Featured ಅಂಕಣ

ಯಾರು ಹೇಳಿದ್ದು ಪವಾಡಗಳು ನಡೆಯುವುದಿಲ್ಲ ಎಂದು..?

       ನಾವು ಯಾವಾಗಲೂ ಬದುಕಿನಲ್ಲಿ ನಡೆಯುವ ಘಟನೆಗಳನ್ನ ತರ್ಕಗಳ ಆಧಾರದ ಮೇಲೆ, ಕಾರಣಗಳ ಮೇಲೆ ವಿಶ್ಲೇಷಿಸುವ ಪ್ರಯತ್ನ ಮಾಡುತ್ತಲೇ ಇರುತ್ತೇವೆ. ಯಾವಾಗಲೂ ಅದನ್ನ ಮಾಡಲೇಬೇಕಾದ ಅವಶ್ಯಕತೆ ಇದೆಯೋ ಇಲ್ಲವೋ ಆದರೆ ನಮ್ಮ ಪಾಡಿಗೆ ನಾವು ಅದನ್ನ ಮಾಡುತ್ತಲೇ ಇರುತ್ತೇವೆ. ಕೆಲವೊಮ್ಮೆ ನಮ್ಮ ಬದುಕಿನಲ್ಲಿ ಎಷ್ಟು ವಿಚಿತ್ರ ಘಟನೆಗಳು ನಡೆದು ಹೋಗುತ್ತವೆ ಎಂದರೆ ನಮ್ಮ ಯಾವ ತರ್ಕವೂ ಅದನ್ನ ವಿಶ್ಲೇಷಿಸಲು ಆಗುವುದಿಲ್ಲ. ಅದು ನಮ್ಮ ಗ್ರಾಹ್ಯ ಶಕ್ತಿಗೆ ಮೀರಿದ್ದಾಗಿರುತ್ತದೆ. ಅದನ್ನೇ ಪವಾಡ ಎನ್ನುವುದು ಇರಬೇಕು. ಇಂದು ಅಂತಹದೇ ಒಂದು ಘಟನೆಯನ್ನು ವಿವರಿಸ ಹೊರಟಿದ್ದೇನೆ. ಈ ಘಟನೆ ಜೋಯ್ ಲುವೆರಾ ಎಂಬ ಹುಡುಗನ ಬದುಕಿನದ್ದು! ಈತನ ಬದುಕಿನ ಬಗ್ಗೆ ತಿಳಿದ ನಂತರ ಹೆಮ್ಮೆ ಆಗಿದ್ದೇನೋ ನಿಜ ಅದರ ಜೊತೆ ಜೊತೆಗೆ ನನ್ನ ಕಣ್ಣಲ್ಲಿ ಸಂತಸದ ಕಂಬನಿಯೂ ಇತ್ತು.

 

ಜೋಯ್ ಲುವೆರಾಗೆ ಕ್ಯಾನ್ಸರ್ ಉಂಟಾದಾಗ ಕೇವಲ ೧೨ ವರ್ಷ. ಪದೇ ಪದೇ ತಲೆನೋವಿನಿಂದ ಬಳಲುತ್ತಿದ್ದ ಜೋಯ್’ನ್ನು ಆತನ ಪೋಷಕರು ಕಣ್ಣಿನ ಸಮಸ್ಯೆ ಇರಬಹುದೇನೋ ಎಂದು ಊಹಿಸಿ ಕಣ್ಣಿನ ಡಾಕ್ಟರ್ ಬಳಿ ಕರೆದುಕೊಂಡು ಹೋಗಿದ್ದರು. ಜೋಯ್’ನ್ನು ಪರೀಕ್ಷಿಸಿದ ಡಾಕ್ಟರ್’ಗೆ ಏನೋ ಅನುಮಾನ ಬಂದು “ನೀವು ಮಿದುಳು ತಜ್ಞರ ಬಳಿ ಹೋಗುವುದು ಒಳ್ಳೆಯದು” ಎಂದಿದ್ದರು. ನಂತರ ಪ್ರತಿಷ್ಟಿತ ಮಕ್ಕಳ ಆಸ್ಪತ್ರೆಗೆ ಹೋಗಿ ತೋರಿಸಿದಾಗ ಜೋಯ್’ನ ಬಲಗಣ್ಣಿನ ಹಿಂದೆ ಎರಡು ದೊಡ್ಡ ಟ್ಯೂಮರ್ ಉಂಟಾಗಿರುವುದು ತಿಳಿದು ಬಂದಿತ್ತು. ಅಲ್ಲಿಂದ ಜೋಯ್’ನ ಕ್ಯಾನ್ಸರ್ ಪಯಣ ಆರಂಭವಾಗಿತ್ತು. ಆತ ಬಹುಶಃ ಕನಸಿನಲ್ಲೂ ಎಣಿಸಿರಲಿಲ್ಲ ಮುಂಬರುವ ಕೆಲ ವರ್ಷಗಳು ಅತನಿಗೆ ಏನನ್ನು ಕಲಿಸಿಕೊಡಲಿವೆ ಎಂದು.

ಡಾಕ್ಟರ್ ಎಲ್ಲೆನ್’ಬೋಗನ್ ಎಂಬುವರು ಜೋಯ್’ನ ಚಿಕಿತ್ಸೆಯನ್ನು ಆರಂಭಿಸಿದ್ದರು. ಕೀಮೋಥೆರಪಿ ಹಾಗೂ ರೇಡಿಯೇಷನ್’ನ ಪರಿಚಯವಾಗಿತ್ತು ಜೋಯ್’ಗೆ. ವಾರದಲ್ಲಿ ಹೆಚ್ಚು ಪಾಲು ಆತ ಆಸ್ಪತ್ರೆಯಲ್ಲಿಯೇ ಇರುತ್ತಿದ್ದ, ಇದರ ನಡುವೆ ಶಾಲೆಗೆ ಹೋಗಿದ್ದೆ ಅಪರೂಪ. ಮನೆಯಿಂದ ಆಸ್ಪತ್ರೆಗೆ ಕಾರಿನಲ್ಲಿನ ಪಯಣ ಒಂದು ಪದ್ಧತಿಯಂತೆ ಆಗಿ ಹೋಗಿತ್ತು. ಒಂದೊಂದೇ ಕೀಮೋ ಕಳೆದಂತೆ ಆತ ತೂಕ ಕಳೆದುಕೊಳ್ಳುತ್ತಾ ನಿಶ್ಯಕ್ತನಾಗತೊಡಗಿದ್ದ. ಕೀಮೋ ಏನನ್ನು ಮಾಡಬೇಕಿತ್ತೋ ಅದನ್ನ ಮಾಡುತ್ತಿರಲಿಲ್ಲ. ದಿನಗಳೆದಂತೆ ಆತ ಊಟ ಮಾಡಲು ಕೂಡ ಆಗದಂತಹ ಸ್ಥಿತಿಯನ್ನು ತಲುಪಿದ್ದ. ಜೋಯ್ ೧೩ ವರ್ಷದವನಾಗುವ ಹೊತ್ತಿಗೆ ಇನ್ನೊಂದು ಆತಂಕ ಎದುರಾಗಿತ್ತು. ಜೋಯ್’ಗೆ ಆಗಾಗ ಬೆನ್ನು ನೋವು ಕಾಣಿಸಿಕೊಳ್ಳಲು ಶುರುವಾಗಿತ್ತು. ಇಂತಹ ಸಮಯದಲ್ಲಿ ಈ ರೀತಿಯ ಲಕ್ಷಣಗಳನ್ನ ನಿರ್ಲಕ್ಷ್ಯ ಮಾಡುವಂತೆಯೇ ಇಲ್ಲ. ಇನ್ನಷ್ಟು ಟೆಸ್ಟ್’ಗಳು ನಡೆಯಿತು. ಫಲಿತಾಂಶ ಆತನ ಸ್ಪೈನಲ್ ಫ್ಲುಯಿಡ್’ನಲ್ಲಿ ಬೇರೆಯದೇ ರೀತಿಯ ಕ್ಯಾನ್ಸರ್ ಕಂಡು ಬಂದಿತ್ತು.

“ಪೆನ್ಸಿಲ್’ನಂತೆ ಕಾಣುವ ಎರಡು ಟ್ಯೂಮರ್’ಗಳು ಒಂದರ ಮೇಲೊಂದು ಇವೆ, ಇದನ್ನು ಆಪರೇಷನ್ ಮಾಡುವುದು ಕೂಡ ಕಷ್ಟ. ಬಹಳ ಅಪಾಯಕಾರಿ. ಸ್ಪೈನಲ್ ಫ್ಲುಯಿಡ್’ನಲ್ಲಿ ಉಂಟಾಗುವ ಈ ರೀತಿಯ ಕ್ಯಾನ್ಸರ್ ಬಗ್ಗೆ ಹೆಚ್ಚು ಅಧ್ಯಯನಗಳು ಕೂಡ ಆಗಿಲ್ಲ, ಹಾಗಾಗಿ ಚಿಕಿತ್ಸೆ ಏನು ಎಂದು ಹೇಳುವುದು ಕೂಡ ಕಷ್ಟವೇ” ಎಂದಿದ್ದರು ಡಾಕ್ಟರ್. ಇಡೀ ಉತ್ತರ ಅಮೇರಿಕಾದಲ್ಲಿ ಸ್ಪೈನಲ್ ಫ್ಲುಯಿಡ್’ನಲ್ಲಿ ಕ್ಯಾನ್ಸರ್ ಉಂಟಾದವರ ಸಂಖ್ಯೆ ಕೇವಲ ಆರು. ಜೋಯ್ ಆ ಆರನೇ ವ್ಯಕ್ತಿಯಾಗಿದ್ದ!

ಆದರೆ ಡಾಕ್ಟರ್  ಎಲ್ಲೆನ್’ಬೋಗನ್ ಮಾತ್ರ ಅಷ್ಟು ಸುಲಭಕ್ಕೆ ಇದನ್ನು ಬಿಟ್ಟು ಬಿಡಲು ತಯಾರಿರಲಿಲ್ಲ. ಅವರು ಜೋಯ್’ನ ಕೇಸನ್ನು ಚಿಲ್ಡ್ರನ್ಸ್ ಹಾಸ್ಪಿಟಲ್ ಟ್ಯೂಮರ್ ಬೋರ್ಡ್’ಗೆ ಕೊಂಡೊಯ್ದರು. ಅಲ್ಲಿ ಆಂಕಾಲಜಿಸ್ಟ್’ಗಳ ದೊಡ್ಡ ಬಳಗ ಇಂತಹ ಕಷ್ಟಕರ ಕೇಸ್’ಗಳ ಬಗ್ಗೆ ಚರ್ಚೆ ನಡೆಸಿ ತಮ್ಮ ಅಭಿಪ್ರಾಯ ನೀಡುತ್ತಾರೆ ಹಾಗೂ ಯಾವ ರೀತಿಯ ಚಿಕಿತ್ಸೆ ನಡೆಸಿದರೆ ಒಳಿತು ಎಂದು ತಿಳಿಸುತ್ತಾರೆ. ಜೋಯ್’ನ ಪರಿಸ್ಥಿತಿಯ ಬಗ್ಗೆ ಚರ್ಚಿಸಿ ಅಲ್ಲಿನ ಆಂಕಾಲಜಿಸ್ಟ್’ಗಳು ಬಲಗಣ್ಣಿನ ಹಿಂದಿರುವ ಟ್ಯೂಮರ್’ಗೆ ಗಾಮಾ ನೈಫ್ ಸರ್ಜರಿಯನ್ನು ಮಾಡಬಹುದು ಎಂದು ಸೂಚಿಸುತ್ತಾರೆ. ಗಾಮಾ ಕಿರಣಗಳನ್ನ ಬಳಸಿ ಟ್ಯೂಮರ್’ನ್ನು ನಾಶಪಡಿಸುವಂತಹ ಸರ್ಜರಿ.  ಇವುಗಳ ನಡುವೇಯೇ ಜೋಯ್ ಅದಾಗಲೇ ೧೪ನೇ ವರ್ಷಕ್ಕೆ ಕಾಲಿಟ್ಟಿದ್ದ.

ಗಾಮಾ ನೈಫ್ ಸರ್ಜರಿ ಎಲ್ಲಾ ತಯಾರಿಯೂ ನಡೆದಿತ್ತು. ಜೋಯ್ ಕೂಡ ಧೈರ್ಯವಾಗಿ ಆಸ್ಪತ್ರೆ ತಲುಪಿದ್ದ. ಆದರೆ ಡಾಕ್ಟರ್ ಎಲ್ಲೆನ್’ಬೋಗನ್ ಒಂದು ಕೆಟ್ಟ ಸುದ್ದಿಯೊಂದಿಗೆ ಸ್ವಾಗತಿಸಿದ್ದರು. ಟ್ಯೂಮರ್ ಕಣ್ಣಿನ ನರದ ಬಹಳ ಹತ್ತಿರದಲ್ಲಿದ್ದರಿಂದ ಗಾಮಾ ನೈಫ್ ಸರ್ಜರಿಯನ್ನು ಮಾಡಲು ಸಾಧ್ಯವಿಲ್ಲವೆಂದಿದ್ದರು..!! ಬದುಕು ಎಷ್ಟೊಂದು ಆಘಾತಗಳನ್ನು ನೀಡಿತ್ತೆಂದರೆ ಜೋಯ್’ನ ಮನೆಯವರ ಬಳಿ ಹತಾಶೆಯ ಹೊರತಾಗಿ ಇನ್ನೇನು ಉಳಿದಿರಲಿಲ್ಲ. ಆತನ ಚಿಕಿತ್ಸೆ ಒಂದು ಕಡೆ ಮುಂದುವರೆಯುತ್ತಲೇ ಇತ್ತು. ಮತ್ತೆ ೨-೩ ವರ್ಷಗಳ ಕಾಲ ಕೀಮೊವನ್ನು ಕೊಡಲಾಯಿತು. ಆದರೆ ಅದು ಯಾವುದೇ ರೀತಿ ಪರಿಣಾಮ ಬೀರಲಿಲ್ಲ.

ಸಮಯ ಯಾರಿಗೆ ನಿಲ್ಲುತ್ತದೆ?! ಜೋಯ್’ನ ಪಾಲಿಗೂ ಸಮಯ ಕೈಯ್ಯಿಂದ ಜಾರುತ್ತಲೇ ಇತ್ತು. ಜೋಯ್ ೧೭ ವರ್ಷದವನಾದಾಗ ಡಾಕ್ಟರ್ “ನಾವು ಮಾಡಬಹುದಾಗಿದ್ದ ಎಲ್ಲವನ್ನು ಮಾಡಿದ್ದೇವೆ. ಕ್ಯಾನ್ಸರ್ ಮೇಲೆ ಪರಿಣಾಮವಾಗಲಿಲ್ಲ. ಇನ್ನು ಮಾಡಲು ಏನೂ ಉಳಿದೂ ಇಲ್ಲ. ಮನೆಗೆ ಕರೆದುಕೊಂಡು ಹೋಗಿಬಿಡಿ” ಎಂದು ಆತನನ್ನು ಮನೆಗೆ ಕಳಿಸಿ ಬಿಟ್ಟಿದ್ದರು. ಪ್ರತಿದಿನ ನರ್ಸ್ ಒಬ್ಬಳು ಮನೆಗೆ ಬಂದು ಆತನ ನೋವು ಕಡಿಮೆ ಆಗುವಂತೆ ಕೆಲ ಮೆಡಿಸಿನ್ ಕೊಟ್ಟು ಹೋಗುತ್ತಿದ್ದಳು.

ಕೆಲ ತಿಂಗಳುಗಳ ನಂತರ ಮೇಕ್-ಎ-ವಿಶ್ ಫೌಂಡೇಶನ್ ವತಿಯಿಂದ ಆತನಿಗೆ ಒಂದು ಪಾರ್ಟಿಯನ್ನು ನೀಡಲಾಯಿತು. ಜೋಯ್ ಫುಟ್’ಬಾಲ್ ಪಂದ್ಯವನ್ನು ನೋಡಬಯಸಿದ್ದ, ಆದರೆ ಆತನ ಆರೋಗ್ಯ ಕ್ಷೀಣಿಸುತ್ತಾ ಬಂದಿದ್ದರಿಂದ ಪಂದ್ಯ ವೀಕ್ಷಿಸಲು ಕರೆದುಕೊಂಡು ಹೋಗುವುದು ಸಾಧ್ಯವಿರಲಿಲ್ಲ. ಜೋಯ್ ಬಗ್ಗೆ ಕೇಳಲ್ಪಟ್ಟ ನಿವೃತ್ತ ಫುಟ್’ಬಾಲ್ ಕೋಚ್ ಜಿಮ್ ಲ್ಯಾಂಬ್ರೈಟ್ ಅಂದು ಆ ಪಾರ್ಟಿಗೆ ಬಂದಿದ್ದರು. ಜೋಯ್’ಗೆ ಒಂದು ಫುಟ್’ಬಾಲ್ ಹಾಗೂ ಹಲವು ಫುಟ್’ಬಾಲ್ ಕ್ರೀಡಾಪಟುಗಳ ಸಹಿಯಿದ್ದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದರು, ಅಂದು ಆತನ ಮನೆಯಲ್ಲಿ ಸುಮಾರು ೨೦೦ ಜನ ಸೇರಿದ್ದರು.!

ಇದರ ಕೆಲವೇ ದಿನಗಳಲ್ಲಿ ಕ್ರಿಸ್’ಮಸ್ ಬಂದಿತ್ತು. ಆತನ ಗೆಳೆಯರು, ಕಸಿನ್ಸ್ ಎಲ್ಲರು ಅಂದು ಆತನ ಮನೆಯಲ್ಲಿ ಒಟ್ಟಾಗಿದ್ದರು. ಎಲ್ಲರೂ ಹಾಸಿಗೆ ಹಿಡಿದಿದ್ದ ಜೋಯ್’ಗೆ ಕ್ರಿಸ್’ಮಸ್ ಶುಭಾಶಯ ಕೋರಿ ತಮ್ಮ  ತಮ್ಮ ಮನೆಗಳಿಗೆ ಹಿಂದಿರುಗಿದ್ದರು. ಜೋಯ್’ನ ಆರೋಗ್ಯ  ಎಷ್ಟು ಹದಗೆಟ್ಟಿತ್ತು ಎಂದರೆ ಆ ಒಂದು ರಾತ್ರಿಯನ್ನು ಆತ ಕಳೆದರೆ ಹೆಚ್ಚು ಎಂದು ಎಲ್ಲರೂ ಮಾತಾಡಿಕೊಂಡಿದ್ದರು. ಇನ್ನೊಂದು ದಿನ ಕಳೆದರೆ ಬಹುಶಃ ಜೋಯ್ ನಮ್ಮ ಪಾಲಿಗೆ ಇರುವುದಿಲ್ಲವೇನೋ ಎಂದು ದುಃಖಪಟ್ಟಿದ್ದರು..!

ಆ ದಿನಗಳಲ್ಲಿ ಜೋಯ್ ಪದೇ ಪದೇ ಹೇಳುತ್ತಿದ್ದ ಮಾತು, “ಸೀನಿಯರ್ ಹೈ ಸ್ಕೂಲಿನ ಗ್ರಾಜುಯೇಶನ್ ಆಗಿದ್ದಿದ್ದರೆ..?!” ಎಂದು. ಅಂತಹ ಸ್ಥಿತಿಯಲ್ಲೂ ಆತನಿಗೆ ಗ್ರಾಜುಯೇಶನ್ ಹಂಬಲ ಹೋಗಿರಲಿಲ್ಲ…!! ಆತನ ಕುಟುಂಬಕ್ಕೆ ಈ ಮಾತುಗಳನ್ನ ಕೇಳಿದಾಗ ಬಹಳ ದುಃಖಪಡುತ್ತಿದ್ದರು. ಆದರೆ ಅದೇನೋ, ಆತ ಮಾತ್ರ ಅದನ್ನು ಪದೇ ಪದೇ ಹೇಳುತ್ತಲೇ ಇದ್ದ.

ಕೆಲವು ದಿನಗಳ ನಂತರ ಜೋಯ್ ಸ್ವಲ್ಪ ಸ್ವಲ್ಪ ಆಹಾರ ಸೇವಿಸಲು ಶುರು ಮಾಡಿದ್ದ.  ದಿನೇ ದಿನೇ ಆಹಾರವನ್ನು ಹೆಚ್ಚು ಹೆಚ್ಚು ತೆಗೆದುಕೊಳ್ಳುತ್ತಾ ಬಂದ. ಆತನ ತಾಯಿಗೆ ತನ್ನ ಮಗ ಆರೋಗ್ಯ ಸ್ವಲ್ಪ ಉತ್ತಮಗೊಳ್ಳುತ್ತಿದೆ ಎನಿಸತೊಡಗಿತ್ತು. ಆದರೆ ಜೋಯ್’ಗೆ ಇದ್ದದ್ದು ಕ್ಯಾನ್ಸರ್’ನಲ್ಲೇ ಭಯಾನಕವಾದ ಕ್ಯಾನ್ಸರ್ ಎನ್ನುವುದನ್ನು ಹೇಗೆ ಮರೆಯುವುದು! ಮಿಲಿಯನ್’ನಲ್ಲಿ ಒಬ್ಬರು ಬದುಕುಳಿಯಬಹುದು ಅಷ್ಟೆ ಎಂದಿದ್ದರು ಡಾಕ್ಟರ್. ಆ ಒಬ್ಬ ತನ್ನ ಮಗ ಯಾಕಾಗಿರಬಾರದು ಎಂಬ ಆಸೆ ಹುಟ್ಟಿಕೊಂಡಿತ್ತು ತಾಯಿಗೆ.  ಏನಾದರಾಗಲಿ ಎಂದು ಮತ್ತೆ ಡಾಕ್ಟರ್ ಎಲ್ಲೆನ್’ಬೋಗನ್ ಬಳಿ ಹೋಗಿದ್ದರು. ಟೆಸ್ಟ್’ಗಳನ್ನು ಮಾಡಿ ನೋಡಿದಾಗ ಮಿದುಳಿನಲ್ಲಿದ್ದ ಹಾಗೂ ಸ್ಪೈನಲ್ ಫ್ಲುಯಿಡ್’ನಲ್ಲಿದ್ದ ಟ್ಯೂಮರ್ ಅಲ್ಲಿರಲಿಲ್ಲ…!!!! ಸತತ ಆರು ವರ್ಷಗಳ ಕಾಲ ಆತ ಅನುಭವಿಸಿದ ನೋವು, ಯಾತನೆ, ಹೋರಾಟ ಕೊನೆಗೊಂಡಿತ್ತು.

ಯಾವ ವ್ಯಕ್ತಿಗೆ ಅತ್ಯಂತ ಕ್ರೂರ ಖಾಯಿಲೆ ಬಂದಿತ್ತೋ, ಯಾವ ವ್ಯಕ್ತಿ ಎರೆಡೆರಡು ರೀತಿಯ ಕ್ಯಾನ್ಸರ್’ನ್ನು ಒಟ್ಟಿಗೆ ಇಟ್ಟುಕೊಂಡು ಬಳಲುತ್ತಿದ್ದನೋ, ಯಾವ ವ್ಯಕ್ತಿಯ ಬಗ್ಗೆ ’ಈತ ಬದುಕುಳಿಯಲು ಸಾಧ್ಯವೇ ಇಲ್ಲ’ ಎಂದು ಡಾಕ್ಟರ್’ಗಳು ಷರಾ ಬರೆದಿದ್ದರೋ, ಮೇಕ್-ಎ-ವಿಶ್ ಅವರಿಂದ ಯಾವ ವ್ಯಕ್ತಿಯ ಕೊನೆ ಆಸೆಯನ್ನು ಕೂಡ ಪೂರೈಸಲಾಗಿತ್ತೋ ಆತ ಪವಾಡ ಸದೃಶವೆಂಬಂತೆ ಬದುಕುಳಿದಿದ್ದಾನೆ!!

ವರ್ಷಗಳ ಕಾಲ ಕೀಮೋ ತೆಗೆದುಕೊಂಡಿದ್ದರ ಪರಿಣಾಮವಾಗಿ ಸ್ಕಾಲಿಯೋಸಿಸ್ (ಬೆನ್ನು ಮೂಳೆ ’ಸಿ’ ಅಥವಾ ’ಎಸ್’ ಆಕಾರವಾಗುವುದು) ಉಂಟಾಗಿದೆ ಹಾಗೂ ಮಿದುಳಿನಲ್ಲಿ ಟ್ಯೂಮರ್ ಇದ್ದಿದ್ದ ಕಾರಣ ಶಾರ್ಟ್ ಟರ್ಮ್ ಮೆಮರಿ ಲಾಸ್ ಆಗಿದೆ. ಅದರ ಹೊರತಾಗಿ ಜೋಯ್ ಇಂದು ಆರೋಗ್ಯವಾಗಿದ್ದಾನೆ, ಕ್ಯಾನ್ಸರ್ ಮುಕ್ತನಾಗಿದ್ದಾನೆ. ಹಾಗೆಯೇ ತನ್ನ ಗ್ರಾಜುಯೇಶನ್ ಕೂಡ ಮುಗಿಸಿದ್ದಾನೆ.

ಮೊದಲೇ ಹೇಳಿದಂತೆ ಕೆಲವು ಘಟನೆಗಳು ನಮ್ಮ ತರ್ಕಕ್ಕೆ ಮೀರಿದ್ದಾಗಿರುತ್ತದೆ. ಆದರೆ ಅವುಗಳನ್ನ ನಂಬಲೇಬೇಕು. ಬದುಕು ನಮ್ಮ ಊಹೆ ಹಾಗೂ ತರ್ಕಗಳನ್ನ ಮೀರಿದ್ದಾಗಿರುತ್ತದೆ. ಯಾವ ಕ್ಷಣದಲ್ಲಾದರೂ ಪವಾಡಗಳಾಗಬಹುದು ಹಾಗಾಗಿ ಭರವಸೆ ಕಳೆದುಕೊಳ್ಳಬಾರದು. ನಿಮ್ಮ ಬಳಿ ಯಾರಾದರೂ ಪವಾಡಗಳು ಅಗೋದಿಲ್ಲ ಎಂದರೆ ಜೋಯ್ ಲುವೆರಾ ಬಗ್ಗೆ ಖಂಡಿತಾ ತಿಳಿಸಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!