ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೨ :
ಆಹ ! ಈ ಮೋಹಗಳೊ ನೇಹಗಳೊ ದಾಹಗಳೊ |
ಊಹಿಪೆಯ ಸೃಷ್ಟಿಯಲಿ ಹೃದಯಮಿಹುದೆಂದು? ||
ಹೋಹೊ ಹಾಹಾ ಎಂದು ನಮ್ಮ ಬಾಯ್ಬಿಡಿಸುವುದೆ |
ಈ ಹರಿಬದೊಳಗುಟ್ಟು – ಮಂಕುತಿಮ್ಮ || ೦೪೨ ||
ಒಮ್ಮೆ ಸುತ್ತ ನೋಡಿದರೆ, ಈ ಜಗದ ಜೀವನಾಡಿಯೆ ಅದರೊಳಗಿರುವ ಸ್ನೇಹ, ಮೋಹ, ದಾಹಾದಿತರದ ರಾಗ ಭಾವಾನುಭೂತಿಗಳ ಸಂಗಮವೆಂದು ಅನಿಸಿಬಿಡುತ್ತದೆ. ವಾಸ್ತವದಲ್ಲಿ ಸೃಷ್ಟಿಯೆಂಬ ಭೌತಿಕ ಜಡ ಸ್ವರೂಪವನ್ನು ನೋಡಿದರೆ ಅದರಲ್ಲೇನು ಉತ್ಸುಕರನ್ನಾಗಿಸುವ, ಭಾವೋದ್ರೇಕದಿಂದ ಪ್ರಚೋದಿತರನ್ನಾಗಿಸುವ ಸರಕೇನು ಇರುವಂತೆ ಕಾಣಿಸುವುದಿಲ್ಲ. ಬರಿಯ ಜಡ ಕಲ್ಲು, ಮಣ್ಣು, ಗಾಳಿ, ಆಕಾಶಗಳ ಜತೆಗೊಂದಷ್ಟು ಸಹಯೋಗದಲ್ಲಿರುವ ವ್ಯೋಮಕಾಯಗಳ ಗಣಿತವನ್ನು ಬಿಟ್ಟರೆ ಅದರಲ್ಲಿ ತೀರಾ ಆಸಕ್ತಿ ಕೆರಳಿಸುವಂತದ್ದೇನು ಇಲ್ಲ.
ಆದರೆ ಅದೆ ಸೃಷ್ಟಿಯ ಭಾಗವಾದ ಈ ಇಳೆಯಲ್ಲಿ ನೋಡಿದರೆ ಮಾತ್ರ, ಏನೆಲ್ಲಾ ರೀತಿಯ ಭಾವಲಾಸ್ಯಗಳ ಮೊಹರು ಕಾಣಿಸಿಕೊಳ್ಳುತ್ತದೆ ! ಮೊದಲಿಗೆ ವಿಶೇಷವಾದ ಜೀವ ಸಂಕುಲದ ಅಸ್ತಿತ್ವವಿರುವುದೆ ಇಲ್ಲಿ. ಆ ಜೀವಸಂಕುಲವೆಲ್ಲವನ್ನು ಕಲ್ಲುಬಂಡೆಗಳಿಂದ ವಿಭಿನ್ನವಾದುದೆಂಬುದನ್ನು ತೋರಿಸಲೊ ಎಂಬಂತೆ ಅದಕ್ಕೆ ಪರಸ್ಪರ ನಂಟು, ಸಂಬಂಧ, ಸ್ನೇಹ, ಮೋಹಗಳ ರೀತಿಯ ಲೇಪನ ಹಚ್ಚಿ ಅವುಗಳನ್ನೆಲ್ಲಾ ಯಾವುದೊ ಮಾಯಾಜಾಲದಲ್ಲಿ ಬಂಧಿಸಿಟ್ಟುಬಿಟ್ಟಿದೆ ಈ ಸೃಷ್ಟಿ. ಸಾಲದ್ದಕ್ಕೆ ಅವುಗಳಿರದೆ ಬದುಕಲೆ ಸಾಧ್ಯವಾಗದಂತೆ ಮಾಡಿ ಸದಾ ಅದಕ್ಕಾಗಿ ದಾಹದಿಂದ ತಹತಹಿಸುತ್ತಾ ಹುಡುಕಾಡುತ್ತ ಅಲೆದಾಡುವಂತೆ ಮಾಡಿಟ್ಟಿದೆ – ಅದಕ್ಕೆ ಮಿಡಿಯುವ, ಕಾತರಿಸುವ ಹೃದಯದ ಆವರಣ ಕೊಟ್ಟು.
ಆದರೆ ಇವೆಲ್ಲವು ಮಾನವ ಲೋಕದ ಅಂತಃಕರಣ ಪ್ರೇರಿತ ಸ್ವರೂಪಗಳು. ಅದರ ಜತೆಗೂಡಿದ ಇಂದ್ರೀಯಾದಿ ಪರಿಕರಗಳ ಬಳಕೆಯಲ್ಲಿ ತನಗೆ ಬೇಕಾದಂತೆ ಜಗವನ್ನು ನೋಡುವ ಹವಣಿಕೆಯವು. ಹಾಗೆಂದು ಪ್ರತಿಯೊಬ್ಬರ ಜೀವನದಲ್ಲಿ ಇಷ್ಟು ಹಾಸುಹೊಕ್ಕಾಗಿ, ಸಹಜವಾಗಿ ನೆಲೆಸಿರುವ ಇವೇ ಭಾವಲಾಸ್ಯಗಳು ಜೈವಿಕದಾಚೆಯ ಸೃಷ್ಟಿಗು ಇದೆಯೆಂದು, ಅದರಲ್ಲೂ ಇದೆ ತರಹದ ಮಿಡಿತದ ಹೃದಯವಿದೆಯೆಂದು ಹೇಳಲಾದೀತೆ? ಸೃಷ್ಟಿಯು ಕೂಡ ನಮ್ಮಂತೆಯೆ ಹೃದಯವಂತಿಕೆಯಿಂದ ವರ್ತಿಸಬೇಕೆಂದು ಬಯಸುವುದು, ಹಾಗಿರುವುದೆಂದು ಊಹಿಸುವುದು ಅಸಹಜತೆಯಾಗಿಬಿಡುತ್ತದೆ.
ಆದರೂ ನಮಗೆ ಮಾತ್ರ ಆ ಭಾವಲೋಕದ ಅನುಭೂತಿಯಿಟ್ಟ, ಅದರಲ್ಲಿ ಬಂಧಿಸಿಟ್ಟ ಮತ್ತು ಸುತ್ತಲಿನಲ್ಲು ಅದೇ ರೀತಿಯೆಂದು ಭ್ರಮಿಸುವ ರೀತಿ ಮಾಡಿರುವ ಈ ವ್ಯವಹಾರದ (ಹರಿಬದ) ಗುಟ್ಟಾದರು ಏನು ? ಎಂದರೆ – ಯಾವುದೊ ನಮಗಿನ್ನು ಗೊತ್ತಿರದ ಕಾರಣಕ್ಕೆ, ನಾವೆಲ್ಲಾ ಈ ಜೀವನ ಜಂಜಾಟದಲ್ಲಿ ಸುಖದಲ್ಲೊ, ದುಃಖದಲ್ಲೊ ಸಿಲುಕಿ ಹರ್ಷಕ್ಕೆ ‘ಹೋಹೊ’ ಎಂದು ಕೇಕೆ ಹಾಕುತ್ತಲೊ, ನೋವಿಗೆ ‘ಹಾಹಾ’ ಎಂದು ನರಳುತ್ತಲೊ, ಒಟ್ಟಾರೆ ಯಾವುದೊ ಒಂದು ಗೋಜಲಿನಲ್ಲಿ ಸಿಕ್ಕಿ ಬಾಯ್ಬಾಯ್ಬಿಡುತ್ತಾ ಅದರಲ್ಲೆ ತಲ್ಲೀನರಾಗಿರುವಂತೆ ನೋಡಿಕೊಳ್ಳಬೇಕೆಂಬುದೆ ಆ ಸೃಷ್ಟಿಯ ಆಶಯವಾಗಿದೆ.
ಈ ವ್ಯವಹಾರದಲ್ಲಿ ಭಾವಾವೇಶದ ರೀತಿಯ ಹೃದಯ ಭಾವವನ್ನು ನಿರೀಕ್ಷಿಸಲಾಗದು. ಏಕೆಂದರೆ ವ್ಯಾಪಾರದಲ್ಲಿ ಲಾಭನಷ್ಟಗಳನ್ನು ಮಾತ್ರ ನೋಡುವುದು, ಕಷ್ಟಸುಖವನ್ನಲ್ಲ. ಈ ಮಾತು ಬರಿಯ ನಿರ್ಜೀವ ಸೃಷ್ಟಿಗೆ ಮಾತ್ರವಲ್ಲದೆ ಪರಸ್ಪರ ಮಾನವ ಸಂಬಂಧಗಳಿಗು ಅನ್ವಯವಾಗುವುದು ಈ ಯುಗ, ಕಾಲಮಾನದ ದುರಂತ. ಅದನ್ನೆ ಈ ಸಾಲುಗಳ ಮೂಲಕ ಅನುರಣಿಸುತ್ತಿದ್ದಾನೆ ಮಂಕುತಿಮ್ಮ.
#ಕಗ್ಗಕೊಂದು-ಹಗ್ಗ
#ಕಗ್ಗ-ಟಿಪ್ಪಣಿ