ಅಂಕಣ

ಉಪವಾಸ, ಜಾಗರಣೆ, ಶಿವಧ್ಯಾನದ ಸಂಗಮ: ಮಹಾಶಿವರಾತ್ರಿ

ಆಧ್ಯಾತ್ಮಿಕ ನಂಟಿನ ಕರುಳಬಳ್ಳಿಯ ಬಂಧ ಹೊಂದಿರುವ ನಮ್ಮಭಾರತೀಯ ಸಂಸ್ಕೃತಿಯಲ್ಲಿ ವೈಶಿಷ್ಟ್ಯ ಹಾಗೂ ಮಹತ್ವಪೂರ್ಣವಾದ ಹಲವಾರು ಅಂಶಗಳು ಅಡಕವಾಗಿವೆ. ನಿರ್ಮಲವಾದ ಭಕ್ತಿ, ಶ್ರದ್ಧೆ, ಆರಾಧನೆ ಹಾಗೂ ಸಂಸ್ಕಾರಗಳ ಮೂಲಕವಷ್ಟೇ ಆಧ್ಯಾತ್ಮಿಕತೆಯ ನೈಜ ಸಾರವನ್ನು ಅನುಭವ ವೇದ್ಯವನ್ನಾಗಿಸಿಕೊಳ್ಳಬಲ್ಲ  ಆಚರಣೆಗಳು ಚಾಲ್ತಿಯಲ್ಲಿರುವ ನಾಡು ನಮ್ಮದು. ಇದಕ್ಕೆ ಹೊರತಾದ ಪ್ರಯತ್ನಗಳು ಕೇವಲ ಡಾಂಭಿಕತೆಯ ಶುಷ್ಕ ಪ್ರದರ್ಶನವೆನಿಸಿ ಉಪೇಕ್ಷೆಗೀಡಾದ  ಉದಾಹರಣೆಗಳೂ ಇವೆ. ಇಂತಹ ಉದಾತ್ತ  ಸಂಸ್ಕೃತಿ ಹಾಗೂ ಆಧ್ಯಾತ್ಮಿಕತೆಯ ಹಿನ್ನೆಲೆಯಲ್ಲಿ ರೂಪುಗೊಂಡಿರುವ ನಮ್ಮಸಾಮಾಜಿಕ ಹಾಗೂ ಧಾರ್ಮಿಕ ಜೀವನಕ್ರಮದಲ್ಲಿ ಹಾಸುಹೊಕ್ಕಾಗಿರುವ ಹಬ್ಬಹರಿದಿನಗಳಿಗೆ ವಿಶೇಷ ಪ್ರಾಧಾನ್ಯತೆಯಿದೆ. ನಮ್ಮಯಾವುದೇ ಹಬ್ಬದ ಆಚರಣೆಯು ಕೇವಲ ಲೌಕಿಕ ಸಂತೃಪ್ತಿಗಷ್ಟೇ ಸೀಮಿತವಾಗದೆ ಅಲೌಕಿಕತೆಯ ಅನುಭೂತಿಯನ್ನು ಸ್ಪುರಿಸುತ್ತವೆ. ಮಹಾಶಿವರಾತ್ರಿಯೂ ಅಂತಹ ಹಬ್ಬಗಳಲ್ಲಿ ಒಂದಾಗಿದೆ. ಮಹಾಪರ್ವ ಮಹಾಶಿವರಾತ್ರಿಯನ್ನು ‘ವ್ರತರಾಜ’ ಎಂದೂ ಕರೆಯುವುದುಂಟು.

            ಶಿವನಿಗೆ ಪ್ರಿಯವಾದ, ವರ್ಷದ ಪ್ರತಿ ಕೃಷ್ಣಪಕ್ಷದ  ಚತುರ್ದಶಿಯೂ ಶಿವರಾತ್ರಿ ಎಂದೇ ಕರೆಸಿಕೊಂಡರೂ ಮಾಘ ಮಾಸದಲ್ಲಿನ ಕೃಷ್ಣಪಕ್ಷದ  ಚತುರ್ದಶಿಯು ಅತ್ಯಂತ ವಿಶೇಷವಾಗಿರುವುದರಿಂದ ಅದು ಮಹಾಶಿವರಾತ್ರಿ. ಶಿವನೇ ಪ್ರಧಾನವಾಗಿರುವ ಈ ಪರ್ವವು ಬಹುಮುಖ್ಯವಾಗಿ ಶೈವರಿಗೇ ವಿಶೇಷವಾದದ್ದಾದರೂ ವೈಷ್ಣವರೂ ಸೇರಿದಂತೆ ಅನ್ಯ ದೇವತೆಗಳ ಉಪಾಸಕರೂ ವಿಶೇಷ  ಪೂಜೆ ಪುನಸ್ಕಾರಗಳನ್ನು ನಡೆಸುತ್ತಾರೆ.

            ಬಹುತೇಕ ಹಬ್ಬಗಳಲ್ಲಿ ಸಾಮಾನ್ಯವಾಗಿ ಭಕ್ಷ್ಯ-ಭೋಜನವು ಬಹುಮುಖ್ಯವಾಗಿರುತ್ತದೆ. ಅದರ ಜೊತೆಗೇ ನೆಂಟರು ಬಂಧುಗಳ ಸಮಾಗಮವೂ ಕೂಡಾ. ಆದರೆ ಶಿವರಾತ್ರಿ ಹಬ್ಬಇದಕ್ಕೆಅಪವಾದವೇ ಸರಿ. ಈ ಹಬ್ಬದ ವ್ರತಾಚರಣೆಯಲ್ಲಿ  ಏಕಾದಶಿಯಂತೆ ಉಪವಾಸವೂ ಕೂಡಾ ಪ್ರಮುಖ ಅಂಗವಾಗಿರುವುದರಿಂದ ಇದು ಉಪವಾಸದ ಹಬ್ಬ ಎಂದೂ ಹೆಸರಿಸಲ್ಪಡುತ್ತದೆ. ನಮ್ಮ ಧಾರ್ಮಿಕ ನಿಲುವುಗಳ ಪ್ರಕಾರ ದೇವತಾಪೂಜೆಗೆ ರಾತ್ರಿ ಕಾಲ ಪ್ರಶಸ್ತವಲ್ಲ.ಆದರೆ ಶಿವರಾತ್ರಿ ಎಂಬ ನಾಮಧೇಯಕ್ಕೆ ಅನ್ವರ್ಥವೆಂಬಂತೆ ಅಂದು ಮಾತ್ರ ರಾತ್ರಿಯ ನಾಲ್ಕೂ ಜಾವಗಳು(ಒಂದು ಜಾವ ಎಂದರೆ ದಿನದ ಎಂಟನೆ ಒಂದು ಭಾಗ) ದೇವರ ಆರಾಧನೆಗೆ ಅತ್ಯಂತ  ಪ್ರಶಸ್ತವಾದ ಕಾಲವಾಗಿದೆ.

            ಕೃತೋಪವಾಸಾಯೇ ತಸ್ಯಾಂ ಶಿವಮರ್ಚನ್ತಿ ಜಾಗ್ರತಾಃ|

            ಬಿಲ್ವಪತ್ರೈಶ್ಚತುರ್ಯಾಮಂತೇಯಾನ್ತಿ ಶಿವತುಲ್ಯತಾಂ

ಅಂದರೆ ‘ಅದು ಸರ್ವಪಾಪಗಳನ್ನೂ ಪರಿಹರಿಸುವುದು. ಅಂದು ಉಪವಾಸಮಾಡಿ ಜಾಗರಣೆಯಲ್ಲಿದ್ದು ಬಿಲ್ವ ಪತ್ರೆಗಳಿಂದ ಶಿವನನ್ನು ನಾಲ್ಕು ಯಾಮಗಳಲ್ಲೂ ಪೂಜಿಸುವವರು ಶಿವನಿಗೇ ಸಮಾನರಾಗಿ ಬಿಡುತ್ತಾರೆ’ ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಾಗಿದ್ದು, ಈ ದಿನದ ಆರಾಧನೆಯಲ್ಲಿ ಮಾಡುವವ್ರತ, ಜಾಗರಣೆ ಹಾಗೂ ಉಪವಾಸಗಳ ಮಹತ್ವವೇನು ಎನ್ನುವುದರ ಸಂಕೇತ. ಉಪವಾಸ ಹಾಗೂ ಜಾಗರಣೆಯು ಶಿವರಾತ್ರಿಯನ್ನು ಶಿವಮಯವನ್ನಾಗಿ ಮಾಡಿಕೊಳ್ಳುವುದಕ್ಕೆ ಪೂರಕವಾಗಬಲ್ಲ ಎರಡು ವಿಶೇಷ ಸಾಧನಗಳಾಗಿವೆ. ಶಿವರಾತ್ರಿಯ ಆಚರಣೆಯಲ್ಲಿ ನಡೆಯುವ ಪೂಜೆ, ಉಪವಾಸ ಹಾಗೂ ಜಾಗರಣೆ ಈ ಮೂರರಲ್ಲಿ ಯಾವುದು ಮುಖ್ಯ ಎಂಬ ಪ್ರಶ್ನೆಗೆ ಭಕ್ತನ ವಿವೇಕವೇ ಪರಿಹಾರದಾಯಿ. ಸ್ಥೂಲವಾಗಿ ಉಪವಾಸ, ಜಾಗರಣೆ ಹಾಗೂ ಶಿವಧ್ಯಾನಗಳ ತ್ರಿವೇಣಿ ಸಂಗಮವೇ ಮಹಾಶಿವರಾತ್ರಿ ಎನ್ನಬಹುದು.

ದಯೆ, ಅಸೂಯೆ ಇಲ್ಲದಿರುವಿಕೆ, ಶುಚಿತ್ವ, ಅನಾಯಾಸ, ಕಾರ್ಪಣ್ಯವಿಲ್ಲದಿರುವಿಕೆ, ದುರಾಸೆಇಲ್ಲದಿರುವುದು, ಕ್ಷಮಾಗುಣ ಮತ್ತು ಮಂಗಳ ಇವೇ ಅಷ್ಟ ಆತ್ಮಗುಣಗಳೊಂದಿಗೆ, ಶಿವನಿಗೆ ಪ್ರಿಯವಾದ ಧ್ಯಾನಾನಂದಗಳ ಮೂಲಕ ಶಿವರಾತ್ರಿಯನ್ನು ಆಚರಿಸುವುದರಿಂದ ಶಿವನ ಸಂಪ್ರೀತಿಗೆ ಒಳಗಾಗಬಹುದು. ಅಲಂಕಾರ ಪ್ರಿಯೋಃ ವಿಷ್ಣು, ಅಭಿಷೇಕಪ್ರಿಯಃ ಶಿವ ಎಂಬಂತೆ ವೈದಿಕ ಉಪಚಾರಗಳಲ್ಲಿ ಅಭಿಷೇಕವು ಶಿವನಿಗೆ ಅತ್ಯಂತ ಪ್ರಿಯವಾದುದು. ಬಿಲ್ವಪತ್ರೆ, ಪದ್ಮ ಪುಷ್ಪ, ತುಂಬೇ ಹೂವು, ಹಾಗೂ ಕೆಂಪು ದಾಸವಾಳಗಳು ಶಿವನ ಪೂಜೆಯಲ್ಲಿ ಪ್ರಮುಖವಾಗಿ ಇರಬೇಕಾದವು.’ಸದಾಶಿವನಿಗೆ ಅದೇಧ್ಯಾನ’ ಎಂಬಂತೆ ಶಿವನು ಧ್ಯಾನ ಪ್ರಿಯ. ಪರಮಾತ್ಮ ಧ್ಯಾನದ ಅಂತರಂಗ ಪೂಜೆ ಶಿವನೊಲುಮೆಗೆ ಪಾತ್ರವಾಗುವಲ್ಲಿ ಮಹತ್ವಪೂರ್ಣವಾದುದು. ಶಿವಧ್ಯಾನ ಹಾಗೂ ಆರಾಧನೆಗೆ ಬೇಕಾದ ಮಾನಸಿಕ ಶುದ್ಧಿಗಾಗಿ ಉಪವಾಸವನ್ನೂ, ವಿಶೇಷ ಪೂಜೆ ಹಾಗೂ ಸ್ಮರಣೆಗಾಗಿ ರಾತ್ರಿಯ ಜಾಗರಣೆಗಳನ್ನು ಯಥಾನುಶಕ್ತಿ ಆಚರಿಸುವುದು ಉತ್ತಮ.

            ಧ್ಯಾನ ಹಾಗೂ ಬಾಹ್ಯ ಪೂಜೆಗಳಿಗೆ ಪೂರಕವಾಗಿರುವುದೇ ನಿರಾಹಾರರೂಪವಾದ ಉಪವಾಸ. ಇದಕ್ಕೆ ಪೌರಾಣಿಕ, ವೈಜ್ಞಾನಿಕ ಹಾಗೂ ಜನಜೀವನದ ಸಾಂಸ್ಕೃತಿಕ ಮೌಲ್ಯಗಳ ಹಿನ್ನೆಲೆಯೂಇದೆ. ಲೋಕ ಕಲ್ಯಾಣಕ್ಕಾಗಿ ಶಿವನು ನಂಜನ್ನು ಉಂಡು ನಂಜುಂಡನಾದ ಪೌರಾಣಿಕ ಘಟನೆಗೂ ಶಿವರಾತ್ರಿಯಂದು ಆಚರಿಸುವ ಜಾಗರಣೆ ಹಾಗೂ ಉಪವಾಸಕ್ಕೂ ಪರಸ್ಪರ ಅಂತರ್-ಸಂಬಂಧವಿದೆ. ಹಾಗೂ ಇದರಲ್ಲಿ ಒಂದಷ್ಟು ವೈಜ್ಞಾನಿಕ ನೆಲೆಗಟ್ಟಿನ ಅಂಶಗಳೂ ಸಮ್ಮಿಳಿತವಾಗಿರುವುದು ಕಾಣಬಹುದು. ಯಾವುದೇ ಕಾರಣದಿಂದ ವಿಷವು ಮಾನವ ದೇಹದೊಳಗೆ ಪ್ರವೇಶಿಸಿದರೆ ಅದು ದೇಹಾದ್ಯಂತ ವ್ಯಾಪಿಸದಂತೆ ತಡೆಯಲು ಅನುಕೂಲವಾಗುವಂತೆ ನಿದ್ರಿಸಗೊಡಬಾರದು ಹಾಗೂ ವಿಷದ ತೀವ್ರತೆಯನ್ನು ಕುಗ್ಗಿಸುವ ಸಲುವಾಗಿ ಎಳನೀರು, ಪಾನಕ ಹಾಗೂ ಹಣ್ಣುಗಳನ್ನಷ್ಟೇ ಸೇವಿಸಲು ನೀಡಬೇಕು. ವಿಜ್ಞಾನವೂ ಇದನ್ನೇ ಹೇಳುತ್ತದೆ. ಅಂದ ಮೇಲೆ ನಂಜುಂಡನ ಸ್ತುತಿ ಹಾಗೂ ಸ್ಮರಣೆಯೇ ಪ್ರಧಾನವಾದ ಶಿವರಾತ್ರಿಯಂದು ಮಾಡುವ ಜಾಗರಣೆ ಮತ್ತು ಉಪವಾಸದ ಔಚಿತ್ಯಪೂರ್ಣತೆ ಏನೆನ್ನುವುದು ಅರಿವಾಗುತ್ತದೆ. ಉಪವಾಸವಿದ್ದು ಹಸಿವಾದಾಗಲಷ್ಟೇ  ಅಹಾರದ ನೈಜ ಬೆಲೆ ಅರಿವಿಗೆ ಬರುತ್ತದೆ ಎಂಬಲ್ಲಿನ ಸಾಮಾಜಿಕ ಪ್ರಾಧಾನ್ಯತೆಯೂ ಇದರಲ್ಲಿ ಹುದುಗಿದೆ. ಹೊಟ್ಟೆಯನ್ನು ಖಾಲಿ ಬಿಡಬಾರದೆಂದು ಹಿರಿಯರು ಹೇಳುತ್ತಾರೇನೊ ನಿಜ ಆದರೆ ಅದಕ್ಕೆ ಸಮಾನಾಂತರವಾಗಿ ಉಪವಾಸ  ದೀಕ್ಷೆಯ ಅಗತ್ಯವೂ ಪ್ರಸ್ತಾಪವಾಗಿದೆಯಲ್ಲವೇ? ಪೌರಾಣಿಕ ಹಾಗೂ ಆಧ್ಯಾತ್ಮಿಕವಾದವು ಉಪವಾಸ ಶಕ್ತಿಶಾಲಿ ಎಂದೇ ಹೇಳುತ್ತದೆ. ಆಧುನಿಕ ವೈದ್ಯ ವಿಜ್ಞಾನ ಲೋಕವೂ ಒಂದು ನಿಯಮಿತ ಉಪವಾಸವನ್ನು ಪುರಸ್ಕರಿಸುತ್ತದೆ.

           ನಿದ್ರೆಯು ತಮೋಗುಣವುಳ್ಳ ಕಾರ್ಯವೆನಿಸಿಕೊಂಡಿದೆ. ಶಿವರಾತ್ರಿಯಂದು ಇಡೀರಾತ್ರಿ ಶಿವನ ಆರಾಧನೆಗೆ ವಿನಿಯೋಗಿಸಲ್ಪಡಬೇಕೆಂಬ  ಉದ್ಧೇಶದಿಂದ ಜಾಗರಣೆ ಮಾಡುವುದು ಸೂಕ್ತ ಎನ್ನುವುದು ಶಾಸ್ತ್ರದ ಪ್ರತಿಪಾದನೆ. ಈ ಅಂಶಕ್ಕೆ ವ್ಯತಿರಿಕ್ತವೆಂಬಂತೆ ಹೇಗಾದರೂ ಸರಿ ಜಾಗರಣೆ ಮಾಡಿದರಾಯಿತು, ಅದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಭಾವಿಸಿ ಅನಿಷ್ಟ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ರಾತ್ರಿಯೆಲ್ಲಾ ಎಚ್ಚರವಾಗಿರುವವರಿದ್ದಾರೆ. ಜೂಜಾಡುವುದು, ಕಳ್ಳತನ, ಕಲಹ ಉಂಟುಮಾಡುವುದು, ಅಶ್ಲೀಲವಾದ ಕಾರ್ಯಕ್ರಮಗಳನ್ನು ವೀಕ್ಷಿಸುವ ಮೂಲಕ ಜಾಗರಣೆ ಮಾಡುವುದು ಶಿವರಾತ್ರಿಯಂತಹ ಪುಣ್ಯದಿನದಂದು ಪಾಪ ಕಾರ್ಯಗೈದಂತೆಯೇ ಸರಿ. ಶಿವರಾತ್ರಿಯ ಜಾಗರಣೆಯೆಂದರೆ ಅದು ಭಗವಂತನ ಧ್ಯಾನ ಹಾಗೂ ಆರಾಧನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜಾಗೃತವಾಗಿರುವುದು ಎಂದರ್ಥ. ಶಿವರಾತ್ರಿಯಂದು ನಡೆಯಬೇಕಾಗಿರುವುದು ಪೂಜ್ಯಾರ್ಥ ಜಾಗರಣೆ ಹಾಗೂ ಉಪವಾಸ. ಅದರ ಆಚರಣೆಯ ಆದರ್ಶಗಳನ್ನು ಯಾವ ಶಿವರಾತ್ರಿ ಮಹಾತ್ಮ್ಯ  ಕಥೆಗಳೂ ಭಕ್ತರಿಗೆ ಬೋಧಿಸುವುದಿಲ್ಲ. ಭಗವಂತನ ಅನುಗ್ರಹಕ್ಕೆ ಭಾಜನವಾಗುವ ಉದ್ಧೇಶ ಸಾಕಾರದ ಧ್ಯೇಯವು ಭಕ್ತರಲ್ಲಿ ಯಾವುದು ವಿಧಿ ಯಾವುದು ನಿಷೇಧ ಎನ್ನುವ ಸ್ವಯಂ ತಿಳುವಳಿಕೆಯನ್ನು ಮೂಡಿಸಬೇಕಷ್ಟೇ.

ಯಾವುದೇ ಒಂದು ಜನಾಂಗದ ದೇವತೆಯಾಗಿರದೆ, ಸರ್ವಭೂತಗಳಿಗೂ ಒಡೆಯನಾಗಿ, ವೈದಿಕ ಹಾಗೂ ತಾಂತ್ರಿಕವಾಗಿ ನಾನಾ ವಿಧಗಳಿಂದ ಆರಾಧಿಸಲ್ಪಡುವ ಭಗವಂತನಾದ ಶಿವನನ್ನು ಮಹಾಶಿವರಾತ್ರಿಯಂದು ಯಥಾನುಶಕ್ತಿ ವಿಧಿವತ್ತಾಗಿ ಭಕ್ತಿಯಿಂದ ಆರಾಧಿಸುವ ಮೂಲಕ ಅವನ ಒಲುಮೆ ಹಾಗೂ ಅನುಗ್ರಹಗಳಿಗೆ ಪಾತ್ರರಾಗೋಣ.

Facebook ಕಾಮೆಂಟ್ಸ್

ಲೇಖಕರ ಕುರಿತು

Sandesh H Naik

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!