ಅಂಕಣ

ಮುಂಜಾವು

ನಿಶೆಯ ನಶೆಗೆ ಸೋತು ನಿದ್ರೆಹೋಗಿದ್ದ ಜಗತ್ತು ಆಕಳಿಸುತ್ತ ಮೇಲೇಳುತ್ತಿದೆ. ಹಾಲು ಮಾರುವ ಹುಡುಗ ಕೆಲಸ ಮುಗಿಸಿ ಕಾಲೇಜಿಗೆ ಹೊರಟಿದ್ದಾನೆ. ಉದಯವಾಣಿ, ಪ್ರಜಾವಾಣಿ, ವಿಜಯವಾಣಿ, ವಿಜಯ ಕರ್ನಾಟಕ ಹೀಗೆ ಎಲ್ಲಾ ಬಗೆಯ ಪತ್ರಿಕೆಗಳೂ ತನ್ನ ಬಳಿಯೇ ಇದ್ದರೂ  ಪೇಪರ್ ಮಾರುವ ಹುಡುಗನಿಗೆ ಮಾತ್ರ ಯಾವ ಸುದ್ದಿಯನ್ನೂ ಓದಲು ಸಮಯವಿರಲಿಲ್ಲ. ರಾತ್ರಿ ಪಾಳಿ ಮುಗಿಸಿದ ಕಾಲ್ ಸೆಂಟರ್ ಉದ್ಯೋಗಿ ಆಫೀಸಿನಿಂದ ಹೊರಬೀಳುತ್ತಿದ್ದಂತೆ ಮಾತನ್ನೇ ಮರೆತಂತವನಾಗಿದ್ದ. ಹಳ್ಳಿಯಿಂದ ಹೊರಡುವ ಮೊದಲ ಬಸ್ಸಿನ ಚಾಲಕನೊಬ್ಬ ಬಸ್ಸಿಗೆ ಕೀಲಿ ಕೊಟ್ಟು ಪೇಟೆಗೆ ಉದ್ಯೋಗಕ್ಕೆ ಹೋಗುವವರನ್ನು ಎಬ್ಬಿಸುತ್ತಿದ್ದಾನೆ. ಬಸ್ಸು ಹೊರಟಿತೆಂಬ ಗಡಿಬಿಡಿಗೆ ತಾಯಿಯೊಬ್ಬಳು ಬೇಗ-ಬೇಗ ಮಗಳ ಟಿಫಿನ್ ಬಾಕ್ಸ್’ಗೆ ಊಟ ತುಂಬಿಸುತ್ತಿದ್ದಾಳೆ.

ಒಂದಷ್ಟು ಜನ ಆಧುನಿಕ ಮಾತೆಯರು ಮಾತನಾಡುತ್ತ ಶಾಲೆಯ ಪಾಠಿಚೀಲ ಹೆಗಲಿಗೆ ಹಾಕಿಕೊಂಡು ನಿಂತಿದ್ದಾರೆ. ಅವರಿಗೆಲ್ಲ ನಾಳೆ ಇರುವ ಎಲ್.ಕೆ.ಜಿ. ಯ ಮೊದಲ ಇಂಟರ್ನಲ್ಸನದ್ದೇ ಚಿಂತೆ. ಅವರ ಜೊತೆ ಅವರ ಮಕ್ಕಳು ತಮ್ಮ ತಾಯಂದಿರನ್ನು ಶಾಲೆಗೆ ಕಳಿಸಿಕೊಡಲು ಬಂದವರಂತೆ ನಿಂತಿದ್ದಾರೆ. ಹಳದಿ ಬಣ್ಣದ ಸಮವರ್ಣ ಧರಿಸಿದ ಶಾಲಾವಾಹನಗಳು ಒಂದಾದ ಮೇಲೊಂದರಂತೆ ಸಾಲಾಗಿ ಬರುತ್ತಲಿವೆ‌. ಇಂಟರ್ನ್ಯಾಶನಲ್ ಸ್ಕೂಲ್ ಎಂಬ ನಾಮಫಲಕ ಹೊತ್ತು ಬರುವ ಆ ವಾಹನಗಳಿಗೂ ಏನೋ ಒಂದು ರೀತಿ ಗತ್ತು ಬಂದು ಬಿಟ್ಟಿದೆ. ಮಕ್ಕಳನ್ನೆಲ್ಲ ವಾಹನಕ್ಕೆ ಕೈಹಿಡಿದು ಹತ್ತಿಸುತ್ತಿರುವ ಆಯಾಗೆ ಪಾಠಿಚೀಲ, ಊಟದ ಬುತ್ತಿ, ನೀರಿನ ಬಾಟಲ್ ಎಲ್ಲವನ್ನೂ ತಾನೇ ಹೊತ್ತುಕೊಂಡು ಹೋಗುವ ತನ್ನ ಪುಟ್ಟ ಕಂದನ ನೆನಪಾಗುತ್ತಿದೆ.

ಆಸ್ಪತ್ರೆಯ ಹಸಿರು ಹಾಸಿಗೆಯಲ್ಲಿ ಮಲಗಿರುವವನೊಬ್ಬ ತನ್ನ ಪಕ್ಕದಲ್ಲಿನ ಕಿಟಕಿಯಿಂದ ಮುಂಜಾನೆಯ ಪ್ರಕೃತಿ ಸೌಂದರ್ಯವನ್ನ ಇದೇ‌ ಕೊನೆಯ ಬಾರಿಯೇನೋ ಎಂಬಂತೆ ದಿಟ್ಟಿಸುತ್ತಿದ್ದಾನೆ. ಚಹಾ ತರಲು ಹೋದ ಅವನ ಮಡದಿ ಒಳಬರುವ ಮುನ್ನ ಗೋಡೆಯ ಹಿಂದೆಯೇ ನಿಂತು ತನ್ನ ಕಣ್ಣೀರನ್ನೆಲ್ಲ ಖಾಲಿ ಮಾಡಿಕೊಳ್ಳುತ್ತಿದ್ದಾಳೆ. ಪಕ್ಕದ ವಾರ್ಡಿನ ಮಹಿಳೆ ಅವಳಿಗೆ ಸಮಾಧಾನ ಮಾಡುವಳು.

ಅಲ್ಲೊಂದು ಕಡೆ ಮದುವೆ ಮನೆಯಲ್ಲಿ ಬೆಳಬೆಳಿಗ್ಗೆ ಮನೆಮಂದಿಯ ಸಂಚಾರ ದಟ್ಟಣೆ ಉಂಟಾಗಿದೆ. ಗಡಿಬಿಡಿಯಲ್ಲಿ ಓಡಾಡುತ್ತ ಒಬ್ಬರಿಗೊಬ್ಬರು ಡಿಕ್ಕಿ ಹೊಡೆದುಕೊಳ್ಳುತ್ತಿದ್ದಾರೆ. ಕೋಣೆಯಲ್ಲಿ ಅಲಂಕಾರ ಮಾಡಿಕೊಳ್ಳುತ್ತಿರುವ ಮದುಮಗಳ ನಾಚಿಕೆಗೆ ಹಿಂದಿನ‌‌ ದಿನ‌ ಕೆನ್ನೆಗೆ ಹಚ್ಚಿದ ಅರಿಶಿಣ ಇನ್ನಷ್ಟು ರಂಗು ತಂದಿದೆ. ಅವಳು ಆಗಾಗ ತನ್ನ ಕೋಣೆಯ ಕಿಟಕಿಯ ಬಳಿ ನಿಂತು ತಾನೇ ಬೆಳೆಸಿದ ಗಿಡದಲ್ಲಿ ಅರಳಿದ ಗುಲಾಬಿಯನ್ನು ನೋಡುತ್ತಿದ್ದಾಳೆ. ಮತ್ತೆ ಬೇಕೆಂದಾಗಲೆಲ್ಲ ಹೀಗೆಯೇ ನೋಡಲು ಆಗುವುದಿಲ್ಲವಲ್ಲ ಎಂಬ ನೋವಿನಿಂದ. ಅದೆಷ್ಟು ಮುಂಜಾವನ್ನು ಆ ಕಿಟಕಿ ಅವಳ ಮಡಿಲಿಗೆ ಹಾಕಿತ್ತೋ. ದಿನವೂ ಸೂರ್ಯನು ಅವಳಿಗಾಗಿ ಕಳಿಸುವ ಕಿರಣಗಳ ಚುಂಬನವನ್ನು‌ ಅದೇ‌ ಕಿಟಕಿ ಅವಳಲ್ಲಿಗೆ ತಲುಪಿಸಿತ್ತು. ಈ ಮುಂಜಾನೆ ಆ ಎಲ್ಲ ನೆನಪುಗಳನ್ನ ಅವಳಿಗೆ ಮತ್ತೆ ಮರುಕಳಿಸುತ್ತಿತ್ತು.

ನಿನ್ನೆಯಷ್ಟೇ ಮೊದಲ ಬಾರಿಗೆ ಮಗನನ್ನು ಹಾಸ್ಟೇಲಿಗೆ ಕಳಿಸಿಕೊಟ್ಟ ಅಪ್ಪ‌-ಅಮ್ಮನಿಗೆ ಈ ಬೆಳಗು‌ ಅದೇನೋ ಅರಿಯಲಾಗದ ವೇದನೆ. ಮಗ ತಿಂಡಿ ತಿಂದನೋ, ಇಲ್ವೋ ಎನ್ನುತ್ತಾ ಮೊಬೈಲ್’ನಲ್ಲಿ ಮಗನ ಫೋನ್ ನಂಬರ್ ಹುಡುಕುತ್ತಿದ್ದಾರೆ. ಅತ್ತ ಎಂಜಿನಿಯರಿಂಗ್ ಮುಗಿಸಿ ಕೆಲಸ‌ ಸಿಗದೇ ಮನೆಯಲ್ಲಿರುವ ಒಬ್ಬ ಹುಡುಗ ಇಂದಾದರೂ ಒಂದು ಇಂಟರ್’ವ್ಯೂ ಕರೆ ಬರಬಹುದೇನೋ ಎಂಬ ಆಸೆಯಲ್ಲಿ‌ ದಿನವನ್ನಾರಂಭಿಸಿದ್ದಾನೆ. ಸಂಪಾದನೆಗಾಗಿ ದೂರದ ದೇಶದಲ್ಲಿದ್ದ ಮಗ ಆರು ವರ್ಷಗಳ ನಂತರ ಮನೆಗೆ ಮರಳುತ್ತಿದ್ದಾನೆ ಎಂಬ ಸಂತಸದಲ್ಲಿ ವಯಸ್ಸಾದ ಎರಡು ಜೀವಗಳು ಹಬ್ಬದೂಟ ಮಾಡುವಂತೆ ಅಡುಗೆಯವಳಿಗೆ ಹೇಳಿದ್ದಾರೆ. ಮನೆಯ ಜಗಲಿಯಲ್ಲಿ ಕೂತು ಆಚೀಚೆ ಹೋಗುವವರ ಬಳಿಯೆಲ್ಲ ತಮ್ಮ ಖುಷಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ಬೆಳಗಿನ ಜಾವದಲ್ಲೇ ಪ್ರಸವ ವೇದನೆಗೊಳಗಾದ ಹೆಣ್ಣುಮಗಳೊಬ್ಬಳು ಈಗಷ್ಟೇ ಮಗುವಿಗೆ ಜನ್ನವಿತ್ತಿದ್ದಾಳೆ. ಈ ಮುಂಜಾವು ಆಕೆಯ ಕೂಸಿಗೆ ಮೊದಲ ಜನ್ಮವಾದರೆ, ಅವಳಿಗೆ ಮರುಜನ್ಮವನ್ನಿತ್ತಿದೆ. ಮನೆಯವರಾರಿಗೂ ಹೆಣ್ಣುಮಗು ಎಂಬ ಅಸಮಾಧಾನವಿಲ್ಲದಿದ್ದರೂ, ಮೂಲೆಯಲ್ಲಿ ನಿಂತ ದೂರದ ಸಂಬಂಧಿಯೊಬ್ಬಳು ತಾನೇ ಸಾಕುವವಳೇನೋ ಎಂಬಂತೆ ಸಪ್ಪೆಮುಖ ಮಾಡಿ ನಿಂತಿದ್ದಾಳೆ.

ಅಲ್ಲೇ ಎರಡು ವಾರ್ಡಿನಾಚೆಗೆ, ತನ್ನ ಜೀವಕೊಟ್ಟು ಮಗುವಿಗೆ ಜನ್ಮವಿತ್ತ ತಾಯಿಯೊಬ್ಬಳ ಹಸುಗೂಸು ಎದೆಹಾಲಿಗಾಗಿ ಚೀರುತ್ತಿದೆ.

ನಿನ್ನೆಯಷ್ಟೇ ಗೆಳತಿಯೊಂದಿಗೆ ಪ್ರೇಮ ನಿವೇದನೆ ಮಾಡಿ ಯಶಸ್ವಿಯಾದ ಹುಡುಗನೊಬ್ಬ ಪ್ರೇಮಿಯಾಗಿ ಅವಳ ಮೊದಲ ಸಂದೇಶಕ್ಕೋಸ್ಕರ ಕಾತರದಿಂದ ಕಾಯುತ್ತಿದ್ದಾನೆ‌‌. ಯಾವುದೋ ವೈಮನಸ್ಸುಗಳಿಗೆ ಬಲಿಯಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಂಪತಿಗಳು ಇಂದಿನ ವಿಚಾರಣೆಗೆ ನ್ಯಾಯಾಲಯಕ್ಕೆ ಹೊರಡುವ ಸಿದ್ಧತೆ ನಡೆಸಿದ್ದಾರೆ. ಇಬ್ಬರೂ ಆಗಾಗ ತಮ್ಮ ಮೊಬೈಲ್ ತೆರೆದು ಹಳೆಯ ಆತ್ಮೀಯ ಸಂದೇಶಗಳನ್ನು ಮತ್ತೆ ಮತ್ತೆ ಓದುತ್ತಾರೆ. ಹಾಗೆ ಓದಿದಾಗೆಲ್ಲ, ಅದೇನೋ ಅಮೂಲ್ಯವಾದುದೊಂದನ್ನು  ಕಳೆದುಕೊಳ್ಳುತ್ತಿದ್ದೇನೋ ಎಂದು ಇಬ್ಬರಲ್ಲೂ ಅನಿಸುತ್ತಿದೆ.

ಇವೆಲ್ಲವನ್ನೂ ವೀಕ್ಷಿಸುತ್ತಾ ಮೆಲ್ಲಗೆ ಪಯಣ ಹೊರಟಿದ್ದಾನೆ  ಆ  ರವಿ. ಮೂಡಣದ ಕಡಲಲ್ಲಿ ಸ್ನಾನ ಮುಗಿಸಿ ಜಗತ್ಪರ್ಯಟನೆ ಆರಂಭಿಸಿದ್ದಾನೆ. ಒಂದಷ್ಟು ಛಾಯಾಗ್ರಾಹಕರು ಇವನು ಉದಯಿಸುವುದನ್ನೇ ಕಾಯುತ್ತ ತಮ್ಮ ತಮ್ಮ ಕ್ಯಾಮರಾಗಳನ್ನು ಹಿಡಿದು ಕಾದಿದ್ದಾರೆ. ಅವರಿಗೆಲ್ಲ ಒಂದು ರಂಗಾದ ಪೋಸ್ ಕೊಟ್ಟು ಗಾಂಭಿರ್ಯದಿಂದ ಮುನ್ನಡೆದಿದ್ದಾನೆ. ಜಗತ್ತಿನ ಮೊಗ್ಗಿನ ತೋಟಗಳೆಲ್ಲ ಹೂದೋಟಗಳಾಗಿ  ಬದಲಾಗಿವೆ. ಅವುಗಳನ್ನೆಲ್ಲ ತನ್ನ ಹೊನ್ನ ಕಿರಣಗಳ ತೋಳಿಂದ ಅಪ್ಪುತ್ತಾ ಪಡುವಣದ ಕಡೆಗಿನ ಪಯಣ ಮುಂದುವರೆಸಿದ್ದಾನೆ ಹೊನ್ನಬಣ್ಣದ ಸುಂದರಾಂಗ.

Facebook ಕಾಮೆಂಟ್ಸ್

ಲೇಖಕರ ಕುರಿತು

Anoop Gunaga

ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ.
ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!