ಅಂಕಣ

ಬೀದಿ ಬತ್ತಲಿ ಅರಸಿ, ವರಿಸುವರಿಲ್ಲ ಜಗದೆ..!

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೬

ಇರಲಿ ಜೀವರಹಸ್ಯವರೆಪರದೆಯೊಳಗಡಗಿ |
ಅರಸಿ ವರಿಸುವರಾರು ಬೀದಿಬತ್ತಲಿಯ ? ||
ಅರಳಿಪುದದಡಗಿರ್ದೊಡಾಗ ನಮ್ಮೆದೆಗಣ್ಣ |
ಸುರಸತೆಯ ಕುತುಕದಿಂ – ಮಂಕುತಿಮ್ಮ || ೦೪೬ ||

ತನ್ನರಿವಿನಳತೆಗೆ ಸಿಗದ, ಏನೆಲ್ಲಾ ಮಾಡಿಯೂ ಹಸ್ತಗತವಾಗದ ಸೃಷ್ಟಿಯ (ಜೀವರಹಸ್ಯದ) ಗುಟ್ಟಿನ ಪರಿಗೆ ಬೇಸತ್ತು ರೋಸೆದ್ದು ಹೋದ ಕವಿಮನ ಇಲ್ಲಿ ತಲುಪುವ ‘ತೀರ್ಮಾನ’ ಕುತೂಹಲಕರವಾಗಿದೆ. ಆ ತೀರ್ಮಾನದಲ್ಲೂ ಒಂದೆಡೆ ಉಡಾಫೆಯ, ‘ಕೈಗೆಟುಕದ ದ್ರಾಕ್ಷಿ’ಯ ದನಿ ಕಂಡುಬಂದರೆ ಮತ್ತೊಂದೆಡೆ ಆ ಗುಟ್ಟಿರದಿದ್ದರೆ ಈ ಕುತೂಹಲವೇ ಇರುತ್ತಿರಲಿಲ್ಲವೇನೊ ? ಎಂಬ ಸಂತೈಕೆಯ ದನಿ ಕಾಣಿಸಿಕೊಳ್ಳುತ್ತದೆ.

ಮೊದಲಿಗೆ ಕೈಗೆಟುಕದ ಆ ಗುಟ್ಟಿನ ಮೇಲಿನ ತನ್ನ ರೋಷವನ್ನು ವ್ಯಕ್ತಪಡಿಸುವುದು ಅದನ್ನು ‘ಹುಚ್ಚಿಯೊಬ್ಬಳಿಗೆ’ ಹೋಲಿಸುವುದರ ಮೂಲಕ… ಆ ಗುಟ್ಟು, ‘ಯಾವುದೊ ಅರೆಪಾರದರ್ಶಕ ಪರದೆಯೊಳಗಡಗಿ ನಿಚ್ಚಳವಾಗಿ ಪ್ರಕಟವಾಗದ ರಹಸ್ಯವಾಗಿಯೆ ಉಳಿಯುತ್ತೇನೆಂದರೆ ಉಳಿಯಲಿ ಬಿಡು’ – ಎಂಬ ತಾತ್ಸರ ಭಾವ ತಾಳುತ್ತ. ಹಾಗೆ ಮುಂದುವರೆಯುತ್ತ ಅದನ್ನು ತನ್ನ ಸುತ್ತಮುತ್ತಲ ಪರಿಸರ, ಸಾಮಾಜಿಕ ಕಟ್ಟುಪಾಡುಗಳ ಪರಿವೆಯಿರದೆ ಅರೆಬತ್ತಲೆಯಾಗಿ ಬೀದಿಯಲ್ಲಡ್ಡಾಡುವ ಹುಚ್ಚಿಯ ಹಾಗೆ ಎಂದುಬಿಡುತ್ತಾರೆ..!

ಹಾಗೆ ಅಂಡಲೆಯುವ ‘ಬೀದಿ ಬತ್ತಲಿ’ಯಲ್ಲಿ ಅದೆಷ್ಟೇ ಸೌಂದರ್ಯವಿದ್ದರೂ, ಅದೇನೇ ಆಕರ್ಷಣೆಯಿದ್ದರೂ – ಮನಸ್ಥಿಮಿತತೆಯಿಲ್ಲದೆ ಬೀದಿಬೀದಿಯಲೆವ ಅಂತಹ ವ್ಯಕ್ತಿಯನ್ನು ವರಿಸುವೆನೆಂದು ಯಾರು ತಾನೆ ಹುಡುಕಿಕೊಂಡು ಹೋಗುವರು? ಗೊತ್ತಿದ್ದೂ ಗೊತ್ತಿದ್ದೂ ಯಾರು ತಾನೇ ಅಂತಹ ವ್ಯಕ್ತಿಯನ್ನು ಪರಿಗ್ರಹಿಸಬಯಸುತ್ತಾರೆ? ಈ ಜೀವರಹಸ್ಯದ ಗುಟ್ಟು ಸಹ ಯಾವುದೊ ಸುಸಂಬದ್ಧ ತರ್ಕದ ಬದಲು ‘ಬೀದಿ ಬತ್ತಲಿಯ’ ವರ್ತನೆಗೆ ಹೋಲುವ, ಅಸಂಬದ್ಧ ಹುಚ್ಚುತನದ ವಿತರ್ಕದಿಂದ ಹುಟ್ಟಿದ್ದಾಗಿರಬೇಕು. ಅಂದ ಮೇಲೆ ಅದನ್ನು ಬೆನ್ನಟ್ಟಿ, ಅರಿಯಲು ಪಡುವ ಪ್ರಯತ್ನವೆಲ್ಲವು ವ್ಯರ್ಥ ಮತ್ತು ಅರ್ಥಹೀನ ಎಂದು ಕೈತೊಳೆದುಕೊಂಡುಬಿಡುತ್ತದೆ, ನಿರೀಕ್ಷಿತ ಫಲಿತ ಕಾಣದೆ ನಿರಾಶವಾದ ಮನಸು.

ಹೀಗೆ ಕೈಗೆಟುಕದ ದ್ರಾಕ್ಷಿಯ ಮೇಲಿನ ತಾತ್ವಿಕ ರೋಷ ಪ್ರಕಟಿಸುತ್ತ ಹೋಗುತ್ತಾನೆ ಮಂಕುತಿಮ್ಮ. ಇಲ್ಲಿ ‘ಅರೆಪರದೆ’ ಎಂದಾಗ ಅರೆಬರೆಯಾಗಿ ಕಾಣಿಸಿಕೊಳ್ಳುವ ಅಥವಾ ನಿರ್ದಿಷ್ಠವಾಗಿ ಸಾಧಿಸಿತೋರಲಾಗದ ಮಬ್ಬುಸತ್ಯದ ಕುರಿತ ಖೇದ ಕಾಣುತ್ತದೆ. ಹಾಗೆಯೇ ‘ಅರಸಿ’ ಎನ್ನುವುದು ಗೊತ್ತಿದ್ದೂ, ಗೊತ್ತಿದ್ದೂ ಸಾಧಾರಣ ಜನ ಯಾರಾದರೂ ಆ ರೀತಿಯ ಕೆಲಸ ಮಾಡುತ್ತಾರೆಯೇ ? ಎನ್ನುವ ಭಾವಕ್ಕೆ ಒತ್ತು ಕೊಡುತ್ತದೆ. ಅಂತಹ ವ್ಯಕ್ತಿ ‘ಅರಸಿಯೆ’ ಆಗಿದ್ದರು ಆ ದೃಷ್ಟಿಕೋನದಲ್ಲಿ ವ್ಯತ್ಯಾಸವಾಗುವುದಿಲ್ಲ.

ಆದರೆ ತಾತ್ಸಾರ ಭಾವದ ಈ ಅನಿಸಿಕೆ ಮೇಲ್ಪದರದ ಪ್ರಕಟ ಭಾವವಾದರು, ಜೀವಮೂಲದ ಕುರಿತಾದ ಆ ಕುತೂಹಲ ತಣಿದಿಲ್ಲ. ಕೈಯೆಟುಕಿಗೆ ನಿಲುಕದೆ ಆಟವಾಡಿಸುತ್ತ ನಿರಂತರ ಕಂಗೆಡಿಸುತ್ತಿರುವ ಆ ರಹಸ್ಯವನ್ನು ಇನ್ನೂ ಮಣಿಸಲಾಗದ ಅತೃಪ್ತಭಾವ ಕೊರೆಯುವುದನ್ನು ಬಿಟ್ಟಿಲ್ಲ. ಆ ಅಸಂತೃಪ್ತತೆಯೆ ಮೊದಲಿನ ‘ಬೀದಿಬತ್ತಲಿ’ಯ ದೂಷಣೆಯನ್ನು ಬದಿಗಿರಿಸಿ  ಏನಾದರೊಂದು ಸೂಕ್ತವಾದ ಸಮಾಧಾನವನ್ನು ಹುಡುಕುವ ಹವಣಿಕೆಗಿಳಿಯುತ್ತ, ಅದಕ್ಕೆ ಪೂರಕ ಕಾರಣಗಳನ್ನು ಹುಡುಕತೊಡಗುತ್ತದೆ. ಹಾಗೆ ಜಿಜ್ಞಾಸೆಗೆ ಹೊರಟಾಗ, ‘ಮೊದಲಿಗೆ, ಯಾವುದೇ ವಿಷಯವಾದರೂ ಸರಿ – ಅಸ್ಪಷ್ಟವಾಗಿ ಅರೆಬರೆ ರಹಸ್ಯವಾಗಿ ಉಳಿದಿದ್ದರೆ ತಾನೆ ಅದರ ಕುರಿತಾದ ಕುತೂಹಲ ಜೀವಂತವಾಗಿರುವುದು ? ಅದರ ರಹಸ್ಯ ಸಂಪೂರ್ಣ ಅನಾವರಣವಾಗಿಬಿಟ್ಟರೆ ಆ ಮೊದಲ ಕುತೂಹಲವೆಲ್ಲ ಮಾಯವಾಗಿ ‘ಇಷ್ಟೆಯೆ?’ ಅನಿಸಿಬಿಟ್ಟು ಭ್ರಮ ನಿರಸನವಾಗುವ ಸಾಧ್ಯತೆಯೂ ಇದೆಯಲ್ಲವೆ ? ರಹಸ್ಯವೊಂದರ ‘ಬಿಚ್ಚಿಕೊಳ್ಳದ’ ಭಾವವೆ ನಮ್ಮೆದೆಗಣ್ಣಿನ ಕುತೂಹಲವನ್ನು ಜೀವಂತವಾಗಿಡುತ್ತ, ಆ ಕಾತುರವನ್ನು ಮತ್ತಷ್ಟು ಅರಿಯುವ, ಅದರರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳುವ, ತನ್ಮೂಲಕ ತಾನೂ ಅರಳುತ್ತ, ಬೆಳೆಯುವ ಪ್ರಕ್ರಿಯೆಗೆ ಇಂಬುಕೊಡುವ ಚಾಲಕ ಶಕ್ತಿ – ಅಂದಮೇಲೆ ಅದನ್ನು ದೂಷಿಸದಿರುವುದೆ ಸರಿಯಲ್ಲವೆ?’ ಎಂಬ ಸಮಾಧಾನವನ್ನು ಹುಡುಕಿಕೊಳ್ಳುತ್ತದೆ ಕವಿಮನ.

ಹೀಗೆ ಏನೇನೋ ಅಡೆತಡೆಗಳು ಬಂದು ಯಾವುದೋ ರೀತಿಯಲ್ಲಿ ಆಲೋಚನೆಯ, ವಿಚಾರ ಶೀಲತೆಯ, ತಾರ್ಕಿಕತೆಯ, ತೀರ್ಮಾನಗಳ ದಿಕ್ಕು ತಪ್ಪಿಸಿದರೂ ಕೂಡ, ಆ ಪ್ರಕ್ಷುಬ್ಧತೆಯ ಗಳಿಗೆ ದಾಟಿದ ಮೇಲೆ ಪ್ರಶಾಂತವಾಗಿ ಆಲೋಚಿಸಿದರೆ ವಿಭಿನ್ನ ದೃಷ್ಟಿಕೋನದ ಗೋಚರವಾಗುತ್ತದೆ. ಅರೆಬತ್ತಲೆಯಾಗಿ ಓಡಾಡುವ ಬೀದಿ ಬತ್ತಲಿಯಲ್ಲೂ ಏನೋ ಹಿನ್ನಲೆಯಿರಬಹುದೆನ್ನುವ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ಜೀವನದಲ್ಲಿ ಕೈ ಸೇರದುದರ ಕುರಿತಾದ ನಿರಾಶೆಯನ್ನು ಕೊರಗಾಗಿಸಿಕೊಳ್ಳದೆ, ಕುತೂಹಲ-ಜ್ಞಾನವಿಸ್ತಾರದ ಸೆರಗಾಗಿಸಿಕೊಳ್ಳುವ ವ್ಯವಹಾರ ಜ್ಞಾನ, ಹೊಂದಾಣಿಕೆ ಸ್ಥಿತಿ ಮತ್ತು ವಿನೀತ ಭಾವದಿಂದ ಅರಿತಷ್ಟನ್ನೇ ಒಪ್ಪಿಕೊಳ್ಳುವ ಪಕ್ವ-ಪ್ರಬುದ್ಧ ಮನದಿಂಗಿತ ಇಲ್ಲಿನ ಅಂತರ್ಗತ ಅಂಶಗಳು.

#ಕಗ್ಗಕೊಂದು-ಹಗ್ಗ
#ಕಗ್ಗ-ಟಿಪ್ಪಣಿ

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!