ಅಂಕಣ

ತಪ್ಪು ಯಾರೇ ಮಾಡಲಿ ತಪ್ಪು ತಪ್ಪೇ ತಾನೆ!?

ಆಕೆ ಅವಿವಾಹಿತೆ. ಅನೈತಿಕ  ಸಂಬಂಧ ನಡೆದದ್ದು ವರ್ಷದ ಹಿಂದೆ. ಇದೀಗ ಆಕೆಗೆ ಮಗುವಾಗಿದೆ. ಒಂಭತ್ತು ತಿಂಗಳು ಗರ್ಭ ಹೊತ್ತು ಕಳೆದ ಆಕೆ ಅಲ್ಲಿಯವರೆಗೂ ಮೌನವಾಗಿದ್ದು ಇದೀಗ  ಏಕಾಏಕಿ ಎಚ್ಚರಗೊಂಡು ಅತ್ಯಾಚರವೆಂದು ಕೇಸ್ ದಾಖಲಿಸಿದ್ದಾಳೆ!  ಸಾಲದಕ್ಕೆ ಸಂಭಂಧವೇ ಇಲ್ಲದ ಜಾತಿ ದೌರ್ಜನ್ಯದ ಕೇಸನ್ನೂ ಅದರ ಜೊತೆಗೆ ಸೇರಿಸಲಾಗಿದೆ! ಇದೀಗ ಇಲ್ಲಿ ಆಕೆಯ ಗರ್ಭಕ್ಕೆ ‘ಕಾರಣಕರ್ತನಾದ’ ವ್ಯಕ್ತಿ ಎಲ್ಲರ ಕಣ್ಣಲ್ಲೂ ಏಕೈಕ ಅಪರಾಧಿ. ಬಹುಷಃ ಕಾನೂನು ಕೂಡ ಅದನ್ನೇ ಹೇಳಲಿದೆ. ಆದರೆ ಆಕೆ!? ಊಹುಂ ಆಕೆ ಮುಗ್ದೆಯಂತೆ, ಅಸಹಾಯಕಿಯಂತೆ! ವಿಚಿತ್ರ ಅನ್ನಿಸಿದರೂ ಇದು ಸತ್ಯ. ಇಲ್ಲಿ ಹೆಣ್ಣು ಸಮಾಜದ ಕಣ್ಣಿಗೆ, ಕಾನೂನಿನ ಕಣ್ಣಿಗೆ ಓರ್ವ ಅಮಾಯಕ ಹುಡುಗಿಯಾಗಿ ಕಾಣುತ್ತಾಳೆ. ಆದ್ದರಿಂದ ಅವಳೇಳಿದ್ದೇ ತರ್ಕವೆಂಬಂತೆ ನಂಬಿ ಪುರುಷನೋರ್ವನನ್ನೇ ಕಟಕಟೆಗೆ ಎಳೆಯಲಾಗುತ್ತದೆ. ಪುರುಷ ಅಪರಾಧಿಯಾಗಿದ್ದರೆ ಶಿಕ್ಷೆಯಾಗುವುದು ತಪ್ಪಲ್ಲ ಬಿಡಿ. ಆದರೆ ಇಲ್ಲಿ ಪ್ರಶ್ನೆಯಿಷ್ಟೇ. ಆಕೆಯ ಮೇಲೆ ನಡೆದಿದ್ದು ಅತ್ಯಾಚಾರವೇ ಆಗಿದ್ದರೆ ಆಕೆಗೆ ಆ ಕೂಡಲೇ ಆತನ ಮೇಲೆ ಕೇಸ್ ಜಡಿಯಬಹುದಿತ್ತಲ್ಲ!? ಮಗುವಾಗುವವರೆಗೂ ಕಾಯುವ ಪ್ರಮೇಯವೇನಿತ್ತು!? ಆದ್ದರಿಂದ ಈ ಪ್ರಕರಣವನ್ನು  ಸೂಕ್ಷ್ಮವಾಗಿ ನೋಡಿದರೆ ಇಲ್ಲಿ ನಡೆದಿರುವುದು ಅನೈತಿಕ ಸಂಬಂಧವಷ್ಟೇ! ಅಥವಾ ಒಂದು ವಿಧದ ಸಮ್ಮತಿಯ ಸೆಕ್ಸ್! ಒಂದು ವೇಳೆ ಸಮ್ಮತಿಯ ಮೇಲೆ ನಡೆದ ವಿವಾಹಪೂರ್ವ ದೇಹ ಸಂಬಂಧಕ್ಕೂ ಶಿಕ್ಷೆಯಿದೆ ಎಂದಾದರೆ ಇಲ್ಲಿ ಆಕೆಯೂ ಶಿಕ್ಷೆಗೆ ಅರ್ಹಳಲ್ಲವೇ? ಆತನೋರ್ವನೇ ಹೇಗೆ ಅಪರಾಧಿಯಾಗಬಲ್ಲ!? ಮೊದಲು ಕನಸು ಚೆಲ್ಲಿ ಭರವಸೆಯನ್ನು ನೀಡಿ ಇದೀಗ ಮಗುವಾದ ಮೇಲೆ ಕೈಚೆಲ್ಲಿದ ಎಂಬ ಆರೋಪವಿದೆ ಎಂದಾದರೆ ಆತನ ವಿರುದ್ಧ ಸೂಕ್ತ ಪರಿಹಾರಕ್ಕಾಗಿಯೇ ಕೇಸ್ ಹಾಕಬಹುದಿತ್ತು.  ಆದರೆ ಅದನ್ನು ಬಿಟ್ಟು ಅತ್ಯಾಚಾರ, ಜಾತಿ ದೌರ್ಜನ್ಯ  ಎಂಬೆಲ್ಲಾ ಪದಗಳನ್ನು ದುರಪಯೋಗೊಳಿಸಿ ಕೇಸ್  ಹಾಕಿದರೆ ಅದರ ಅರ್ಥ ಏನು!?

 

ಇನ್ನೊಂದು ಪ್ರಕರಣವನ್ನು ಗಮನಿಸಿ. ಇತ್ತೀಚೆಗೆ ಪ್ರಮುಖ ನಗರವೊಂದರ  ಮಸಾಜ್ ಸೆಂಟರ್ ಒಂದಕ್ಕೆ ಪೋಲೀಸರ ದಾಳಿ ನಡೆಯಿತು. ನಾಲ್ಕೈದು ಮಂದಿ ಗಂಡಸರು ಹಾಗೂ ಒಂದಿಬ್ಬರು ಹೆಂಗಸರು ಅಲ್ಲಿ ಸಿಕ್ಕಿ ಬಿದ್ದಿದ್ದರು. ಅಲ್ಲಿ ನಡೆಯುತ್ತಿದ್ದುದು  ಮಸಾಜ್ ಅಲ್ಲ ಬದಲಾಗಿ ಅನೈತಿಕ ದಂಧೆ ಎಂಬುದು  ಪೋಲೀಸರ ಹಾಗೂ ಊರವರ ಆರೋಪ. ನೇರವಾಗಿ ಹೇಳುವುದಾದರೆ ಅದೊಂದು ರೀತಿಯ ವೇಶ್ಯಾವಾಟಿಕೆ ಅಡ್ಡೆಯಾಗಿತ್ತಂತೆ! ಆದರೆ ದಾಳಿ ಮಾಡಿದ ಪೋಲೀಸರು ಮಾತ್ರ ಅಲ್ಲಿ ಸಿಕ್ಕಿ ಬಿದ್ದ  ಗಂಡಸರನ್ನಷ್ಟೇ ಬಂಧಿಸಿ ಹೆಂಗಸರನ್ನು ಮಾತ್ರ ಏನೋ ಘನಂಧಾರಿ ಕೆಲಸ ಮಾಡಿದವರ ಹಾಗೆ ‘ಬುದ್ಧಿ ಹೇಳಿ’ ಅವರವರ ಮನೆಗೆ ಕಳುಹಿಸಿ ಬಿಟ್ಟರು! ಪತ್ರಿಕೆಗಳಲ್ಲೂ ಸುದ್ದಿ ಪ್ರಕಟವಾದದ್ದು ಹೀಗೆಯೇ. ಅನೈತಿಕ ಚಟುವಟಿಕೆ ನಡೆಯುತ್ತಿದ್ದ ಮಸಾಜ್ ಸೆಂಟರ್‍ಗೆ ದಾಳಿಯಿಟ್ಟ ಪೋಲೀಸರು ಗಂಡಸರನ್ನು ಬಂಧಿಸಿ ಅಲ್ಲಿದ್ದ ಹೆಂಗಸರನ್ನು ‘ರಕ್ಷಿಸಲಾಯಿತು’ ಎಂದು!! ಅರೇ, ರಕ್ಷಿಸಲು ಅವರನ್ನೇನು ಮಸಾಜ್ ಸೆಂಟರ್‍ಗೆ ಎತ್ತಾಕೊಂಡೋಗಿದ್ದರಾ ಎಂಬುದನ್ನು ಮಾತ್ರ ಇಲ್ಲಿ ತಪ್ಪಿ ಕೂಡ ಪ್ರಶ್ನಿಸಬೇಡಿ! ಇರಲಿ, ಹಾಗಾದರೆ ಇಲ್ಲಿ ಸಿಕ್ಕಿಬಿದ್ದ, ಅನೈತಿಕ ದಂಧೆಯಲ್ಲಿ ತೊಡಗಿದ್ದ ಹೆಂಗಸರುಗಳನ್ನೆಲ್ಲಾ ಅಮಾಯಕರು ಎಂದೇ ಕರೆಯಬೇಕೆ!? ಹಾಗೆ ನೋಡಿದರೆ ಅವರ ಸಹಕಾರದಿಂದಲೇ ತಾನೆ ಅಲ್ಲಿ ಗಂಡಸರು ಸೇರಿದ್ದು? ದಂಧೆಗೆ ಒಂದಷ್ಟು ಬಲ ಬಂದಿದ್ದು!? ಅಲ್ಲಿ ನಡೆಯುತ್ತಿದ್ದದ್ದು ತಪ್ಪು, ಅಪರಾಧ ಎನ್ನುವುದಾದರೆ ಇಬ್ಬರದ್ದೂ (ಗಂಡಸರು-ಹೆಂಗಸರು) ಕೂಡ ತಪ್ಪು ಎಂದು ಪರಿಗಣಿಸಲ್ಪಡಬೇಕಿತ್ತು ಅಲ್ಲವೇ? ಕೇವಲ ಪುರುಷರನ್ನು ಬಂಧಿಸಿ ಹೆಂಗಸರನ್ನು ಬಿಟ್ಟು ಬಿಟ್ಟದ್ದು ಯಾವ ಪುರುಷಾರ್ಥಕ್ಕೆ!?

 

ಇವೆರಡು ಪ್ರಕರಣಗಳು ಇಲ್ಲಿ ಬರೇ ಉದಾಹರಣೆಗಳಷ್ಟೇ. ಈ ರೀತಿಯ ದ್ವಂದ್ವಗಳು ಈ ನಮ್ಮ ಸಮಾಜದಲ್ಲಿ, ಕಾನೂನಿನಲ್ಲಿ ಸಾಕಷ್ಟಿದೆ. ತಪ್ಪು, ಅಪರಾಧ ಎಂದಾದರೆ ಅದರಲ್ಲಿ ಯಾರ್ಯಾರೆಲ್ಲಾ ಭಾಗಿಗಳೋ ಅವರನ್ನೆಲ್ಲಾ ಒಂದೇ ತಕ್ಕಡಿಯಲ್ಲಿಟ್ಟು ತೂಗಬೇಕಿರುವುದು ನ್ಯಾಯ. ಆದರೆ ಅದೆಷ್ಟೋ ಅನೈತಿಕ ವ್ಯವಹಾರದ ಪ್ರಕರಣಗಳಲ್ಲಿ ಗಂಡು ಹೆಣ್ಣು ಸಹಭಾಗಿಗಳಾದರೂ ಶಿಕ್ಷೆಯಾಗುವುದು, ಮಾನ ಹರಾಜಾಗುವುದು, ಪತ್ರಿಕೆಗಳಲ್ಲಿ ಹೆಸರು ಪ್ರಕಟಗೊಳ್ಳುವುದು ಕೇವಲ ಗಂಡಸರದ್ದಷ್ಟೇ! ಯಾಕೆ ಹೀಗೆ? ಹೆಣ್ಣಿಗಿರುವ ಮರ್ಯಾದೆ ಗಂಡಿಗಿಲ್ಲವೇ ಹಾಗಾದರೆ!?

 

ಇಲ್ಲಿ ಗಂಡು ಮಾಡಿದ್ದು ಸರಿ ಎಂಬ ವಿತಂಡವಾದವಲ್ಲ. ಬದಲಾಗಿ ನಡೆಯುವ ಪ್ರಕರಣಗಳನ್ನು ವಸ್ತುನಿಷ್ಠವಾಗಿ ತನಿಖೆ ನಡೆಸಿ ಅಪರಾಧಿಗಳನ್ನು ಶಿಕ್ಷಿಸುವ ಪರಿಪಾಠ ನಮ್ಮಲ್ಲಿ ಬೆಳೆಯಬೇಕೆಂಬ ಅಭಿಮತವಷ್ಟೇ. ಒಂದೇ ಮಾತಿನಲ್ಲಿ ಹೇಳುವುದಾದರೆ ಇಂತಹ ವಿಚಾರದಲ್ಲಿ ಹೆಣ್ಣು ಗಂಡೆಂಬ ಮಾನದಂಡವೇಕೆ ಎಂಬ ಪ್ರಶ್ನೆ! ಯಾಕೆಂದರೆ ಸಿಕ್ಕಿ ಬೀಳುವವರೆಗೂ ಅವಕಾಶಗಳನ್ನು ಉಪಯೋಗಿಸಿಕೊಂಡು ಬಳಿಕ ಎಲ್ಲಾದರೂ ಸಿಕ್ಕಿ ಬಿದ್ದರೆ ಅಥವಾ ಪರಿಸ್ಥಿತಿ ಕೈ ತಪ್ಪಿದರೆ ಆವಾಗ ತಾನು ಆಮಾಯಕಳು ಎಂದು ಕಣ್ಣೀರು ಬಿಟ್ಟುಕೊಂಡು ಸಮಾಜದ ಅನುಕಂಪ ಗಳಿಸಲು ಪ್ರಯತ್ನಿಸಿದರೆ, ಪ್ರಕರಣದ ದಿಕ್ಕು ತಪ್ಪಿಸಿದರೆ ಅಂತಹುದನ್ನು ಸರಿ ಎಂದು ಒಪ್ಪಿಕೊಳ್ಳುವುದಾದರೂ ಹೇಗೆ? ಇಂದು ದಾಖಲೆಯಾಗಿರುವ ಬಹುತೇಕ ಅತ್ಯಾಚಾರ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ನಿಜಕ್ಕೂ ಅತ್ಯಾಚಾರವಾಗಿರದೆ ‘ಒಪ್ಪಿತ ಲೈಂಗಿಕ’ ಪ್ರಕರಣವಷ್ಟೇ ಆಗಿರುತ್ತದೆ. ಅತ್ಯಾಚಾರಕ್ಕೂ ಅನೈತಿಕತೆಗೂ ವ್ಯತ್ಯಾಸಗಳಿರಬೇಕಲ್ಲವೇ? ಎಂದೋ ಘಟನೆ ನಡೆಯುವುದು ಹತ್ತಾರು ವರ್ಷಗಳ ಬಳಿಕ ನನ್ನ ಮೇಲೆ ‘ಅವರು’ ಅತ್ಯಾಚಾರ ನಡೆಸಿದ್ದರು ಎಂದು ತನಗಾಗದವರ ಮೇಲೆ ಕೇಸು ದಾಖಲಿಸುವುದುಗಳೆಲ್ಲವೂ ಒಂದರ್ಥದಲ್ಲಿ ಕಾನೂನಿನ ದುರಪಯೋಗವಲ್ಲದೆ ಮತ್ತಿನ್ನೇನು!? ಇಂತಹ ಸಂದರ್ಭದಲ್ಲಿ ಸಮಾಜವು ಕೂಡ ಹೆಣ್ಣಿನ ಮಾತುಗಳನ್ನು ಒಂದೇ ಏಟಿಗೆ ನಂಬಿ ಬಿಡುವುದು ವಿಪರ್ಯಾಸವಾದರೂ ಸತ್ಯ. ಇಲ್ಲಿ ಸತ್ಯದ ಪರಾಮಾರ್ಶೆ ನಡೆಸದೆ ಗಂಡಸನ್ನು ವಾಮಾಚಗೋಚರವಾಗಿ ಬೈಯುವುದು, ತಪ್ಪೆಲ್ಲವೂ ಅವನದ್ದೋರ್ವನದ್ದೇ ಎಂಬಂತೆ ಏಕಾಏಕಿ ಷರಾ ಬರೆಯುವುದು ಇಂದು ನಡೆಯುತ್ತಿರುವ ಮಾಮೂಲು ವಿಚಾರಗಳು. ಇದು ನಿಜಕ್ಕೂ ಅಪಾಯಕಾರಿ ನಡೆಗಳು. ಅದೆಷ್ಟೋ ಸಂದರ್ಭಗಳಲ್ಲಿ ಗಂಡನ ಕಣ್ಣು ತಪ್ಪಿಸಿ ಅನ್ಯಪುರುಷನೊಡನೆ ಸಖ್ಯ ಬೆಳೆಸಿದ ಹೆಣ್ಣು ಕೂಡ ಬಳಿಕ ಸಿಕ್ಕಿ ಬಿದ್ದಾಗ ಸ್ವತಃ ಗಂಡನ ಮೇಲೆಯೇ ‘ದೌರ್ಜನ್ಯದ’ ಕೇಸ್ ಹಾಕಿ ನಿರಪರಾಧಿ ಗಂಡನಿಂದ ಪರಿಹಾರಗಿಟ್ಟಿಸುವ ಘಟನೆಗಳೂ ಕೂಡ ನಡೆಯುತ್ತಿವೆ. ಇಲ್ಲಿ ಹೆಂಡತಿ ಮಾಡಿದ ಮೋಸಕ್ಕೆ ಗಂಡು ಬಳಲಿ ಬೆಂಡಾಗಿದ್ದರೂ, ಅವಮರ್ಯಾದೆಯಿಂದ ಕುಸಿದಿದ್ದರೂ ಆತನ ಮಾತಿಗೆ ಬೆಲೆಯೇ ಸಿಗದು! ಹೆಣ್ಣಿನ ರಕ್ಷಣೆಗೆ ಸಮಾಜವು ಕಟಿಬದ್ಧವಾಗಬೇಕು ನಿಜ. ಆಕೆಗೆ ಸಮಾಜದಲ್ಲಿ ಸರಿಸಮಾನ ಸ್ಥಾನಮಾನ ಸಿಗಬೇಕು ಎಂಬುದು ಕೂಡ ನಿಜ. ಆದರೆ ಕಾನೂನಿನ ಮುಂದೆ ಆಕೆ ಕೂಡ ಸಮಾನಳೇ ಅಲ್ಲವೇ? ಮೋಸಗೊಳಿಸಿಕೊಂಡು ಇಲ್ಲವೇ ಕಿಡ್ನಾಪ್ ಮಾಡಿಕೊಂಡೋಗಿ  ಬಲವಂತವಾಗಿ ಒಂದು ಹೆಣ್ಣನ್ನು ಅತ್ಯಾಚಾರಗೈದರೆ ಇಲ್ಲವೇ ಲೈಂಗಿಕ ಕಿರುಕುಳ ನೀಡಿದರೆ ಆವಾಗವಾದರೆ ಆಕೆ ಎಲ್ಲಾ ರೀತಿಯ ಸಹಾನೂಭೂತಿಗೂ ಅರ್ಹಳು.  ಅಂತಹ ಸಂದರ್ಭದಲ್ಲಾದರೆ ಆಕೆಯನ್ನು ಮುಗ್ಧೆಯೆಂದು ಪರಿಗಣಿಸಿ ಆಕೆಯ ಗುರುತನ್ನು ಸಮಾಜದಿಂದ ಆದಷು ಗುಪ್ತವಾಗಿಟ್ಟು ಕಾನೂನಿನ ರಕ್ಷಣೆ ನೀಡುವುದು ಸರಿಯಾದ ಕ್ರಮ.  ಆದರೆ ತಪ್ಪು ಆಕೆಯದ್ದೂ ಇರಬೇಕಾದರೆ ಅಥವಾ ಆಕೆಯದ್ದು ಓರ್ವಳದ್ದೇ ಇರಬೇಕಾದರೆ ಅಂತಹ ಸಂದರ್ಭದಲ್ಲೂ ಆಕೆಯನ್ನು ಕಾನೂನಿನಿಂದ ಹೊರಗಿಡುವುದು, ಮಾನ ಮರ್ಯಾದೆಯ ಹೆಸರಲ್ಲಿ ಅವಳ ಹೆಸರನ್ನು ಎಲ್ಲೂ ಪ್ರಕಟವಾಗದಂತೆ ಮರೆಮಾಚಿ ಪರುಷನೋರ್ವನನ್ನೇ ತಪ್ಪುಗಳಿಗೆ ಹೊಣೆಯಾಗಿಸುವುದು ನಿಜವಾಗಿಯೂ ಎಷ್ಟು ಸರಿ ಎಂಬುದೇ ಇಲ್ಲಿ ಯೋಚಿಸಬೇಕಾದ ದೊಡ್ಡ ಪ್ರಶ್ನೆ.

ಹೌದು, ಇವತ್ತು ನಡೆಯುತ್ತಿರುವ ಅದೆಷ್ಟೋ ವಿಚಾರಗಳು ಸಮಾಜದ ದಿಕ್ಕು ತಪ್ಪಿರುವಂತಹುದು. ಆಗಿರುವುದು ಒಂದು ಸಮಾಜದ ಕಣ್ಣಿಗೆ ತೋರಿರುವುದು ಇನ್ನೊಂದು. ಅತ್ಯಾಚಾರವು ಸಮಾಜದ ಒಂದು ಪಿಡುಗು. ಅದು ಹೀನ ಮನೋಸ್ಥಿತಿಯ ಪ್ರತಿಫಲ ಎಂಬುದು ನಿಸ್ಸಂಶಯ. ಹಾಗೇನೆ   ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಒಂದು ಶಿಕ್ಷೆ ಇನ್ನೊಂದು ಪ್ರಕರಣಕ್ಕೆ ಅಂಕುಶ ಹಾಕುವಂತಿರಬೇಕು. ಹೆಣ್ಣನ್ನು ಗೌರವಿಸಬೇಕಾಗಿದ್ದ ಈ ನೆಲದಲ್ಲಿ ಹೆಣ್ಣನ್ನು ಭೋಗದ ವಸ್ತುವಾಗಿ ಕಾಣುವ ಮನೋಸ್ಥಿತಿ ಈ ಸಮಾಜದಿಂದ ನಿರ್ಮೂಲನವಾಗುವವರೆಗೂ ಇಂತಹ ಪಿಡುಗು ಮರೆಯಾಗುವುದು ತುಸು ಕಷ್ಟವೇ ಇರಬಹುದು. ಆದರೆ ಈ ನಿಟ್ಟಿನಲ್ಲಿ ಕಾನೂನುಗಳ ಜೊತೆಗೆ ಆಧುನಿಕ ಶಿಕ್ಷಣವೂ ಒಂದಷ್ಟು ನೀತಿ ಪಾಠಗಳನ್ನು ತನ್ನೊಳಗೆ ಸೇರಿಸಿಕೊಂಡು ಸಮಾಜದ ಸುಧಾರಣೆಯತ್ತ ಕೈಜೋಡಿಸಿದ್ದೇ ಆದರೆ ಇವೆಲ್ಲವುಗಳನ್ನು ಸಾಧ್ಯವಾಗಿಸುವುದು ಅಸಾಧ್ಯವೇನಲ್ಲ. ಇವೆಲ್ಲಕ್ಕಿಂತ ಮಿಗಿಲಾಗಿ ಇರುವ ಕಾನೂನನ್ನು ದುರಪಯೋಗವಾಗದಂತೆ ತಡೆಯುವುದು ಕೂಡ ಅತ್ಯಗತ್ಯವೇ.!  ಅನ್ಯಾಯದ ಹಾದಿಯಲ್ಲಿರುವ, ಅನೈತಿಕತೆಯಲ್ಲಿ ತೊಡಗಿರುವ  ಹೆಣ್ಣು ಮಕ್ಕಳನ್ನು ಕೂಡ ಮುಲಾಜಿಲ್ಲದೆ ಶಿಕ್ಷಿಸುವ ಪರಿಪಾಠ ನಮ್ಮಲ್ಲಿ ಜರೂರು ಬೆಳೆಯಬೇಕು. ಎಷ್ಟಾದರೂ, ತಪ್ಪು ಯಾರೇ ಮಾಡಲಿ ಅದನ್ನು ತಪ್ಪೆಂದು  ಗುರುತಿಸದೇ ಹೋಗುವುದು ದೊಡ್ಡ ತಪ್ಪೇ ಸರಿ!

ಚಿತ್ರಕೃಪೆ: ಇಂಟರ್’ನೆಟ್

Facebook ಕಾಮೆಂಟ್ಸ್

ಲೇಖಕರ ಕುರಿತು

Prasad Kumar Marnabail

Banker

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!