Featured ಅಂಕಣ

ಆದಿಯೋಗಿಯು ಆತ್ಮವನ್ನಾವರಿಸಿದಾಗ

“ಶಿವ”…. ನನಗನ್ನಿಸುವುದು ಆತ ಅನಂತ ಅಧ್ಯಾತ್ಮವ ಪ್ರಖರವಾಗಿ ಸಾರುವ ಪರಮಾತ್ಮ.. ಶಿವ ಆಧ್ಯಾತ್ಮದ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರವಾಗಿಬಿಡುವ ಶಕ್ತಿ.. ಶಿವನೆಂದರೆ ಕತ್ತಲೆಯ ಕೊಂದು ಬೆಳಕನ್ನೀಯುವ ಅಸಾಧಾರಣ ರೂಪ. ಶಿವನ ಆ ಶರೀರವೇ ಒಂದು ಆಧ್ಯಾತ್ಮದ ಪಾಠ. ಶಿವನೆಂದರೆ ಎಲ್ಲದರ ತುದಿ. ನಮ್ಮೊಳಗಿನ ಅಹಂಕಾರವ ತುಳಿದು ನರ್ತಿಸುವ ಮಹಾರೌಧ್ರ ಆತ. ಕಾಮ, ಕ್ರೋಧ, ಲೋಭ, ಮೋಹ ಮದ ಮತ್ತು ಮಾತ್ಸರ್ಯದಿಂದ ನಮ್ಮನ್ನು ಮುಕ್ತಿಗೊಳಿಸುವವನು ಶಿವ. ಶಿವ ಪ್ರತಿನಿಧಿಸುವುದು ಆಧ್ಯಾತ್ಮವೆಂಬ ಅನಂತ ಶಕ್ತಿಯನ್ನು. ಪರಿಪೂರ್ಣತೆಯ ಮಹಾಭಾವ ನಮ್ಮನ್ನು ಆವರಿಸಿ ಸಾರ್ಥಕ ಎನ್ನಿಸುವುದೇ ಆಧ್ಯಾತ್ಮ ಅಂತಾದರೆ, ಆ ಪರಿಪೂರ್ಣತೆಯ ಹಾದಿಯನ್ನು ತೋರಿಸುವವನು “ಮಹಾಶಿವ”. ಶಿವ ಪರಮಯೋಗಿ, ಸದಾ ಧ್ಯಾನಿಸುವ ಪರಮಾತ್ಮ ಆತ.ಮಂಗಳಕರನೋ ಅವನೇ ಶಿವ. ಶಿವನಿಗೆ ಲಯಕಾರಕ ಎಂದೂ ಸಹ ಕರೆಯುತ್ತಾರೆ. ಅಂದರೆ ಸೃಷ್ಟಿ ಮಾಡುವುದು ಬ್ರಹ್ಮನ ಕೆಲಸವಾದರೆ, ಆ ಸೃಷ್ಟಿಯಾದ ಆಕರಗಳಿಗೆ (ಜೀವಿಗಳಿಗೆ) ಸ್ಥಿತಿ ಕೊಡುವುದು ವಿಷ್ಣುವಿನ ಕೆಲಸ. ಈ ರೀತಿ ಸೃಷ್ಟಿ, ಸ್ಥಿತಿ ಪಡೆದ ಆಕರಗಳಿಗೆ ಲಯ (ಕೊನೆ) ಕಾಣಿಸುವವನು ಶಿವ. ಆದ್ದರಿಂದ ಶಿವನಿಗೆ ಲಯಕಾರ ಎಂದೂ ಸಹ ಕರೆಯುತ್ತಾರೆ. ಸಂಹಾರಕ ಅಥವಾ ಲಯಕಾರಕ ದೇವತೆ ಎಂದರೆ ಆತ ಶಿವ. ಶಿವ ಎಂದರೆ ಮಾಯಾ, ನಿರಹಂಕಾರ, ಬಂಧರಹಿತ ಎನ್ನಲಾಗಿದೆ. ಋಗ್ವೇದದಲ್ಲಿ ಶಿವ ಎನ್ನುವ ದೇವತೆ ಇಲ್ಲ. ರುದ್ರ ಎನ್ನುವ ಹೆಸರಿನ ದೇವತೆ ಇದ್ದಾನೆ. ಈ ರುದ್ರನಿಗೆ ಶಿವ, ಈಶ್ವರ, ಶಂಭು, ಶಂಕರ, ಪಶುಪತಿ, ಮುಕ್ಕಣ್ಣ, ಶಶಿಧರ, ಚಂದ್ರಶೇಖರ, ನೀಲಕಂಠ, ನಂಜುಂಡ, ಮಹದೇಶ್ವರ, ಮಹೇಶ್ವರ, ನಾಗರಾಜ, ನಾಗೇಶ, ಕೈಲಾಸ ಪತಿ ಎನ್ನುವ ವಿಶೇಷಣವನ್ನು ಬಳಸಲಾಗಿದೆ.


ಮಹಾಶಿವರಾತ್ರಿಯ ಈ ಸಂದರ್ಭದಲ್ಲಿ ಶಿವನ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಶಿವನ ಐದು ಪ್ರಮುಖ ಅವತಾರಗಳು ಎಂದರೆ ಅವು 1)ತತ್ಪುರುಷ 2)ನಾಮದೇವ 3)ಅಘೋರೇಶ 4)ಸಧ್ಯೋಜಾತ 5)ಈಶಾನ. ಸುಮಾರು ಇಪ್ಪತ್ತೆಂಟು ಅವತಾರಗಳು ಶಿವನಿಗೆ ಎಂಬುದನ್ನು ಅನೇಕ ಪುರಾಣಗಳು ಹೇಳಿವೆ. ಸುಮಾರು ಎಂಟು ತೆರನಾದ ಶಿವನ ವಿಗ್ರಹಗಳನ್ನು ನಾವು ಹೆಸರಿಸಬಹುದು ಅವೆಂದರೆ ಉಗ್ರ, ಶರ್ವ, ಭವ, ರುಧ್ರ, ಭೀಮ, ಪಶುಪತಿ, ಇಶಾನ ಮತ್ತು ಮಹಾದೇವ. ಶಿವನ ಹನ್ನೊಂದು ರುದ್ರಾವತಾರವನ್ನು  ಪುರಾಣಗಳು ಹೇಳಿವೆ ಅವೆಂದರೆ ಕಪಾಲಿ, ಪಿಂಗಲ್, ಭೀಮ, ವಿರೂಪಾಕ್ಷ, ವಿಲೋಹಿತ, ಶಾಸ್ತ್ರ, ಅಜಪಾದ, ಅಹಿರ್ಭುದ್ನ್ಯ, ಶಂಭು, ಚಾಂದ್ ಮತ್ತು ಭಾವ್. ಶಿವನ ಹನ್ನೊಂದನೇ ಅವತಾರವೇ ಹನುಮಂತ. ಅನೇಕ ಪುರಾಣ ಗ್ರಂಥಗಳು ಇದನ್ನು ಪ್ರತಿಪಾದಿಸಿವೆ. ಅಂಜನ ಮತ್ತು ಕೇಸರಿಯ ಪುತ್ರನಾದ ಆಂಜನೇಯ ಶಿವನ ಹನ್ನೊಂದನೇ ಅವತಾರವಾಗಿದ್ದನು.ರಾವಣನೆಂಬ ಕ್ರೂರ ರಾಕ್ಷಸ ಶಿವನ ಆರಾಧಕನಾಗಿದ್ದ. ಕೈಲಾಸ ಪರ್ವತವನ್ನು ಕೆಡವುತ್ತೇನೆ ಎಂದು ಹೊರಟ ರಾವಣನಿಗೆ ಬುದ್ಧಿ ಕಲಿಸಿದ್ದು ಶಿವ. ದೇವತೆಗಳು ತಾರಕಾಸುರನ ಯುದ್ಧದಿಂದ ತತ್ತರಿಸಿಹೋಗಿದ್ದ ಸಂದರ್ಭದಲ್ಲಿ ಅವರಿಗೆ ಮಹಾಶಿವನ ಸಹಾಯ ಬೇಕಿರುತ್ತದೆ ಆದರೆ ಶಿವ ಆ ಸಮಯದಲ್ಲಿ ಧ್ಯಾನಾಸಕ್ತನಾಗಿರುತ್ತಾನೆ. ಆಗ ದೇವತೆಗಳು ಕಾಮದೇವನ ಸಹಾಯದಿಂದ ಶಿವನನ್ನು ಜಾಗೃತಗೊಳಿಸಲು ಪ್ರಯತ್ನಿಸುತ್ತಾರೆ. ಕಾಮದೇವ ತನ್ನ ಕಾಮ ಬಾಣವನ್ನು ಶಿವನ ಮೇಲೆ ಪ್ರಯೋಗಿಸುತ್ತಾನೆ. ಕ್ರೋಧದಿಂದ ಎಚ್ಚರಗೊಂಡ ಶಿವ ತನ್ನ ಮೂರನೇ ಕಣ್ಣನ್ನು ಬಿಟ್ಟು ಕಾಮದೇವನನ್ನು ಭಸ್ಮಮಾಡುತ್ತಾನೆ. ಶಿವನ ಮೊದಲನೆಯ ಹೆಂಡತಿಯಾದ ಸತಿಯ ಕತೆ ನಿಮಗೆ ಗೊತ್ತೇ? ಪುರಾಣದ ಪ್ರಕಾರ ಶಿವನ ಮೊದಲನೇ ಹೆಂಡತಿ ಪಾರ್ವತಿಯಲ್ಲ. ಹೌದು, ಸತಿ ಶಿವನ ಮೊದಲನೇ ಹೆಂಡತಿ.  ಸತಿಯ ತಂದೆ ಶಿವನನ್ನು ಅಳಿಯನನ್ನಾಗಿ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಶಿವನಿಗೆ ಅವಮಾನಿಸಿದ ಕಾರಣಕ್ಕಾಗಿ ಸತಿ ಜೀವವನ್ನು ತ್ಯಜಿಸಿದಳು ಇದನ್ನು ತಿಳಿದು ರೌಧ್ರನಾದ ಶಿವ ಸತಿಯ ತಂದೆಯನ್ನು ಕೊಲ್ಲುತ್ತಾನೆ.

ಶಿವನ ಅವತಾರದ ಗುಣಲಕ್ಷಣಗಳನ್ನು ಗಮನಿಸುತ್ತಾ ಹೋದರೆ ಶಿವನಲ್ಲಿ ಮನುಷ್ಯನ ಪರಿಪೂರ್ಣತೆಯ ಮಾರ್ಗವನ್ನು ನಾವು ಕಾಣಬಹುದೇನೋ ಅನ್ನಿಸುತ್ತದೆ.
ಬೆತ್ತಲೆ ದೇಹವ ಅಪ್ಪಿಕೊಂಡಿರುವ ಚಿತಾಭಸ್ಮಗಳು:
ಇದು ಪ್ರತಿನಿಧಿಸುವುದು ಮನುಷ್ಯನ ಜೀವನ ಮತ್ತು ಮರಣವನ್ನು. ಸಾವು ಅಂತಿಮ ಸತ್ಯ ಎನ್ನುವುದನ್ನು ಇದು ಪ್ರತಿಧಿಸುತ್ತದೆ. ಮುಕ್ತಿ ಕೊಡುವವನು ಶಿವ ಏನುವುದನ್ನೇ ಈ ರೂಪ ಹೇಳುತ್ತದೆ.
ಜಟಾಧಾರಿ ಶಿವ :
ವಾಯುದೇವ ಆಗಿರುವ ಶಿವ ಸರ್ವ ಸೃಷ್ಟಿಗಳಿಗೂ ಜೀವ ನೀಡುವವನು ಎಂದರ್ಥ. ಈ ಜಟೆಯ ಮಹತ್ವವೇ ಅದು. ಪಶುಪತಿನಾತನಾಗಿರುವ ಶಿವ ಸರ್ವರಲ್ಲೂ ಜೀವಂತವಾಗಿರುವನು ಮತ್ತು ಆತನನ್ನು ಜಾಗೃತಗೊಳಿಸಿ ಪರಿಪೂರ್ಣವಾಗಬೇಕಿರುವುದು ಜೀವಿಗಳ ಗುರಿ ಎಂಬುದನ್ನು ಇದು ಪ್ರತಿನಿಧಿಸುತ್ತದೆ.
ಪವಿತ್ರ ಗಂಗಾ ಮಾತೆ:
ಧುಮ್ಮಿಕ್ಕಿ ಹರಿಯುತ್ತಿದ್ದ ಗಂಗೆಯನ್ನು ಹತೋಟಿಗೆ ತಂದು ಶಾಂತಗೊಳಿಸಿ ಜಗತ್ತಿಗೆ ಸ್ವಚ್ಛ ನೀರುಸುವಂತೆ ಮಾಡಿದ್ದು ಶಿವ. ಭಗಿರತನ ಜಪದ ಫಲವಾಗಿ ಧುಮ್ಮಿಕ್ಕಿ ಹರಿದ ಗಂಗೆಯನ್ನು ತಹಬದಿಗೆ ತಂದು ಅವಳನ್ನು ತನ್ನ ಜಟೆಯಲ್ಲಿ ಬಂಧಿಸಿದ್ದು ಶಿವ.
ಮೂರನೇ ಕಣ್ಣು :
ಶಿವನನ್ನು ತ್ರಯಂಬಕ ದೇವ ಎಂದು ಕರೆಯುವುದು ಇದೇ ಕಾರಣಕ್ಕೆ. ಶಿವನ ಆ ಮೂರನೇ ಕಣ್ಣು ಜ್ಞಾನ ಅಥವಾ ಬುದ್ದಿವಂತಿಕೆಯ ಪ್ರತೀಕವಾಗಿದೆ. ಸಾಮಾನ್ಯಗಳ ಆಚೆಯಾದ್ದನ್ನು ನೋಡುವುದೇ ಈ ಕಣ್ಣು. ಈ ಕಣ್ಣು ದುಷ್ಟತನವನ್ನು ಸರ್ವನಾಶ ಮಾಡುವ ಅಮೋಘ ಶಕ್ತಿಯನ್ನು ಹೊಂದಿದೆ.
ಅರ್ಧ ತೆರೆದಿರುವ ಕಣ್ಣುಗಳು :
ಅರ್ಧ ತೆರೆದಿರುವ ಈ ಕಣ್ಣುಗಳು ಪ್ರಪಂಚದ ಇರುವಿಕೆಯನ್ನು ಪ್ರತಿನಿಧಿಸುತ್ತವೆ. ಒಂದುವೇಳೆ ಇದು ಸಂಪೂರ್ಣ ಮುಚ್ಚಿದರೆ ಪ್ರಪಂಚದ ಮುಕ್ತಾಯ ಎಂದು, ಸಂಪೂರ್ಣ ತೆರೆದರೆ ಹೊಸತನದ ಪ್ರಾರಂಭ ಎನ್ನುವುದನ್ನು ಇದು ಪ್ರತಿಫಲಿಸುತ್ತದೆ.
ಹಣೆಮೇಲೆ ರಾರಾಜಿಸುತ್ತಿರುವ ಅರ್ಧ ಚಂದ್ರ :
ಸಮಯದ ಮೇಲೆ ನಿಯಂತ್ರಣ ಹೊಂದುವುದನ್ನು ಹೇಳುವುದು ಈ ಅರ್ಧ ಚಂದ್ರನ ಗುರುತು. ಶಿವ ಪ್ರಾರಂಭಿಸುವವನು ಮತ್ತು ಕೊನೆಮುಟ್ಟಿಸುವವನೂ ಎರಡೂ ಹೌದು ಎಂಬುದು ಇದರ ಧ್ಯೋತಕ.
ಹಾರವಾಗಿರುವ ನಾಗರಹಾವು :
ಶಿವನೆಂದರೆ ಪರಿಪೂರ್ಣತೆಯ ಪ್ರತೀಕ. ಸಾವನ್ನೂ ಮೀರಿದವನು ಶಿವ. ಈ ಹಾವು ಶಿವನ ಅಗಾಧ ಶಕ್ತಿಯ ಪ್ರತಿಬಿಂಬ. ಜೊತೆಗೆ ಇದು ಶಿವನ ಕುಂಡಲಿನೀ ಶಕ್ತಿಯನ್ನೂ ಪ್ರತಿಬಿಂಬಿಸುತ್ತದೆ. ಜಗದ ಒಳಿತಿಗಾಗಿ ವಿಷವನ್ನೂ ಕುಡಿದು ಅರಗಿಸಿಕೊಂಡ ಶಿವನ ವ್ಯಕ್ತಿತ್ವವನ್ನು ಇದು ಸಾರಿ ಸಾರಿ ಹೇಳುತ್ತದೆ.
ವಿಭೂತಿ:
ವಿಭೂತಿ ಅಮರತ್ವದ ಪ್ರತೀಕವಾಗಿ ಶಿವನ ದೇಹವನ್ನು ಅಲಂಕರಿಸಿದೆ. ಆತ್ಮಕ್ಕೆ ಸಾವಿಲ್ಲ ಎನ್ನುವುದನ್ನೇ ಇದು ಸಾರಿ ಹೇಳುತ್ತದೆ. ಇದೂ ಅಲ್ಲದೆ ಎಲ್ಲರೂ ಕೊನೆಗೊಂದು ದಿನ ಭೂದಿಯಾಗುವವರೇ ಎಂಬುದನ್ನೂ ಇದು ಹೇಳುತ್ತದೆ.
ಹುಲಿಯ ಚರ್ಮ:
ಶಿವನನ್ನು ಹುಲಿಯ ಚರ್ಮದ ಮೇಲೆ ಆಸೀನನಾಗಿರುವುದನ್ನು ನಾವು ನೋಡುತ್ತೇವೆ. ಹುಲಿ,ಶಕ್ತಿದೇವಿಯ ವಾಹನವಾಗಿದೆ. ಆದರೆ ಶಿವ ಶಕ್ತಿಯ ಪರಮಾತ್ಮ. ಶಕ್ತಿಯನ್ನೂ ಮೀರಿದ ಅಗಾಧತೆ ಶಿವನಲ್ಲಿ ಮೇಳೈಸಿದೆ ಎನ್ನುವುದೇ ಇದರರ್ಥ. ಹುಲಿ ಕಾಮವನ್ನು ಪ್ರತಿನಿಧಿಸುವಾದರಿಂದ ಶಿವ ಕಾಮವನ್ನೂ ಜಯಿಸಿದ ಅಗಾಧ ಪುರುಷ ಎಂಬುದನ್ನು ಇದು ಬಿಂಬಿಸುತ್ತದೆ. ಕಾಮವ ಮೆಟ್ಟಿ ನಿಂತರೆ ಮಾತ್ರ ಸಾಧುವಾಗಲು ಸಾಧ್ಯ ಎಂಬುದನ್ನು ಇಲ್ಲಿ ಹೇಳಲಾಗಿದೆ.
ಹಾರವಾಗಿರುವ ರುದ್ರಾಕ್ಷಿ:
“ರುದ್ರ” ಶಿವನ ಇನ್ನೊಂದು ಹೆಸರು ಹಾಗೆಯೇ “ಅಕ್ಷ” ಎಂದರೆ ಕಣ್ಣು ಎಂದರ್ಥ. ರುದ್ರಾಕ್ಷವನ್ನು ಧರಿಸಿರುವ ಶಿವ ಲೋಕದ ಆಗು ಹೋಗುಗಳನ್ನು ಮತ್ತು ವ್ಯವಸ್ಥೆಯನ್ನು ಸರಿಯಾಗಿಟ್ಟುಕೊಳ್ಳುತ್ತಾನೆ ಎಂಬುದೇ ಇದರರ್ಥ.
ಆನೆ ಮತ್ತು ಜಿಂಕೆಯ ಚರ್ಮ :
ಇನ್ನೊಂದನ್ನು ನೀವು ಗಮನಿಸಿರಬಹುದು, ಶಿವ ಆನೆ ಮತ್ತು ಜಿಂಕೆಯ ಚರ್ಮವನ್ನೂ ಧರಿಸಿರುತ್ತಾನೆ. ಆನೆಯ ಚರ್ಮ ಹಮ್ಮು ಬಿಮ್ಮನ್ನು ಪ್ರತಿನಿಧಿಸುತ್ತದೆ, ಇದನ್ನು ಶಿವ ಧರಿಸಿರುವುದರ ಅರ್ಥ ಶಿವ ಹಮ್ಮು, ಅಹಂ ಅನ್ನು ತೊರೆದಿದ್ದಾನೆ ಎಂದಾಗಿದೆ. ಅದೇ ರೀತಿ ಜಿಂಕೆಯ ಚರ್ಮ ಮನುಷ್ಯನ ಕಂಪಿಸುತ್ತಿರುವ ಮನವನ್ನು ಪ್ರತಿನಿಧಿಸುತ್ತದೆ, ಇದನ್ನು ಧರಿಸಿರುವ ಶಿವನ ಮನಸ್ಸು ಚಂಚಲವಲ್ಲದ ಸ್ಥಿರವಾದ ಮನಸ್ಸು ಎಂಬುದನ್ನು ಇದು ತಿಳಿಸುತ್ತದೆ.
ಢಮರು :
ಢಮರು..ಎರಡು ತುದಿಯನ್ನು ಹೊಂದಿರುವ ಮಧ್ಯದಲ್ಲಿ ಸಣ್ಣ ದಾರವಿರುವ ಮತ್ತು ಅದನ್ನು ಅಲ್ಲಾಡಿಸಿದಾಗ ಎರಡೂ ತುದಿಯನ್ನು ಬಡಿದು ಸದ್ದುಂಟು ಮಾಡುವ ಒಂದು ಸಾಧನ. ಇದು ಸ್ಪಷ್ಟತೆ ಮತ್ತು ಅಸ್ಪಷ್ಟತೆಯನ್ನು ಪ್ರತಿಬಿಂಬಿಸುವ ಸಾಧನವಾಗಿದೆ. ಢಮರನ್ನು ಬಡಿದಾಗ ಒಂದು ಶಬ್ಧ ಹೊಮ್ಮುತ್ತದೆ ಅದನ್ನೇ “ನಾದ” ಎನ್ನಬಹುದು, ಅದು ಹೊರ ಹಾಕುವ ನಾದವೇ “ಓಂ”. ಓಂ ನಾದವು ಧ್ಯಾನದ ಮೂಲ ಸಾಧನವಾಗುತ್ತದೆಯಲ್ಲ ಅದನ್ನೇ ಈ ಢಮರು ಪ್ರತಿನಿಧಿಸುತ್ತದೆ.
ತ್ರಿಶೂಲ:
ತ್ರಿಶೂಲ ಶಿವನ ಮೂರು ಶಕ್ತಿಯನ್ನು ಜೋಡಿಸಿರುವ ಸಾಧನವಾಗಿ ಹೇಳಬಹುದು. ಅವೆಂದರೆ, ಗುರಿ ಜ್ಞಾನ ಮತ್ತು ಕ್ರಮ.ದುಷ್ಟ ಶಕ್ತಿಗಳ ದಮನದ ಸಾಧನ ಕೂಡ ಈ ತ್ರಿಶೂಲವಾಗಿದೆ.


ಇನ್ನು ಶಿವರಾತ್ರಿಯ ಬಗ್ಗೆ ಹೇಳುವುದಾದರೆ ಶಿವರಾತ್ರಿ ಶಿವ ಪಾರ್ವತಿಯರ ವಿವಾಹ ಮಹೋತ್ಸವ ದಿನ ಎಂಬ ಮತ್ತೊಂದು ನಂಬಿಕೆಯುಂಟು. ದೇವತೆಗಳು ಮತ್ತು ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಹೊರಹೊಮ್ಮಿ ಬಂದಾಗ ಅದನ್ನು ಶಿವ ಕುಡಿದು ಕಂಠದಲ್ಲಿಟ್ಟುಕೊಂಡ ದಿನವೂ ಶಿವರಾತ್ರಿ ಎಂಬ ನಂಬಿಕೆ. ಶಿವ ರುದ್ರ ತಾಂಡವ ಮಾಡಿದ ದಿನವೇ ಶಿವರಾತ್ರಿ ಎಂಬ ವಿಶ್ವಾಸ. ಭಗೀರಥನ ಪ್ರಯತ್ನಕ್ಕೆ ಮೆಚ್ಚಿ ಶಿವನು ಗಂಗೆಯನ್ನು ಭೂಮಿಗೆ ಹರಿಸಿದ್ದು ಶಿವರಾತ್ರಿ ಎಂದು ಪುರಾಣ ಹೇಳುತ್ತದೆ. ಶಿವನು ಲಿಂಗರೂಪದಿಂದ ನೆಲೆಗೊಂಡು ಭಕ್ತರನ್ನು ಆಶೀರ್ವದಿಸಿರುವುದು ಶಿವರಾತ್ರಿ ದಿನದಂದೆ. ಶಿವನ ಆದಿ ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ ಭೂಮಿಗೂ ಆಕಾಶಕ್ಕೂ ಶಿವನು ಲಿಂಗರೂಪದಿಂದ ಗೋಚರಿಸಿದ್ದು ಮಹಾಶಿವರಾತ್ರಿ ದಿನ ಎಂಬ ಪ್ರತೀತಿ ಉಂಟು. ಶಿವ ತಪಸ್ಸು, ಶಿವಕರ್ಮ, ಶಿವಜಪ, ಶಿವಧ್ಯಾನ ಮತ್ತು ಶಿವಜ್ಞಾನ ಎಂಬ ಪಂಚಯಜ್ಞಗಳ ಮೂಲಕ ಶಿವಕಾರುಣ್ಯಕ್ಕೆ ಒಳಗಾಗಬೇಕೆಂದು ಹಿರಿಯರು ಹೇಳಿದ್ದಾರೆ.
ಶಿವನ ರೂಪ ಮನುಷ್ಯನ ವ್ಯಕ್ತಿತ್ವವ ರೂಪಿಸುವ ಒಂದು ವಿಶ್ವವಿದ್ಯಾನಿಲಯವೇ ಸರಿ ಎಂದು ನನಗನ್ನಿಸುತ್ತದೆ. ಶಿವರಾತ್ರಿಯ ಸಂಭ್ರಮದಿ ಶಿವನರಸಿ ಹೊರಡೋಣ. “ನಾನು” ಎನ್ನುವುದು ನಮ್ಮೊಳಗಿನ ಶಕ್ತಿಯ ತುಳಿದು ಕೂತಾಗ ನಮ್ಮೊಳಗಿನ ಶಿವ ಜಾಗ್ರತವಾಗಲಿ. ಶಿವತತ್ವ ನಮ್ಮನ್ನಾವರಿಸಿ ಸಾಧಕರಾಗೋಣ..ಸರ್ವರಿಗೂ ಶಿವರಾತ್ರಿಯ ಶುಭಾಶಯಗಳು.

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!