ಅಂಕಣ

ಮಹಾರಾಷ್ಟ್ರದ ಮೋದಿಯಾಗುವತ್ತ ಫಡ್ನಾವೀಸ್ ಚಿತ್ತ!

೨೦೧೪ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಭಾರತೀಯ ಜನತಾ ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ಹುಡುಕಾಟ ಶುರುವಾಗಿತ್ತು. ದಿವಂಗತ ಪ್ರಮೋದ್ ಮಹಾಜನ್, ದಿವಂಗತ ಗೋಪಿನಾಥ್ ಮುಂಡೆ ಬಳಿಕ ಮಹಾರಾಷ್ಟ್ರ ಬಿಜೆಪಿಯಲ್ಲಿ ಪ್ರಾಬಲ್ಯ ಸಾಧಿಸಿದ್ದ ನಿತಿನ್ ಗಡ್ಕರಿ ಕೇಂದ್ರ ಸಚಿವ ಸ್ಥಾನದಲ್ಲೇ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಸಮರ್ಥ ಅಭ್ಯರ್ಥಿಯನ್ನು ಕೂರಿಸೋ ಗುರುತರ ಜವಾಬ್ದಾರಿ ಬಿಜೆಪಿ ಹೈಕಮಾಂಡ್ ಮೇಲಿತ್ತು. ಹಿರಿಯ ನಾಯಕರಾಗಿದ್ದ ಏಕನಾಥ್ ಖಾಡ್ಸೆ ಮತ್ತು ವಿನೋದ್ ತಾವ್ಡೆ ಒಬ್ಬರಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವುದು ಖಚಿತ ಎಂದು ಬಹುತೇಕ ಮರಾಠಿಗರು ಭಾವಿಸಿದ್ದರು. ಪಂಕಜಾ ಮುಂಡೆ ಆಯ್ಕೆಯ ಅವಕಾಶವೂ ವರಿಷ್ಟರಿಗಿತ್ತು. ಆದರೆ ಮೋದಿ ಮತ್ತು ಅಮಿತ್ ಶಾ ಜೋಡಿಯ ಲೆಕ್ಕಾಚಾರ ಬೇರೆಯದೇ ಆಗಿತ್ತು. ನಾಗ್ಪುರ ನೈಋತ್ಯ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಯುವ ನೇತಾರ, ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದ ದೇವೇಂದ್ರ ಗಂಗಾಧರ ಫಡ್ನಾವೀಸ್ ಎಲ್ಲರೂ ಹುಬ್ಬೇರಿಸುವಂತೆ ಮಹಾರಾಷ್ಟ್ರದಲ್ಲಿ ಬಿಜೆಪಿಯ ಪ್ರಥಮ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು! ಮೊದಲೇ ಸಂಘಟನಾ ಚತುರನಾಗಿದ್ದ ಫಡ್ನಾವೀಸ್ ಮುಖ್ಯಮಂತ್ರಿಯಾಗಿ ನೀಡಿದ ಆಡಳಿತ ಮಹಾರಾಷ್ಟ್ರದ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ ಅನ್ನುವುದನ್ನು ಸಾಬೀತುಪಡಿಸಿದೆ ಮೊನ್ನೆ ಹೊರಬಿದ್ದ ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಪಂಚಾಯತ್ ಗಳ ಚುನಾವಣಾ ಫಲಿತಾಂಶ.

ಮಹಾರಾಷ್ಟ್ರ ಬಿಜೆಪಿಗೆ ೨೦೧೪ರ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಹಿರಿಯ ಮುತ್ಸದ್ದಿ ಗೋಪಿನಾಥ್ ಮುಂಡೆಯವರ ಅಕಾಲಿಕ ಮರಣ ಬಹಳ ದೊಡ್ಡ ಹೊಡೆತವನ್ನು ತಂದಿಕ್ಕಿದ್ದು ಸುಳ್ಳಲ್ಲ. ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಗೋಪಿನಾಥ್ ಬದುಕಿರುತ್ತಿದ್ದರೆ ಸಹಜವಾಗಿಯೇ ೨೦೧೪ರ ವಿಧಾನಸಭಾ ಚುನಾವಣೆಯಲ್ಲಿ ಕಮಲ ಪಾಳಯದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುತ್ತಿದ್ದರು. ಆದರೆ ಗೋಪಿನಾಥ್ ಅನುಪಸ್ಥಿತಿಯಲ್ಲಿ ಮೋದಿ ಅಲೆಯ ಸಹಾಯದೊಂದಿಗೆ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಫಡ್ನಾವೀಸ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು ಈಗ ಇತಿಹಾಸ. ಸಂಫದ ಕಟ್ಟಾಳುವಾಗಿದ್ದ ಫಡ್ನಾವೀಸ್ ನಾಗ್ಪುರ ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ಅಲ್ಲಿಂದ ಶುರುವಾದ ಫಡ್ನಾವೀಸ್ ರಾಜಕೀಯ ಗ್ರಾಫ್ ಏರುತ್ತಲೇ ಸಾಗುತ್ತದೆ. ನಾಗ್ಪುರ ಮಹಾನಗರ ಪಾಲಿಕೆಯ ಮೇಯರ್ ಆದರಲ್ಲದೇ ಸತತ ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾದರು. ಕೇವಲ ಮೇಯರ್ ಆಗಿ ಮಾತ್ರ ಆಡಳಿತ ನಡೆಸಿದ ಅನುಭವ ಇದ್ದ ಫಡ್ನಾವೀಸ್ ಹೈಕಮಾಂಡ್ ತಮಗೆ ನೀಡಿದ್ದ ಮುಖ್ಯಮಂತ್ರಿ ಜವಾಬ್ದಾರಿಯನ್ನು ಬಹಳ ಒಳ್ಳೆಯ ರೀತಿಯಲ್ಲಿ ನಿಭಾಯಿಸಿದರು. ಬೀಫ್ ಬ್ಯಾನ್ ನಂತಹ ದಿಟ್ಟ ನಿರ್ಧಾರ, ವಿದರ್ಭ ಪ್ರದೇಶದ ಲಾತೂರ್ ಮತ್ತಿತರ ಜಿಲ್ಲೆಗಳಲ್ಲಿ ಹಿಂದೆಂದೂ ಕಾಣದಂತಹ ಜಲಕ್ಷಾಮವೆದ್ದಾಗ ವಿಶೇಷ ರೈಲಿನ ಮುಖಾಂತರ ನೀರು ಪೂರೈಸಿದ್ದು, ಮಹಾರಾಷ್ಟ್ರವನ್ನು ಬರಮುಕ್ತ ರಾಜ್ಯವನ್ನಾಗಿಸಲು ಜಾರಿಗೆ ತಂದ ಜಲಯುಕ್ತ ಶಿವಾರ್ ಯೋಜನೆ, ಹಿಂದಿನ ಕಾಂಗ್ರೆಸ್ ಸರಕಾರ ಜಾರಿಗೆ ತಂದಿದ್ದ ಎಲ್ಬಿಟಿ ಟ್ಯಾಕ್ಸ್ ನಿಷೇಧ ಮಾಡಿದ್ದು ಹೀಗೆ ಹಲವಾರು ಜನಪರ ಕಾರ್ಯಕ್ರಮಗಳ ಮೂಲಕ ಜನರಿಗೆ ಹತ್ತಿರವಾಗುತ್ತಾರೆ ಫಡ್ನಾವೀಸ್.

ಅಸಲಿಗೆ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಎಲ್ಲ ಪ್ರಮುಖ  ಪಕ್ಷಗಳು ಒಂದಾಗಿದ್ದವು ಎಂದರೆ ತಪ್ಪಾಗಲಾರದು. ಅಧಿಕೃತವಾಗಿ ಮೈತ್ರಿ ಮಾಡಿಕೊಳ್ಳದಿದ್ದರೂ ಕಾಂಗ್ರೆಸ್, ಶಿವಸೇನೆ, ಎನ್ಸಿಪಿ, ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ ಹೇಗಾದರೂ ಸರಿ, ಶತಾಯಗತಾಯ ಬಿಜೆಪಿಯನ್ನು ಹಣಿದೇ ಸಿದ್ಧ ಎಂದು ಚುನಾವಣಾ ಕಣಕ್ಕೆ ಧುಮುಕಿದ್ದವು. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ದೇಶದೆಲ್ಲೆಡೇ ದಿನೇ ದಿನೇ ವೃದ್ಧಿಸುತ್ತಿರುವ ಮೋದಿ ವರ್ಚಸ್ಸು ಮತ್ತು ಮುಖ್ಯಮಂತ್ರಿ ಫಡ್ನಾವೀಸ್ ಜನಪರ ಆಡಳಿತ ಈ ಪಕ್ಷಗಳ ನಿದ್ದೆಗೆಡಿಸಿದ್ದು ಸುಳ್ಳಲ್ಲ! ಮತದಾರರ ಬಳಿ ಬಿಜೆಪಿ ವಿರುದ್ಧ ಪ್ರಚಾರ ಮಾಡಲು ಒಂದೇ ಒಂದು ಗುರುತರ ಆರೋಪಗಳಿಲ್ಲದಾಗ ಈ ಪಕ್ಷಗಳಿಗೆ ಕಾಮನ್ ಅಜೆಂಡಾ ಆಗಿ ಸಿಕ್ಕಿದ್ದು ನೋಟು ನಿಷೇಧ ಮತ್ತು ಸರ್ಜಿಕಲ್ ಸ್ಟ್ರೈಕ್ ವಿಷಯ! ನೋಟು ನಿಷೇಧ ಕಾರ್ಯವನ್ನು ಕಾಂಗ್ರೆಸ್ನಷ್ಟೇ ಕಟುವಾಗಿ ವಿರೋಧಿಸಿದ್ದು ಶಿವಸೇನೆ. ಬಿಜೆಪಿಯ ಮಿತ್ರ ಪಕ್ಷವಾಗಿ ಸರಕಾರದಲ್ಲಿ ಪಾಲುದಾರನಾಗಿದ್ದರೂ ತನ್ನ ಮುಖವಾಣಿ ಸಾಮ್ನಾದಲ್ಲಿ ಮೋದಿಯವರ ವಿರುದ್ಧ, ಫಡ್ನಾವೀಸ್ ವಿರುದ್ಧ ಓತಪ್ರೋತವಾಗಿ ಬರೆಯಿತು ಶಿವಸೇನೆ! ಮಹಾರಾಷ್ಟ್ರ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಂಜಯ್ ನಿರುಪಮ್ ಸರ್ಜಿಕಲ್ ಸ್ಟ್ರೈಕ್ ಸಾಕ್ಷ ಕೇಳಿದವರಲ್ಲಿ ಒಬ್ಬರು. ಇನ್ನು ಮಹಾರಾಷ್ಟ್ರದಲ್ಲಿ ಮುಳುಗುತ್ತಿರುವ ದೋಣಿಯಂತಾಗಿರುವ ರಾಜ್ ಥಾಕ್ರೆಯವರ ಎಂಎನ್ನೆಸ್ ಕೂಡಾ ಮೋದಿ ಸರಕಾರದ ಹಲವು ಕಾರ್ಯಕ್ರಮಗಳನ್ನು ವಿರೋಧಿಸುತ್ತಾ ಬಂದಿತ್ತು. ಶರದ್ ಪವಾರರ ಎನ್ಸಿಪಿ ಕೂಡಾ ಬಿಜೆಪಿ ಸರಕಾರದ ಎಲ್ಲ ನಡೆಗಳನ್ನೂ ವಿರೋಧಿಸುತ್ತಾ ಬಂದಿತ್ತು. ಆದರೆ ಈ ನಾಲ್ಕೂ ಪಕ್ಷಗಳಿಗೆ ಮಹಾರಾಷ್ಟ್ರ ಜನತೆ ತಕ್ಕ ಶಾಸ್ತಿ ಮಾಡಿದ್ದಾರೆ ಮತ್ತು ಮಹಾರಾಷ್ಟ್ರದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಇನ್ನೂ ಭದ್ರವಾಗಿ ಬೇರೂರುವುದು ಸೂರ್ಯಚಂದ್ರರಷ್ಟೇ ಸತ್ಯ ಎಂದು ಸಾರಿದ್ದಾರೆ.

ಹಾಗಾದರೆ ಮಹಾರಾಷ್ಟ್ರದ ಮುಂದಿನ ವಿಧಾನಸಭಾ ಚುನಾವಣೆಗೆ ತಾಲೀಮು ಎಂದೇ ಪರಿಗಣಿಸಲಾಗಿದ್ದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕೇಸರಿ ಬ್ರಿಗೇಡ್ ಜಯದ ಕೇಕೆ ಹಾಕಲು ಕಾರಣವೇನು? ೧೦ ಮಹಾನಗರ ಪಾಲಿಕೆಗಳಲ್ಲಿ ೮ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಸಿದ್ಧವಾಗಿ ನಿಂತಿದೆಯೆಂದರೆ ಅದರೆ ಹಿಂದಿನ ಮಾಸ್ಟರ್ ಮೈಂಡ್ ಯಾರು? ಬೃಹನ್ಮುಂಬಯಿ ಮಹಾನಗರ ಪಾಲಿಕೆಯಲ್ಲಿ ೩೧ರಿಂದ ೮೧ ಸ್ಥಾನಕ್ಕೆ ಕಮಲ ಪಡೆ ಜಿಗಿಯುತ್ತೆ ಅಂದರೆ ಅದರ ಶ್ರೇಯಸ್ಸು ಸಲ್ಲಬೇಕಾದ್ದು ಯಾರಿಗೆ? ಉತ್ತರ ಬಹಳ ಸರಳ. ದೇವೇಂದ್ರ ಫಡ್ನಾವೀಸ್!! ಪ್ರಧಾನಿ ಮೋದಿ ಮತ್ತು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪಂಚರಾಜ್ಯಗಳ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರದಲ್ಲಿ ನಿರತರಾಗಿದ್ದಾಗ ಫಡ್ನಾವೀಸ್ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ಮಹಾರಾಷ್ಟ್ರ ಸುತ್ತುತ್ತಾರೆ. ೫೦ಕ್ಕೂ ಹೆಚ್ಚು ಸಾರ್ವಜನಿಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುತ್ತಾರೆ. ತಮ್ಮ ಸರ್ಕಾರದ ಎರಡೂವರೆ ವರ್ಷದ ಕಾರ್ಯಕ್ರಮಗಳು ಮತ್ತು ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು, ಶಿವಸೇನೆ ಮತ್ತು ಎಮ್ಮೆನ್ನೆಸ್ ಪಕ್ಷಗಳ ಉತ್ತರ ಭಾರತೀಯ ವಿರೋಧಿ ನೀತಿಯನ್ನು ಜನರಿಗೆ ಮನವರಿಕೆ ಮಾಡುತ್ತಾರೆ. ವಿರೋಧಿಗಳ ಪೊಳ್ಳು ಆರೋಪಗಳಿಗೆ ಕಿವಿಗೊಡಬೇಡಿ ಅನ್ನೋ ಮನವಿ ಮಾಡುತ್ತಾರೆ. ಇದರ ಪರಿಣಾಮವೇ ಮಹಾರಾಷ್ಟ್ರದಲ್ಲಿ ಬಿಜೆಪಿಯ ಅಭೂತಪೂರ್ವ ಜಯ! ಈ ಚುನಾವಣಾ ಫಲಿತಾಂಶ ಹಲವರ ಬಾಯನ್ನು ಮುಚ್ಚಿಸಿದೆ. ಸರಕಾರದ ಪಾಲುದಾರನಾಗಿದ್ದರೂ ಸದಾ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದ್ದ ಶಿವಸೇನೆಗೆ ಜನ ನೇರವಾಗಿಯೇ ಎಚ್ಚರಿಕೆ ಕೊಟ್ಟದ್ದಾರೆ! ಸಾಧ್ಯವಾದರೆ ಅಭಿವೃದ್ಧಿ ಕೆಲಸಗಳನ್ನು ಮಾಡಿ, ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ಇದಕ್ಕಿಂತಲೂ ಕಮ್ಮಿ ಸ್ಥಾನಗಳನ್ನು ಪಡೆಯಲು ತಯಾರಾಗಿ ಅನ್ನೋ ಸೂಚನೆಯನ್ನು ಮಹಾರಾಷ್ಟ್ರದ ಜನತೆ ನೀಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಾಸ್ ತೆಗೆದುಕೊಳ್ಳೋ ಬಗ್ಗೆ ಮಾತಾಡಿದ್ದ ಉದ್ದವ್ ಥಾಕ್ರೆ ಬಾಯಿಯನ್ನು ಮುಚ್ಚಿಸುವಲ್ಲೂ ಸಫಲರಾಗಿದ್ದಾರೆ ಫಡ್ನಾವೀಸ್. ಕಾಂಗ್ರೆಸ್, ಎನ್ಸಿಪಿ ಮತ್ತು ಎಂಎನ್ನೆಸ್ ಪಕ್ಷಗಳು ಆತ್ಮಾವಲೋಕನ ಮಾಡುವಂತೆ ಮಾಡಿದ್ದಾರೆ ಫಡ್ನಾವೀಸ್. ಕಾಂಗ್ರೆಸ್ ಪಕ್ಷದ ಒಂದು ಕಾಲದ ಭದ್ರಕೋಟೆ ಲಾತೂರ್ ಜಿಲ್ಲೆಯಲ್ಲಿ ಬಿಜೆಪಿ ಮತಬೇಟೆ ಭರ್ಜರಿಯಾಗಿದೆ. ಕಾಂಗ್ರೆಸ್ ಸೋತು ಮಕಾಡೆ ಮಲಗಿದೆ. ಶಿವಸೇನೆ, ಎನ್ಸಿಪಿ ಮತ್ತು ಎಂಎನ್ನೆಸ್ಗೂ ಸರಿಯಾಗಿ ಟಾಂಗ್ ಕೊಡುವಲ್ಲಿ ಫಲಪ್ರದರಾಗಿದ್ದಾರೆ ಫಡ್ನಾವೀಸ್.

ಮಹಾರಾಷ್ಟ್ರದಲ್ಲಿ ಶಿವಸೇನೆಯ ಹುಲಿಗಳ ಸೊಕ್ಕನ್ನು ಯಾರೂ ಈ ರೀತಿ ಮುರಿದ ಇತಿಹಾಸ ಇಲ್ಲ. ಮುಂಬೈ ಮಹಾನಗರ ಪಾಲಿಕೆಯಲ್ಲಿ ಮೂರು ದಶಕಗಳಿಂದಲೂ ತನ್ನ ಹಿಡಿತವನ್ನು ಭದ್ರವಾಗಿಟ್ಟಿತ್ತು ಶಿವಸೇನೆ. ಆದರೆ ಈ ಚುನಾವಣೆ ಮುಂಬೈ ಮಾತ್ರವಲ್ಲದೇ ಮಹಾರಾಷ್ಟ್ರದಾದ್ಯಂತ ಬಿಜೆಪಿ ಮತ್ತು ಫಡ್ನಾವೀಸ್ ಪರ ಅಲೆಯಿರುವುದನ್ನು ಜಗಜ್ಜಾಹೀರು ಪಡಿಸಿದೆ. ಒಂದು ವೇಳೆ ಕಾಂಗ್ರೆಸ್ ಎನ್ಸಿಪಿ ಮತ್ತು ಶಿವಸೇನೆ ಸೇರಿ ಫಡ್ನಾವೀಸ್ ಸರಕಾರವನ್ನು ಅಸ್ಥಿರಗೊಳಿಸಿದರೂ ಮುಂದಿನ ಚುನಾವಣೆಯಲ್ಲಿ ಫಡ್ನಾವೀಸ್ ನೇತೃತ್ವದಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಪ್ರಮೋದ್ ಮಹಾಜನ್, ಗೋಪಿನಾಥ್ ಮುಂಡೆ ಮತ್ತು ನಿತಿನ್ ಗಡ್ಕರಿ ಗರಡಿಯಲ್ಲಿ ಬೆಳೆದು ರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಂಡಿರುವ ಫಡ್ನಾವೀಸ್ ಆಡಳಿತಕ್ಕೆ ಜನ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ತಮ್ಮ ವೈಯಕ್ತಿಕ ವರ್ಚಸ್ಸು ಉಳಿಸಿಕೊಂಡು, ಇದೇ ತರಹ ಒಳ್ಳೆಯ ಕೆಲಸಗಳನ್ನು ಮುಂದುವರಿಸಿಕೊಂಡು ಹೋದಲ್ಲಿ ೨೦೧೯ರಲ್ಲೂ ದೇವೇಂದ್ರ ಫಡ್ನಾವೀಸ್ ಮತ್ತೊಮ್ಮೆ ಮಹಾರಾಷ್ಟ್ರದ ಮುಖ್ಯಮಂತ್ರಿ ಪಟ್ಟಕ್ಕೇರುವುದು ಕಷ್ಟದ ಕೆಲಸವೇನಲ್ಲ. ಮಹಾರಾಷ್ಟ್ರ‍ದ ಮೋದಿಯಾಗುವುದರಲ್ಲಿ ಸಂಶಯವೇ ಇಲ್ಲ.!!

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!