ಅಂಕಣ

ಅತ್ತ ಆಯವ್ಯಯ ಲೆಕ್ಕ, ಇತ್ತ ತೆ(ಹೊ)ಗಳಿಕೆ ಪಕ್ಕಾ!

ಪಂಚ ರಾಜ್ಯಗಳ ಚುನಾವಣೆ ಬಿ.ಜೆ.ಪಿ ಪಾಲಿಗೆ ಸಿಹಿ ಪಂಚಕಜ್ಜಾಯ ಆಗಲೇಬಾರದೆಂದು ನಿರ್ಧರಿಸಿದ ವಿಪಕ್ಷಗಳು ಕೇಂದ್ರ ಬಜೆಟ್ ಮಂಡನೆಯ ಪ್ಲ್ಯಾನನ್ನೇ ಪಂಚರ್ ಮಾಡಲು ಪ್ರಯತ್ನಿಸಿದವು. ಕೊನೆಗೆ ಅವರ ತಂತ್ರಗಳೇ ಪಂಚರ್ ಆಗಿ ಮುಖಭಂಗ ಅನುಭವಿಸಬೇಕಾಯಿತು. ಅಷ್ಟರಲ್ಲಾಗಲೇ, ಪ್ರಮುಖ(??) ವಿರೋಧ ಪಕ್ಷವೊಂದು ಪಂಚರ್ ಆದ ಸೈಕಲ್ ಮೇಲೆ ಡಬಲ್ ರೈಡ್ ಮಾಡಲು ಹೊರಟಿದ್ದು ಆ ಮೂಲಕವಾದರೂ ಗೆಲುವಿನ ಗುರಿ ತಲುಪಬೇಕೆನ್ನುವ ಪ್ರಯತ್ನದಲ್ಲಿದೆ. ‘ಚರ್ಮದ ಚೀಲ’ಕ್ಕೆ ಅದೆಷ್ಟೇ ಕೊಕ್ಕೆ ಹಾಕಿ ಹಿಂದಕ್ಕೆ ಜಗ್ಗಿ, ಬಜೆಟ್’ ಮಂಡನೆಯನ್ನು ಮುಂದೂಡಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಈ ಬಗ್ಗೆ ರಾಹುಲ್ ಗಾಂಧಿಯವರ ವೀರಾವೇಶವೆಲ್ಲ ಜುಬ್ಬಾದ ಹರಿದ ಕಿಸೆಯ ಮೂಲಕ ಹರಿದು ಮೋರಿ ಸೇರಿತಷ್ಟೇ!

ಆಯವ್ಯಯವೇನೊ ತರಾತುರಿಯಲ್ಲಿ ಮಂಡನೆಯಾಯಿತು. ಈ ಬಾರಿ ರೈಲ್ ಬಿಡಲೆಂದೇ ಪ್ರತ್ಯೇಕ ಬಜೆಟ್ ಇಲ್ಲದ ಕಾರಣ ಎರಡೆರಡು ಸೆಟ್ ಬಜೆಟ್ ವಿಮರ್ಶಾ ಲೇಖನ,  ಪ್ಯಾನೆಲ್ ಡಿಸ್ಕಷನ್, ಪ್ರತ್ಯೇಕ ಹೇಳಿಕೆ ಹಾಗೂ ತಮ್ಮ ಮೂಗಿನ ನೇರಕ್ಕೆ ಮಾಡುವ ವಿಶ್ಲೇಷಣೆಗಳ ಭಾರದಿಂದ ಜನರಿಗೆ ವಿಮುಕ್ತಿ ಸಿಕ್ಕಿತು. ಹಾಗಾಗಿ ಈ ಬಾರಿಯದ್ದು ನಿಜಾರ್ಥದಲ್ಲಿ ಜನರ ಮೇಲಿದ್ದ ಭಾರವನ್ನು ಇಳಿಸಿದ ಬಜೆಟ್. ಇಷ್ಟು ಬಾರಿ ಕೇವಲ ಕರ ಭಾರವನ್ನಷ್ಟೇ ಕುಗ್ಗಿಸಲಾಗುತ್ತಿತ್ತು ಆದರೆ ಈ ಬಾರಿ ಬಜೆಟ್’ನ ಕರಕರೆಯ ಭಾರವನ್ನೂ ಕುಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ಯಶಸ್ವಿಯಾಗಿದೆ.

ಬಜೆಟ್ ಸೀಸನ್ ಬಂತೆಂದರೆ ಸಾಕು ಕೆಲವು ಸೀಸನಲ್ ಆರ್ಥಿಕ ತಜ್ಞರು, ವಿಶ್ಲೇಷಕರು ಮೊದಲ ಮಳೆಗೆ ಮೇಲೇಳುವ ಹಾತೆಗಳಂತೆ ಎಲ್ಲೆಂದರಲ್ಲಿ ಗುಂಯ್’ಗುಡುತ್ತಿರುತ್ತಾರೆ. ಒಂದಷ್ಟು ಚರ್ಚೆ, ಲೇಖನವೆಂದು ಆ ಸಮಯದಲ್ಲಿ ಮಹಾನ್ ಅರ್ಥಶಾಸ್ತ್ರಜ್ಞರಂತೆ ಬಿಟ್ಟಿ ಪೋಸು ಕೊಟ್ಟು ಮತ್ತೆ ಸದ್ದಿಲ್ಲದೆ ತಮ್ಮ ಪೂರ್ವಾಶ್ರಮಕ್ಕೆ ಮರಳುತ್ತಾರೆ. ಏರಿಕೆ, ಇಳಿಕೆಯ ಪಟ್ಟಿಯನ್ನು ಇನ್ನಿಲ್ಲದ ಆಸ್ಥೆಯಿಂದ ನೋಡಿ ಖುಷಿಪಡುವ, ತೃಪ್ತ ಭಾವ ಹೊರಹೊಮ್ಮಿಸುವ ಜನರು ತತ್ತಕ್ಷಣಕ್ಕೆ ನಿತ್ಯದ ಮಾರ್ಕೆಟ್’ನಲ್ಲಿ ಅಂಥದ್ದೇನು ಗಣನೀಯ ಬದಲಾವಣೆ ಕಾಣದೆ “ಏನೇ ಆದರೂ ನಾವ್ ರಾಗಿ ಬೀಸೋದ್ ತಪ್ಪುತ್ತಾ?” ಎಂಬ ಅಸಮಾಧಾನದ ಭಿನ್ನ ರಾಗ ತೆಗೆಯುತ್ತಾರೆ.

ಬಜೆಟ್ ಸಂಬಂಧಿ ರಾಜಕಾರಣಿಗಳ ಕೋಟ್ಸ್ ಮತ್ತು ನೋಟ್ಸ್, ಖೋಟಾ ನೋಟ್ ಇದ್ದಂತೆ. ಅಸಲಿಯಂತೆಯೇ ಕಂಡರೂ ಮೌಲ್ಯ ಶೂನ್ಯ! ಮೂರು ನಾಲ್ಕು ವರ್ಷದ ಬಜೆಟ್ ಮಂಡನೆಯನ್ನು  ನೋಡಿದ ಹಾಗೂ ಓದಿದ ಅನುಭವವುಳ್ಳವರು ಬಜೆಟ್’ನ ಕುರಿತಂತೆ ಯಾವ ರಾಜಕೀಯ ನಾಯಕರು ಏನು ಹೇಳಲಿದ್ದಾರೆ ಎಂದು ಸುಲಭವಾಗಿ ಊಹಿಸಬಹುದು. ಸುದ್ದಿ ಮನೆಯವರಂತೂ ಮುಂಚಿತವಾಗಿಯೇ ಹೇಳಿಕೆಗಳನ್ನು ಸಿದ್ಧಪಡಿಸಿಟ್ಟರೂ ಅಚ್ಚರಿಯಿಲ್ಲ. ಯಾವುದೇ ರಾಜ್ಯದ ವಿಪಕ್ಷ ಸ್ಥಾನದಲ್ಲಿರುವ ಪಕ್ಷ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದರೆ ಆ ಎರಡೂ ಪಕ್ಷಗಳ ನಾಯಕರು ರಾಜ್ಯ ಬಜೆಟ್ ಬಗ್ಗೆ ನೀಡುವ ಹೇಳಿಕೆಗಳ ಕೆಳಗಿರುವ ನಾಯಕರ ಹೆಸರನ್ನು ಪಕ್ಷವಾರು ಅದಲು ಬದಲು ಮಾಡಿದರೆ ಅದು ಕೇಂದ್ರ ಬಜೆಟ್ ಬಗ್ಗೆ ಅವರ ಅಭಿಪ್ರಾಯವಾಗುತ್ತದೆ. ಹಾಗೆಯೇ ಕೇಂದ್ರ ಬಜೆಟ್ ಬಗೆಗಿನ ಹೇಳಿಕೆ ರಾಜ್ಯ ಬಜೆಟ್’ಗೂ ಅನ್ವಯವಾಗುತ್ತದೆ.  ಬಜೆಟ್’ಲ್ಲಿ ಗಳಿಕೆಯ ಲೆಕ್ಕಾಚಾರ ಮಂಡನೆಯಾದರೆ ಇತ್ತ ರಾಜಕೀಯ ಪಕ್ಷಗಳು ಹೊಗಳಿಕೆ, ತೆಗಳಿಕೆಯ ಲೆಕ್ಕಾಚುಕ್ತಾ ಮಾಡುತ್ತವೆ. ಎಂದೂ ಅಧಿಕಾರಕ್ಕೇರದ ಪ್ರಾದೇಶಿಕ ಪಕ್ಷಗಳ ಮುಖಂಡರು ಮಾತ್ರ ಈ ವಿಷಯದಲ್ಲಿ ನತದೃಷ್ಟರೇ ಸರಿ, ಎಷ್ಟು ಒಳ್ಳೆಯ ಬಜೆಟ್ ಮಂಡನೆಯಾದರೂ ಅದನ್ನು ಪ್ರಶಂಸಿಸುವ ಅವಕಾಶವೇ ಅವರಿಗಿಲ್ಲ!!

ಓವರ್ ಡೋಸ್: ಸಂಗ್ರಹಯೋಗ್ಯವೆಂದು ಬಜೆಟ್’ನ ವಿವರಗಳಿರುವ ದಿನಪತ್ರಿಕೆಯನ್ನು ಜೋಪಾನವಾಗಿ ಎತ್ತಿಡುವ ಬಹುತೇಕರು ಮತ್ತೆಂದೂ ಅದರ ಪುಟಗಳನ್ನು ತೆರೆಯುವುದೇ ಇಲ್ಲ!

Facebook ಕಾಮೆಂಟ್ಸ್

ಲೇಖಕರ ಕುರಿತು

Sandesh H Naik

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!