Featured ಅಂಕಣ

ನಿಮ್ಮ ಟ್ಯೂಮರ್’ನ್ನು ಕಾಯ್ದಿರಿಸಿ…

ಯಾವುದೇ ಕ್ಷೇತ್ರವಾಗಿರಲಿ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಬದಲಾವಣೆಯನ್ನು ಕಾಣುತ್ತಿರುತ್ತದೆ, ವೃದ್ಧಿಯಾಗಿತ್ತಿರುತ್ತದೆ. ಅದು ಅವಶ್ಯಕವೂ ಹೌದು! ವೈದ್ಯಕೀಯ ಕ್ಷೇತ್ರವೂ ಇದಕ್ಕೇನು ಹೊರತಲ್ಲ. ಅದರಲ್ಲೂ ಕ್ಯಾನ್ಸರ್’ನಂತಹ ಖಾಯಿಲೆಗಳ ವಿಚಾರ ಬಂದಾಗ ಬದಲಾವಣೆ, ಬೆಳವಣಿಗೆ ಅತ್ಯವಶ್ಯಕ. ದಿನೇ ದಿನೇ ಹೆಚ್ಚುತ್ತಿರುವ ಇಂತಹ ಖಾಯಿಲೆಗಳಿಗೆ ಹೊಸ ಚಿಕಿತ್ಸೆಯ ಬಗ್ಗೆ, ಹೊಸ ಉಪಕರಣಗಳ ಬಗ್ಗೆ ಹಾಗೂ ರೋಗಿಗಳಿಗೆ ಸಹಾಯಕವಾಗುವಂತಹ ಹೊಸ ವ್ಯವಸ್ಥೆಗಳ ಬಗ್ಗೆ ಯೋಚಿಸುವುದು ಅನಿವಾರ್ಯ. ಅಂತಹದೇ ನಿಟ್ಟಿನಲ್ಲಿ ಫಿಲಿಡೆಲ್ಫಿಯಾ ಮೂಲದ ’ಸ್ಟೋರ್ ಮೈ ಟ್ಯೂಮರ್’ (http://www.storemytumor.com/) ಎಂಬ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ.

    ಒಮ್ಮೆ ಕ್ಯಾನ್ಸರ್ ಇರುವುದು ಪತ್ತೆಯಾಗಿ, ಚಿಕಿತ್ಸೆ ಆರಂಭಿಸುವಾಗ ಯಾರಿಗೂ ಕೂಡ ಚಿಕಿತ್ಸೆ ನಿಜಕ್ಕೂ ಪರಿಣಾಮಕಾರಿಯಾಗಬಲ್ಲದೋ ಅಥವಾ ಇಲ್ಲವೋ ಎನ್ನುವುದು ತಿಳಿದಿರುವುದಿಲ್ಲ. ಮುಂದೆ ಚಿಕಿತ್ಸೆಯನ್ನು ಬದಲಾಯಿಸುವಂತಾದರೂ ಆಗಬಹುದು. ಗಮನಿಸಬೇಕಾದ ಒಂದಂಶವೆಂದರೆ ಕ್ಯಾನ್ಸರ್’ ಚಿಕಿತ್ಸೆಗೆ ಪ್ರತಿಯೊಬ್ಬನು ಒಂದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾನೆ ಎಂದು ಹೇಳಲಾಗುವುದಿಲ್ಲ. ಹಾಡ್’ಕಿನ್ಸ್ ಲಿಂಫೋಮ ಎಂಬ ಕ್ಯಾನ್ಸರ್ ಎರಡು ವ್ಯಕ್ತಿಗಳಿಗೆ ಬಂದಿದೆ ಎಂದಿಟ್ಟುಕೊಳ್ಳಿ, ಇಬ್ಬರಿಗೂ ಹಾಡ್’ಕಿನ್ಸ್ ಲಿಂಫೋಮಾಗೆ ಬೇಕಾಗುವಂತೆ ಒಂದೇ ತೆರನಾದ ಚಿಕಿತ್ಸೆಯನ್ನು ಕೊಟ್ಟಾಗ, ಇಬ್ಬರ ದೇಹವೂ ಒಂದೇ ತೆರನಾಗಿ ಪ್ರತಿಕ್ರಿಯಿತ್ತದೆ ಎಂದು ಹೇಳಲಾಗುವುದಿಲ್ಲ. ಇಬ್ಬರ ದೇಹವೂ ಬಹಳ ಭಿನ್ನವಾಗಿ ವರ್ತಿಸಬಹುದು. ಕ್ಯಾನ್ಸರ್ ರೋಗಿಗಳು ( ಹಾಗೆ ಆಂಕಾಲಜಿಸ್ಟ್’ಗಳು ಕೂಡ) ಫಸ್ಟ್ ಲೈನ್ ಆಫ್ ಥೆರಪಿ ಅಂತ ಏನಿದೆಯೋ ಅಂದರೆ ಪ್ರಸ್ತುತ ಎಲ್ಲೆಡೆ ವ್ಯಾಪಕವಾಗಿ ಅಳವಡಿಸಿಕೊಂಡಿರುವ ಚಿಕಿತ್ಸಾಕ್ರಮ ಏನಿದೆಯೋ ಅದನ್ನ ಮೀರಿ ಯೋಚಿಸುತ್ತಲೇ ಇಲ್ಲ ಎಂದು ಹೇಳಲಾಗುತ್ತಿದೆ. ಯೋಚಿಸುವುದಾದರೂ ಹೇಗೆ? ಈ ರೀತಿ ವೈಯಕ್ತೀಕರಿಸಿದ ಚಿಕಿತ್ಸೆ (Personalized treatment) ಸಿಗುವ ಸಾದ್ಯತೆಗಳಿವೆ ಎನ್ನುವುದು ತಿಳಿದಿರಬೇಕಲ್ಲ. ಈ ವ್ಯವಸ್ಥೆ ಇತ್ತೀಚೆಗೆ ಆರಂಭವಾಗಿರುವುದರಿಂದ ಇನ್ನೂ ಸಾಕಷ್ಟು ಜನಕ್ಕೆ ಇದರ ಬಗ್ಗೆ ತಿಳಿಯಪಡಿಸಬೇಕಾಗಿದೆ.

    ಈ ರೀತಿಯ ವೈಯಕ್ತೀಕರಿಸಿದ ಚಿಕಿತ್ಸೆ (Personalized treatment) ಸಿಗಬೇಕು ಎಂದಾದರೆ ಎರಡು ಮುಖ್ಯ ಕೆಲಸವಾಗಬೇಕು. ಒಂದು, ಟ್ಯೂಮರ್ ಟಿಶ್ಯೂಗಳು ಲಭ್ಯವಾಗಿರಬೇಕು ಅಥವಾ ಶೇಖರಿಸಿ ಇಡಬೇಕು. ಎರಡು, ಶೇಖರಣೆ ಸರಿಯಾದ ರೀತಿಯಲ್ಲಿ ಆಗಿರಬೇಕು. ಇಮ್ಯುನೋಥೆರಪಿ, ಜೆನೆಟಿಕ್ ಸೀಕ್ವೆಂಸಿಂಗ್, ಬಯೋಮಾರ್ಕರ್ ಟೆಸ್ಟಿಂಗ್, ಡ್ರಗ್ ಹಾಗೂ ಕೀಮೋಥೆರಪಿ ಸೆನ್ಸಿಟಿವಿಟಿ ಟೆಸ್ಟಿಂಗ್, ಸ್ಟೆಮ್ ಸೆಲ್ ಥೆರಪಿ ಇವೆಲ್ಲದಕ್ಕೂ ರೋಗಿಯ ಟ್ಯೂಮರ್’ನ ಜೀವಕೋಶಗಳು ಬೇಕೇ ಬೇಕು. ಹಾಗಾಗಿ ಇವುಗಳನ್ನ ಶೇಖರಿಸುವುದು ಅತ್ಯವಶ್ಯಕ.

ಸಾಮಾನ್ಯವಾಗಿ  ಒಬ್ಬ ಕ್ಯಾನ್ಸರ್ ರೋಗಿ ಸರ್ಜರಿಗೆ ಒಳಗಾದಾಗ, ಟ್ಯೂಮರ್’ನ ಸ್ವಲ್ಪ ಭಾಗವನ್ನು ಪ್ಯಾಥಾಲಜಿ ವಿಭಾಗದ ಪ್ರಯೋಗಾಲಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಅದನ್ನು ಪ್ಯಾರಾಫಿನ್’ನಲ್ಲಿ ಇರಿಸಿ, ಡಯಾಗ್ನೋಸ್ ಮಾಡುವ ಸಲುವಾಗಿ ಇಟ್ಟುಕೊಂಡು ಪರೀಕ್ಷೆಗೆ ಒಳಪಡಿಸಿ ನಂತರ ತೆಗೆದು ಹಾಕಲಾಗುತ್ತದೆ. ಒಂದು ವೇಳೆ ರೋಗಿಯ ಮೇಲೆ ಸ್ಟ್ಯಾಂಡರ್ಡ್ ಥೆರಪಿ ಪರಿಣಾಮಕಾರಿಯಾಗದಿದ್ದಲ್ಲಿ, ಅಥವಾ ಕೀಮೋನ ಏಜೆಂಟ್’ಗಳಿಗೆ ಪ್ರತಿರೋಧವನ್ನು ಬೆಳೆಸಿಕೊಂಡಲ್ಲಿ ಅಥವಾ ಕ್ಯಾನ್ಸರ್ ಪುನಃ ಉಂಟಾದ ಪಕ್ಷದಲ್ಲಿ ಟಾರ್ಗೆಟೆಡ್ ಥೆರಪಿ ನೀಡುವಂತಹ ಅಥವಾ ಪರ್ಸನಲೈಸ್ ಚಿಕಿತ್ಸೆ ಕೊಡಲು, ಆ ನಿಟ್ಟಿನಲ್ಲಿ ಪರೀಕ್ಷೆಗಳನ್ನು ಮಾಡಲು ಟ್ಯೂಮರ್ ಸೆಲ್ ಲಭ್ಯವಿರುವುದಿಲ್ಲ. ಬದಲಾಗಿ, ಟ್ಯೂಮರ್’ನ್ನು ಸರಿಯಾದ ರೀತಿಯಲ್ಲಿ ಶೇಖರಿಸಿಟ್ಟಲ್ಲಿ ರೋಗಿಯು ಆತನಿಗೆ ಹೆಚ್ಚು ಉಪಯುಕ್ತವಾಗುವಂತಹ ಚಿಕಿತ್ಸೆಯನ್ನು ಆರಿಸಿಕೊಳ್ಳುವ ಅವಕಾಶ ಸಿಗುತ್ತದೆ. ಅಂತಹ ವ್ಯವಸ್ಥೆಯನ್ನು ಸ್ಟೋರ್ ಮೈ ಟ್ಯೂಮರ್ ಸಂಸ್ಥೆ ಒದಗಿಸಿಕೊಡುತ್ತಿದೆ.

   “ಟ್ಯೂಮರ್’ನ್ನು ಶೇಖರಿಸಿ ಇಡುವುದು ಕ್ಯಾನ್ಸರ್ ರೋಗಿಗಳಿಗೆ ಒಂದು ರೀತಿಯ ಇನ್ಶೂರೆನ್ಸ್ ಪಾಲಿಸಿ ಇದ್ದಂತೆ” ಎನ್ನುತ್ತಾರೆ ಸ್ಟೋರ್ ಮೈ ಟ್ಯೂಮರ್ ಸಂಸ್ಥೆಯ ಸಿ.ಇ.ಒ ಮೈಕಲ್ ಸದಾಕ. ಹಾಗೆ ಮುಂದುವರೆದು “ಸದ್ಯ ಕ್ಯಾನ್ಸರ್ ಚಿಕಿತ್ಸೆಯು ವೈಯಕ್ತೀಕರಿಸಿದ ಚಿಕಿತ್ಸಾ ಕ್ರಮವನ್ನು ಅಳವಡಿಸಿಕೊಳ್ಳುವ ದಿಕ್ಕಿನಲ್ಲಿ ಸಾಗುತ್ತಿದೆ. ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ಟ್ಯೂಮರ್ ಸೆಲ್. ಹಾಗಾಗಿ ಅದನ್ನು ಶೇಖರಿಸಿಡುವುದು ಈ ದಿಕ್ಕಿನಲ್ಲಿ ಮೊದಲ ಹೆಜ್ಜೆ. ಸ್ಟೋರ್ ಮೈ ಟ್ಯೂಮರ್ ಆ ಮೊದಲ ಹೆಜ್ಜೆಯನ್ನು ಇಟ್ಟಿದೆ.” ಎನ್ನುತ್ತಾರೆ.

ಟ್ಯೂಮರ್’ನ್ನು ಕಾಯ್ದಿರಿಸುವುದು ಹಲವು ರೀತಿಯಲ್ಲಿ ಸಹಾಯಕವಾಗಬಹುದು. ಮೊದಲೇ ತಿಳಿಸಿದಂತೆ ಒಂದು ಪರ್ಸನಲೈಸಡ್ ವ್ಯಾಕ್ಸಿನ್’ನ್ನು ಕಂಡುಕೊಳ್ಳುವಲ್ಲಿ!  ಈ ವ್ಯಾಕ್ಸಿನ್ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸರ್ಜರಿ ಹಾಗೂ ಕೀಮೋ ನಂತರ ಉಳಿದ ಕೆಲವೇ ಕೆಲವು ಕ್ಯಾನ್ಸರ್ ಸೆಲ್’ನ್ನು ನಾಶಪಡಿಸುವಂತೆ ಮಾಡಬಹುದು. ಇದರಿಂದಾಗ ಕ್ಯಾನ್ಸರ್ ಪುನಃ ಉಂಟಾಗುವುದನ್ನ ತಪ್ಪಿಸಬಹುದು ಅಥವಾ ಸಾಕಷ್ಟು ಸಮಯದವರೆಗೆ ಕ್ಯಾನ್ಸರ್ ರಹಿತವಾಗಿರುವಂತೆ ಮಾಡಲು ಸಹಾಯಕವಾಗುತ್ತದೆ. ಹಾಗೆಯೇ ಟಿ-ಸೆಲ್ ಥೆರಪಿಯಲ್ಲೂ ಸಹಾಯಕವಾಗಿದೆ. ಅಂದರೆ ನಮ್ಮಲ್ಲಿರುವ ಟಿ-ಸೆಲ್’ನ್ನು ಸಜ್ಜುಗೊಳಿಸಿ ಕ್ಯಾನ್ಸರ್’ನ್ನು ಗುರುತಿಸುವಂತೆ ಮಾಡಿ, ಅವುಗಳನ್ನ ನಾಶ ಪಡಿಸುವಲ್ಲಿ ಸಹಾಯಕವಾಗಲಿದೆ.

   ಅಲ್ಲದೇ ಕೀಮೋಥೆರಪಿ ಸೆನ್ಸಿಟಿವಿಟಿ ಟೆಸ್ಟ್’ಗಳಲ್ಲಿ ಕೂಡ ಈ ಶೇಖರಿಸಿಟ್ಟ ಟ್ಯೂಮರ್ ಸೆಲ್ ಬಳಸಿಕೊಳ್ಳಬಹುದು. ಕೀಮೋ ಥೆರಪಿ ಸಾಕಷ್ಟು ಸೈಡ್ ಎಫೆಕ್ಟ್’ಗಳನ್ನು ಉಂಟು ಮಾಡುತ್ತದೆ. ಒಂದು ವೇಳೆ ಸರಿಯಾದ ಕಾಂಬಿನೇಷನ್ ಬಳಸದೇ ಇದ್ದಲ್ಲಿ ಸುಮ್ಮನೇ ಯಾವುದೇ ಉಪಯೋಗವಿಲ್ಲದೇ ಕೇವಲ ಸೈಡ್ ಎಫೆಕ್ಟ್’ಗಳನ್ನು ಅನುಭವಿಸುವಂತಾಗುತ್ತದೆ. ಟ್ಯೂಮರ್ ಮೇಲೆ ಜೆನೆಟಿಕ್ ಟೆಸ್ಟ್ ಮಾಡಿ, ಕೀಮೋನ ಯಾವ ಏಜೆಂಟ್ ಆ ಟ್ಯೂಮರ್ ಮೇಲೆ ಅತ್ಯಂತ ಪರಿಣಾಮಕಾರಿ ಎಂದು ಗುರುತಿಸಿ ಅಂತಹ ಏಜೆಂಟ್’ಗಳ ಕಾಂಬಿನೇಷನ್ ಬಳಸುವಂತೆ ಮಾಡಬಹುದು. ಇನ್ನು ಈ ಟ್ಯೂಮರ್ ಸೆಲ್’ಗಳ ಮೇಲೆ ಜೆನೆಟಿಕ್ ಸೀಕ್ವೆಂಸಿಂಗ್ ನಡೆಸಿ ಆಂಕಾಲಜಿಸ್ಟ್’ಗಳು ಕೇವಲ ಕ್ಯಾನ್ಸರ್ ಜೀವಕೋಶಗಳನ್ನ ಮಾತ್ರ ಗುರಿಯನ್ನಾಗಿಸಿವಂತೆ ಮಾಡಿ, ಆರೋಗ್ಯಕರ ಜೀವಕೋಶಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬಹುದು. ಹೀಗೆ ಈ ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸುವುದಕ್ಕೆ ಟ್ಯೂಮರನ್ನು ಸರಿಯಾದ ರೀತಿಯಲ್ಲಿ ಶೇಖರಿಸಿ ಇಡವುದು ಅನಿವಾರ್ಯ. ಅಂತಹ ವ್ಯವಸ್ಥೆ ಸ್ಟೋರ್ ಮೈ ಟ್ಯೂಮರ್ ಸಂಸ್ಥೆ ಮಾಡಲಿದೆ.

     ಭವಿಷ್ಯದಲ್ಲಿ  ಎಲ್ಲಾ ರೀತಿಯ ಆಯ್ಕೆಗಳನ್ನು ಹೊಂದಲು ಬಯಸುವವರು, ಉತ್ತಮ ಚಿಕಿತ್ಸಾ ಕ್ರಮ ಹಾಗೂ ತಂತ್ರಜ್ಞಾನದ ಲಾಭ ಪಡೆದುಕೊಳ್ಳಲು ಬಯಸುವವರು, ಮುಂದೆ ಯಾವ ಚಿಕಿತ್ಸಾ ಕ್ರಮ ಬಳಸಿದರೆ ಖಾಯಿಲೆ ಕಡಿಮೆಯಾಗಬಹುದು ಎಂದು ಯೋಚಿಸುವ ಬದಲು, ಒಂದು ಪರ್ಸನಲೈಸಡ್ ವ್ಯಾಕ್ಸಿನ್ ಹೊಂದಲು ಬಯಸುವವರು, ಈಗಾಗಲೇ ಕೀಮೋ ಹಾಗೂ ರೇಡಿಯೇಶನ್’ನಿಂದ ಬಳಲಿದವರು ಈ ಟ್ಯೂಮರ್’ನ್ನು ಶೇಖರಿಸಿಡುವ ಕ್ರಮವನ್ನು ಆಯ್ಕೆ ಮಾಡಿಕೊಳ್ಳಬಹುದು. ಒಂದು ವೇಳೆ ಕ್ಯಾನ್ಸರ್ ರೋಗಿ ಹಾಗೆ ಬಯಸಿದಲ್ಲಿ ಸ್ಟೋರ್ ಮೈ ಟ್ಯೂಮರ್ ಸಂಸ್ಥೆಯವರೇ ಒಂದು ವಿಶೇಷ ಕಿಟ್’ನ್ನು ಕಳುಹಿಸಿ ಕೊಡುತ್ತಾರೆ.

         ಸ್ಟೋರ್ ಮೈ ಟ್ಯೂಮರ್ ಸಂಸ್ಥೆ ಇದೀಗ ಇನ್ನೂ ಆರಂಭಿಕ ಹಂತದಲ್ಲಿದೆ. ವೈಯಕ್ತೀಕರಿಸಿದ ಚಿಕಿತ್ಸಾಕ್ರಮದತ್ತ ಇಟ್ಟಿರುವ ಮೊದಲ ಹೆಜ್ಜೆಯಷ್ಟೇ ಇದು! ಇದೇ ನಿಟ್ಟಿನಲ್ಲಿ ಇನ್ನೂ ಸಾಕಷ್ಟು ಬೆಳವಣಿಗೆಗಳಾಗುವ ಅವಶ್ಯಕತೆ ಇದೆ. ಅಲ್ಲದೇ ಈ ರೀತಿಯ ವ್ಯವಸ್ಥೆಗಳು ಎಲ್ಲಾ ದೇಶಗಳಲ್ಲಿಯೂ ಲಭ್ಯವಾಗುವಂತಹ ವ್ಯವಸ್ಥೆಗಳಾಗಬೇಕು. ಅದರ ಜೊತೆಗೆ ಇದಕ್ಕೆ ತಗುಲುವ ವೆಚ್ಚವನ್ನು ಭರಿಸುವಷ್ಟು ಎಲ್ಲರೂ ಶಕ್ತರಾಗಿರುವುದಿಲ್ಲ. ಇರುವ ಚಿಕಿತ್ಸೆಯನ್ನ ತೆಗೆದುಕೊಳ್ಳಲು ಹಣ ಹೊಂದಿಸುವುದೇ ಕಷ್ಟಕರವಾಗಿರುತ್ತದೆ. ಅಂಥದ್ದರಲ್ಲಿ ಪರ್ಸನಲೈಸಡ್ ವ್ಯಾಕ್ಸಿನ್ ಅಥವಾ ಇನ್ನಷ್ಟು ಟೆಸ್ಟಿಂಗ್’ಗಳಿಗೆ ಒಳಪಡಿಸುವುದು ಹೇಗೆ? ಹಾಗಾಗಿ ಈ ವ್ಯವಸ್ಥೆಗಳು ಕಡಿಮೆ ವೆಚ್ಚದಲ್ಲಿ ಸಿಗುವಂತೆ ಕೂಡ ಆಗಬೇಕಾಗಿದೆ. ಆದರೆ ಅದಕ್ಕೆ ಇನ್ನೂ ಸಾಕಷ್ಟು ವರ್ಷಗಳೇ ಬೇಕೇನೋ?!! ಸದ್ಯದ ಮಟ್ಟಿಗೆ ಇಂತಹ ವ್ಯವಸ್ಥೆಯೊಂದು ಆರಂಭಗೊಂಡಿದೆಯಲ್ಲ ಎಂದು ಯೋಚಿಸಿ ಸಂತಸಪಡಬಹುದು!!

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!