ಅಂಕಣ

ಯಾರು ಮಹಾತ್ಮ?- ೧೧

(ಹಿಂದಿನ ಭಾಗ)

ಕಲ್ಲಿಕೋಟೆಯ ಮುದುಮಣೆಯಿಲ್ಲಂ ದೇವಾಲಯದ ಗರ್ಭಗೃಹದಲ್ಲಿ ಮೋಪ್ಲಾ ನಾಯಕನೊಬ್ಬ ಕುಳಿತು ದರ್ಬಾರ್ ನಡೆಸುತ್ತಿದ್ದ! ಸ್ಥಳೀಯರನ್ನು ಬಂಧಿಸಿ ಅವನ ಮುಂದೆ ಸಾಲಾಗಿ ಕರೆ ತರಲಾಗುತ್ತಿತ್ತು. ಅಲ್ಲಿ ಇಸ್ಲಾಮಿಗೆ ಪರಿವರ್ತಿತರಾಗಲು ಒಪ್ಪದವರ ತಲೆ ಛೇದಿಸಿ ಪಕ್ಕದ ಬಾವಿಯೊಳಗೆ ಎಸೆಯಲಾಗುತ್ತಿತ್ತು. ಮಲಪ್ಪುರಂ ಉತ್ತರ ಭಾಗದಲ್ಲಿ ಇದ್ದ ತೂವೂರ್ ಎಂಬ ಬಾವಿಗೆ ಮೋಪ್ಲಾಗಳು ೨೭ ಮಂದಿ ಸ್ಥಳೀಯರ ತಲೆಗಳನ್ನು ಗರಗಸದಿಂದ ಕತ್ತರಿಸಿ ಎಸೆದರು. ಸ್ತ್ರೀಯರನ್ನು ಹಿಡಿದು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡುತ್ತಿದ್ದರು. ನಂತರ ಎಲ್ಲರ ಎದುರೇ ಅತ್ಯಾಚಾರ. ಗರ್ಭಿಣಿಯರ ಗರ್ಭ ಸೀಳಿ ಮಗುವನ್ನು ಕತ್ತರಿಸಿ ಎಸೆಯುತ್ತಿದ್ದರು. ಗರ್ಭಿಣಿ, ಹಸುಳೆ, ವೃದ್ಧೆ ಎನ್ನದೇ ಎಲ್ಲರನ್ನು ಮಾನಭಂಗಗೊಳಿಸುತ್ತಿದ್ದರು.

ಯಾವುದೋ ಮೊಘಲರ ಆಳ್ವಿಕೆ ಅಥವಾ ಮತಾಂಧ ಟಿಪ್ಪುವಿನ ಸಮಯದಲ್ಲಿ ನಡೆದ ಘಟನೆಯಲ್ಲ ಇದು. ಇಪ್ಪತ್ತನೇ ಶತಮಾನದ ಎರಡನೇ ದಶಕದಲ್ಲಿ ಖಿಲಾಫತ್ ಎಂಬ ಹೆಸರಿನಲ್ಲಿ ಅಸಹಕಾರದ ಚಳುವಳಿಯ ಸಹಯೋಗದಲ್ಲಿ ಗಾಂಧಿ ಮಹಾತ್ಮನ ಸಹಕಾರದಲ್ಲಿ ನಡೆದ ಘನ ಘೋರ ಭಯೋತ್ಪಾದಕ ಕೃತ್ಯವಿದು. ಬಾಗ್ದಾದಿನಲ್ಲಿ ಖಲೀಫನ ಸುಲ್ತಾನಿಕೆ ಪುನಃ ನೆಲೆಗೊಳಿಸಬೇಕೆಂಬ ಉದ್ದೇಶದಿಂದ ಶುರುವಾದದ್ದೇ ಖಿಲಾಫತ್ ಆಂದೋಲನ! ಮೊದಲ ಮಹಾಯುದ್ಧ ಮುಗಿದ ತರುವಾಯ ಬ್ರಿಟಿಷ್ ಸಾಮ್ರಾಜ್ಯ ನಿಸ್ಸತ್ವಗೊಂಡುದುದರಿಂದ ತುರ್ಕಿಯ ಪ್ರಭುತ್ವವನ್ನು ಮರುಸ್ಥಾಪಿಸಬಹುದೆಂಬ ಭ್ರಮೆಯಲ್ಲಿ ಶುರುವಾದ ಈ ಖಿಲಾಫತ್ ಆಂದೋಲನದ ಮುಖ್ಯ ಉದ್ದೇಶಗಳು ಖಲೀಫನ ಸಾಮ್ರಾಜ್ಯದ ಮರುಸ್ಥಾಪನೆ ಹಾಗೂ ಆಟೋಮನ್ ಸಾಮ್ರಾಜ್ಯದ ಅಖಂಡತೆಯನ್ನು ಸಾಧಿಸುವುದು. 1912ರಲ್ಲಿ ಬಾಲ್ಕನ್ ರಾಜ್ಯಗಳಿಂದ ಟರ್ಕಿ ಸೋತು ಸುಣ್ಣವಾದ ಮೇಲೆ ಯೂರೋಪಿನ ಜನ ಇಸ್ಲಾಂನ್ನು ತಿರಸ್ಕರಿಸಲಾರಂಭಿಸಿದ್ದರು. ಆದರೆ ಭಾರತದೊಳಗಿನ ಮತಭ್ರಾಂತರನ್ನು ಹುಚ್ಚೆಬ್ಬಿಸಲು ನಾಮಾವಶೇಷವಾಗಿದ್ದ ಖಲೀಫನ ಪ್ರಭುತ್ವವನ್ನು ಪುನರುಜ್ಜೀವಿಸುವ ಈ ಪ್ರಯತ್ನ ಸಾಕಾಯಿತು. ಆದರೆ ಮಹಾತ್ಮ ಎಂದು ತನ್ನ ಸ್ತುತಿಪಾಠಕರಿಂದ ಕರೆಸಿಕೊಂಡ ಗಾಂಧಿಯ ಈ ಖಿಲಾಫತ್ ಪರ ಆವೇಶಕ್ಕೆ ಬೆಲೆ ತೆತ್ತವರು ಮಲಬಾರಿನ ಹಿಂದೂಗಳು.

ಖಿಲಾಫತ್ ಚಳವಳಿ ಘೋಷಿತವಾದೊಡನೆ ಗಾಂಧಿಯ ಸೂಚನೆಯಂತೆ ದೇಶದಾದ್ಯಂತ ಖಿಲಾಫತ್ ದಿನವನ್ನು ಕಾಂಗ್ರೆಸ್ ಘಟಕಗಳ ಮೂಲಕ ಆಚರಿಸಲಾಯಿತು. ಅಲಹಾಬಾದ್, ಕರಾಚಿಗಳಲ್ಲಿ ಖಿಲಾಫತ್ ಸಮ್ಮೇಳನಗಳೂ ನಡೆದವು. ಗಾಂಧಿ, ಮಹಮದ್ ಆಲಿ ಜೊತೆ ಸೇರಿ ಖಿಲಾಫತ್ ಪರ ಯಾತ್ರೆಯನ್ನೂ ನಡೆಸಿದರು. ಖಿಲಾಫತ್ ಆಂದೋಲನದಲ್ಲಿ ಅಲ್ಲಾ-ಹೋ-ಅಕ್ಬರ್ ದೇಶದ ಮೂಲೆಮೂಲೆಯಿಂದ ಕೇಳಲಾರಂಭಿಸಿತು. ಗಾಂಧಿ ಇದನ್ನು ಭಾರತ್ ಮಾತಾ ಕೀ ಜೈ ಗಿಂತ ದೊಡ್ಡ ದನಿಯಲ್ಲಿ ಘೋಷಿಸಿದರು. ದೇಶಕ್ಕಿಂತ ಅಲ್ಲಾ ಹೆಚ್ಚು ಎನ್ನುವ ಮತಾಂಧರ ಮನೋಭೂಮಿಕೆಗೂ ಗಾಂಧಿಯ ಮನಃಸ್ಥಿತಿಗೂ ಏನು ವ್ಯತ್ಯಾಸವಿದೆ? ಮಾತ್ರವಲ್ಲ ಖಿಲಾಫತಿಗಾಗಿ ಹಣಸಂಗ್ರಹ ಅಭಿಯಾನ ಕೂಡಾ ಆರಂಭವಾಯಿತು. ಕೆಲವು ಕಡೆ ಅದ್ದೂರಿ ಪ್ರಚಾರ ನಡೆಸಿದಾಗ್ಯೂ ಜನ ಸೇರದೇ ಇದ್ದುದರಿಂದ ಮಸೀದಿಗಳಲ್ಲಿಯೇ ಸಭೆಯ ಶಾಸ್ತ್ರ ಮುಗಿಸಿದರು. ಕಾಂಗ್ರೆಸ್ಸಿನ ಅಧಿಕೃತ ಅನುಮೋದನೆ ಪಡೆಯದೇ ಗಾಂಧಿ ಖಿಲಾಫತ್ ಆಂದೋಲನ ಘೋಷಿಸಿಯೇ ಬಿಟ್ಟಿದ್ದರು. ಆದರೆ ಖಿಲಾಫತ್ ಪರ ನಿರ್ಣಯಕ್ಕೆ ಮತ ಹಾಕಲು ಕಲ್ಕತ್ತಾದ ವಿಶೇಷ ಕಾಂಗ್ರೆಸ್ ಅಧಿವೇಶನದಲ್ಲಿ(8-9-1920) ಕಾಂಗ್ರೆಸ್ ದಳಗಳು ಟ್ಯಾಕ್ಸಿ ಡ್ರೈವರ್’ಗಳನ್ನೂ ಹಣ ಕೊಟ್ಟು ಕರೆತರಬೇಕಾಯಿತು! ಬಹುತೇಕರಿಗೆ ಖಿಲಾಫತ್ ಆಂದೋಲನ ಒಪ್ಪಿತವಿಲ್ಲದಿದ್ದರೂ ಗಾಂಧಿಯನ್ನು ವಿರೋಧಿಸುವವರೇ ಇರಲಿಲ್ಲ! ಇದಕ್ಕೆ ಪ್ರತಿಯಾಗಿ ಖಿಲಾಫತ್ ಖಂಡಿಸಲು ಒಟ್ಟಾಪಳಂನಲ್ಲಿ ನಡೆದ ಆನಿಬೆಸೆಂಟ್ ಉಪನ್ಯಾಸದಲ್ಲಿ ಜನ ಕಿಕ್ಕಿರಿದು ಸೇರಿದ್ದರು.” ಗಾಂಧಿಯವರು ಕೈಗೊಂಡ ಖಿಲಾಫತ್ ಆಂದೋಲನ ಮತೀಯ ಆಂದೋಲನವಾಗಲಿದೆ. ಇದರಿಂದ ದೇಶಕ್ಕೆ ಭಾರೀ ಅಪಾಯವಿದೆ” ಎಂದು ಡಾ|| ಹೆಡಗೆವಾರರು ಎಚ್ಚರಿಸಿದ್ದರು. ಆದಾಗ್ಯೂ ಖಿಲಾಫತಿಗಾಗಿ ಸ್ವಾತಂತ್ರ್ಯಕ್ಕಾಗಿನ ಚಳುವಳಿಯನ್ನು ಮುಂದೂಡಲೂ ನಾನು ಸಿದ್ಧ ಎಂದು ಬಿಟ್ಟರು ಗಾಂಧಿ.

ಪುಕ್ಕಟ್ಟೂರು ಭಾಗದ ಎಲ್ಲಾ ಹಿಂದೂಗಳನ್ನು 1921ರ ಆಗಸ್ಟ್’ನಲ್ಲಿ ಮತಾಂತರಿಸಲಾಯಿತು. ಕಾರಾಗೃಹದ ಅಪರಾಧಿಗಳನ್ನು ಮುಕ್ತಗೊಳಿಸಿದ ಖಿಲಾಫತಿಗರು ಅವರನ್ನು ಕೊಲೆ ಲೂಟಿಗಳಿಗೆ ಬಳಸಿಕೊಂಡರು. ಹಿಂದೆ ಹಿರಿಯರೆಂದು ತಾವೇ ಗೌರವಿಸಿದ್ದ ಕೋಮು ಮೆನನ್ ಪರಿವಾರವನ್ನೂ ಲೂಟಿಗೈದು ಮತಾಂತರಿಸಿದರು.(ಮುಂದೆ ಕೋಮು ಮೆನನ್ ಪರಿವಾರ ಮಾತೃಧರ್ಮಕ್ಕೆ ಮರಳಿತು) ಕೇರಳದೆಲ್ಲೆಡೆ ಕಾಂಗ್ರೆಸ್ ಕಾರ್ಯಾಲಯಗಳ ಮೇಲೆ ಖಿಲಾಫತ್ ಬಾವುಟಗಳು ಕಾಂಗ್ರೆಸ್ ಬಾವುಟಗಳ ಜೊತೆ ರಾರಾಜಿಸತೊಡಗಿದವು. ಕಾಂಗ್ರೆಸ್ ಕಾರ್ಯಕರ್ತರು ಖಿಲಾಫತ್ ವಾಲಂಟಿಯರ್’ಗಳಾದರು. ಯಾವ ಕಡೆ ನೋಡಿದರೂ ಖಿಲಾಫತ್ ಧ್ವಜಗಳ ವಿಜೃಂಭಣೆ, ಖಿಲಾಫತ್ ಪರ ಘೋಷಣೆ, ಖಿಲಾಫತ್ ರಾಜ್ಯಕ್ಕೆ ಜೈಕಾರ ಹಾಗೂ ಟರ್ಕಿಷ್ ಟೋಪಿ ಧರಿಸಿದ ಕಾಂಗ್ರೆಸ್ಸಿಗರು….ಹೀಗೆ ಕಾಂಗ್ರೆಸ್ ಪೂರ್ತಿ ಬಣ್ಣಗೆಟ್ಟಿತ್ತು! ಅದರಲ್ಲೂ ಗಾಂಧಿ ಬೆಂಬಲದಿಂದ ಉತ್ತೇಜಿತರಾದ ಮಾಪಿಳ್ಳೆಗಳು ಕತ್ತಿ, ಗುರಾಣಿ ಮುಂತಾದ ಕೈಗೆ ಸಿಕ್ಕ ಆಯುಧಗಳನ್ನು ಹಿಡಿದು ಮದೋನ್ಮತ್ತರಂತೆ ವರ್ತಿಸಲಾರಂಭಿಸಿದ್ದರು. ಜನರ ಮೇಲಿನ ಅತ್ಯಾಚಾರವನ್ನು ನಿವಾರಿಸಲು ಬಂದ ಪೊಲೀಸರನ್ನು ಕೊಚ್ಚಿ ಹಾಕುತ್ತಿದ್ದರು. ” ಇಸ್ಲಾಮಿಗೆ ಮತಾಂತರಗೊಳ್ಳಿ ಇಲ್ಲವೇ ಸಾಯಲು ಸಿದ್ಧರಾಗಿ” ಎನ್ನುತ್ತಾ ಬಲಾತ್ಕಾರದ ಮತಾಂತರ, ಮಹಿಳೆಯರ ಅತ್ಯಾಚಾರ, ಹಿಂದೂಗಳ ಚರ್ಮ ಸುಲಿಯುವುದು, ಆಸ್ತಿಪಾಸ್ತಿ ಲೂಟಿ, ಕೊಲೆ,ಹಗಲು ದರೋಡೆ, ಸರಕಾರೀ ಖಜಾನೆಗಳ ದರೋಡೆ ಎಗ್ಗಿಲ್ಲದೆ ನಡೆದವು. ಮರಗಳ ಛೇದನ, ಸೇತುವೆಗಳ ಧ್ವಂಸ ಈ ಎಲ್ಲಾ ತಂತ್ರಗಳನ್ನು ಖಿಲಾಫತಿಗರು ಬಳಸಿದರು. ದೇವಾಲಯಗಳ ಲೂಟಿ, ವಿಗ್ರಹ ಭಂಜನೆಗಳು ಅಗಾಧ ಪ್ರಮಾಣದಲ್ಲಿ ನಡೆದವು. ದಂಗೆಕೋರರಿಗೆ ಅಹಿಂಸೆ ಭೋಧಿಸ ಹೊರಟ ಮಂಜೇರಿಯ ಕೆ. ಮಾಧವನ್ ನಾಯರ್, ಎರ್ನಾಡಿನ ಎಂ.ಪಿ. ನಾರಾಯಣ ಮೆನನ್ ಮೊದಲಾದವರ ಪ್ರಯತ್ನಗಳು ವಿಫಲಗೊಂಡವು. “ನಾವೇನು ಮಾಡುತ್ತಿದ್ದೇವೆಂದು ನಮಗೆ ಗೊತ್ತು. ನಿಮ್ಮ ಉಪದೇಶ ನಮಗೆ ಬೇಕಾಗಿಲ್ಲ” ಎಂದರು ಮೋಪ್ಲಾಗಳು.

ಪೊಣ್ಣನಿಯ ಸರಕಾರೀ ಕಾಲೇಜಿನ ಆಸುಪಾಸಿನಲ್ಲಿಯೇ ಖಿಲಾಫತಿಗರು ಲೂಟಿ ದಾಂಧಲೆ ನಡೆಸಿದರು. ಇಲ್ಲಿ 67 ಪೊಲೀಸರು ಕೊಲೆಯಾದರು, 155 ಮಂದಿ ಮಾರಣಾಂತಿಕವಾಗಿ ಗಾಯಗೊಂಡರು. ಮಂಜೇರಿ, ತಿರುರಂಗಾಡಿಗಳಲ್ಲಿ ಅಂಗಡಿಗಳನ್ನು ಸುಟ್ಟು ಹಾಕಿದರು. ಉಗ್ರ ಮತಪ್ರವರ್ತಕರಾಗಿದ್ದ ಮುಸ್ಲಿಂ ಭಯೋತ್ಪಾದಕರಿಗಂತೂ ಖಿಲಾಫತ್ ಆಂದೋಲನ ಸುಸಂಧಿಯಾಗಿ ಒದಗಿ ಬಂತು. ಇಂತಹವರೆಲ್ಲರೂ ಏಕಾಏಕಿ ಗಾಂಧಿ ಅನುಯಾಯಿಗಳಾಗಿ ತಮ್ಮ ಮತಾಂತರ, ಲೂಟಿ, ಮಾನಭಂಗವನ್ನು ಮತ್ತಷ್ಟು ನಿರ್ಭಿಡೆಯಿಂದ ಮಾಡತೊಡಗಿದರು. ಅಲೀ ಮುಸಲಿಯಾರ್ ಎಂಬ ಮೌಲ್ವಿ ಏರ್ನಾಡ್, ತಿರುರಂಗಾಡಿಗಳಲ್ಲಿ ತಾನೇ ರಾಜನೆಂದು ಘೋಷಿಸಿಕೊಂಡು ಕಪ್ಪ ವಸೂಲು ಮಾಡತೊಡಗಿದ. ಉಗ್ರ ಮತಾಂತರ ಮಾಡುತ್ತಿದ್ದ ಈ ಕ್ರೂರ ಅತ್ಯಾಚಾರಿಯನ್ನು ಹಾಗೂ ಅವನ ಸಂಗಡಿಗರನ್ನು ಹಿಡಿದ ಪೊಲೀಸರು ಅವನಿಗೆ ಮರಣದಂಡನೆಯಾಗುವಂತೆ ಮಾಡಿ ಹಿಂದೂಗಳ ತುಸು ನೆಮ್ಮದಿಗೆ ಕಾರಣವಾದರು. ನೀಲಂಬೂರಿನಲ್ಲಿ ವಿ. ಕೆ. ಹಾಜಿ ಎಂಬಾತನ ಕ್ರೌರ್ಯ ಹೇಗಿತ್ತೆಂದರೆ ಅವನ ಹೆಸರು ಹೇಳಲೂ ಜನ ಹೆದರುತ್ತಿದ್ದರು. ಅಪಾರ ಶಸ್ತ್ರ ಸಂಗ್ರಹ ಮಾಡಿದ್ದ ಅವನು ತನ್ನ ಕೊಲೆ, ಲೂಟಿ, ಮಾನಭಂಗಗಳ ಸುದ್ದಿ ಮಂಜೇರಿ, ನೀಲಂಬೂರುಗಳಿಂದಾಚೆಗೆ ಹೋಗದಂತೆ ಎಚ್ಚರ ವಹಿಸಿದ್ದ. ಅವನನ್ನು ಬಂಧಿಸಿ ಮರಣದಂಡನೆ ವಿಧಿಸಲು ವಿಶೇಷ ಪೊಲೀಸ್ ಪಡೆಯನ್ನೇ ರಚಿಸಬೇಕಾಯಿತು. ಪಂದಲೂರಿನ ಹೆಡ್ ಕಾನ್’ಸ್ಟೇಬಲ್ ಹೈಡ್ರಾಸನನ್ನು ಅವನ ಪತ್ನಿ, ಮಕ್ಕಳ ಎದುರೇ ಕೊಚ್ಚಿ ಹಾಕಿದರು.

1891ರಲ್ಲಿ ಎರ್ನಾಡ್, ವಳ್ಳುವನಾಡ್, ಪೊಣ್ಣನಿ ಈ ಮೂರು ತಾಲೂಕುಗಳಲ್ಲಿ ನೂರರಲ್ಲಿ ಎಪ್ಪತ್ತರಷ್ಟಿದ್ದ ಮಾಪಿಳ್ಳೆಗಳ ಸಂಖ್ಯೆ ಮೂರೇ ದಶಕಗಳಲ್ಲಿ ೮೫ ಪ್ರತಿಶತವನ್ನೂ ದಾಟಿತು. ಹಿಂದೂಗಳ ಸಂಖ್ಯೆ ೫೨೦೧೭ ಇದ್ದರೆ ಮಾಪ್ಪಿಳ್ಳೆಗಳ ಸಂಖ್ಯೆ ೧,೫೦,೫೩೨ ಆಗಿತ್ತು. “ಶಸ್ತ್ರಾಸ್ತ್ರಗಳು, ಸರಂಜಾಮುಗಳು ಹಾಗೂ ಸೈನಿಕರನ್ನು ಹೊತ್ತ ಹಡಗುಗಳು ಭಾರತದತ್ತ ಹೊರಟಿವೆ. ಅವು ತಲುಪಿದೊದನೆ ಹಿಂದೂಗಳ ಮಾರಣ ಹೋಮ ಆದಂತೆ” ಎಂದು ಹೆದರಿಸಿ ಮತಾಂತರವನ್ನು ಮತ್ತಷ್ಟು ಹೆಚ್ಚಿಸಲಾಯಿತು. ” ಇನ್ನು ಮುಂದೆ ನೀವು ಮಾಪಿಳ್ಳೆಗಳ ಹೆಸರುಗಳನ್ನು ಹೊಂದಬೇಕಾಗುತ್ತೆ” ಎಂದು ನಾಯರ್ ಮಹಿಳೆಯರಿಗೆ ಹೇಳಿ ಆ ಹೊಸ ಹೆಸರುಗಳನ್ನು ಲೆಡ್ಜರುಗಳಲ್ಲಿ ಬರೆದಿಡಲಾಗುತ್ತಿತ್ತು. ಹಿಂದೂಗಳ ಮೇಲೆ ಆಕ್ರಮಣ ನಡೆಸುವ ಪ್ರವೃತ್ತಿ ಕೇರಳದ ಮುಸ್ಲಿಮರಲ್ಲಿ ದೀರ್ಘಕಾಲ ಮನೆ ಮಾಡಿದ್ದುದರಿಂದ ಗಾಂಧಿ ಹೊತ್ತಿಸಿದ ಕಿಡಿ ಉರಿದೆದ್ದು ನಂದಿಸದ ಜ್ವಾಲೆಯಾಗಿ ಅಸಂಘಟಿತ ಹಿಂದೂಗಳ ಮಾರಣ ಹೋಮ ಪ್ರಾರಂಭವಾಯಿತು. ಶೌರ್ಯಕ್ಕೆ ಹೆಸರಾಗಿದ್ದ ನಾಯರ್ ಸಮುದಾಯವನ್ನು ನಿಶ್ಯಸ್ತ್ರಗೊಳಿಸಿದ್ದ ಬ್ರಿಟಿಷರ ಕ್ರಮ ಮಾಪ್ಪಿಳ್ಳೆಗಳಿಗೆ ಲಾಭದಾಯಕವಾಯಿತು.

ಅದೇ ಸಮಯದಲ್ಲಿ ಕರ್ಣಾವತಿ(ಅಹ್ಮದಾಬಾದ್)ಯಲ್ಲಿ ನಡೆದ ಮುಸ್ಲಿಮ್ ಲೀಗ್ ಅಧಿವೇಶನದ ಅಧ್ಯಕ್ಷ ಭಾಷಣದಲ್ಲಿ ಹಸರತ್ ಮೊಹಾನಿ ಮೋಪ್ಳಾ ದಂಗೆಯನ್ನು ಸಮರ್ಥಿಸುತ್ತಾ “ಹಿಂದೂಗಳು ಜಿಹಾದನ್ನು ಸ್ವೀಕರಿಸಿಲ್ಲ ಎಂದ ಮೇಲೆ ಅವರು ನಮ್ಮ ಶತ್ರುಗಳೇ. ಹಾಗಾಗಿ ಅವರ ಮೇಲಿನ ಹಲ್ಲೆ ಹಾಗೂ ಅತ್ಯಾಚಾರ ದೋಷವೆನಿಸುವುದಿಲ್ಲ” ಎಂದು ಬೊಬ್ಬಿರಿದ. ವಿಪರ್ಯಾಸವೆಂದರೆ ಖಿಲಾಫತಿಗೆ ಹೆಗಲು ಕೊಟ್ಟ ಮಹಾತ್ಮ(!) ಅದೇ ಸಭೆಯಲ್ಲಿದ್ದರೂ ತುಟಿ ಬಿಚ್ಚಲಿಲ್ಲ. ವ್ಯತಿರಿಕ್ತವಾಗಿ ಆನಿಬೆಸೆಂಟ್ ಮೋಪ್ಳಾ ದಂಗೆಯನ್ನು ಖಂಡಿಸುತ್ತಾ “ಮುಸ್ಲಿಮರ ಸ್ವಭಾವಗತ ಹಿಂಸಾ ಪ್ರವೃತ್ತಿಯೇ ಈ ದೌರ್ಜನ್ಯಗಳಿಗೆ ಕಾರಣ” ಎಂದು ಹಿಂದೂಗಳನ್ನು ಎಚ್ಚರಿಸಿದರು. ಕಲ್ಲಿಕೋಟೆಯಲ್ಲಿ ಜಾಮೋರಿನ್ ದೊರೆಯ ನೇತೃತ್ವದಲ್ಲಿ ನಡೆದ ಸಮಾವೇಶ ಈ ಎಲ್ಲಾ ಕೃತ್ಯಗಳನ್ನು ವಿವರವಾಗಿ ದಾಖಲೆ ಮಾಡಿತು. ಕೇರಳ ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿ ಕೆ.ಪಿ. ಕೇಶವ ಮೆನನ್, 1921ರ ಸೆಪ್ಟೆಂಬರ್ 7 ರಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರತ್ಯಕ್ಷದರ್ಶಿಯೊಬ್ಬರು ಬರೆದ ಪತ್ರ,…ಹೀಗೆ ಹತ್ತು ಹಲವು ವರದಿಗಳು ಮೋಪ್ಲಾಗಳ ಕೃತ್ಯಗಳನ್ನು ವರದಿ ಮಾಡಿದವು. ಆದಾಗ್ಯೂ ಕಾಂಗ್ರೆಸ್ ಖಿಲಾಫತಿಗೆ ತನ್ನ ಬೆಂಬಲವನ್ನು ಹಿಂತೆಗೆಯಲೇ ಇಲ್ಲ. ಈ ಸಂದರ್ಭದಲ್ಲಿ ಬ್ರಿಟಿಷ್ ರಕ್ಷಣಾ ಪಡೆಗಳು ಕಣಕ್ಕಿಳಿಯದಿದ್ದರೆ ಅದಾಗಲೇ ಕೇರಳ ಪಾಕಿಸ್ತಾನವಾಗಿ ಪರಿವರ್ತಿತವಾಗುತ್ತಿತ್ತು.

Facebook ಕಾಮೆಂಟ್ಸ್

ಲೇಖಕರ ಕುರಿತು

Rajesh Rao

ವೃತ್ತಿ: ವಿ ಎಲ್ ಎಸ್ ಐ ಇಂಜಿನಿಯರ್
ಪ್ರವೃತ್ತಿ: ಇತಿಹಾಸ/ಪ್ರಚಲಿತ ವಿದ್ಯಮಾನ, ಕಥೆ-ಕವನ ಬರವಣಿಗೆ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!