ಡಿಸೆಂಬರ್ 26ರಂದು ಭಾರತ ತನ್ನ ಅಗ್ನಿ-5 ಎಂಬ ಹೆಸರಿನ ಕ್ಷಿಪಣಿಯ ನಾಲ್ಕನೆಯ ಪರೀಕ್ಷಾರ್ಥ ಹಾರಾಟ ನಡೆಸಿತು. ಈ ಹಿಂದೆ ಮೂರು ಬಾರಿ, 2012, 2013 ಮತ್ತು 2015ರಲ್ಲಿ ಅದೇ ಕ್ಷಿಪಣಿಯನ್ನು ಅಂತರಿಕ್ಷಕ್ಕೆ ಹಾರಿಸಿ ತಂತ್ರಜ್ಞರು ಕ್ಷಮತೆಯ ಬಗೆಗಿನ ವಿವಿಧ ಪ್ರಯೋಗಗಳನ್ನು ನಡೆಸಿದ್ದರು. ಇದೀಗ ನಾಲ್ಕನೇ ಮತ್ತು ಅಂತಿಮ ಪರೀಕ್ಷೆ ನಡೆಸಿ ಎಲ್ಲವೂ ಸರಿಯಾಗಿದೆ ಎಂದು ದೃಢೀಕರಿಸಿಕೊಂಡ ಮೇಲೆ, ಭಾರತ ಅಧಿಕೃತವಾಗಿ ತನ್ನ ಕ್ಷಿಪಣಿ ಸಂಗ್ರಹಕ್ಕೆ ಅಗ್ನಿ-5 ಅನ್ನು ಸೇರಿಸಿಕೊಳ್ಳಬಹುದಾಗಿದೆ. ಎಂದಿನಂತೆ ಈ ಕ್ಷಿಪಣಿಯನ್ನು ಕೂಡ ಅಭಿವೃದ್ಧಿಪಡಿಸಿದ್ದು ಡಿಆರ್ಡಿಓ. ಅಂದರೆ ಕನ್ನಡದಲ್ಲಿ, ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರ. ದೇಶದ ರಕ್ಷಣಾ ವ್ಯವಸ್ಥೆಗೆ ಬೇಕಾದ ಎಲ್ಲ ಬಗೆಯ ಯುದ್ಧಸಾಮಗ್ರಿಗಳನ್ನು ಅಭಿವೃದ್ಧಿಪಡಿಸುವ ಮಹತ್ತರ ಜವಾಬ್ದಾರಿ ಹೊತ್ತ ಡಿಆರ್ಡಿಓ, ಪ್ರಧಾನಿ ಮತ್ತು ರಕ್ಷಣಾ ಸಚಿವರ ನೇರ ನಿಯಂತ್ರಣಕ್ಕೊಳಪಡುವ ಸರಕಾರೀ ಸಂಸ್ಥೆ. 5000 ವಿಜ್ಞಾನಿಗಳ ಬೃಹತ್ ತಂಡವನ್ನು ಬೆನ್ನಿಗೆ ಕಟ್ಟಿಕೊಂಡಿರುವ ಈ ಸಂಸ್ಥೆಯ ವಾರ್ಷಿಕ ಬಜೆಟ್ 15,000 ಕೋಟಿ ರುಪಾಯಿಗಳನ್ನೂ ಮೀರುವಂಥಾದ್ದು. ಈಗ ಪರೀಕ್ಷೆ ನಡೆಸಿ ಎಲ್ಲವೂ ಸರಿಯಾಗಿದೆ ಎಂಬ ದೃಢೀಕರಣ ಪತ್ರ ಪಡೆದಿರುವ ಅಗ್ನಿ-5 ಡಿಆರ್ಡಿಓ ವಿಜ್ಞಾನಿಗಳ ಕನಸಿನ ಕೂಸು. ಈ ಕ್ಷಿಪಣಿಯ ಯಶಸ್ಸಿನೊಂದಿಗೆ ಡಿಆರ್ಡಿಓ ಸಂಸ್ಥೆ ಕೂಡ ಒಂದು ಹೆಮ್ಮೆಯ ಗರಿಯನ್ನು ತನ್ನ ಮುಕುಟಕ್ಕೆ ಸಿಕ್ಕಿಸಿಕೊಂಡಿದೆ ಎನ್ನಬಹುದು.
ಅಗ್ನಿ-5 ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗುತ್ತಿದ್ದಂತೆಯೇ ದೇಶದ ಸುದ್ದಿವಾಹಿನಿಗಳೆಲ್ಲ ಒಂದೇ ಸಮನೆ ಪ್ರಸಾರ ಮಾಡಲು ಶುರು ಮಾಡಿದ ಸುದ್ದಿ, ಈ ಕ್ಷಿಪಣಿಯನ್ನು ಚೀನಾದ ಮೇಲೆ ಪ್ರಯೋಗಿಸಬಹುದು ಎಂಬುದು! ಇಂಗ್ಲೀಷ್ ಮಾಧ್ಯಮದಿಂದ ಪ್ರಾರಂಭಗೊಂಡು ಸ್ಥಳೀಯ ಭಾಷೆಯ ಚಾನೆಲ್ಗಳವರೆಗೆ ಎಲ್ಲರೂ ತಮ್ಮ ಪರದೆಗಳಲ್ಲಿ ದಪ್ಪಕ್ಷರಗಳಲ್ಲಿ ತೋರಿಸುತ್ತಿದ್ದ ಸುದ್ದಿ ಅದೊಂದೇ! ಕ್ಷಿಪಣಿಯ ವಿಶೇಷಗಳನ್ನೆಲ್ಲ ಬದಿಗಿಟ್ಟು, ಇದೊಂದನ್ನು ಬಳಸಿಕೊಂಡು ನಾವು ಚೀನಾವನ್ನು ಪುಡಿಗುಟ್ಟಬಹುದು; ಸಂಪೂರ್ಣ ಭಸ್ಮ ಮಾಡಬಹುದು; ಆ ದೇಶವನ್ನು ಸುಡುಗಾಡಾಗಿಸಬಹುದು ಎಂಬ ಅತಿರೇಕದ ಸುದ್ದಿಗಳೇ ದಿನವಿಡೀ ರಾರಾಜಿಸಿದವು. ಕೆಲವರ ವರಸೆ ಹೇಗಿತ್ತೆಂದರೆ ಇಡೀ ಜಗತ್ತಿನಲ್ಲಿ ನಾವೇ ಮೊದಲ ಬಾರಿಗೆ ಇಂಥದೊಂದು ಖಂಡಾಂತರ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದ್ದೇವೆ ಎಂಬಂತಿತ್ತು! ಮಾಧ್ಯಮಗಳ ಈ ಹಾರಾಟ ಚೀರಾಟಗಳೆಲ್ಲ ಸಹಜವಾಗಿಯೇ ಚೀನಾದ ನಿದ್ದೆಗೆಡಿಸಿರಬೇಕು! ಅದು ಕೂಡಲೇ ವಿಶ್ವಸಂಸ್ಥೆಯ ಕದ ತಟ್ಟಿ, ದಕ್ಷಿಣ ಏಷ್ಯದಲ್ಲಿ ಸೂಕ್ಷ್ಮಪರಿಸ್ಥಿತಿ ಉದ್ಭವಿಸುತ್ತಿದೆ; ಭದ್ರತಾ ಮಂಡಳಿಯ ಸ್ಪಷ್ಟ ನಿರ್ದೇಶನ ಮತ್ತು ನಿರ್ಬಂಧಗಳ ನಡುವೆಯೂ ಭಾರತಕ್ಕೆ ಖಂಡಾಂತರ ಕ್ಷಿಪಣಿಯ ಪರೀಕ್ಷೆ ಮಾಡಲು ಅನುಮತಿ ಕೊಟ್ಟವರಾರು ಎಂಬ ಕ್ಯಾತೆ ತೆಗೆಯಿತು. ಅದೇ ವಿಷಯವನ್ನು ಅದು ಮುಂದಿನ ವಿಶ್ವಸಂಸ್ಥೆ ಕಲಾಪದಲ್ಲಿ ಕೂಡ ಎತ್ತುವ ಸಾಧ್ಯತೆ ಇದೀಗ ದಟ್ಟವಾಗಿದೆ. ಮಾಧ್ಯಮಗಳ ವೃಥಾ ಸಂಭ್ರಮದ ಹಾರಾಟ ಕೊನೆಗೆ ದೇಶವನ್ನು ವಿಶ್ವಸಂಸ್ಥೆಯ ಕಾನೂನಿನ ಅಡಕತ್ತರಿಗೆ ಸಿಕ್ಕಿಸಿದರೂ ಆಶ್ಚರ್ಯವಿಲ್ಲ.
ಇಷ್ಟಕ್ಕೂ ನಡೆದದ್ದೇನು? ಅಗ್ನಿ-5 ಕ್ಷಿಪಣಿ, ಹಾರಿಬಿಟ್ಟ ಸ್ಥಳದಿಂದ ಮೇಲಕ್ಕೆ ಚಿಮ್ಮಿ ಸುಮಾರು 5000 ಕಿಲೋಮೀಟರ್ ದೂರದಲ್ಲಿರುವ ಗುರಿಯತ್ತ ಬೀಳಬಲ್ಲುದು. ಈ ಅಂತರವನ್ನು ಕ್ಷಿಪಣಿಯ ವ್ಯಾಪ್ತಿ ಎನ್ನುತ್ತಾರೆ. ಅಗ್ನಿ ಸರಣಿಯ ಈ ಹಿಂದಿನ ಕ್ಷಿಪಣಿಗಳಿಗೆ ಇಷ್ಟೊಂದು ದೂರಕ್ಕೆ ಹಾರುವ ಸಾಮಥ್ರ್ಯ ಇರಲಿಲ್ಲ. ಉದಾಹರಣೆಗೆ, ಅಗ್ನಿ-1 ಕ್ಷಿಪಣಿ ಕೇವಲ 700 ಕಿಲೋಮೀಟರ್ ಮಾತ್ರ ಹಾರಾಡಬಲ್ಲುದು. ಅಗ್ನಿ-2 ಅನ್ನು ಅಭಿವೃದ್ಧಿ ಪಡಿಸುವ ಹೊತ್ತಿಗೆ ಕ್ಷಿಪಣಿಗಳು ತಮ್ಮ ವ್ಯಾಪ್ತಿಯನ್ನು ಮೂರು ಪಟ್ಟು ಹೆಚ್ಚಿಸಿಕೊಂಡವು. ಅಗ್ನಿ-3 ಇನ್ನಷ್ಟು ದೂರಕ್ಕೆ ಹಾರಬಲ್ಲ ಸಾಮರ್ಥ್ಯ ಗಳಿಸಿಕೊಂಡು, ವ್ಯಾಪ್ತಿಯನ್ನು 3000 ಕಿಲೋಮೀಟರ್ಗಳಿಗೆ ಹಿಗ್ಗಿಸಿಕೊಂಡಿತು. ಈ ಹಿಂದಿನ ಅಗ್ನಿ ಸರಣಿಯ ಕ್ಷಿಪಣಿಗಳೆಲ್ಲ ಕನಿಷ್ಠ 1 ಟನ್ ತೂಕದ ಸಿಡತಲೆಗಳನ್ನು ತಮ್ಮ ಜೊತೆ ಹೊತ್ತೊಯ್ಯಬಲ್ಲವು. ಈ ಸಿಡಿತಲೆ ಮದ್ದುಗುಂಡಾಗಿರಬಹುದು; ಪರಮಾಣು ಅಸ್ತ್ರ ಕೂಡ ಆಗಿರಬಹುದು. ಆದರೆ ಪರಮಾಣು ಅಸ್ತ್ರವನ್ನು ಹೊತ್ತೊಯ್ಯುವ ಸಾಮರ್ಥ್ಯವಿದ್ದರೂ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳದೇ ಇದ್ದರೆ ಅದರಿಂದ ಏನೂ ಪ್ರಯೋಜನವಿಲ್ಲ. ನಮ್ಮ ದೇಶದ ಗಡಿಯ ಅಕ್ಕಪಕ್ಕದಲ್ಲೇ ಆ ಅಸ್ತ್ರವನ್ನು ಸಿಡಿಸಿಕೊಂಡು ಪ್ರಯೋಜನವೇನು! ಹಾಗಾಗಿ ವಿಜ್ಞಾನಿಗಳು ಅಗ್ನಿ ಕ್ಷಿಪಣಿಗಳ ಹಾರಾಟದ ಸಾಮರ್ಥ್ಯವನ್ನು ಹೆಚ್ಚಿಸುವ ಕಡೆಗೆ ಹೆಚ್ಚಿನ ಒತ್ತು ಕೊಟ್ಟಿದ್ದರು. ಸಂಶೋಧನೆಯ ದಾರಿಯಲ್ಲಿ ಒಂದೊಂದೇ ಪುಟ್ಟ ಹೆಜ್ಜೆಗಳನ್ನು ಇಡುತ್ತ ಮುಂದುವರಿದು ಇದೀಗ 5000 ಕಿಲೋಮೀಟರ್ ವ್ಯಾಪ್ತಿ ಇರುವ ಕ್ಷಿಪಣಿಯನ್ನು ಅಭಿವೃದ್ಧಿಗೊಳಿಸುವ ಹಂತಕ್ಕೆ ಬಂದಿದ್ದೇವೆ.
ಅಗ್ನಿ-5 ಭಾರತ ಕಂಡಿರುವ ಇದುವರೆಗಿನ ಅತ್ಯಂತ ಹೆಚ್ಚಿನ ವ್ಯಾಪ್ತಿಯುಳ್ಳ ಕ್ಷಿಪಣಿ ಮಾತ್ರವಲ್ಲ; ಅತ್ಯಂತ ವೇಗದ ಕ್ಷಿಪಣಿಯೂ ಕೂಡ. ಶಬ್ದಕ್ಕಿಂತ ಇಪ್ಪತ್ತನಾಲ್ಕು ಪಟ್ಟು ಹೆಚ್ಚು ವೇಗದಲ್ಲಿ ಓಡಬಲ್ಲ ಅಗ್ನಿ-5, ಒಟ್ಟು 5000 ಕಿಲೋಮೀಟರ್ಗಳನ್ನು 15 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಕ್ರಮಿಸಬಲ್ಲುದು. ಅಂದರೆ ಕನ್ಯಾಕುಮಾರಿಯಿಂದ ಚೀನಾದ ಶಾಂಘಾಯ್ ನಗರಕ್ಕೆ ಪಯಣಿಸಲು ಇದಕ್ಕೆ ಇಪ್ಪತ್ತು ನಿಮಿಷವೂ ಬೇಕಾಗಿಲ್ಲ! ಇಂತಹ ಅಸಾಧ್ಯ ಅಪರಿಮಿತ ಊಹಿಸಲಸಾಧ್ಯವಾದ ವೇಗದಲ್ಲಿ ಓಡಬಲ್ಲ ಅಗ್ನಿ ತನ್ನೊಂದಿಗೆ 1500 ಕೆಜಿ ಭಾರದ ಮದ್ದುಗುಂಡನ್ನೂ ಒಯ್ಯಬಲ್ಲುದು. ಒಂದಲ್ಲ ಹಲವು ಸಿಡಿತಲೆಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡು, ಗಮ್ಯ ಬಂದಾಗ, ನಿರ್ದಿಷ್ಟ ಜಾಗಕ್ಕೆ ಗುರಿ ಇಟ್ಟು ಎಸೆಯಬಲ್ಲುದು. 1985ರ ದಶಕದಲ್ಲಿ ಭಾರತದಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಬೇಕೆಂದಾಗ ವಿದೇಶಗಳ ನೆರವು ದೊಡ್ಡ ಪ್ರಮಾಣದಲ್ಲೇನೂ ಸಿಗಲಿಲ್ಲ. ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಮೇಲಿಂದ ಮೇಲೆ ಅಭಿವೃದ್ಧಿಪಡಿಸುತ್ತಿದ್ದ ಅಮೆರಿಕಾ, ರಷ್ಯ ಮತ್ತು ಚೀನಾ ಈ ವಿಷಯದಲ್ಲಿ ಮೂರನೇ ರಾಷ್ಟ್ರಕ್ಕೆ ತಮ್ಮ ತಂತ್ರಜ್ಞಾನವನ್ನು ಮಾರಲು ಬಿಲ್ಕುಲ್ ತಯಾರಿರಲಿಲ್ಲ. ಆದರೆ ಆ ಅವಮಾನವನ್ನೇ ಸವಾಲಾಗಿ ತೆಗೆದುಕೊಂಡ ನಮ್ಮ ದೇಶದ ವಿಜ್ಞಾನಿಗಳು, ತಂತ್ರಜ್ಞಾನಿಗಳು ಬೇಕಾದ ಸಂಗತಿಗಳನ್ನೆಲ್ಲ ಸಂಪೂರ್ಣವಾಗಿ ಸ್ವದೇಶೀಯವಾಗಿಯೇ ನಿರ್ಮಿಸಿಕೊಂಡು ಕ್ಷಿಪಣಿಗಳನ್ನು ಕಟ್ಟತೊಡಗಿದರು. ಇದೀಗ ಅಗ್ನಿ-5ರಲ್ಲಿ, ಶೇ.85ರಷ್ಟು ಅಂಶಗಳು ಸ್ವದೇಶಿಯೇ ಆಗಿವೆ ಎಂಬುದು ನಿಜವಾಗಿ ನಾವೆಲ್ಲ ಹೆಮ್ಮೆ ಪಡಬೇಕಾದ ಸಂಗತಿ.
ಬ್ಯಾಲಿಸ್ಟಿಕ್ ಕ್ಷಿಪಣಿ: ಏನಿದರ ವೈಶಿಷ್ಟ್ಯ?
ಅಂದ ಹಾಗೆ, ಈ ಬ್ಯಾಲಿಸ್ಟಿಕ್ ಎಂದರೇನು? ಇದನ್ನು ಅರ್ಥ ಮಾಡಿಕೊಳ್ಳಲು ನಾವು ಬಾಸ್ಕೆಟ್ಬಾಲ್ ಪಂದ್ಯವನ್ನು ಊಹಿಸಿಕೊಳ್ಳಬಹುದು. ಅದರಲ್ಲಿ ಪಂದ್ಯ ಆಡುವ ಆಟಗಾರರು ಅಂಕಣದ ವಿರುದ್ಧ ದಿಕ್ಕುಗಳಲ್ಲಿರುವ ರಿಂಗ್’ಗಳ ಒಳಗೆ ಚೆಂಡನ್ನು ಹಾಯಿಸಬೇಕು ತಾನೆ? ಹಾಗೆ ಹಾಯಿಸಬೇಕಾದರೆ ಅವರು ಚೆಂಡನ್ನು ಗಾಳಿಯಲ್ಲಿ ಮೇಲಕ್ಕೆಸೆಯುತ್ತಾರೆ. ಅದು ಗಾಳಿಯಲ್ಲಿ ಬಿಲ್ಲಿನಾಕಾರದ ದಾರಿಯಲ್ಲಿ ಸಾಗಿ ಕೊನೆಗೆ ನೆಲಕ್ಕೋ ಇನ್ನೊಬ್ಬರ ಕೈಗೋ ರಿಂಗ್ ಒಳಗೋ ಬೀಳುತ್ತದೆ. ಕ್ರಿಕೆಟ್ ಮೈದಾನದಲ್ಲಿ ಪೆವಿಲಿಯನ್ ಹತ್ತಿರ ನಿಂತ ಫೀಲ್ಡರ್ ಚೆಂಡನ್ನು ಪಿಚ್ ಕಡೆ ಎಸೆಯಬೇಕಾದರೂ ಹೀಗೇ ಆಗುತ್ತದೆ. ಚೆಂಡು ಎಲ್ಲಿ ಯಾವ ನಿರ್ದಿಷ್ಟ ಸ್ಥಳವನ್ನು ತಲುಪಬೇಕೆಂದು ಮೊದಲೇ ಊಹಿಸಿಕೊಂಡು ಅದಕ್ಕೆ ತಕ್ಕಂತೆ ಅದನ್ನು ಯಾವ ಕೋನದಲ್ಲಿ ಎಷ್ಟು ವೇಗದಲ್ಲಿ ಎಸೆಯಬೇಕೆಂದು ನಿರ್ಧರಿಸುತ್ತೇವೆ. ಹಾಗೆಲ್ಲ ನಿರ್ಧರಿಸುವುದಕ್ಕೆ ಮೈದಾನದಲ್ಲಿ ಪೇಪರು ಪೆನ್ನು ಹಿಡಿಯುವುದಿಲ್ಲವಾದರೂ ನಮ್ಮ ಮಿದುಳು ಹಿಂದೆ ಕಲಿತ ಅನುಭವದ ಆಧಾರದಲ್ಲಿ ಅಂಥದೊಂದು ಸಂಕೀರ್ಣ ಲೆಕ್ಕವನ್ನು ಚಕಚಕನೆ ಮಾಡಿ ಕೈಗಳಿಗೆ ನಿರ್ದೇಶನ ಕೊಟ್ಟುಬಿಡುತ್ತದೆ. ನಾವು ಮೇಲಕ್ಕೆ ಎಸೆದ ಚೆಂಡು ಬಾಗು ದಾರಿಯಲ್ಲಿ ಮೇಲಕ್ಕೆ ಹೋಗಿ ಒಂದು ಬಿಂದುವನ್ನು ತಲುಪಿದ ಮೇಲೆ ತನ್ನ ದಿಕ್ಕನ್ನು ಬದಲಾಯಿಸಿಕೊಂಡು ಕೆಳಮುಖವಾಗಿ ಬೀಳುತ್ತದೆ. ಹಾಗೆ ಅದು ಪ್ಯಾರಾಬೊಲಿಕ್ ದಾರಿಯಲ್ಲಿ ಹಾದುಹೋಗಲು ಕಾರಣ ಭೂಮಿಯ ಗುರುತ್ವ. ಇಲ್ಲಿ ಚೆಂಡಿನ ಹಾರಾಟಕ್ಕೆ ಬೇಕಾದ ಅರ್ಧಶಕ್ತಿಯನ್ನು ಮಾತ್ರ ನಾವು ಕೊಡುತ್ತೇವೆ. ಒಂದು ಉನ್ನತ ಬಿಂದು ತಲುಪಿದ ಮೇಲೆ ಚೆಂಡು ತನ್ನ ಮುಂದಿನ ಅರ್ಧದಾರಿಯನ್ನು ಸಾಗಲು ಭೂಮಿಯ ಗುರುತ್ವದ ಬಲವನ್ನು ಬಳಸಿಕೊಳ್ಳುತ್ತದೆ. ಭೂಮಿಯ ಗುರುತ್ವವನ್ನು ಬಳಸಿಕೊಂಡು ವಸ್ತುವಿನ ಚಲನೆಯನ್ನು ನಿರ್ದೇಶಿಸುವ, ನಿಯಂತ್ರಿಸುವ ಬಗೆ ಹೇಗೆಂದು ಅಧ್ಯಯನ ಮಾಡುವ ವಿಜ್ಞಾನಶಾಖೆಯೇ ಬ್ಯಾಲಿಸ್ಟಿಕ್ಸ್ (ಉತ್ಕ್ಷೇಪನ ಶಾಸ್ತ್ರ).
ಚೆಂಡಿನ ಬದಲು ಈಗ ಒಂದು ಕ್ಷಿಪಣಿಯನ್ನು ಊಹಿಸಿಕೊಳ್ಳಿ. ಅದನ್ನು ವಿಮಾನದಂತೆ ಭೂತಲಕ್ಕೆ ಸಮಾಂತರವಾಗಿ ಹಾರಿಸುವುದನ್ನು ಬಿಟ್ಟು ಮೇಲಕ್ಕೆ ಹಾರಿಸಿ, ಅದು ಒಂದು ಉನ್ನತ ಬಿಂದು ತಲುಪಿ ಅಲ್ಲಿಂದ ಮುಂದಕ್ಕೆ ಗುರುತ್ವ ಬಲದಿಂದ ಕೆಳಗಿಳಿಯುತ್ತ ಬಂದು ನಿರ್ದಿಷ್ಟ ವಸ್ತು/ಪ್ರದೇಶದ ಮೇಲೆ ಬೀಳುವಂತೆ ಮಾಡುವ ತಂತ್ರವನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗಳಲ್ಲಿ ಬಳಸುತ್ತಾರೆ. ಕ್ಷಿಪಣಿಯ ವ್ಯಾಪ್ತಿ ಹೆಚ್ಚಿದಂತೆ ಅದು ಹಾರುವ ಎತ್ತರವೂ ಹೆಚ್ಚಬೇಕಾದ್ದು ಗಣಿತೀಯ ಅನಿವಾರ್ಯತೆ. 5500 ಕಿಲೋಮೀಟರ್ಗಿಂತ ಮಿಗಿಲಾದ ವ್ಯಾಪ್ತಿ ಇರುವ ಕ್ಷಿಪಣಿಗಳನ್ನು ಖಂಡಾಂತರ ಕ್ಷಿಪಣಿ ಎನ್ನುತ್ತಾರೆ. ಒಂದು ಕ್ಷಿಪಣಿಯ ವ್ಯಾಪ್ತಿ ಇಷ್ಟು ಅಗಾಧವಾಗಿರಬೇಕಾದರೆ ಅದನ್ನು ಭೂಮಿಯ ವಾಯುಮಂಡಲವನ್ನೂ ಮೀರಿ ಹೋಗುವಷ್ಟು ಎತ್ತರಕ್ಕೆ ಹಾರಿಸಬೇಕಾಗುತ್ತದೆ. ಒಂದು ಕ್ಷಿಪಣಿ ಎಷ್ಟು ಎತ್ತರಕ್ಕೆ ಹೋಗಿದೆ ಎಂಬ ವಿವರ ಸಿಕ್ಕರೆ ಅದು ಗರಿಷ್ಠ ಎಷ್ಟು ದೂರಕ್ಕೆ ಹೋಗಿ ಬೀಳಬಲ್ಲುದೆಂದು ಲೆಕ್ಕ ಹಾಕಬಹುದು. ಹೀಗೆ ಉತ್ಕ್ಷೇಪಿತ (ಅಥವಾ ಬಾಗು ದಾರಿಯ) ಕ್ಷಿಪಣಿಗಳನ್ನು ಮೊತ್ತಮೊದಲ ಬಾರಿಗೆ ಬಳಸಿದವನು ನಾಝಿ ಪಡೆಯ ಹಿಟ್ಲರ್, ಎರಡನೇ ಮಹಾಯುದ್ಧದಲ್ಲಿ (ಅವನಿಗಿಂತ ಬಹಳ ಮೊದಲು ಅರ್ಕಿಮಿಡೀಸ್, ಸಿರಾಕ್ಯೂಸ್ ದ್ವೀಪದಲ್ಲಿ ಯಂತ್ರಗಳನ್ನು ಬಳಸಿಕೊಂಡು ಶತ್ರುಹಡಗುಗಳ ಮೇಲೆ ಕಲ್ಲುಗುಂಡುಗಳನ್ನು ಪ್ಯಾರಾಬೊಲಿಕ್ ಪಥದಲ್ಲಿ ಎಸೆದದ್ದುಂಟು). ಹಿಟ್ಲರ್ ಪ್ರಯೋಗಿಸುತ್ತಿದ್ದ ಎ-4 ಹೆಸರಿನ ಕ್ಷಿಪಣಿಗಳು 320 ಕಿಲೋಮೀಟರ್ ದೂರ ಹಾರುವ ಸಾಮಥ್ರ್ಯ ಹೊಂದಿದ್ದವು. ಇಂದಿನ ಆಧುನಿಕ ಯುದ್ಧಾಸ್ತ್ರಗಳಿಗೆ ಹೋಲಿಸಿದರೆ ಅದು ಬಾಲನಡೆಯೇ ಬಿಡಿ. ಅಲ್ಲದೆ ಆ ಕ್ಷಿಪಣಿಗಳನ್ನು ಇಂತಹ ದಿಕ್ಕಲ್ಲೇ ಹೋಗಬೇಕೆಂದೂ ಇಂತಹ ನಿರ್ದಿಷ್ಟ ಗುರಿಯ ಮೇಲೆಯೇ ಬೀಳಬೇಕೆಂದು ನಿರ್ದೇಶಿಸುವ ತಂತ್ರಜ್ಞಾನ ಆಗ ಇರಲಿಲ್ಲವಲ್ಲ? ಹಾಗಾಗಿ ನಾಝಿಗಳು ಉಡಾಯಿಸುತ್ತಿದ್ದ ಕ್ಷಿಪಣಿಗಳಲ್ಲಿ ಬಹುತೇಕ ಎಲ್ಲೆಲ್ಲೋ ಬಿದ್ದು ವ್ಯರ್ಥವಾಗುತ್ತಿದ್ದದ್ದೇ ಹೆಚ್ಚು. ಈಗ ಅವುಗಳನ್ನು ಸಾವಿರಾರು ಕಿಲೋಮೀಟರ್ ದೂರಕ್ಕೆ ಕಳಿಸಿಯೂ ಅರ್ಧ ಕಿಲೋಮೀಟರ್ಗಿಂತ ಕಡಿಮೆ ವ್ಯಾಸದ ಜಾಗದೊಳಗೆ ಬೀಳುವಂತೆ ಮಾಡಬಹುದು. ಒಂದು ರೀತಿಯಲ್ಲಿ ಇದು ಯಶವಂತಪುರದಲ್ಲಿ ನಿಂತು ಬಸವನಗುಡಿಯಲ್ಲಿ ಕಟ್ಟಿದ ರಿಂಗ್ ಒಳಗೆ ಬಾಸ್ಕೆಟ್ಬಾಲ್ ಅನ್ನು ಹಾಯಿಸಿದಂತೆ.
ಕ್ಷಿಪಣಿಗಳಲ್ಲಿ ಮುಖ್ಯವಾಗಿ ಎರಡು ವಿಧ. ವಿಮಾನದಂತೆ ಭೂಮಿಗೆ ಸಮಾಂತರವಾಗಿ ಹೋಗುವ ಕ್ರೂಸ್ ಕ್ಷಿಪಣಿ, ಕಾಮನಬಿಲ್ಲಿನಂತೆ ಬಾಗಿಕೊಂಡು ಸಾಗುವ ಬ್ಯಾಲಿಸ್ಟಿಕ್ ಕ್ಷಿಪಣಿ. ಸರಳಗನ್ನಡದಲ್ಲಿ ಇವನ್ನು ನೇರದಾರಿ ಮತ್ತು ಬಾಗುದಾರಿಯ ಕ್ಷಿಪಣಿಗಳೆಂದು ಕರೆಯಬಹುದೇನೋ. ಸದ್ಯಕ್ಕೆ ಪ್ರಪಂಚದಲ್ಲಿ ಬಾಗುದಾರಿಯ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವ ತಂತ್ರಜ್ಞಾನವನ್ನು ಕೈವಶ ಮಾಡಿಕೊಂಡಿರುವವರು ಐದು ದೇಶಗಳು ಮಾತ್ರ. ಅಮೆರಿಕಾ ಸಂಯುಕ್ತ ಸಂಸ್ಥಾನ, ರಷ್ಯಾ, ಚೀನಾ, ಫ್ರಾನ್ಸ್ ಮತ್ತು ಭಾರತ. ಅಗ್ನಿ-5ರ ಯಶಸ್ವಿ ಪರೀಕ್ಷೆ ಮುಗಿಯುವುದರೊಡನೆ ನಾವು ಖಂಡಾಂತರ ಕ್ಷಿಪಣಿಗಳನ್ನು ತಯಾರಿಸಬಲ್ಲ ದೇಶವೂ ಆಗಿ ರೂಪುಗೊಂಡಿದ್ದೇವೆ. ಡಿಆರ್ಡಿಓ ಈ ಯೋಜನೆಗೆ ವ್ಯಯಿಸಿದ ಒಟ್ಟು ಮೊತ್ತ ಕೇವಲ 50 ಕೋಟಿ ರುಪಾಯಿಗಳು. ಬೇರೆ ದೇಶಗಳು ರಕ್ಷಣಾ ಸಲಕರಣೆಗಳಿಗಾಗಿ ವಿನಿಯೋಗಿಸುವ ಬಂಡವಾಳದೆದುರು ಇದು ಬಹಳ ಸಣ್ಣದು. ಅಗ್ನಿ-5ರ ಯಶಸ್ಸಿನಲೆಯಲ್ಲಿ ಬಹಳ ಹೊತ್ತು ತೇಲದೆ ವಿಜ್ಞಾನಿಗಳು ಈಗ ಕೂಡಲೇ ಅಗ್ನಿ-6 ಅನ್ನು ಕೈಗೆತ್ತಿಕೊಂಡಿದ್ದಾರೆ. ಇನ್ನು 2-3 ವರ್ಷಗಳಲ್ಲಿ ಅದರ ಪರೀಕ್ಷೆಗಳನ್ನೂ ಮುಗಿಸಿ ಭಾರತದ ರಕ್ಷಣಾ ಸಾಮಥ್ರ್ಯವನ್ನು ಹಲವುಪಟ್ಟು ಹೆಚ್ಚಿಸುವುದು ಅವರ ಗುರಿ. ಅಗ್ನಿ-6 ಕನಿಷ್ಠ 15,000 ಕಿಲೋಮೀಟರ್ ವ್ಯಾಪ್ತಿಯುಳ್ಳ ಕ್ಷಿಪಣಿ. ಮಾತ್ರವಲ್ಲ ಕನಿಷ್ಠ 10 ಸಿಡಿತಲೆಗಳನ್ನು ತನ್ನಲ್ಲಿ ಇರಿಸಿಕೊಳ್ಳಬಲ್ಲುದು. ಅಗ್ನಿ-6 ಅಭಿವೃದ್ಧಿಗೊಂಡದ್ದೇ ಆದರೆ ಅಮೆರಿಕಾ ಕೂಡ ಭಾರತದ ವಿಷಯದಲ್ಲಿ ಉಡಾಫೆ ಬಿಟ್ಟು ಕೊಂಚ ಪ್ರಬುದ್ಧವಾಗಿ ವ್ಯವಹರಿಸಬೇಕಾಗುತ್ತದೆ.
ಅಯ್ಯೋ ಭಾರತ ರಕ್ಷಣಾ ವಿಭಾಗದಲ್ಲಿ ಅದೆಷ್ಟೊಂದು ಕೋಟಿಗಳನ್ನು ವ್ಯರ್ಥವಾಗಿ ನೀರುಪಾಲು ಮಾಡುತ್ತಿದೆ! ಈ ದುಡ್ಡಲ್ಲಿ ನೂರು ಮಕ್ಕಳ ಹೊಟ್ಟೆ ತುಂಬಿಸಬಹುದಿತ್ತಲ್ಲಾ, ಸಾವಿರ ಮಕ್ಕಳಿಗೆ ಹಾಲು ಕುಡಿಸಬಹುದಿತ್ತಲ್ಲಾ ಎಂದು ಗೋಳಾಡುವ ಪ್ರಗತಿಪರರನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ. ಜಗತ್ತಿನ ಉಳಿದೆಲ್ಲ ದೇಶಗಳು ತಮ್ಮ ಪರಮಾಣು ಶಕ್ತಿಯನ್ನೂ ಕ್ಷಿಪಣಿಗಳ ಸಾಮರ್ಥ್ಯವನ್ನೂ ಹೆಚ್ಚಿಸಿಕೊಳ್ಳುತ್ತ ಸಾಗುತ್ತಿರುವಾಗ ಭಾರತ ಕಳ್ಳೇಕಾಯಿ ತಿನ್ನುತ್ತ ಸುಮ್ಮನಿರಲು ಸಾಧ್ಯವಿಲ್ಲ. ಜಗತ್ತಿನ ಉಳಿದ ಬಲಾಢ್ಯ ದೇಶಗಳು ಕೆಣಕದಂತೆ ನೋಡಿಕೊಳ್ಳಬೇಕಾದರೆ ನಾವು ನಮ್ಮ ಶಕ್ತಿ-ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯ. ವಿಶ್ವದಲ್ಲಿ ಭಾರತ ಕೇವಲ ಬಲಿಷ್ಠ ದೇಶ ಮಾತ್ರವಲ್ಲ; ಅತ್ಯಂತ ನಂಬಿಕಸ್ತ ಮತ್ತು ವಿಶ್ವಾಸಾರ್ಹ ದೇಶವೂ ಹೌದು. ಯುದ್ಧದ ವಿಷಯದಲ್ಲಿ ನೀವು ಯಾರನ್ನು ಹೆಚ್ಚು ನಂಬುತ್ತೀರಿ ಎಂದು ಜಗತ್ತಿನ ಎಲ್ಲ ದೇಶಗಳ ಅಭಿಪ್ರಾಯ ಸಂಗ್ರಹ ಮಾಡಿದರೆ ಭಾರತಕ್ಕೆ ನಿಸ್ಸಂಶಯವಾಗಿಯೂ ಅಧಿಕ ಮತಗಳು ಬೀಳುತ್ತವೆ. ಹಾಗಿರುವಾಗ ನಾವು ದುರ್ಬಲರಾಗಿ ಬೇರೆಯವರ ಅಡಿಯಾಳಾಗುವುದು ಸಾಧುವಲ್ಲ. ಕೀರ್ತಿಶೇಷ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಹೇಳಿದಂತೆ ಒಬ್ಬ ಬಲಾಢ್ಯನಷ್ಟೇ ಇನ್ನೋರ್ವ ಬಲಾಢ್ಯನನ್ನು ಗೌರವಿಸಬಲ್ಲ. ಸಿಂಹದ ಗಾಂಭೀರ್ಯವನ್ನು ಜಗತ್ತಿಗೆ ಪ್ರದರ್ಶಿಸಬೇಕಾದರೆ ಮೊದಲು ನಾವು ಸಿಂಹಗಳಾಗಿರಬೇಕಾದ್ದು ಅಗತ್ಯ.
ಅಗ್ನಿ-5ರ ವ್ಯಾಪ್ತಿ ಎಷ್ಟು? 5000 ಕಿಮೀ ಎಂಬುದು ಸರಕಾರದ ಹೇಳಿಕೆ. ಇಲ್ಲ, ಅದು 8000 ಕಿಮೀಗಳಷ್ಟು ದೂರಕ್ಕೆ ಹಾರಬಲ್ಲುದು ಎಂಬುದು ಚೀನಾದ ಆತಂಕ. ಇದಕ್ಕೆ ಕಾರಣ ಏನು ಗೊತ್ತೆ? ಅಗ್ನಿ ಕ್ಷಿಪಣಿಯನ್ನು ಒಡಿಷಾ ರಾಜ್ಯದ ಬಲಾಸೋರ್ನಲ್ಲಿರುವ ವೀಲರ್ ದ್ವೀಪ (ಅದಕ್ಕೀಗ ಅಬ್ದುಲ್ ಕಲಾಂ ಅವರ ಹೆಸರಿಡಲಾಗಿದೆ)ದಲ್ಲಿ ಉಡಾಯಿಸಲಾಯಿತು. ನಾವು ಪ್ರಯೋಗಿಸಿದ ಕ್ಷಿಪಣಿಯ ಕೊಟ್ಟಕೊನೆಯ ಭಾಗಗಳು ಅತ್ತ ಆಫ್ರಿಕಾದ ದಕ್ಷಿಣ ತುದಿಯಲ್ಲೂ ಇತ್ತ ಆಸ್ಟ್ರೇಲಿಯಾದ ದಕ್ಷಿಣ ಭಾಗದಲ್ಲೂ ಬಿದ್ದಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ. ಇವೆರಡೂ ಸ್ಥಳಗಳು ಒಡಿಷಾದಿಂದ ಕ್ರಮವಾಗಿ 6100 ಮತ್ತು 7100 ಕಿಮೀ ದೂರದಲ್ಲಿವೆ. ಕ್ಷಿಪಣಿಯ ಸಾಮರ್ಥ್ಯವೇ 5000 ಕಿಮೀ ಆಗಿದ್ದರೆ ಅದು ಈ ಎರಡು ಅಂತರಗಳಲ್ಲಿ ಬೀಳುವುದು ಹೇಗೆ ಸಾಧ್ಯ ಎಂಬುದು ಚೀನಾದ ಪ್ರಶ್ನೆ. ಅಗ್ನಿ-5 ಹಾರಿದ ದೂರ, ಎತ್ತರ, ಅದರ ಕ್ಷಮತೆ ಇತ್ಯಾದಿಯನ್ನೆಲ್ಲ ಪರಿಶೀಲಿಸಿದ ತಜ್ಞರು, ಅದಕ್ಕೆ 8000 ಕಿಮೀ ದೂರಕ್ಕೆ ಹಾರುವ ಸಾಮರ್ಥ್ಯವಿದೆ ಎಂಬುದನ್ನು ಆಂಶಿಕವಾಗಿ ಒಪ್ಪಿದ್ದಾರೆ. ನಾವು ಎಷ್ಟು ದೂರಕ್ಕೆ ಹಾರುವ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿದರೂ ಚೀನಾಕ್ಕೇನು ತೊಂದರೆ? ಭಾರತ ತಾನಾಗಿ ಪರಮಾಣು ಅಸ್ತ್ರಗಳನ್ನು ಬಳಸುವ ಮೊದಲ ದೇಶ ಆಗುವುದಿಲ್ಲ ಎಂಬ ಅಂಶವನ್ನು ಪ್ರತಿಪಾದಿಸುತ್ತ ಬಂದಿದೆ. ಚೀನಾ ಕೂಡ ತಾನು ಮೊದಲಾಗಿ ಬೈಜಿಕಾಸ್ತ್ರಗಳನ್ನು ಬಳಸುವುದಿಲ್ಲ ಎಂದಿದೆ. ಹಾಗಿರುವಾಗ ಭಯಕ್ಕೆ ಆಸ್ಪದವೆಲ್ಲಿದೆ? ಭಾರತ ನಡೆಸುವ ಪರೀಕ್ಷಾರ್ಥ ಪ್ರಯೋಗಗಳೆಲ್ಲ ರಕ್ಷಣಾತ್ಮಕವೇ ಹೊರತು ಆಕ್ರಮಣಕ್ಕಾಗಿ ಅಲ್ಲ ಎಂದು ಭಾರತ ಚೀನಾಕ್ಕೆ ತಿರುಗೇಟು ನೀಡಿದೆ.
ಬ್ಯಾಲಿಸ್ಟಿಕ್ ಕ್ಷಿಪಣಿಗಳ ಸಾಮಥ್ರ್ಯ ಎಷ್ಟು ಗೊತ್ತೆ? ಕೇವಲ ಐದೇ ಐದು ಇಂತಹ ಕ್ಷಿಪಣಿಗಳು ಕೇವಲ ಅರ್ಧ ತಾಸಿನಲ್ಲಿ ಇಡೀ ಭೂಮಂಡಲವನ್ನು ಸರ್ವನಾಶ ಮಾಡಿಹಾಕಬಲ್ಲವು! ಅಮೆರಿಕಾದ ಬಳಿ ಇರುವ ಟ್ರೈಡೆಂಟ್ ಸರಣಿಯ ಯುಜಿಎಮ್-133 ಕ್ಷಿಪಣಿ 11,000 ಕಿಮೀ ದೂರಕ್ಕೆ ಹಾರಬಲ್ಲುದು. ಇದರ ವೇಗ ಗಂಟೆಗೆ 21,000 ಕಿಮೀಗಳು. ರಷ್ಯಾದ ಬಳಿ ಇರುವ ಆರ್-29, ಆರ್-36ಎಮ್ ಮುಂತಾದ ಖಂಡಾಂತರ ಕ್ಷಿಪಣಿಗಳು 12,000 ಕಿಮೀಗಿಂತ ಹೆಚ್ಚು ದೂರಕ್ಕೆ ಹೋಗುತ್ತವೆ. ರಷ್ಯಾದಲ್ಲಿ ಉಡಾಯಿಸಿದ ಕ್ಷಿಪಣಿ ಕೇವಲ 30 ನಿಮಿಷದಲ್ಲಿ ಅಮೆರಿಕಾ ತಲುಪಬಲ್ಲುದು! ಚೀನಾ ಬತ್ತಳಿಕೆಯಲ್ಲಿರುವ ಡಾಂಗ್ಫೆಂಗ್ 5ಎ ಎಂಬ ಕ್ಷಿಪಣಿ 13,000 ಕಿಮೀ ಸಾಗುತ್ತದೆ. ಇದರ ವೇಗ ಗಂಟೆಗೆ 27,000 ಕಿಮೀಗಳು. ಅಗ್ನಿ-5 ಅನ್ನು ಮೀರಿಸುವ ಒಂದಲ್ಲ ಹಲವು ಕ್ಷಿಪಣಿಗಳು ಚೀನಾದ ಬಳಿಯಿವೆ. ಹಾಗಾಗಿ, ನಾವು ನಮ್ಮ ಕ್ಷಿಪಣಿಗೆ ಚೀನಾ ಬೆದರಿ ಬೆವೆತುಹೋಗಿದೆ ಎಂದು ನಂಬುವುದು ಉತ್ಪ್ರೇಕ್ಷೆಯಾಗುತ್ತದೆ!
ಬ್ಯಾಲಿಸ್ಟಿಕ್ (ಬಾಗು ದಾರಿಯ) ಕ್ಷಿಪಣಿಗಳಿಗೆ ಉದಾಹರಣೆ: ಪೀಸ್ಕೀಪರ್, ಮಿನಿಟ್ಮ್ಯಾನ್, ಟ್ರೈಡೆಂಟ್ (ಅಮೆರಿಕಾದ ಕ್ಷಿಪಣಿಗಳು), ಟೊಪೊಲ್-ಎಮ್, ಆರ್ಎಸ್ 56 ಬುಲಾವ (ರಷ್ಯ), ಡಿಎಫ್ 5, ಡಿಎಫ್ 41 (ಚೀನಾ), ಪೃಥ್ವಿ, ಅಗ್ನಿ (ಭಾರತ)
ಕ್ರೂಸ್ (ನೇರ ದಾರಿಯ) ಕ್ಷಿಪಣಿಗಳಿಗೆ ಉದಾಹರಣೆ: ಅಪಾಷೆ (ಫ್ರಾನ್ಸ್), ಬ್ರಹ್ಮೋಸ್ (ಭಾರತ), ಡೆಲಿಲಾಹ್ (ಇಸ್ರೇಲ್), ಟೊಮಹಾಕ್ (ಅಮೆರಿಕಾ)