ಅಂಕಣ

ಶಿವಾಜಿ ಇಂದಿಗೆಷ್ಟು ಪ್ರಸ್ತುತ?

ಕಾಲ ಸುಮಾರು 1643, ಪುಣೆಯ ಪಕ್ಕದಲ್ಲಿ ರಾಂಝ್ಯಾ ಎಂಬ ಒಂದು ಹಳ್ಳಿ. ಹಳ್ಳಿಯ ದುಷ್ಕರ್ಮಿ ಪಟೇಲನೊಬ್ಬ ಓರ್ವ ವಿಧವೆಯನ್ನು ಮಾನಭಂಗ ಮಾಡಿದ ಸುದ್ದಿ ಆ ಪ್ರಾಂತದ ಉಸ್ತುವಾರಿ ಹೊತ್ತಿದ್ದ, ಬಿಜಾಪುರದ ಸರದಾರನೊಬ್ಬನ ಮಗನ ಕಿವಿಗೆ ಬಿತ್ತು. ವಿಧರ್ಮೀಯರ ದುರಾಡಳಿತದಿಂದಾಗಿ ಇಂಥಹ ಹೀನಕೃತ್ಯಗಳು ಮಾಮೂಲಾಗಿದ್ದಂತಹ ಆ ಸಂದರ್ಭದಲ್ಲಿ ತನ್ನನ್ನು ಕೇಳುವರಾರು? ಎಂಬ ಗರ್ವ ಆ ಪಟೇಲನದು. ಆದರೆ ಕೂಡಲೆ ಸರದಾರನ ಮಗನ ಆಜ್ಞೆ ಹೊರಟಿತು. ಕಾವಲು ಪಡೆಯವರು ಹಳ್ಳಿಗೆ ಧಾವಿಸಿ ಆ ಪಾಪಿಯನ್ನು ನ್ಯಾಯಸ್ಥಾನಕ್ಕೆ ಎಳೆದು ತಂದರು. ಸರದಾರನ ಮಗ ತನ್ನ ತಾಯಿ, ಗುರು, ಪ್ರಧಾನಿ ಮತ್ತು ಪುರಜನರು ಸೇರಿದ್ದ ನ್ಯಾಯಸಭೆಯಲ್ಲಿ ಪಟೇಲನ ವಿಚಾರಣೆ ನಡೆಸಿದನು. ವಿಚಾರಣೆ ವೇಳೆ ಪಟೇಲನ ತಪ್ಪು ಸಾಬೀತಾಯಿತು, ಇನ್ನು ಶಿಕ್ಷೆಯನ್ನು ಪ್ರಕಟಿಸಿವುದೊಂದು ಬಾಕಿಯಿತ್ತು. ಎಲ್ಲರ ಚಿತ್ತವೂ ಸರದಾರನ ಮಗನ ಕಡೆಯೇ. ಗಾದಿಯ ಮೇಲಿಂದ ತೀಕ್ಷ್ಣವಾದ ದನಿಯಲ್ಲಿ ತೀರ್ಪು ಹೊರಬಿತ್ತು “ಅಪರಾಧಿಯ ಎರಡೂ ಕೈ ಮತ್ತು ಕಾಲುಗಳನ್ನು ಕತ್ತರಿಸಿ ಹಾಕಿ”. ಕ್ಷಣಕಾಲ ಎಲ್ಲರೂ ಅವಕ್ಕಾದರು! ಮತ್ತೇನು?. ಇಂಥಹ ಕಠೋರ ತೀರ್ಪಿತ್ತ ಸರದಾರನ ಮಗನ ವಯಸ್ಸಾದರೂ ಎಷ್ಟು ಗೊತ್ತೇನು? ಕೇವಲ 14!. ಅಬ್ಬ! ಹದಿನಾಲ್ಕನೇ ವಯಸ್ಸಿಗೆ ಇಂಥಹ ಪಾಪ ಕೃತ್ಯಗಳಿಗೆ ಸರಿಸಮನಾದ, ಭವಿಷ್ಯದಲ್ಲಿ ಯಾವೋಬ್ಬನೂ ಇಂಥಹ ಹೀನಕೃತ್ಯಕ್ಕೆ ಕೈ ಹಾಕಬಾರದೆಂಬ ಪಾಠವನ್ನು ಸಾರುವಂತಹ ದೂರದೃಷ್ಟಿತ್ವವುಳ್ಳ ತೀರ್ಪನ್ನು ನೀಡುವ ಬುದ್ದಿಮತ್ತೆ! ಛೆ, ಈಗಿನ ನ್ಯಾಯಾಲಯಗಳೇಕೆ ಇಂಥಹ ಧೃಢಮನಸ್ಸನ್ನು ಮಾಡುತ್ತಿಲ್ಲ? ಬಿಡಿ, ಎಂತಹ ಧೃಢ ಮನಸ್ಸಿದ್ದರೇನು, ಕುಗ್ಗಿಸಲು ಮಾನವ ಹಕ್ಕು(?)ಗಳ ಆಯೋಗವಿದೆಯಲ್ಲ!. ಮುಗ್ದ ಮಕ್ಕಳಿಂದ ಹಿಡಿದು ವಯೋವೃದ್ಧರನ್ನು ಮಾತ್ರವಲ್ಲದೆ ಜನ್ಮವಿತ್ತ ಮಗಳ ಮೇಲೆಯೇ ಅತ್ಯಚಾರವೆಸಗುವಂತಹ ಹೀನ ಸುದ್ದಿಗಳು ದಿನೆದಿನೆ ಹೆಚ್ಚುತ್ತಿದ್ದರೂ, ಇವುಗಳನ್ನು ತಡೆಯಲಾಗದೆ ಈಗಿನ ನ್ಯಾಯಾಂಗ ವ್ಯವಸ್ಥೆಯು ಮೂಕಪ್ರೇಕ್ಷಕನಂತೆ ನಿಂತಿರುವಾಗ ಆಗಿನ ಕಾಲದಲ್ಲಿ ಆ ಬಾಲಕನಿತ್ತ ತೀರ್ಪೆ ಈಗಲೂ ಪ್ರಸ್ತುತವೆನಿಸುವುದಿಲ್ಲವೆ?. ಸ್ತ್ರೀಯನ್ನು ಮಾತೃಸ್ಥಾನದಲ್ಲಿಟ್ಟು ಪೂಜಿಸುವ ಈ ಪವಿತ್ರ ನೆಲದ ಶ್ರೇಷ್ಠ ಸಂಸ್ಕೃತಿಯನ್ನು ಧಿಕ್ಕರಿಸುವವರಿಗೆ ತನ್ನ ತೀರ್ಪಿನ ಮೂಲಕವೆ ಎಚ್ಚರಿಕೆಯನ್ನು ಸ್ಪಷ್ಟವಾಗಿ ರವಾನಿಸಿದ 14ರ ಆ ಪೋರನೆ ಶಿವಾಜಿ!. ಕ್ಷಮಿಸಿ, ಛತ್ರಪತಿ ಶಿವಾಜಿ ಮಹರಾಜ್. ಫೆ.19, ಶಿವಾಜಿ ಮಹಾರಾಜರು ಹುಟ್ಟಿದ ದಿನ.

ಹೌದು, ಶಿವಾಜಿ ಮಹಾರಾಜರ ಕಾಲ 17ನೇ ಶತಮಾನವಾದರೂ ಅವರ ಜೀವನದ ಪ್ರತಿಯೊಂದು ಹಂತವೂ ಈಗಲೂ ಪ್ರಸ್ತುತವೆನಿಸುತ್ತದೆ ಎಂದರೆ ಅತಿಶಯೋಕ್ತಿ ಎಂದನಿಸುತ್ತದೆಯೇ? ಹಾಗಾದರೆ ಆಗಿನ ಕಾಲಘಟ್ಟಕ್ಕೆ ಹೋಗೋಣ. ಯಾವ ನೆಲದಲ್ಲಿ ಸ್ತ್ರೀಯನ್ನು, ಗೋಮಾತೆಯನ್ನು ಪೂಜ್ಯ ಭಾವನೆಯಿಂದ ಕಾಣಲಾಗುತ್ತಿತ್ತೋ, ಅಂಥಹ ಪುಣ್ಯಭೂಮಿಯಲ್ಲಿ ವಿಧರ್ಮೀಯರ ಆಕ್ರಮಣ ಹಾಗು ದುರಾಡಳಿತದ ಫಲವಾಗಿ ಮಹಿಳೆಯರ ಮಾನಭಂಗ, ಗುಡಿ ಗೋಪುರಗಳ ಧ್ವಂಸ, ಅನ್ಯಧರ್ಮೀಯರ ಶೋಷಣೆ ಮತ್ತು ಗೋವಧೆಗಳು ಎಗ್ಗಿಲ್ಲದೆ ನಡೆಯುತ್ತಿದ್ದದ್ದು ಒಂದೆಡೆಯಾದರೆ, ಇನ್ನೂ ಹೇಸಿಗೆಯೆಂಬಂತೆ ಈ ದುಷ್ಕೃತ್ಯಗಳನ್ನೆಲ್ಲ ಕಣ್ಣೆದುರಿಗೆ ನೋಡಿಯೂ ವಿದೇಶಿ, ವಿಧರ್ಮೀ ರಾಜರ ಪಾದ ಚಪ್ಪರಿಸುತ್ತಿದ್ದ ವೀರ(?) ರಜಪೂತ ದೊರೆಗಳು ಮತ್ತೊಂದೆಡೆ. ಇವುಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಾ, ಇಂತಹ ವಿಷಮ ಪರಿಸ್ಥಿತಿಯಲ್ಲಿ ಸ್ವದೇಶಿ ಬಾಂಧವರಿಗೆ ತಮ್ಮತನದ ಅರಿವನ್ನು ಮೂಡಿಸಿ, ಧರ್ಮ ಜಾಗೃತಿಯ ಮೂಲಕ ಅವರನ್ನು ಬಡಿದೆಬ್ಬಿಸುವ ಅವಶ್ಯಕತೆಯನ್ನು ಮನಗಂಡು 13ನೇ ವಯಸ್ಸಿಗೆ ತನ್ನ ಗೆಳೆಯರೊಡಗೂಡಿ ‘ಸ್ವರಾಜ್ಯ’ ದ ಕನಸು, ಅಲ್ಲ ಧೃಢಸಂಕಲ್ಪವನ್ನು ತೊಟ್ಟವನು ಶಿವಾಜಿ. ನೆನಪಿಡಿ, ವಯಸ್ಸು ಕೇವಲ 13!. 13ನೇ ವಯಸ್ಸಿನಲ್ಲೆ ಸುತ್ತಮುತ್ತಲಿನ ಆಗು-ಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಿ, ತನ್ನ ಸಮಾಜದ ಸಮಸ್ಯೆಗಳನ್ನು ಗುರುತಿಸುತ್ತಾನೆ. ಕೇವಲ ಗುರುತಿಸುವುದು ಮಾತ್ರವಲ್ಲ, ಸಮಸ್ಯೆಯನ್ನು ನಿವಾರಿಸುವ ದೃಢಸಂಕಲ್ಪವನ್ನೂ ತೊಡುತ್ತಾನೆಂದರೆ ಆಶ್ಚರ್ಯವಲ್ಲವೇ? ಚಿಕ್ಕ ವಯಸ್ಸಿನಿಂದಲೇ ತಾಯಿ ಜೀಜಾಬಾಯಿಯಿಂದ ಹೇಳಲ್ಪಟ್ಟ ಪುರಾಣದ ವೀರಕಥೆಗಳನ್ನು ಕೇಳುತ್ತಾ, ತನ್ನ ಗೆಳೆಯರಾದ ಮಾವಳಿ ಹುಡುಗರೊಡನೆ ಕಾಡು-ಮೇಡು ಅಲಿದು ಕಬ್ಬಡ್ಡಿ ಆಡುತ್ತಾ ಬೆಳೆದ ಶಿವಾಜಿಯ ವೀರತ್ವವನ್ನು, ನಾಲ್ಕು ಗೋಡೆಗಳ ನಡುವೆ ಮೂರ್ಖಪೆಟ್ಟಿಗೆಯ ಎದುರು ಕಾರ್ಟೂನುಗಳನ್ನು ನೋಡಿ ಬೆಳೆದ ನಾವುಗಳು ಕೇಳಿದಾಗ ಆಶ್ಚರ್ಯವಾಗುವುದು ಸಹಜವೆ ತಾನೆ?. ನಮ್ಮ ಮನೆಯಲ್ಲಿಯೋ ಅಥವಾ ಅಕ್ಕಪಕ್ಕದಲ್ಲಿರುವ ಇದೇ ಮಯೋಮಾನದ ಮಕ್ಕಳ ಮನಸ್ಥಿತಿಯ ಕುರಿತು ಒಮ್ಮೆ ಆಲೋಚಿಸಿ ನೋಡಿ. ಪೋಗೊದಲ್ಲಿನ ಚೊಟಾ ಭೀಮೋ ಅಥವಾ ‘WWE’ನ ಜಾನ್‍ಸೀನಾ, ಅಂಡರ್ಟೇಕರ್‍ಗಳನ್ನೇ ತಲೆಯಲ್ಲಿ ತುಂಬಿಕೊಂಡು, ಇದೆ ತಮ್ಮ ಲೋಕವೆಂದು ಅದರಲ್ಲೆ ಜೀವಿಸುತ್ತಿರುತ್ತಾರೆಯೇ ಹೊರತು, ತಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬ ಅರಿವೇ ಅವರಿಗಿರುವುದಿಲ್ಲ, ಅಥವಾ ಆ ಅರಿವನ್ನು ಪಡೆದುಕೊಳ್ಳಲು ಬಿಡುತ್ತಿಲ್ಲ ಎಂದು ಹೇಳುವುದೇ ಸೂಕ್ತವೇನೊ. ನಮ್ಮ ದೇಶದ ಸ್ಥಿತಿ ಯಾವ ರೀತಿ ಇದೆ, ನಮ್ಮ ಊರಲ್ಲಿ ನಡೆಯುತ್ತಿರುವ ವಿದ್ಯಮಾನಗಳೇನು, ಹೋಗಲಿ ಕನಿಷ್ಠ ಪಕ್ಷ ನಮ್ಮ ಮನೆಯಲ್ಲೇ ಇರುವ ಸಮಸ್ಯೆಗಳ ಕುರಿತಾಗಿಯಾದರೂ ಅವರು ಆಲೋಚಿಸುವಂತೆ ಮಾಡುತ್ತೀವಾ? ‘ಈ ವಯಸ್ಸಲ್ಲಿ ನಿನಗೇಕೆ ಅದೆಲ್ಲಾ’ ಎಂದು ಅವರನ್ನು ದೂರವಿಡುವವರೂ ನಾವೆ, ಬೆಳೆದ ಮೇಲೆ ‘ಈಗಿನ ಯುವಕರಿಗೆ ಸಾಮಾಜಿಕ ಪ್ರಜ್ಞೆ ಇಲ್ಲ’ವೆಂದು ದೂರುವವರೂ ನಾವೆ ಅಲ್ಲವೆ?.

ಇಲ್ಲಿ ಇನ್ನೂ ಒಂದು ಗಮನಿಸಬೇಕಾದ ಅಂಶವೊಂದಿದೆ. ಶಿವಾಜಿಯ ತಂದೆ ಶಹಾಜಿ, ಬಿಜಾಪುರ ಬಾದಶಹನ ಅಡಿಯಲ್ಲಿದ್ದ ಹಿರಿಯ ಸರದಾರ. ಬೆಂಗಳೂರು, ಪುಣೆ ಸೇರಿದಂತೆ ಪ್ರಮುಖ ಜಹಗೀರುಗಳ ಉಸ್ತುವಾರಿ ಹೊತ್ತವನು. ಆತನ ಸ್ಥಾನವನ್ನು ಈಗಿನ ಮುಖ್ಯಮಂತ್ರಿ ಪಟ್ಟಕ್ಕೆ ಹೋಲಿಸಬಹುದು ಎಂದಾದಲ್ಲಿ ಅವನ ವೈಭೋಗ ಎಂಥದ್ದು ಎಂದು ನೀವೆ ಊಹಿಸಿಕೊಳ್ಳಿ. ಮತ್ತು ಅವನ ಪತ್ನಿ, ಮಕ್ಕಳು ಸೇರಿದಂತೆ ಅವನ ಸಂಸಾರಕ್ಕಿರಬಹುದಾದ ಸವಲತ್ತುಗಳ ಕುರಿತಾಗಿಯೂ ಹೆಚ್ಚಿಗೆ ವಿವರಿಸಬೇಕಾಗಿಲ್ಲ. ಆದರೆ, ಹೀಗೆ ಒಂದು ರಾಜ್ಯದ ಒಬ್ಬ ‘ಮುಖ್ಯಮಂತ್ರಿ’ಯ ಮಗ ಅಪ್ಪನ ಹೆಸರಲ್ಲಿ ವೈಭವಯುತ ಜೀವನವನ್ನು ನಡೆಸುವುದರ ಬದಲಾಗಿ, ತನಗಿರುವ ಘನತೆಯನ್ನು ಬಿಟ್ಟು, ಕಾಡಿನಲ್ಲಿರುವ ಅರಬೆತ್ತಲೆ ಮಾವಳಿ ಹುಡುಗರೊಂದಿಗೆ ಸಖ್ಯ ಬೆಳೆಸಿ, ಅವರೊಂದಿಗೆ ಕಾಡುಗಳನ್ನು ಸುತ್ತಿ, ಕಬ್ಬಡ್ಡಿ ಇತ್ಯಾದಿ ಆಟಗಳನ್ನಾಡಿ ಬೆಳೆಯುತ್ತಲೇ ಸಮಾಜ ಯಾರನ್ನು ಕೈಲಾಗದವರೆಂದು ದೂರವಿರಿಸಿತ್ತೋ ಅಂಥವರಿಂದಲೆ ‘ಸ್ವರಾಜ್ಯ’ ಸ್ಥಾಪನೆ ಸಾಧ್ಯವೆಂದು ಮನಗಾಣುತ್ತಾನೆ, ಹಾಗು ‘ಸ್ವರಾಜ್ಯ’ನಿರ್ಮಾಣದ ಸಂಕಲ್ಪ ತೊಡುತ್ತಾನೆ ಎಂದಾದಲ್ಲಿ, ಒಬ್ಬ ಶಿವಾಜಿಯ ನಿರ್ಮಾಣದಲ್ಲಿ ಆತನ ಬಾಲ್ಯವಹಸಿದ ಪಾತ್ರದ ಕುರಿತು ಒಮ್ಮೆ ಆಲೋಚಿಸಿ, ಜತೆಗೆ ಇಂದು ನಮ್ಮ ಮಕ್ಕಳಿಗೂ ಇದೇ ರೀತಿಯ ಬಾಲ್ಯ ದೊರಕುತ್ತಿದೆಯೇ ಎಂಬ ಪ್ರಶ್ನೆಯನ್ನೂ ನೀವೆ ಕೇಳಿಕೊಳ್ಳಿ. ಒಬ್ಬ ಮುಖ್ಯಮಂತ್ರಿಯ ಮಗನ ವಿಚಾರ ಬಿಡಿ, ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಹುಡುಗನಾದರೂ ಇಂದು ಮೈದಾನಕ್ಕೆ ಹೋಗಿ, ಎಲ್ಲರೊಂದಿಗೆ ಬೆರೆತು, ಚೆನ್ನಾಗಿ ಆಟವಾಡಿ, ಬಟ್ಟೆಯನ್ನು ಕೊಳೆ ಮಾಡಿಕೊಂಡು ಮನೆಗೆ ಬರುತ್ತಿದ್ದಾನೆಯೇ?. ರಜೆಯಲ್ಲಿ ಅಜ್ಜಿ ಮನೆಗೆಂದು ಹೊರಟು, ಕಾಡು-ತೋಟಗಳನ್ನು ಸುತ್ತಾಡಿ, ಎದ್ದು-ಬಿದ್ದು, ಗಾಯ ಮಾಡಿಕೊಂಡು ವಾಪಾಸ್ಸು ಬರುತ್ತಿದ್ದಾನೆಯೇ?, ಅಥವಾ ‘ಕೈಯಲ್ಲಿ ಮೊಬೈಲ್ ಇದ್ದಲ್ಲಿ, ಗಾಯದ ಮಾತೆಲ್ಲಿ’ ಎಂಬುದು ನಮ್ಮ ಮನೆಯ ಮಂತ್ರವಾಗಿದೆಯೋ?. ಶಿವಾಜಿಯು ಬಾಲ್ಯದಲ್ಲಿ ತಾಯಿ ಜೀಜಾಬಾಯಿಯಿಂದ ಕೇಳಲ್ಪಟ್ಟ ರಾಮ,ಕೃಷ್ಣ,ಭೀಮಾ,ಹನುಮರ ಕುರಿತಾದ ವೀರ ಕಥೆಗಳು ಇಂದು ನಮ್ಮ ಮನೆಯಲ್ಲೂ ಅನುರುಣಿಸುತ್ತಿದೆಯೇನು?.

ಹೌದು, ಇಂದಿನ ಕಾಲಘಟ್ಟದಲ್ಲಿ ಶಿವಾಜಿ ಎಷ್ಟು ಪ್ರಸ್ತುತ? ಎಂಬ ಪ್ರಶ್ನೆ ನಮ್ಮಲ್ಲಿ ಮೂಡಬಹುದು. ಭಾರತದಲ್ಲಿ ಇಂದು ಅಫ್ಜಲ್‍ಖಾನರಿಲ್ಲ,  ಬಿಜಾಪುರದ ಬಾದಶಾಹರಿಲ್ಲ, ಬ್ರೀಟೀಷ್, ಡಚ್, ಪೋರ್ಚುಗೀಸರಿಲ್ಲ, ದಿಲ್ಲಿಯ ಔರಂಗಜೇಬನೂ ಇಲ್ಲವೆಂಬುದು ಸತ್ಯವೆ. ಆದರೆ, ಇವರೆಲ್ಲರ ಜಾಗದಲ್ಲಿ ಇಂದು ಭಯೋತ್ಪಾದನೆ, ಅಸಮಾನತೆ, ಜಾತೀಯತೆ, ಬಡತನ, ಭ್ರಷ್ಟಾಚಾರ, ಕೊಳಕು ರಾಜಕಾರಣ, ಅರಾಷ್ಟ್ರೀಯತೆಗಳು ಬಂದು ತಳವೂರಿದ್ದಾವಲ್ಲಾ!. ಹೌದು, ಇಂದು ಶಿವಾಜಿಯ ಖಡ್ಗದ ಅವಶ್ಯಕತೆಯಿಲ್ಲದಿರಬಹುದು, ಆದರೆ ಈ ಸಮಸ್ಯೆಗಳನ್ನು ಸಂಹರಿಸಲು, ಸಮಾಜದ ನೋವಿಗೆ ಶೀಘ್ರ ಸ್ಪಂದಿಸುವ, ಈ ಸಮಾಜವೂ ತನ್ನದೆ ಎಂದು ಭಾವಿಸುವ, ‘ಸ್ವರಾಜ್ಯ’ದ ಮಾದರಿಯಲ್ಲೆ ‘ವಿಶ್ವಗುರು ಭಾರತ’ದ ನಿರ್ಮಾಣಕ್ಕೆ ಕಂಕಣಬದ್ಧರಾಗಬಲ್ಲಂತಹ ಮನಸ್ಥಿತಿಯಿರುವ ‘ಶಿವಾಜಿ’ಗಳ ಅವಶ್ಯಕತೆಯಂತೂ ಬಹಳಷ್ಟಿದೆ. ಹೀಗಾಗಬೇಕಾದಲ್ಲಿ ಮೊದಲಿಗೆ ಶಿವಾಜಿ ಮಹಾರಾಜರನ್ನು ಕೇವಲ ಒಂದು ರಾಜ್ಯಕ್ಕೆ, ಒಂದು ಪಕ್ಷಕ್ಕೆ, ಒಂದು ಧರ್ಮಕ್ಕೆ, ಒಂದು ಜಾತಿಗೆ ಸೀಮಿತಗೊಳಿಸದೆ ಅವರ ಜೀವನ ಇಂದಿಗೆಷ್ಟು ಪ್ರಸ್ತುತವಾಗುತ್ತದೆ ಎಂಬುದರ ಕುರಿತು ತಾರ್ಕಿಕವಾದ, ನಿಷ್ಪಕ್ಷಪಾತವಾದ ಅಧ್ಯಯನವಾಗಬೇಕು. ಹಾಗು ಶಿವಾಜಿಯ ಹೆಸರಲ್ಲಿ ದೊಡ್ಡ ದೊಡ್ಡ ಕಟೌಟ್‍ಗಳನ್ನು ಹಾಕುವವರು, ಪ್ರತಿಮೆಗಳನ್ನು ಕಟ್ಟುವವರು ತಮ್ಮ ಜೀವನದಲ್ಲೂ ಅವರ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆಯೇ? ಎಂಬುದು ಸ್ವವಿಮರ್ಶೆಗೊಳಪಡಬೇಕು. ಇಂದು ಕೇವಲ ಬೈಕ್, ಕಾರುಗಳ ಮೇಲೆ ಸ್ಟಿಕರ್ ರೂಪದಲ್ಲಿ ರಾರಾಜಿಸುತ್ತಿರುವ ಶಿವಾಜಿ, ನಮ್ಮ ಮನೆ-ಮನಗಳನ್ನು ಪ್ರವೇಶಿಸಬೇಕು. ಅಂತೆಯೆ ಪ್ರತಿ ಮನೆಯಲ್ಲೂ ಮಾತೆ ಜೀಜಾಬಾಯಿ ಇದ್ದಾಗ ಮಾತ್ರ, ಶಿವಾಜಿಗಳ ನಿರ್ಮಾಣ ಸಾಧ್ಯವೆಂಬ ಸತ್ಯವನ್ನೂ ನಾವು ಅರಿತುಕೊಳ್ಳಬೇಕಾಗಿದೆ. ಇಲ್ಲಿ ಶಿವಾಜಿಯ ಬಾಲ್ಯದ ಕುರಿತು ಮಾತ್ರ ಪ್ರಸ್ತಾಪಿಸಲಾಗಿದೆ, ಆದರೆ ರಾಜಕಾರಣ, ರಾಜತಾಂತ್ರಿಕತೆ ಇತ್ಯಾದಿ ವಿಷಯಗಳಲ್ಲಿ ಇಂದಿಗೂ ಶಿವಾಜಿ ಮಹಾರಾಜರು ಪ್ರಸ್ತುತರಾಗುತ್ತಾರೆ. ಆ ಕುರಿತು ಇನ್ನೊಮ್ಮೆ ಮಾತನಾಡುವ.

Facebook ಕಾಮೆಂಟ್ಸ್

ಲೇಖಕರ ಕುರಿತು

Chaithanya Kudinalli

ಓದಿದ್ದು ಬಿಎಸ್ಸಿ, ಪ್ರಸ್ತುತ ಪತ್ರಿಕೋದ್ಯಮ ವಿದ್ಯಾರ್ಥಿ. ಹಾಗಾಗಿ ಓದು, ಬರವಣಿಗೆ, ತಿರುಗಾಟ ಮತ್ತು ಫೋಟೊಗ್ರಫಿ ಹವ್ಯಾಸ ಮಾತ್ರವಲ್ಲ ಕಾಯಕ ಕೂಡ. ರಾಜಕಾರಣ, ಇತಿಹಾಸ, ಪ್ರಚಲಿತ ವಿದ್ಯಮಾನಗಳು, ಕಥೆ, ಕಾದಂಬರಿ, ಸಿನಿಮಾ ಇವು ಆಸಕ್ತಿದಾಯಕ ವಿಷಯಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!