ಅಂಕಣ

ಪೂರ್ವಿಕಲ್ಯಾಣಿ

ರಾಮಸಂದ್ರ,ಹೊನ್ನವಳ್ಳಿ,ತಿರುಮಲಾಪುರ  ಯಾರಿಗೆ ಗೊತ್ತಿಲ್ಲ ಹೇಳಿ. ಹಾಗೆ ನಂಜಮ್ಮ,ಸತ್ಯಭಾಮೆ,ಕಂಠಿ ಜೋಯಿಸ್ರು ಕೂಡ ಗೊತ್ತಿರಲೇಬೇಕು.ಇವ್ರೆಲ್ಲಾ ನಿಮ್ಗೆ ಚೆನ್ನಾಗಿ ಗೊತ್ತಿದ್ದಾರೆ ಅಂದ್ರೆ ತಿಪಟೂರು ಏನ್ ಪರಿಚಯವಲ್ಲದ ಸ್ಥಳವೇನಲ್ಲ. ಒಂದು ತಾಲ್ಲೂಕು ಅಂದ್ರೆ ಹತ್ತಾರು ಹಳ್ಳಿ ಗಳು ಇರುತ್ತೆ. ಅಂತ ಹತ್ತಾರು ಹಳ್ಳಿಗಳಲ್ಲಿ ತಿಪಟೂರು ಪಟ್ಟಣದಿಂದ ಚಿತ್ರದುರ್ಗದ ದಾರೀಲಿ ಹದಿನಾಲ್ಕು ಮೈಲಿ ಹೋದ್ರೆ ಸಿಗುವ ಕಲ್ಲೂರು, ಮತ್ತೆರೆಡು ಮೈಲಿ ಹೋದ್ರೆ ಸಿಗೋ ಕಲ್ಕೆರೆಗಳೂ ಒಂದು.

ಎರಡು ಮೈಲಿ ಅಂತರವಿರುವ ಕಲ್ಕೆರೆ ಕಲ್ಲೂರು ಗ್ರಾಮಗಳ ನಡುವೆ ವ್ಯಾಪಾರ ವಹಿವಾಟುಗಳು, ಹೆಣ್ಣು ಗಂಡು ಕೊಟ್ಟು ತೆಗೆದುಕೊಳ್ಳುವುದು ,ಜಾತ್ರೆ,ಉತ್ಸವ ಸಂಭ್ರಮಗಳಲ್ಲಿ  ಪಾಲಾಗುವುದು ತುಂಬಾ ದಿನದಿಂದಲೂ ನಡೆಯುತ್ತಾ ಬಂದಿದೆ. ಕಲ್ಲೂರಿನ ವೀರಭದ್ರೇಶ್ವರನ ಗುಡಿ ದಾಟಿ ಬಲಕ್ಕೆ ತಿರುಗಿದರೆ  ಮುಂದೆ ಜಗುಲಿ,ಮನೆಯ ಹೆಂಚಿಗೆ ಸೂಜಿಮಲ್ಲಿಗೆ ಬಳ್ಳಿಯನ್ನು ಹಬ್ಬಿಸಿಕೊಂಡು ನಿಂತಿರುವ ಮನೆಯ ನಮ್ಮ ನಾಣಿ ಮಾವನದು.ಮನೆ ಅಷ್ಟು ದೊಡ್ಡದಾಗಿಲ್ಲದಿದ್ದರೂ, ಊರಿನಲ್ಲಿರುವ ಕೆಲವೇ ಕೆಲವು ಅನುಕೂಲಸ್ಥ ಮನೆಗಳಲ್ಲಿ ನಾಣಿ ಮಾವನ ಮನೆಯೂ ಒಂದು.

ನಾಣಿ ಮಾವನ ಹೆಂಡತಿ ಕಾವೇರತ್ತೆ ಕೈಯಲ್ಲಿ ಪಂಚವಾಳ ಹಿಡಿದು ಹಿತ್ತಲಿನಲ್ಲಿ ಬೆಳಗಿನ ತುಳಸಿ ಪೂಜೆಯಲ್ಲಿ ಮಗ್ನರಾಗಿದ್ದಾರೆ. ಪೂರ್ವಿಕಲ್ಯಾಣಿ ರಾಗದಲ್ಲಿ ನಿಬದ್ದವಾಗಿರುವ “
ನಾರಾಯಣ ಎಂಬ ಜಗದೊಡೆಯನ ಮಡದಿಯೇ ” ಎಂದು ಹಾಡುತ್ತಾ, ತುಳಸಿಯನ್ನು ಸುತ್ತುವರೆಯುತ್ತಿದ್ದಾರೆ. ನಾಣಿ ಮಾವ ಅಲ್ಲೆ ಹಿತ್ತಲಿನಲ್ಲಿ ಹಾಲು ಕರೆಯುತ್ತಿದ್ದಾರೆ. ಅಷ್ಟರಲ್ಲೇ ಯಾರೋ ಮುಂಬಾಗಿಲನ್ನು ಸರಿಸಿಕೊಂಡು ಮುಂದಿನ ಚೌಕವನ್ನು ದಾಟಿ ನಡುವಿನ ಮನೆಗಳನ್ನು ದಾಟಿಕೊಂಡು ಹಿತ್ತಲಿನ ಬಾಗಿಲಿಗೆ ಬಂದರು.

” ಯಾಕೋ,ಅತ್ತೆಗೆ ಕಲ್ಕೆರೆ,ಕಲ್ಕೆರೆ ಜನ,ತವರು ಯಾವುದು ಬೇಡ ಅಂತ ತೀರ್ಮಾನ ಮಾಡ್ದಂಗೆ ಇದೇ….”
ಎಂದು ಹೊರಗಿನಿಂದ ಬಂದ ವ್ಯಕ್ತಿ ಹೇಳಿದ.

” ಹೋ …ಸುದರ್ಶನ ..ಯಾವಾಗ ಬಂದ್ಯೋ..ನೀನ್ ಕಾಣ್ಲೇ ಇಲ್ಲ ನೋಡು ..ಎನ್ ಇಸ್ಟ್ ಹೊತ್ಗೆ ಕಲ್ಲೂರ್ ತನ್ಕ ಪ್ರಯಾಣ “

” ಅದೇ ಹೇಳುದ್ನಲ್ಲ ,..ನೀವು ಮರುತ್ರು ನಾವ್ ಮರೆಯಕ್ಕಾಗುತ್ತಾ…ನಿನ್ನೆ ಅಶ್ವಿನಿ ಮಗು ನಾಮಕರಣಕ್ಕೆ ಯಾಕೆ ಬರಲಿಲ್ಲ ಅಂತ ಕೇಳ್ಕಂಡು ಹೋಗಣ ಅಂತ ಬಂದೆ”

” ಏನಂತ ಹೆಸರಿಟ್ರೋ….ತುಂಬಾ ಜನ ಬಂದಿದ್ರೆನು? ತುಂಬಾ ಕಾರ್ ಎಲ್ಲಾ ಬಂದಿತ್ತಂತೆ , ಜೋಯಿಸ್ರು ಹೇಳಿದ್ರು ನಿನ್ನೆ ಸಂಜೆ “
ಎಂದು ನಾಣಿ ಮಾವ ಕೇಳಿದರು.

” ಅಯ್ಯೋ ಇನ್ನೇನ್ ಹೆಸ್ರು ಇಟ್ ಇರ್ತಾರೆ..ಜೋಸೆಪ್ ನೋ,ಅಂಥೋನಿಯೋ ಅಂತ ಇರುತ್ತೆ…ಅವ್ವುಕ್ಕೆ ಅವೇ ತಾನೆ ಹೆಸ್ರು. ನಮ್ಮಂಗೆ ಅನಿರುದ್ದ,ಕಾರ್ತಿಕ,ಫಣಿಶ ಎಲ್ ಇರುತ್ತೆ.ಆ ಜೋಯ್ಸ,ನಾಕು ಕಾಸು ದುಡ್ಡು ಸಿಗುತ್ತಂದ್ರೆ ಕೋಣುಂಗೂ ನಾಮಕರಣ ಮಾಡ್ಸುತ್ತೆ”

” ಹೇಳೋ…ಏನ್ ಅಂತ ಹೆಸ್ರು ಇಟ್ರೋ ಸುದರ್ಶನ..”
ಎಂದು ನಾಣಿ ಮಾವ ಮತ್ತೆ ಕೇಳಿದರು

” ಎಲ್ಲಾ ಅತ್ತೇನೆ ಹೇಳ್ತಿದಾರಲ್ಲಾ ,ನಾನೇನ್ ಹೇಳದು ಇದೆ. ಥಾಮಸ್ ಅಂತ ಇಟ್ರು.ಅದ್ ಹೋಗ್ಲಿ ಬಿಡಿ.ಮೊದ್ಲು ನೀವ್ಯಾಕೆ ನಾಮಕರಣಕ್ಕೆ ಬರಲಿಲ್ಲ ಅಂತ ಮೊದ್ಲು ಹೇಳಿ “
ಎಂದು ಸುದರ್ಶನ ಕೇಳಿದ.

” ಯಾಕೆ ಬರಲಿಲ್ಲ ಅಂತ ನಿನ್ಗೆ ಗೊತ್ತಿಲ್ವ….ನಾವು ಮೊದ್ಲಿನಿಂದ್ಲೂ ಆಚಾರ, ವಿಚಾರ ಪಾಲಿಸ್ಕಂಡು ಬಂದ್ ಮನೆ.ಜಾತಿ ಬಿಟ್ ಮನೆ ನೆರಳು ಕೂಡ ನನ್ ಮೈಗೆ ಸೋಕದಂಗೆ ಇದ್ದಿನಿ…”ಅಂತ ಕಾವೇರತ್ತೆ ಜೋರಾಗಿಯೇ ಹೇಳಿದಳು.

” ನಿನ್ನ ತವರು ಮನೆ ಜಾತಿ ಬಿಟ್ಟಿದೆ ಅನ್ತಿದ್ದಿಯಾ…ಅದು ನೀನೂ ಬೆಳೆದ ಮನೆ,ಗೊತ್ತಿದೆ ತಾನೆ…ನನ್ ತಂಗಿ ಯಾವನ್ನೋ ಕಟ್ಕಂಡು ಬಂದ್ರೆ ನಾನೇನ್ ಮಾಡಕ್ಕೆ ಆಗುತ್ತೆ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ” ಎಂದ ಸುದರ್ಶನ

” ಕುಲಕ್ಕೆ ಹೊರಗೆ….. ಕುಲಕ್ಕೆ ಹೊರಗಾದ್ರೆ ನಾಮಕರಣ,ಬಾಣಂತನ ಅಂತ  ಯಾಕೆ ಕರ್ಕಂಡು ಬರಬೇಕಿತ್ತು…ಅವ್ಳನ್ನ ಮನ್ಗೆ ಸೇರಿಸ್ದಲೇ ಇದ್ರೆ ಏನಾಗ್ತಿತ್ತು “

” ಅಯ್ಯೋ..ಅಣ್ಣನೇ ಹೋಗಿ ಕರ್ಕಂಡು ಬಂದ .ಇರೋ ಒಬ್ಳು ಮಗ್ಳನ್ನಾ ನಾವ್ ನೋಡ್ದಲೇ ಇದ್ರೆ ಇನ್ಯಾರು ನೋಡ್ತಾರೆ ಅಂತ ಹೇಳಿ …ಗಂಡ ಹೆಂಡತಿ ಇಬ್ರೂ ಹೋಗಿ ಬಂದ್ರು.ಅವ್ಳು ಕಾಯ್ತಿದ್ಳು..ಚೆಂಗ್ ಅಂತ ಓಡ್ ಬಂದ್ಳು…ಇಗ್ ಏನಾಯ್ತು ..ಅದು ನನ್ ಮನೆ …ಮೇಲಾಗಿ ನಿನ್ ಮನೆ.ನೀನ್ ಕಲ್ಕೆರೆಗೆ ಬರಬೇಕು …”

” ಅಯ್ಯೊ ನನ್ ಕಂದ …ನೀನಾದ್ರೂ ಇಷ್ಟ್ ಹೇಳ್ದ್ಯಾಲ್ಲ ….ಆವ್ಳನ್ನ ಬೇಗ ಕಳ್ಸು..ನನ್ ತವರು ಇಷ್ಟ್ ಹತ್ರ ಇದ್ರೂ ದೂರ ಆಗೊಲ್ಲ” ಅಂತ ನಗುನಗುತ್ತಾ ಹೇಳಿದಳು ಕಾವೇರಮ್ಮ

” ಆದ್ರೂ ಅತ್ತೆ ,ನನ್ ತಂಗಿ ಎಷ್ಟು ಧೈರ್ಯ ಮಾಡಿಯಾಳು ಅಂತೀನಿ…ಈ ಹೆಣ್ ಮಕ್ಳುಗೆ ಇರೋ ಧೈರ್ಯ ನಮ್ಗೆ ಬರಲ್ಲ….ಈ ಜಾಗತೀಕರಣದ ಪ್ರಭಾವದಿಂದ ಜಾತಿ,ಭೀತಿ ಎಲ್ಲಾ ಕೊಚ್ಚಿಕೊಂಡು ಹೋಗ್ತಾ ಇದೆ…”

” ಜಾಗತೀಕರಣದ ಪ್ರಭಾವದಿಂದ ಜಾಗತಿಕ ತಾಪಮಾನ ಹಾಗೂ ಮನಸ್ಸುಗಳಲ್ಲಿ ಕಲಹದ ತಾಪಮಾನ ಹೆಚ್ಚಾಗ್ತಿದೆ ಹೊರತು,,ಜಾತಿ ,ಧರ್ಮ ಎಲ್ಲಾ ಏಲ್ಲಿ ಕಮ್ಮಿ ಆಗಿದೆ ನೋಡು. ವೋಟ್ ಬ್ಯಾಂಕ್ ನಿಂತಿರದೆ ಜಾತಿ ಲೆಕ್ಕಾಚಾರದ್ ಮೇಲೆ..”
ಎಂದಳು ಕಾವೇರಮ್ಮ.

” ಆದ್ರೂ ಈ ಬೆಂಗ್ಳೂರು,ಬಾಂಬೆ ಇಲೆಲ್ಲಾ ಜಾತಿ ,ಧರ್ಮ ಹಾಳು ಮೂಳು ಯಾವ್ದು ಇಲ್ವಂತೆ,ಗೋತ್ತೇನು? ಎಲ್ಲಾ ಇರದು ನನ್ನಂಗೆ ವ್ಯವಸಾಯ ಮಾಡ್ಕಂಡು ಇರೋನಿಗೆ, ನಿನ್ನಂಗೆ ಇಲ್ಲೇ ತುಳಸಿ ಕಟ್ಟೆ ಸುತ್ಕಂಡು ,ಹಿಟ್ ಬೀಸ್ಕೋಂಡು ಇರೋಳಿಗೆ ಮಾತ್ರ,ಸಾಫ್ಟ್’ವೇರ್’ನೋರಿಗೆ ಇರೋಲ್ಲ.ಇದಕ್ಕೆ ನನ್ನ ತಂಗಿನೆ ಸಾಕ್ಷಿ. ಏನೋ ನಾಕ್ ಕಾಸು ಕೈಲಿ ಆಡುತ್ತೆ ಅಂತ ಬೆಂಗ್ಳೂರ್’ಗೆ ಅಣ್ಣ ಕಳಿಸ್ದ.ಅವಳು ಯಾವುನ್ನೋ ಕಟ್ಕಂಡು ಬಂದ್ಲು”

” ಹಾ…ನೀವ್ ಅಲ್ಲೆ ತಪ್ ಮಾಡಿದ್ದು..ಒಂದ್ ನಾಕು ಒದ್ದು ಬುದ್ದಿ ಹೇಳಿದ್ರೆ ,ಏನು ಆಗ್ತಿರಲಿಲ್ಲ.ಮೇಲಾಗಿ ಜನಕ್ಕೆ ನಮ್ಮ ಧರ್ಮ ,ಸಂಸ್ಕೃತಿ ಮೇಲೆ ನಮ್ಗೆ ಹೆಮ್ಮೆ ಇರಬೇಕು.ಆವಾಗ್ಲೆ ಹಿಮಾಲಯದಂತಿರೋ ನಮ್ಮ ಸಂಸ್ಕೃತಿ ,ಜಾಗತೀಕರಣ ಇದ್ರು ಅಷ್ಟೇ..ಗಣಕೀಕರಣ ಆದ್ರೂ ಆಷ್ಟೆ..ಕಿಂಚಿತ್ತೂ ಕರಗಲ್ಲ

…”

” ಆದ್ರೂ ಈಗ ಅಶ್ವಿನಿ,ನಮ್ಮ ಆಚಾರ ವಿಚಾರನೇ ಪಾಲಿಸ್ಕಂಡ್ರೆ  ಅವ್ಳು ನಮ್ಮೋಳೆ ಆಗ್ತಾಳೆ ಅಲ್ವಾ.ಧರ್ಮ ಬೇರೆ ಇರ ಬಹುದು ಅಷ್ಟೆ ಅಲ್ವಾ” ಎಂದು ಸುದರ್ಶನ ಕೇಳಿದ

” ನೀನ್ ಹೇಳ್ತೀರದು ದಿಟ ಇರಬಹುದು..ಅದ್ರೆ ಈ ದೇಶದಲ್ಲಿ ನಮ್ಮ ಸಂಸ್ಕೃತಿ ,ಜಾತಿಯೊಡನೆ ಬೆಸೆದು ಬಿಟ್ಟಿದೆ.ಇನ್ನು ಹೇಳೊದಾದ್ರೆ ಇಲ್ಲಿ ನಮ್ಮ ಸಂಸ್ಕೃತಿನೇ ನಮ್ಮ ಧರ್ಮ ..ಅಶ್ವಿನಿ ನಮ್ಮ ಆಚಾರ ಪಾಲ್ಸುದ್ರೂ ಅವಳ ಗಂಡ ಎನ್ ಪಾಲುಸ್ತಾನೆ…ಇಬ್ರೂ ಬೇರೆ ಬೇರೆ ಸಂಸ್ಕೃತಿ ಪಾಲಿಸಿದ್ರೆ ,ಅವರ ಧರ್ಮವನ್ನು ವಿಶ್ಲೇಷಿಸುವುದೆ ಕಷ್ಟ ಆಗುತ್ತೆ ಅಥವಾ ಅವರದೆ ಒಂದು ಜಾತಿಯೋ ,ಧರ್ಮವೋ ಆಗಿಬಿಡತ್ತೆ. ಸಂಸ್ಕೃತಿಯಿಂದ ಜಾತಿಯೇ ಹೊರತು,ಜಾತಿಯಿಂದ ಸಂಸ್ಕೃತಿಯಲ್ಲ”

” ಅಕಸ್ಮಾತ್ ಈಗ ಅಶ್ವಿನಿ ಮತ್ತೆ ಅವಳ್ ಗಂಡ ಬೇರೆ ಬೇರೆ ಸಂಸ್ಕೃತಿ ಪಾಲಿಸಿದ್ರೆ ,ದಾಂಪತ್ಯ ಜೀವನ ಚೆನ್ನಾಗಿರುತ್ತೆ ಅಂತ್ಯಾ”

” ಅದನ್ನ ನನ್ ಹೇಳದು ಕಷ್ಟ….ದಂಪತಿಗಳಿಬ್ಬರಿಗೂ ಇಬ್ಬರ ನಡುವಿನ ಆಚರಣೆಯಲ್ಲಿ ಸಂಸ್ಕೃತಿಯಲ್ಲಿ ಗೌರವ ಇದ್ದರೆ ಖಂಡಿತವಾಗಿಯೂ ಚೆನ್ನಾಗಿ ಇರುತ್ತಾರೆ.ಈಗ ನೋಡು ಸಕ್ಕರೆನಾ ನಾವ್ ಎಷ್ಟು ನೀರಲ್ಲಿ ಕರಗುಸುದ್ರು ತಳದಲ್ಲಿ ಸ್ವಲ್ಪನಾದ್ರು ಉಳಿಯುತ್ತೆ.ಹಾಗೆ ನಾವು ಏನೇ ಬೇರಿತೀವಿ ಅಂದ್ರು ಭಿನ್ನಾಭಿಪ್ರಾಯಗಳು ಇದ್ದೆ ಇರುತ್ತದೆ..”

” ಬೇರೆ ಸಂಸ್ಕೃತಿ ಜೊತೆ ನಾವ್ ಬೇರೆತ್ರೆ ನಮ್ಗೆ ಉಪಯೋಗ ಅಲ್ವಾ… ಸಂಸ್ಕೃತಿ ಗಳ ಮಧ್ಯೆ ತಗಳದು,ಕೊಡದು ಇದ್ರೆ ಚೆನ್ನ ಅಲ್ವಾ”

“ತಗಳದು ಕೊಡದು ಇದ್ರ್ ಚೆನ್ನ…ನಾನು ಒಪ್ಕೋತಿನಿ .ಆದ್ರೆ ಇದರಿಂದ ಮೂಲ ಸಂಸ್ಕೃತಿ ಗೆ ಧಕ್ಕೆ ಬರ್ತಾ ಇದೆ.ನಮ್ಮ ಭಾರತೀಯ ಸಂಸ್ಕೃತಿ ನಮ್ಮ ಹಿಮಾಲಯದಷ್ಟೆ ಎತ್ತರದ ಶ್ರೇಷ್ಠತೆಯನ್ನೂ,ಹಾಗೂ ಗೋವಿನ ಹಾಲಿನಷ್ಟೆ ಶುಭ್ರವಾಗಿದೆ.ಆದ್ದರಿಂದ ನಾವು ಬೇಕಾದರೆ ಕೊಡಬಹುದಷ್ಟೆ,ನಾವು ಎಂದಿಗೂ ಎರವಲು ಪಡೆಯಬಾರದು.ಹಾಗೂ ನಮ್ಮ ಜನನೂ ನಮ್ಮ ಸಂಸ್ಕೃತಿಯಂತ ಹೆಮ್ಮೆಯಿಂದ ಇರಬೇಕು. ಪರರ ಸಂಸ್ಕೃತಿಗೆ ಮಾರುಹೋಗಬಾರದು”

” ಕಾವೇರಮ್ಮ…ಏನ್ ಅವ್ನ್ಗೆ ಉಪದೇಶ ಮಾಡ್ತ ಇರ್ತ್ಯೋ…ಹಾಲೋ,ಕಾಫಿಯೋ ತಂದ್ ಕೋಡ್ತ್ಯೋ
…”ಎಂದು ನಾಣಿ ಮಾವ ತುಂಬಿದ ಹಾಲಿನ ತಂಬಿಗೆಯನ್ನು ತಮ್ಮ ಮಡದಿಯ ಕೈಗೆ ಇತ್ತರು.

” ಥೂ ನನ್ ಬುದ್ದಿಗಿಷ್ಟು. ಆ ಜಾತಿ ಬಿಟ್ಟೋಳ್ ಮಾತ್ ಆಡ್ಕಂಡು ಕೂತಿ ಎಲ್ಲಾ ಮರೆತ್ ಹೋಯ್ತು..ಈಗ್ ಹೊರಟೆ “
ಅಂತ ಹೇಳ್ತಾ ಅದೇ ಪೂರ್ವಿಕಲ್ಯಾಣಿ ರಾಗದಲ್ಲಿ “
ನಾರಾಯಣನೆಂಬ ಜಗದೊಡನೆಯನ ಮಡದಿಯೇ ” ಎಂದು ಹಾಡುತ್ತಾ ಕಾವೇರತ್ತೆ ಮನೆಯೊಳಗಡೆ ಹೊರಟರು.

” ಅತ್ತೆ ..ಮತ್ತೆ ಅದೇ ತಪ್ಪು ಮಾಡ್ ಬ್ಯಾಡ.ಜಾತಿ ಬಿಟ್ಟೋಳು ಅನ್ ಬ್ಯಾಡ . ಸಂಸ್ಕೃತಿ ಬಿಟ್ಟೋಳು ಅನ್ನು” ಅಂದ ಸುದರ್ಶನ.

Facebook ಕಾಮೆಂಟ್ಸ್

ಲೇಖಕರ ಕುರಿತು

Abhilash T B

Software engineer by profession. He is from Tipatoor . Writing story is his hobby.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!