊಳ್ಳುವ ಹಕ್ಕು ಪಡೆದುಕೊಂಡುಬಿಡುತ್ತದೆ!
ಕೋಟಿ–ಕೋಟಿ ಆದಾಯ ತಂದುಕೊಡುವ ದೇವಾಲಯಕ್ಕೆ ಸುಣ್ಣ ಬಳಿಯಲು ಕಾಸು ಇರುವುದಿಲ್ಲ. ದೇಗುಲದ ಗೋಪುರ ಉರುಳಿಬಿದ್ದರೆ ಅದನ್ನು ಪುನರ್ ಪ್ರತಿಷ್ಠಾಪಿಸಲು ಹಣಕೊಡುವುದಿಲ್ಲ. ಹಾಗಾದರೆ ಆಸ್ತಿಕರಾದ ನಾವು ದೇವಾಲಯದ ಹುಂಡಿಗೆ, ಪುರೋಹಿತರ ಆರತಿ ತಟ್ಟೆಗೆ ಹಾಕುವ ಹಣ ಎಲ್ಲಿಗೆ ಹೋಗಿ ತಲಪುತ್ತಿದೆ?
ಸಂಶಯವೇ ಬೇಡ. ಆ ಹಣ ನೇರವಾಗಿ ಯಾರು ದೇವಾಲಯಗಳು ಶೋಷಣೆಯ ಕೇಂದ್ರಗಳು ಎನ್ನುತ್ತಿದ್ದಾರೋ ಅಂತಹಾ ಪ್ರೊಫೆಸರ್’ಗಳ ಹೆಂಡತಿ ಮಕ್ಕಳನ್ನು ಸಾಕಲು ಖರ್ಚಾಗುತ್ತಿದೆ. ಯಾರು ದೇವರನ್ನು ವ್ಯಭಿಚಾರಿ, ದೇವರು ಅಪ್ಪನಿಗೆ ಹುಟ್ಟಿಲ್ಲ, ದೇವರು ಲಂಪಟ ಎಂದು ಝರಿಯುತ್ತಿದ್ದಾರೋ ಅಂತಹಾ ವಿಚಾರವಾದಿಗಳ ರಕ್ಷಣೆಗೆ ಖರ್ಚಾಗುತ್ತಿದೆ. ಯಾರು ದೇವರನ್ನು ನಂಬಬೇಡಿ, ದೇವರೆನ್ನುವುದು ಮೂಢನಂಬಿಕೆ ಎಂದು ಜೀವನದುದ್ದಕ್ಕೂ ಪ್ರಚಾರ ಮಾಡುತ್ತಿರುತ್ತಾರೋ ಅವರ ಚಿತೆಯ ಮೇಲೆ ಕ್ವಿಂಟಾಲುಗಟ್ಟಲೆ ತುಪ್ಪ ಸುರಿಯಲು ಖರ್ಚಾಗುತ್ತಿದೆ. ಯಾರು ಪುರೋಹಿತರು ಬದುಕುತ್ತಿರುವುದೇ ಆರತಿ ತಟ್ಟೆ ಕಾಸಿನಿಂದ ಎಂದು ಬರೆಯುತ್ತಿದ್ದಾರೋ ಅಂತಹಾ ಪ್ರಗತಿಪರ ಬರಹಗಾರರ ಯಾರೂ ಓದದ ರದ್ದಿ ಪುಸ್ತಕಗಳನ್ನು ಕೊಂಡು ಸರ್ಕಾರೀ ಗ್ರಂಥಾಲಯಗಳಲ್ಲಿ ಸುರಿಯಲು ಖರ್ಚಾಗುತ್ತಿದೆ.
ನಿಮಗೆ ಆಶ್ಚರ್ಯವಾಗಬಹುದು. ಯಾವ ಸರ್ಕಾರದ ನೆರಳಿನಲ್ಲಿ ಕೂತು ಈ ಬುದ್ದಿಜೀವಿಗಳು, ವಿಚಾರವಾದಿಗಳು ದೇವಾಲಯಗಳನ್ನು, ದೇವರ ಪೂಜೆಯನ್ನು, ಹೋಮಹವನಗಳನ್ನು, ಸತ್ಯನಾರಾಯಣ ವ್ರತಗಳನ್ನು ಮುಗ್ಧರನ್ನು ಶೋಷಿಸಲೆಂದೇ ಪುರೋಹಿತಶಾಹಿಗಳು ಹುಟ್ಟುಹಾಕಿದ್ದಾರೆ ಎನ್ನುತ್ತಿದ್ದಾರೋ ಅದೇ ಸರ್ಕಾರ ಅಧಿಕೃತವಾಗಿಯೇ ಇವೆಲ್ಲವನ್ನೂ ನಡೆಸುತ್ತಾ ಮುಗ್ಧರನ್ನು ಶೋಷಿಸುತ್ತಿದೆ!ಇದನ್ನು ನಾನೇನೂ ಸುಮ್ಮ–ಸುಮ್ಮನೆ ಹೇಳುತ್ತಿಲ್ಲ. ಸ್ಪಷ್ಟ ಸಾಕ್ಷಿಯ ಜೊತೆಗೆ ಹೇಳುತ್ತಿದ್ದೇನೆ.
ರಾಜ್ಯ ಸರ್ಕಾರಕ್ಕೆ ಅತೀ ಹೆಚ್ಚು ಆದಾಯ ತಂದುಕೊಡುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಅಲ್ಲಿ ನಿಮ್ಮ ನಂಬಿಕೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ನಿಮ್ಮ ಹೆಸರಿನಲ್ಲಿ ರಥೋತ್ಸವ ಸೇವೆ ಮಾಡಲು ನಿಮ್ಮಿಂದ ಸರ್ಕಾರ ಪಡೆಯುವ ದುಡ್ಡು ಬರೋಬ್ಬರಿ ಇಪ್ಪತ್ತೈದು ಸಾವಿರ ರೂಪಾಯಿಗಳು. ಚಿಕ್ಕ ರಥವಾದರೆ ಎಂಟು ಸಾವಿರ!
ನಂಬಿಕೆಯ ಹೆಸರಿನಲ್ಲಿ ಈ ರೀತಿಯಾಗಿ ಹಣ ಸುಲಿಯುವ ಸರ್ಕಾರದ ವಿರುದ್ಧ ಬುದ್ದಿಜೀವಿಗಳು ಯಾಕೆ ಪ್ರತಿಭಟಿಸುತ್ತಿಲ್ಲ?ಯಾಕೆಂದರೆ ಆ ಇಪ್ಪತ್ತೈದು ಸಾವಿರದಲ್ಲಿ ಪರೋಕ್ಷವಾಗಿ ಒಂದಂಶ ಅದೇ ಬುದ್ದಿಜೀವಿಗಳಿಗೂ ಸೇರುತ್ತದೆ. ವಿರೋಧಿಸಿ ತಮ್ಮ ಕಾಲಿನ ಮೇಲೆ ಕಲ್ಲು ಹಾಕಿಕೊಳ್ಳಲುಅವರು ಸಿದ್ಧರಿಲ್ಲ.
ಇನ್ನು ಕಲ್ಲಿನ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ಮಾಡುತ್ತೇವೆ ಎಂದು ಹೇಳಿ ಸರ್ಕಾರ ಆಸ್ತಿಕರಿಂದ ಪಡೆಯುವ ಹಣ ಬರೋಬ್ಬರಿ ಆರು ಸಾವಿರ ರೂಪಾಯಿಗಳು. ಸರ್ಪಸಂಸ್ಕಾರ ಮಾಡಿಸಿ ನಿಮ್ಮ ಪಾಪ ಪರಿಹರಿಸುತ್ತೇವೆ ಎಂದು ಸರ್ಕಾರ ಆಸ್ತಿಕರಿಂದ ಪಡೆಯುವ ಹಣ ಬರೋಬ್ಬರಿ ಮೂರು ಸಾವಿರ ರೂಪಾಯಿಗಳು. ಇವು ವರ್ಷಪೂರ್ತಿನಡೆಯುತ್ತಲೇ ಇರುತ್ತವೆ.
ವರ್ಷಕ್ಕೊಮ್ಮೆ ಬರುವ ನಾಗರ ಪಂಚಮಿಯಂದು ಕಲ್ಲಿನ ನಾಗರನ ಮೇಲೆ ಹಾಲುಸುರಿಯುವ ಬದಲು ಹಸಿದ ಮಕ್ಕಳಿಗೆ ನೀಡಿ ಎಂದು ಬೊಬ್ಬೆ ಹೊಡೆಯುವ ಪ್ರಗತಿಪರರು ಸರ್ಕಾರವೇ ಮುಂದೆ ನಿಂತು ಹಣ ಪಡೆದು ಮಾಡುವ ಇಂತಹಾ ಗಳನ್ನು ಏಕೆ ವಿರೋಧಿಸುವುದಿಲ್ಲ?
ಯಾಕೆಂದರೆ ಆ ಪಂಚಾಮೃತ ಅಭಿಷೇಕದಿಂದ ನಿತ್ಯವೂ ಪ್ರತಿಯೊಬ್ಬ ಆಸ್ತಿಕನಿಂದಲೂ ಆರು ಸಾವಿರ ಪಡೆಯುವ ಸರ್ಕಾರ ಅದೇ ಹಣವನ್ನು ಇದೇ ಪ್ರಗತಿಪರರ ವೈಯುಕ್ತಿಕ ಪ್ರಗತಿಗೂ ತೆಗೆದಿರಿಸುತ್ತದೆ. ಆದ್ದರಿಂದ ತಾವು ತಿನ್ನುತ್ತಿರುವ ಅನ್ನಕ್ಕೆ ಮಣ್ಣುಹಾಕಿಕೊಳ್ಳಲು ಆ ಪ್ರಗತಿಪರರು ಸಿದ್ಧರಿಲ್ಲ.
ಇನ್ನು ಸತ್ಯನಾರಾಯಣ ವ್ರತವನ್ನಂತೂ ದಲಿತರನ್ನು ಶೋಷಿಸಲೆಂದೇ ಹುಟ್ಟುಹಾಕಲಾದ ಹೊಸಾ ಪದ್ಧತಿ ಎಂದು ಕಂಡ ಕಂಡಲ್ಲಿ ಟೀಕಿಸುವ ಕವಿಪುಂಗವರಿಗೆ ಸರ್ಕಾರವೇ ಸತ್ಯನಾರಾಯಣ ವ್ರತ ಮಾಡಿಸುತ್ತೇನೆ ಎಂದು ಹೇಳಿ ನೂರಾರು ಜನರಿಂದ ನಿತ್ಯವೂ ತಲಾ ಐನೂರು ರೂಪಾಯಿಗಳನ್ನು ಪಡೆಯುತ್ತಿರುವುದು ಕಾಣಿಸುತ್ತಿಲ್ಲವೆಂದೇನಲ್ಲ. ಆ ಸರ್ಕಾರೀ ಸತ್ಯನಾರಾಯಣ ವ್ರತದ ಪ್ರಸಾದದ ಒಂದು ಭಾಗ ಹಣದ ರೂಪದಲ್ಲಿ ಅದೇ ಉದ್ಧಾರವಾದೀ ಕವಿ ಪುಂಗವರಿಗೆ ತಲುಪುತ್ತಿದೆ. ಅದೇ ಹಣದಲ್ಲಿ ಅವರು ತಮ್ಮ ಮಕ್ಕಳನ್ನು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಕಳುಹಿಸುತ್ತಿದ್ದಾರೆ. ಪ್ರತಿಷ್ಠಿತ ಕಾಲೋನಿಗಳಲ್ಲಿ ಬಂಗಲೆ ಖರೀದಿಸುತ್ತಿದ್ದಾರೆ. ಅಷ್ಟೊಂದು ಪ್ರಸಾದವನ್ನು ಬಾಯಿಗೆ ತುಂಬಿಕೊಂಡ ಮೇಲೆ ಸರ್ಕಾರೀ ಸತ್ಯನಾರಾಯಣ ವ್ರತವನ್ನು ಟೀಕಿಸಲು ಬಾಯಿತೆರೆಯುವುದಾದರೂ ಹೇಗೆ ಸಾಧ್ಯ?
ಇದಿಷ್ಟೇ ಅಲ್ಲದೆ, ಇದೊಂದೇ ದೇವಾಲಯದಿಂದ ಹತ್ತಾರು ಸೇವೆಗಳ ಹೆಸರಿನಲ್ಲಿ ಲಕ್ಷಾಂತರ ರೂಗಳನ್ನು ಮುಗ್ಧ ಆಸ್ತಿಕರಿಂದ ಗಳಿಸುತ್ತಿದೆ. ಇನ್ನು ರಾಜ್ಯದಾದ್ಯಂತ ಇರುವ ಸರ್ಕಾರೀ ದೇವಾಲಯಗಳಿಂದ ಅದೆಷ್ಟು ಗಳಿಸುತ್ತಿರಬಹುದು ಎನ್ನುವುದನ್ನು ನೀವೇಯೋಚಿಸಿ. ಈ ಆದಾಯದಲ್ಲಿ ತಟ್ಟೆ ಕಾಸಿನಲ್ಲೇ ಜೀವನ ನಡೆಸುತ್ತಾರೆ ಎನ್ನುವ ಪುರೋಹಿತರುಗಳಿಗೆ ಸಿಗುವುದು ಅವರು ಮಾಡಿದ ಕೆಲಸಕ್ಕೆ ತಕ್ಕಸಂಬಳವಷ್ಟೇ. ಉಳಿದಿದ್ದೆಲ್ಲಾ ಪರೋಕ್ಷವಾಗಿ ಹೋಗಿ ಸೇರುವುದು ಇದೇ ದೇವರನ್ನು ವಿರೋಧಿಸುವ ಬುದ್ದಿಜೀವಿಗಳಿಗೆ. ಅದೇ ಕಾರಣಕ್ಕೆ ನಂಬಿಕೆಯನ್ನೇ ಬಂಡವಾಳವನ್ನಾಗಿಸಿಕೊಂಡು ಭಕ್ತಾದಿಗಳಿಂದ ಸುಲಿಯುವ ಸರ್ಕಾರದ ಈ ಕೃತ್ಯಗಳನ್ನು ಅವರುಗಳ್ಯಾರೂ ಖಂಡಿಸುತ್ತಿಲ್ಲ.
ಇನ್ನು ಮಾತು ಮಾತಿಗೂ ಸಮಾನತೆಯನ್ನು ಪ್ರತಿಪಾದಿಸುವ, ಯಾವುದೋ ಖಾಸಗಿ ಮಠದ ಸಂಪ್ರದಾಯವನ್ನು ವಿರೋಧಿಸಿ ಬೃಹತ್ ಹೋರಾಟ ರೂಪಿಸುವ, ಸಂವಿಧಾನದಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಅಸಮಾನತೆ ಆಚರಿಸುವುದು ಘೋರ ಅಪರಾಧ ಎಂದು ಸಾರಿ ಸಾರಿ ಹೇಳುವ ಪ್ರಗತಿಪರರ ಬಗ್ಗೆ ಒಂದಷ್ಟು ಹೇಳಲೇಬೇಕು.
ಅದಕ್ಕೂ ಒಂದು ಉದಾಹರಣೆಯನ್ನು ಕೊಡುತ್ತೇನೆ ಗಮನಿಸಿ. ಸರ್ಕಾರದ ಒಡೆತನಕ್ಕೆ ಒಳಪಡುವ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೊಮ್ಮೆ ಭೇಟಿಕೊಟ್ಟು ನೋಡಿ.ಅಲ್ಲಿ ಹೆಚ್ಚಿನ ಕಾಸು ಕೊಡಲು ಅಶಕ್ತರಾದ ಕಡುಬಡವರಿಗೆ ಸಾಮಾನ್ಯ ಪ್ರವೇಶ ಒದಗಿಸಲಾಗಿದೆ. ಕಾಸು ಕೊಟ್ಟು ಸುಲಭ ದರ್ಶನ ಪಡೆಯಲಾಗದ ಕಡುಬಡವರು, ಶೋಷಿತರು, ಅಂಗವಿಕಲರು, ಗರ್ಭಿಣಿಯರು, ದೇವಾಲಯದ ಹೊರಗೆಬಿಸಿಲಿನಲ್ಲಿ ನಿಂತು ಹಲವು ಸುತ್ತು ಹಾಕಿ ನಂತರ ದೇವರ ದರ್ಶನ ಪಡೆಯಬೇಕು. ಸ್ವಲ್ಪಪ್ರಮಾಣದ ಹಣ ಕೊಟ್ಟು ಸ್ವಲ್ಪ ಸುಲಭವಾಗಿ ದೇವರ ದರ್ಶನ ಪಡೆಯಲು ಶಕ್ತರಾದ ಮಧ್ಯಮ ವರ್ಗದವರಿಗಾಗಿ ವಿಶೇಷ ಪ್ರವೇಶ ಕಲ್ಪಿಸಲಾಗಿದೆ. ಇನ್ನೂ ಹೆಚ್ಚು ದುಡ್ಡು ಸರ್ಕಾರಕ್ಕೆ ಕೊಟ್ಟರೆ ಅವರಿಗೆ ನೇರ ಪ್ರವೇಶ ಒದಗಿಸಲಾಗುತ್ತದೆ!
ಅರೆ!ಸಾರ್ವಜನಿಕ ಸ್ಥಳಗಳಲ್ಲಿ ಅಸಮಾನತೆ ಆಚರಿಸುವುದು ಸಂವಿಧಾನಕ್ಕೆ ವಿರುದ್ಧ ಎಂದು ಹೋರಾಡುವ ಪ್ರಗತಿಪರರು ಎಲ್ಲಿ ಹೋದರಪ್ಪಾ ಎಂದು ಆಶ್ಚರ್ಯವೇ? ಆಶ್ಚರ್ಯಪಡಬೇಕಾದ ಅಗತ್ಯವಿಲ್ಲ. ಆ ಪ್ರಗತಿಪರರೂ ಅದೇ ನೇರ ಪ್ರವೇಶದ ವಿ.ಐ.ಪಿ.ಪಾಸಿನೊಂದಿಗೆ ಅದೇ ಕಡು ಬಡವರು, ಶೋಷಿತರು, ಅಂಗವಿಕಲರು, ಗರ್ಭಿಣಿಯರುಗಳ ಎದುರೇ ಪಟಾಪಟ್ ದರ್ಶನ ಮುಗಿಸಿ ಎಸಿ ಕಾರು ಹತ್ತಿ ಹೊರಟೇಬಿಡುತ್ತಾರೆ. ಸಂವಿಧಾನಕ್ಕೆ ಅಪಚಾರ ಮಾಡಿ ಅಸಮಾನತೆ ಆಚರಿಸಿ ಗಳಿಸುವ ಅದೇಹಣದಿಂದಲೇ ಈ ಪ್ರಗತಿಪರರ ಹೊಟ್ಟೆಗೆ ಗಂಜಿ ಬೀಳುತ್ತಿದೆ. ಅದೇ ಗಂಜಿಯಿಂದ ಆಗಿರಾಕಿಗಳ ಜೀವನ ನಡೆಯುತ್ತಿದೆ. ಅದೇ ಕಾರಣಕ್ಕೆ ಸಂವಿಧಾನದ ಪರ ಎಂದು ಹೇಳಿಕೊಳ್ಳುವ ಯಾವ ಪ್ರಗತಿಪರನೂ ಸರ್ಕಾರದ ಈ ಸಂವಿಧಾನ ವಿರೋಧೀ ಆಚರಣೆಯನ್ನು ವಿರೋಧಿಸದೇ ಒಪ್ಪಿಕೊಂಡಿರುವುದು.
ಹಾಂ. ನಿಮ್ಮ ಮನಸ್ಸಿನಲ್ಲಿರುವ ಪ್ರಶ್ನೆ ನನಗೆ ಅರ್ಥವಾಯಿತು.ನಾವು ದೇವಾಲಯಗಳ ಹುಂಡಿಗೆ ಹಾಕುವ ಕೆಲವೇ ನೂರು ಕೋಟಿಗಳ ಆದಾಯದಿಂದಲೇ ಈ ಪ್ರಗತಿಪರರ ಹೊಟ್ಟೆ ಹೇಗೆ ತುಂಬುತ್ತದೆ ಎನ್ನುವುದು ನಿಮ್ಮ ಅನುಮಾನವಲ್ಲವೇ? ಅದನ್ನಷ್ಟೇ ಇಟ್ಟುಕೊಂಡು ಎಲ್ಲಾ ಬುದ್ಧಿಜೀವಿಗಳೂ ತಟ್ಟೆ ಕಾಸಿನಿಂದಲೇ ಬದುಕುತ್ತಿದ್ದಾರೆ ಎನ್ನುವುದು ಸರಿಯೇ ಎಂದು ಕೇಳುತ್ತಿದ್ದೀರಲ್ಲವೇ?
ಹಾಗಾದರೆ ನಾವು ದೇವಾಲಯಗಳಿಗೆ ಖರ್ಚು ಮಾಡುವ ಹಣದಲ್ಲಿ ಅವರುಗಳಿಗೆ ಯಾವ ಮಾರ್ಗದಲ್ಲೂ ಒಂದೇ ಒಂದು ಪೈಸೆ ದೊರೆಯುತ್ತಿಲ್ಲ ಎನ್ನುವುದನ್ನು ಸಾಬೀತುಪಡಿಸಿ, ನೋಡೋಣ. ದೇವಾಲಯಗಳ ಆದಾಯ ದೇವಾಲಯಗಳಿಗಲ್ಲದೇ ಇನ್ಯಾವುದಕ್ಕೂ ಖರ್ಚಾಗುತ್ತಿಲ್ಲ ಎನ್ನುವುದನ್ನು ಸಾಬೀತುಪಡಿಸಿ, ನೋಡೋಣ. ಆಸ್ತಿಕರಾದ ನಾವು ಪುಣ್ಯಕ್ಷೇತ್ರಗಳ ದರ್ಶನಕ್ಕೆ ತೆರಳಿದಾಗ ಬಸ್ಸುಕಾರುಗಳಿಗೆ, ಹೋಟೆಲುಗಳಿಗೆ, ಅಂಗಡಿಗಳಿಗೆ ಖರ್ಚು ಮಾಡಿದ ಹಣದಲ್ಲಿ ಸರ್ಕಾರಕ್ಕೆ ಒಂದು ಪೈಸೆಯೂ ತೆರಿಗೆ ಹೋಗುತ್ತಿಲ್ಲ ಎನ್ನುವುದನ್ನು ಸಾಬೀತುಪಡಿಸಿ,ನೋಡೋಣ. ಹಾಗೆ ದೇವರನ್ನು ನಂಬುವ ನಮ್ಮಂತಹಾ ಆಸ್ತಿಕರ ಪುಣ್ಯ ಕ್ಷೇತ್ರಗಳ ಪ್ರವಾಸದಿಂದ ಸಂಗ್ರಹವಾಗುವ ತೆರಿಗೆ ಹಣದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನನಗೆ ಒಂದೇಒಂದು ಪೈಸೆಯೂ ಸಿಗುತ್ತಿಲ್ಲ ಎಂದು ಅವರುಗಳು ವಾದಿಸಿ ಗೆಲ್ಲಲಿ, ನೋಡೋಣ.
ಆಸ್ತಿಕರುಗಳಾದ ನಾವು ಸರ್ಕಾರದ ದೇವಾಲಯಗಳಿಗೆ ನಮ್ಮ ದುಡಿಮೆಯನ್ನು ಭಕ್ತಿಯಿಂದ ಅರ್ಪಿಸುತ್ತಿದ್ದೇವೆ.ಆದರೆ ದೇವರನ್ನು, ದೇವಾಲಯಗಳನ್ನು, ಹೋಮಹವನಗಳನ್ನು ವಿರೋಧಿಸುವ ಬುದ್ದಿಜೀವಿಗಳು, ಅದೇ ದೇವಾಲಯದ ತಟ್ಟೆ ಕಾಸಿನಿಂದ ಜೀವನ ನಡೆಸುತ್ತಿದ್ದಾರೆ!!
ಆದ್ದರಿಂದ ಇನ್ನೊಮ್ಮೆ ನಿಮ್ಮ ಎದುರು ಯಾರಾದರೂಬುದ್ದಿಜೀವಿಗಳು, ವಿಚಾರವಾದಿಗಳು, ಪ್ರಗತಿಪರರು ದೇವಾಲಯಗಳ ಬಗ್ಗೆ, ದೇವರನ್ನು ನಂಬುವ ನಿಮ್ಮ ಬಗ್ಗೆ ಅದೇ ಹಳೆಯ ಡೈಲಾಗುಗಳನ್ನು ಹೇಳಿದರೆ ಗರ್ವದಿಂದ ಹೀಗೆ ಹೇಳಿ.
“ಆರತಿ ತಟ್ಟೆಯ ಚಿಲ್ಲರೆಗೆ ಕೈ ಚಾಚುವ ನಿಮಗೇ ಇಷ್ಟಿರಬೇಕಾದರೆ ಇನ್ನು ನಮಗಿನ್ನೆಷ್ಟಿರಬೇಡ?”.