ಕ್ಯಾನ್ಸರ್ ಅನುವಂಶಿಕವೇ ಅನ್ನುವ ಪ್ರಶ್ನೆ ಕೇವಲ ಕ್ಯಾನ್ಸರ್ ಸರ್ವೈವರ್ ಅಷ್ಟೇ ಅಲ್ಲ, ಸಾಮಾನ್ಯನನ್ನು ಕಾಡುವಂಥದ್ದು! ಯಾವಾಗಲೇ ಕ್ಯಾನ್ಸರ್ ಬಗ್ಗೆ ಮಾತು ಬಂದರೂ ಅಲ್ಲಿ ಈ ಪ್ರಶ್ನೆ ಬಂದೇ ಬರುತ್ತದೆ. “ಯಾಕೆ ನಿನಗೆ ಹೀಗಾಯ್ತು? ನಿನ್ನ ಕುಟುಂಬದವರಲ್ಲಿ ಯಾರಿಗಾದರೂ ಆಗಿತ್ತಾ?” ಅಂತ ಸಾಕಷ್ಟು ಜನ ಪ್ರಶ್ನೆ ಕೇಳುತ್ತಾರೆ. ಆಗೆಲ್ಲಾ ’ಹಾಗಾದರೆ ಇದರರ್ಥ ಕ್ಯಾನ್ಸರ್ ಅನುವಂಶೀಯವಾಗಿ ಬರುವಂಥದ್ದಾ?’ ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಈ ಪ್ರಶ್ನೆಗೆ ಸರಳವಾಗಿ ಉತ್ತರಿಸಬೇಕೆಂದರೆ ’ಇಲ್ಲ’ ಎನ್ನಬೇಕಾಗುತ್ತದೆ! ಆದರೆ ಸ್ಪಷ್ಟ ಉತ್ತರ ಹುಡುಕುತ್ತಾ ಹೋದರೆ ಅಲ್ಲೊಂದು ’ಇನ್’ಹೆರಿಟೆಡ್ ಕ್ಯಾನ್ಸರ್’ ಎಂಬ ಪದ ಕಾಣಿಸಿಕೊಳ್ಳುತ್ತದೆ. ಇದೊಂಥರ ಗೊಂದಲಮಯವಾಗಿದೆ ತಾನೆ? ಕ್ಯಾನ್ಸರ್ ಎನ್ನುವುದೇ ಕ್ಲಿಷ್ಟಕರವಾಗಿರುವಾಗ, ಅದಕ್ಕೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಉತ್ತರವೂ ಹಾಗೇ ಇರುತ್ತದೆ ತಾನೆ?! ಅಂತಹ ಕ್ಲಿಷ್ಟ ಉತ್ತರವನ್ನು ಬಹಳ ಆಳವಾಗಿ ಅಲ್ಲದಿದ್ದರೂ, ಸ್ವಲ್ಪ ಮಟ್ಟಿಗಾದರೂ ಸ್ಪಷ್ಟಪಡಿಸುವ ಪ್ರಯತ್ನ ಮಾಡುತ್ತಿದ್ದೇನೆ.
ನಮ್ಮ ಜೀವಕೋಶಗಳಲ್ಲಾಗುವ ಸಕಲ ಕಾರ್ಯಗಳಿಗೆ ಸೂಚನೆ ಕೊಡುವುದು ಜೀನ್’ಗಳು. ಜೀವಕೋಶಗಳಿಗೆ ವಿಭಜಿಸುವ ಕುರಿತಾಗಲಿ ಅಥವಾ ಅದನ್ನ ಸ್ಥಗಿತಗೊಳಿಸುವ ಕುರಿತಾಗಲಿ ಸೂಚನೆ ನೀಡುವುದು ಕೂಡ ಈ ಜೀನ್’ಗಳೇ! ಈ ರೀತಿ ವಿಭಜನೆಯ ಹಾಗೂ ಬೆಳೆಯುವ ಸೂಚನೆ ನೀಡುವ ಜೀನ್’ಗಳಿಗೆ ಪ್ರೊಟೋ-ಆಂಕೋಜೀನ್ ಎನ್ನುತ್ತಾರೆ. ಸ್ಥಗಿತಗೊಳಿಸುವ ಸೂಚನೆ ನೀಡುವ ಜೀನ್’ಗಳಿಗೆ ಟ್ಯೂಮರ್ ಸಪ್ರೆಸರ್ ಜೀನ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ನಮ್ಮ ಜೀವಕೋಶಗಳಲ್ಲಿ ಇವೆರಡೂ ಸಮ ಪ್ರಮಾಣದಲ್ಲಿರುತ್ತದೆ. ಅಲ್ಲದೇ, ಸೂಚನೆಗನುಗುಣವಾಗಿ ಯಾವಾಗ ವಿಭಜಿಸಬೇಕು, ಯಾವಾಗ ನಿಲ್ಲಿಸಬೇಕು ಎನ್ನುವುದನ್ನ ಸಮರ್ಪಕವಾಗಿ ನಿರ್ವಹಿಸುತ್ತದೆ. ಆದರೆ ಕ್ಯಾನ್ಸರ್’ನಲ್ಲಿ ಜೀವಕೋಶ ವಿಭಜನೆಯಾಗುತ್ತಲೇ ಹೋಗುತ್ತದೆ.
ರೂಥ್ ಟೆನನ್ ಎಂಬಾಕೆ ಈ ಪ್ರಕ್ರಿಯೆಯನ್ನು ಕಾರಿನ ಉದಾಹರಣೆಯೊಂದಿಗೆ ಬಹಳ ಸುಲಭವಾಗಿ ವಿವರಿಸುತ್ತಾಳೆ. ಆಂಕೋಜೀನನ್ನು ಕಾರಿನ ಆಕ್ಸಿಲರೇಟರ್ ಪೆಡಲ್ ಎಂದುಕೊಳ್ಳಿ, ಟ್ಯೂಮರ್ ಸಪ್ರೆಸ್ಸರ್ ಜೀನ್’ನ್ನು ಬ್ರೇಕ್ ಎಂದುಕೊಳ್ಳಿ. ಮ್ಯುಟೇಷನ್ ಉಂಟಾದಾಗ ಒಂದೋ ಆಕ್ಸಿಲರೇಟರ್ ಪೆಡಲ್ ತೊಂದರೆಯಾಗಿ, ಸಿಕ್ಕಿಹಾಕಿಕೊಂಡು ಕಾರು ಓಡುತ್ತಲೆ ಇರುತ್ತದೆ ಅಂದರೆ ವಿಭಜನೆ ಆಗುತ್ತಲೇ ಇರುತ್ತದೆ ಅಥವಾ ಬ್ರೇಕ್ ಮುರಿದು ಹೋಗಿ ಬಿಡುತ್ತದೆ, ಅಂದರೆ ಟ್ಯೂಮರ್ ಸಪ್ರೆಸರ್ ಜೀನ್ ಸ್ಥಗಿತಗೊಳಿಸಿವ ಸೂಚನೆಯನ್ನೇ ಕೊಡಲಾಗುವುದಿಲ್ಲ. ಸಾಮಾನ್ಯವಾಗಿ ಕ್ಯಾನ್ಸರ್ ಉಂಟಾಗುವುದು ಈ ರೀತಿಯಲ್ಲೇ! ಆದರೆ ಹೆಚ್ಚು ಪಾಲು ಇಂತಹ ಕ್ಯಾನ್ಸರ್’ಗಳು ಒಬ್ಬರಿಂದ ಒಬ್ಬರಿಗೆ ಅನುವಂಶೀಯವಾಗಿ ದಾಟುತ್ತಾ ಹೋಗುವುದಿಲ್ಲ. ಯಾಕೆಂದರೆ ನಾವು ನಮ್ಮ ಡಿ.ಎನ್.ಎ’ಯನ್ನು ಪಡೆದುಕೊಳ್ಳುವುದು ಎಗ್ ಮತ್ತು ಸ್ಪರ್ಮ್ ಜೀವಕೋಶಗಳಿಂದ!
ಒಬ್ಬ ಮಹಿಳೆಗೆ ಶ್ವಾಸಕೋಶದ ಕ್ಯಾನ್ಸರ್ ಇದೆ ಎಂದುಕೊಳ್ಳಿ, ಆಕೆ ಹುಟ್ಟುವಾಗ ಆರೋಗ್ಯವಾಗಿಯೇ ಇದ್ದಳು. ಸಿಗರೇಟ್ ಬಳಸಿದ್ದರಿಂದ ಆಕೆಯ ಶ್ವಾಸಕೋಶದ ಜೀವಕೋಶವೊಂದರಲ್ಲಿ ಮ್ಯುಟೇಷನ್ ಉಂಟಾಗಿ ಕೋಶ ವಿಭಜನೆ ಮಿತಿಯಿಲ್ಲದಂತಾಗಿ ಕ್ಯಾನ್ಸರ್ ಉಂಟಾಯಿತು. ಆದರೆ ಆಕೆಯ ಎಗ್ ಸೆಲ್’ನಲ್ಲಿರುವ ಡಿ.ಎನ್.ಎ ಸಂಪೂರ್ಣವಾಗಿ ಸರಿಯಿರುತ್ತದೆ. ಹಾಗಾಗಿ ಆಕೆ ತನ್ನ ಕ್ಯಾನ್ಸರ್’ನ್ನು ತನ್ನ ಮಕ್ಕಳಿಗೆ ವರ್ಗಾಯಿಸುವುದಿಲ್ಲ.
ಕ್ಯಾನ್ಸರ್ ಉಂಟಾಗುವುದು ಡಿ.ಎನ್.ಎ’ನಲ್ಲಿ ಉಂಟಾಗುವ ಮ್ಯುಟೇಷನ್’ನಿಂದಾಗಿ. ಅದರಲ್ಲಿ ಎರಡು ರೀತಿಯಿದೆ. ಒಂದು ಅಕ್ವೈರ್ಡ್ ಅಥವಾ ಸೊಮ್ಯಾಟಿಕ್ ಮ್ಯುಟೇಷನ್ ಇನ್ನೊಂದು ಇನ್’ಹೆರಿಟೆಡ್ ಮ್ಯುಟೇಷನ್. ಈ ಇನ್’ಹೆರಿಟೆಡ್ ಮ್ಯುಟೇಷನ್’ನಿಂದ ಕ್ಯಾನ್ಸರ್ ಉಂಟಾದರೆ ಅದನ್ನು ಇನ್’ಹೆರಿಟೆಡ್ ಕ್ಯಾನ್ಸರ್ ಎನ್ನುವರು. ಆರೋಗ್ಯವಾಗಿಯೇ ಜನಿಸಿ, ಎಷ್ಟೋ ವರ್ಷಗಳ ನಂತರ ಯಾವುದೋ ಕಾರಣಕ್ಕೆ ಡಿ.ಎನ್.ಎ ನಲ್ಲಿ ಮ್ಯುಟೇಷನ್ ಉಂಟಾಗಿದ್ದಲ್ಲಿ ಅದನ್ನ ಅಕ್ವೈರ್ಡ್ ಮ್ಯುಟೇಷನ್ ಎನ್ನುತ್ತಾರೆ. ಸಾಮಾನ್ಯವಾಗಿ ಹೆಚ್ಚುಪಾಲು ಜನರಲ್ಲಿ ಕಂಡು ಬರುವುದು ಈ ಅಕ್ವೈರ್ಡ್ ಮ್ಯುಟೇಷನ್.! ಎಗ್ ಮತ್ತು ಸ್ಪರ್ಮ್ ಸೆಲ್’ಗಳು ಒಟ್ಟಾಗಿ ಜೈಗೋಟ್’ ಉಂಟಾಗುತ್ತದೆ. ಈ ಜೈಗೋಟ್ ಎಂಬ ಒಂದು ಕೋಶವು ವಿಭಜನೆಗೊಳ್ಳುತ್ತಾ ಗರ್ಭವಾಗಿ ಮಗುವಾಗುತ್ತದೆ. ಒಂದು ವೇಳೆ ಮ್ಯುಟೇಷನ್ ಜೈಗೋಟ್’ನಲ್ಲಿಯೇ ಇದ್ದಿದ್ದಾದರೆ ಮಗುವಿನ ಪ್ರತಿ ಜೀವಕೋಶದಲ್ಲಿಯೂ ಮ್ಯುಟೇಟ್ ಆಗಿರುವ ಜೀನ್ ಬಂದಿರುತ್ತದೆ. ಅಂತಹ ಸಂದರ್ಭದಲ್ಲಿ ಆ ಮ್ಯುಟೇಷನ್ ಮುಂದಿನ ಪೀಳಿಗೆಗೂ ಕೂಡ ವರ್ಗಾಯಿಸಲ್ಪಡುತ್ತದೆ. ನೆನಪಿರಲಿ.. ಅನುವಂಶೀಯವಾಗಿ ಬರುವುದು ಮ್ಯುಟೇಷನ್ ಹೊರತು ಕ್ಯಾನ್ಸರ್ ಅಲ್ಲ. !!
ಸಾಮಾನ್ಯವಾಗಿ ನಮ್ಮ ಹೆಚ್ಚುಪಾಲು ಜೀನ್’ಗಳೆಲ್ಲಾ ಎರಡು ಪ್ರತಿ(Copy)ಗಳಿರುತ್ತದೆ. ಒಂದನ್ನು ತಂದೆಯಿಂದಲೂ ಹಾಗೂ ಇನ್ನೊಂದನ್ನು ತಾಯಿಯಿಂದಲೂ ಪಡೆದುಕೊಂಡಿರುತ್ತೇವೆ. ಒಂದು (Copy))ಸರಿಯಾಗಿರುವ ಟ್ಯೂಮರ್ ಸಪ್ರೆಸರ್ ಜೀನ್ ಆಗಿದ್ದು ಹಾಗೂ ಇನ್ನೊಂದು copy ತುಂಡಾದ (ಬ್ರೋಕನ್) ಜೀನ್ ಆಗಿದ್ದಲ್ಲಿ ಕೂಡ ಪರವಾಗಿಲ್ಲ. ಇನ್ನೊಂದು ಸರಿಯಿರುವ ಜೀನ್ ತನ್ನ ಕಾರ್ಯ ನಿರ್ವಹಿಸುತ್ತದೆ. ಆದರೆ ಇಂತಹ ಸಂದರ್ಭಗಳನ್ನ “ಅಟ್ ರಿಸ್ಕ್” ಎನ್ನಬಹುದು. ಅಂದರೆ ಇಲ್ಲಿ ಸಾಮಾನ್ಯದವರಿಗಿಂತ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಹೆಚ್ಚು!
ಉದಾಹರಣೆಗೆ BRCA1 ಎಂಬ ಟ್ಯೂಮರ್ ಸಪ್ರೆಸರ್ ಜೀನ್’ನ್ನು ತೆಗೆದುಕೊಳ್ಳೋಣ. ಸಾಮಾನ್ಯವಾಗಿ ಸ್ಥನ ಕ್ಯಾನ್ಸರ್ ಉಂಟಾದಾಗ ಆ ಕ್ಯಾನ್ಸರ್ ಸೆಲ್’ನಲ್ಲಿ ತುಂಡಾದ(ಬ್ರೋಕನ್) ಎರಡು BRCA1 ಜೀನ್ ಪ್ರತಿ(Copy) ಕಂಡು ಬರುತ್ತವೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳು BRCA1 ಜೀನ್’ನ ಎರಡು ಪ್ರತಿ(Copy)ಯನ್ನು ಅನುವಂಶೀಯವಾಗಿ ಪಡೆದಿರುತ್ತಾರೆ. ಕ್ಯಾನ್ಸರ್ ಉಂಟಾಗಬೇಕೆಂದರೆ ಆ ಜೀನ್’ನ ಎರಡು ಪ್ರತಿ(Copy)ಯಲ್ಲೂ ಮ್ಯುಟೇಷನ್ ಉಂಟಾಗಬೇಕು. ಒಂದು ವೇಳೆ ನಾವು ಮ್ಯುಟೇಟ್ ಆಗಿರುವ BRCA1 ಜೀನ್’ನ ಒಂದು ಪ್ರತಿ(Copy) ಅದಾಗಲೇ ಪಡೆದಿದ್ದೇವೆಂದರೆ ಸ್ಥನ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಹೆಚ್ಚು ಎಂದು ಅರ್ಥ! ಒಂದು ವೇಳೆ ದುರದೃಷ್ಟವಶಾತ್ ಇನ್ನೊಂದು ಪ್ರತಿ(Copy)ಯಲ್ಲಿಯೂ ಮ್ಯುಟೇಷನ್ ಉಂಟಾದಲ್ಲಿ ಕ್ಯಾನ್ಸರ್ ಖಚಿತ.!
ಇತ್ತೀಚೆಗೆ ಜೆನೆಟಿಕ್ ಟೆಸ್ಟಿಂಗ್’ಗಳು ಆರಂಭಗೊಂಡಿವೆ. ಎಮ್ಮಾ ಪಿಯರ್ಸನ್ ಎಂಬಾಕೆ ತಾನು ಮ್ಯುಟೇಟ್ ಆಗಿರುವ BRCA1 ಜೀನ್’ನ್ನು ಹೊಂದಿರಬಹುದೇನೋ ಎಂಬುದರ ಸಲುವಾಗಿ ಜೆನೆಟಿಕ್ ಟೆಸ್ಟ್ ಮಾಡಿಸಿ, ಅದರ ನಂತರ ಕ್ಯಾನ್ಸರ್ ಉಂಟಾಗುವ ಸಾಧ್ಯತೆಗಳ ಬಗ್ಗೆ ತಿಳಿದುಕೊಂಡು ಅದಕ್ಕೆ ಯಾವ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬಹುದು ಎಂಬುದನ್ನ ಪರಿಗಣಿಸುತ್ತಾಳೆ. ಆ ಸಮಯದಲ್ಲಿ ಆಕೆಯ ಯೋಚನೆಗಳು, ಭಯ, ತಳಮಳವನ್ನು ಆಕೆ ತಿಳಿಯ ಬಯಸದ ಉತ್ತರವನ್ನು ಬೆನ್ನತ್ತಿ’ ಎಂಬಂತಹ ಶೀರ್ಷಿಕೆಯಡಿಯಲ್ಲಿ ಬರಹವೊಂದನ್ನ ಬರೆದಿದ್ದಾಳೆ. ಟೆಸ್ಟಿಂಗ್ ಎಲ್ಲ ಇರುವುದೇನೋ ನಿಜ, ಆದರೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂಬ ಸತ್ಯವನ್ನು ತಲೆಯಲ್ಲೇ ಇಟ್ಟುಕೊಂಡು ಕಾಲ ಕಳೆಯುವುದು ತುಸು ಕಷ್ಟವೇ! ಪ್ರತಿ ದಿನ ಭಯದಲ್ಲೇ ಬದುಕುವಂಥದ್ದು..!!
ಹಾಗಂತ ಇದರ ಬಗ್ಗೆ ಪ್ರಯೋಗಗಳು ನಡೆಯುತ್ತಿಲ್ಲವೆಂದೇನಲ್ಲ. ಈ ರೀತಿ ಜೀನ್ ತಾಯಿಯಿಂದ ಮಗುವಿಗೆ ಬರದೇ ಇರುವಂತೆ ಮಾಡಲು ಹಲವು ಸಂಶೋಧನೆಗಳು ಕೂಡ ನಡೆಯುತ್ತಿವೆ, ಪ್ರಯೋಗಗಳನ್ನು ಕೂಡ ಮಾಡುತ್ತಿದ್ದಾರೆ. ೨೦೦೯ರಲ್ಲಿ ಸಾಕಷ್ಟು ಎಂಬ್ರಯೋ ಸ್ಕ್ರೀನಿಂಗ್ ನಂತರ ಮಗುವೊಂದು ತುಂಡಾದ(ಬ್ರೋಕೆನ್) BRCA1 ಜೀನ್’ನ್ನು ತಾಯಿಯಿಂದ ಪಡೆಯದೆ ಜನ್ಮತಾಳಿದೆ. ವಿಜ್ಞಾನ ಮುಂದುವರೆದಂತೆಲ್ಲ, ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಲೇ ಬಂದಿದೆ. ಜೊತೆಗೆ ಇವುಗಳ ಮೇಲೆ ಇನ್ನಷ್ಟು ಸಂಶೋಧನೆಗಳಾಗಲಿ ಎಂಬುದು ಸದ್ಯಕ್ಕೆ ಎಲ್ಲರ ಆಶಯ.
ಈ ಜೀನ್, ಮ್ಯುಟೇಷನ್, ಕ್ಯಾನ್ಸರ್, ಇವುಗಳ ಹಿಂದಿರುವ ತರ್ಕ, ಕಾರಣಗಳೇನೆ ಇರಲಿ ವ್ಯಕ್ತಿಯ ಇಚ್ಛಾಶಕ್ತಿಯು ಇವೆಲ್ಲವನ್ನು ಮೀರಿ ಬೆಳೆದ ಉದಾಹರಣೆಗಳನ್ನ ನೋಡಿದಾಗ, ಏನೋ ಒಂದು ರೀತಿಯ ಭರವಸೆ ಮೂಡುವುದಂತು ಸತ್ಯ! ನಮ್ಮಲ್ಲಿ ಇಂಥದ್ದನ್ನ ಮೀರಿ ಬೆಳೆಯುವಂತಹ ಶಕ್ತಿಯೊಂದು ಎಲ್ಲೊ ಒಂದೆಡೆ ಹುದುಗಿದೆ ಅನ್ನೋದು ಏನೋ ಒಂದು ರೀತಿಯ ಸಾಂತ್ವಾನ ನೀಡುವುದು ಕೂಡ ನಿಜ!