ಪ್ರತಿ ವರ್ಷ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶಗಳು ಪ್ರಕಟವಾದಾಗ, ಪರೀಕ್ಷೆಯಲ್ಲಿ ಪಾಸಾದ ಮಕ್ಕಳ ಹೆತ್ತವರ ಆನಂದಕ್ಕಿಂತ , ಮೇಲಾಗಿ ಜೀವಕಳೆದುಕೊಂಡ/ಫೇಲಾಗುವ ಭಯದಿಂದ ಜೀವ ಕಳೆದುಕೊಂಡ ಮಕ್ಕಳ ಹೆತ್ತವರ ಆಕ್ರಂದನ ಮುಗಿಲು ಮುಟ್ಟುತ್ತದೆ. ಇದು ಈ ವರುಷದ ಅಥವಾ ನಮ್ಮ ರಾಜ್ಯ ಒಂದರ ಸಮಸ್ಯೆಯಲ್ಲ. ಪ್ರತಿ ವರುಷ ಪರೀಕ್ಷೆಯ ಫಲಿತಾಂಶ ಪ್ರಖಟವಾದಾಗ ದೇಶದಾದ್ಯಂತ ಇದೇ ಸಮಸ್ಯೆ ಪುನಾರಾವರ್ತಿತವಾಗುತ್ತದೆ. ದೇಶದ ಭವಿಷ್ಯವೆಂದೇ ಬಿಂಬಿತವಾಗುವ ಯುವಶಕ್ತಿ, ಪರೀಕ್ಷೆಯಂತಹ ಚಿಕ್ಕ ಸೋಲಿಗೆ ಹೆದರಿ ಸಾವಿಗೆ ಶರಣಾಗುವುದಾದರೆ ಭವಿಷ್ಯದಲ್ಲಿ ದೇಶದ ಗತಿಯೇನು ? ಸೋಲು ಛಲವನ್ನು ತರಬೇಕೇ ಹೊರತು ಸಾವನಲ್ಲ. ಹಾಗಾದರೆ ನಮ್ಮ ಯುವಶಕ್ತಿ ಹಳಿ ತಪ್ಪುತ್ತಿರುವುದಾದರು ಎಲ್ಲಿ ? ಹಳಿ ತಪ್ಪಿಸುತ್ತಿರುವವರಾದರೂ ಯಾರು ? ಉತ್ತರ ಹುಡುಕಿ ಹೊರಟರೆ ಕಣ್ಣಿಗೆ ರಾಚುವುದು ಮಕ್ಕಳ ಹೆತ್ತವರು ಮತ್ತು ಸಮಾಜವೆನಿಸಿಕೊಳ್ಳುವ ನಾವು ಎಂಬ ಸತ್ಯ.
ಮಗು ಹುಟ್ಟಿ ಒಂದು ವರುಷಕ್ಕೆ ಕಿಂಡರ್ ಗಾರ್ಡ್’ನ್ , ಎರಡಕ್ಕೆ ಬೇಬಿ ಸಿಟ್ಟಿಂಗ್, ಮೂರಕ್ಕೆ ಪ್ರೀ ನರ್ಸರಿ, ನಾಲ್ಕಕ್ಕೆ ಯು.ಕೆ.ಜಿ. ಆರು ತುಂಬುವುದರೊಳಗೆ , ಮಗು ಇಂಜಿನಿಯರ್ ಆಗಬೇಕೆ ಅಥವಾ ಡಾಕ್ಟರ್ ಆಗಬೇಕೆ ಎಂಬುದನ್ನು ನಿರ್ಧರಿಸಿ ಬಿಡುತ್ತೇವೆ. ಅಂದಿನಿಂದಲೇ ಕಾಂಪಿಟೇಷನ್ ಎಂಬ ಬೇತಾಳವನ್ನು ಮಗುವಿನ ಹೆಗಲೆರಿಸಿ ಬಿಡುತ್ತೇವೆ. ಬಾಲ್ಯದ ಪಾಠಗಳೆಲ್ಲ ಶಾಲೆಯಲ್ಲಿ ಸಿಗುವುದಿಲ್ಲ ಎಂಬ ಸತ್ಯದ ಅರಿವಿದ್ದರೂ, ಮಗುವನ್ನು ಎಲ್ಲದರಿಂತ ವಂಚಿತಗೊಳಿಸಿ ನಮ್ಮ ಪ್ರತಿಷ್ಠೆಗೆ , ನಮ್ಮ ಸ್ವಾರ್ಥಕ್ಕೆ ಕಂದಮ್ಮನ್ನ ಬಾಲ್ಯವನ್ನೇ ಬಲಿಕೊಟ್ಟು ಬಿಡುತ್ತೇವೆ. ಉತ್ತಮ ಶಿಕ್ಷಣ ದೊರೆಯದಿದ್ದರೂ ಅತಿಯಾದ ಡೊನೇಷನ್ ಕೊಟ್ಟು ನಗರದ ಐಷಾರಾಮಿ ಶಾಲೆಗೆ ಸೇರಿಸಿ ಬಿಡುತ್ತೇವೆ. ಕಾರಣ, ಪಕ್ಕದ ಮನೆಯವನ ಮಗನೋ , ಸಹೋದ್ಯೋಗಿಯ ಮಗಳೋ ಆ ಶಾಲೆಯಲ್ಲಿಯೇ ಓದುತ್ತಾರೆಂಬುದು. ಅಲ್ಲಿಯೂ ಸ್ಪರ್ಧೆ. ಇದ್ದೆಲ್ಲದರ ಫಲ ಆ ಐದು ವರ್ಷದ ಮಗು ಮೌಂಟ್ ಎವರೆಸ್ಟ್ ಹತ್ತಿದ ಹಿಲೇರಿಗಿಂತ ದೊಡ್ಡ ಸ್ಕೂಲ್ ಬ್ಯಾಗ್ ಅನ್ನು ಹೆಗಲಿಗೇರಿಸಿಕೊಂಡು ಹೆತ್ತವರ ಪ್ರತಿಷ್ಠೆಯುಳಿಸುವ ಬಲಿಪಶುವಾಗಿ ಸ್ಪರ್ಧೆಗೆ ಬಿದ್ದು ಬಿಡುತ್ತದೆ. ಸಂಜೆ ಮನೆಗೆ ಬಂದ ಮೇಲೂ ಸಹ ಅದರ ಆಟವೇನಿದ್ದರೂ ವಿಡಿಯೋ ಗೇಮ್ , ಕಂಪ್ಯೂಟರ್ ಗೇಮ್ ಗಳಿಗೆ ಸೀಮಿತ. ಆ ವಯಸ್ಸಿನಲ್ಲಿ ಮಣ್ಣಲ್ಲಿ ಎದ್ದು ಬಿದ್ದು ಓರಗೆಯವರೊಂದಿಗೆ ಕಲಿಯಬೇಕಾದ ಸ್ನೇಹ, ಭೂತಾಯಿಯ ಸ್ಪರ್ಶದಿಂದ ಬಲಿಯಬೇಕಾದ ಸ್ನಾಯು ಎರಡರಿಂದಲೂ ಮಗುವನ್ನು ವಂಚಿಸಿ ಬಿಡುತ್ತೇವೆ. ಪರಿಣಾಮ ಮಗು ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿ ಹೋಗಿಬಿಡುತ್ತದೆ. ಆರು ವರ್ಷ ತುಂಬುವುದರೊಳಗೆ ಮೂಗಿನ ಮೇಲೆ ಕನ್ನಡಕ ಬಂದು ಬಿಡುತ್ತದೆ. ಈ ವಿಡಿಯೋ ಗೇಮ್ ಕಾರ್ಟೂನ್ ಗಳು ಸಹ ಎಲ್ಲಿಯವರೆಗೆ ಎಂದರೆ , ಪಕ್ಕದ ಮನೆಯವನ ಮಗಳು ನಮ್ಮ ಮಗುವಿಗಿಂತ ಒಂದು ಅಂಕದಲ್ಲಾದರೂ ಹಿಂದಿರುವವರೆಗು ಮಾತ್ರ. ಎಂದು ನಮ್ಮ ಮಗು ಅವಳಿಗಿಂತ ಒಂದು ಅಂಕ ಕಡಿಮೆ ಗಳಿಸುತ್ತದೋ ಅಂದಿಗೆ ಮಗುವಿನ ಆಟಗಳಿಗೂ ಬಂದ್. ಸರಿಯಾಗಿ ಮಾತನಾಡಲು ಬರದ ಆ ಕಂದಮ್ಮನನ್ನು ಟ್ಯೂಷನ್ ಗೆ ಸೇರಿಸಿ ಬಿಡುತ್ತೇವೆ. ಎಲ್.ಕೆ.ಜಿ ಯು.ಕೆ.ಜಿ ಮಕ್ಕಳಿಗೂ ನಮ್ಮ ರಾಜ್ಯದಲ್ಲಿ ಟ್ಯೂಷನ್ ಸೆಂಟರ್ ಗಳಿವೆ ಎಂದರೆ, ಯಾವ ಮಟ್ಟಿಗೆ ನಮ್ಮ ಶಿಕ್ಷಣ ವ್ಯವಸ್ಥೆ, ಪೋಷಕರ ಮನಸ್ಥಿತಿ ಹದಗೆಟ್ಟಿದೆ ಊಹಿಸಿಕೊಳ್ಳಿ. ಇನ್ನು ಮಗುವಿನ ಪರೀಕ್ಷೆಯ ದಿನ ಆಫೀಸ್ ಗೆ ರಜೆ ಹಾಕಿ, ಇರುವ ಕೆಲಸವನ್ನೆಲ್ಲಾ ಬಿಟ್ಟು ಸ್ವತಃ ತಾವೇ ಮಗುವನ್ನು ಪರೀಕ್ಷೆಗೆ ಕರೆದುಕೊಂಡು ಹೋಗಿ , ಚಕ್ರವ್ಯೂಹವನ್ನು ಭೇಧಿಸಲು ಅಭಿಮನ್ಯುವನ್ನು ಕಳುಹಿಸಿ, ಮುಂದೇನಾಗುವುದೋ ಎಂದು ಅರಮನೆಯಲ್ಲಿ ಕುಳಿತು ಪರಿತಪಿಸುತ್ತಿದ್ದ ಸುಭದ್ರೆಯಂತೆ, ಪರೀಕ್ಷಾ ಕೇಂದ್ರದ ಹೊರಗೆ ಕುಳಿತು ಪರಿತಪಿಸುವ ಹೆತ್ತವರನ್ನು ನೋಡಿದಾಗ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ಮಗು ಏಳನೇ ತರಗತಿಗೆ ಬರುವಾಗಲೇ ಎಸ್ಸೆಸ್ಸೆಲ್ಸಿ ಯ ಬಗ್ಗೆ ಯೊಚಿಸುತ್ತೇವೆ. ಒಂಭತ್ತನೇ ತರಗತಿಗೆ ಬಂದ ಕೂಡಲೇ ಹತ್ತನೇ ತರಗತಿಯ ಟ್ಯೂಷನ್ ಗೆ ಸೇರಿಸಿ ಬಿಡುತ್ತೇವೆ. ಹತ್ತನೇ ತರಗತಿಯ ಶಾಲೆಗಳು ಪ್ರಾರಂಭವಾಗುವ ಮುನ್ನ ಪಿಯುಸಿಯ ಬಗ್ಗೆ ತಲೆಕೆಡಿಸಿಕೊಳ್ಳುತ್ತೇವೆ. ಕ್ಯಾಟ್ , ಮ್ಯಾಟ್ , ನೀಟ್ ಗಳಿಗೆ ಮಗುವನ್ನು ತಯಾರಿಗೊಳಿಸಲಾರಂಭಿಸುತ್ತೇವೆ. ಪಿಯುಸಿ ಮುಗಿದು ಮಗು ಪ್ರತಿಷ್ಠಿತ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಅಥವಾ ಎಂಬಿಬಿಎಸ್ ಗೆ ದಾಖಲಾದಾಗಲೆ ನಮಗೆ ಸಮಾಧಾನ. ಇಡೀ ಊರ ತುಂಬ ಹೇಳಿಕೊಂಡು ತಿರುಗುವ ಹೆಮ್ಮೆ.
ಸದಾ ಒತ್ತಡ, ಓಡಾಟಗಳಿಂದ ಮಗುವಿನ ಬಾಲ್ಯವನ್ನು ಹಾಳು ಮಾಡುವುದರ ಜೊತೆಗೆ, ನಮ್ಮ ಜೀವನದ ಬಹುಮೂಲ್ಯ ದಿನಗಳನ್ನು ಸಹ ಈ ಜಂಜಾಟದಲ್ಲಿಯೇ ಕಳೆದು ಬಿಟ್ಟಿರುತ್ತೇವೆ. ಎಚ್ಚರವಾಗುವುದು ನಮ್ಮ ಮಕ್ಕಳು ಇಂಜಿನಿಯರ್ ಅಥವಾ ಡಾಕ್ಟರ್ ಗಳಾಗಿ ನಮ್ಮನ್ನು ಬಿಟ್ಟು ವಿದೇಶಕ್ಕೆ ಹಾರುವ ಮುನ್ನ, ನಮ್ಮನ್ನು ವೃದ್ಧಾಶ್ರಮಕ್ಕೆ ಸೇರಿಸಿ ಹೋದಾಗಲೆ. ಅಲ್ಲಿ ಕುಳಿತು ಎಲ್ಲರೊಂದಿಗೆ ನಮ್ಮ ಸರ್ವಸ್ವವನ್ನು ಧಾರೆಯೆರೆದು ಬೆಳೆಸಿದ ಮಗ/ಮಗಳು ಹೀಗೆ ಮಾಡಿದರು ಎಂದು ಅಳುವಾಗ. ಆದರೆ ಮಕ್ಕಳ ಈ ವರ್ತನೆಗೆ ನಾವೇ ಕಾರಣ ಎಂಬುದನ್ನು ಮಾತ್ರ ಆಗಲೂ ನಾವು ಅರಿಯುವುದಿಲ್ಲ. ಭಾವ-ಭಾಂಧವ್ಯಗಳ , ಸ್ನೇಹ-ಸಂಬಂಧಗಳ ಅರ್ಥವನ್ನೇ ನಾವು ನಮ್ಮ ಮಗುವಿಗೆ ಕಲಿಸದಿರುವಾಗ, ನಮ್ಮ ಮುದಿವಯಸಿನಲ್ಲಿ ಅವರು ನಮ್ಮ ಭಾವನೆಗಳಿಗೆ ಸ್ಪಂದಿಸಬೇಕೆಂದು ಅಪೇಕ್ಷಿಸುವುದು ತಪ್ಪಾಗುತ್ತದೆ. ಅಜ್ಜ-ಅಜ್ಜಿ, ಅತ್ತೆ-ಮಾವ, ಚಿಕ್ಕಪ್ಪ-ಚಿಕ್ಕಮ್ಮ ಹೀಗೆ ಸಂಧಗಳ ಜೊತೆ ಬೆಳೆದ ಯಾವ ಮಗು ಕೂಡ ಹೆತ್ತವರನ್ನು ಕಡೆಗಣಿಸಿದ್ದು ಇತಿಹಾಸದಲ್ಲೇ ಇಲ್ಲ.
ಇನ್ನು, ಓದಿನಲ್ಲಿ ಸ್ವಲ್ಪ ಹಿಂದಿರುವ, ವಿದ್ಯೆ ತಲೆಗೆ ಹತ್ತದ ಮಗುವಾಗಿದ್ದರಂತೂ ಅದರ ಕಥೆ ಮುಗಿದೇ ಹೋಯಿತು, ಸ್ಕೂಲ್ ನಲ್ಲಿ ಶಿಕ್ಷಕರಿಂದ, ಮನೆಯಲ್ಲಿ ಹೆತ್ತವರಿಂದ , ಸಮಾಜದಲ್ಲಿ ಬಂಧುಗಳಿಂದ ದಂಡನೆಗೊಳಗಾಗುವ ಮಗು ಮಾನಸಿಕವಾಗಿ ಕುಗ್ಗಿ ಬಿಡುತ್ತದೆ. ಪರೀಕ್ಷೆಯಲ್ಲಿ ಪಾಸಾಗುವುದೇ ಬದುಕು ಎಂದುಕೊಳ್ಳುವ ಮಗು, ಫೇಲಾಗುವ ಭಯ ಕಾಡಿದಾಗ ಅಥವಾ ಫೇಲಾದಾಗ , ಬದುಕನ್ನೇ ಕೊನೆಗಾಣಿಸಿಕೊಂಡು ಬಿಡುತ್ತದೆ. ಮಗುವಿನ ಶವದ ಮುಂದೆ ಕುಳಿತು ಕಣ್ಣಿರಿಡುವಾಗಲು ನಮಗೆ ಅರ್ಥವಾಗುವುದಿಲ್ಲ ನಾವು ಹಾದಿ ತಪ್ಪಿದ್ದೆಲ್ಲಿ ಎಂದು. ಇನ್ನೂ ಓದಿ ಪಾಸಾದ ಮಕ್ಕಳ ಸ್ಥಿತಿಯೇನೂ ಭಿನ್ನವಾಗಿಲ್ಲ. ಅವರು ನಡೆದಾಡುವ ಮಿಷನ್ ಗಳಾಗಿ ಬಿಟ್ಟಿರುತ್ತಾರೆ. ಸ್ನೇಹಿತರಿಲ್ಲದೆ, ಬಂಧುಗಳಿಲ್ಲದೆ ದುಡ್ಡು, ಹೆಸರಿನ ಹಿಂದೆ ಓಡಲಾರಂಭಿಸುತ್ತಾರೆ. ಭಾವನೆಗಳು ಸತ್ತು ನಿರ್ವಿಕಾರರಾಗಿರುತ್ತಾರೆ. ಒಂಟಿತನ ಸದಾ ಅವರನ್ನು ಕಾಡುತ್ತಿರುತ್ತದೆ. ಬದುಕಿನ ಒಂದು ಚಿಕ್ಕ ಸೋಲು ಕೂಡ ಅವರ ಬದುಕನ್ನೇ ಕೊನೆಗಾಣಿಸುತ್ತದೆ. ನಿರುದ್ಯೋಗದಿಂದ, ಆಫೀಸ್ ನಲ್ಲಿ ಮ್ಯಾನೇಜರ್ ಬೈದದ್ದಕ್ಕೆ, ಪ್ರಮೋಷನ್ ನೀಡದಿದ್ದದ್ದಕ್ಕೆ, ಪ್ರೀತಿಸಿದ ಹುಡುಗಿ ಕೈ ಕೊಟ್ಟದಕ್ಕೆ ಹರೆಯದವರು ಬದುಕಿಗೆ ತೆರೆ ಎಳೆದುಕೊಂಡ ಎಷ್ಟೋ ಉದಾಹರಣೆಗಳಿವೆ. ಕಾರಣ ನಾವು ನಮ್ಮ ಮಕ್ಕಳಿಗೆ ಬದುಕು ಎಂದರೇನು ಎಂಬುದನ್ನು ಎಂದಿಗೂ ಹೇಳಿಕೊಟ್ಟಿರುವುದಿಲ್ಲ. ಮಕ್ಕಳಿಗೆ ಅವಶ್ಯಕವಾಗಿ ಹೇಳಿ ಕೊಡಬೇಕಾಗಿರುವುದು ಸೋತು ಗೆಲ್ಲುವುದನ್ನು, ಗೆದ್ದು ಬೀಗುವುದನ್ನಲ್ಲ. ನಮ್ಮ ಮಕ್ಕಳಿಗೆ ಸೋಲುವುದನ್ನು ಕಲಿಸಬೇಕಾಗಿದೆ, ಗೆಲುವುದನಲ್ಲ. ಯಾಕೆಂದರೆ, ಗೆಲುವಿಗೆ ಸಾವಿರ ಜನ ಜೊತೆಯಿರುತ್ತಾರೆ. ಸೋತಾಗ ಮಾತ್ರ ಒಬ್ಬಂಟಿ. ನೆನಪಿರಲಿ ಅಂದು ಪೈಲಟ್ ಆಗಬೇಕೆಂಬ ಆಸೆ ಹೊತ್ತ ಅಬ್ದುಲ್ ಕಲಾಂ, ಪೈಲಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರೆ, ಇಡೀ ಜಗತ್ತು ಒಬ್ಬ ಮಹಾನ್ ವಿಜ್ಞಾನಿಯನ್ನು , ದೇಶ ಒಬ್ಬ ಅತ್ಯದ್ಭುತ ರಾಷ್ಟ್ರಪತಿಯನ್ನು ಕಳೆದುಕೊಳ್ಳುತಿತ್ತು.
ಅಷ್ಟಕ್ಕೂ, ಎಲ್ಲರೂ ಇಂಜಿನಿಯರ್ ಅಥವಾ ಡಾಕ್ಟರ್ ಗಳಾದರೆ, ಉಪಗ್ರಹಗಳನ್ನು ಉಡಾಯಿಸುವವರಾರು ? ವಿಮಾನ ಹಾರಿಸುವವವರಾರು? ರೋಗಗಳಿಗೆ ಲಸಿಕೆ ಕಂಡು ಹಿಡಿಯುವವರಾರು ? ಕಲಾ ಲೋಕ ಬೆಳಗುವವರಾರು ? ದೇಶ ಕಾಯುವವರಾರು ? ಪುಸ್ತಕ ಬರೆಯುವವರಾರು ? ಅನ್ನ ಬಡಿಸುವವರಾರು ? . ನಮ್ಮಂತೆ ನಮ್ಮ ಪೂರ್ವಜರು ಸಹ ತಮ್ಮ ಮಕ್ಕಳನ್ನು ಇಂಜಿನಿಯರ್ ಅಥವಾ ಡಾಕ್ಟರ್ ಮಡಬೇಕೆಂದುಹೊರಟಿದ್ದರೆ, ಕ್ರಿಕೇಟ್ ಗೆ ಸಚಿನ್ , ನಟನೆಗೆ ರಾಜ್ ಕುಮಾರ್ , ಗಾಯನಕ್ಕೆ ಬಾಲಸುಬ್ರಹ್ಮಣ್ಯ , ಸಂಗೀತಕ್ಕೆ ರೆಹಮಾನ್ , ಹರಿಕಥೆಗೆ ಗುರುರಾಜಲು ನಾಯ್ಡು, ರಂಗಭೂಮಿಗೆ ಜಯಶ್ರೀ, ನಾಟ್ಯಕ್ಕೆ ಪ್ರಭುದೇವ, ಹಾಸ್ಯಕ್ಕೆ ಪ್ರಾಣೇಶ್ , ಮಾತಿಗೆ ಸೂಲಿಬೆಲೆ, ಓಟಕ್ಕೆ ಉಷಾ, ಟೆನಿಸ್ ಗೆ ಪೇಸ್, ಕೊಳಲಿಗೆ ಪ್ರವೀಣ್ , ಹಾಕಿಗೆ ಧನರಾಜ್, ಸಾಹಿತ್ಯಕ್ಕೆ ಕುವೆಂಪು,ರಾಜಕೀಯಕ್ಕೆ ಮೋದಿ, ವಿಜ್ಞಾನಕ್ಕೆ ಸಾರಾಭಾಯಿ ಸಿಗುತ್ತಿರಲಿಲ್ಲ. ಬದಲಿಗೆ ಇವುರುಗಳು ಕೂಡ ಯಾವುದೋ ಒಂದು ಕಂಪೆನಿಯ ಐಡಿ ಕಾರ್ಡ್ ಕತ್ತಿಗೆ ನೇತು ಹಾಕಿಕೊಂಡು ಜಗತ್ತಿನ ಯಾವುದೋ ಮೂಲೆಯಲ್ಲಿ ಕಳೆದು ಹೋಗುತ್ತಿದ್ದರು. ಎಲ್ಲಾ ಕ್ಷೇತ್ರಗಳಲ್ಲೂ ಸಮಾನವಾಗಿ ಪ್ರತಿಭೆಗಳಿರಬೇಕು ಆಗಲೇ ಜಗತ್ತು ಸಲೀಸಾಗಿ ನಡೆಯುವುದು. ಇಲ್ಲವಾದಲ್ಲಿ ಕಲ್ಲಿನ ಕೋಳಿ ಕೂಡ ಕೂಗಲಾರಂಭಿಸುತ್ತದೆ.
ಮೇಲೆ ಉಲ್ಲೇಖಿಸಿದ ಕ್ಷೇತ್ರಗಳಿಗಿಂತ ವಿಭಿನ್ನವಾದ , ಅವೆಲ್ಲವಕ್ಕಿಂತ ಬಹುಮುಖ್ಯವಾದ ಇನ್ನೊಂದು ಕ್ಷೇತ್ರವಿದೆ, ಅದೇ ತಲತಲಾಂತರಗಳಿಂದ ನಮ್ಮನ್ನೆಲ್ಲ ಸಾಕುತ್ತಿರುವ ಕೃಷಿ ಕ್ಷೇತ್ರ. ಇಂದು ಬೇಳೆ ಕಾಳುಗಳಿಗೆ , ಆಹಾರ ಧಾನ್ಯಗಳಿಗೆ ಬೆಲೆ ಏರಿಕೆಯಾಗುತ್ತಿದೆಯೆಂದು ಬೊಬ್ಬಿರಿಯುತ್ತಿದ್ದೇವೆ. ಸರ್ಕಾರವೇ ಇದಕ್ಕೆಲ್ಲ ಕಾರಣ ಎಂದು ಹರಿ ಹಾಯುತ್ತಿದ್ದೇವೆ. ಆದರೆ ನಿಜ ಸಂಗತಿಯೇ ಬೇರೆ, ಬೆಲೆ ಏರಿಕೆಗೆ ಪ್ರಮುಖ ಕಾರಣ ಆಹಾರ ಧಾನ್ಯಗಳ ಉತ್ಪಾದನೆ ಕುಂಠಿತವಾಗಿರುವುದು. ಇದರಿಂದ ಅಧಿಕ ಬೆಲೆಕೊಟ್ಟು ಹೊರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ಸಮಸ್ಯೆ ತಲೆದೋರಿದೆ. ಇದು ಧಾನ್ಯಗಳ ಬೆಲೆಯನ್ನು ಗಗನಕ್ಕೇರಿಸಿದೆ. ಕೃಷಿ ಇಂದು ಯಾರಿಗೂ ಬೇಡ, ಎಲ್ಲರಿಗೂ ಬಿಳಿ ಕಾಲರ್ ನ ಕೆಲಸವೇ ಬೇಕು. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಮುಂದೊಂದು ದಿನ ತಿನ್ನುವ ಅನ್ನವನ್ನು ಸಹ ಆಮದು ಮಾಡಿಕೊಳ್ಳಬೇಕಾಗಬಹುದು. ಅಷ್ಟಕ್ಕೂ ತಿನ್ನುವ ಅನ್ನವನ್ನು ಕಂಪ್ಯೂಟರ್ ನಿಂದ ಡೌನ್ ಲೋಡ್ ಮಾಡಲು ಆಗುವುದಿಲ್ಲವಲ್ಲ. ಉಳಿದೆಲ್ಲ ಕ್ಷೇತ್ರಗಳಿಗಿಂತ ಬಲುಬೇಗ ಹಾನಿಗೀಡಾಗುವುದು ಮತ್ತು ಹಾನಿಗೀಡಾಗಿರುವುದು ಕೃಷಿ ಕ್ಷೇತ್ರವೆ. ಈಗಾಗಲೇ ಕೃಷಿಯನ್ನು ಕಡೆಗಣಿಸಿ ಕೈಗಾರಿಕೆಗಳ ಹಿಂದೆ ಹೋದ ದೇಶಗಳ ಆರ್ಥಿಕ ಸ್ಥಿತಿ ಯಾವ ಮಟ್ಟಿಗೆ ಹದಗೆಟ್ಟಿದೆ ಎಂದರೆ , ಚೇತರಿಸಿಕೊಳ್ಳಲು ಐದಾರು ದಶಕಗಳೆ ಬೇಕೆನ್ನಿಸುವಷ್ಟು. ಇದಕ್ಕೆ ಜ್ವಲಂತ ಉದಾಹರಣೆ ರೊಮೇನಿಯಾ ದೇಶ.
ಅಷ್ಟಕ್ಕೂ ಇಂಜಿನಿಯರ್ ,ಎಂಬಿಬಿಎಸ್ ಮಾಡಿದವವರೆಲ್ಲ ಸುಖವಾಗಿರುತ್ತಾರ ? ಒಂದು ವರದಿಯ ಪ್ರಕಾರ ವರುಷ ಒಂದಕ್ಕೆ ನಮ್ಮ ದೇಶದಲ್ಲಿ, ಐವತ್ತು ಸಾವಿರ ಡಾಕ್ಟರ್ ಗಳು, ಎಂಟು ಲಕ್ಷ ಇಂಜಿನಿಯರ್ ಗಳು ಉತ್ತೀರ್ಣರಾಗಿತ್ತಾರೆ. ಇದರ ಪರಿಣಾಮವೇ ಹಾದಿಗೊಂದು ಆಸ್ಪತ್ರೆ, ಬೀದಿಗೆ ನಾಲ್ಕು ಜನ ಇಂಜಿನಿಯರ್ ಗಳು. ಎಂಟು ಲಕ್ಷ ಇಂಜಿನಿಯರ್ ಗಳಲ್ಲಿ ಕೇವಲ ಮೂರರಿಂದ ನಾಲ್ಕು ಲಕ್ಷ ಇಂಜಿನಿಯರ್ ಗಳಿಗಷ್ಟೆ ಉದ್ಯೋಗ ದೊರಕುವುದು. ಉಳಿದ ನಾಲ್ಕು ಲಕ್ಷ ಜನ ನಿರುದ್ಯೋಗಿಗಳಾಗುತ್ತಾರೆ ಅಥವಾ ಎಂಜಿನಿಯರ್ ಓದಿ ಲೆಕ್ಕಿಗರ ಕೆಲಸ ಮಾಡುತ್ತಿರುತ್ತಾರೆ . ಡಾಕ್ಟರ್ ಗಳ ಸ್ಥಿತಿ ಇದಕ್ಕಿಂತ ಭಿನ್ನವಾಗೇನು ಇಲ್ಲ. ಅಂದಮೇಲೆ ಈ ಇಂಜಿನಿಯರ್ ,ಡಾಕ್ಟರ್ ಗಳ ವ್ಯಾಮೋಹವೇತಕ್ಕೋ ಈ ಹೆತ್ತವರಿಗೆ.
ಮಕ್ಕಳಿಗೆ ಬಾಲ್ಯವನ್ನು ನೀಡಿ, ಸಂಬಂಧಗಳೊಡನೆ ಬೆಸೆಯಿರಿ, ಸ್ನೇಹ-ಭಾಂದವ್ಯಗಳನ್ನು ತಿಳಿಹೇಳಿ. ಸೋತಾಗ ಗೆಲುವುದನ್ನು ಹೇಳಿಕೊಡಿ, ಗೆದ್ದಾಗ ಬಾಗಿ ನಡೆಯುವುದನ್ನು ಹೇಳಿಕೊಡಿ. ಎಲ್ಲಕ್ಕಿಂತಲೂ ಬದುಕು ದೊಡ್ಡದು ಎಂಬ ಪಾಠಮಾಡಿ. ಅವರ ಆಸಕ್ತಿ, ಆಸೆಗಳನ್ನು ಅರಿಯತುಕೊಂಡು ಅವರನ್ನು ಅವರ ಭವಿಷ್ಯ ರೂಪಿಸಿಕೊಳ್ಳಲು ಬಿಡಿ. ಆಗ ನೋಡಿ , ಯಾವ ಹೆತ್ತವರು ವೃದ್ಧಾಶ್ರಮದಲ್ಲಿ ಕೊಳೆಯುವುದಿಲ್ಲ, ಯಾವ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಇಂದು ಬಹು ಮುಖ ಪ್ರತಿಭೆಗಳಾಗಿ ಗುರುತಿಸಿಕೊಂಡು ತಮ್ಮದೇ ಹಾದಿಯಲ್ಲಿ ತಮ್ಮದೇ ಕ್ಷೇತ್ರದಲ್ಲಿ ಹೆಸರು ಮಾಡಿರುವವರೊಮ್ಮೆ ಮಾತನಾಡಿಸಿ ನೋಡಿ ಅವರ ತಂದೆ ತಾಯಿಗಳಾರು ಅವರನ್ನು ನೀನು ಇಂಜಿನಿಯರ್ ಅಥವಾ ಡಾಕ್ಟರ್ ಆಗಬೇಕೆಂದು ಎಂದಿಗೂ ಪೀಡಿಸಿರುವುದಿಲ್ಲ.
ಈ ಲೇಖನವನ್ನು ಓದಿದ ಒಬ್ಬ ಹೆತ್ತವರು ತಮ್ಮ ಮಕ್ಕಳ ಆಸೆಯೇ ನಮ್ಮ ಆಸೆ ಎಂದು ನಿರ್ಧರಿಸಿದರೆ, ಒಬ್ಬ ವಿದ್ಯಾರ್ಥಿ ಎಲ್ಲಕ್ಕಿಂತಲೂ ಬದುಕು ದೊಡ್ಡದು ಎಂಬ ಸತ್ಯವನ್ನು ಅರ್ಥ ಮಾಡಿಕೊಂಡು ಎಂತಹ ಪರಿಸ್ಥಿತಿ ಬಂದರೂ ಆತ್ಮಹತ್ಯೆಯಂತಹ ಹೀನ ಕೃತ್ಯಕ್ಕೆ ಕೈ ಹಾಕುವುದಿಲ್ಲ ಎಂದು ನಿರ್ಧರಿಸಿದರೆ , ಈ ಬರವಣಿಗೆಗೂ ಒಂದು ಸಾರ್ಥಕತೆ ದೊರೆಯುತ್ತದೆ.
ಚಿತ್ರ: ಇಂಟರ್’ನೆಟ್