ನನ್ನ ಹೆಸರು ಚಿಂತಕಿಂದಿ ಮಲ್ಲೇಶಂ. ಹುಟ್ಟಿದ್ದು ತೆಲಂಗಾಣದ ಸಾರಿದಿಪೇಟೆಯಲ್ಲಿ. ಪೇಟೆ ಎಂಬ ಹೆಸರಿದ್ದರೂ ಅದೊಂದು ಹಳ್ಳಿ. ಕುಗ್ರಾಮ. ನಲಗೊಂಡ ಮತ್ತು ವಾರಂಗಲ್ ಎಂಬ ತೆಲಂಗಾಣದ ಎರಡು ಜಿಲ್ಲೆಗಳಲ್ಲಿರುವ ಸುಮಾರು 30,000 ನೇಕಾರರ ಪೈಕಿ ನಮ್ಮದೂ ಒಂದು ಕುಟುಂಬ. ನಮ್ಮಲ್ಲಿ ಆರೇಳು ಕ್ಲಾಸಿನ ನಂತರ ಕಲಿತವರು ಯಾರೂ ಇಲ್ಲ. ಹುಡುಗಿಯರು ಪ್ರಾಥಮಿಕ ಶಿಕ್ಷಣ ಪಡೆದು ಏಳನೇ ತರಗತಿ ಪಾಸಾಗಿ ಬಂದರೆ ಮನೆಯಲ್ಲಿ ರೇಷ್ಮೆ ನೂಲಿನ ದಾರದಿಂದ ಆಸು ತೆಗೆಯುವ ಕೆಲಸವನ್ನು ಕಲಿತು ಮಾಡಬೇಕು. ಫೇಲಾದರೂ ಅಷ್ಟೇ! ಒಟ್ಟಲ್ಲಿ ಏಳು ವರ್ಷ ಸಾಲೆ ಕಲಿತಿರೋ, ಅಲ್ಲಿಗೆ ನಿಮ್ಮ-ಸಾಲೆಯ ಸಂಬಂಧ ಮುಗಿಯಿತು ಎಂದೇ ಅರ್ಥ. ಅದೇ ರೀತಿಯಲ್ಲಿ, ಹುಡುಗರು ಏಳನೇ ಕ್ಲಾಸ್ ಕಲಿತು ಬಂದಮೇಲೆ ಆಸು ಮಾಡಿಟ್ಟ ನೂಲನ್ನು ಸೀರೆಯಾಗಿ ಮಗ್ಗದಲ್ಲಿ ನೇಯಬೇಕು. ಮನೆಯ ಗಂಡುಹೆಣ್ಣುಗಳಿಗೆ ಇದೊಂದು ಬಿಟ್ಟರೆ ಬೇರೆ ಬದುಕೇ ಇಲ್ಲವೆಂಬಂತೆ ನನ್ನ ಗ್ರಾಮ ಒಂದು ಮಗ್ಗದ ಯಂತ್ರದಂತೆ ಕೆಲಸ ಮಾಡುತ್ತಿತ್ತು. ಮಗ್ಗದ ಯಂತ್ರದ ಟಕಾ ಟಕ ಟಕಾ ಟಕ ಎಂಬ ಹಾಡನ್ನು, ಅಭ್ಯಾಸವಿಲ್ಲದವರಾದರೆ ನೀವು ಅರ್ಧ ತಾಸು ಕೂಡ ಕೇಳಲಾರಿರಿ! ಆ ಶಬ್ದ ಕೇಳಿಯೇ, ಅದರ ಏಕತಾನತೆಗೆ ಬೋರ್ ಹೊಡೆದು ತಲೆ ಚಚ್ಚಿಕೊಂಡು ಎದ್ದು ಹೋದೀರಿ ನೀವು! ಅಂಥಾದ್ದರಲ್ಲಿ ಮೂರೂ ಹೊತ್ತು, ದಿನಕ್ಕೆ ಕನಿಷ್ಠ ಹನ್ನೆರಡು ಗಂಟೆಗಳಂತೆ ಮೀಟುತ್ತ ಮೀಟುತ್ತ ಯಂತ್ರಗಳೇ ಆಗಿ ಹೋಗುವ ನೇಕಾರರ ಬವಣೆಗಳ ಬಗ್ಗೆ ಸ್ವಲ್ಪ ಯೋಚಿಸಿ ನೋಡಿ!
ಕತೆ ಹೇಳುತ್ತ ಎಲ್ಲಿಗೋ ಹೋಗಿ ಬಿಟ್ಟೆ. ನಾನು ಏಳನೇ ತರಗತಿ ಕಲಿತೆ ಎಂದೆನಲ್ಲ, ಅದಾಗಿ ಮನೆಯಲ್ಲೇ ಉಳಿದೆ. ನನ್ನ ಅಮ್ಮ ಆಸು ತೆಗೆಯುವ ಕೆಲಸ ಮಾಡುತ್ತಿದ್ದರು. ಅವರು ಆಸು ತೆಗೆದು ಕೊಟ್ಟ ನೂಲನ್ನು ನಾನು ಮತ್ತು ತಂದೆ ಎರಡು ಮಗ್ಗದ ಯಂತ್ರಗಳಲ್ಲಿ ನೇಯಬೇಕಾಗಿತ್ತು. ಅಂದ ಹಾಗೆ, ಈ ಆಸು ತೆಗೆಯೋದು ಅಂದರೆ ಏನು ಅಂತ ಸ್ವಲ್ಪ ವಿವರಿಸುತ್ತೇನೆ. ನಮ್ಮಲ್ಲಿ ಪೋಚಂಪಲ್ಲಿ ಹೆಸರಿನ ರೇಷ್ಮೆ ಸೀರೆಗಳನ್ನು ತಯಾರು ಮಾಡುತ್ತೇವೆ. ಅದೊಂದು ಗೃಹ ಕೈಗಾರಿಕೆ. ಈ ಸೀರೆಗಳು ಯಾವುದೇ ಫ್ಯಾಕ್ಟರಿಯಲ್ಲಿ ತಯಾರಾಗುವವಲ್ಲ. ಪ್ರತಿ ಮನೆಯಲ್ಲೂ ರೇಷ್ಮೆ ಉಂಡೆಯನ್ನು ನೂಲಾಗಿ ಸೆಳೆದು ಅದನ್ನು ಆಸು ತೆಗೆಯುವುದು ಎಂಬ ಪರಿಷ್ಕಾರಕ್ಕೊಳಪಡಿಸಿ, ನಂತರ ಮಗ್ಗದಲ್ಲಿ ಹಾಕಿ ನೇಯುವ ಕೆಲಸ ಮಾಡುತ್ತಾರೆ. ನಮ್ಮ ಪೋಚಂಪಲ್ಲಿ ಸೀರೆಯನ್ನು ಯಾಕೆ ಫ್ಯಾಕ್ಟರಿಯಲ್ಲಿ ಮೆಷಿನುಗಳ ಮೂಲಕ ತಯಾರಿಸಲು ಸಾಧ್ಯವಾಗಿಲ್ಲವೆಂಬುದಕ್ಕೆ ಆಸು-ವೇ ಪ್ರಮುಖ ಕಾರಣ ಮತ್ತು ತೊಡಕು. ಈ ಪ್ರಕ್ರಿಯೆಯಲ್ಲಿ ಒಂದು ದೊಡ್ಡ ಮಣೆಯ ಮೇಲೆ, ಒಂದು ಮೂಲೆಯಲ್ಲಿ ಒಂದು ಮೊಳೆ ಹೊಡೆದಿರುತ್ತಾರೆ. ಆ ಮೊಳೆಯಿಂದ ಒಂದು ಮೀಟರ್ ದೂರದಲ್ಲಿ ಅರ್ಧ ವೃತ್ತಾಕಾರದಲ್ಲಿ ಒಂದು ಗೆರೆ ಎಳೆದು, ಅದರ ಮೇಲೆ ನಿಯಮಿತ ಅಂತರದಲ್ಲಿ ನಲವತ್ತು ಮೊಳೆಗಳನ್ನು ಹೊಡೆಯುತ್ತಾರೆ. ಈಗ ನಾವು ರೇಷ್ಮೆ ದಾರವನ್ನು ಒಮ್ಮೆ ಅತ್ತಲಿರುವ ಮೊಳೆಗೂ ಇನ್ನೊಮ್ಮೆ ಈ ತುದಿಯಲ್ಲಿರುವ 40ರ ಪೈಕಿ ಒಂದು ಮೊಳೆಗೂ ನಿಯಮಿತವಾಗಿ ಸುತ್ತಿಕೊಂಡು ಹೋಗಬೇಕು. ಪ್ರತಿಯೊಂದು ಸುತ್ತಾಟಕ್ಕೂ ಅಲ್ಲಿ ಕೂತವನ ಕೈ ದಾರದ ಉಂಡೆಯ ಜೊತೆಗೆ ಒಂದು ಮೀಟರ್ ಆ ಕಡೆಗೂ ಒಂದು ಮೀಟರ್ ಈ ಕಡೆಗೂ ಬೀಸಾಡಬೇಕು. ಹೀಗೆ ಒಂದೇ ನೂಲನ್ನು ನಲವತ್ತು ಮೊಳೆಗಳ ಮೂಲಕ ಹಾಯಿಸಿ ತಂದು ನೇಯ್ಗೆಗೆ ತಯಾರಾಗಿಡುವ ಕೆಲಸವೇ ಆಸು. ಒಂದು ಸೀರೆಯ ತಯಾರಿಗೆ ಬೇಕಾಗುವ ನೂಲಿನ ಉದ್ದ 12 ಕಿಲೋಮೀಟರ್! ಅದನ್ನು ಈ ನಲವತ್ತು ಮೊಳೆಗಳ ಮೂಲಕ ಹಾಯಿಸಿ ತೆಗೆಯಬೇಕಾದರೆ ಅಲ್ಲಿ ಕೂತವರ ಕೈ 9000 ಸಲ ಅಸಡಾಬಸಡಾ ಬೀಸಬೇಕು! ಒಂದು ಸೀರೆಗೆ ಬೇಕಾದ ಆಸು ಮಾಡಲು ತಗಲುವ ಸಮಯ ಐದೂವರೆ ತಾಸು. ಅಂತಹ ಎರಡು ಸೀರೆಗಳಿಗೆ ಬೇಕಾದ ಆಸುವನ್ನು ಪ್ರತಿ ನೇಕಾರರ ಮನೆಯ ಪ್ರತಿ ಹೆಂಗಸೂ ಪ್ರತಿದಿನ ಮಾಡಿಕೊಡುತ್ತಾರೆ. ಅಂದರೆ ಅವರ ಕೈ ದಿನಂಪ್ರತಿ 18,000 ಸಲ ಈ ಬೀಸಾಟವನ್ನು ಅನಿವಾರ್ಯವಾಗಿ ಮಾಡಲೇಬೇಕು.
ನಾನೂ ಅಪ್ಪನ ಜೊತೆ ನೇಕಾರಿಕೆಯ ಕೆಲಸಕ್ಕೆ ಇಳಿದಾಗ ಅಮ್ಮ ನಮ್ಮಿಬ್ಬರಿಗೂ ಸಾಕಾಗುವಷ್ಟು ನೂಲಿನ ಆಸುವನ್ನು ಪ್ರತಿದಿನ ತೆಗೆದು ಕೊಡಬೇಕಾಗಿ ಬಂತು. ತನ್ನ ರಟ್ಟೆಯನ್ನು ಎಡಕ್ಕೂ ಬಲಕ್ಕೂ ಯಂತ್ರದಂತೆ ಬೀಸೀ ಬೀಸಿ ಆಕೆಯ ಬಲಗೈ ತೋಳಿನಲ್ಲಿ ನೋವು ಕಾಣಿಸಿಕೊಳ್ಳುತ್ತಿತ್ತು. ಒಂದು ದಿನ ಆಕೆ ನನ್ನನ್ನು ಕರೆದು, “ಮಲ್ಲೇಶ, ನೀನು ಸಿಟಿಗೆ ಹೋಗಿ ಬೇರೆ ಯಾವುದಾದರೂ ಕೆಲಸ ನೋಡಿಕೊಳ್ಳಪ್ಪ. ನನಗೆ ಹೀಗೆ ದಿನಕ್ಕೆ ಹತ್ತು-ಹನ್ನೆರಡು ಗಂಟೆ ಕೂತು ಆಸು ತೆಗೆಯುವುದು ಸಾಧ್ಯವಾಗ್ತಿಲ್ಲ” ಎಂದು ಬಿಟ್ಟಳು. ನಾನು ಯೋಚಿಸಿದೆ. ನೇಕಾರಿಕೆಯ ಕೆಲಸ ಮುಂದುವರಿಸಬೇಕು ಅಂತಲೇ ತಂದೆ ನನ್ನ ಸಾಲೆ ಬಿಡಿಸಿದರು. ಈಗ ಅಮ್ಮ, ಈ ನೇಕಾರಿಕೆ ಕೆಲಸ ಮಾಡಬೇಡ, ಬೇರೆ ಉದ್ಯೋಗ ಹಿಡಿ ಎನ್ನುತ್ತಿದ್ದಾರೆ. ನನ್ನ ಓದಿಗೆ ಬೇರೆ ಉದ್ಯೋಗ ಎಲ್ಲಿ ಸಿಗುತ್ತದೆ? ಅದೂ ಅಲ್ಲದೆ, ನಮ್ಮದು ನೇಕಾರರ ಕುಟುಂಬ. ಈಗ ನಾನೇನಾದರೂ ಈ ಉದ್ಯೋಗದಿಂದ ದೂರ ಹೋಗಿ ಬಿಟ್ಟರೆ ಮುಂದೆ ಇದನ್ನು ನಡೆಸಿಕೊಂಡು ಹೋಗುವವರು ಯಾರು? ಸಮಸ್ಯೆ ಇರುವುದು ಉದ್ಯೋಗದಲ್ಲಲ್ಲ, ಆಸು ಮಾಡುವ ಕೆಲಸದಲ್ಲಿ. ಅಮ್ಮನ ತೊಂದರೆಗೆ ಏನಾದರೂ ಪರಿಹಾರ ಮಾರ್ಗ ಹಿಡಿಯಬೇಕು ಎಂದುಕೊಂಡೆ. ಆಸು ಮಾಡುತ್ತಿರುವಾಗ ಅಮ್ಮನ ಬಳಿ ಕೂತು ಆಕೆಯ ಕೈಯ ಚಲನೆಯನ್ನೇ ನೋಡತೊಡಗಿದೆ. ಮಾಡೋ ಕೆಲಸ ಬಿಟ್ಟು ಕಣ್ಣುಬಾಯಿ ಬಿಟ್ಟುಕೊಂಡು ಗಂಟೆಗಟ್ಟಲೆ ಆಸು ಹೊಡೆಯೋದು ನೋಡಿದ್ರೆ ಹೊಟ್ಟೆಗೆ ಹಿಟ್ಟು ಗಿಟ್ಟಲ್ಲ ಎಂದು ಅಮ್ಮ ಜೋರು ಮಾಡಿದಳು. ಇಲ್ಲಮ್ಮ, ನಿನಗೋಸ್ಕರ ಒಂದು ಮೆಷಿನ್ ಕಂಡು ಹುಡುಕ್ತೇನೆ. ಅದು ನೀನು ಮಾಡುವ ಕೆಲಸವನ್ನು ಯಾಂತ್ರಿಕವಾಗಿ ಮಾಡಿ ಮುಗಿಸಬೇಕು, ಹಾಗೆ ಮಾಡ್ತೇನೆ ಎಂದೆ. ಈ ಹುಡುಗನಿಗೆ ಪೂರಾ ತಲೆ ಕೆಟ್ಟಿದೆ ಎಂದು ಆಕೆ ಭಾವಿಸಿರಬೇಕು!
ಮುಂದಿನ ಕೆಲ ದಿನಗಳಲ್ಲಿ ನನ್ನ ಅನ್ವೇಷಣೆಯ ಕೆಲಸ ಶುರುವಾಯಿತು. ಸಿಕ್ಕಸಿಕ್ಕ ತಂತಿ, ರಾಡು, ಹಲಗೆ, ಮೊಳೆಗಳನ್ನೆಲ್ಲ ಒಟ್ಟು ಹಾಕಿದೆ. ಅವುಗಳನ್ನು ಚಿತ್ರವಿಚಿತ್ರ ಆಕಾರದಲ್ಲಿ ಜೋಡಿಸಿ ನೋಡ ತೊಡಗಿದೆ. ಅವುಗಳನ್ನೆಲ್ಲ ನನ್ನ ಕಲ್ಪನೆಗೆ ತಕ್ಕಂತೆ ಹೇಗೆ ಬಳಸಿಕೊಳ್ಳಬಹುದೆಂಬ ಯಾವ ಅಂದಾಜೂ ನನಗಿರಲಿಲ್ಲ. ಕೊಡೆ ರಿಪೇರಿ ಮಾಡುವವನನ್ನು ಆಪರೇಷನ್ ಥೇಟರೊಳಗೆ ಬಿಟ್ಟು ಹೃದಯ ಶಸ್ತ್ರಚಿಕಿತ್ಸೆ ಮಾಡು ಎಂದರೆ ಹೇಗಿರುತ್ತದೋ ನನ್ನ ಪರಿಸ್ಥಿತಿ ಹಾಗೆಯೇ ಇತ್ತು! ಏಳನೇ ತರಗತಿ ಓದಿದವನಿಗೆ ಯಂತ್ರಗಳ ತಲೆಬುಡ ಅರ್ಥವಾಗುವುದಾದರೂ ಹೇಗೆ? ನನ್ನ ಕೋತಿ ಕಸರತ್ತುಗಳನ್ನು ಕಂಡ ನೆರೆಹೊರೆಯ ಮಂದಿ ಗುಟ್ಟಲ್ಲಿ ನಕ್ಕರು; ಗುಂಪಿನಲ್ಲಿ ಅಪಹಾಸ್ಯ ಮಾಡಿದರು. ತಂದೆ ತಾಯಿಯರಿಗೆ ಸಂಬಂಧಿಕರು “ನಿಮ್ಮ ಮಗನ ಬಗ್ಗೆ ನಿಮಗೆ ಕಾಳಜಿ ಇಲ್ಲವೆ? ಅವನನ್ನು ವೈದ್ಯರಿಗೆ ತೋರಿಸಬಾರದೆ?” ಎಂದು ಕೇಳಿದರು. ಕೊನೆಗೆ ಅವರೆಲ್ಲ ಒಟ್ಟಾಗಿ ಕೂತು ನನ್ನ ಸಮಸ್ಯೆಗೊಂದು ಪರಿಹಾರ ಕಂಡು ಹುಡುಕಿಯೇ ಬಿಟ್ಟರು. ಅದು – “ಮದುವೆ”! ಮದುವೆ ಮಾಡಿಸಿದರೆ ಈ ಹುಡುಗನ ಹುಚ್ಚು ಬಿಡುತ್ತದೆ ಎಂಬುದು ಅವರ ಅಂತಿಮ ತೀರ್ಮಾನವಾಗಿತ್ತು.
ಅಷ್ಟರಲ್ಲಾಗಲೇ ನಾನು ಒಂದೆರಡು ವರ್ಷಗಳನ್ನು ನನ್ನ ಕನಸಿನ ಯಂತ್ರಕ್ಕಾಗಿ ಕಳೆದಿದ್ದೆ. ಅಮ್ಮನ ಕೈಯ ಚಲನೆಯನ್ನು ಯಾಂತ್ರಿಕವಾಗಿ ಮಾಡಿಕೊಡುವ ಯಂತ್ರವನ್ನು ತಯಾರಿಸಲೇಬೇಕೆಂದು ಎಲ್ಲೆಲ್ಲೋ ಅಲೆದು ಏನೇನೋ ಕೊಂಡು ತಂದಿದ್ದೆ. ಸಾಕಷ್ಟು ಹಣ ಕೈಜಾರಿತ್ತು. ಎಲ್ಲರೂ ಹೇಳಿದಾಗ, ನನಗೂ, ಮದುವೆ ಮಾಡಿಕೊಂಡು ಬಿಟ್ಟರೆ ಬದುಕಿಗೊಂದು ಸ್ಪಷ್ಟ ಗುರಿ ಕಾಣಿಸತೊಡಗಬಹುದೇನೋ ಎಂಬ ಆಶಾಭಾವ ಹುಟ್ಟಿತು. ಮದುವೆಯಾದ ಮೇಲೆ ಹೆತ್ತವರಿಗೆ ಖುಷಿಯಾಯಿತು. ಯಾಕೆಂದರೆ ಅದಾಗಿ ಒಂದು ವರ್ಷ ನಾನು ನನ್ನ ಕನಸಿನ ಯಂತ್ರದ ಚಿಂತೆಗೇ ಹೋಗಲಿಲ್ಲ! ಹೆಂಡತಿ ಜೊತೆ ನಮ್ಮ ಮನೆ, ಮಾವನ ಮನೆ ಎನ್ನುತ್ತ ಓಡಾಡಿಕೊಂಡು ಖುಷಿಖುಷಿಯಾಗಿ ದಿನಗಳನ್ನು ಕಳೆದೆ. ಆದರೆ ಕೆಲ ಸಮಯ ಕಳೆದ ಮೇಲೆ ನನಗೆ ಮತ್ತೆ ಯಂತ್ರದ ನೆನಪಾಯಿತು. ಛೆ, ನನ್ನ ಸಂಶೋಧನೆಯ ಕೆಲಸ ಪೂರ್ತಿಯಾಗಿ ನಿಂತು ಹೋಗಿ ಬಿಟ್ಟಿತಲ್ಲಾ ಎಂಬ ದುಃಖವಾಯಿತು. ಅದನ್ನು ಮತ್ತೆ ಕೈಗೆತ್ತಿಕೊಂಡೆ. ಈ ಯಂತ್ರ ಕೆಲಸ ಮಾಡುವಂತಾಗಬೇಕಾದರೆ ಅದು ಒಟ್ಟು ಐದು ಹಂತಗಳನ್ನು ನಿರ್ವಹಿಸಬೇಕು ಎಂಬ ಕಲ್ಪನೆ ಹೊಳೆದಿತ್ತು. ಆ ಐದರಲ್ಲಿ ಮೊದಲ ಎರಡು ಹಂತಗಳನ್ನು ಹೇಗೋ ಮಾಡಿ ಮುಗಿಸಲು ಸಾಧ್ಯವಾಯಿತು. ಆದರೆ ಮುಂದಿನ ಮೂರು ಹಂತಗಳನ್ನು ಅಷ್ಟು ಸುಲಭದಲ್ಲಿ ರೂಪಿಸುವುದು ಸಾಧ್ಯವಿರಲಿಲ್ಲ. ಯಂತ್ರದ ವಿವಿಧ ಭಾಗಗಳನ್ನು ತಯಾರಿಸಲು ಸಾಕಷ್ಟು ದುಡ್ಡು ಖರ್ಚಾಗಿತ್ತು. ನನ್ನದು ಮಾತ್ರವಲ್ಲದೆ, ಹೆಂಡತಿಯನ್ನು ಪುಸಲಾಯಿಸಿ ಅವಳ ತವರಿಂದಲೂ ಸ್ವಲ್ಪ ದುಡ್ಡು ತರಿಸಿದ್ದೆ. ಈಗ ನನ್ನ ಬದುಕು ಆರಕ್ಕೇರದೆ ಮೂರಕ್ಕಿಳಿಯದೆ ತ್ರಿಶಂಕು ಸ್ಥಿತಿಯಲ್ಲಿ ನಿಂತಾಗ, ತಂದೆ ತಾಯಿ ಮಾತ್ರವಲ್ಲ ಅತ್ತೆ ಮಾವಂದಿರು ಕೂಡ ನನಗೆ ಸಹಸ್ರ ನಾಮಾರ್ಚನೆ ಮಾಡತೊಡಗಿದರು. “ಇದೆಲ್ಲ ಓದದ ನಿನಗೆಲ್ಲಿ ಆಗುತ್ತೋ! ಯಾರಾದರೂ ದೊಡ್ಡವರ ಕೈ ಕೆಳಗೆ ನಾಲ್ಕೈದು ವರ್ಷ ದುಡಿದರೆ ಏನಾದರೂ ಗಿಟ್ಟುತ್ತೋ ಏನೋ” ಎಂಬ ಸಲಹೆ ಬಂತು. ಊರಲ್ಲಿ ದುಡ್ಡಿಲ್ಲದೆ ದೈನೇಸಿಯಾಗಿದ್ದ ನನಗೆ ಎಲ್ಲವನ್ನು ಬಿಟ್ಟು ನಗರ ಸೇರುವುದು ಸರಿಯೆನ್ನಿಸಿತು. ಹೈದರಾಬಾದಿಗೆ ಹೋಗಿ, ಕೆಲಸಕ್ಕಾಗಿ ಅಲೆದಾಡಿ, ಕೊನೆಗೆ ಎಲೆಕ್ಟ್ರಿಕಲ್ ವೈರಿಂಗ್ ಮಾಡುವವರೊಬ್ಬರ ಕೈ ಕೆಳಗೆ ಕೆಲಸಕ್ಕೆ ಸೇರಿದೆ.
ಹಾವು-ಏಣಿಯ ಆಟದಲ್ಲಿ ನಡುವಿನ ದಾರಿವರೆಗೆ ಹೋದವನು ಅದ್ಯಾವುದೋ ಹಾವಿನ ಸೆಳೆತಕ್ಕೆ ಸಿಕ್ಕಿ ಮತ್ತೆ ಆಟದ ಪ್ರಾರಂಭಕ್ಕೆ ಜಾರಿ ಬಂದಂತಾಗಿತ್ತು. ಎಲೆಕ್ಟ್ರಿಕಲ್ ಕೆಲಸಗಳು ಕೂಡ ಸರಿಯಾಗಿ ತಿಳಿದಿರಲಿಲ್ಲ ನನಗೆ. ಅವನ್ನೆಲ್ಲ ಹೇಳಿಕೊಡಿ ಎಂದು ದುಂಬಾಲು ಬಿದ್ದರೆ, ನಿನ್ನನ್ನು ಸಂಬಳ ಕೊಟ್ಟು ನಿಲ್ಲಿಸಿರುವುದು ಕೆಲಸ ಮಾಡಿಸಿಕೊಳ್ಳುವುದಕ್ಕೋ ಇಲ್ಲಾ ಕಲಿಸಿ ಕೊಡುವುದಕ್ಕೋ ಎಂದು ಮಾಲಿಕ ಆವಾಝ್ ಹಾಕುವ ಸಾಧ್ಯತೆ ಇದ್ದೇ ಇತ್ತು. ಹಾಗಾಗಿ ಬೇರೆಯವರ ಕೆಲಸವನ್ನು ತದೇಕಚಿತ್ತದಿಂದ ಗಮನಿಸುತ್ತ ಒಂದೊಂದಾಗಿ ನೌಕರಿಯ ಪಟ್ಟುಗಳನ್ನು ಕಲಿತೆ. ಒಂದೇ ಒಂದು ತಪ್ಪು ಮಾಡಿದರೂ ಶಾರ್ಟ್ ಸರ್ಕ್ಯೂಟ್ ಆಗಿ ಹೊಗೆ ಹಾಕಿಸಿಕೊಳ್ಳುವ ಅಪಾಯವಿದ್ದುದ್ದರಿಂದ ನಾನು ಅತ್ಯಂತ ಜಾಗರೂಕನಾಗಿರಬೇಕಿತ್ತು. ಹೀಗೆ ಮೂರು ತಿಂಗಳು ಕಳೆಯಿತು. ಮಗ ಅಂತೂ ಒಂದು ನೆಲೆ ಕಂಡುಕೊಂಡ ಎಂದು ಹೆತ್ತಕರುಳು ಊರಲ್ಲಿ ಖುಷಿ ಪಟ್ಟಿರಬೇಕು! ಮೂರು ತಿಂಗಳು ಕಳೆದು ಊರಿಗೆ ಹೋದವನು, ಅಲ್ಲಿ ಮೂಲೆಗೆ ಬಿದ್ದಿದ್ದ ನನ್ನ ಯಂತ್ರವನ್ನು ಎತ್ತಿಕೊಂಡೆ. ಹಾಳಾದ್ದು ಮತ್ತೆ ಎತ್ಕೊಂಡೆಯಲ್ಲೋ ಎಂದು ಅಮ್ಮ ಬಾಯ್ತುಂಬ ಬಯ್ದರು. ಆದರೆ ನಾನು ಕೇಳಬೇಕಲ್ಲ? ಅದನ್ನು ಗಾಡಿಗೆ ಹಾಕಿಸಿಕೊಂಡು ಹೈದರಾಬಾದಿಗೆ ತಂದು ನನ್ನ ಪುಟ್ಟ ಕೋಣೆಯಲ್ಲಿ ಪ್ರತಿಷ್ಠಾಪಿಸಿದೆ. ಸಂಜೆ ಕೆಲಸದಿಂದ ಬಂದ ಮೇಲೆ ಅದರ ಮೇಲೆ ಕೆಲಸ ಮಾಡಬೇಕೆಂದು ನಿರ್ಧರಿಸಿದ್ದಾಯಿತು. ಕೆಲವು ದಿನಗಳಲ್ಲಿ ರಾತ್ರಿ ಎಷ್ಟು ಹೊತ್ತಾದರೂ ನನ್ನ ಪ್ರಯೋಗಗಳು ಮುಗಿಯುತ್ತಿರಲಿಲ್ಲ. ಕೆಲವೊಮ್ಮೆ ನಸುಕಿನ ಮೂರ್ನಾಲ್ಕು ಗಂಟೆಗೆಲ್ಲ ಧಡ್ಡನೆದ್ದು ಯಂತ್ರದ ಜೊತೆ ಕೂತು ಬಿಡುತ್ತಿದ್ದೆ. ಮಾಂಸದ ಮುದ್ದೆಗೆ ಜೀವ ಬರಿಸಲು ಒದ್ದಾಡಿದ್ದನಂತೆ ಫ್ರಾಂಕನ್‍ಸ್ಟೈನ್ ಎಂಬ ವಿಜ್ಞಾನಿ; ಹಾಗೆ ಆಸು ಯಂತ್ರದ ಜೊತೆ ನನ್ನ ಕಸರತ್ತುಗಳು! ಹೀಗೆ ಹಲವು ದಿನ, ವಾರಗಳು ಕಳೆದ ಮೇಲೆ ನನಗೆ ಯಂತ್ರದ ಮೂರನೇ ಭಾಗವನ್ನು ಹೇಗೋ ಮಾಡಿ ಮುಗಿಸಲು ಸಾಧ್ಯವಾಯಿತು.
ಮುಂದಿನ ಹಂತ ನಿಜಕ್ಕೂ ಸವಾಲಿನದ್ದಾಗಿತ್ತು. ಕರೋಡ್‍ಪತಿ ಕ್ವಿಜ್‍ನಲ್ಲಿ ಲಕ್ಷದ ಗಡಿ ದಾಟಿ ಕೋಟಿಯ ಹತ್ತಿರಕ್ಕೆ ಹೋಗುತ್ತ ಪ್ರಶ್ನೆಗಳ ಕಠಿಣತೆ ಉಸಿರು ಕಟ್ಟಿಸುವಂತೆ, ನನ್ನ ದಾರಿ ಕೂಡ ಮುಂದೆ ಹೋದಂತೆ ದುರ್ಗಮವಾಗತೊಡಗಿತ್ತು. ಆದರೂ ನನಗೆ ಕೆಲಸವನ್ನು ಅರ್ಧದಲ್ಲಿ ನಿಲ್ಲಿಸಲು ಮನಸ್ಸಾಗಲಿಲ್ಲ. ಅರ್ಧ ಮಾಡಿಟ್ಟರೆ ಇಷ್ಟು ವರ್ಷಗಳ ಪರಿಶ್ರಮ ನೀರಲ್ಲಿ ರಂಗವಲ್ಲಿ ಬಿಡಿಸಿದಂತೆ ವ್ಯರ್ಥವಾಗುವುದಿತ್ತು. ಹಾಗೆಂದು ಮುಂದುವರಿಸುವುದಾದರೆ, ಮತ್ತಷ್ಟು ವರ್ಷಗಳನ್ನು ಅದಕ್ಕಾಗಿ ಮೀಸಲಿಡಬೇಕಿತ್ತು. ಯಂತ್ರದ ಜೊತೆ ಗುದ್ದಾಡಿಕೊಂಡು ಸುಸ್ತಾಗಿ ಕಣ್ಣು ಮುಚ್ಚಿ ಮಲಗಿದರೆ ಸಾಕು, ಅಮ್ಮನ ಸಂಕಷ್ಟ, ಅವರ ರಟ್ಟೆನೋವು ಕಣ್ಣೆದುರು ಬರುತ್ತಿತ್ತು. ಹಲವು ತಿಂಗಳ ಒದ್ದಾಟದ ನಂತರ ಮತ್ತೂ ಒಂದು ಹಂತವನ್ನು ಪೂರ್ಣಗೊಳಿಸಲು ಸಾಧ್ಯವಾಯಿತು. ಯಶಸ್ಸು ಹತ್ತಿರವಿದ್ದಷ್ಟೇ ದುರ್ಗಮವೂ ಆಗಿತ್ತು. ಮುಂದಿನ ಮತ್ತು ಅಂತಿಮ ಹಂತ ಮಾತ್ರ ಏನೇನು ಯೋಚಿಸಿದರೂ ಹೇಗೆ ರಚಿಸಬೇಕೆಂಬ ಐಡಿಯಾ ಹೊಳೆಯಲಿಲ್ಲ. ಅದೊಂದು ದಿನ ನನ್ನ ಮಾಲಿಕರ ಜೊತೆ ಬಾಲನಗರದಲ್ಲಿ ಯಾವುದೋ ಫ್ಯಾಕ್ಟರಿಯ ವೈರಿಂಗ್ ಕೆಲಸಕ್ಕೆಂದು ಹೋಗಿದ್ದೆ. ಅಲ್ಲಿ ಹಲವು ಯಂತ್ರಗಳು ಒಟ್ಟಾಗಿ ಕೆಲಸ ಮಾಡುತ್ತಿದ್ದವು. ಒಂದೊಂದೂ ಸ್ವತಂತ್ರವಾಗಿದ್ದು ಏನೇನೋ ಭಾಗಗಳನ್ನು ತಯಾರಿಸುತ್ತಿದ್ದರೂ ಎಲ್ಲ ಯಂತ್ರಗಳಿಗೂ ಅತ್ಯಂತ ಕರಾರುವಾಕ್ಕಾದ ಸಂಪರ್ಕ, ಸಮನ್ವಯ ಇತ್ತು. ಅವುಗಳ ಆ ಚಲನೆಯ ಬಿಗಿ-ನಾಜೂಕು ನೋಡುತ್ತ ಅದೆಷ್ಟು ಮೈಮರೆತುಬಿಟ್ಟೆನೆಂದರೆ ಮಾಡಲು ಬಂದ ಕೆಲಸ ಬದಿಗಿಟ್ಟು ಅದನ್ನೇ ನೋಡುತ್ತ ನಿಂತುಬಿಟ್ಟೆ. ಮಾಲಿಕ ಕರೆದು ಜೋರು ಮಾಡಿದ. ಆದರೆ ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವ ಹಂತ ದಾಟಿ ಬಿಟ್ಟಿದ್ದೆ. ಯಂತ್ರದ ತಂತ್ರಗಾರಿಕೆ ನನ್ನನ್ನು ಮೋಡಿ ಮಾಡಿ ಬಿಟ್ಟಿತ್ತು. ಸುಮಾರು ಮೂರು ತಾಸು ಆ ಯಂತ್ರಗಳನ್ನು ನೋಡಿ ಅಲ್ಲಿ ಕಲಿಯಬಹುದಾದದ್ದನ್ನು ನನ್ನದೇ ವಿಧಾನದಲ್ಲಿ ಕಲಿತೆ. ಅಲ್ಲಿ ಕಲಿತದ್ದೇನು ಎಂಬುದನ್ನು ಯಾರಿಗೂ ವಿವರಿಸಲು ಬೇಕಾದಷ್ಟು ಭಾಷೆ ನನ್ನಲ್ಲಿರಲಿಲ್ಲ. ಆದರೆ ಅಲ್ಲಿ ಸಿಕ್ಕ ಜ್ಞಾನವನ್ನು ನನ್ನ ಯಂತ್ರದಲ್ಲಿ ಹೇಗೆ ಬಳಸಬೇಕೆಂಬುದು ಮಾತ್ರ ನನಗೆ ತಿಳಿದುಹೋಗಿತ್ತು.
ಮನೆಗೆ ಬಂದೆ. ಅವತ್ತು ಅನ್ನ ನೀರು ಬಿಟ್ಟು ನನ್ನ ಕೆಲಸ ಮಾಡತೊಡಗಿದೆ. ಏನೇನೋ ಕಸರತ್ತು ಮಾಡಿದ ಮೇಲೆ ನಡುರಾತ್ರಿಯ ಹೊತ್ತಿಗೆ ಯಂತ್ರ ಪೂರ್ತಿಯಾಗಿ ಸಿದ್ಧವಾಯಿತು. ಖುಷಿಯಲ್ಲಿ ನನಗೆ ಚಾಪೆ ಮೇಲುರುಳಿದರೆ ನಿದ್ದೆಯಾದರೂ ಹೇಗೆ ಬರಬೇಕು! ಮುಂಜಾನೆ ಐದಕ್ಕೆಲ್ಲ ಚಂಗನೆ ಎದ್ದು ಯಂತ್ರವನ್ನು ಹೊತ್ತುಕೊಂಡು ಸಿಕ್ಕ ಗಾಡಿಯಲ್ಲಿ ಏರಿಸಿಕೊಂಡು ಊರಿಗೆ ತಂದೆ. ಮನೆಯ ಅಂಗಳದಲ್ಲಿಟ್ಟೆ. ಅಪ್ಪಾ, ನನ್ನ ಕೆಲಸ ಪೂರ್ತಿಯಾಗಿದೆ. ಎಲ್ಲಿ, ಸ್ವಲ್ಪ ದಾರ ಕೊಡಿ, ಇದರ ಕರಾಮತ್ತು ತೋರಿಸುತ್ತೇನೆ ಎಂದರೆ ಸಿಟಿಯಲ್ಲಿ ಕೆಲಸ ಬಿಟ್ಟು ಹೇಳದೆ ಕೇಳದೆ ಹಳ್ಳಿಗೆ ವಾಪಸಾದ ಮಗನ ಮೇಲೆ ಉರಿದುಕೊಂಡಿದ್ದ ಅಪ್ಪ, “ನೀನೇನೋ ಉಂಡಾಡಿಗುಂಡನಾಗಿ ಹಾಳಾದೆ. ಈಗ ಆ ರೇಷ್ಮೆ ದಾರ ಬೇರೆ ಯಾಕೆ ಹಾಳು ಮಾಡುತ್ತೀಯಾ?” ಎಂದು ಬಿಟ್ಟರು. ನೆರೆಹೊರೆಯವರಿಂದ ಒಂದಷ್ಟು ದಾರ ಕಡ ತಂದು ನನ್ನ ಆಸು ಯಂತ್ರಕ್ಕೆ ಸಿಕ್ಕಿಸಿ ಯಂತ್ರವನ್ನು ಚಾಲೂ ಮಾಡಿದಾಗ, ಅದು ಮನುಷ್ಯನಂತೆಯೇ ಆ ದಾರದ ಉಂಡೆಯನ್ನು ಎಳೆಎಳೆಯಾಗಿ ತೆಗೆದು ನಲವತ್ತು ಮೊಳೆಗಳಿಗೂ ನೀಟಾಗಿ ಸುತ್ತಿಕೊಂಡು ಬಂದಿತು. ಅದನ್ನು ನೋಡಿದ ತಂದೆಯವರಿಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ! ಅವರು ಮತ್ತು ಅಮ್ಮ – ಇಬ್ಬರ ಕಣ್ಣಲ್ಲೂ ನೀರು ಜಿನುಗತೊಡಗಿತು. ಮಗನೇ, ನಿನ್ನ ತಾಕತ್ತು ತಿಳಿಯದೆ ಏನೇನೋ ಕೆಟ್ಟ ಪದಗಳಿಂದ ಬಯ್ದಾಡಿ ಬಿಟ್ಟೆನಲ್ಲೋ ಎಂದು ಅಪ್ಪ ಅಪ್ಪಿ ಹಿಡಿದು ಭುಜವೆಲ್ಲ ತೋಯಿಸಿಬಿಟ್ಟರು. ಮನುಷ್ಯರ ಸಹಾಯವಿಲ್ಲದೆ ಆಸು ಮಾಡುವ ಈ ಅದ್ಭುತ ಯಂತ್ರವನ್ನು ನೋಡಲು ಹಳ್ಳಿಗೆ ಹಳ್ಳಿಯೇ ನಮ್ಮ ಮನೆಯಂಗಳದಲ್ಲಿ ಜಮೆಯಾಯಿತು. ಲೋಕಲ್ ಪತ್ರಿಕೆಗಳಿಗೆ ಬುಲಾವ್ ಹೋಯಿತು. ಒಂದಿಬ್ಬರು ರಿಪೋರ್ಟರುಗಳು ಕ್ಯಾಮೆರಾ ಜೊತೆ ಮನೆಯಲ್ಲಿ ಪ್ರತ್ಯಕ್ಷರಾದರು. ಒಟ್ಟು ಏಳು ವರ್ಷಗಳ ಕಾಲ ಹುಚ್ಚನಂತೆ ದಿನರಾತ್ರಿ ಕೂತಲ್ಲಿ ನಿಂತಲ್ಲಿ ಬಯಲಲ್ಲಿ ಬಾತ್‍ರೂಮಲ್ಲಿ ನಿದ್ದೆಯಲ್ಲಿ ಎಚ್ಚರದಲ್ಲಿ ಆಸು ಯಂತ್ರವನ್ನೇ ಮನತುಂಬಿಕೊಂಡಿದ್ದವನು ಈಗ ರಾತ್ರಿ ಬೆಳಗಾಗುವುದರಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಬಿಟ್ಟೆ! ಒಂದಾನೊಂದು ಕಾಲದಲ್ಲಿ ನನ್ನನ್ನು ಹಂಗಿಸಿ ಭಂಗಿಸಿ ಸಿಟಿಗೆ ಓಡಿಸಿದ್ದವರು ಈಗ ಸಾಲುಗಟ್ಟಿ ನಿಂತು, ನಮ್ಮ ಹೆಂಗಸರೂ ನಿನ್ನ ತಾಯಿಯ ಹಾಗೇ ಅಲ್ಲವಾ? ನಮಗೂ ಒಂದು ಯಂತ್ರ ತಯಾರಿಸಿಕೊಡೋ ಮಲ್ಲೇಶಣ್ಣ ಎಂದು ದುಂಬಾಲು ಬಿದ್ದರು. ಒಂದು ಯಂತ್ರ ತಯಾರಿಸಿದವನಿಗೆ ಅದನ್ನೇ ಹತ್ತು ಅಥವಾ ನೂರು ಕಾಪಿ ಮಾಡಿ ಹಂಚುವುದು ದೊಡ್ಡ ವಿಷಯ ಅಲ್ಲವಲ್ಲ? ಕೂತು ಲೆಕ್ಕಾಚಾರ ಹಾಕಿದೆವು. ಒಂದು ಯಂತ್ರಕ್ಕೆ 13,000 ರುಪಾಯಿ ಖರ್ಚು ಬರುತ್ತದೆಂಬುದು ತಿಳಿಯಿತು. ಊರಿಗೆಲ್ಲ ಆಸು ಯಂತ್ರ ನಿರ್ಮಿಸಿ ಹಂಚುವ ನನ್ನ ಹೊಸ ಕಾಯಕ ಪ್ರಾರಂಭವಾಯಿತು. 2000ನೇ ಇಸವಿಯಿಂದ 2005ರವರೆಗೆ ನಾನು ಹಲವು ನೂರು ಯಂತ್ರಗಳನ್ನು ನಿರ್ಮಿಸಿ ಹಳ್ಳಿಯಲ್ಲಿ ಹಂಚಿದೆ.
2005ರಲ್ಲಿ ಒಂದು ಸಮಸ್ಯೆ ಉದ್ಭವಿಸಿತು. ಉಕ್ಕಿನ ಕ್ರಯ ದುಪ್ಪಟ್ಟಾಯಿತು. ಯಂತ್ರದ ಹೊಸ ಬೆಲೆ 13,000ದಿಂದ 26,000 ರುಪಾಯಿಗೆ ಮುಟ್ಟಿತು. ಅಷ್ಟೊಂದು ದುಡ್ಡು ತೆತ್ತು ಅದನ್ನು ಮನೆ ತುಂಬಿಸಿಕೊಳ್ಳಲು ನೇಕಾರರು ತಯಾರಿರಲಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರದೆ ಹೋಯಿತಲ್ಲ ಎಂದು ನಾವೆಲ್ಲ ತಲೆಗೆ ಕೈ ಹೊತ್ತು ಕೂತಿದ್ದ ಆ ಸಮಯದಲ್ಲಿ ಒಬ್ಬ ಸ್ನೇಹಿತ ಸಲಹೆ ಕೊಟ್ಟ: ಈ ಯಂತ್ರದಲ್ಲಿ ಎಲ್ಲವೂ ಮೆಕ್ಯಾನಿಕಲ್ ಆಗಿಯೇ ಆಗುವಂತೆ ಮಾಡಿದ್ದೀಯಾ. ಅದಕ್ಕೇ ಹೆಚ್ಚು ಲೋಹದ ಬಳಕೆಯಾಗುತ್ತಿದೆ. ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಎಲೆಕ್ಟ್ರಾನಿಕ್ ಮೆಷಿನ್ ಅಳವಡಿಸಿಕೊಂಡರೆ ಕಡಿಮೆ ದುಡ್ಡಲ್ಲಿ ಯಂತ್ರವನ್ನು ಪುನಾರಚಿಸಬಹುದು. ಎಲೆಕ್ಟ್ರಾನಿಕ್ಸ್ ಬಗ್ಗೆ ತಿಳಿಯುವುದು ಹೇಗೆ? ಅದಕ್ಕೂ ಪರಿಹಾರ ಸಿದ್ಧವಿತ್ತು. ಪುಸ್ತಕ! ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪುಸ್ತಕ ಓದುವುದು! ಪುಸ್ತಕದಂಗಡಿಗೆ ಓಡಿದೆ. ಆ ವಿಷಯಕ್ಕೆ ಸಂಬಂಧಿಸಿದ ಎಲ್ಲ ಪಠ್ಯಪುಸ್ತಕ ಕೊಂಡು ತಂದೆ. ನಾನು ಮೊದಲೇ ತೆಲುಗು ಮಾಧ್ಯಮದ ವಿದ್ಯಾರ್ಥಿ; ಇಂಗ್ಲೀಷೆಲ್ಲಿಂದ ಬರಬೇಕು! ಶಬ್ದ ಶಬ್ದ ಕೂಡಿಸಿ ಓದುವ, ಓದಿ ಅರ್ಥೈಸಿಕೊಳ್ಳುವ, ಕಠಿಣ ಶಬ್ದಗಳನ್ನು ನೋಟ್ಸ್’ನಲ್ಲಿ ಬರೆದಿಟ್ಟುಕೊಂಡು ನಿಘಂಟಿನಿಂದ ಅರ್ಥ ಹುಡುಕಿ ತೆಗೆಯುವ ಧೇನುಕವಿಧಾನ ಶುರುವಾಯಿತು. ರೆಸಿಸ್ಟರುಗಳು, ಟ್ರಾನ್ಸಿಸ್ಟರುಗಳು, ವೋಲ್ಟೇಜು, ಸರ್ಕ್ಯೂಟು, ಚಿಪ್‍ಗಳು ಎನ್ನುತ್ತ ಎಲ್ಲವನ್ನೂ ಒಂದೊಂದಾಗಿ ಓದಿ ತಿಳಿದು ಅಳವಡಿಸಿಕೊಂಡು ನಡೆಯುತ್ತ ಎರಡೇ ವರ್ಷದಲ್ಲಿ ನನ್ನ ಯಂತ್ರದ ಹೊಸ ಮಾದರಿ, ಎಲೆಕ್ಟ್ರಾನಿಕ್ ಅವತರಣಿಕೆ ಸಿದ್ಧವಾಯಿತು. ಈ ಹೊಸ ಯಂತ್ರವನ್ನು ಮತ್ತೆ 13,000 ರುಪಾಯಿಗೇ ಒದಗಿಸುವುದು ಸಾಧ್ಯವಾಯಿತು!
2009ರಲ್ಲಿ ಯಂತ್ರದಲ್ಲಿ ಮತ್ತೊಮ್ಮೆ ಬದಲಾವಣೆ ತಂದೆ. ಕಂಪ್ಯೂಟರ್‍ಗಳ ಬಗ್ಗೆ ಓದಿಕೊಂಡು, ಮೆಷಿನ್ ಲೆವೆಲ್ ಲ್ಯಾಂಗ್ವೇಜ್‍ನಲ್ಲಿ ತಂತ್ರಾಂಶ ಬರೆಯುವಷ್ಟರ ಮಟ್ಟಿಗೆ ಕಲಿತು, ಯಂತ್ರದ ಮೂಲಕ ನಮಗೆ ಬೇಕಾದ ವಿನ್ಯಾಸವನ್ನು ಸೆಟ್ ಮಾಡಿಕೊಳ್ಳಬಹುದಾದ ವ್ಯವಸ್ಥೆ ಕಲ್ಪಿಸಿದೆ. ನ್ಯಾಷನಲ್ ಇನ್ನೊವೇಶನ್ ಫೌಂಡೇಶನ್ ಎಂಬ ಸರಕಾರೀ ಸಂಸ್ಥೆಯವರು ಬಂದು ನನ್ನ ವಿನ್ಯಾಸಗಳಿಗೆ ಪೇಟೆಂಟ್ ಮಾಡಿಸಿಕೊಟ್ಟರು. 2009ರಲ್ಲಿ ನನ್ನ ಸಾಧನೆಗೆ ರಾಷ್ಟ್ರಪತಿಗಳಿಂದ ಬಹುಮಾನ ಪಡೆದೆ. ನಬಾರ್ಡ್ ಕೂಡ ನನ್ನನ್ನು ಗುರುತಿಸಿ ಪ್ರಶಸ್ತಿ ಕೊಟ್ಟಿತು. ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂಜಿ ಜೊತೆ ಕಾಫಿ ಕುಡಿಯುತ್ತ ಹತ್ತು ನಿಮಿಷ ಕಳೆಯುವ ಭಾಗ್ಯ ನನ್ನದಾಯಿತು. 2016ರ ಜನವರಿಯಲ್ಲಿ ಟೈಮ್ಸ್ ಸುದ್ದಿವಾಹಿನಿಯವರು ಅಮೇಜಿಂಗ್ ಇಂಡಿಯನ್ಸ್ ಎಂಬ ಹೆಸರಲ್ಲಿ ಗುರುತಿಸಿದ ಕೆಲವು ಸಾಧಕರ ಪೈಕಿ ನಾನೂ ಒಬ್ಬನಾಗಿದ್ದೆನೆಂಬುದು ಹೆಮ್ಮೆಯ ಸಂಗತಿ. ಆ ಸಂದರ್ಭದಲ್ಲಿ ಪ್ರಶಸ್ತಿ ಕೊಟ್ಟವರು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು. ಮತ್ತೀಗ ಭಾರತ ಸರಕಾರದ ಪ್ರತಿಷ್ಠಿತ ಪದ್ಮಪ್ರಶಸ್ತಿಯ ಗರಿ! ಇದೆಲ್ಲ ನಿಜವಾಗಿಯೂ ನನ್ನ ಜೀವನದಲ್ಲಿ ನಡೆದು ಹೋಗುತ್ತಿರುವ ಸಂಗತಿಗಳಾ ಎಂದು ನನನ್ನು ನಾನೇ ಚಿವುಟಿ ನೋಡಿಕೊಳ್ಳಬೇಕಾದ ಸಂದರ್ಭ ಇದು!
ಮೊದಲೇ ಹೇಳಿಕೊಂಡಂತೆ ನಾನು ಕಾಲೇಜು ಮೆಟ್ಟಿಲು ಹತ್ತಿದವನಲ್ಲ. ನನ್ನ ಶಾಲೆಯ ಕೊನೆಯ ಪರೀಕ್ಷೆಯನ್ನೇ ನಾನು ಮೂರು ವರ್ಷ ಬರೆದು ಪಾಸು ಮಾಡಿಕೊಳ್ಳಬೇಕಾಯಿತು. ಆಗಿನ ಸಂದರ್ಭದಲ್ಲಿ ನನ್ನನ್ನು ನೋಡಿದ ಯಾರೇ ಆದರೂ, ನಾನೊಂದು ಉತ್ಕಷ್ಟ ಸರಕಾರೀ ಪುರಸ್ಕಾರವನ್ನು ಪಡೆಯುವುದರ ಬಗ್ಗೆ ಬಿಡಿ, ನೆಟ್ಟಗೆ ಉದ್ಯೋಗ ಹಿಡಿದು ನಾಲ್ಕು ಕಾಸು ಸಂಪಾದನೆ ಮಾಡುತ್ತೇನೆಂಬುದರ ಬಗ್ಗೆ ಕೂಡ ಖಚಿತವಾಗಿ ಹೇಳುವಂತಿರಲಿಲ್ಲ! ನನಗೀಗ 45 ವರ್ಷ. ನನ್ನ ಬದುಕಿನ ಮೊದಲ ಮೂವತ್ತು ವರ್ಷಗಳಲ್ಲಿ ನನ್ನನ್ನು ನಂಬಿದ್ದ, ನನ್ನ ಕರ್ತೃತ್ವ ಶಕ್ತಿಯಲ್ಲಿ ಭರವಸೆ ಇಟ್ಟಿದ್ದ ಈ ಜಗತ್ತಿನ ಏಕೈಕ ವ್ಯಕ್ತಿ ನಾನು ಮಾತ್ರ! ನನ್ನೊಬ್ಬನನ್ನು ಹೊರತುಪಡಿಸಿ ನನ್ನ ಬಗ್ಗೆ ಬೇರೆ ಯಾರಿಗೂ ಭರವಸೆ, ಕನಸು, ಆಸೆಗಳು ಇರಲೇ ಇಲ್ಲ ಎಂದರೆ ಅದೆಂಥ ದೈನೇಸಿ ಸ್ಥಿತಿಯಲ್ಲಿದ್ದೆ ಎಂದು ನೀವು ಊಹಿಸಬಹುದು. ನನ್ನನ್ನು ಮೇಲೆತ್ತಿದ್ದು – ನನ್ನ ಪರಿಶ್ರಮ, ತದೇಕಚಿತ್ತ, ಹಿಡಿದ ಕೆಲಸವನ್ನು ನಡುದಾರಿಯಲ್ಲಿ ಬಿಡದ ಛಲ, ಕೆಲಸ ಮತ್ತು ಮನಸ್ಸುಗಳ ಮೇಲೆ ಉಡದಂಥ ಹಿಡಿತ. ಓದಿ ಬರೆದು ವಿದ್ವಾಂಸನಾಗದ ನಾನು, ವಸ್ತುಗಳನ್ನು ಮತ್ತು ಈ ಜಗತ್ತಿನ ವಿದ್ಯಮಾನಗಳನ್ನು ನೋಡಿ ಪರಿಶೀಲಿಸಿ ಕಲಿಯುವ ಗುಣ ಬೆಳೆಸಿಕೊಂಡೆ. ಒಮ್ಮೆ ಮಾಡಿ ಮುಗಿಸಿದ ಕೆಲಸದಲ್ಲಿ ಮತ್ತೇನು ಸುಧಾರಣೆ ಮಾಡಬಹುದೆಂಬುದರ ಬಗ್ಗೆ ಸದಾ ಯೋಚಿಸಿದೆ. ಜಗತ್ತೆಲ್ಲ ತಿರುಗಿ ಬಿದ್ದರೂ ನನ್ನ ದೃಢ ನಿಶ್ಚಯವನ್ನು ಕೈ ಬಿಡದೆ ಮುನ್ನಡೆದೆ. ಆಸು ಮಾಡಲು ಹಿಂದೆ ಐದಾರು ಗಂಟೆಗಳು ತಗುಲುತ್ತಿದ್ದರೆ ಇಂದು ಒಂದು ಸೀರೆಗೆ ತಗಲುವ ಸಮಯ ಕೇವಲ 90 ನಿಮಿಷ. ಒಂದೆರಡು ಸೀರೆ ನೇಯ್ದು ದಿನದ ಕೆಲಸ ಮುಗಿಸುತ್ತಿದ್ದ ಮಂದಿ ಇಂದು ದಿನಕ್ಕೆ ಆರೇಳು ಸೀರೆ ನೇಯುತ್ತಿದ್ದಾರೆ. ನೇಕಾರ ಕುಟುಂಬಗಳಲ್ಲಿ ಹೆಂಗಸರ ಬವಣೆ, ರಟ್ಟೆನೋವು ತಪ್ಪಿದೆ. ಅವರು ಮನೆವಾಳ್ತೆಗೆ ಸಮಯ ಕೊಡಲು ಸಾಧ್ಯವಾಗಿದೆ. ನನ್ನೂರಿನ ಹುಡುಗಿಯರು ಇಂದು ಆಸು ಮಾಡುತ್ತ ಬದುಕು ಕಳೆಯುವ ಬದಲು ತಾವೂ ವೈದ್ಯರೋ ಇಂಜಿನಿಯರೋ ಶಿಕ್ಷಕರೋ ಆಗುತ್ತ ಜಗತ್ತು ನೋಡುವುದು ಸಾಧ್ಯವಾಗಿದೆ. ನಮ್ಮ ನೇಯ್ಗೆಯ ಸಂಸ್ಕತಿ ಉಳಿದಿದೆ, ಆರ್ಥಿಕತೆ ಸುಧಾರಿಸಿದೆ. ಇದೇ ಇಲ್ಲವೆ ನಿಜವಾದ ಪ್ರಗತಿ!
ಇಂದು ಜಗತ್ತು ನನ್ನನ್ನು ಗುರುತಿಸಿದೆ. ಫೋಬ್ರ್ಸ್ ಪತ್ರಿಕೆ ಸಾಧಕರ ಪಟ್ಟಿಯಲ್ಲಿ ನನ್ನ ಹೆಸರನ್ನು ಕಾಣಿಸಿದೆ. ನನ್ನ ಅನ್ವೇಷಣೆಗೆ ಎನ್‍ಐಎಫ್‍ನಿಂದ “ಲಕ್ಷ್ಮಿ ಆಸು ಯಂತ್ರ” ಎಂಬ ಹೆಸರಿನಲ್ಲಿ ಪೇಟೆಂಟ್ ಲಭಿಸಿದೆ. ಅದರಲ್ಲಿರುವ ಲಕ್ಷ್ಮಿ, ಬೇರಾರೂ ಅಲ್ಲ, ನನ್ನ ತಾಯಿ. ಅಗತ್ಯವೇ ಅನ್ವೇಷಣೆಯ ತಾಯಿ ಎನ್ನುತ್ತಾರೆ. ನನ್ನ ಪ್ರಕರಣದಲ್ಲಿ ಮಾತ್ರ ತಾಯಿಯೇ ಅನ್ವೇಷಣೆಯ ಪ್ರೇರಣೆಯಾಗಿ ಒದಗಿ ಬಂದರು.