ಅಂಕಣ

ಅವಳು ನಿರಂತರ

ಹೆಣ್ಣು ಹೋರಾಟದ ಮೂಲ,ಹಸಿವನ್ನು ಇಂಗಿಸುವ ತುದಿ,ಮುಖದ ಮೇಲಿನ ನಗು,ಕಣ್ಣಂಚಿನ ಭಾವದೊರತೆಯ ಮೂಲ,ನಿರಂತರ ಎನ್ನುವ ಪ್ರಕೃತಿಯ ಉಸಿರು…ಪುರುಷನ ಅಹಂಕಾರದ ಆತ್ಮವಿಶ್ವಾಸ ಎಲ್ಲವೂ “ಅವಳೇ”. ಹೆಣ್ಣೇ ನೀನು “ಅವಿನಾಶಿ”,ನೀನು ನಿನ್ನ ಮೇಲಿನ ಮಾನಸಿಕ ಮತ್ತು ದೈಹಿಕ ತುಳಿತವ ಧಿಕ್ಕರಿಸು, ನಂಬಿಕೆಯೆಂಬ ನಿನ್ನೊಳಗಿನ ಶಕ್ತಿಯ ದುರುಪಯೋಗ ಮಾಡಿಕೊಂಡವರ ವಿರುದ್ಧ ಧೈರ್ಯವಾಗಿ ಮಾತನಾಡು. ಪ್ರೀತಿ,ಮಮತೆ,ತ್ಯಾಗದ ಮೂರ್ತರೂಪವಾದ ನಿನಗೆ ನೀನೆ ಸಾಟಿ.ಹೆಣ್ಣೆಂದರೆ ಮಮತೆ, ಹೆಣ್ಣೆಂದರೆ ಪ್ರಕೃತಿ,ಹೆಣ್ಣೆಂದರೆ ಕನಸು, ಹೆಣ್ಣೆಂದರೆ ಆತ್ಮವಿಶ್ವಾಸ, ಹೆಣ್ಣೆಂದರೆ ಅನಂತ ಪ್ರೀತಿಯ ಮೂಲಸ್ಥಾನ.

“ಅವಳು” ಅಮ್ಮ! ತನ್ನ ಕನಸನ್ನು ತನ್ನೊಳಗೇ ಹುದುಗಿಸಿಟ್ಟುಕೊಂಡು ಪ್ರಕೃತಿಯೊಡನೆ ಅವಿನಾಭಾವ ಸಂಬಂಧ ಸೃಷ್ಟಿಸಿಕೊಂಡು ನಿರಂತರವಾಗಿ ಬದುಕಿದವಳು. ತಾನು ಪ್ರೀತಿಯಿಂದ ಬೆಳೆಸಿದ ಆ ಗಿಡ ಹೂಬಿಟ್ಟಾಗ ಅವಳು ನಗುವಳು, ತಾನು ನೆಟ್ಟ ಆ ಗೇರಿನ ಮರಕ್ಕೆ ಹಣ್ಣಾದಾಗ ಅತೀವ ಸಂತಸ ಪಡುವವಳು, ತಾನು ಸಾಕಿದ ನಮ್ಮನೆಯ ನಾಯಿ ಮರಿ ಹಾಕಿದಾಗ ಒಲವಿನ ಊಟ ಬಡಿಸಿದವಳು, ಕೊಟ್ಟಿಗೆಯಲ್ಲಿ ಕೂಗುತ್ತಿರುವ ಆ ಕರುವಿನ ಜೊತೆ ಒಂದು ಕ್ಷಣ ಬಿಡದೆ ಪದೇ ಪದೇ ಮಾತನಾಡುವವಳು, ಸ್ವಲ್ಪ ಸಮಯವನ್ನೂ ಹಾಳು ಮಾಡದೆ ಒಂದೇ ಸಮನೇ ಕಾಲು ಸುತ್ತುತ್ತಿರುವ ಆ ಬೆಕ್ಕಿಗೆ ಆಗ ತಾನೇ ಕರೆದು ತಂದ ಹಾಲನ್ನೀಯುವವಳು, ಅಪ್ಪನ ಕೆಲಸದ ಭರಾಟೆಗೆ ತಾನೂ ಜೊತೆಯಾಗಿ ಅವನ ಒಡಗೂಡಿ ಮನೆಯ ಭರವನ್ನೂ ಹೊತ್ತವಳು, ಅಲ್ಲಿ ಅಂಗಳದ ತುದಿಯಲ್ಲಿ ಒಂದೇ ಸಮನೇ ಕಿತ್ತಾಡುತ್ತಿರುವ ಅಕ್ಕ ತಮ್ಮನ ಸಮಾಧಾನದ ಮೂಲ ಎಂದರೆ ಅದು “ಅಮ್ಮ”, ಒಟ್ಟಿನಲ್ಲಿ ಅವಳೆಂದರೆ “ಅನಂತರೂಪ”.

ಅಮ್ಮನ ಖುಷಿ ಪ್ರಕೃತಿಯಲ್ಲಿ ಅಡಗಿದೆ. ಮಳೆ ಬಿಡದೆ ಹೊಯ್ಯುತ್ತಲಿದ್ದರೆ ಅಮ್ಮನಿಗೆ ಅದೇನೋ ಖುಷಿ ,ಅಂಗಳದಲ್ಲಿರುವ  “ರಾತ್ರಿರಾಣಿ” ತನ್ನ ಸುಮವ ಮನೆತುಂಬ ಆವರಿಸಿದಾಗ ಅಮ್ಮನಿಗಾಗುವ ಖುಷಿ ಇದೆಯಲ್ಲ ಖುಷಿ ಅದು ವರ್ಣನೆಗೆ ನಿಲುಕದ್ದು.ಅಪ್ಪ ಬಿತ್ತಿ ಬಂದ ಆ ಬತ್ತ ಸರಿಯಾಗಿ ಸಸಿಯಾದರೆ ಅಮ್ಮ ನಿಟ್ಟುಸಿರುಡುತ್ತಾಳೆ, ಕಾಲಕಾಲಕ್ಕೆ ಆ ಸಸಿಗೆ ಅದೆಷ್ಟು ನೀರು ಬೇಕೋ ಅಷ್ಟು ನೀರನ್ನು ಒದಗಿಸುವ ಕೆಲಸ ಮತ್ತೆ ಅಮ್ಮನದ್ದೇ, ಧೋ ಎಂದು ಸುರಿಯುವ ಮಳೆಯಲ್ಲಿ ಮಕ್ಕಳಿಬ್ಬರೂ “ಹೊಡತ್ಲಿ”ನ ಮುಂದೆ ಕೂತು ಮೈ ಕಾಸುತ್ತಿದ್ದಾರೆ ಕಂಬಳಿ ಕೊಪ್ಪೆಯ ಸೂಡಿಕೊಂಡು ಅಮ್ಮ ಹೊರಡುತ್ತಿದ್ದುದು ಗದ್ದೆಯ ಕಡೆಗೆ. ಬದುಕಿನ ಪಾಠವ ಬಿಡಿಸಿ ಹೇಳದೆ ನಮ್ಮೊಳಗೆ ನಿರಂತರ ತುಂಬಿದ ಶಕ್ತಿ ಎಂದರೆ ಅದು ಅಮ್ಮ ಮಾತ್ರ. ಹಾಗಾದರೆ ಅಮ್ಮನಿಗೆ ಮತ್ತ್ಯಾರು ಸಾಟಿ?ಅಮ್ಮ  ಒಬ್ಬಳೇ ಹಾಡುವಳು.ಆದರೆ, ಅದೆಷ್ಟೋ ಭಾವನೆಯನ್ನು ಒಮ್ಮೆಲೆ ಸೃಷ್ಟಿಸಿಬಿಡುವಳು. ನನ್ನಮ್ಮ ಅವಳಮ್ಮನಿಗೆ ಅಮ್ಮನಾದಳು. ಗಂಡೆಂಬ ಜಾತಿಯ ಮಕ್ಕಳಿಬ್ಬರೂ ಹಣದ ಹಿಂದೆ ಹೋಗಿ ಹುಟ್ಟಿಸಿದವರನ್ನು ದೂರವಿಟ್ಟಾಗ ಅಮ್ಮ ಆ ಹಿರಿಯ ಜೀವಗಳಿಗೆ ಶಕ್ತಿಯಾಗಿ ನಿಂತಳಲ್ಲಾ!! ಅಮ್ಮ ಆಸೆ, ಆಕಾಂಕ್ಷೆಗಳ ಮೀರಿ ನಿಂತ ಹೆಣ್ಣು ಅನ್ನಿಸಿತು.

“ಅವಳು” ಸಹೋದರಿ!! ಅಮ್ಮನಿಲ್ಲದ ಹೊತ್ತಲ್ಲಿ ಅಕ್ಕರೆಯ ಊಟ ಬಡಿಸಿದವಳು. ನಾ ಕೊಡುವ ಕಾಟವ ಸಹಿಸಿಕೊಂಡು ಸದಾ ನಗುತ್ತಾ ಇದ್ದವಳು. ಸೌಂದರ್ಯಕ್ಕೊಂದು ಅರ್ಥ ಅಂತಿದ್ದರೆ ಅದು “ಅವಳು” ಮಾತ್ರ. ಅಕ್ಕರೆಯ ಜಗಳಕ್ಕೆ ಕಿಚ್ಚು ಹಚ್ಚಿಸಿ ‘ಬಾ ತಮ್ಮಾ’ ಎಂದು ಮುದ್ದಿಸಿದವಳು ಅವಳು. ನಿರಂತರ ಹರಿಯುವ ಆ ತೊರೆಯಂತೆ ಅವಳ ಪ್ರೀತಿ.ಮತ್ತೆ ನೆನಪಿನೂರಿನ ಕಡೆ ಪ್ರಯಾಣ ಮಾಡಿದಾಗ ಸದಾ ಜೀವಂತವಿರುವವಳು ನೀನು. ಅಲ್ಲಿ ನಿನ್ನ ಕನಸಿದೆ, ನಾವಾಡಿದ ಅಂಗಳವಿದೆ, ಓಡಾಡಿದ ಗದ್ದೆಯಿದೆ, ಬಿಕ್ಕಿ ಬಿಕ್ಕಿ ಅತ್ತ ನಮ್ಮನೆಯ ಜಗುಲಿಯಿದೆ.  

ನೀನೆಷ್ಟು ನೋವನ್ನುಂಡೆ ಈ ಸಮಾಜದಲ್ಲಿ? ಯಾರಿಗೂ ಹೇಳಲಿಚ್ಛಿಸದೆ ನೀ ಅಂತರಂಗದಲ್ಲಿ ಬಚ್ಚಿಟ್ಟುಕೊಂಡ ದುಗುಡ, ದುಮ್ಮಾನಗಳೆಷ್ಟು? ನಿನ್ನಂತರಂಗದ ಮಾತಿಗೆ ಕಿವಿಕೊಡುವರಾರು?ನೀ ತೊಟ್ಟ ಉಡುಗೆಯಿಂದ, ನೀನಾಡುವ ಮಾತಿನಿಂದ ನಿನ್ನನ್ನ ಮನಬಂದಂತೆ ಸೃಷ್ಟಿಸಿದ  ಈ ಪುರುಷರನ್ನ ಹೇಗೆ ಸಹಿಸಿಕೊಳ್ಳುವೆ? ಹೀಗಿದ್ದರೂ ಮುಖದ ಮೇಲಿನ ನಿನ್ನ ನಗು ಮಾಸಲಿಲ್ಲವಲ್ಲ.ಮನದೊಳಗಿನ ದುಗುಡ, ನೋವು ಆಚೆ ತೋರಿಸದೇ ಅವಿನಾಶಿಯಾಗಿ ಬದುಕಿದ್ದು  ನೀನಲ್ಲವೇ?ನಿನ್ನ ರೂಪ ನೋಡಿ ಅಳೆಯುವ ಪುರುಷರ ವಿರೋಧಿಸಿದರೆ ನಿನಗೆ ಅವಮಾನವೇ ಉಡುಗೊರೆ. ನೀ ಕಂಡ ಅದೆಷ್ಟೋ ಕನಸುಗಳು ನಿನ್ನ ಕಲ್ಪನೆಯ ಕಡಲ ದಾಟಿ ಆಚೆ ಬರಲೇ ಇಲ್ಲ ಅಲ್ಲವೇ? ನೀ ಕಂಡ ನಿನ್ನ ನಾಳೆ ಪುರುಷನ ಅಹಂಕಾರದ ಪ್ರಸ್ತುತದಲ್ಲಿ ಹುದುಗಿ ಹೋಯಿತಲ್ಲ ಅದೇಗೆ ನೀನು ಸಹಿಸಿಕೊಂಡೆ? ಅಲ್ಲಿ ನೀಲಿ ಆಕಾಶದಲಿ ಒಬ್ಬಂಟಿಯಾಗಿ ಹಾರಾಡುತ್ತಿದ್ದ ಹಕ್ಕಿಯಂತೆ ಹಾರಾಡುವ ನಿನ್ನಾಸೆಗೆ ನೂರೆಂಟು ಅಡೆತಡೆಯ ನಿರ್ಮಿಸಿ ವಿಕಾರವಾದ ನಗುವಿನೊಂದಿಗೆ ಜೀವಿಸುತ್ತಿರುವ ಈ ಸಮಾಜವ ನೋಡಿಯೂ ಕೂಡ ನಿನ್ನ ನಗುಮುಖ ಮಾಸಲೇ ಇಲ್ಲ. ಸದಾ ನಗುವೊಂದೇ ನಿನ್ನುತ್ತರವಾಯಿತಲ್ಲ ಅದೆಷ್ಟು ತಾಳ್ಮೆ ನಿನಗೆ?

“ಅವಳು” ಸಂಗಾತಿ!! ನನ್ನ ಕನಸಿನ ನಾಳೆಯ ಪಾಲುದಾರಿಕೆಯಲ್ಲಿ ಅವಳಿಗೆ ಒಂದು ಪ್ರಮುಖ ಜಾಗವಿರುತ್ತದೆ. ಬದುಕೆಂಬ ಬಂಡಿಯ ಜೊತೆ ಎಳೆಯುವವಳು ಅವಳು. ಹೆತ್ತವರನ್ನು ಒಪ್ಪಗೆ ನೋಡಿಕೊಳ್ಳುವವಳು ಅವಳು. ಸೋತು ಕೂತ ನನಗೆ ಅದೆಲ್ಲಿಂದಲೋ ಆಸರೆಯಾಗಿ ಬರುವವಳು ಅವಳು. ಕೇವಲ ನೋಟದಲ್ಲೇ ನನ್ನ ಮನಸ್ಸಿನ ತುಮುಲವ ಅಳೆಯುವವಳು.

“ಕಾರಣವೇ ಇಲ್ಲದೇ ನಿನ್ನ ನೋಡುತ್ತ ಮನತುಂಬಿ ನಗಬಲ್ಲೆ,ಜಗತ್ತೇ ತಿರಸ್ಕರಿಸಿದರೂ ನಿನ್ನೊಡಲ ಅನುರಾಗವ ಉಸಿರಾಗಿಸಿಕೊಂಡು ಬದುಕಬಲ್ಲೆ,ನಿನ್ನ ಪ್ರೀತಿಯ ಉತ್ತುಂಗದಲಿ ನಿನ್ನೆ ಇಂದು ನಾಳೆಗಳ ಯೋಚನೆಗಳಿಲ್ಲದೇ ಧ್ಯಾನಿಯಾಗಬಲ್ಲೆ,ನಿನ್ನ ಎದೆಯ ಬಡಿತದ ವೇಗದಲ್ಲಾಗುವ ಬದಲಾವಣೆಯನ್ನು ನಾನು ಅರಿಯಬಲ್ಲೆ,ಎಲ್ಲಕ್ಕಿಂತ ಮುಖ್ಯವಾಗಿ ನಿನ್ನನ್ನು ನಾ ನನ್ನ ಪ್ರೀತಿಸುವುದಕ್ಕಿಂತಲೂ ಜಾಸ್ತಿ ಪ್ರೀತಿಸಬಲ್ಲೆ. ನಾನು ನಿನಗಿಟ್ಟ ಹೆಸರದು ನಿನ್ನನುರಾಗದ ಪ್ರತಿಫಲನ.ನಿನಗಾಗಿ ನಾ ಬರೆದ ಕವನ ನನ್ನೊಲವಿನ ಪ್ರೇಮದುತ್ತುಂಗದಲಿ ಬರೆದಿದ್ದು.ನಗುತಿರು ಗೆಳತಿ ನಿರಂತರವಾಗಿ. ಒಬ್ಬನೇ ನಗಬಲ್ಲೆ ನಿನ್ನನ್ನು ನೆನೆದು,ಮತ್ತೆ ಮತ್ತೆ ಅಳಬಲ್ಲೆ ನೀನು ನನ್ನ ಪ್ರೀತಿಸಿದ ಆ ಕ್ಷಣಗಳ ಸೆರೆಯಲ್ಲಿ ಬಂಧಿಯಾಗಿ. ಒಂದಿಷ್ಟು ಕನಸುಗಳು ನನ್ನನ್ನು ಆವರಿಸಿದಾಗ ಮನಸ್ಸು ಅದ್ಯಾವುದೋ ಭಾವಲೋಕಕ್ಕೆ ನನ್ನನ್ನು ಎಳೆದುಕೊಂಡು ಸಾಗುತ್ತದೆ. ಅದೊಂದು ಕನಸು ಅದು ನನಗೆ ಮತ್ತು ಕೇವಲ ನಿನಗೆ ಮಾತ್ರ ಮೀಸಲು.ಅದೊಂದು ತೀರ ಅಲ್ಲಿ ನಾವಿಬ್ಬರೇ ಇರಬೇಕು.ಚಂದಿರ,ನಕ್ಷತ್ರ ಜೊತೆಗೆ ನಿನ್ನ ರೂಪಕ್ಕೆ ಮೆರಗು ನೀಡಲು ಚಂದದ ಬೆಳದಿಂಗಳು.ಇಬ್ಬರೇ ಕೂತು ಆಕಾಶ ನೋಡುತ್ತಾ ನೆನಪುಗಳ ಲೋಕಕ್ಕೆ ಹೊರಳುತ್ತಿರಬೇಕು.ಎಣಿಸಿದಷ್ಟೂ ಮುಗಿಯದ ನಕ್ಷತ್ರಗಳು.ಅದೆಲ್ಲಿಂದಲೋ ನೀನು ಬಂದೆ,ಚಂದದ ಕನಸುಗಳನ್ನು ಮತ್ತು ಕೇವಲ ನನ್ನದೆನ್ನುವಂತಿದ್ದ ಭಾವನೆಗಳನ್ನೂ ಹೊತ್ತು. ಮಾತುಗಳನ್ನು ಮೀರಿದ್ದು,ಮೌನಕ್ಕೆ ತೀರ ಹತ್ತಿರವೆನಿಸಿದರೂ ಕಣ್ಣುಗಳು ಬಿಡದೇ ಮಾತಾಡುತ್ತಿದೆ ಎಂಬಂತಿದ್ದ ಕಾಲವನ್ನು ಹೊತ್ತು.ನೀನು ಕೇವಲ ನಾನಿರುವ ಆ ಕ್ಷಣಕ್ಕೆ ಬಂದರೆ ಸಾಕು.ಹೌದು ಅದು ಇದೇ ಲೋಕ ಆದರೆ ಎಲ್ಲವನ್ನೂ ಮೀರಿ ನಾನು ಮತ್ತು ನೀನಿರುವ ಚಂದದ ಲೋಕ”.

ಇದು “ಅವಳು” ಸೃಷ್ಟಿಸಿದ ಆ ಭಾವ ಲೋಕ. ನನ್ನ ನಗುವಿನ ಮೂಲ, ನನ್ನ ನಾಳೆಯ ಕನಸು, ನನ್ನ ಅನುರಾಗದ ಅರಸಿ ಎಲ್ಲವೂ ಅವಳೇ.

ಅವಳಿಗಾಗಿ ನಾ ಬರೆವ ಸಾಲು….”ಜೊತೆಗಿರು ನಾದದೊಳಗಿನ ಭಾವವಾಗೋಣ,ಕನಸನ್ನು ಮೀರಿ ಚಂದದ ಪ್ರಸ್ತುತವಾಗೋಣ,ನೀನೇ ಚಾಚಿ ಹಿಡಿದ ಬೆರಳನ್ನು ಸಡಿಲಗೊಳಿಸಬೇಡ..ಬರೆದ ಸಾಲುಗಳೆಲ್ಲ ಬಿಡದೇ ಕಾಡುವ ಸಮಯದಲಿ ನಿರಂತರವಾಗಿ ಜೊತೆಗಿರು.ಕಾಲದ ಜೊತೆಗೆ ನಮ್ಮಿಬ್ಬರ ಪಯಣ ನಿರಂತರ ಮುಂದುವರೆಯಲಿ”.

ಮಮತೆಯ ಮಡಿಲ ಅಮ್ಮನಾಗಿ, ನಿಷ್ಕಲ್ಮಷವಾದ ಅಕ್ಕರೆಯ ಅಕ್ಕನಾಗಿ, ಅಕ್ಷರಗಳ ಮೂಲವಾದ ಗುರುವಾಗಿ, ಅಂತರಂಗದ ಮಾತುಕತೆಗೆ ಜೊತೆಯಾದ ಗೆಳತಿಯಾಗಿ ನಿರಂತರ ನಿನ್ನ ಪ್ರಸ್ತುತ…ಬದುಕಿನ ಅದೆಷ್ಟೋ ಮಜಲುಗಳನ್ನು ನೀನಿಲ್ಲದೆ ಊಹಿಸಲೂ ಸಾಧ್ಯವಿಲ್ಲ. ಅನಂತ ಶಕ್ತಿಯ ಮೂಲವೆಂದರೆ ಅದು “ನೀನು” ಮಾತ್ರ. ಸದಾ ನೋವುಂಡು ನಗುವನ್ನು ಬಿತ್ತರಿಸುವ ನಿನ್ನೆದುರು ದರ್ಪದಿಂದ ಮೆರೆದಾಡುವ ಪುರುಷ ನಗಣ್ಯನೇ ಸರಿ. ಸದಾ ನಗುತಿರು, ಸದಾ ಸಾಧಿಸುತ್ತಿರು. ನಿನ್ನೆ ಇಂದು ನಾಳೆಯಲ್ಲಿ ನೀನಿಲ್ಲದಿದ್ದರೆ ಅಹಂಕಾರಾದಿ ಮೆರೆದಾಡೋ ಪುರುಷನೆಲ್ಲಿರುತ್ತಾನೆ? ಪ್ರಖರ ಜ್ಯೋತಿಯಾಗಿ ಸದಾ ಬೆಳಗುತ್ತಿರು.

ನಿನಗೆ ಮಹಿಳಾ ದಿನದ ಶುಭಾಶಯಗಳು.

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!