ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೭
ಅರೆಗಣ್ಣು ನಮದೆಂದು ಕೊರಕೊರಗಿ ಫಲವೇನು? |
ಅರೆಬೆಳಕು ಧರೆಯೊಳೆಂದೊರಲಿ ಸುಖವೇನು ? ||
ಇರುವ ಕಣ್ಣಿರುವ ಬೆಳಕಿನೊಳಾದನಿತ ನೋಡಿ |
ಪರಿಕಿಸಿದೊಡದು ಲಾಭ – ಮಂಕುತಿಮ್ಮ || ೦೪೭ ||
ಮೊದಲಿನೆರಡು ಸಾಲುಗಳಲ್ಲಿ ಸರ್ವೇ ಸಾಧಾರಣವಾಗಿ ಕಾಣಿಸುವ ಮನುಜ ಪ್ರವೃತ್ತಿ ಹೇಗೆ ಬಿಂಬಿತವಾಗಿದೆ ನೋಡಿ. ನಾವಂದುಕೊಂಡಂತೆ ನಡೆಯದ ಪ್ರತಿ ವಿಷಯಕ್ಕೂ ಒಂದೋ ನಮ್ಮನ್ನೇ ದೂಷಿಸಿಕೊಳ್ಳುವ ಕೀಳರಿಮೆಗೆ ಒಳಗಾಗುತ್ತೇವೆ (ಅರೆಗಣ್ಣು ನಮದೆಂದು ಕೊರಗುವುದು : ನಮಗೆ ಇರುವ ಸಾಮರ್ಥ್ಯವೇ ಸೀಮಿತವೆಂದು ಭಾವಿಸಿಕೊಳ್ಳುವುದು ). ಇಲ್ಲವಾದರೆ ದೋಷವನ್ನೆಲ್ಲ ಸುತ್ತಲಿನ ಪರಿಸರಕ್ಕೆ ಆರೋಪಿಸಿ ತಪ್ಪು ನಮ್ಮದಲ್ಲ ಎಂದು ಹಪಹಪಿಸುತ್ತೇವೆ. ಎರಡರ ಫಲಿತವು ಶೂನ್ಯವೇ ಎನ್ನುವುದು ಇಲ್ಲಿನ ಕವಿಭಾವ.
ಕುತೂಹಲದ ಬೆನ್ನಟ್ಟಿ ಜಿಜ್ಞಾಸೆ-ಅನ್ವೇಷಣೆಗೆ ಹೊರಟ ಮನದ ಯಾನ ತಾರ್ಕಿಕ ಅಂತ್ಯ ಕಾಣದೆ ಬೇಸತ್ತುಹೋಗಿದೆ. ಆ ಗುಟ್ಟರಿಯುವ ದಾಹ ತಣಿಯದೆ ತನ್ನ ಅಸಹಾಯಕ ಸ್ಥಿತಿಗೆ ತಾನೇ ಮರುಗುವಂತಾಗಿಬಿಟ್ಟಿದೆ ಕವಿಗೆ. ನಿರಂತರ ಕೊರೆಯುತ್ತಿರುವ ಆ ಚಿಂತನೆಯ ಚಿಂತೆ ಸದಾ ಕಾಡುವ ಕೊರಗಾಗಿಬಿಡುವುದು ಅದರ ಸಹಜ ಬೆಳವಣಿಗೆ ತಾನೆ ? ಹೀಗಾಗಿ ಅದನ್ನು ಹದ್ದುಬಸ್ತಿನಲ್ಲಿಡಲೋ ಏನೊ ಎಂಬಂತೆ – ‘ಯಾವುದೇ ಪ್ರಯೋಜನವಿಲ್ಲದ ಬರಿಯ ಕೊರಗಿನಿಂದೇನು ಪ್ರಯೋಜನ ? ‘ ಎಂದು ಸಮಾಧಾನಿಸಿಕೊಳ್ಳುತ್ತ ತಮ್ಮ ಪ್ರಕ್ಷುಬ್ದ ಮನಸನ್ನು ಅದರ ಧನಾತ್ಮಕ ಕೋನದತ್ತ ತಿರುಗಿಸಲು ಯತ್ನಿಸುತ್ತಾರೆ.
ಕಣ್ಣಿನ ದೋಷದಿಂದಾಗಿ ಬರಿ ಅರೆಬರೆ ಕಾಣುವ ಶಕ್ತಿ ಮಾತ್ರವಿರುವ ಪರಿಸ್ಥಿತಿಯಲ್ಲಿ, ನಮ್ಮ ಕಣ್ಣಿನ ದೋಷಕ್ಕೆ ಕೊರಗಿ-ಮರುಗಿದರೇನು ಪ್ರಯೋಜನ, ಸುಖ ? ಆ ದೋಷದ ಕಣ್ಣಲ್ಲೆ ಹೊರಗಿನ ಜಗವನ್ನು ನೋಡುತ್ತ, ಅದರ ಸೀಮಿತತೆಯ ಫಲವಾಗಿ ಬರಿಯ ಅರ್ಧಂಬರ್ಧ ಬೆಳಕನ್ನು ಮಾತ್ರ ಪರಿಗ್ರಹಿಸಿ, ಎಲ್ಲವನ್ನು ಸಂಪೂರ್ಣವಾಗಿ ಕಂಡೆನೆಂಬ ತಪ್ಪು ಗ್ರಹಿಕೆಯಲ್ಲಿ , ‘ಈ ಧರೆಯಲ್ಲಿರುವ ಬೆಳಕೆ ಅರೆಬರೆ, ಅಸಂಪೂರ್ಣ ; ಇಲ್ಲಿ ಪೂರ್ತಿ ಬೆಳಕಿಲ್ಲ’ ಎಂದು ಒರಲಿದರೆ, ಗೊಣಗುಟ್ಟಿಕೊಂಡರೆ ಏನು ಪ್ರಯೋಜನ? ನಮ್ಮ ಮಿತಿಯಿಂದ ಅರಿಯಲಾಗದ್ದನ್ನು ‘ಕೈಗೆಟುಕದ ದ್ರಾಕ್ಷಿ ಹುಳಿ’ ಎಂದು ತಪ್ಪಾಗಿ ಪರಿಗ್ರಹಿಸಿ ಆ ಅರಿಯಬೇಕಾದ ಜ್ಞಾನ-ಸತ್ಯವೆ ಇಲ್ಲಿಲ್ಲ, ಇರುವುದೆಲ್ಲ ಅರೆಬರೆ ಸತ್ಯ-ಜ್ಞಾನ ಮಾತ್ರವಷ್ಟೇ ಹೊರತು ಸಂಪೂರ್ಣ ಸತ್ಯವಲ್ಲ ಎಂದು ಮೊಂಡುವಾದ ಹಿಡಿದರೆ ಸತ್ಯ ಸುಳ್ಳಾಗಿಬಿಡುವುದೆ ?
ಬದಲಿಗೆಆ ದೋಷಾರೋಪಣೆಯನ್ನೆಲ್ಲ ನಿಲ್ಲಿಸಿ ನಮ್ಮ ಪರಿಮಿತಿಯನ್ನು ಅರಿತು ಒಪ್ಪಿಕೊಳ್ಳುವ ದೊಡ್ಡತನ ತೋರಿಸಿದರೆ, ಇರುವಷ್ಟು ಕಣ್ಣಿನ ಸಾಮರ್ಥ್ಯದಲ್ಲೆ, ಕಾಣಿಸಿದಷ್ಟು ಬೆಳಕಿನ ಅನ್ವೇಷಣೆ-ಪರೀಕ್ಷೆ ನಡೆಸಿ ‘ಕೈಗೆಟುಕಿದಷ್ಟೇ ಲಾಭ’ – ಎಂದು ನಿರಾಳವಾಗಬಹುದಲ್ಲವೆ ? ಆಗ ಅಲ್ಲಿ ಸಂಪೂರ್ಣ ಪರಿಪೂರ್ಣತೆಯ ತೃಪ್ತಿಯಿರದಿದ್ದರು, ಆದಷ್ಟು ದೂರಕ್ಕೆ ನಡೆದೆವೆನ್ನುವ ‘ಸಮಯೋಚಿತ ಮತ್ತು ಕಾರ್ಯಸಾಧು ಪ್ರಕ್ರಿಯೆಯ’ ಸಂತೃಪ್ತಭಾವವಾದರು ದಕ್ಕುತ್ತದೆ. ಒಂದು ಹದದಾಚೆಗೆ, ನಮ್ಮ ಸೀಮಿತತೆಯ ಹಂತದ ಪರಿಧಿ ಮೀರಿ ‘ಇದ್ದುದೆಲ್ಲವ (ಸಾಧ್ಯವಾದುದೆಲ್ಲ) ಬಿಟ್ಟು ಇರದುದರ ಬೆನ್ನಟ್ಟುವ’ ಹವಣಿಕೆ ಅಂತಿಮವಾಗಿ ಯಾರಿಗೂ ಒಳಿತಲ್ಲ – ಎನ್ನುವ ಅರಿವಿನ ಪ್ರಕ್ಷೇಪ ಇದರೊಡಲಲಡಗಿದ ಮೂಲಭಾವವೆನ್ನಬಹುದು. ಇನ್ನು ಸರಳವಾಗಿ ಹೇಳುವುದಾದರೆ ‘ಕೈಯಲ್ಲಿರುವ ಒಂದು ಹಕ್ಕಿಯ ಬಿಟ್ಟು, ಪೊದೆಯಲಿರುವ ಎರಡು ಹಕ್ಕಿಗೆ ಗುರಿಯಿಡುವ’ ಪಾಡು ಸಲ್ಲ . ಕೈಲಿರುವ ಹಕ್ಕಿ ಹಾರಿಹೋಗದಂತೆ ನೋಡಿಕೊಳ್ಳುವುದು ಮೊದಲ ಅಗತ್ಯ; ನಂತರವಷ್ಟೇ ಪೊದೆಯತ್ತ ಗಮನವೀಯುವುದು ಉಚಿತ.
#ಕಗ್ಗಕೊಂದು-ಹಗ್ಗ
#ಕಗ್ಗ-ಟಿಪ್ಪಣಿ