ಅಂಕಣ

ಸಂಕ್ರಾಂತಿ ಕೇವಲ ಆಚರಣೆ ಅಲ್ಲ..! ಅದು ಬದಲಾವಣೆಯ ಸಂಧಿಕಾಲ…

ಸಂಕ್ರಾಂತಿ ಶಬ್ದವನ್ನು ನಾವು ಸರಿಯಾಗಿ ಗಮನಿಸಿರುವುದೇ ಇಲ್ಲ. ಕ್ರಾಂತಿ ಎನ್ನುವ ಪದ ಅದರಲ್ಲಿ ಹುದುಗಿದೆ. ಕ್ರಾಂತಿ ಎಂದರೆ ಬದಲಾವಣೆ ಎಂದರ್ಥ. ಸಂಕ್ರಾಂತಿ ಹಬ್ಬವನ್ನು ಸೂರ್ಯ ಮಕರ ರಾಶಿ ಪ್ರವೇಶಿಸಿದಾಗ ಆಚರಿಸುವ ಹಬ್ಬವೆಂದಷ್ಟೇ ನಾವು ತಿಳಿದಿರುತ್ತೇವೆ ಆದರೆ ಅದರಿಂದ ಯಾವ ಕ್ರಾಂತಿಯಾಯಿತು ಎಂದು ಯಾರೂ ಪ್ರಶ್ನಿಸುವ ಗೋಜಿಗೇ ಹೋಗುವುದಿಲ್ಲ.

ಭಾರತೀಯ ಜ್ಯೋತಿಷ್ಯದ ಪ್ರಕಾರ ಸೂರ್ಯ ಸುಮಾರು 30 ದಿನಗಳಿಗೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗುತ್ತಾನೆ. ಆದರೆ ಸೂರ್ಯನ ಈ ಎಲ್ಲಾ ರಾಶಿಗಳ ಪ್ರವೇಶ ಕಾಲವನ್ನು ಹಬ್ಬವನ್ನಾಗಿ ಆಚರಿಸುವುದಿಲ್ಲ. ಸೂರ್ಯನ ಕರ್ಕ ರಾಶಿ ಪ್ರವೇಶ ಮತ್ತು ಮಕರ ರಾಶಿ ಪ್ರವೇಶಕ್ಕೆ ವಿಶೇಷ ಮಹತ್ವ ಕೊಟ್ಟರೂ ವಿಜೃಂಭಣೆಯಿಂದ ಹಬ್ಬವನ್ನಾಚರಿಸುವುದು ಸೂರ್ಯ ಮಕರಕ್ಕೆ ಪ್ರವೇಶವಾದಾಗ. ಅದೇ ಮಕರಸಂಕ್ರಮಣ.

ಇದಕ್ಕೆ ಕಾರಣ ಹಲವಾರಿವೆ. ಇಂದಿನಿಂದ ಸೂರ್ಯ ಜಾಸ್ತಿ ಬೆಳಗುತ್ತಾನೆ. ಸಂಕ್ರಾಂತಿಯ ನಂತರದ ಬದಲಾವಣೆ ಕೇವಲ ಖಗೋಳದಲ್ಲಿ ಮಾತ್ರವಲ್ಲ ಅದು ಭೂಮಿಯಲ್ಲೇ ಹೆಚ್ಚು. ನಾಲ್ಕು ಗೋಡೆಗಳ ಮಧ್ಯೆ ಕೆಲಸಮಾಡುವ ಹಾಗು ನಾಲ್ಕು ಗೋಡೆಗಳಿಂದ ಹೊರಗೇ ಬಾರದೆ ಬದುಕುವವರಿಗೆ ಈ ಬದಲಾವಣೆ ಅರಿವಿಗೆ ಬಾರದು. ಸನಾತನ ಧರ್ಮದ ಹಬ್ಬಗಳು ವೈಜ್ಞಾನಿಕ ಹಾಗೂ ಪ್ರಾಕೃತಿಕ ನಂಟನ್ನು ಹೊಂದಿರುತ್ತವೆ ಎಂಬುದಕ್ಕೆ ಸಾಕ್ಷಿ ರೂಪವಾಗಿ ಸಂಕ್ರಾಂತಿ ನಿಲ್ಲುತ್ತದೆ.

ಭೂಮಿಯನ್ನು ಜಡವಾಗಿ ಕಾಣುತ್ತಿದ್ದ ಪ್ರಪಂಚಕ್ಕೆ ತಾಯಿಯಂತೆ ಭಾವನಾತ್ಮಕವಾಗಿ ನೋಡಲು ಕಲಿಸಿದ್ದು ಭಾರತೀಯರು. ಭೂಮಿಯನ್ನು ತಾಯಿಯೆಂಬ ಪೂಜನೀಯ ಭಾವದಿಂದ ಕಾಣುವ ದೃಷ್ಟಿ ಇಲ್ಲಿಯ ಸಂಸ್ಕೃತಿಯಲ್ಲಿದೆ. ಅದರಲ್ಲಿಯೂ ಸಂಕ್ರಾಂತಿಯ ವಿಷಯಕ್ಕೆ ಬಂದಾಗ ಚಿಂತಕರೊಬ್ಬರು ಹೇಳಿದ ಮಾತುಗಳು ಈಗಲೂ ಕಿವಿಯಲ್ಲಿ ಗುನುಗುತ್ತವೆ.

“ಭೂಮಿ ನಮ್ಮ ತಾಯಿ ಅಂದಮೇಲೆ ಅವಳಿಗೂ ನಮ್ಮ ಹಾಗೆಯೇ ಜೀವವಿರಬೇಕಲ್ಲಾ. ನಮ್ಮ ಹಾಗೆಯೇ ಅವಳೂ ಕೂಡ ಉಸಿರಾಡುತ್ತಾಳೆ. ನಮಗೆ ಹೇಗೆ ಉಚ್ಛ್ವಾಸ ನಿಶ್ವಾಸಗಳಿವೆಯೋ ಹಾಗೆ ಅವಳಿಗೂ ಕೂಡ ಉಚ್ಛ್ವಾಸ ನಿಶ್ವಾಸಗಳಿವೆ. ಅದೇ ಉತ್ತರಾಯಣ ಮತ್ತು ದಕ್ಷಿಣಾಯಣ.ಅರ್ಥಾತ್ ಮಕರ ಸಂಕ್ರಾಂತಿ ಮತ್ತು ಕರ್ಕ ಸಂಕ್ರಾಂತಿ. ಉತ್ತರಾಯಣ ಅರ್ಥಾತ್ ಏರುವುದು ಉಚ್ಛ್ವಾಸ ಹಾಗು ದಕ್ಷಿಣಾಯಣ ಅರ್ಥಾತ್ ಇಳಿಯುವುದು ನಿಶ್ವಾಸ.”

ಈ ವಿವರಣೆ ಕೇವಲ ಭಾವನಾತ್ಮಕವೆಂದು ಅನ್ನಿಸುವುದು. ಆದರೆ ಇದರ ಹಿಂದಿರುವ ವೈಜ್ಞಾನಿಕ ಸಂಭವತೆಯನ್ನು ತರ್ಕಿಸಿದಾಗ ಮಾತ್ರಾ ತಿಳಿಯುವುದು. ಉಸಿರನ್ನು ಎಳೆದುಕೊಂಡಾಗ ರಕ್ತ ಸಂಚಲನೆಯ ಮೂಲಕ ಶಕ್ತಿ ಪ್ರತಿಯೊಂದು ಜೀವಕೋಶಗಳಿಗೂ ತಲುಪುತ್ತದೆ. ಹಾಗೆಯೇ ಉಸಿರನ್ನು ಹೊರಬಿಟ್ಟಾಗ ಶಕ್ತಿಯು ಕುಂದುತ್ತದೆ. ಇದು ವಿಜ್ಞಾನದ ಪಾಠ. ಇದೇ ಉಸಿರಾಟವನ್ನು ಭೂಮಿಗೆ ಹೋಲಿಸಿ. ಭೂಮಿಯ ಜೀವಕೋಶಗಳಾದ ಅರಣ್ಯ, ಸಸ್ಯ ಜಗತ್ತು, ಹೂವು ಅರಳುವ ಮೂಲಕ, ಕಾಯಿ, ಹಣ್ಣುಗಳು ಬೆಳೆಯುವ ಮೂಲಕ ಭೂಮಿ ತನ್ನ ಜೀವಂತಿಕೆಯನ್ನು ಉತ್ತರಾಯಣ ಅರ್ಥಾತ್ ಜನವರಿ ತಿಂಗಳ ನಂತರ ತೋರ್ಪಡಿಸಲು ಪ್ರಾರಂಭಿಸುತ್ತದೆ. ಭೂಮಿಯ ಮೇಲಿನ ಸಕಲ ಜೀವಿಗಳೂ ಸರಪಳಿಯಲ್ಲಿ ಒಂದಕ್ಕೊಂದು ಅವಲಂಬಿತವಾಗಿವೆ ಎನ್ನುವುದೂ ವಿಜ್ಞಾನ ಕಲಿಸಿದ ಪಾಠವೇ. ಈ ಎಲ್ಲ ಜೀವಿಗಳು ಸಸ್ಯ ಜಗತ್ತನ್ನು ಅವಲಂಬಿಸಿರುವುದರಿಂದ ಸಂಕ್ರಾಂತಿಯ ಪರಿಣಾಮ ಜೀವಿಗಳ ಮೇಲೂ ಆಗುವುದು ಸತ್ಯವೆಂದೇ ಆಯಿತು.

ಅಂದರೆ ಭೂಮಿಯ ಮೇಲೆ ಶಕ್ತಿ ಸಂಚಯವಾಗುವುದು ಈ ಸಮಯದಲ್ಲೇ ಎಂದಾದಮೇಲೆ ಅದು ಉಚ್ಛ್ವಾಸವಾಯಿತಲ್ಲವೇ. ಇನ್ನು ಉತ್ತರಾಯಣ ಪ್ರಾರಂಭವಾಗುವ ಹಿಂದಿನ ಸಮಯ ಅಂದರೆ ನವೆಂಬರ್ ಡಿಸೆಂಬರ್ ತಿಂಗಳಲ್ಲಿ ನೋಡಿದರೆ ಪ್ರಕೃತಿ ಬಂಜೆಯಂತೆ ಕಾಣುವುದು. ಎಲ್ಲೆಲ್ಲೂ ಎಲೆ ಉದುರಿರುವ ಬೋಳು ಗಿಡಮರಗಳು, ಹೂವುಹಣ್ಣುಗಳಿಲ್ಲದೇ ನಿಸ್ಸತ್ವವಿಲ್ಲದ ಸಸ್ಯ ರಾಶಿಯನ್ನು ನೋಡಿದರೆ ತನ್ನೆಲ್ಲಾ ಜೀವವನ್ನು ಕಳೆದಿಕೊಂಡಿವೆಯೇನೋ ಅನ್ನಿಸುವುದು. ಇದೇ ಭೂಮಿಯ ನಿಶ್ವಾಸವಲ್ಲವೇ. ಈ ಸಮಯದಲ್ಲಿ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಂಡಿರುತ್ತದೆ. ಭೂಮಿಯ ಫಲವತ್ತತೆ ಕಡಿಮೆಯಾದಾಗ ಎಳ್ಳನ್ನು ಬಿತ್ತಿ ಫಲವತ್ತತೆ ಹೆಚ್ಚಿಸುವ ಕ್ರಮ ಭಾರತೀಯ ಕೃಷಿ ಪದ್ಧತಿಯಲ್ಲಿದೆ. ಇದೇ ಕಾರಣಕ್ಕಾಗಿಯೇ ಎಳ್ಳನ್ನು ಬೆಳೆದು ಭೂಮಿಯನ್ನು ಪುಷ್ಟಿಗೊಳಿಸುವುದು ಹಾಗು ಬೆಳೆದ ಎಳ್ಳನ್ನು ಸಂಕ್ರಾಂತಿಯ ದಿನದಂದು ಬಳಸುವುದು ವಾಡಿಕೆಯಾಯಿತು. ಇದರಿಂದ ಭೂಮಿಯ ಫಲವತ್ತತೆಯೂ ಹೆಚ್ಚಾಯಿತು, ಎಳ್ಳನ್ನು ತಿನ್ನುವುದರಿಂದ ಈ ಸಮಯದಲ್ಲಿ ದೇಹಕ್ಕೆ ಬೇಕಾದ ಕೊಬ್ಬಿನಂಶವೂ ದೊರಕಿತು. ಅಂತೂ ಸಂಕ್ರಾಂತಿ ಪ್ರಾಕೃತಿಕವಾಗಿ ಕ್ರಾಂತಿಯ ಆರಂಭದ ದಿನವಾಗಿ ನಿಲ್ಲುವುದು.

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Jois

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!