ಅಂಕಣ

ಸಾಮಾನ್ಯವಾಗಿ ಎಲ್ಲರೂ ಮದುವೆ ಆಗ್ತಾರೆ. ಆದರೆ…

ಇನ್ನೇನು ಹೊಸ ವರ್ಷ ಸಮೀಪಿಸುತ್ತಿದೆ ಎನ್ನುವಾಗ, ಪ್ರಸಕ್ತ ವರ್ಷ ನಡೆದ ವಿದ್ಯಮಾನಗಳನ್ನೆಲ್ಲಾ ಅವಲೋಕಿಸುವ ಸಂಪ್ರದಾಯ ನಮ್ಮ ಮಾಧ್ಯಮಗಳಲ್ಲಿದೆ. ಅದರಲ್ಲೂ ಮುದ್ರಣ ಮಾಧ್ಯಮಗಳು ಇದಕ್ಕೆಂದೇ ವಿಶೇಷ ಪುಟಗಳನ್ನು ಮೀಸಲಿರಿಸುವುದನ್ನೂ ನೀವು ಗಮನಿಸಿರಬಹುದು. ಸಾಮಾನ್ಯವಾಗಿ ಪ್ರತಿವರ್ಷವು, ಆ ವರ್ಷ ನಡೆದ ದೇಶ-ವಿದೇಶಗಳ ವಿದ್ಯಮಾನಗಳನ್ನು, ರಾಜಕೀಯ, ಕಾನೂನು, ಆರ್ಥಿಕತೆ, ಸಿನಿಮಾ, ಕ್ರೀಡಾ ಕ್ಷೇತ್ರದ ವಿಶೇಷತೆಗಳನ್ನು ಹಾಗು ಪ್ರಾಕೃತಿಕ ವಿಕೋಪಗಳನ್ನು ಇಲ್ಲಿ ಸೇರಿಸಲಾಗುತ್ತದೆ. ಆದರೆ 2016ರ ವಿಶೇಷವೇನೆಂದರೆ, ಈ ಎಲ್ಲಾ ಸಾಂಪ್ರದಾಯಿಕ ವಿಷಯಗಳೊಂದಿಗೆ ‘ಮದುವೆ’ಯೂ ಮೆಲ್ಲನೆ ಸೇರಿಕೊಂಡುಬಿಟ್ಟಿತ್ತು!.

ಹೌದು, ಬಹುಶಃ ಇತರೆ ವರ್ಷಗಳಿಗೆ ಹೋಲಿಸಿದರೆ ತುಸು ಭಿನ್ನವೆಂಬಂತೆ 2016ರಲ್ಲಿ ಮದುವೆಗಳೂ ಮುಖ್ಯಸುದ್ದಿಗಳಾಗಿ ಪ್ರಚಾರವನ್ನು ಪಡೆದಿದ್ದವು. ಅದು ಮದುವೆ ಆಮಂತ್ರಣ ಪತ್ರಿಕೆಯಿಂದಲೆ ಭಾರಿ ಸದ್ದು ಮಾಡಿ, ಬರೊಬ್ಬರಿ 36 ಎಕರೆ ಮೈದಾನದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಮರುಸೃಷ್ಟಿ(?) ಮಾಡಿದ, ಕೋಟಿಗಟ್ಟಲೆ ಖರ್ಚು ಮಾಡಿ ನಂತರ ಐಟಿ ಇಲಾಖೆಯಿಂದ ವಿಚಾರಿಸಲ್ಪಟ್ಟ ಮಾಜಿ ಸಚಿವರ ಮಗಳ ಅದ್ಧೂರಿ ಮದುವೆಯಿರಬಹುದು. ಅಥವಾ ಜನರು ಅತ್ಯಂತ ಕುತೂಹಲಭರಿತರಾಗಿ ವೀಕ್ಷಿಸಿದ ಎರಡುವರೆ ದಶಕಗಳ ಬಳಿಕ ಮೈಸೂರಿನಲ್ಲಿ ನಡೆದ ರಾಜವಂಶಸ್ಥರ ಮದುವೆಯಿರಬಹುದು. ಒಟ್ಟಿನಲ್ಲಿ ಮದುವೆಗಳು ರಾಜಕೀಯ ಸುದ್ದಿಗಳಷ್ಟೆ ಸದ್ದುಗದ್ದಲಗಳನ್ನುಂಟು ಮಾಡಿದ್ದವು. ಈ ಎಲ್ಲಾ ‘ಅಬ್ಬರದ ಮದುವೆ’ಗಳ ನಡುವೆ ಅಷ್ಟೇನು ಸುದ್ದಿಯಾಗದ, ಇಂದು ಸಮಾಜಕ್ಕೆ ಅಗತ್ಯವಿರುವ ಕೆಲವು ‘ಮಾದರಿ ಮದುವೆ’ಗಳನ್ನು ನಿಮಗೆ ವಿವರಿಸುತ್ತೇನೆ.

ಸಾಮಾನ್ಯವಾಗಿ ಮದುವೆಯನ್ನು ಒಂದೊ ಹುಡುಗಿ ಅಥವಾ ಹುಡುಗನ ಊರಿನ ಆಸುಪಾಸಿನಲ್ಲೆ ಇರುವ, ತಮ್ಮ ಅನುಕೂಲಕ್ಕೆ ಅಥವಾ ಘನತೆಗೆ ತಕ್ಕಂತಹ ಮದುವೆ ಛತ್ರಗಳಲ್ಲಿ ನಡೆಸುತ್ತಾರೆ. ಆದರೆ ಈಗ ನಾನು ಪ್ರಸ್ತಾಪಿಸಲಿರುವ ಮದುವೆಯ  ನಾಯಕಿ ಅರ್ಥಾತ್ ಮದುವೆಯಾದ ಹುಡುಗಿ ಹುಟ್ಟಿದ್ದು ಕರ್ನಾಟಕದಲ್ಲಾದರು ಬೆಳೆದದ್ದು ಕೇರಳ, ತಮಿಳುನಾಡಿನಲ್ಲಿ. ಇನ್ನು ಹುಡುಗ ಹೈದರಬಾದಿನವನು. ಇವರಿಬ್ಬರು ಹಸೆಮಣೆಯೇರಿದ್ದು ಮಾತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ, ಸರಿಯಾದ ಬಸ್ಸಿನ ವ್ಯವಸ್ಥೆಯೂ ಇಲ್ಲದ, ‘ಶಿಶಿಲ’ ಗ್ರಾಮದ ‘ಶ್ರೀ ಶಿಶಿಲೇಶ್ವರ’ದೇವಸ್ಥಾನದಲ್ಲಿ!. ಇನ್ನೂ ಹೇಳಬೇಕೆಂದರೆ ಈ ಪ್ರದೇಶದಲ್ಲೆ ಇರುವ ಸ್ವತಃ ಹುಡುಗಿಯ ಸಂಬಂಧಿಕರೂ ಮದುವೆಗು ಮುನ್ನ ನೋಡಿರದ ಸ್ಥಳವೊಂದನ್ನು  ಆರಿಸಿದ್ದರು ಈ ‘ವಧು-ವರ’ರು!. ಈ ಸ್ಥಳವನ್ನೆ ಆರಿಸಕೊಳ್ಳಲು ಒಂದು ಕಾರಣವು ಉಂಟು. ಬಹಳ ಪುರಾತನವಾದ ‘ಶ್ರೀ ಶಿಶಿಲೇಶ್ವರ ದೇವಸ್ಥಾನ’ ವು ಹಚ್ಚಹಸುರಿನಿಂದ ಕೂಡಿರುವ ಪಶ್ಚಿಮ ಘಟ್ಟದ ಬುಡಲ್ಲಿದೆ. ಅಲ್ಲದೆ ‘ ಕಪಿಲ’ ನದಿಯು ಅದರ ಪಕ್ಕದಲ್ಲಿಯೆ ಶಾಂತವಾಗಿ ಹರಿಯುತ್ತಿರುತ್ತದೆ. ಹೀಗೆ ವಿವಿಧ ಜೀೀವಸಂಕುಲಗಳನ್ನು ಹೊತ್ತಿರುವ ಫಲವತ್ತಾದ ‘ಭೂಮಿ’ , ಜಲಚರಗಳನ್ನು ಸಲಹುತ್ತಿರುವ ಶುದ್ಧವಾದ ‘ನೀರು’ , ಪಶ್ಚಿಮ ಘಟ್ಟಗಳಿಂದ ಬೀಸುವ ಪರಿಶುದ್ಧವಾದ ‘ಗಾಳಿ’ , ಸ್ವಚ್ಛಂದ ‘ಆಕಾಶ’ ಹಾಗು ಹೋಮರೂಪದಲ್ಲಿ ‘ ಅಗ್ನಿ’, ಈ ಎಲ್ಲಾ ಪಂಚಭೂತಗಳಿರುವ ಪರಿಸರದಲ್ಲಿಯೆ ತಮ್ಮ ಮದುವೆಯಾಗಬೇಕೆಂದು ಇವರು ನಿರ್ಧರಿಸಿದ್ದರಂತೆ. ಇನ್ನು ಇವರಿಬ್ಬರೂ ಪರಿಸರ ಕಾಳಜಿಯನ್ನು ಹೊಂದಿದ್ದರಿಂದ ತಮ್ಮ ಮದುವೆಯು ಸರಳ ಹಾಗು ಪರಿಸರ ಸ್ನೇಹಿಯಾಗಬೇಕೆಂದು ನಿಶ್ಚಯಿಸಿದರು. ಹಾಗಾಗಿ ಮಂಟಪದ ಅಲಂಕಾರಕ್ಕೆ ಬಣ್ಣಬಣ್ಣದ ಪ್ಲಾಸ್ಟಿಕ್ ಹೂವುಗಳಿಗೆ ಬದಲಾಗಿ ಜೈವಿಕ ಹಾಗು ನೈಸರ್ಗಿಕ ಹೂವು, ಎಲೆ, ವಸ್ತುಗಳನ್ನು ಮತ್ತು ಎಸೆದ ತೆಂಗಿನಕಾಯಿ ಚಿಪ್ಪುಗಳಿಂದ ಸ್ವತಃ ಮದುವೆ ಹುಡುಗಿಯೆ ತಯಾರಿಸಿದ ಕರಕುಶಲ ವಸ್ತುಗಳನ್ನು ಬಳಸಲಾಗಿತ್ತು. ಕಣ್ಣುಕುಕ್ಕುವ ಚಿತ್ತಾಕರ್ಷಕ ದುಬಾರಿ ಲಗ್ನಪತ್ರಿಕೆಯ ಬದಲಾಗಿ ಒಂದು ಸುಂದರವಾದ ಕೈಬರಹದಲ್ಲಿ ತಯಾರಿಸಿದ ಪತ್ರಿಕೆಯ ಫೋಟೊವನ್ನು ವಾಟ್ಸಾಪ್‍ಗಳಲ್ಲಿ ಕಳುಹಿಸುವ ಮೂಲಕ, ಕೆಲವು ಮಂದಿಗೆ ಫೋನಿನ ಮೂಲಕವು ಮತ್ತು ಇನ್ನುಳಿದವರಿಗೆ ಮನೆಗೆ ಹೋಗಿ ಮದುವೆಗೆ ಆತ್ಮೀಯವಾಗಿ ಕರೆಯಲಾಯಿತು. ಮದುವೆಯ ದಿನ ಮದುವಣಗಿತ್ತಿಯು ಚೆಂದದ ರೇಶ್ಮೆ ಸೀರೆಯ ಬದಲಾಗಿ ರೇಶ್ಮೆಹುಳುಗಳನ್ನು ಕೊಲ್ಲದೆ ತಯಾರಿಸಲ್ಪಟ್ಟ ‘ಅಹಿಂಸಾ ಸಿಲ್ಕ್ ಸ್ಯಾರಿ’ ಯನ್ನು ತೊಟ್ಟಿದ್ದು ಅರ್ಥಪೂರ್ಣವಾಗಿತ್ತು. ಇವೆಲ್ಲಕ್ಕು ಕಳಶಪ್ರಾಯವೆಂಬಂತೆ ಇನ್ನೊಂದು ವಿಷಯವುಂಟು. ತಮ್ಮ ಜೀವನದ ಹೊಸ ಅಧ್ಯಾಯದ ಮುನ್ನುಡಿಯನ್ನು 25 ಗಿಡಗಳನ್ನು ನೆಡುವುದರ ಮೂಲಕ ಆರಂಭಿಸಿದರು ಈ ನವಜೋಡಿಗಳು. ತಮ್ಮ ಭವಿಷ್ಯದ ಜತೆ ಜತೆಗೆ ಪರಿಸರದ ಭವಿಷ್ಯದ ಕುರಿತಾದ ಆಲೋಚನೆ!.

ಇದು ನಾನೆ ಸ್ವತಃ ಸಾಕ್ಷಿಯಾದಂತಹ ‘ ಮಾದರಿ ಮದುವೆ’ ಯಾದರೆ, ಇನ್ನು ಕಳೆದ ವರ್ಷ ನಡೆದ, ಸುದ್ದಿಪತ್ರಿಕೆಯಲ್ಲಿ ಸ್ವಲ್ಪಮಟ್ಟಿನ ಜಾಗ ಪಡೆದ ಇದೆ ರೀತಿಯ ಮದುವೆಗಳು ನಿಮಗೂ  ಜ್ಞಾಪಕವಿರಬಹುದು. ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಮದುವೆಯಾಗುವ ಹುಡುಗಿಯು ವಜ್ರಾಭರಣಗಳ ಬದಲಾಗಿ 10000 ಗಿಡಗಳನ್ನು ಉಡುಗೊರೆ ರೂಪದಲ್ಲಿ ಕೇಳಿದ್ದು, ಮದುವೆಗೆ ಬಂದವರಿಗೆ ಐದು ಸಾವಿರ ಗಿಡಗಳನ್ನು ಉಡುಗೊರೆಯ ರೂಪದಲ್ಲಿ ನೀಡಿದ್ದಲ್ಲದೆ ಮದುವೆಯಲ್ಲಿ ತಯಾರಾದ ಕಸಗಳನ್ನು ವೈಜ್ಞಾನಿಕವಾಗಿ ವಿಲೆವಾರಿ ಮಾಡುವ ಮೂಲಕ  ‘ಪರಿಸರಸ್ನೇಹಿ ಮದುವೆ’ಗೆ ಮತ್ತುಷ್ಟು ಒತ್ತು ನೀಡಿದ ನಮ್ಮ ಕರ್ನಾಟಕದ ಸಚಿವರೊಬ್ಬಳ ಮಗಳ ಮದುವೆ, ಆಮಂತ್ರಣ ಪತ್ರಿಕೆಯೊಂದಿಗೆ ಒಂದು ಗಿಡ ಹಾಗು ಪುಸ್ತಕವನ್ನು ನೀಡಿ ಮಾದರಿಯಾದ ಯಶ್-ರಾಧಿಕಾ ಪಂಡಿತ್ ಮದುವೆ, ತನ್ನ ಮಗಳ ಮದುವೆಗೆ ಉಡುಗೊರೆಯಾಗಿ 90 ಬಡ ಕುಡುಂಬಕ್ಕೆ ಆಶ್ರಯ ಒದಗಿಸಿದ ಗುಜರಾತ್ ಮೂಲದ ಉದ್ಯಮಿಯ ಕಥೆ. ಹೀಗೆ ಹತ್ತು ಹಲವು ‘ಮಾದರಿ ಮದುವೆ’ ಗಳು ನಮ್ಮ ಮುಂದೆ ನಿಲ್ಲುತ್ತದೆ.

ಮದುವೆಯೆಂದರೆ ಅದೊಂದು ಆಡಂಬರ, ಬರೀ ಗೌಜು-ಗದ್ದಲ, ಒಣಪ್ರತಿಷ್ಠೆಯ ಪ್ರದರ್ಶನ ಎಂಬುದಾಗಿ ದೂರುತ್ತಿವಿಯೆ ಹೊರತು ಇದೆ ರೀತಿ ಮದುವೆನ್ನು ಒಂದು ‘ಮಾದರಿ’ ಕಾರ್ಯವನ್ನಾಗಿಸಲು ನಾವು ಪ್ರಯತ್ನಿಸುವುದಿಲ್ಲವೇಕೆ?. ಮದುವೆಯನ್ನು ಕೇವಲ ಊಟ-ಉಪಚಾರ ಮತ್ತು ಮೂರು ಗಂಟುಗಳಿಗಷ್ಟೆ ಸೀಮಿತಗೊಳಿಸದೆ ಅದರಿಂದಾಚೆಗೂ ಆಲೋಚಿಸುವ ಪ್ರಯತ್ನವನ್ನು ಇವರುಗಳೆಲ್ಲಾ ಮಾಡಿದ್ದಾರೆಂದಾದಲ್ಲಿ ನಮಗೇಕೆ ಸಾಧ್ಯವಾಗುವುದಿಲ್ಲ?. ಹೌದು, ಸಾಮಾನ್ಯವಾಗಿ ಎಲ್ಲರೂ ಮದುವೆ ಆಗುತ್ತಾರೆ. ಆದರೆ ಏಕೆ ಎಲ್ಲವೂ ‘ಮಾದರಿ ಮದುವೆ’ಗಳಾಗುವುದಿಲ್ಲ?. ಒಮ್ಮೆ ಯೋಚಿಸಿ, ಪ್ರತಿ ಮದುವೆಗಳು ಹೀಗೆಯೆ ಗಿಡಗಳನ್ನು ನೆಟ್ಟಿ ಪರಿಸರಸ್ನೇಹಿಯಾಗಿಯೂ, ಬಡವರಿಗೆ ಸಹಾಯ ಮಾಡುವ ಮೂಲಕ ಜನಸ್ನೇಹಿಯಾಗಿ ನಡೆಯುತ್ತದೆ ಎಂದಾದಲ್ಲಿ ನಮ್ಮ ಸಮಾಜ, ಪರಿಸರ ಎಷ್ಟೊಂದು ಬದಲಾವಣೆಗಳನ್ನು ಕಾಣಬಲ್ಲದು!. ಹೊಸವರ್ಷದಲ್ಲಾದರು ಈ ಕುರಿತು ಆಲೋಚಿಸೋಣ. ಈ ವರ್ಷ ಇನ್ನಷ್ಟು ‘ಮಾದರಿ ಮದುವೆ’ ಗಳು ಸುದ್ದಿಪತ್ರಿಕೆಗಳ ಜಾಗವನ್ನು ತುಂಬುವಂತಾಗಲಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Chaithanya Kudinalli

ಓದಿದ್ದು ಬಿಎಸ್ಸಿ, ಪ್ರಸ್ತುತ ಪತ್ರಿಕೋದ್ಯಮ ವಿದ್ಯಾರ್ಥಿ. ಹಾಗಾಗಿ ಓದು, ಬರವಣಿಗೆ, ತಿರುಗಾಟ ಮತ್ತು ಫೋಟೊಗ್ರಫಿ ಹವ್ಯಾಸ ಮಾತ್ರವಲ್ಲ ಕಾಯಕ ಕೂಡ. ರಾಜಕಾರಣ, ಇತಿಹಾಸ, ಪ್ರಚಲಿತ ವಿದ್ಯಮಾನಗಳು, ಕಥೆ, ಕಾದಂಬರಿ, ಸಿನಿಮಾ ಇವು ಆಸಕ್ತಿದಾಯಕ ವಿಷಯಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!