ಅಂಕಣ

ತನಗೆ ತಾನೆ ತೂಗುಮಂಚ ತಾಗುತ್ತಿತ್ತು ದೂರದಂಚ

1.

ಕಂಪೌಂಡ್ ಗೋಡೆಯ ಮೇಲೇ ಮನೆಯ ಲಿಂಟಲ್ ಎಬ್ಬಿಸುವ ಬೆಂಗಳೂರಲ್ಲಿ ಜನರ ಕನಸುಗಳಲ್ಲಾದರೂ ವಿಶಾಲ ಮನೆಗಳು ಕಾಣಿಸಿಕೊಂಡಾವೇ ಎಂದು ನಾನು ಅಚ್ಚರಿ ಪಡುವುದುಂಟು. ಬೆಂಗಳೂರಿಗೆ ಬಂದ ಮೊದಲಲ್ಲಿ ಮನೆ ಹುಡುಕುತ್ತಿದ್ದಾಗ ಏಳೆಂಟು ಮನೆಗಳನ್ನು ನೋಡಿಯೂ ನನಗೆ ಸಮಾಧಾನವಾಗಿರಲಿಲ್ಲ. ಕೆಲವು ಮನೆಗಳಲ್ಲಿ ಇಡೀ ಪಾಯವೇ ನಮ್ಮ ಹಳ್ಳಿ ಮನೆಯ ಪಡಸಾಲೆಗಿಂತ ಚಿಕ್ಕದಿತ್ತು. ಇನ್ನು ಕೆಲವು ಕಡೆಗಳಲ್ಲಿ ಅಡುಗೆ ಮನೆಯಲ್ಲಿ ನಿಂತರೆ ಅವುಗಳ ಇಕ್ಕಟ್ಟುತನದ ಬಿಕ್ಕಟ್ಟಿನಿಂದ, ಮೊದಲೇ ಕ್ಲೆಸ್ಟ್ರೋಫೋಬಿಕ್ ಆದ ನಾನು, ಕಂಗಾಲಾಗಿ ಕುಸಿದರೆ? – ಎಂದು ಭಯವಾಗುತ್ತಿತ್ತು. ಡಬ್ಬಲ್ ಬೆಡ್‍ರೂಮ್ ಎಂದು ಹಣೆಪಟ್ಟಿ ಹಚ್ಚಿಕೊಂಡ ಮನೆಯೊಂದನ್ನು ನೋಡಿದ ದಿನ ಅಮ್ಮನಿಗೆ ಫೋನ್ ಮಾಡಿ, “ಒಂದೇ ಕೋಣೆಯ ನಡುವೆ ಗೋಡೆ ಎಬ್ಬಿಸಿ ಎರಡು ಕೋಣೆ ಮಾಡಿದ್ದರಮ್ಮ. ಅವನ್ನೂ ಎರಡೆರಡಾಗಿ ಸೀಳಿ ಬಿಟ್ಟಿದ್ದರೆ ಬೆಡ್‍ರೂಮಲ್ಲಿ ಆರಾಮ ಕುರ್ಚಿ ಹಾಕಿ ಮಲಗಬೇಕಿತ್ತೇನೋ” ಎಂದು ನಗಾಡಿದ್ದೆ. ಮುಂಬಯಿ ಮಹಾನಗರಿಯಲ್ಲಿ ಮನೆ ಗಿಟ್ಟಿಸುವ ಕಷ್ಟಕಾರ್ಪಣ್ಯಗಳನ್ನು ಕೇಳಿದ ಮೇಲೆ ಬೆಂಗಳೂರೇ ಎಷ್ಟೋ ವಾಸಿಯಪ್ಪ ಅನ್ನಿಸಿ ಕೊನೆಗೊಂದು ಬಾಡಿಗೆ ಮನೆ ಹುಡುಕಿ ಉಸ್ಸಪ್ಪಾ ಅಂದಿದ್ದೆ. ಮನೆಯ ಮುಂದೊಂದು ಪುಟ್ಟ ಅಂಗಳ ಇರಬೇಕು, ಪಕ್ಕದಲ್ಲೊಂದು ಕೈದೋಟವಿರಬೇಕು, ವಿಶಾಲ ಅಡುಗೆಮನೆ ಬೇಕು, ಪಡಸಾಲೆಯಲ್ಲೊಂದು ತೂಗುಮಂಚವಿರಬೇಕು ಎಂಬ ನನ್ನ ಕನಸುಗಳನ್ನೆಲ್ಲ ಸಿಕ್ಕಿದ ಪುಟ್ಟ ಮನೆಯ ಪುಟಾಣಿ  ಅಟ್ಟದಲ್ಲಿ ಮಿಕ್ಕೆಲ್ಲ ಗಂಟುಮೂಟೆಯ ಜೊತೆಗೆ ಒಗೆದು ಬಿಟ್ಟಿದ್ದೆ.

ನಮ್ಮ ಊರಿನ ಮನೆಯಲ್ಲಿ ಒಂದು ಹಳೆಯ, ವಿಶಾಲ, ಬಳ್ಳಿಯ ಕೆತ್ತನೆಯಿದ್ದ ತೂಗುಮಂಚ ಇದ್ದದ್ದೇ ಬಹುಶಃ ನನ್ನ ಆ ಫ್ಯಾಂಟಸಿಗಳಿಗೆಲ್ಲ ಕಾರಣವಿದ್ದಿರಬೇಕು. ಹಳ್ಳಿಕಡೆಯ ಸುವಿಶಾಲ ಮನೆಗಳನ್ನು ಸಂದರ್ಶಿಸಿದ್ದರೆ ಅಂಗಳದಲ್ಲೋ ಹಜಾರದಲ್ಲೋ ಛಾವಣಿಗೆ ಇಳಿಬಿದ್ದ ಉದ್ದಗಲ ಭರ್ತಿಯಾಗಿರುವ ಮಂಚವನ್ನು ನೀವು ನೋಡಿಯೇ ಇರುತ್ತೀರಿ. ಮನೆಯಲ್ಲಿ ನಾಲ್ಕಾರು ಮಕ್ಕಳು ಓಡಾಡಿಕೊಂಡಿದ್ದರೆ ಅವರಲ್ಲಿ ಒಬ್ಬೊಬ್ಬರಿಗೂ ಆ ಮಂಚದ ತುದಿ ತಲೆಗೋ ಕಾಲಿಗೋ ತಾಗಿ ಗಾಯದ ಕಲೆಯೆಂಬ ಠಸ್ಸೆ ಒತ್ತಿರುತ್ತದೆ. ಪೇಪರ್ ರಾಕೆಟ್ ಬೀಳಿಸಿಕೊಂಡು, ಬಿದ್ದದ್ದನ್ನು ಹೆಕ್ಕುವ ಗೌಜಿಯಲ್ಲಿ ಮಂಚದ ಕೆಳಗೆ ತೂರಿ ಧಡ್ಡನೇಳುವಾಗ ನೆತ್ತಿ ತಾಗಿಸಿಕೊಂಡು ಗುಮ್ಮಟ ದೇವರುಗಳಾದ ನೆನಪಂತೂ ಹಸಿರೋ ಹಸಿರು. ಆ ಮಂಚದ ಮೇಲೆ ಹತ್ತಿ ಹಾರಿ ಹೈಜಂಪ್ ಮಾಡಿ ಕೂತು ಮಲಗಿ ಜೋಲಿಯಾಡದ ಮಕ್ಕಳೂ ಮಕ್ಕಳೇ? ಅಂಥ ಕಿಲಾಡಿಗಳ ಕಿವಿ ಚಿವುಟಿ ಕೆಂಪಗಾಗಿಸದ ಅಜ್ಜಂದಿರೂ ಅಜ್ಜಂದಿರೇ? ತೂಗುಮಂಚ ಒಂದು ನಿರ್ಜೀವ ವಸ್ತುವಲ್ಲ; ನಮ್ಮ ಎಲ್ಲ ರಸ ನಿಮಿಷಗಳಿಗೂ ಸಾಕ್ಷಿಯಾಗುವ, ನಮ್ಮ ಗುಂಪಲ್ಲೇ ಒಬ್ಬನಾದ ಗೆಳೆಯನೆಂಬ ಭಾವ ಆ ಬಾಲ್ಯದಲ್ಲಿ! ಮಕ್ಕಳ ಲೂಡೋ, ಹಾವು ಏಣಿ , ಚದುರಂಗದ ಬೋರ್ಡುಗಳು ತೆರೆಯುವುದು ಅಲ್ಲೇ. ಹಸು ಕಳೆದು ಹೋಯ್ತೆಂಬ ದೂರು ಹೊತ್ತು ಬಂದವರಿಗೆ ಪಂಚಾಂಗ ನೋಡಿ ದಿಕ್ಕು ತೋರಿಸಲು ಅಜ್ಜ ಚಕ್ಕಳ ಮಕ್ಕಳ ಹಾಕುತ್ತಿದ್ದದ್ದು ಅದೇ ತೂಗುಮಂಚದಲ್ಲಿ. ಸಂಜೆ ನಾಲ್ಕರ ನಂತರ ಆ ಮಂಚದಲ್ಲಿ ಕನಕಾಂಬರ, ಗೋರಂಟಿ, ಕರವೀರ, ಶಂಖಪುಷ್ಪ, ಮಲ್ಲಿಗೆಯ ಬೆಟ್ಟ ಎದ್ದು ನಿಲ್ಲುತ್ತಿತ್ತು. ಅವನ್ನೆಲ್ಲ ಬಾಳೆನಾರಿನಲ್ಲಿ ಕಟ್ಟಿ ಅಮ್ಮ ರಾತ್ರಿಯ ಪೂಜೆಗೆಂದು ಹರಿವಾಣದಲ್ಲಿ ಸುತ್ತಿಡುತ್ತಿದ್ದರು. ಸಂಜೆ ಆರರ ಹೊತ್ತಲ್ಲಿ ಅಜ್ಜಿ ಒಂದಷ್ಟು ಹತ್ತಿಯ ಉಂಡೆಯನ್ನೂ ಒಂದು ಲೋಟ ಕಷಾಯವನ್ನೂ ಪಕ್ಕದಲ್ಲಿಟ್ಟುಕೊಂಡು ತೂಗುಮಂಚದಲ್ಲಿ ಕೂತು ಹಾಡು ಹಾಡುತ್ತ ಬತ್ತಿ ಹೊಸೆಯುತ್ತಿದ್ದರು. ಅಕ್ಕಂದಿರು ಹೆರಳು ಬಾಚುತ್ತಿದ್ದದ್ದು, ಅಣ್ಣ ಕತೆ ಹೇಳುತ್ತಿದ್ದದ್ದು, ತಮ್ಮ ಹೊಟ್ಟೆ ನೋವೆದ್ದಾಗೆಲ್ಲ ಮಲಗಿ ಹೊರಳಾಡುತ್ತಿದ್ದದ್ದು ಆ ಮಂಚದ ಮೇಲೆ. ಮಳೆಗಾಲಕ್ಕೆ ಮಿಂಚು ಬಂದರೆ ಮರದ ಮೇಲೆ ಕೂಡಬೇಕು ಎಂಬ ವಿಜ್ಞಾನ ಪಾಠವನ್ನು ಹೇಳಿಸಿಕೊಂಡಿದ್ದ ಎಳೆಯರು ಕೋತಿಗಡಣದಂತೆ ಮುರುಕುತ್ತಿದ್ದದ್ದು ಈ ತೂಗಾಡುವ ಮಂಚದಲ್ಲೇ.

ತೂಗುಮಂಚ ಎಂಬ ಶಬ್ದವೇ ವಿಚಿತ್ರ. ಮಂಚ ಎಂದರೆ ಸ್ಥಾವರ, ಜಡತ್ವಗಳ ಸಂಕೇತ. ಮಂಚದಲ್ಲಿ ಮಲಗಿದ ಜೀವಗಳು ಗೊರಕೆ ಹೊಡೆದು ತಮ್ಮ ಜೀವಂತಿಕೆ ಸಾರದಿದ್ದರೆ ಸತ್ತ ಹೆಣಗಳಷ್ಟೇ ನಿಶ್ಚಲವಾಗಿದ್ದು ಭಯ ಹುಟ್ಟಿಸುತ್ತವೆ. ಮನೆಯಲ್ಲಿ ಕುರ್ಚಿ, ಮೇಜು, ಸ್ಟೂಲು, ಬೆಂಚುಗಳು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಚಲಿಸುತ್ತಿದ್ದರೂ ಮಂಚ ಮಾತ್ರ ಅಷ್ಟು ಸುಲಭಕ್ಕೆ ತನ್ನ ಸ್ಥಾನ ಬದಲಿಸುವುದಿಲ್ಲ. ಅನಿವಾರ್ಯ ಕಾರಣಗಳಿಲ್ಲದೆ ಅದರ ಸ್ಥಾನಪಲ್ಲಟವಾಗುವುದು ಅಪರೂಪ. ಅಂತಹ ಅಚಲ ಮಂಚಕ್ಕೆ “ತೂಗು” ಎಂಬ ಚಲನಶೀಲ ಪದವನ್ನು ಸೇರಿಸಿ ಬಿಡಿ, ಆಗ ನೋಡಿ ಮಜಾ! ತೂಗುಮಂಚಕ್ಕೆ ತೂಗಾಟವೇ ಜೀವಂತಿಕೆ. ಅದರಲ್ಲಿ ಚಲನೆಯಿದೆಯೆಂಬುದೇ ನಮಗೆಲ್ಲ ಅದು ಆಪ್ಯಾಯಮಾನವಾಗಲು ಕಾರಣ. ಅದರಲ್ಲಿ ಕೈಕಾಲು ಚಾಚಿ ಮಲಗಿದವರನ್ನು ಮಂಚ ತಾನಾಗಿಯೇ ತೂಗುತ್ತ ಜೋಗುಳ ಹಾಡುತ್ತ ಮಲಗಿಸುತ್ತದೆಂಬುದು ವಿಶೇಷ. ಹಾಗಾಗಿಯೇ ನಿಶ್ಚಲ ಮಂಚದಲ್ಲಿ ಇತ್ತಿಂದತ್ತ ಅತ್ತಿಂದಿತ್ತ ನಿದ್ದೆ ಬರದೆ ಹೊರಳಾಡುವವರು ಕೂಡ ತೂಗುಮಂಚದಲ್ಲಿ ಮಂಚವೇ ತನ್ನನ್ನು ತಾನು ಸಣ್ಣಗೆ ತೂಗಿಕೊಳ್ಳುತ್ತಿರುವಾಗ ಮಲಗಿ ನಿದ್ದೆ ಬರಿಸಿಕೊಂಡು ಬಿಡುತ್ತಾರೆ. ತೂಗುಮಂಚ ಮನೆಯ ಉಯ್ಯಾಲೆಯಂತೆ ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಎನ್ನುತ್ತ ರಭಸದಿಂದ ಚಲಿಸುವುದಿಲ್ಲ. ಅದರದೇನಿದ್ದರೂ ಗಜದ ಹೆಜ್ಜೆಯಂತೆ ನಿಧಾನ ಚಲನೆ. ತೂಗುಮಂಚ ಆರಾಮ ಬದುಕಿನ ಸಂಕೇತ. ವೈಶಾಲ್ಯದ ಪ್ರತೀಕ. ಹಳ್ಳಿಮನೆಯ ಹಜಾರದಲ್ಲಿ ಛಾವಣಿಗೆ ಇಳಿಬಿದ್ದ ತೂಗುಮಂಚ ಇಡೀ ಪರಿಸರಕ್ಕೆ ಒಂದು ವಿಚಿತ್ರ ಗಾಂಭೀರ್ಯವನ್ನೂ ಪ್ರಸನ್ನತೆಯನ್ನೂ ತೂಕವನ್ನೂ ದಯಪಾಲಿಸುತ್ತದೆ. ಬೆಳಗೆದ್ದರೆ ಓಡು ಓಡು ಓಡು ಎನ್ನುವ ಬೆಂಗಳೂರಂಥ ನಗರಕಿಷ್ಕಿಂಧೆಯ ನಡುವಲ್ಲಿ ತೂಗುಮಂಚವಿರುವ ಪಡಸಾಲೆಯ ಮನೆ, ಯಾಕೋ ಕಲ್ಪನೆಗೆಟುಕದ ವಿಚಾರ.

2

ನನ್ನ ಸ್ಮರಣಕೋಶದಲ್ಲಿ ಮರೆತೇ ಹೋಗಬೇಕಾದಷ್ಟು ಮೂಲೆಗೊತ್ತಿ ಹೋಗಿದ್ದ ತೂಗುಮಂಚವನ್ನು ಮತ್ತೆ ಮೇಲೆತ್ತಿ ತೆಗೆದವಳು ಚಂದ್ರಾಣಿ . ಮೊನ್ನೆ ಪಡಸಾಲೆಯ ಬೀನ್ ಬ್ಯಾಗಿನಲ್ಲಿ ಕೂತು ಏನೋ ಗುನುಗುತ್ತಿದ್ದಳು. ಅಡುಗೆ ಮನೆಯಲ್ಲಿ ಕುದಿಯುತ್ತಿದ್ದ ಚಹದ ಪಾತ್ರೆಗೆ ಶುಂಠಿ ತುರಿದು ಹಾಕುತ್ತಿದ್ದ ನಾನು ಕೆಲಸವನ್ನು ಒತ್ತಾರೆ ನಿಲ್ಲಿಸಿ ಹೊರಬಂದು “ಅದು ವೆಂಕಟೇಶಮೂರ್ತಿಗಳ ಪದ್ಯ ಅಲ್ವೇನೇ?” ಅಂದೆ. “ನಿನ್ ತಲೆ. ಕಿರಿಕ್ ಪಾರ್ಟಿ ಹಾಡು ಕಣೋ” ಅಂದಳು. ಸಿನೆಮಾದಲ್ಲಿ ಅಂಥದೊಂದು ಅದ್ಭುತ ಹಾಡನ್ನು ಕೂಡ ಸೇರಿಸುತ್ತಾರಾ? ಅಂತ ಅಚ್ಚರಿಯಾಯಿತು. ಯಾವಾಗಲೋ ಒಮ್ಮೆ “ಹಳೆ ಪಾತ್ರೆ ಹಳೆ ಕಬ್ಣ” ಎಂದೋ “ಅಮ್ಮಾಟೆ ಅಮ್ಮಾಟೆ” ಎಂದೋ ಸಾಹಿತ್ಯವಿದ್ದ ಹಾಡು ಕೇಳಿದ ಮೇಲೆ ಇನ್ನು ಆ ಕಡೆ ತಲೆ ಹಾಕಿಯೂ ಮಲಗಬಾರದೆಂದು ಶಪಥ ಹಾಕಿದ್ದ ನನಗೆ ಬಹುಶಃ ಈಗ ಸಿನೆಮಾ ಹಾಡುಗಳಲ್ಲಿ ಅರ್ಥವಿರುವ ಸಾಲುಗಳನ್ನೂ ಬರೆಯುವಷ್ಟು ಬದಲಾವಣೆಯಾಗಿದೆಯೋ ಏನೋ ಎಂಬ ಸಣ್ಣ ಆಶಾಭಾವ ಮೂಡಿತು. “ಹಾಡು ನೋಡೋಣ” ಅಂದೆ. ಕೀಲು ಜಾರಿದ ಬಂಡಿಯಂತೆ ಅಸಡ್ಡಾಳವಾಗಿ ಕೂತಿದ್ದವಳು ನೆಟ್ಟಗೆ ಕೂತು ಸುಶ್ರಾವ್ಯವಾಗಿ ಹಾಡಿದಳು:

ತೂಗುಮಂಚದಲ್ಲಿ ಕೂತು ಮೇಘಶ್ಯಾಮ ರಾಧೆಗಾತು

ಆಡುತಿಹನು ಏನೋ ಮಾತು ರಾಧೆ ನಾಚುತಿದ್ದಳು ||

ಸೆರಗ ಬೆರಳಿನಲ್ಲಿ ಸುತ್ತಿ ಜಡೆಯ ತುದಿಯ ಕೆನ್ನೆಗೊತ್ತಿ

ಜುಮ್ಮುಗುಡುವ ಮುಖವನೆತ್ತಿ ಕಣ್ಣು ಮುಚ್ಚುತಿದ್ದಳು ||

“ಚಂದ್ರಾ! ಇದು ಸಿನೆಮಾ ಗೀತೆ ಅಲ್ಲ ಮಾರಾಯ್ತಿ! ಒಂದು ವೇಳೆ ಸಿನೆಮಾಗೀತೆಯಾದರೂ ಸಿನೆಮಾಗಾಗಿ ಬರೆದ ಗೀತೆಯಂತೂ ಅಲ್ಲ. ಇದನ್ನು ಬರೆದವರು ಎಚ್.ಎಸ್. ವೆಂಕಟೇಶಮೂರ್ತಿಯವರು. ರತ್ನಮಾಲಾ ಪ್ರಕಾಶ್ ಬಹಳ ಅದ್ಭುತವಾಗಿ ಹಾಡಿರುವ ಹಾಡಿದು. ಯಾವಾಗಲೋ ಹಿಂದೊಮ್ಮೆ ಕೇಳಿದ್ದು ನೋಡು… ಈಗ ಆ ತೂಗುಮಂಚವನ್ನ ಮತ್ತೆ ಕಣ್ಣ ಮುಂದೆ ತಂದು ಬಿಟ್ಟಿ ನೀನು!” ಎಂದು ಮೆಚ್ಚುಗೆ ಸೂಚಿಸಿದೆ.

ಅರ್ಥವಾಗದ ಕವಿತೆಗಳನ್ನು ಓದಿದಾಗೆಲ್ಲ ಚಂದ್ರಾಣಿ  ತನ್ನ ಇಂದಿರಾನಗರದ ತೆಲುಗು ಚರ್ಚ್ ಓಣಿಯಿಂದ ಕ್ಯಾಬ್ ಮಾಡಿಕೊಂಡು ಬಸವನಗುಡಿಗೆ ಬಂದು ಬಿಡುತ್ತಾಳೆ. ಇದರ ಅರ್ಥ ಹೇಳೋ ಅಂತ ನನ್ನ ತಲೆ ತಿನ್ನುತ್ತಾಳೆ. ಒಮ್ಮೆ ಭಾನುವಾರದ ರಾತ್ರಿ ಫುಡ್‍ಸ್ಟ್ರೀಟಿನಲ್ಲಿ ನಾಲ್ಕು ತಟ್ಟೆ ಇಡ್ಲಿ ಎರಡು ಆಲೂ ಪರಾಟ ಎರಡು ಗ್ಲಾಸು ಲಸ್ಸಿ ಹೊಡೆದು ಮನೆಗೆ ಬಂದು ಉಸ್ಸೆನ್ನುವಷ್ಟರಲ್ಲಿ ರಾತ್ರಿ ಹತ್ತೂವರೆಗೆ ಬಂದಿದ್ದಳು. “ಗಡಿಯಾರದಂಗಡಿಯ ಮುಂದೆ ಬೆದರಿದೆ ಕುದುರೆ ಕಣ್ಣಪಟ್ಟಿಯ ಕಂಡು ಕನ್ನಡಿಯಲಿ” ಅನ್ನುವ ಸಾಲು ಹಿಡಿದುಕೊಂಡು “ಇದರ ಅರ್ಥ ಏನೋ?” ಅಂತ ಕೂತು ಬಿಟ್ಟಿದ್ದಳು. ಈ ಮಹರಾಯತಿ ಯಾವ ದಿನ ಯಾವ ಹೊತ್ತಲ್ಲಿ ಯಾವ ಸಾಹಿತ್ಯ ಸಂಶಯ ಹಿಡಿದು ಬಾಗಿಲು ತಟ್ಟುತ್ತಾಳೆಂಬುದನ್ನು ಬ್ರಹ್ಮನಿಗೂ ಊಹಿಸಲು ಸಾಧ್ಯವಿಲ್ಲ. ಈಗೇನಾದರೂ ತೂಗುಮಂಚದ ಅರ್ಥ ಕೇಳುತ್ತಾಳೋ ಎಂದು ಗಾಬರಿ, ಆಸೆಗಳಿಂದ ಕಾದೆ. ಊಹ್ಞೂ. ಸುಮ್ಮನೆ ಕಣ್ಮುಚ್ಚಿ ಯೋಚಿಸುತ್ತಿದ್ದಳು.

ಹಾಗೆ ನೋಡಿದರೆ ಎಚ್ಚೆಸ್ವಿಯವರ ಆ ಕವಿತೆ ಅರ್ಥವಾಗದ್ದೇನಲ್ಲ. ಅದಕ್ಕೆ ಯಾರೂ ಅರ್ಥ ಹೇಳಬೇಕಾಗಿಲ್ಲ. ಹೇಳಲೂ ಬಾರದು. ಯಾಕೆಂದರೆ ಅದೊಂದು ಶೃಂಗಾರ ಕವಿತೆ. ಶೃಂಗಾರಕ್ಕೆ ಏನು ಅರ್ಥ ಹೇಳುವುದು? ಅರ್ಥದ ಗೊಡವೆಯಿಲ್ಲದೆ ಅನುಭವಿಸಿಬಿಡಬೇಕು ಅಷ್ಟೆ. ಎಚ್ಚೆಸ್ವಿ ರಾಧೆ-ಶ್ಯಾಮರ ನಡುವಿನ ಪ್ರೀತಿ-ಶೃಂಗಾರಗಳನ್ನು ವರ್ಣಿಸುವ ಹಲವು ಕವಿತೆಗಳನ್ನು ಬರೆದಿದ್ದಾರೆ. ಬಹಳಷ್ಟು ಚೆನ್ನಾಗಿವೆ. ರೇಷ್ಮೆಯ ಎಳೆಯಂತೆ ನವಿರಾಗಿವೆ. ಅಂಥವುಗಳ ಸಾಲಲ್ಲಿ ಈ ತೂಗುಮಂಚದ ಕವಿತೆಗೆ ಒಂದು ವಿಶೇಷ ಸ್ಥಾನವಿದೆ. ರಾಧೆ-ಕೃಷ್ಣರ ಜೋಡಿಯನ್ನು ಚಿತ್ರಿಸಿದ ಚಿತ್ರಗಳ ಪೈಕಿ ನೀವು, ಅವರಿಬ್ಬರೂ ತೂಗುಮಂಚದಲ್ಲಿ ಕೂತು ಮೆಲ್ಲನೆ ಜೀಕಾಡುವ ಒಂದು ಚಿತ್ರವನ್ನು ನೋಡಿಯೇ ಇರುತ್ತೀರಿ. ಆ ತೂಗುಮಂಚದ ಹಗ್ಗಗಳಿಗೆ ಮಲ್ಲಿಗೆಯ ಹೂವಿನ ಮಾಲೆ. ಸುತ್ತ ತರುಲತೆಗಳು. ಮಂಚದ ಬದಿಯಲ್ಲಿ ಕೃಷ್ಣನ ಕೊಳಲು. ಕೆಂಪಂಚಿನ ಗಾಢ ನೀಲಿಯ ಲಂಗ ತೊಟ್ಟ ರಾಧೆ ಮೈಯಲ್ಲಿ ನಿಶ್ಶಕ್ತಿಯಾದಂತೆ ಕೃಷ್ಣನ ಹೆಗಲ ಮೇಲೆ ಜೋತು ಬಿದ್ದ ದೃಶ್ಯ. ಸುತ್ತ ಹಬ್ಬಿನಿಂತ ಗಿಡಮರಗಳಲ್ಲಿ ಗಿಳಿ, ನವಿಲುಗಳು. ದೂರದಲ್ಲಿ ಸಣ್ಣ ಗೆರೆಯಂತೆ ಮಿಂಚಿ ಮರೆಯಾಗುವ ಯಮುನೆಯ ಸಹಿ.

ಎಚ್ಚೆಸ್ವಿಯವರ ಕವಿತೆಯಲ್ಲಿ ಕೂಡ ಅಂಥಾದ್ದೇ ವಾತಾವರಣ. ಇಬ್ಬರೂ ಯಥಾಪ್ರಕಾರ ವೃಂದಾವನ ಸೇರಿದ್ದಾರೆ. ಅಲ್ಲಿ ಒಂದು ತೂಗುಮಂಚವಿದೆ. ಇಬ್ಬರೂ ಅದರಲ್ಲಿ ಕೂತಿದ್ದಾರೆ. ಬಲ ಕಳೆದುಕೊಂಡ ಬಳ್ಳಿಯಂತೆ ಮಾಧವನ ಹೆಗಲಿಗೆ ರಾಧೆ ಜೋತು ಬಿದ್ದಿದ್ದಾಳೆಂಬುದು ಸಾಮಾನ್ಯವಾಗಿ ಕವಿಗಳ ವರ್ಣನೆ. ಆದರೆ ಇಲ್ಲಿ ಮೇಘಶ್ಯಾಮನಾದ ಕೃಷ್ಣನೇ ರಾಧೆಯ ಭುಜಕ್ಕೆ ತಲೆಯಿಟ್ಟು ಆತು ಕೂತಿದ್ದಾನೆ! ಹಾಗೆ ಕೂತು ಅದೇನೋ ಪಿಸುಮಾತುಗಳನ್ನು ಅವಳ ಕಿವಿಗಷ್ಟೇ ಕೇಳುವ ಹಾಗೆ ಹೇಳುತ್ತಿದ್ದಾನೆ. ಅವನು ಏನು ಹೇಳಿದನೆಂಬುದು ಮುಖ್ಯವಲ್ಲ; ಆದರೆ ಆ ಮಾತಿಗೆ ರಾಧೆ ಹೇಗೆ ನಾಚಿ ನೀರಾಗಿ ಕರಗಿ ಹರಿಯುತ್ತಿದ್ದಾಳೆ ಎಂಬುದೇ ಕವಿಗೆ ಮುಖ್ಯ. ರಾಧೆ ತನ್ನ ಬೆರಳಿನಲ್ಲಿ ಸೆರಗು ಸುತ್ತುತ್ತಿದ್ದಾಳೆ. ಜಡೆಯ ತುದಿಯನ್ನು ತನಗರಿವಿಲ್ಲದಂತೆಯೇ ಕೆನ್ನೆಯತ್ತ ತಂದಿದ್ದಾಳೆ. ಜುಮ್ಮುಗುಡುವ ಮುಖವನ್ನೆತ್ತಿ ತನ್ನ ಪ್ರಿಯಕರನನ್ನು ಕಂಡು ಕಣ್ಣು ಮುಚ್ಚುತ್ತಿದ್ದಾಳೆ. ಅವಳ ಈ ಎಲ್ಲ ಕ್ರಿಯೆಗಳ ಮೂಲಕ ಕವಿ, ಕೃಷ್ಣ ಅದೇನೇನು ಮಾತುಗಳನ್ನು ಆಕೆಯ ಕಿವಿಯಲ್ಲಿ ಉಸುರಿರಬಹುದೆಂಬ ಊಹೆಯನ್ನು ನಮ್ಮಲ್ಲಿ ಹುಟ್ಟಿಸಲು ಯತ್ನಿಸುತ್ತಿದ್ದಾನೆ. ಕೃಷ್ಣ ಏನು ಹೇಳಿದ ಎಂಬುದನ್ನು ಹೇಳಿಬಿಟ್ಟರೆ ಕಾವ್ಯಕ್ಕೆ ಇನ್ನೇನು ಕೆಲಸ? ಅದು ತೂಗುಮಂಚ ಬಿಟ್ಟು ಮನೆಗೆ ಹೋಗಿಬಿಡಬಹುದು!

ಚಂದ್ರಾಣಿ  ಒಳ್ಳೇ ಮೂಡ್‍ನಲ್ಲಿದ್ದಳು. ಹಾಡು ನಿಲ್ಲಲಿಲ್ಲ. ಹರಿಯಿತು ಶರತ್ಕಾಲದ ಯಮುನೆಯ ಹಾಗೆ. ನಿಧಾನವಾಗಿ, ಗಂಭೀರವಾಗಿ.

ಮುಖವ ಎದೆಯ ನಡುವೆ ಒತ್ತಿ ತೋಳಿನಿಂದ ಕೊರಳ ಸುತ್ತಿ

ತುಟಿಯು ತೀಡಿ ಬೆಂಕಿ ಹೊತ್ತಿ ಹಮ್ಮನುಸಿರಬಿಟ್ಟಳು ||

ಸೆರಗು ಜಾರುತಿರಲು ಕೆಳಗೆ ಬಾನು ಭೂಮಿ ಮೇಲು ಕೆಳಗೆ

ಅದುರುತಿರುವ ಅಧರಗಳಿಗೆ ಬೆಳ್ಳಿ ಹಾಲ ಬಟ್ಟಲು ||

ಎಂದು ಹಾಡಿದಳು. ಅದ್ಯಾವ ಗಳಿಗೆಯ, ಯಾವ ರೋಮಾಂಚನದ ವಿಷಾದವನ್ನು ಅನುಭವಿಸಿದಳೋ ಏನೋ. ಹಮ್ಮನುಸಿರಬಿಟ್ಟಳು ಎಂಬಾಗ ಅವಳ ಜೀವವೂ ಮೀಟಿದ ವೀಣೆಯಂತೆ ಮಿಡಿಯಿತು. ಉಸಿರು ಉತ್ತುಂಗಕ್ಕೇರಿ ಇಳಿಯಿತು. ತುಟಿಗೇರಿಸಿದ್ದ ಚಹದ ಕಪ್ಪನ್ನು ಮೇಜಲ್ಲಿಟ್ಟು ನಾನೂ ಕೂತು ಧೇನಿಸಿದೆ. “ಮುಖವ ಎದೆಯ ನಡುವೆ ಒತ್ತಿ, ತೋಳಿನಿಂದ ಕೊರಳ ಸುತ್ತಿ” – ಎಂದಿದೆ. ಆದರೆ ಯಾರ ಮುಖ ಯಾರ ಎದೆಯ ನಡುವೆ? ಯಾರ ತೋಳು ಯಾರ ಕೊರಳನ್ನು ಸುತ್ತಿ? ಈ ಪ್ರಶ್ನೆಗಳು ಉತ್ತರವಿಲ್ಲದೆ ನಿಂತಿವೆ. ಅಥವಾ ಆ ಪ್ರಶ್ನೆಗಳಿಗೆ ನಿಖರ ಉತ್ತರದ ಅಗತ್ಯ ಇಲ್ಲ ಎನ್ನುವುದೂ ಕವಿಯ ದೃಷ್ಟಿಯಾಗಿರಬಹುದು. ಶೃಂಗಾರದಲ್ಲಿ ನಿಜವಾಗಿಯೂ ಯಾರು ಏನು ಮಾಡಿದರು ಎಂಬುದು ಅಗತ್ಯವಲ್ಲ; ಒಟ್ಟು ಅನುಭವವಷ್ಟೇ ಮುಖ್ಯ ತಾನೆ? ಹಾಗೆ ಎರಡು ದೇಹಗಳು, ಎರಡು ಹೃದಯಗಳು, ಎರಡು ತುಟಿಗಳು ತೀಡಿದಾಗ ಬೆಂಕಿ ಹೊತ್ತಿದೆ. ಪ್ರೀತಿಗಿಂತ ತುಸು ಆಚೆಗಿನ ಬೆಂಕಿ ಅದು. ಮೊದಲ ಭಾಗದಲ್ಲಿ ಕಾಮದ ವಾಸನೆಯಿಲ್ಲದ ಶುದ್ಧ ಪ್ರೇಮಾಭಿವ್ಯಕ್ತಿ ಎಂಬಂತೆ ಶುರುವಾದದ್ದು ಇಲ್ಲಿಗೆ ಬರುವಾಗ ಶೃಂಗಾರದ ಎರಡನೇ ಮೆಟ್ಟಿಲು ಹತ್ತಿದೆ. ದೇಹಕ್ಕೆ ದೇಹ ತೀಡಿದೆ. ತುಟಿಗೆ ತುಟಿ ತಾಗಿ ಬೆಂಕಿ ಹೊತ್ತಿದೆ, ರಾಧೆ ದೀರ್ಘವಾಗಿ ಉಸಿರಾಡುತ್ತ ಆ ಇಡೀ ಅನುಭವವನ್ನು ದಕ್ಕಿಸಿಕೊಳ್ಳಲು, ಸಂಪೂರ್ಣವಾಗಿ ತನ್ನದಾಗಿಸಿಕೊಳ್ಳಲು ತವಕಿಸುತ್ತಿದ್ದಾಳೆ. ಜಾರಿದ ಸೆರಗು, ಬಾನು-ಭೂಮಿ, ಬೆಳ್ಳಿ ಹಾಲ ಬಟ್ಟಲು – ಇವೆಲ್ಲ ಇಮೇಜರಿಗಳು ಅಲ್ಲಿ ನಡೆದಿರಬಹುದಾದ ಸಂಗತಿಗಳನ್ನು ಸೂಚ್ಯವಾಗಿ ನಮಗೆ ದಾಟಿಸುತ್ತಿವೆ.

3

ಚಂದ್ರಾಣಿಗೆ ಮುಂದಿನ ಭಾಗ ಮರೆತು ಹೋಗಿತ್ತು. ನನ್ನತ್ತ ನೋಡಿದಳು. ನಾನು ಆ ಹಾಡಿನ ಹಳೆ ಧ್ವನಿಮುದ್ರಿಕೆಯನ್ನು ಅಂತರ್ಜಾಲದಲ್ಲಿ ಹುಡುಕಿ ಅವಳಿಗೆ ಕೇಳಿಸಿದೆ. ಸ್ಲೇಟಿನ ಮೇಲೆ ಹುಲಿಯುಗುರು ಮೀಟಿದಂತಿರುವ ಅತ್ಯಂತ ಸಪೂರ ಧ್ವನಿ ಹಾಡಿತು:

ಚಾಚುತಿರಲು ಅರಳಿಗರಳು ಯಮುನೆಯೆಡೆಗೆ ಚಂದ್ರ ಬರಲು

ಮೇಲೆ ತಾರೆಗಣ್ಣ ಹೊರಳು ಹಾಯಿದೋಣ  ತೇಲಿತು

ತನಗೆ ತಾನೇ ತೂಗುಮಂಚ ತಾಗುತ್ತಿತ್ತು ದೂರದಂಚ

ತೆಗೆಯೋ ಗರುಡ ನಿನ್ನ ಚುಂಚ ಹಾಲುಗಡಿಗೆ ಹೇಳಿತು ||

“ಇದರ ಅರ್ಥ ಏನೋ?” ಎಂದಳು ಚಂದ್ರಾ. ಅಂಥದೊಂದು ಪ್ರಶ್ನೆ ಬಂದೇ ಬರುತ್ತದೆಂಬುದು ನನಗೆ ತಿಳಿಯದ್ದೇನಲ್ಲ.

“ಕವಿತೆಗೆ ಅರ್ಥ ಹುಡುಕಬಾರದು. ಅರ್ಥವಾದಷ್ಟೇ ಅರ್ಥ” ಎಂದೆ. ಬಿಡುವಳೇ? “ಅರ್ಥ ಗೊತ್ತಿಲ್ಲವಾದರೆ ಹಾಗೇ ಒಪ್ಪಿಕೊಳ್ಳಯ್ಯ. ಯಾಕೆ ಬಂಡಾಯ ಕವಿಗಳ ಹಾಗೆ ಮಾತಾಡ್ತೀಯ? ಸಾಧ್ಯ ಆದ್ರೆ ಒಂದೊಂದೇ ಸಾಲನ್ನ ನಿನಗೆಷ್ಟು ಅರ್ಥ ಆಯ್ತೋ ಅಷ್ಟು ವಿವರಿಸು. ಎಷ್ಟಾಗುತ್ತೋ ಅಷ್ಟು ಅರ್ಥ ಮಾಡಿಕೊಳ್ತೇನೆ” ಎಂಬ ಧಮಕಿ ಆ ಕಡೆಯಿಂದ ಬಂತು. ಚಹ ಹಬೆಯಾಡುತ್ತಿತ್ತು.

“ಚಂದ್ರಾ, ಈ ಕವಿತೇನ ಮೊದಲಿಂದ ನಿಧಾನವಾಗಿ ಕೇಳತಾ ಬಾ. ಒಂದು ಪ್ರಕ್ರಿಯೆ ನಿಧಾನವಾಗಿ ಮುಂದುವರಿಯುತ್ತ ವೇಗ ಪಡೆಯುತ್ತ ಹೋಗೋದು ಕಾಣ ಸುತ್ತೆ. ಮೊದಲಿಗೆ ಅವರಿಬ್ಬರೂ ಅಲ್ಲಿ ಸುಮ್ಮನೆ ಕೂತಿದ್ದರು. ಕೃಷ್ಣ ಅವಳ ಹೆಗಲಿಗೆ ಆತು ಏನೋ ಹೇಳತಿದ್ದ. ಆಕೆ ಕೇಳ್ತಿದ್ದಳು. ಜಡೇನ ತನಗೇ ಗೊತ್ತಿಲ್ಲದಂತೆ ಕೆನ್ನೆಗೆ ಬಡೀತಿದ್ದಳು. ಸೆರಗನ್ನ ಬೆರಳಿಗೆ ಸುತ್ತಿಕೊಳ್ತ ಇದ್ದ ಮುಗ್ಧ ಹೆಣ್ಣು ಮಗಳು ಅವಳು. ಕಣ್ಣು ಮುಚ್ಚಿದಾಳೆ. ಆದ್ರೆ ಅದು ಪ್ರೇಮೋನ್ಮಾದದ ಉತ್ತುಂಗದ ಸ್ಥಿತಿ ಅಲ್ಲ. ಇಬ್ಬರು ಎಳೇ ಪ್ರೇಮಿಗಳ ನಡುವೆ ಹಾದು ಹೋಗುವ ಸಾದಾ ಸೀದಾ ಕ್ಷಣ ಅದು.

ಆದರೆ ಎರಡನೇ ಚರಣಕ್ಕೆ ಬರುವ ಹೊತ್ತಿಗೆ ಅದೇ ಕ್ರಿಯೆಯಲ್ಲಿ ವೇಗ ಕಾಣ ಸುತ್ತೆ. ಅವರು ಮುಂದುವರಿದಿದ್ದಾರೆ. ಅದುರುತಿರುವ ಅಧರಗಳಿಗೆ ಬೆಳ್ಳಿ ಹಾಲ ಬಟ್ಟಲು ಅನ್ನುವಷ್ಟು ಆ ಸನ್ನಿವೇಶ ಮುಂದಕ್ಕೆ ಹೋಗಿದೆ. ಸಂಸ್ಕತದಲ್ಲಿ ಶೃಂಗಾರಕ್ಕೆ ಒಂದು ಅರ್ಥ ಹೇಳ್ತಾರೆ, ಏನು ಗೊತ್ತಾ? ಜಿಂಕೆಯ ಕೊಂಬಿನ ತುದಿಗೆ ಶೃಂಗಾರ ಅಂತಾರೆ. ಆ ತುದೀನ ಹತ್ತೋ ಪ್ರಯತ್ನದಲ್ಲಿದೆ ಈ ಕವಿತೆ.

ಇನ್ನು ಮೂರನೇ ಚರಣದಲ್ಲಿ ಎಷ್ಟೊಂದು ಪದಗಳು! ಅರಳು, ಯಮುನೆ, ಚಂದ್ರ, ತಾರೆ, ಹಾಯಿದೋಣ … ಓದ್ತಾ ಹೋದರೆ ಅಡಿಗರ ಕವಿತೆ ನೆನಪಾಗುತ್ತಲ್ವ?”

“ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನ….”

“ಎಕ್ಸಾಟ್ಲಿ! ಪದಗಳನ್ನ ಸಾಲುಸಾಲಾಗಿ ಇಟ್ಟು ಒಂದು ವಾತಾವರಣವನ್ನ ವಿವರಿಸೋ ಪ್ರಯತ್ನ ಅದು. ಅಲ್ಲಿ ನಿಜವಾಗಿ ನಡೀತಿರೋ ಅನುಭವ ಏನು ಅಂತ ಹೇಳೋದಕ್ಕೇ ಸಾಧ್ಯ ಇಲ್ಲ – ಅನ್ನೋ ಅಸಹಾಯಕತೆಯನ್ನು ಹೇಳುವ ಮಾರ್ಗ ಅದು. ರಾತ್ರೀಲಿ ನಮಗೆ ಭಯ ಆಯ್ತು ಅನ್ನಬೇಕು. ಏನು ಹೇಳ್ತೀವಿ ಹೇಳು? ಗಾಢ ಕತ್ತಲೆ, ಸುಯ್ಯನೆ ಬೀಸೋ ಗಾಳಿ, ನಕ್ಷತ್ರ ಇಲ್ಲದ ಆಕಾಶ, ಬಾವಲಿಯ ಹಾರಾಟ, ನಾಯಿಯ ಊಳು…. ಅಂತ ಏನೆಲ್ಲ ಹೇಳ್ತಾ ಹೋಗ್ತೀವಿ. ಅದೆಲ್ಲ ಎಷ್ಟು ಹೇಳಿದರೂ ನಮಗೆ ಆದ ಭಯಾನ ಹೇಳೋದಕ್ಕೆ ಕೊನೆಗೂ ಆಗೋದೇ ಇಲ್ಲ ನೋಡು! ಶೃಂಗಾರದ ತೊಂದರೇನೂ ಅದೇ! ಏನೆಲ್ಲ ಹೇಳಬಹುದು, ಆದರೆ ಆ ಅನುಭವದ ಗಾಢತೆಯನ್ನ ಗೂಢವನ್ನ ಹೇಳೋದಕ್ಕೆ ಕೊನೆಗೂ ಸೋತು ಬಿಡ್ತೇವೆ.

ಇಲ್ಲಿ ಇನ್ನೊಂದು ವಿಶೇಷ ಗಮನಿಸಿದ್ದೀಯಾ ಚಂದ್ರಾ? ಈ ಕೊನೆಯ ನಾಲ್ಕು ಸಾಲುಗಳಲ್ಲಿ ಚಲನೆ ಇದೆ. ಮೊದಲ ಸಾಲುಗಳಲ್ಲಿ ಅದು ಇರಲಿಲ್ಲ. ಆದರೆ ಈ ಚರಣ ಶುರುವಾಗುವುದೇ “ಚಾಚುತಿರಲು…” ಅನ್ನೋ ಚಲನೆಯ ಪದದ ಜೊತೆ. ಅರಳಿಗೆ ಅರಳು ಚಾಚುತ್ತಿದೆ. ಚಂದ್ರ ಯಮುನೆಯ ಕಡೆ ಬಂದಿದ್ದಾನೆ. ತಾರೆಯ ಕಣ್ಣು ಹೊರಳುತ್ತಿದೆ. ಹಾಯಿದೋಣ  ತೇಲುತ್ತಿದೆ…. ನೋಡು ಏನೆಲ್ಲ ಬಗೆಯ ಚಲನೆಗಳನ್ನ ಕವಿ ದಾಖಲಿಸ್ತಾರೆ ಅಂತ! ಶೃಂಗಾರದ ಪ್ರಧಾನ ಭಾವವೇ ಚಲನೆ. ಸ್ಥಾಯಿಯಾಗಿದ್ರೆ ಅದು ತಪಸ್ಸಾಗುತ್ತೆ ಹೊರತು ಶೃಂಗಾರವಾಗಲ್ಲ. ಈ ಎಲ್ಲ ಚಲನೆಯನ್ನ ತೋರಿಸೋ ಅದ್ಭುತ ಸಂಕೇತವಾಗಿ ಇಲ್ಲಿ ತೂಗುಮಂಚ ಬಂದಿದೆ. ಅದು ಕೂಡ ಎಂಥಾ ತೂಗುಮಂಚ ಅಂತೀಯ? ತನಗೆ ತಾನೇ ತೂಗುಮಂಚ ತಾಗುತ್ತಿತ್ತು ದೂರದಂಚ! ದೂರದ ಅಂಚನ್ನ ತಾಗುವ ಮಂಚ ಅದು! ಹೆಚ್ಚಾಗಿ ತೂಗುಮಂಚ ತೂಗೋದು ಕಡಿಮೆ. ತುಂಬ ಗಂಭೀರ ಚಲನೆ ಅದರದ್ದು. ಆ ಕಡೆ ನಾಲ್ಕಿಂಚು, ಈ ಕಡೆ ನಾಲ್ಕಿಂಚು ತೂಗಿದರೇ ಅದಕ್ಕೆ ಆಯಾಸ ಆದೀತು ಅನ್ನಿಸಬೇಕು. ಅಂಥಾದ್ದರಲ್ಲಿ ದೂರದ ಅಂಚನ್ನ ಆ ತೂಗುಮಂಚ ತಾಗುತ್ತಿದೆ ಅಂದ್ರೆ? ಇಷ್ಟಕ್ಕೂ ಆ ದೂರದ ಅಂಚು ಯಾವುದು, ಕವಿ ಹೇಳೋದಿಲ್ಲ! ಅದಲ್ಲವೇ ವಿಶೇಷ!

ಈ ಕವಿತೆ ಇಬ್ಬರ ನಡುವಿನ ಶೃಂಗಾರದ ಚಿತ್ರಕ್ಕಿಂತ ಬೇರೆ ಎತ್ತರಕ್ಕೆ ಏರೋದೇ ಇಲ್ಲಿ. ತೂಗುಮಂಚವನ್ನ ನಾವು ಇಲ್ಲಿ ಒಂದು ಪ್ರತೀಕವಾಗಿ ತಗೋಬೇಕು ಚಂದ್ರಾ. ಅದನ್ನ ಶೃಂಗಾರದಿಂದ ಬೇರೆ ಮಾಡಿ ನೋಡು. ತೂಗುಮಂಚ ಅನ್ನೋದು ನಮ್ಮ ಜೀವನ ಅಂತ ನೋಡು. ತೂಗುಮಂಚ ಅನ್ನೋದು ನಾವು ಏರೋದಕ್ಕೆ ಬಯಸುತ್ತಿರೋ ಯಾವುದೋ ದೂರದ ಬೆಟ್ಟ ಅಂತ ನೋಡು. ತೂಗುಮಂಚ ತನ್ನಿಂದ ತಾನೇ ತೂಗೋದಿಲ್ಲ. ಅದರಲ್ಲಿ ನಾವು ಕೂತು ಒಂದೊಂದೇ ಎತ್ತರಗಳನ್ನ ಏರಬೇಕು. ಬದುಕಿನ ಜೊತೆ ಆಡಬೇಕು, ಬದುಕನ್ನ ಮುದ್ದಿಸಬೇಕು, ಬದುಕಿಗೂ ನಮಗೂ ಒಂದು ತಾದಾತ್ಮ್ಯ ಸಿದ್ಧಿಯಾಗಬೇಕು. ಬದುಕನ್ನ ಸಂಪೂರ್ಣವಾಗಿ ಅನುಭವಿಸೋದಕ್ಕೆ ಇಳಿದು ಬಿಡಬೇಕು. ಬದುಕೇ ನಾವು, ನಾವೇ ಬದುಕು ಆಗಿ ಬಿಡಬೇಕು. ಆಗ ಬದುಕಿನಲ್ಲಿ ಚಲನೆ ಶುರುವಾಗುತ್ತೆ. ತೂಗದೆ ಇದ್ದ ತೂಗುಮಂಚ ಕೂಡ ಯಾವುದೋ ದೂರದ ಅಂಚನ್ನ ತಾಗೋದಕ್ಕೆ ತೂಗತೊಡಗುತ್ತೆ. ಆ ದೂರದ ಅಂಚನ್ನ ತಾಗೋದಿದೆಯಲ್ಲ, ಅದೇ ಜೀವನ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ? ಅಂತ ಅಡಿಗರು ಕೇಳಿದರು. ಅದಕ್ಕೆ ಉತ್ತರ ಅನ್ನೋ ಹಾಗೆ ಎಚ್ಚೆಸ್ವಿಯವರು ತೂಗುಮಂಚ ಕವಿತೆ ಬರೆದಿದ್ದಾರೆ. ನಾವು ನಾವೆಲ್ಲಿದ್ದೀವೋ ಅಲ್ಲೇ ಗಟ್ಟಿಯಾಗಿ ನೆಲೆ ನಿಂತು ಮುಂದುವರೀತೀವಲ್ಲ; ಆಗ ನಾವು ಕೂತ ಜೀವನ ಅನ್ನೋ ತೂಗುಮಂಚ ದೂರದ ಅಂಚನ್ನ ತಾನಾಗಿ ತಾಗಿ ಬಿಡುತ್ತೆ ಅಂತ… ಕೊನೇ ಸಾಲಲ್ಲಿ ಗರುಡ ಬಂದಿದೆ ನೋಡು. ಅಮೃತಕ್ಕೆ ಹಾರುವ ಗರುಡ, ಅಂತ ಅಡಿಗರು ಹೇಳಿದ್ದರು. ನಮ್ಮ ಬದುಕು ಅಮೃತಕ್ಕೆ ಹಾರೋ ಗರುಡ ಆಗಬೇಕು. ದೂರದ ಅಂಚಿಗೆ ತಾಗೋ ತೂಗುಮಂಚ ಆಗಬೇಕು.. ಅಂಥ ಚಲನಶೀಲತೆಯನ್ನೇ ತೂಗುಮಂಚ ಸಾಂಕೇತಿಸುತ್ತಿದೆ ಅಂತ ನನ್ನ ಭಾವನೆ”

ಚಂದ್ರಾ ಏನಾದರೂ ಕೇಳುತ್ತಾಳೇನೋ ಅಂತ ಆಕೆಯತ್ತ ನೋಡಿದೆ. ಅವಳು ಕೈಯಲ್ಲಿದ್ದ ಬಿಸಿ ಹಬೆಯಾಡುತ್ತಿದ್ದ ಚಹವನ್ನೂ ಮರೆತು ಗೋಡೆಯನ್ನೂ ಸೀಳಿಹೋಗುವ ದೃಷ್ಟಿಯಲ್ಲಿ ಎತ್ತಲೋ ನೋಡುತ್ತಿದ್ದಳು. ಬಹುಶಃ ಅವಳ ಮನಸ್ಸೂ ತೂಗುಮಂಚದಂತೆ ತೂಗುತ್ತಿದ್ದಿರಬೇಕು! ತನ್ನ ಅತ್ತಿತ್ತಲಿನ ಅಂಚುಗಳತ್ತ ಚಾಚುತ್ತಿದ್ದಿರಬೇಕು! ನಾನು, ಕಿಟಕಿಯಿಂದ ತೂರಿಬರುತ್ತಿದ್ದ ಬಿಸಿಲ ಕೋಲನ್ನು ಎಣ ಸುತ್ತ, ಹಜಾರದಲ್ಲೊಂದು ಮಂಚ ತೂಗಿಸಬೇಕೆಂದು ಮತ್ತೆ ಕನಸುತ್ತ, ಚಹದ ಕೊನೆಯ ಗುಟುಕು ಸೀಪಿ ಎದ್ದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!