Featured ಅಂಕಣ

ಅಂಗನವಾಡಿಯಲ್ಲಿ ಇದ್ದಾಗಿಂದ ಕೇಳ್ತಿದ್ದೇನೆ ಈ ಸಮಸ್ಯೆ, ಇನ್ನೂ ಬಗೆಹರಿದಿಲ್ವಾ?

ಹಾಗೊಂದು ಶೀರ್ಷಿಕೆಯನ್ನು ಬರೆದೆನಾದರೂ ನಾನು ಅಂಗನವಾಡಿ, ನರ್ಸರಿ, ಪ್ರೀಸ್ಕೂಲು ಇತ್ಯಾದಿಗಳಿಗೆ ಹೋದವನಲ್ಲ. ನೇರ ಒಂದನೇ ತರಗತಿಗೆ, ಅದೂ ಒಂದು ತಿಂಗಳು ತಡವಾಗಿ ಸೇರಿದವನು ನಾನು. ನಾನು ಶಾಲೆ ಸೇರುವ ಹೊತ್ತಿಗೆ ಒಂದನೇ ಕ್ಲಾಸಿನ ಉಳಿದ ಹುಡುಗರೆಲ್ಲ ಅಆಇಈಗಳ ನದಿ ದಾಟಿ ಕಕ್ಕಗಗ್ಗಗಳ ಬೆಟ್ಟವನ್ನೇರಿ ಪಪ್ಪಬಬ್ಬಮ್ಮಗಳ ಬಯಲವರೆಗೆ ಬಂದುಬಿಟ್ಟಿದ್ದರು. ಕಾಲೇಜಿನಲ್ಲಾದರೆ, ಏನಯ್ಯ ಲೇಟ್ ಲತೀಫ, ಒಂದು ತಿಂಗಳ ಪಾಠ ನಿನಗೋಸ್ಕರ ಮತ್ತೆ ಮಾಡೋದಕ್ಕೆ ನನಗೆ ಸಂಬಳ ಹೆಚ್ಚು ಕೊಡುತ್ತಾರೇನಯ್ಯ? ಉಳಿದವರಿಗೆ ಮಾಡಿದ್ದೇನೆ, ಅದನ್ನೇ ನೀನೂ ಓದಿಕೋ ಎಂದು ಗದರಿಸಿ ಕೂರಿಸುತ್ತಿದ್ದರೇನೋ. ಆದರೆ ಒಂದನೇ ತರಗತಿಯಲ್ಲಿ ನನ್ನ ಜಯಲಕ್ಷ್ಮಿ ಟೀಚರ್ ಮಾತ್ರ, ನಾನೊಬ್ಬ ಬೇರೆ ಹಳಿಯಲ್ಲಿ ಓಡುತ್ತಿರುವ ರೈಲು ಎಂದು ಯಾವ ಬೇಸರವನ್ನೂ ಮಾಡಿಕೊಳ್ಳದೆ, ನನಗಾಗಿ ಮತ್ತೆ ಕನ್ನಡದ ಅಕ್ಷರಮಾಲೆಯನ್ನು, ಒಂದಕ್ಷರದ ಜುಗ್ಗತನವನ್ನೂ ತೋರಿಸದೆ, ಪ್ರೀತಿಯಿಂದ ಹೇಳಿಕೊಟ್ಟಿದ್ದರು. ನಾವು ಎಷ್ಟೆಲ್ಲ ಉದ್ದುದ್ದಕ್ಕೆ ಕಲಿಯುತ್ತ ಹೋದರೂ, ಮೊದಲ ತರಗತಿಯಲ್ಲಿ ಕೈ ಹಿಡಿದು ತಿದ್ದಿ ಬರೆಸಿದ ಶಿಕ್ಷಕಿಯ ಹೆಸರು ಮಾತ್ರ ಮರೆಯುವುದಿಲ್ಲ ಅನ್ನುತ್ತಾರೆ. ನನ್ನ ಮಟ್ಟಿಗೆ ಆ ಮಾತು ಸತ್ಯಸ್ಯ ಸತ್ಯ.

ಬಹುಶಃ ನಾನೀಗ ನನ್ನ ಮೊದಲ ತರಗತಿಯ ಶಿಕ್ಷಕಿಯನ್ನು ನೆನೆಸಿಕೊಂಡ ಹಾಗೆಯೇ ಅಂಗನವಾಡಿಗಳಿಗೆ ಹೋದ ಮಕ್ಕಳೆಲ್ಲ ಇಂದು ದೊಡ್ಡವರಾದರೂ ತಮ್ಮ ಆ ಟೀಚರನ್ನು ಮಾತ್ರ ಮರೆತಿರಲಿಕ್ಕಿಲ್ಲ. ಯಾಕೆಂದರೆ ಮೂರ್ನಾಲ್ಕು ವರ್ಷದ ಎಳೆ ಕಂದಮ್ಮಗಳಿಗೆ ಟೀಚರಮ್ಮ ಆಗುವ ಆಕೆ, ಟೀಚರ್ ಎನ್ನುವುದಕ್ಕಿಂತ ಅಮ್ಮನ ಪಾತ್ರವನ್ನೇ ವಹಿಸಬೇಕಾಗುತ್ತದೆ ಹೆಚ್ಚಿನ ಸಲ. ಅಂಗನವಾಡಿಯ ಟೀಚರಮ್ಮನ ಕಷ್ಟಗಳನ್ನು ಕಣ್ಣಾರೆ ನೋಡಬೇಕಾದರೆ ಶೈಕ್ಷಣಿಕ ವರ್ಷಾರಂಭದ ಮೊದಲ ದಿನ ಆಕೆಯ ಬಳಿ ಬಂದುಬೀಳುವ ಚಳ್ಳೆಪಿಳ್ಳೆಗಳ ವೃಂದಗಾಯನದ ಕಾರ್ಯಕ್ರಮವನ್ನೊಮ್ಮೆ ನೋಡಬೇಕು. ಹೆಚ್ಚಿನ ಮಕ್ಕಳಿಗೆ ಅಂದು ತಂದೆತಾಯಿಯರಿಂದ ಬೇರ್ಪಟ್ಟ ಭಯ. ಅಸಹಾಯಕತೆ. ಹಸಿವು. ನಿದ್ದೆ. ನೀರಡಿಕೆ. ಯಾವ ಹೊತ್ತಲ್ಲಿ ಯಾವ ಮೂಲೆಯಿಂದ ಯಾವ ರಾಗದಲ್ಲಿ ಮಕ್ಕಳು ಕಿರುಚುತ್ತವೋ ಹೇಳಲಾಗದು. ಒಂದೊಂದಾಗಿ ಕಂದಮ್ಮಗಳನ್ನು ಹಾಡಿಸಿ ಕುಣಿಸಿ ನಕ್ಕು ನಲಿಸಿ ದಿನ ಮುಗಿಸುವಷ್ಟರಲ್ಲಿ ಆಕೆಗೆ ತಾಯ್ತನದ ಒಂದು ದಿನ ಕಳೆದಷ್ಟೇ ಭಾರ, ಆಯಾಸ. ಆ ಮಕ್ಕಳನ್ನು ಮೊತ್ತಮೊದಲಾಗಿ ಆಕೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಮುಂದಿನ ಹದಿನೈದಿಪ್ಪತ್ತು ವರ್ಷಗಳ ಶಾಲಾಜೀವನಕ್ಕೆ ಆ ಮಕ್ಕಳ ಮನಸ್ಸನ್ನು ಒಗ್ಗಿಸಬೇಕು. ಟೀಚಾ, ಅವಳು ಹೇರ್ ಬ್ಯಾಂಡ್ ಮುರಿದಳು; ಟೀಚಾ, ಇವನು ನನ್ನ ಚಪ್ಪಲಿ ಎಳೆದ ಎಂಬ ಹತ್ತಾರು ದೂರುಗಳನ್ನು ಆಕೆ ರಾಜ್ಯ ಸರಕಾರದ ಒತ್ತಡದಡಿ ಕೆಲಸ ಮಾಡುವ ಪೊಲೀಸ್ ಅಧಿಕಾರಿಯಂತೆ ಏನೇನೋ ಸಬೂಬು ಹೇಳಿ ಮ್ಯಾನೇಜ್ ಮಾಡುತ್ತ, ಯಾರನ್ನೂ ಶಿಕ್ಷಿಸದೆ ಬುದ್ಧಿವಾದ ಹೇಳುತ್ತ ನಿಭಾಯಿಸಬೇಕು. ಬುಟ್ಟಿಯೊಳಗೆ ಪಾಂಡಾ ಮರಿಗಳನ್ನು ಕೂರಿಸುವುದೆಷ್ಟು ಕಷ್ಟವೋ ಅಷ್ಟೇ ಶ್ರಮ ಬೇಡುವ ಕೆಲಸ ಆ ಪುಟ್ಟ ಮಕ್ಕಳನ್ನು ದಿನವಿಡೀ ನಾಲ್ಕು ಗೋಡೆಯ ಮಧ್ಯೆ ಕೂರಿಸಿ ಅವರ ದೇಖರೇಖಿ ನೋಡಿಕೊಳ್ಳುವುದು.

ಮಕ್ಕಳ ಆರೈಕೆ ಮಾಡುವುದರ ಜೊತೆಗೆ ಅಂಗನವಾಡಿಯ ಟೀಚರಮ್ಮ ಆ ಮಕ್ಕಳಿಗೆ ಪೋಷಕಾಂಶವುಳ್ಳ ಆಹಾರ ಕೊಡಬೇಕು. ಶಿಶುಪದ್ಯಗಳನ್ನೋ ಸರಳ ಶಬ್ದಗಳನ್ನೋ ಕಲಿಸಬೇಕು. ಮುಖ್ಯವಾಗಿ ಆ ಮಕ್ಕಳಿಗೆ ಸಹಬಾಳ್ವೆಯ ಪಾಠವನ್ನು ಆಕೆ ಥಿಯರಿ ಇಲ್ಲದೆ ಪ್ರಾಕ್ಟಿಕಲ್ಲಾಗೇ ಹೇಳಿಕೊಡಬೇಕು. ಮಕ್ಕಳ ಸುಖಕಷ್ಟ ವಿಚಾರಿಸಿ ಮುಗಿಯಿತೆಂದರೆ ಮುಗಿಯಿತೆ? ಅಂಗನವಾಡಿ ಕೇಂದ್ರಕ್ಕೆ ಭೇಟಿ ಕೊಡುವ ಗರ್ಭಿಣಿಯರಿಗೆ ಆರೋಗ್ಯ ಸಲಹೆಗಳನ್ನು ಕೊಡಬೇಕು. ಗರ್ಭಿಣಿಯರು ಕೇಂದ್ರದವರೆಗೆ ಬಂದಿಲ್ಲವೆಂದರೆ ತಾವಾಗಿ ಮನೆವರೆಗೆ ಹೋಗಿ ಯೋಗಕ್ಷೇಮ ವಿಚಾರಿಸಬೇಕು. ನವಜಾತ ಶಿಶುವಿಗೆ ಏನೇನು ಚುಚ್ಚುಮದ್ದು ಕೊಡಬೇಕು, ಯಾವ ಬಗೆಯ ಆಹಾರ ತಿನ್ನಿಸಬೇಕು, ಎದೆಹಾಲು ಕೊಡುವುದು ಹೇಗೆ ಎಂಬ ಸಣ್ಣ ಸಣ್ಣ ಆದರೆ ಮುಖ್ಯ ವಿಷಯಗಳನ್ನು ಮುಜುಗರವಿಲ್ಲದೆ ತಿಳಿಸಿಕೊಡಬೇಕಾದವರು ಈ ಟೀಚರುಗಳೇ. ನಾನು ಚಿಕ್ಕವನಿದ್ದಾಗ, ಪರವಾಗಿಲ್ವೇ! ನನ್ನ ಟೀಚರ್ ಆ ಕಡೆ ಗಣಿತಾನೂ ಹೇಳ್ಕೊಡತಾರೆ, ಈ ಕಡೆ ಅಆಇಈನೂ ಹೇಳ್ಕೊಡತಾರೆ! ನನ್ನಕ್ಕನಿಗೆ ಗಣಿತಕ್ಕೊಬ್ಬರು ಟೀಚರಂತೆ, ಸಾಯನ್ಸಿಗೊಬ್ಬರು ಟೀಚರಂತೆ! ಆದರೆ ಎಲ್ಲವನ್ನೂ ಹೇಳಿಕೊಡುವ ನನ್ನ ಒಂದನೇ ಕ್ಲಾಸ್ ಟೀಚರೇ ಗ್ರೇಟಲ್ವಾ ಎಂದು ಮುಗ್ಧನಾಗಿ ಭಾವಿಸುವುದಿತ್ತು. ಅಂಗನವಾಡಿಯ ಟೀಚರಮ್ಮನ ವಿಷಯಕ್ಕೆ ಬಂದರೆ ಆಕೆ ಒಂದನೇ ಕ್ಲಾಸ್ ಟೀಚರಿಗಿಂತ ಗ್ರೇಟು, ಬುದ್ಧಿವಂತೆ! ಯಾಕೆಂದರೆ, ಮಕ್ಕಳ ಶೈಕ್ಷಣಿಕ ಮಾತ್ರವಲ್ಲ, ವೈದ್ಯಕೀಯ ವಿವರಗಳನ್ನೂ ಸ್ವಂತ ಅಮ್ಮನಂತೆಯೇ ನೋಡಿಕೊಳ್ಳುತ್ತ, ಯಾವ್ಯಾವ ಸಮಯದಲ್ಲಿ ಏನೇನು ಲಸಿಕೆ, ಚುಚ್ಚುಮದ್ದುಗಳನ್ನು ಮಕ್ಕಳಿಗೆ ಕೊಡಿಸಬೇಕೆಂದು ಮುಂಚಿತವಾಗಿಯೇ ತಿಳಿಸುತ್ತ ಒಟ್ಟು ಊರಿನ ಆರೋಗ್ಯ ಕಾಪಾಡುವ ಜವಾಬ್ದಾರಿ ಹೊರುತ್ತಿದ್ದವಳು; ಮತ್ತೀಗಲೂ ಹೊತ್ತಿರುವವಳು ಆಕೆ.

ಅಂಗನವಾಡಿಯ ಟೀಚರಮ್ಮನಿಗೆ ರಜೆಯ ಮಜಾ ಅನುಭವಿಸುವ ಭಾಗ್ಯವಿಲ್ಲ. ಮಕ್ಕಳಿಗೆ ರಜೆ ಕೊಟ್ಟ ದಿನಗಳಲ್ಲಿ ಆಕೆ ಸರಕಾರದ ಒಂದಿಲ್ಲೊಂದು ಯೋಜನೆಯ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಆರೋಗ್ಯ ತಪಾಸಣೆ ಶಿಬಿರ ಆಯೋಜನೆಯಾದರೆ ಅಲ್ಲಿರಬೇಕು. ಸರಕಾರ ಮನಸಾದಾಗೆಲ್ಲ ನಡೆಸುವ ಜನಗಣತಿ, ಜಾನುವಾರುಗಣತಿ, ಜಾತಿಗಣತಿ, ಕೋತಿಗಣತಿ ಎಂಬ ಸರ್ವ ಕ್ಷೇತ್ರಕಾರ್ಯಗಳಿಗೂ ಆಕೆ ಖಾಯಂ ನೌಕರೆ. ಚುನಾವಣೆ ಬಂದಾಗ ಆಕೆಗೂ ಕೆಲಸ. ಹತ್ತು ವರ್ಷಕ್ಕೊಮ್ಮೆ ನಡೆಯುವ ಮಹಾಜನಗಣತಿಯ ವರ್ಷವಂತೂ ಬಿಡುವಿಲ್ಲದ ಚಟುವಟಿಕೆ. ಸಾರ್ವಜನಿಕವಾಗಿ ಲಸಿಕೆ ಅಥವಾ ಚುಚ್ಚುಮದ್ದು ಕೊಡುವ ಕಾರ್ಯಕ್ರಮ ನಡೆವ ದಿನ ಊರವರೆಲ್ಲ ಅದರ ಪ್ರಯೋಜನ ಪಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಅವಳ ಮೇಲೆ. 1975ರಲ್ಲಿ ಭಾರತ ಸರಕಾರ ಅಂಗನವಾಡಿ ಎಂಬ ಪರಿಕಲ್ಪನೆಯನ್ನು ಹುಟ್ಟುಹಾಕಿದಾಗ ಈ ಎಲ್ಲ ಕೆಲಸಕಾರ್ಯಗಳ ಬಗ್ಗೆ ಯೋಚಿಸಿತ್ತೋ ಇಲ್ಲವೋ; ಆದರೆ ಆ ನಂತರ ಒಂದೊಂದಾಗಿ ಕೆಲಸಗಳನ್ನು ಆಕೆಯ ತಲೆಗೆ ಕಟ್ಟುತ್ತಾ ಬಂದಿದೆ. ಕೇಂದ್ರ ಸರಕಾರ, ಅಂಗನವಾಡಿಗಳನ್ನು ನೋಡಿಕೊಳ್ಳುವ ಜವಾಬ್ದಾರಿಯಲ್ಲಿ ರಾಜ್ಯ ಸರಕಾರಗಳನ್ನೂ ಪಾಲುದಾರರಾಗಿಸಿದ ಮೇಲೆ, ಅಂಗನವಾಡಿಗಳೂ ಅಲ್ಲಿನ ಟೀಚರಮ್ಮಗಳೂ ಎರಡು ದೋಣಿಯಲ್ಲಿ ಕಾಲಿಟ್ಟು ನೀರುಪಾಲಾಗುವವರಂತೆ ಅತಂತ್ರರಾಗಿದ್ದಾರೆ. ನಮಗೊಂದಿಷ್ಟು ಹೆಚ್ಚಿನ ಸೌಲಭ್ಯ ಕೊಡಿ ಎಂದು ಅವರು ರಾಜ್ಯವನ್ನು ಕೇಳಿಕೊಂಡಾಗೆಲ್ಲ ಆ ಸರಕಾರದ ತೋರ್ಬೆರಳು ಕೇಂದ್ರವನ್ನು ತೋರಿಸುತ್ತಿರುತ್ತದೆ. ಕೇಂದ್ರವನ್ನು ಕರೆಸಿ ಕೇಳಿ ಬೇಡಿಕೆ ಸಲ್ಲಿಸುವುದು ಅಂಗನವಾಡಿಗಳ ಬಡ ಟೀಚರಮ್ಮಗಳಿಗೆ ಏಳು ಸುತ್ತಿನ ಕೋಟೆ ಭೇದಿಸಿ ಗೆದ್ದುಬರುವಷ್ಟೇ ದುಸ್ತರವಾದ ಕೆಲಸ.

ಫ್ರಾನ್ಸ್‘ನಲ್ಲಿ ಚಿಕ್ಕಮಕ್ಕಳಿಗೆ ಕಲಿಸುವ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪ್ರೊಫೆಸರ್ ಎನ್ನುತ್ತಾರೆ. ವ್ಯಕ್ತಿಯ ಇಡೀ ಶೈಕ್ಷಣಿಕ ಯಾನದಲ್ಲಿ ಅತ್ಯಂತ ಪ್ರಮುಖ ಕೆಲಸ ಮಾಡುವವರು ಪ್ರಾಥಮಿಕ ಹಂತದ ಶಿಕ್ಷಕರು. ಅವರು ಸರಿಯಾದ ಅಡಿಪಾಯ ಹಾಕಿದರೆ ಮುಂದೆ ಅದರ ಮೇಲಿಂದ ಅದೆಷ್ಟು ಎತ್ತರದ ಕಟ್ಟಡವನ್ನೂ ಕಟ್ಟುತ್ತಾ ಹೋಗಬಹುದು. ಪಾಯವೇ ಭದ್ರವಿಲ್ಲವಾದರೆ ಮುಂದಿನದೆಲ್ಲ ನಿಷ್ಫಲ ಎಂಬುದು ಅಲ್ಲಿನವರ ಅಂಬೋಣ. ಅದೂ ಅಲ್ಲದೆ ಮಗುವಿನ ಮಿದುಳಿನ ಬೆಳವಣಿಗೆಯ ವೇಗ ಮೂರರಿಂದ ಏಳು ವರ್ಷಗಳವರೆಗೆ ಚುರುಕಾಗಿರುತ್ತದೆ. ಆ ಸಮಯದಲ್ಲಿ ಅದರ ವಿದ್ಯಾಭ್ಯಾಸದ ಶ್ರೀಕಾರವನ್ನು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಮಾಡಬೇಕು. ತಪ್ಪಿಲ್ಲದೆ ಕನ್ನಡ ಬರೆಯುವ, ಮಾತಾಡುವ ಶಿಕ್ಷಣ ಮುಖ್ಯವಾಗಿ ಸಿಗಬೇಕಾದ್ದು ಅಲ್ಲೇ. ಅಂಥ ಮಹತ್ವದ ಕೆಲಸಕ್ಕೆ ಬುನಾದಿ ಹಾಕಿಕೊಡುವ ಅಂಗನವಾಡಿಗಳ ಶಿಕ್ಷಕಿಯರಿಗೆ ದೊಡ್ಡ ಹೆಸರಿಂದ ಕರೆದು ಸಂಪ್ರೀತಗೊಳಿಸುವುದು ಬಿಡಿ; ಶಿಕ್ಷಕಿ ಎಂಬ ಉಪಾಧಿಯನ್ನೂ ಕೊಡಲಾಗಿಲ್ಲ! ಅವರೆಲ್ಲ ಕರೆಸಿಕೊಳ್ಳುವುದು ಕಾರ್ಯಕರ್ತೆಯರೆಂದು. 40 ವರ್ಷಗಳ ಕೆಳಗೆ ಕೇಂದ್ರ ಸರಕಾರ, ಅಂಗನವಾಡಿಗಳನ್ನು ರೂಪಿಸಿದಾಗ ಅಲ್ಲಿ ಕೆಲಸ ಮಾಡುವ ಶಿಕ್ಷಕಿಯರನ್ನು “ವರ್ಕರ್” ಎಂದು ಕರೆಯಿತು. ಅಲ್ಲಿಂದೀಚೆಗೆ ಆ ಪದವೇ ಗಟ್ಟಿಯಾಗಿ ಉಳಿದುಬಿಟ್ಟಿದೆ. ಕೇಂದ್ರ ಹೇಗೇ ನಮೂದಿಸಲಿ, ರಾಜ್ಯ ಸರಕಾರವಾದರೂ ಆ ಮಹಿಳೆಯರಿಗೆ ಒಂದು ಗೌರವಯುತ ಸ್ಥಾನ ಕಲ್ಪಿಸಿ ಶಿಕ್ಷಕಿಯರೆಂದು ಕರೆಯಬಹುದಿತ್ತಲ್ಲ? ಕಾರ್ಮಿಕ, ಕೆಲಸಗಾರ, ಕಾರ್ಯಕರ್ತ ಎಂಬ ಪದಗಳೆಲ್ಲ ಕೀಳೇನೂ ಅಲ್ಲ. ಆದರೆ, ರಾಜಕೀಯ ಪಕ್ಷವೊಂದಕ್ಕೆ ಕೆಲಸ ಮಾಡುವ ಯುವಕನೂ ಕಾರ್ಯಕರ್ತನೇ. ರಸ್ತೆಗಳನ್ನು ಪ್ರತಿದಿನ ಗುಡಿಸಿ ಚೊಕ್ಕಟವಾಗಿಡುವವನೂ ಕಾರ್ಮಿಕನೇ. ಅನ್ನಭಾಗ್ಯದ ಅಕ್ಕಿಮೂಟೆಗಳನ್ನು ಟ್ರಕ್ಕುಗಳಿಂದ ಇಳಿಸಿ ಬೆನ್ನಲ್ಲಿ ಹೊತ್ತು ಗೋದಾಮುಗಳಲ್ಲಿ ತುಂಬಿಸಿಡುವವನೂ ಕೆಲಸಗಾರನೇ. ಇಂತಹ ವ್ಯಾಪಕಾರ್ಥ ಕೊಡುವ ಪದವನ್ನು ಅಂಗನವಾಡಿ ಶಿಕ್ಷಕಿಯರಿಗೆ ಬಳಸುವ ಬದಲು, ವಿದ್ಯಾಭ್ಯಾಸ ಮಾಡಿಸುವ ಅವರ ನಿರ್ದಿಷ್ಟ ಕೆಲಸವನ್ನು ಸೂಚಿಸಿ ಗೌರವಿಸುವ ಹೆಸರೊಂದನ್ನು ಅವರ ಕೆಲಸಕ್ಕೆ ಇಡುವುದು ಸೂಕ್ತ ಅಲ್ಲವೇ?

ಅದ್ಯಾಕೋ ಗೊತ್ತಿಲ್ಲ, ಅಂಗನವಾಡಿಗಳ ಸ್ಥಾಪನೆಯಲ್ಲೇ ಏನೋ ತೊಡಕು ಇರುವಂತಿದೆ. ಪ್ರತಿವರ್ಷ ಒಂದಿಲ್ಲೊಂದು ಬೇಡಿಕೆ ಇಟ್ಟು ಅಂಗನವಾಡಿಯ ಶಿಕ್ಷಕಿಯರು ಬೀದಿಗಿಳಿಯುತ್ತಾರೆ. ಬೀದಿಗಿಳಿದು ಅನ್ನ-ನೀರು ತ್ಯಜಿಸಿ ಉಪವಾಸ ಕೂತರಷ್ಟೇ ಎದ್ದು ಮಿಸುಕಾಡುತ್ತದೆ ಎಂಬಷ್ಟು ಜಡ್ಡುಗಟ್ಟಿ ಹೋಗಿರುವ ವ್ಯವಸ್ಥೆಯಲ್ಲಿ ಅಂಗನವಾಡಿಗಳ ಶಿಕ್ಷಕಿಯರು ಬೀದಿ ಹೋರಾಟ ನಡೆಸುವುದು ವಿಶೇಷವೇನೂ ಅಲ್ಲ. ಆದರೆ, ಅವರ ಸಮಸ್ಯೆಗಳು ಯಾಕೆ ಹತ್ತಿಪ್ಪತ್ತು ವರ್ಷಗಳಿಂದಲೂ ಜೀವಂತ ಉಳಿದುಬಿಟ್ಟಿವೆ ಎಂಬುದನ್ನು ಯಾವ ಸರಕಾರವೂ ಪ್ರಾಮಾಣಿಕವಾಗಿ ಪರಿಶೀಲಿಸಿಲ್ಲ ಎಂಬುದೇ ಆಶ್ಚರ್ಯದ ಸಂಗತಿ. ವರ್ಷವಿಡೀ ಕತ್ತೆಯಂತೆ ಬಿಡುವಿಲ್ಲದೆ ದುಡಿಯುವ ಈ ಮಹಿಳೆಯರು ಸ್ವಲ್ಪ ಬಿಡುವು ಸಿಗುವ ಬೇಸಿಗೆಯ ತಿಂಗಳಲ್ಲೂ ಬೇಡಿಕೆ ಹೊತ್ತು ಪ್ರತಿಭಟನೆ ಮಾಡಬೇಕಾ? ಕರ್ನಾಟಕದಲ್ಲಿ ಆಡಳಿತ ಪಕ್ಷಗಳು ಮನಸ್ಸು ಮಾಡಿದ್ದರೆ ಅಂಗನವಾಡಿಗಳನ್ನೇ ಅತ್ಯುತ್ತಮ ರೀತಿಯಲ್ಲಿ ಪುನಾರಚಿಸಬಹುದಾಗಿತ್ತು. ಅಲ್ಲಿಯ ಶಿಕ್ಷಕಿಯರಿಗೆ ಒಳ್ಳೆಯ ವೇತನ, ಉತ್ತಮ ತರಬೇತಿ ಕೊಟ್ಟು ಒಂದೊಂದು ಅಂಗನವಾಡಿ ಕೇಂದ್ರವೂ ಕನ್ನಡದ ನಾಳಿನ ಕಂದಮ್ಮಗಳನ್ನು ಬೆಳೆಸುವ ತಾಣವಾಗುವಂತೆ ಮಾಡಬಹುದಿತ್ತು. ತಾನೇ ಮುತುವರ್ಜಿ ವಹಿಸಿ ಒಂದೊಳ್ಳೆಯ ಶಿಕ್ಷಣಕ್ರಮವನ್ನು ಅಲ್ಲಿ ರೂಪಿಸಬಹುದಿತ್ತು. ಸಿಕ್ಕ ಸಿಕ್ಕ ಗಣತಿಕಾರ್ಯದಲ್ಲಿ ಆ ಹೆಂಗಸರಿಂದ ಕತ್ತೆಚಾಕರಿ ಮಾಡಿಸಿಕೊಳ್ಳದೆ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬಹುದಿತ್ತು. ಆರು ವಯಸ್ಸಿನ ಹುಡುಗರಿಗೆ ಪಾಠ ಮಾಡುವಾಕೆ ಶಾಲೆಯಲ್ಲಿ ಶಿಕ್ಷಕಿ ಅನ್ನಿಸಿಕೊಳ್ಳಬಹುದಾದರೆ 3ರಿಂದ 5 ವರ್ಷ ವಯಸ್ಸಿನ ಕಂದಮ್ಮಗಳನ್ನು ನೋಡಿಕೊಂಡು, ಶಿಕ್ಷಣದ ಪ್ರಾಥಮಿಕ ಪರಿಚಯ ಮಾಡಿಸುವ ವ್ಯಕ್ತಿಗಳನ್ನು ಕಾರ್ಯಕರ್ತರೆಂದು ಯಾಕೆ ಕರೆಯಬೇಕು? ಅವರಿಗೆ ಶಿಕ್ಷಕಿಯರೆಂಬ ಗೌರವ ಯಾಕೆ ಕೊಡಬಾರದು? ಮಾಂಟೆಸರಿ ಎಂಬ ವಿದೇಶೀ ಹೆಸರು ಕೇಳಿದೊಡನೆ ಅದು ಜಗತ್ತಿನ ಅತ್ಯುತ್ತಮ ವ್ಯವಸ್ಥೆ ಎಂದು ಎರಡನೇ ಯೋಚನೆ ಇಲ್ಲದೆ ಒಪ್ಪಿಕೊಳ್ಳುವ ನಾವು ಅಲ್ಲಿನ ಉತ್ತಮಾಂಶಗಳನ್ನು ಬಾಲವಾಡಿಯಲ್ಲಿ ಯಾಕೆ ಅಳವಡಿಸಿಕೊಳ್ಳಬಾರದು? ಅಂಗನವಾಡಿಯ ಶಿಕ್ಷಕಿಯರಿಗೆ ಯಾಕೆ ಒಂದಷ್ಟು ಉನ್ನತ ಮಟ್ಟದ ತರಬೇತಿ ಕೊಟ್ಟು, ಅವರೂ ಸಮಾಜದ ಮುಖ್ಯ ವ್ಯಕ್ತಿಗಳೆಂಬ ಭಾವವನ್ನು ಅವರಲ್ಲಿ ಮೂಡಿಸಬಾರದು? ಸರಕಾರದ ಶಿಕ್ಷಣ ಮಂತ್ರಿಯ ಹೃದಯ-ಮಿದುಳುಗಳು ಸರಿಯಾಗಿದ್ದರೆ ಇಂಥವನ್ನೆಲ್ಲ ಆತ ಯೋಚಿಸಲು ಸಾಧ್ಯ.

ಕನ್ನಡ ಕುಸಿಯುತ್ತಿದೆ ಎನ್ನುತ್ತೇವೆ. ಕನ್ನಡದ ಶಾಲೆಗಳು ದಿನವೂ ಮುಚ್ಚುವ ಮೂಲಕ ಸುದ್ದಿಯಾಗುತ್ತವೆ. ಕಳೆದ ನಾಲ್ಕು ವರ್ಷಗಳಲ್ಲಿ ಕನ್ನಡ ಶಾಲೆಗಳು ಎಷ್ಟು ಮುಚ್ಚಿದ್ದಾವೋ ಅದರ ನಾಲ್ಕೂವರೆ ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಆಂಗ್ಲ ನರ್ಸರಿಗಳು, ಶಾಲೆಗಳು ತೆರೆದಿವೆ! ಮಕ್ಕಳಿಗೆ ಎಲ್‍ಕೆಜಿ, ಯೂಕೆಜಿ ಎಂಬ ಪ್ರಾಥಮಿಕ ತರಗತಿಗಳು ಅನಿವಾರ್ಯವಾಗಿಬಿಟ್ಟಿವೆ. ಎಲ್‍ಕೆಜಿ ಮುಗಿಸಿದ ಮಗು “ಮೈ ನೇಮ್ ಈಸ್ ಇಂದ್ರಜಿತ್. ಮೈ ಫಾದರ್ಸ್ ನೇಮ್ ಈಸ್ ರಾವಣ್” ಎಂದು ಎರಡು ವಾಕ್ಯವನ್ನು ಇಂಗ್ಲೀಷಲ್ಲಿ ಹೇಳಿದರೂ ಸಾಕು ತಂದೆತಾಯಿ ವಾರವಿಡೀ ಹಿಗ್ಗಿನಿಂದ ಕುಣಿಯುತ್ತಾರೆ. ಯೂಕೆಜಿಯಲ್ಲಿರುವ ಮಗುವಿಗೆ ಒಂದು ಶಿಶುಪದ್ಯ ಹೇಳೋ ಅಂದರೆ ಅದು ಲಂಡನ್ ಸೇತುವೆ ಕುಸಿದುಬೀಳುವ ಕತೆಯನ್ನು ರಾಗಬದ್ಧವಾಗಿ ಹಾಡಿತೋರಿಸಿ ನಮ್ಮನ್ನು ಖುಷಿಪಡಿಸುತ್ತದೆ. ಪ್ರಾಥಮಿಕ ಶಾಲೆಗೆ ಹೋಗುವುದಕ್ಕೆ ಮೊದಲೇ ನಮ್ಮ ಮಕ್ಕಳು ಹೀಗೆ ಇಂಗ್ಲೀಷ್ ಕಂದಮ್ಮಗಳಾಗಿಬಿಡುವಾಗ, ಅವರು ಶಾಲೆಯಲ್ಲಿ ಅಆಇಈ ಎಂಬ ಕನ್ನಡ ಬಾಲಬೋಧೆಯನ್ನು ಯಾಕಾದರೂ ಕಲಿತಾರು! ಈ ಸಮಸ್ಯೆಯನ್ನು ಗುರುತಿಸಿ ರಾಜ್ಯ ಸರಕಾರ, ಸಮರೋಪಾದಿಯಲ್ಲಿ ಕನ್ನಡದ ಬಾಲಶಾಲೆಗಳನ್ನು ತೆರೆಯಬೇಕಿತ್ತು. ನರ್ಸರಿ, ಕಿಂಡರ್‍ಗಾರ್ಟನ್ ಎಂಬ ವಿದೇಶೀ ಪದಗಳನ್ನು ಸಂಪೂರ್ಣವಾಗಿ ನಿಷೇಧಿಸಿಬಿಡಬೇಕಿತ್ತು. ಈಗಿರುವ ಅಂಗನವಾಡಿ ಕೇಂದ್ರಗಳನ್ನು ಕೇಂದ್ರ ಸರಕಾರದ ಸೆರೆಯಿಂದ ಬಿಡಿಸಿ “ಇವನ್ನೆಲ್ಲ ನಾವೇ ನೋಡಿಕೊಳ್ಳುತ್ತೇವೆ. ನಮ್ಮ ಕನ್ನಡದ ಕಂದಮ್ಮಗಳ ಮನಸ್ಸನ್ನು ಇಲ್ಲಿ ರೂಪಿಸುತ್ತೇವೆ” ಎಂದು ಸವಾಲು ಹಾಕಬೇಕಿತ್ತು. ಮೂರು-ಏಳು ವಯಸ್ಸಿನ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕೆಂಬುದರ ಬಗ್ಗೆ ಶಿವರಾಮ ಕಾರಂತರು ಪುತ್ತೂರಿನಂಥ ಪುಟ್ಟ ಊರಿನಲ್ಲಿ ಅರ್ಧ ಶತಮಾನಕ್ಕೂ ಹಿಂದೆಯೇ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದವರು. ಅಂಥದೊಂದು ಪ್ರಯೋಗವನ್ನೇ ಅಲ್ಪಸ್ವಲ್ಪ ಮಾರ್ಪಾಟಿನೊಂದಿಗೆ ಅಂಗನವಾಡಿಯಲ್ಲಿ ಅಳವಡಿಸಲು ಸಾಧ್ಯ ಏಕಿಲ್ಲ? ಕನ್ನಡದ ಆಟಗಳು, ಕನ್ನಡದ ಶಿಶುಗೀತೆಗಳು, ಕನ್ನಡ ಮಣ್ಣಗುಣದ ಒಂದಷ್ಟು ಬಾಲಪಾಠಗಳು ಇರುವ ಒಂದು ಶಿಕ್ಷಣಕ್ರಮವನ್ನು ಅಂಗನವಾಡಿಗಳಿಗೆಂದೇ ರೂಪಿಸಲು ಅಬ್ಬಬ್ಬಾ ಎಂದರೆ ಎಷ್ಟು ಖರ್ಚಾಗಬಹುದು?

ಅಂಗನವಾಡಿಯ ಶಿಕ್ಷಕಿಯರು ಪ್ರತಿಭಟನೆ ಕೂತಾಗೆಲ್ಲ ಅದನ್ನು ಹಣಕಾಸಿನ ದೃಷ್ಟಿಯಿಂದಷ್ಟೇ ನೋಡುತ್ತಿದ್ದೇವೆ. ಸಂಬಳ ಏರಿಸಿ ಎಂಬ ಬೇಡಿಕೆ ಇಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ, ಇವರಿಗೆ ಮಾಡಲು ಬೇರೇನೂ ಕೆಲಸ ಇಲ್ಲ ಎಂಬ ಉಡಾಫೆ ಸಾರ್ವಜನಿಕರಲ್ಲೂ ಕೆಲವರಲ್ಲಿರಬಹುದು. ಆದರೆ, ಆ ಬೇಡಿಕೆಯ ಹಿಂದೆ ಆ ಶಿಕ್ಷಕಿಯರಿಗೆ, ತಮ್ಮ ಕೆಲಸಕ್ಕೆ ಮಾನ್ಯತೆ ಬೇಕು ಎಂಬ ಆಕ್ರೋಶವೂ ಮಾನ್ಯತೆ ಸಿಗುತ್ತಿಲ್ಲವೆಂಬ ನೋವೂ ಇದೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು. ವೇತನ ಹೆಚ್ಚಾಗುವ ಮೂಲಕವಾದರೂ ತಮಗೆ ಸಮಾಜದಲ್ಲೊಂದು ಗೌರವ ಪ್ರಾಪ್ತಿಯಾಗಬಹುದೇನೋ ಎಂಬ ಆಸೆ ಅವರದ್ದಿರಬಹುದು. ಅಂಗನವಾಡಿಯ ಉದ್ಯೋಗಿಗಳ ಕಾರ್ಯಕ್ಷೇತ್ರದಲ್ಲಿ ಒಂದಿನಿತೂ ಬದಲಾವಣೆ ಮಾಡದೆ ಹೋದರೆ, ಮುಂದೆ 20,000 ರುಪಾಯಿ ವೇತನ ನಿಗದಿಪಡಿಸಿದರೂ ಅವರ ಬೇಡಿಕೆ, ಮುಷ್ಕರ, ಹರತಾಳಗಳು ಇದ್ದೇ ಇರುತ್ತವೆ. ಹಾಗಾಗಿ ಸರಕಾರ ಇದನ್ನೊಂದು ವೇತನ ಸಮಸ್ಯೆ ಎಂದು ನೋಡದೆ, ಇಡೀ ಅಂಗನವಾಡಿ ವ್ಯವಸ್ಥೆಯನ್ನೇ ಪುನರ್‍ರೂಪಿಸುವ ಕೆಲಸಕ್ಕೆ ಕೈ ಹಾಕಬೇಕು. ಅವನ್ನು ಕನ್ನಡದ ಮಕ್ಕಳ ಮಾಂಟೆಸರಿ ಕೇಂದ್ರಗಳಾಗಿ ಪರಿವರ್ತನೆ ಮಾಡಬೇಕು. ಅಂಗನವಾಡಿಗಳನ್ನು ಆಧುನಿಕಗೊಳಿಸಿ ಅಲ್ಲಿಗೆ ಮಕ್ಕಳು ಖುಷಿಯಿಂದ ಬರುವಂಥ ವಾತಾವರಣ ನಿರ್ಮಿಸಬೇಕು. ಕಾರ್ಯಕರ್ತೆಯರೆಂಬ ಪದ ಕಳಚಿಟ್ಟು ಶಿಕ್ಷಕಿಯರೆಂಬ ಮಾನ್ಯತೆ ಕೊಡಬೇಕು. ಜನ ತಮ್ಮ ಮಕ್ಕಳನ್ನು ಪ್ಲೇಸ್ಕೂಲ್, ನರ್ಸರಿಯೆನ್ನುತ್ತ ಇಂಗ್ಲೀಷ್ ಬಾಲವನಗಳಿಗೆ ಕಳಿಸುವ ಬದಲು ಅಂಗನವಾಡಿಗೆ ಕಳಿಸುವಷ್ಟು ಬದಲಾವಣೆ ತಂದರೆ ಸಾಕು, ಕರ್ನಾಟಕದಲ್ಲಿ ಕನ್ನಡವೂ ಉಳಿಯುತ್ತದೆ, ಅಂಗನವಾಡಿ ಶಿಕ್ಷಕಿಯರ ಫ್ರೀಡಂ ಪಾರ್ಕ್ ಹೋರಾಟಗಳೂ ಅಂತ್ಯಕಾಣುತ್ತವೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!