೨೦೦೪ರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಕಾಲವದು. ಜನತಾ ಪರಿವಾರ ಒಡೆದು ಚೂರಾದ ಮೇಲೆ ದೇವೇಗೌಡರು ಕಟ್ಟಿದ್ದ ಜೆಡಿಎಸ್ ಬಿಟ್ಟು ಅಧಿಕಾರ ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿಗೆ ಅಸಾಧ್ಯ ಅನ್ನೋ ತೀರ್ಪನ್ನು ರಾಜ್ಯದ ಮತದಾರ ಕೊಟ್ಟಿದ್ದ. ಸಹಜವಾಗಿಯೇ ಸೋಕಾಲ್ಡ್ ಜಾತ್ಯಾತೀತ ಪಕ್ಷವಾಗಿದ್ದ ಜೆಡಿಎಸ್ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸೋ ಪ್ರಕ್ರಿಯೆ ಆರಂಭವಾಯಿತು. ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ನಿಂದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಪುನರಾಯ್ಕೆಗೆ ಅವಕಾಶ ಇತ್ತಾದರೂ ಒಂದು ಕಾಲದಲ್ಲಿ ತನ್ನ ವಿರುದ್ಧವೇ ತೊಡೆತಟ್ಟಿದ ಕೃಷ್ಣರನ್ನು ಮಗದೊಮ್ಮೆ ವಿಧಾನಸೌಧದ ಮೂರನೇ ಮಹಡಿಗೆ ಕಳುಹಿಸಲು ದೇವೇಗೌಡರ ರಾಜಕೀಯ ಒಳಮನಸ್ಸು ಸುತರಾಂ ಒಪ್ಪಲಿಲ್ಲ. ಅಲ್ಲಿಂದ ಕ್ಷೀಣವಾಗಲು ಶುರುವಾಗಿದ್ದ ಎಸ್ ಎಂ ಕೃಷ್ಣರ ರಾಜಕೀಯ ಜೀವನದ ಪಾಂಚಜನ್ಯ ಶಬ್ಧ ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದ ಮೇಲಂತೂ ಸಂಪೂರ್ಣ ಸದ್ದಡಗಿದಂತೆ ಭಾಸವಾಗಿತ್ತು. ಆದರೂ ೮೦ರ ಹರೆಯದಲ್ಲಿಯೂ ರಾಜಕೀಯಕ್ಕಾಗಿ ತುಡಿಯುವ ಕೃಷ್ಣ ಆಗಿದ್ದಾಗಲಿ ಅಂತ ಕೊನೆಯ ಬಾರಿಗೆ ಪಾಂಚಜನ್ಯ ಮೊಳಗಿಸಿದ್ದಾರೆ. ಆ ಮೂಲಕ ಮಾತೃ ಪಕ್ಷ ಕಾಂಗ್ರೆಸ್ಗೆ ವಿದಾಯ ಹೇಳಿದ್ದಾರೆ.
ಅಮೆರಿಕಾದಲ್ಲಿ ವ್ಯಾಸಂಗ ಮಾಡುತ್ತಿದ್ದ ಕೃಷ್ಣ ಮದ್ದೂರಿಗೆ ವಾಪಸಾಗಿ ಆಗಿನ ಮೈಸೂರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಗೌಡರ ವಿರುದ್ಧ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾದವರು ಮತ್ತೆ ಹಿಂತಿರುಗಿ ನೋಡಿದವರಲ್ಲ. ಶಾಸಕ, ಸ್ಪೀಕರ್, ಮಂತ್ರಿ, ಉಪಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ, ರಾಜ್ಯಪಾಲ, ಕೇಂದ್ರದ ಮಂತ್ರಿ ಹೀಗೆ ಅಧಿಕಾರದ ಎಲ್ಲಾ ಮಜಲುಗಳನ್ನು ನೋಡಿದವರು ಎಸೆಂಕೆ. ಪಕ್ಷದ ರಾಜ್ಯಾಧ್ಯಕ್ಷನಾಗಿ ಚುನಾವಣೆಗೆ ಹೋಗುವಾಗ ಕರ್ನಾಟಕ ರಾಜಕೀಯದಲ್ಲಿ ಜನತಾ ಪರಿವಾರ ಬೇರ್ಪಟ್ಟು ರಾಜಕೀಯ ಧ್ರುವೀಕರಣವಾದ ಕಾಲ. ಪಾಂಚಜನ್ಯ ರಥಯಾತ್ರೆಯ ಮೂಲಕ ರಾಜ್ಯದುದ್ದಗಲಕ್ಕೂ ಸಂಚರಿಸಿದರ ಫಲ ಮತ್ತು ಜನತಾ ಪರಿವಾರ ಪ್ರಮಾದದ ಫಲ, ಅಧಿಕಾರ ಕಾಂಗ್ರೆಸ್ ಪಕ್ಷವನ್ನರಸಿ ಬಂದಿತ್ತು. ಎಸೆಂಕೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಅಧಿಕಾರ ವಹಿಸಿಗೊಂಡ ಕೆಲವೇ ತಿಂಗಳುಗಳಲ್ಲಿ ಶುರುವಾಯಿತು ನೋಡಿ ಸಂಕಷ್ಟಗಳ ಸರಮಾಲೆ! ವರನಟ ರಾಜ್ ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದ. ಇಡೀ ಕರ್ನಾಟಕ ರೊಚ್ಚಿಗೆದ್ದಿತ್ತು. ವೀರಪ್ಪನ್ ಮೇಲಿಂದ ಮೇಲೆ ಬೇಡಿಕೆಗಳ ಸುರಿಮಳೆಗಯ್ಯುತ್ತಿದ್ದನು. ಆದರೆ ಈ ಹೈ ಪ್ರೊಫೈಲ್ ಪ್ರಕರಣವನ್ನು ಎಸೆಂಕೆ ನಿಭಾಯಿಸಿದ ಪರಿಯಂತೂ ಅದ್ಭುತ. ಯಾವುದೇ ಸಮಯದಲ್ಲೂ ತಾಳ್ಮೆ ಕಳೆದುಕೊಳ್ಳದೇ ಶಾಂತಚಿತ್ತರಾಗಿ ವರ್ತಿಸಿ ರಾಜ್ ಕುಮಾರ್ ಅವರನ್ನು ಬಿಡುಗಡೆಯಾಗುವಂತೆ ಮಾಡಿದ್ದರು. ಆದರೆ ರಾಜ್ ಬಿಡುಗಡೆಯಾಗಲು ಕೋಟಿ ಕೋಟಿ ಹಣವನ್ನು ಸುರಿಯಲಾಗಿತ್ತು ಅನ್ನೋ ವಿವಾದವನ್ನೂ ಮೈಮೇಲೆ ಎಳೆದುಕೊಂಡಿದ್ದರು.
ರಾಜ್ಯ ಮೂರು ವರ್ಷಗಳ ಸತತ ಬರಗಾಲದಿಂದ ಕಂಗೆಟ್ಟು ಹೋಗಿತ್ತು. ಎಸೆಂಕೆ ಸರ್ಕಾರದ ವಿರುದ್ಧ ಜನ ರೋಸಿ ಹೋಗಿದ್ದರು. ಗಾಯದ ಮೇಲೆ ಬರೆ ಎಳೆದಂತೆ ಕಾವೇರಿ ಕ್ಯಾತೆ ತೆಗೆದರು ಆಗಿನ ತಮಿಳ್ನಾಡಿನ ಮುಖ್ಯಮಂತ್ರಿ ದಿವಂಗತ ಜಯಲಲಿತಾ. ನೀರು ಬಿಡಿ ಇಲ್ಲ ಅಧಿಕಾರ ಬಿಡಲು ಸಜ್ಜಾಗಿ ಅನ್ನುವ ಸುಪ್ರೀಂ ಕೋರ್ಟೀನ ಖಡಕ್ ತೀರ್ಪಿಗೆ ಎಸೆಂಕೆ ಮಣಿದರು. ಕಾವೇರಿ ನೀರು ತಮಿಳ್ನಾಡಿಗೆ ಬಿಟ್ಟರು. ಜನರ ಕ್ರೋಧವನ್ನು ಮೈಮೇಲೆ ಎಳೆದುಕೊಂಡರು. ಸಾಲದೆಂಬಂತೆ ವೀರಪ್ಪನ್ ಮಾಜಿ ಸಚಿವ ನಾಗಪ್ಪರವರನ್ನು ಅಪಹರಿಸಿದ್ದನು. ನಾಗಪ್ಪ ಹೆಣವಾಗಿ ವಾಪಾಸು ಬಂದರು. ಕೃಷ್ಣ ಆಡಳಿತಾವಧಿಯಲ್ಲಿ ವಿರೋಧ ಪಕ್ಷಕ್ಕಿಂತಲೂ ಜಾಸ್ತಿ ಅವರನ್ನು ಕಾಡಿದ್ದು ವೀರಪ್ಪನ್ ಮತ್ತು ಜಯಲಲಿತಾ. ಬೆಂಗಳೂರನ್ನು ಸಿಂಗಾಪೂರ ಮಾಡಲು ಬಹುದೊಡ್ಡ ಯೋಜನೆಯನ್ನು ಕೃಷ್ಣ ಹಾಕಿಕೊಂಡಿದ್ದರು. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ, ಮೆಟ್ರೋ, ಐಟಿಗೆ ಉತ್ತೇಜನೆ, ಹೀಗೆ ಬೆಂಗಳೂರಿಗೆ ಇವತ್ತಿನ ಬ್ರಾಂಡ್ ಇಮೇಜ್ ತಂದುಕೊಡಲು ಎಸೆಂಕೆ ಕಾಣಿಕೆ ಕಡೆಗಣಿಸಲು ಸಾಧ್ಯವೇ ಇಲ್ಲ.
ಲೋಕಸಭಾ ಚುನಾವಣೆ ಜೊತೆಗೆ ರಾಜ್ಯ ವಿಧಾನಸಭಾ ಚುನಾವಣೆ ನಡೆದರೆ ಕಾಂಗ್ರೆಸ್ ಪುನರಾಯ್ಕೆ ಆಗುವುದು ಸರ್ವಸಿದ್ಧ ಅನ್ನೋ ಪಕ್ಷದ ಚುನಾವಣಾ ಪಂಡಿತರ ಲೆಕ್ಕಾಚಾರಕ್ಕೆ ಓಗೊಟ್ಟು ಅವಧಿಗೆ ಮುನ್ನವೇ ಚುನಾವಣೆಯೆದುರಿಸಿ ಕೈ ಸುಟ್ಟುಕೊಂಡರು ಎಸೆಂಕೆ ಅಂತ ಈಗಲೂ ಹೇಳುವವರಿದ್ದಾರೆ. ಒಂದು ವೇಳೆ ಪೂರ್ಣಾವಧಿಯಾದ ಮೇಲೆ ಚುನಾವಣೆ ಎದುರಿಸಿದ್ದರೆ ಎಸೆಂಕೆ ಸರ್ಕಾರ ಪುನರಾಯ್ಕೆಗೊಳ್ಳುತ್ತಿತ್ತು ಏನೋ. ಆದರೆ ಚುನಾವಣೆಯಲ್ಲಿ ಪಕ್ಷ ಸೋಲುವುದರ ಜೊತೆಜೊತೆಗೆ ತಮ್ಮ ರಾಜಕೀಯ ಭವಿಷ್ಯಕ್ಕೂ ಕಲ್ಲು ಹಾಕಿಕೊಂಡರು ಎಸೆಂಕೆ ಅಂದರೆ ತಪ್ಪಾಗಲಾರದು. ನಂತರ ಕೆಲಕಾಲ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಕೃಷ್ಣ ತದನಂತರ ರಾಜ್ಯಸಭಾ ಸದಸ್ಯರಾಗಿ ವಿದೇಶಾಂಗ ಸಚಿವರಾಗಿಯೂ ಆಯ್ಕೆಯಾದರು. ಆದರೆ ವಿದೇಶಾಂಗ ಸಚಿವರಾಗಿ ನ್ಯೂಯಾರ್ಕ್’ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಪೋರ್ಚುಗೀಸ್ ವಿದೇಶಾಂಗ ಸಚಿವರ ಭಾಷಣವನ್ನು ಓದಿ ತೀವ್ರ ಮುಜುಗರಕ್ಕೊಳಗಾಗಿ ಭಾರೀ ಸುದ್ದಿಯಾಗಿದ್ದರು.
ಎಸೆಂಕೆಗೆ ಈಗ ವಯಸ್ಸಾಗಿರಬಹುದು. ಆದರೆ ರಾಜಕೀಯದ ಕಡೆಗೆ ಅವರ ತುಡಿತವಿನ್ನೂ ಕಡಿಮೆಯಾಗಿಲ್ಲ. ಎಸೆಂಕೆ ಕಲೆ, ಸಾಹಿತ್ಯ ಪ್ರೇಮಿ, ಬ್ಯಾಡ್ಮಿಂಟನ್ ಆಟಗಾರ, ಉತ್ತಮ ವಾಗ್ಮಿ ಮತ್ತು ಸಂಘಟನಾ ಚತುರ. ಮೂಲನಿವಾಸಿಗಳು ಮತ್ತು ವಲಸಿಗರ ನಡುವಿನ ತಿಕ್ಕಾಟದಲ್ಲಿ ಈಗಿನ ರಾಜ್ಯ ಕಾಂಗ್ರೆಸ್’ನಲ್ಲಿ ಮೂಲನಿವಾಸಿಗರನ್ನು ಕಡೆಗಣಿಸಲಾಗುತ್ತಿದೆ ಅನ್ನೋ ನೋವು ಕೃಷ್ಣ ಅವರಿಗೆ ಮೊದಲಿಂದಲೂ ಇತ್ತು. ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಬಂದ ಮೇಲೆ ಯಾವಾಗೆಲ್ಲ ಪಕ್ಷದಲ್ಲಿ ಭಿನ್ನಮತ ಎದ್ದಿತ್ತೋ ಆವಾಗೆಲ್ಲ ಬಂಡಾಯವೆದ್ದಿದ್ದ ಶಾಸಕರು, ಮಂತ್ರಿಗಳು ಮೊದಲು ಎಡತಾಕುತ್ತಿದ್ದದ್ದು ಸದಾಶಿವನಗರದ ಕೃಷ್ಣ ಅವರ ಮನೆಯನ್ನು. ಈಗ ಕೃಷ್ಣ ಅವರು ತಾನು ಸಾಕಿ ಸಲಹಿದ್ದ ಪಕ್ಷಕ್ಕೆ ಗುಡ್ಬೈ ಹೇಳಿ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವುದು ನಿಶ್ಚಿತ ಅಂತ ಹೇಳಿದ್ದಾರೆ. ಮತ್ತು ಈ ಮೂಲಕ ರಾಜ್ಯ ಕಾಂಗ್ರೆಸ್’ನಲ್ಲಿ ಎಲ್ಲವೂ ಸರಿಯಿಲ್ಲ ಅನ್ನುವುದನ್ನು ಜಗಜ್ಜಾಹೀರು ಪಡಿಸಿದ್ದಾರೆ. ಕೃಷ್ಣ ಅವರು ಬಿಜೆಪಿಗೆ ಬಂದರೆ ಸ್ವಾಗತ ಅಂತ ಕಮಲ ನಾಯಕರು ಹೇಳಿಕೆಯನ್ನೂ ಕೊಟ್ಟಿದ್ದಾರೆ. ಈ ಮೂಲಕ ಒಕ್ಕಲಿಗರ ಮತಬ್ಯಾಂಕ್’ಗೆ ಲಗ್ಗೆಹಾಕುವ ದೂರಾಲೋಚನೆ ಬಿಜೆಪಿ ನಾಯಕರದ್ದಿರಬಹುದು.
ಹಾಗೆ ನೋಡಿದರೆ ಜನರೇಶನ್ ಗ್ಯಾಪ್ ನೆಪವೊಡ್ಡಿ ಕಾಂಗ್ರೆಸ್ ನಲ್ಲಿ ಮೂಲೆಗುಂಪಾಗಿರುವ ನಾಯಕರ ಪಟ್ಟಿ ಬಹಳ ದೊಡ್ಡದಿದೆ. ಮಾಜಿ ಸಚಿವ ಅಂಬರೀಶ್, ಖಮರುಲ್ ಇಸ್ಲಾಂ, ಹಿರಿಯ ಶಾಸಕ ಮಾಲೀಕಯ್ಯ ಗುತ್ತೇದಾರ್ ಮುಂತಾದವರು ಪಕ್ಷದ ಬಗ್ಗೆ ಅದಾಗಲೇ ಮುನಿಸಿಕೊಂಡಿದ್ದಾರೆ. ಹಿರಿಯ ರಾಜಕಾರಣಿ ಜನಾರ್ಧನ ಪೂಜಾರಿ, ಮಾಜಿ ಸಂಸದ ವಿಶ್ವನಾಥ್ ಬಹಿರಂಗವಾಗಿ ಸಿದ್ಧರಾಮಯ್ಯ ಸರಕಾರವನ್ನು ನಿಂದಿಸುತ್ತಾ ಬಂದಿದ್ದಾರೆ. ಸಿಎಂ ಇಬ್ರಾಹಿಂ ಜೆಡಿಎಸ್ ಬಾಗಿಲು ತಟ್ಟಿರುವುದೂ ಸುದ್ದಿಯಾಗಿದೆ. ಎಸೆಂಕೆ ಬೆನ್ನಲ್ಲೇ ಮತ್ತೊಬ್ಬ ಹಿರಿಯ ನಾಯಕ ಜಾಫರ್ ಶರೀಫ್ ಕೂಡಾ ಪಕ್ಷದ ನಾಯಕರ ನಡೆ ಬಗ್ಗೆ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಶ್ರೀನಿವಾಸ್ ಪ್ರಸಾದ್ ಮತ್ತು ಶಿವರಾಂ ಅದಾಗಲೇ ಬಿಜೆಪಿ ಪಾಳಯದಲ್ಲಿದ್ದಾರೆ. ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್’ನಲ್ಲಿ ಚಲಾವಣೆಯಲ್ಲಿಲ್ಲದ ನಾಣ್ಯದಂತಿದ್ದ ಕೃಷ್ಣ ಪಕ್ಷವನ್ನು ಬಿಟ್ಟಿದ್ದು ರಾಜ್ಯ ರಾಜಕೀಯ ಎತ್ತ ಸಾಗಬಹುದು ಅನ್ನುವುದೇ ಸಧ್ಯದ ಕುತೂಹಲ.