ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಅದೆಷ್ಟು ವಿಷಯಗಳನ್ನು ವಿವರವಾಗಿ ಅರಿಯಬಹುದು ಎಂಬ ಪ್ರಶ್ನೆಗೆ ಉತ್ತರದ ಮೂಲ ಆ ವ್ಯಕ್ತಿಯ ಆಸಕ್ತಿ ಎಂಬ ಕ್ರಿಯೆಯಲ್ಲಿರುತ್ತದೆ. ವ್ಯಕ್ತಿ ಕಲಿಕೆಯಲ್ಲಿ ಹೆಚ್ಚು ಆಸಕ್ತದಾಯಕನಾದಷ್ಟೂ ಹೆಚ್ಚು ವಿಷಯಗಳು ಆತನ ಕೂತುಹಲವನ್ನು ಕೆರಳಿಸಿ ಹೊಸ ವಿಚಾರಗಳನ್ನು ಕಲಿಸುತ್ತವೆ. ಆಸಕ್ತಿ ಹಾಗು ಕಲಿಕೆ ಮಾನವನ ಜೀವನದಲಿ ಒಂದಕ್ಕೊಂದು ಪೂರಕವಾಗಿರುತ್ತವೆ. ಇಂದು ಮುಂದುವರೆದ ಆಧುನಿಕತೆಯಲ್ಲಿ ಕಲಿಯಲು, ಕಲಿತು ಸಂಶೋಧಿಸಲು ಹಲವಾರು ಸೌಲಭ್ಯಗಳಿದ್ದರೂ ನಾವುಗಳು ಕೇವಲ ಒಂದೂ ಅಥವಾ ಎರಡೂ ಹೊಸ ವಿಷಯಗಳಿಗೆ ಮಾತ್ರ ನಮ್ಮ ಓದು ಹಾಗು ಸಂಶೋಧನೆಗಳನ್ನು ಮೀಸಲಿಡುತೇವೆ. ಅದರಲ್ಲೂ ತಡಕಾಡುತ್ತೇವೆ.
ಆದರೆ ಕೆಲವು ದಂತಕಥೆಗಳು ನಮ್ಮೊಟ್ಟಿಗೇ ಹುಟ್ಟಿ, ನಮ್ಮೊಟ್ಟಿಗೇ ಬೆಳೆದು, ನಮಗಿಂದು ಸಿಗುತ್ತಿರುವ ಸೌಲಭ್ಯಗಳ ತೃಣಮಾತ್ರದಲ್ಲಿ ಹಲವಾರು ವಿಷಯಗಳಲ್ಲಿ ತಮ್ಮನ್ನು ತೊಡಗಿಸಿ, ಕಲಿತು, ಸಂಶೋಧಿಸಿ ಸಮಾಜಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿರುವ ಉದಾಹರಣೆಗಳಿವೆ.. ಅಲ್ಲದೆ ಅವರ ಆ ಕೊಡುಗೆ ಕೇವಲ ಒಂದು ವಿಷಯಕ್ಕೆ ಮಾತ್ರ ಸೀಮಿತವಾಗಿರದೆ ತಮಗೆ ಕುತೂಹಲ ಕೆರಳಿಸಿದ ವಿಷಯಗಳಿಗೆಲ್ಲ ಪಸರಿಸಿ ಹೆಸರು ಮಾಡಿರುವುದೂ ಉಂಟು. ಒಬ್ಬ ಮಾನವ ತನ್ನ ಜೀವಿತಾವಧಿಯಲ್ಲಿ ಅದೆಷ್ಟು ವಿಷಯಗಳಲ್ಲಿ ಪ್ರವೀಣನಾಗಬಹುದು ಎಂಬುದಕ್ಕೆ ಇಂತಹ ಹಲವರು ಉತ್ತಮ ಉದಾಹರಣೆಗಳಾಗುತ್ತಾರೆ. ಆಸಕ್ತಿ ಹಾಗು ಜೊತೆಗೆ ಸಾದಿಸುವ ಛಲದಿಂದ ತನ್ನ ಅಲ್ಪಾವಧಿಯಲ್ಲಿ ಎಷ್ಟೆಲ್ಲಾ ಸಾದನೆಗಳನ್ನು ಸಾಧಿಸಬಹುದೆಂದು ಇವರು ತೋರಿಸಿಕೊಟ್ಟರು. ಸಾಧಕರಿಗೆ ಮಾದರಿಯಾದರು.
ನಡೆದಾಡುವ ವಿಶ್ವಕೋಶ, ಯುಗಾಮಾನದ ಸಾಹಿತಿ, ಕಡಲ ತೀರದ ಭಾರ್ಗವರೆಂದೇ ಹೆಸರಾದ ಇವರು ತಮ್ಮ ಜೀವಿತಾವಧಿಯಲ್ಲಿ ಕೈಯಾಡಿಸದ ವಿಷಯಗಳಿಲ್ಲ, ರುಚಿ ನೋಡದ ವಲಯಗಳಿಲ್ಲ.ಕಂಡರೂ ಪರಾಮರ್ಶಿಸಿ ನೋಡು ಎಂಬ ವ್ಯಕ್ತಿತ್ವದ ಇವರು ತಮ್ಮನ್ನು ಯಾರ ಹಂಗಿಗೂ ಒಪ್ಪಿಸದೆ ಸ್ವಂತ ವಿಚಾರಧಾರೆಯಲ್ಲಿ ಬೆಳೆದವರು. ಆದ ಮಾತ್ರಕ್ಕೆ ಏನೋ ಇಷ್ಟೆಲ್ಲಾ ವಿಷಯಗಳನ್ನು ಕಟ್ಟಿ ನಿಂತ ವಿಶಿಷ್ಟ ಮೂರ್ತಿಯಾದರು. ಒಬ್ಬ ಕವಿಯಾಗಿ, ಸಾಹಿತಿಯಾಗಿ, ಪತ್ರಕರ್ತನಾಗಿ, ಯಕ್ಷಗಾನ ಕಲಾವಿದನಾಗಿ, ರಾಜಕಾರಣಿಯಾಗಿ, ಸ್ವಾತಂತ್ರ್ಯ ಹೋರಾಟಗಾರನಾಗಿ, ಚಲನಚಿತ್ರ ನಿರ್ದೇಶಕನಾಗಿ, ನಿರ್ಮಾಪಕನಾಗಿ, ಪರಿಸರವಾದಿಯಾಗಿ, ಒಂದೇ ಎರಡೇ.. ಒಬ್ಬ ವ್ಯಕ್ತಿ ತನ್ನ ಆಯಸ್ಸೆಲ್ಲವನ್ನು ಇವರು ಸಾಧಿಸಿರುವ ವಿಷಯಗಳ ಬಗ್ಗೆ ಅರಿಯಲು ಮುಡಿಪಾಗಿಟ್ಟರೂ ಸಾಲದು! ಅಲ್ಲದೆ ಇವೆಲ್ಲವೂ ಇಂದು ಬಂದು ನಾಳೆ ಹೋದಂತೆ ಇವರ ಜೀವನದಲ್ಲಿ ಬಂದು ಹೋದವುಗಳಲ್ಲ. ಹಿಡಿದ ವಿಷಯದ ಆಳವನ್ನು ಮುಟ್ಟುವ ತನಕ ಬಿಡದ ವ್ಯಕ್ತಿತ್ವ ಅವರದಾಗಿತ್ತು. ಹೀಗೆ ಕಲಿತ ವಿಷಯಗಳಲ್ಲಿ ಏನನ್ನಾದರೂ ವಿಶಿಷ್ಟವನ್ನು ಸಾಧಿಸಿಯೇ ಅವರಿಗೆ ವಿಶ್ರಾಂತಿ.
೧೯೦೨ ಅಕ್ಟೋಬರ್ ೧೦ ರಂದು ಇಂದಿನ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಲ್ಲಿ ಹುಟ್ಟಿ ಬೆಳೆದ ಇವರ ನಡತೆ ಇತರ ಮಕ್ಕಳಿಗೆ ಹೋಲಿಸಿದರೆ ತೀರಾ ವಿಭಿನ್ನವಾಗಿತ್ತು. ಚಿಕ್ಕವರಿದ್ದಾಗ ಇವರು ಕಲಿತ ಶಾಲೆಯಲ್ಲಿ ಇಂಗ್ಲಿಷ್ ಭಾಷೆಯನ್ನೇ ಮಾತಾಡಬೇಕೆಂದು ನಿಯಮವೊಂದಿತ್ತು. ಆದರೆ ಇದ್ಯಾಕೋ ಇವರಿಗೆ ಸರಿ ಅನ್ನಿಸಿರಲಿಲ್ಲ ಹಾಗೂ ಒಳಗೊಳಗೇ ಈ ನಿಯಮವನ್ನು ಜಾರಿಗೆ ತಂದ ಪ್ರಾಂಶುಪಾಲರನ್ನು ವಿರೋಧಿಸುತ್ತಿದ್ದರು. ಹೀಗೆ ಒಂದು ದಿನ ಇದನ್ನು ವಿರೋದಿಸುವ ಸಲುವಾಗಿ ಪಿಸುಗುಡುತ್ತಿದ್ದ ತನ್ನ ಸ್ನೇಹಿತನನ್ನು ಕುರಿತು ಪ್ರಾಂಶುಪಾಲರಿಗೆ ಕೇಳುವಂತೆ ‘ಏಯ್ ಕತ್ತೆ..ಕನ್ನಡದಲ್ಯಾಕೆ ನಗಾಡುತ್ತಿದ್ದೀಯ.. ನಗುವುದಾದದರೆ ಇಂಗ್ಲಿಷ್ನಲ್ಲಿ ಮಾತ್ರ ನಗು’ ಎಂದು ಮಾರ್ಮಿಕವಾಗಿ ಕೂಗಿದ್ದರಂತೆ.ಈ ಘಟನೆಯಾದ ನಂತರ ಶಾಲೆಯಲ್ಲಿ ಇಂಗ್ಲಿಷ್ ಮಾತನಾಡುವ ನಿಯಮ ಕೊಂಚ ಸಡಿಲವೂ ಆಯಿತಂತೆ! ಹೀಗೆ ಚಿಕ್ಕವರಿಂದಲೇ ಯಾವುದೇ ಕಟ್ಟುಪಾಡುಗಳಿಗೆ ಜೋತು ಬೀಳದೆ, ಸರಿಯನ್ನಿಸದನ್ನು ತಪ್ಪೆಂದೆ ಹೇಳುವ ಗುಣಗಳನ್ನು ಬೆಳೆಸಿಕೊಂಡರು ಇವರು. ಯಕ್ಷಗಾನ, ನಾಟಕ, ಹಾಗು ಪಠ್ಯೇತರ ವಿಷಯಗಳ ಓದು ಸಣ್ಣವರಿದ್ದಾಗ ಇವರ ಬಹು ಆಸಕ್ತಿಯ ವಲಯಗಳು. ತಮ್ಮ ಕಾಲೇಜು ಜೀವನದಲ್ಲಿ ಗಾಂಧಿಯವರ ಅಸಹಕಾರ ಚಳುವಳಿಯಿಂದ ಪ್ರೇರಿತರಾಗಿ ಕಾಲೇಜು ವ್ಯಾಸಂಗವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಚಳುವಳಿಯಲ್ಲಿ ಧುಮುಕಿದರು. ಮಗನನ್ನು ಒಬ್ಬ ಒಳ್ಳೆಯ ವಕೀಲನಾಗಿ ಮಾಡಬೇಕೆಂದು ಇಚ್ಛಿಸಿದ್ದ ಇವರ ತಂದೆ, ಮಗ ಓದನ್ನು ಬಿಟ್ಟು ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡದ್ದನ್ನು ಕಂಡು ಹೈರಾಣಾದರು. ಅಲ್ಲದೆ ಮಗನನ್ನು ಪುನ್ಹ ಕಾಲೇಜಿಗೆ ತರಲು ಮನೆಯಲ್ಲಿ ಹೋಮ ಹವನವನ್ನೂ ಮಾಡಿಸಿದರು! ಆದರೆ ಹಿಡಿದಿದ್ದನ್ನು ಬಿಡದ ಛಲ ನಮ್ಮ ನಾಯಕನದು. ಯಾರ ಮಾತಿಗೂ ಜಗ್ಗದೆ ತಮ್ಮನ್ನು ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡೇ ಬಿಟ್ಟರು. ಮುಂದಿನ ಆರೆಂಟು ವರ್ಷಗಳ ಕಾಲ ವಿಧವೆಯರ ಮದುವೆ, ನೆರೆ ಸಂತ್ರಸ್ಥರಿಗೆ ಸಹಾಯ, ವೈಶ್ಯವಾಟಿಕೆಯಲ್ಲಿ ತೊಡಗಿದ್ದ ಮಹಿಳೆಯರಿಗೆ ಸಹಾಯ, ಚರಕ ಕೇಂದ್ರಗಳ ಸ್ಥಾಪನೆ, ಹಳ್ಳಿಗಳ ನೀರಿನ ಸಮಸ್ಯೆಗಳಿಗೆ ಭಾವಿಗಳನ್ನು ತೊಡುವುದು, ಹೀಗೆ ಹತ್ತು ಹಲವು ಸಮಾಜ ಸೇವೆಗಳನ್ನು ಶ್ರದ್ದೆಯಿಂದ ಮಾಡಿದರು. ಕಡಲ ತೀರದಲ್ಲಿ ಹೆಸರು ಮಾಡತೊಡಗಿದರು. ಪರಿಸರವಾದಿಯಾಗಿದ್ದ ಇವರು ಮುಂದೆ ೧೯೮೯ ರಲ್ಲಿ ಕೈಗಾ ಅಣುಸ್ಥಾವರದ ವಿರುದ್ಧ ಹೋರಾಡಿ ಆ ಯೋಜನೆಯನ್ನು ವಿರೋದಿಸುವ ಜನರ ಪರವಾಗಿ ಲೋಕಸಭಾ ಚುನಾವಣೆಗೆ ನಿಂತು ಸೋತಿರುವುದು ಉಂಟು.
ಇವೆಲ್ಲದರ ಮದ್ಯೆ ೧೯೨೪ರಲ್ಲಿ ಇವರಿಗೆ ಪತ್ರಿಕೋದ್ಯಮದ ಆಸಕ್ತಿ ಹತ್ತಿಕೊಳ್ಳುತ್ತದಲ್ಲದೆ ನೋಡ ನೋಡುತ್ತಲೇ ತಮ್ಮ ಗೆಳೆಯರೊಟ್ಟಿಗೆ ‘ವಸಂತ’ ಎಂಬ ಪತ್ರಿಕೆಯನ್ನು ಖುದ್ದಾಗಿಯೇ ಶುರು ಮಾಡಿಬಿಡುತ್ತಾರೆ! ಪತ್ರಿಕೆಯೇನೋ ಶುರುವಾಯಿತು ಆದರೆ ಹಾಳೆಗಳ ಮೇಲೆ ಬರಹಗಳನ್ನು ಹೇಗೆ ತುಂಬುವುದು? ತಾವು ಬಲ್ಲ ಅದಷ್ಟು ಕವಿ ಸಾಹಿತಿಗಳಿಗೆ ತಮ್ಮ ಪತ್ರಿಕೆಗೆ ಬರೆಯಲು ಕೋರಿಕೊಳ್ಳುತ್ತಾರೆ. ಆದರೂ ಪತ್ರಿಕೆಯ ಭಾಗಶಃ ಪುಟಗಳು ಖಾಲಿಯಾಗಿಯೇ ಉಳಿಯತೊಡಗಿದವು. ಛಲ ಬಿಡದ ಈ ನಾಯಕ ಸೋಲನ್ನೊಪ್ಪಿಕೊಳ್ಳಲಿಲ್ಲ. ತಾವೇ ಸ್ವತಹಃ ಶಾಹಿಯನ್ನು ಹಿಡಿದರು! ಎರೆಡೆರೆಡು ಪತ್ತೇದಾರಿ ಕಥಾ ಸರಣಿಯನ್ನು ಬರೆಯಲು ಶುರು ಮಾಡಿದರು! ಓದಿರುವುದು ಅರ್ದಮ್ಬರ್ದ ಕಾಲೇಜು ಆದರೂ ಕಥಾ ಸರಣಿಯನ್ನು ಬರೆಯಬಲ್ಲ ಕ್ಷಮತೆ ಇವರಿಗೆ ಸಹಜವಾಗೇ ಬಂದೊದಗಿತು. ಅಂತೂ ಎಳೆ ಮೀಸೆಯ ಸಾಹಸಿ ಯುವಕನೊಬ್ಬ ಆರು ವರ್ಷಗಳ ಕಾಲ ಸ್ವತಃ ಪತ್ರಿಕೆಯೊಂದನ್ನು ಶುರು ಮಾಡಿ, ಬರೆದು, ನಡೆಸಿ ಎಲ್ಲರ ಹುಬ್ಬೇರುವಂತೆ ಮಾಡಿದ. ಹೀಗೆ ಶುರುವಾದ ಇವರ ಬರವಣಿಗೆ ತಮ್ಮ ಕೊನೆಯುಸಿರಿರುವವರೆಗೂ ದಿಟ್ಟವಾಗಿ ಸಾಗಿತು. ಇವರದು ೪೭ ಕಾದಂಬರಿಗಳು, ೩೧ ನಾಟಕಗಳು, ೪ ಸಣ್ಣ ಕಥಾಮಾಲಿಕೆ, ಕಲೆಯ ಕುರಿತು ೧೩ ಪುಸ್ತಕಗಳು, ೯ ವಿಶ್ವಕೋಶಗಳು ಹಾಗು ನೂರಾರು ಪ್ರಬಂದ ಹಾಗು ಲೇಖನಗಳು! ತಮ್ಮ ತೊಂಬತೈದನೆ ವಯಸ್ಸಿನಲ್ಲೂ ಪುಸ್ತಕಗಳನ್ನು ಬರೆಯುತ್ತಿದ್ದರು ಎಂದರೆ ಬರಹವನ್ನು ಅದೆಷ್ಟು ರೂಡಿಸಿಕೊಂಡಿದ್ದರೆಂದು ತಿಳಿಯುತ್ತದೆ.
ಬರಹವನ್ನು ಬಿಟ್ಟರೆ ಇವರ ನಂತರದ ವ್ಯಕ್ತ ಮಾಧ್ಯಮ ನಾಟಕ. ಸಮಾಜದ ಸಮಸ್ಯೆಗಳ ಸುಧಾರಣೆಗೆ ಇದು ಸಹ ಒಂದು ಮಾರ್ಗವಾಗಿತ್ತು ಎಂದು ಇವರು ನಂಬಿದ್ದರು. ‘ನಿಶಾ ಮಹಿಮೆ’ ಎಂಬ ತಮ್ಮ ಮೊದಲ ನಾಟಕದ ಮೂಲಕ ಶುರುವಾದ ಇವರ ಪಯಣ ಮುಂದೆ ಹಲವಾರು ನಾಟಕಗಳನ್ನು ತಾವೇ ಸ್ವತಹಃ ನಿರ್ದೇಶಿಸುವ ಮಟ್ಟಕ್ಕೆ ತಲುಪಿತು. ಮುಂದೆ ಸಾಗಿ ಚಿತ್ರ ನಿರ್ದೇಶನಕ್ಕೂ ಕೈ ಹಾಕಿದರು. ಸಾಲವನ್ನು ಮಾಡಿ ಚಿತ್ರ ನಿರ್ದೇಶನಕ್ಕೆ ಬೇಕಾದ ಎಲ್ಲಾ ವಿಷಯಗಳನ್ನು ಶ್ರದ್ದೆಯಿಂದ ಕಲಿತು ಅಸ್ಪೃಶ್ಯತೆಯ ಬಗ್ಗೆ ‘ಡೊಮಿಂಗೊ’ ಎಂಬ ಮೊದಲ ಮೂಕಿ ಚಿತ್ರವನ್ನು ಮಾಡಿಯೇ ಬಿಟ್ಟರು. ನಂತರ ಪುಟ್ಟದೊಂದು ಸ್ಟುಡಿಯೋವನ್ನು ಸ್ಥಾಪಿಸಿ ಸಣ್ಣ ಪುಟ್ಟ ಚಿತ್ರಗಳನ್ನು ಅಲ್ಲಿ ಮಾಡತೊಡಗಿದರು. ಮುಂದೆ ಯಕ್ಷಗಾನವನ್ನೂ ಕಲಿತು ತಮ್ಮ ತಂಡದೊಂದಿಗೆ ದೇಶ ವಿದೇಶಗಲ್ಲೆಡೆ ಪ್ರದರ್ಶನಗಳನ್ನು ನೀಡುತ್ತಾ ಬಂದರು. ಯಕ್ಷಗಾನದ ಸಂಸ್ಕೃತಿಯ ಉಳಿವಿಗೆ ಬಹಳಷ್ಟು ಪಣ ತೊಟ್ಟರು. ಬರಹಗಳಂತೆ ಇವರಿಗೆ ಇವೆಗಳೆಲ್ಲದರ ಮೂಲ ಉದ್ದೇಶ ಸಮಾಜದ ಸುಧಾರಣೆ ಹಾಗು ಜನರ ಒಗ್ಗೂಡಿಸುವಿಕೆಯಾಗಿತ್ತು. ಅಕ್ಷರ ಸಹ ತಾವು ಬಯಸಿದ್ದನ್ನು ಸಾಧಿಸಿಯೇ ಬಿಟ್ಟರು.
ಇವರಿಗೆ ಮಕ್ಕಳ ಓದು ಹಾಗು ಭವಿಷ್ಯದ ಮೇಲಿದ್ದ ಪ್ರೀತಿ ಹಾಗು ಕಾಳಜಿ ಅತ್ತ್ಯುನ್ನತವಾದುದು. ಪುಸ್ತಕದ ಒಳಗಿರುವ ವಿಷಯಗಳಿಗೆ ಮಾತ್ರ ಮುಡಿಪಾಗಿಡಿಸುವ ಶಿಕ್ಷಣ ಪದ್ದತಿಯನ್ನು ನೆಚ್ಚದ ಇವರು ಮಕ್ಕಳಿಗಾಗೇ ೧೯೩೪ ರಲ್ಲಿ ‘ಬಾಲವನ’ವೆಂಬ ಮಕ್ಕಳ ಶಾಲೆಯೊಂದನ್ನು ತೆರೆದರು. ಇಲ್ಲಿ ಮಕ್ಕಳ ಅರಳುವ ಮುದ್ದು ಮನಗಳು ಪರಿಸರದ ಮದ್ಯೆ, ಆಟೋಟಗಳ ಮೂಲಕ ಶಿಕ್ಷಣವನ್ನು ಕಲಿಯಬಹುದಿತ್ತು. ಅಂದಿನ ಸಾಂಪ್ರದಾಯಿಕ ಶಿಕ್ಷಣ ಪದ್ದತಿಗೆ ಇದು ಅಕ್ಷರ ಸಹ ವ್ಯತಿರಿಕ್ತವಾಗಿತ್ತು. ಬೆರಳೆಣಿಕೆಯ ಮಕ್ಕಳಷ್ಟೇ ಇಲ್ಲಿಗೆ ಬರತೊಡಗಿ ಕೆಲ ವರ್ಷಗಳ ನಂತರ ಬಾಲವನ ಮುಚ್ಚಲ್ಪಟ್ಟಿತ್ತು. ಆದರೆ ಮಕ್ಕಳ ಮೇಲಿನ ಕಾಳಜಿ ಇವರಿಗೆ ಕಡಿಮೆಯೇನಾಗಲಿಲ್ಲ. ಆಗಿನ ಕಾಲಕ್ಕೆ ಮಕ್ಕಳಿಗಾಗೇ ಯಾವುದೆ ಬಗೆಯ ವಿಶ್ವಕೋಶ (Encyclopedia) ಗಳಿರದ್ದನ್ನು ಗಮನಿಸಿದ ಇವರು ‘ಬಾಲ ಪ್ರಪಂಚ’, ‘ವಿಜ್ಞಾನ ಪ್ರಪಂಚ’ ಹಾಗು ‘ಓದುವ ಆಟ’ ವೆಂಬ ಬೃಹತ್ ವಿಶ್ವಕೋಶಗಳನ್ನು ರಚಿಸಿಯೇ ಬಿಡುತ್ತಾರೆ. ಅಲ್ಲದೆ ತಮ್ಮ ಕೊನೆ ದಿನಗಳಲ್ಲೂ ಮಕ್ಕಳಿಗಾಗೇ ಹಕ್ಕಿಗಳ ಬಗ್ಗೆ ಪುಸ್ತಕವೊಂದನ್ನು ಬರೆಯುತ್ತಿದ್ದರು. ಹೀಗೆ ಮಕ್ಕಳಿಗಾಗೇ ನೂರಾರು ಪುಸ್ತಕಗಳನ್ನು ಬರೆದರು. ನಾಳಿನ ಸಮಾಜವನ್ನು ನೆಡೆಸುವ ಮಕ್ಕಳು ಸರ್ವತೋಮುಖವಾಗಿ ಬೆಳೆಯಬೇಕು ಎಂಬುದೇ ಇದರಿಂದಿನ ಇವರ ಆಶಯವಾಗಿತ್ತು.
ಏತನ್ಮದ್ಯೆ ೧೯೩೫ರ ಸುಮಾರಿಗೆ ಮಂಗಳೂರಿನ ಬೆಸೆಂಟ್ ಬಾಲಕಿಯರ ಶಾಲೆಗೆ ನೃತ್ಯ ಕಲಿಸಲು ಹೋಗುತ್ತಿರುವಾಗ ಲೀಲಾ ಎಂಬುವರ ಪರಿಚಯವಾಗಿ ೧೯೩೬ ರಲ್ಲಿ ಸಮಾಜದ ವಿರೋಧದ ನಡುವೆಯೂ (ಲೀಲಾ ಬಂಟರ ಸಮುದಾಯಕ್ಕೆ ಸೇರಿದವರಾಗಿದ್ದರು) ಅವರ ಕೈಯಿಡಿಯುತ್ತಾರೆ. ಜಾತಿ ಪದ್ದತಿ, ಮೇಲು-ಕೀಳು ಇದ್ಯಾವುದನ್ನು ಲೆಕ್ಕಿಸದ ಇವರು ಸಮಾಜದ ಮಾತುಗಳಿಗೆ ಬೆಲೆ ಕೊಡುವುದಿಲ್ಲ. ಮುಂದೆ ನಾಲ್ಕು ಮಕ್ಕಳ ತಂದೆಯಾಗಿ ಒಂದು ತುಂಬು ಜೀವನವನ್ನು ನೆಡೆಸುತ್ತಾರೆ.
ಇವೆಲ್ಲದರ ನಡುವೆ ಇವರಿಗೆ ಇನ್ನೂ ಒಂದು ನೆಚ್ಚಿನ ಹವ್ಯಾಸವಿರುತ್ತದೆ. ಅದೇ ಪ್ರವಾಸ. ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬಂತೆ ಇವರ ಎಲ್ಲಾ ಸಮಗ್ರ ರಚನೆಗಳಿಗೆ ಪ್ರವಾಸವೂ ಒಂದು ಮುಖ್ಯ ಅನುಭವವಾಗಿರುತ್ತದೆ.ತಮ್ಮ ಮೂವತ್ತನೇ ವಯಸ್ಸಿಗಾಗಲೇ ಬಾಗಶಃ ಭಾರತವನ್ನು ಸುತ್ತಿದ್ದ ಇವರು ನಂತರ ವಿದೇಶ ಪರ್ಯಟನೆಯನ್ನು ಸಹ ಮಾಡುತ್ತಾರೆ. ತಮ್ಮ ೮೮ನೇ ವಯಸ್ಸಿನಲ್ಲೂ ದಕ್ಷಿಣ ಅಮೆರಿಕಕ್ಕೆ ಪ್ರವಾಸ ಕೈಗೊಂಡಿದ್ದು ಆಶ್ಚರ್ಯವೇ ಸರಿ. ಪ್ರವಾಸವೆಂದರೆ ಕೇವಲ ಸುತ್ತುವುದು, ವೀಕ್ಷಿಸುವುದು ಆಗಿರಲಿಲ್ಲ. ಇವರು ಹೋದಡೆಯಲ್ಲ ಸಿಗುವ ಪುಸ್ತಕ, ಚಿತ್ರಕಲೆ, ಸಂಸ್ಕೃತಿಗಳನ್ನು ಆಳವಾಗಿ ಅರ್ಥೈಸಿಕೊಂಡು ಗುರುತು ಮಾಡಿಕೊಂಡು ಬರುತ್ತಿದ್ದರು. ಇವುಗಳೆಲ್ಲವೂ ಸೇರಿ ಒಟ್ಟು ನಾಲ್ಕು ಪ್ರವಾಸ ಕಥನ ಪುಸ್ತಕಗಳು ಇವರಿಂದ ಮೂಡಿವೆ.
ಈ ಬಹುಮುಖ ಪ್ರತಿಭೆಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಅರಸಿ ಬಂದಿವೆ. ಆದರೆ ಎಂದೂ ಇವರು ಅವುಗಳಿಗಾಗಿ ಜೋತು ಬಿದ್ದವರಲ್ಲ. ತಮ್ಮ ‘ಮೂಕಜ್ಜಿಯ ಕನಸುಗಳು’ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ‘ಈ ಜ್ಞಾನಪೀಠ ನನಗೆ ಜ್ಞಾನಪಿತ್ತವಾಗದಿರಲಿ’ ಎಂದು ಮಾರ್ಮಿಕವಾಗಿ ಹೇಳಿದರಂತೆ. ೧೯೭೫ರ ದೇಶದ ತುರ್ತು ಪರಿಸ್ಥಿಯನ್ನು ವಿರೋದಿಸುವ ಸಲುವಾಗಿ ತಮಗೆ ಬಂದ ‘ಪದ್ಮ ಭೂಷಣ’ವನ್ನೂ ಇವರು ಹಿಂತಿರುಗಿಸಿರುವುದುಂಟು! ಲೇಖಕರು, ಬರಹಗಾರರೆಂದರೆ ಬುದ್ದಿಜೀವಿಗಳು, ಸಾಹಸಿಗಳು, ಎಂದೆಲ್ಲ ಅರಿಯುವ ಸಮಾಜದಲ್ಲಿ ‘ಅವರೂ ನಮ್ಮ ನಿಮ್ಮಂತೆ ಸಾಮಾನ್ಯರು. ಅವರಿಗಿಂತಲೂ ಮಿಗಿಲಾದ ಕಾರ್ಯಗಳನ್ನು ಒಬ್ಬ ಸಾಮಾನ್ಯನೂ ಮಾಡುತ್ತಾನೆ. ಸುಖಾಸುಮ್ಮನೆ ಅವರನ್ನು ಸಿಂಹಾಸನದ ಮೇಲೆ ಕೂರಿಸಬೇಡಿ’ ಎಂದು ಹೇಳುತ್ತಿದ್ದರಂತೆ. ‘ಮಾನವನು ಹುಟ್ಟಿದ ಮೇಲೆ ಏನೂ ಮಾಡದಿದ್ದರೂ ಕೊನೆ ಪಕ್ಷ ತನ್ನ ಸುತ್ತಲಿನ ಸಮಾಜವನ್ನು ಕೊಂಚ ಸುಂದರವಾಗಿಸಿಯಾದರೂ ಹೋಗಬೇಕು’ ಎಂದಿದ್ದರಂತೆ ನಮ್ಮ ಸರಳ ನೇರ ವ್ಯಕ್ತಿತ್ವದ ಕೋಟ ಶಿವರಾಮ ಕಾರಂತರು.
ಇಂದು ತಮ್ಮ ಅಲ್ಪ ಸಾಧನೆಯನ್ನೇ ದೊಡ್ಡದೆಂದು ಬಿಂಬಿಸಿ ಬೀಗುವ ನಾವುಗಳು ಕಾರಂತರ ಬೃಹತ್ ವ್ಯಕ್ತಿತ್ವದಿಂದ ಅಲ್ಪವಾದರೂ ಕಲಿಯಲೇಬೇಕಿದೆ. ಕಲಿಯಲು, ಸಂಶೋದಿಸಲು ಗುಡ್ಡದಷ್ಟಿದ್ದರೂ, ಏನೂ ಇಲ್ಲವೆಂದೇ ಗೊಣಗುತ್ತಾ ಕನಿಷ್ಠ ಸಾಧನೆಗಳಿಗೆ ತೃಪ್ತರಾಗುವ ಪ್ರತಿಭೆಗಳು ಇಂದು ಬಹುಮುಖ ಪ್ರತಿಭೆಗಳಾಗಿ ರೂಪಗೊಳ್ಳುತ್ತಿಲ್ಲ. (ಡಿಸೆಂಬರ್ ೯) ನಮ್ಮನಾಗಲಿ ಹದಿನೆಂಟು ವರ್ಷಗಳಾಗಿವೆ. ಅವರ ನನಪಿನಲ್ಲಿ, ಆ ಆದರ್ಶದಾಯಕ ವ್ಯಕ್ತಿತ್ವದಲ್ಲಿ ಆದಷ್ಟನ್ನು ಮೈಗೂಡಿಕೊಂಡು ಮುಂದಿನ ಪೀಳಿಗೆಗೂ ಇವರ ಬಗ್ಗೆ ತಿಳಿಸುವ ಸಂಕಲ್ಪವನ್ನು ಮಾಡೋಣ. ಸಮಾಜಕ್ಕೆ, ರಾಜ್ಯಕ್ಕೆ, ದೇಶಕ್ಕೆ ಮಾದರಿಯಾದ ಕಾರಂತಜ್ಜರಿಗೆ ಹೃದಯದಾಳದಿಂದ ಧನ್ಯವಾದಗಳನ್ನೂ ಸಮರ್ಪಿಸೋಣ.
Reference : K Shivrama Karanth by C N Ramachandran & Internet