ಅಂಕಣ

‘ಬೌದ್ಧಿಕ ಷಂಡತನ’ಕ್ಕೆ ಧಿಕ್ಕಾರ!

ಪ್ರಿಯ ಅಭಿಷೇಕ್,

‘ನಾನು ಬದುಕಿದ್ದಾಗ ಒಮ್ಮೆಯು  ನನ್ನನ್ನು ಮಾತನಾಡಿಸದವನು ಈಗೇಕೆ ನನಗೆ ಪತ್ರ ಬರೆಯುತ್ತಿದ್ದಾನೆ?’ ಎಂದು ಆಶ್ಚರ್ಯ ಪಡಬೇಡ, ಕಳೆದ ನಾಲ್ಕೈದು ದಿವಸಗಳಿಂದ ನಿನ್ನ ವಿಷಯದ ಕುರಿತಾಗಿ ಅಲೋಚಿಸಿದವರಲ್ಲಿ( ‘ತಲೆಕೆಡಿಸಿಕೊಂಡಿದ್ದು’ ಎಂದರು ಅತಿಶಯೋಕ್ತಿಯಲ್ಲ ) ನಾನೂ ಒಬ್ಬ. ಹಾಗಾಗಿ ಮನಸ್ಸಿನಲ್ಲಿ ಕಾಡುತ್ತಿರುವ ನೋವು, ಹತಾಶೆ, ವಿಷಾದ ಮತ್ತು ನಿನ್ನ ಮೇಲಿರುವ ಸಿಟ್ಟನ್ನು ಹೊರ ಹಾಕಿ ಹಗುರಾಗಬೇಕೆಂದು ಈ ಪತ್ರವನ್ನು ಬರೆಯುತ್ತಿದ್ದೇನೆ.

ಹೌದು, ನೀನಿಂದು ಭೌತಿಕವಾಗಿ ನಮ್ಮಿಂದ ದೂರವಾಗಿರಬಹುದು ಆದರೆ ಇಂದು ನಿನ್ನ ದೇಹತ್ಯಾಗದ ನಂತರ ನಡೆಯುತ್ತಿರುವ ಆಣೆ, ಪ್ರಮಾಣ, ಇತ್ಯಾದಿ ರಾಜಕೀಯ ದೊಂಬರಾಟಗಳನ್ನು ನೋಡಿದರೆ, ಮೊದಲೆ ಹತಾಶೆಗೊಂಡಿದ್ದ ನಿನ್ನ ಆತ್ಮ ಈಗ ಇನ್ನಷ್ಟು ಕ್ರೋಧಗೊಂಡಿರುತ್ತದೆಯೆ  ಹೊರತು  ಚಿರಶಾಂತಿಯನ್ನಂತು ಹೊಂದಿರುವುದಿಲ್ಲ ( ಹಾಗಾಗದಿರಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ) ಎಂದು ಭಾವಿಸುತ್ತಾ ಈ ಪತ್ರವನ್ನು ನೀನು  ಓದುತ್ತೀ ಎಂಬ ನಂಬಿಕೆಯೊಂದಿಗೆ ಮುಂದುವರೆಯುತ್ತೇನೆ.

ಹ!, ‘ನಿನ್ನ ಸಾವಿನ ನಂತರ ನಡೆಯುತ್ತಿರುವ ರಾಜಕೀಯ ದೊಂಬರಾಟ’ ಎಂದೆನಲ್ಲ!’ ಅದಕ್ಕಿಂತ ಮುಂಚೆಯೆ ಹೊಲಸು ಮನಸ್ಸುಗಳು ರಾಜಕೀಯವನ್ನು ಇಲ್ಲಿ ಎಳೆದು ತಂದಿದ್ದರು ಎಂಬುದು ನಿನಗು ಗೊತ್ತಿರುವ ವಿಚಾರವೆ. ಇರಲಿ ಈ ವಿಚಾರದಲ್ಲಿ ನನಗಿಂತ ಹೆಚ್ಚಾಗಿ ಹಾಗು ನಿಖರವಾಗಿ ನಿನಗೆ ತಿಳಿದಿರುವುದರಿಂದ ಮತ್ತು ಈ ಪ್ರಕರಣದ ಕುರಿತು ವಿಚಾರಣೆ ನಡೆಯುತ್ತಿರುವುದರಿಂದ ಈ ಘಟನೆಯ ‘ಪೋರ್ಸ್ಟ್ ಮಾರ್ಟೆಂ’ ಮಾಡುವ ಗೋಜಿಗೆ ನಾನು ಹೋಗುವುದಿಲ್ಲ. ಬದಲಾಗಿ ನಿನ್ನ ಜತೆ ಕೆಲವೊಂದು ವಿಷಯಗಳನ್ನು ಹಂಚಿಕೊಳ್ಳುತ್ತೇನಷ್ಟೆ. ಇದಕ್ಕೂ ಮೊದಲು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ನಾನು ನಿನ್ನ ಪಕ್ಕದೂರಿನವನೆ ಆದುದರಿಂದ, ಈ ಘಟನೆ ಹಾಗು ನಿನ್ನ ಕುರಿತಾಗಿ ನಿನಗೆ ಸಂಬಂಧಪಟ್ಟವರಿಂದಲೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿರುತ್ತೇನೆ. ಹಾಗಾಗಿ ಸುಮ್ಮನೆ ಗೀಚುವ ಚಪಲಕ್ಕಾಗಿ ಬರೆಯುತ್ತಿದ್ದಾನೆಂದು ನೀನು ಭಾವಿಸದೆ ನಿಸ್ಸಂಶಯವಾಗಿ ಇದನ್ನು ಓದಬಹುದು.

ನಿನ್ನ ಸಾವಿಗೆ ಸಂಬಂಧಪಟ್ಟಂತೆ ಎರಡು ಪ್ರಮುಖ ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಬೇಕೆಂದಿದ್ದೇನೆ. ಮೊದಲನೆಯೆದು, ತಮ್ಮ ಸಿದ್ಧಾಂತಗಳನ್ನು ವಿರೋಧಿಸುವ ವ್ಯಕ್ತಿ ಹಾಗು ವೈಚಾರಿಕತೆಯನ್ನು, ಧೈರ್ಯದಿಂಧ ನೇರವಾಗಿ ಎದುರಿಸಲಾಗದೆ, ವಾಮಮಾರ್ಗದ ಮೂಲಕ ಸದೆಬಡಿಯುವ ಎಡಬಿಡಂಗಿಗಳ ‘ಬೌದ್ಧಿಕ ಷಂಡತನ’ದ ಕುರಿತಾಗಿ ಹಾಗು ಎರಡನೆಯದು, ಇಂದು ಎಲ್ಲರ ಮನಗಳನ್ನು ತಲುಪುತ್ತಿರುವ ‘ರಾಷ್ಟ್ರೀಯತೆ’ ಚಿಂತನೆಯನ್ನು ಹೊಂದಿರುವ ವ್ಯಕ್ತಿಗಳು ಅದರಲ್ಲು ಮುಖ್ಯವಾಗಿ ವಿದ್ಯಾರ್ಥಿಗಳು, ನಿನ್ನ ಮಾರ್ಗವನ್ನು ಅನುಸರಿಸದೆ ಈ ರೀತಿಯ ಅನೈತಿಕತೆಯನ್ನು ಧೈರ್ಯದಿಂದ ಎದುರಿಸಬೇಕಾಗಿರುವುದರ ಕುರಿತಾದುದು.

ಈಗ ಮೊದಲನೆ ವಿಷಯಕ್ಕೆ ಬರೋಣ. ಯೋಧರು ಹಾಗು ರಾಷ್ಟ್ರೀಯತೆಯ ಕುರಿತಾಗಿ ಜ್ಞಾನ ಹೊಂದಿರುವ, ಬಹಳ ನಿಖರವಾಗಿ ಹಾಗು ಅಷ್ಟೆ ಅದ್ಭುತವಾಗಿ ಮಾತನಾಡುವ ‘ವಾಗ್ಮಿ’ಯೊಬ್ಬರನ್ನು ನಿಮ್ಮ ಕಾಲೇಜಿನಲ್ಲಿ ನಡೆದ ‘ಯೋಧನಮನ’ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತಲ್ಲವೆ? ಅದೆ ‘ವಾಗ್ಮಿ’ಯನ್ನು ಸುಮಾರು ನಾಲ್ಕು ವರ್ಷಗಳ ಹಿಂದೆ, ನಾನು ಪದವಿ ಓದಿದ ಕಾಲೇಜಿನಲ್ಲಿ ವಿದ್ಯಾರ್ಥಿಗಳೆ ಆಯೋಜಿಸಲಾಗಿದ್ದ ‘ನಾನು, ನನ್ನ ಭಾರತ’ಕಾರ್ಯಕ್ರಮಕ್ಕೂ ಕರೆಯಲಾಗಿತ್ತು. ಅವರ ಕಂಠದಿಂದ ‘ನನ್ನ ಭಾರತ’ದ ವರ್ಣನೆಯನ್ನು ಕೇಳಲು ನಾನು ನಿನ್ನಂತೆ ಉತ್ಸುಕನಾಗಿದ್ದೆ, ಆದರೆ ಕೊನೆ ಕ್ಷಣದಲ್ಲಿ ಅವರು ಬರಲಿಲ್ಲ, ಅಲ್ಲ, ಬರಲು ಬಿಡಲಿಲ್ಲ, ಅವರು ಕಾಲೇಜಿನ ಕ್ಯಾಂಪಸ್ಸಿಗೆ ಕಾಲಿಡುತ್ತಿದ್ದ ಹಾಗೆ ಎಲ್ಲವು ಕೇಸರಿಮಯವಾಗಿಬಿಡುತ್ತದೆ, ವಿದ್ಯಾರ್ಥಿಗಳೆಲ್ಲ ಬಿಜೆಪಿಯ ಸದಸ್ಯರಾಗಿಬಿಡುತ್ತಾರೆಂದು ಕಾಂಗ್ರೆಸ್ಸಿಗರು ಚೀರಾಡಿ, ಬರದಂತೆ ಒತ್ತಡ ಹೇರಿದರು.

ಈಗ ಇದರೊಂದಿಗೆ ನಿನ್ನ ಕಾಲೇಜಿನಲ್ಲಾದ ಪ್ರಸಂಗವನ್ನೊಮ್ಮೆ  ಜ್ಞಾಪಿಸಿಕೊ. ಎನ್‍ಸಿಸಿ ಘಟಕದವರು ನಿವೃತ್ತ ಸೈನಿಕರಿಗೆ ಸನ್ಮಾನಿಸುವ ‘ಯೋಧ ನಮನ’ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ ಹಾಗು ಯೋಧರೊಂದಿಗೆ ನಿಕಟ ಸಂಪರ್ಕದಲ್ಲಿರುವ, ‘ಶೂಟ್ ಯುವರ್ ಎಮೋಶನ್’ಎನ್ನುವ ಮೂಲಕ ನಮ್ಮ ಸಂದೇಶಗಳನ್ನು ಗಡಿಕಾಯುವ ಯೋಧರಿಗೆ ಮುಟ್ಟಿಸಿದ, ಆ ಕುರಿತು ಮಾತನಾಡುವ ಅರ್ಹತೆ ಹೊಂದಿರುವ ವ್ಯಕ್ತಿಯನ್ನು(ನಿವೃತ್ತ ಸೈನಿಕರೆ ಕಾರ್ಯಕ್ರಮ ಆಯೋಜಕರಿಗೆ ಮುಖ್ಯ ಭಾಷಣಕಾರರ ಹೆಸರನ್ನು ಸೂಚಿಸಿದ್ದು ಎಂಬ ಮಾಹಿತಿಯು ನನಗೆ ದೊರೆಯಿತು!) ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾರೆ, ಯಥಾಪ್ರಕಾರ ಒಂದು ಪಂಥಕ್ಕೆ, ಒಂದು ಪಕ್ಷಕ್ಕೆ ಇವರನ್ನು ಸಮೀಕರಿಸಿ, ಕಾರ್ಯಕ್ರಮಕ್ಕೆ ಕರೆಯಬಾರದೆಂದು ವಿದ್ಯಾರ್ಥಿಗಳನ್ನು ಮುಂದಿರಿಸಿಕೊಂಡು ಕಾಂಗ್ರೆಸ್ಸು ಊಳಿಡುತ್ತದೆ, ಸುಮ್ಮನೆ ವಿವಾದಕ್ಕೇಕೆ ಎಡೆಮಾಡಿಕೊಡಬೇಕೆಂದು, ಆಹ್ವಾನಿಸಿದ ಆಡಳಿತ ಮಂಡಳಿಯೆ ‘ತಾವು ಬರದಿರುವುದೆ ಉತ್ತಮ’ವೆನ್ನುತ್ತದೆ.

ಈಗ ಈ ಎರಡು ಘಟನೆಗಳಲ್ಲಿರುವ ಸಾಮ್ಯತೆ ಕಂಡಿತಲ್ಲ?. ಹೀಗೆ ತಾನು ಬೌದ್ಧಿಕವಾಗಿ ಎದುರಿಸಲಾಗದರನ್ನ ವಿವಾದಕ್ಕೀಡಾಗುವಂತೆ ಮಾಡಿ, ಕಾರ್ಯಕ್ರಮಕ್ಕೆ ಬಾರದಿರುವಂತೆ ಮಾಡುವ ಷಂಡತನವನ್ನೆ ನಾನು ‘ಬೌದ್ಧಿಕ ಷಂಡತನ’ವೆಂದದ್ದು. ಅಷ್ಟು ತಾಕತ್ತಿದೆ ಎಂದಾದಲ್ಲಿ ತಮ್ಮ ಪೈಕಿಯಲ್ಲೆ ಯೋಧರು ಹಾಗು ದೇಶದ ಕುರಿತಾಗಿ ಮಾತನಾಡಬಲ್ಲ ಇವರಿಗಿಂತಲು ಸೂಕ್ತವ್ಯಕ್ತಿಯನ್ನು  ಹೆಸರಿಸಲಿ ನೋಡೋಣ!. ಅಥವಾ ಅದಕ್ಕೆ ಪ್ರತಿಯಾಗಿ ಇನ್ನೊಂದು ಕಾರ್ಯಕ್ರಮ ಆಯೋಜಿಸಲಿ ನೋಡೋಣ.!ಹಹಹ… ಟಾರ್ಚು ಹಾಕಿ ಹುಡುಕಿದರು ಅಂಥವರು ಸಿಗಲಿಕ್ಕಿಲ್ಲ. ಕೊನೆಪಕ್ಷ ಸಿಕ್ಕರು, ನಾಲ್ಕನೆ ಸಾಲಿಗಿಂತ ಮಿಗಿಲಾಗಿ ಕುರ್ಚಿಗಳು ಭರ್ತಿಯಾಗಲಿಕ್ಕಿಲ್ಲ!. ಇದು ನೈಜ ಸ್ಥಿತಿ.

ಈ ಎಡಬಿಡಂಗಿಗಳನ್ನು ಅಕ್ಷರಶಃ  ಚಿಂತೆಗೀಡು ಮಾಡುತ್ತಿರುವುದು ಇದೆ. ಈ ರೀತಿ ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ವಾಗ್ಪರಿಯ ಮೂಲಕ ‘ರಾಷ್ಟ್ರೀಯ’ ಚಿಂತನೆಯನ್ನು ಜನರಲ್ಲಿ ಜಾಗೃತಗೊಳಿಸುತ್ತಿದ್ದಾನಲ್ಲ ಎಂಬುದು! ಅದರಲ್ಲು ಇಂದು ಮುಖ್ಯವಾಗಿ ಯುವ ಸಮುದಾಯ ಈ ಕಡೆ ವಾಲುತ್ತಿರುವುದನ್ನು ಇವುಗಳಿಗೆ ಸಹಿಸಲಾಗುತ್ತಿಲ್ಲ. ಹಾಗಾಗಿ ಇದನ್ನು ಬೌದ್ಧಿಕವಾಗಿ ಎದುರಿಸಲಾಗದೆ ಸುಳ್ಳು ಸುಳ್ಳು ಹಣೆಪಟ್ಟಿ ಕಟ್ಟಿ, ವಿವಾದಿತ ಎಂದು ಬಿಂಬಿಸಿ, ಜನರಲ್ಲಿ ತಪ್ಪು ಭಾವನೆಯನ್ನು ಮೂಡಿಸುವ ಹೇಡಿತವನ್ನು ತೋರಿಸುತ್ತಿದ್ದಾರೆ. ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಿಯಾಗಿ ಎಲ್ಲರು ಮಾಡಿದ್ದು ಇದನ್ನೆ. ಬಿಡು ಇದು ಆ ಪಕ್ಷದವರ ಡಿಎನ್‍ಎನಲ್ಲೆ ಬಂದು ಬಿಟ್ಟಿದೆ. ಈ ಘಟನೆಯ ನಂತರ ‘ಡೊಂಗಿ ಹಿಂದುತ್ವವಾದಿ’ ಎಂದು ಬೊಬ್ಬಿಡುತ್ತಿರುವ ಸ್ಥಳೀಯ ಕಾಂಗ್ರಸ್ ಮುಖಂಡರೊಬ್ಬರು ‘ಹಿಂದುತ್ವ’ದ ಕುರಿತಾಗಿ ಇದೆ ‘ಡೊಂಗಿ ಹಿಂದುತ್ವವಾದಿ’ಯ ಜತೆ ತೆರೆದ ವೇದಿಕೆಯಲ್ಲಿ ಚರ್ಚಿಸುವ ಧೈರ್ಯ ತೋರಲಿ ನೋಡೋಣ!?. ಅದು ಬಿಡು ಈ ಹೇಳೀಕೆ ನೀಡಬೇಕಾದರೆ ಜತೆಯಲ್ಲಿ ಕೂತಿದ್ದ, ‘ರೈತ ಸಂಗಾತಿ’ಗಳು, ‘ಅವಕಾಶವಾದಿತನ’ವನ್ನೆ ಸಾಕ್ಷಾತ್ಕರಿಸಿಕೊಂಡಿರುವ ಅವರದೆ ಪಕ್ಷದ ಪಕ್ಕದ ತಾಲೂಕಿನ ಅಧ್ಯಕ್ಷರೆ ಸುಮಾರು ಐದು ವರ್ಷದ ಕೆಳಗೆ ಈ ‘ಡೊಂಗಿ ಹಿಂದುತ್ವವಾದಿ’ಯ ಮಾತುಗಳನ್ನೆ ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದರೆಂಬುದನ್ನು ಇವರು ಮರೆತು ಬಿಟ್ಟಿದ್ದಾರೆ. ತಮಾಷೆಯೆಂದರೆ, ರಾಷ್ಟ್ರಪಿತ ಮಹಾತ್ಮಗಾಂಧಿಯ ಕುರಿತು ಮಾತನಾಡಿದುದರ ಫಲವಾಗಿ ಮಾನ್ಯ ಮುಖ್ಯಮಂತ್ರಿಗಳಿಂದ ‘ಕೋಮುವಾದಿ’ಎಂದು ಕರೆಸಿಕೊಂಡವರೆ, ತಮ್ಮ ‘ಜಾಗೊ ಭಾರತ್’ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನೇತಾರರಾದ ಸರ್ದಾರ್ ವಲ್ಲಭಾಯಿ ಪಟೇಲ್ ಹಾಗು ಲಾಲ್‍ ಬಹುದ್ದೂರು ಶಾಸ್ತ್ರಿಗಳು ಕುರಿತಾಗಿ ಆ ಪಕ್ಷದವರಿಗೆ ತಿಳಿದಿರದ ಹಲವಾರು ವಿಷಯಗಳನ್ನು ಹೇಳುತ್ತಾರೆಂಬುದು ಅವರಿಗೆ ಗೊತ್ತಿಲ್ಲ. ಇನ್ನು ಈ ‘ಕೋಮುವಾದಿ’, ಭಾಷಣ ಮಾಡಿ ಬಂದ ಒಂದು ಕಡೆಯು ಸಂಘರ್ಷಗಳಾದ ಉದಾಹರಣೆಗಳಿಲ್ಲ. ಸ್ವತಃ ಅವರೆ ಒಂದು ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಆ್ಯಂಕರ್‍ಗೆ ಓಪನ್ ಚಾಲೆಂಜ್ ಹಾಕಿದ್ದಾರೆ. ಇನ್ನು ಇವರ ಬೌದ್ಧಿಕತೆ ಹಾಗು ವೈಚಾರಿಕತೆಯನ್ನು ದಿಟ್ಟವಾಗಿ ಎದುರಿಸಿದ ಆ್ಯಂಕರುಗಳಾಗಲಿ, ಪ್ಯಾನೆಲಿಸ್ಟುಗಳಾಗಲಿ ತೀರ ವಿರಳ. ಇತ್ತೀಚಿನ ಆಜಾದಿ ವರ್ಸಸ್ ಸ್ವಾತಂತ್ರ್ಯ ಕಾರ್ಯಕ್ರಮ ಇದಕ್ಕೆ ಸ್ಪಷ್ಟ ಉದಾಹರಣೆ.

ಈ ರೀತಿಯಾಗಿ ಒಬ್ಬ ವ್ಯಕ್ತಿಯ ಗುಣಗಾನ ಮಾಡುತ್ತಿದ್ದೇನೆಂದು ಭಾವಿಸಿಕೊಳ್ಳಬೇಡ. ವ್ಯಕ್ತಿಪೂಜೆ, ವ್ಯಕ್ತಿಆರಾಧನೆ  ಅಥವಾ ವ್ಯಕ್ತಿ ಮಹತ್ವ ನಮ್ಮ ಚಿಂತನೆಗೆ ಸಹ್ಯವಾದುದಲ್ಲ ಎಂಬುದು ನಿನಗೂ ಗೊತ್ತು ನನಗೂ ಗೊತ್ತು. ಆದರೆ ನಾನು ಇಲ್ಲಿ ಪ್ರಸ್ತಾಪಿಸುತ್ತಿರುವುದು ಆ ವ್ಯಕ್ತಿಯ ಬೌದ್ಧಿಕತೆಯ ಹಿಂದಿರುವ ಅಪಾರ ಅಧ್ಯಯನ, ವಿಷಯ ಜ್ಞಾನ, ವೈಚಾರಿಕತೆ, ಚಿಂತನೆಗಳು  ಮತ್ತು ಇದನ್ನು ಸರಿಯಾಗಿ ಅರ್ಥೈಸಿಕೊಳ್ಳದ ಅಥವಾ ಅರ್ಥೈಸಿಕೊಂಡಿದ್ದರು ಎದುರಿಸಲಾಗದೆ, ಆ ವ್ಯಕ್ತಿಯನ್ನು ಬಗ್ಗು ಬಡಿಯಲೆಬೇಕೆಂದು ವಾಮಮಾರ್ಗದ ಮೂಲಕ ಪ್ರಯತ್ನಪಡುತ್ತಿರುವ ಎಡಬಿಡಂಗಿಗಳ ಕುರಿತಾಗಿ. ಎಡಬಿಡಂಗಿಗಳ ಈ ‘ಬೌದ್ಧಿಕ ಷಂಡತನ’ವೆಂಬುದು ಕೇವಲ ಒಂದು ವ್ಯಕ್ತಿಗೆ ಅಥವಾ ಸಂಘಟನೆಗೆ ಮಾತ್ರ ಸೀಮಿತವಾದುದೆಂದು  ಭಾವಿಸಬೇಡ. ಅದು ಮುಂದುವರೆದು ತಮ್ಮ ಸಿದ್ಧಾಂತಕ್ಕೆ ವಿರುದ್ಧವಾಗಿರುವ ಫೇಸ್‍ಬುಕ್ ಪೇಜ್‍ಗಳು ಹಾಗು ಸಂಶೋಧನಾ ಕೇಂದ್ರವನ್ನು ಬಿಟ್ಟಿಲ್ಲ. ಇನ್ನೂ ವಿಚಿತ್ರವೆಂದರೆ, ಕಾರ್ಯಕ್ರಮ ಆಯೋಜಿಸಿದ್ದು ಕಾಲೇಜಿನ ಎನ್‍ಸಿಸಿ ಹಾಗು ಎನ್‍ಎಸ್‍ಎಸ್ ಘಟಕ, ಮುಖ್ಯ ಭಾಷಣಕಾರರ ಹೆಸರನ್ನ ಸೂಚಿಸಿದ್ದು ನಿವೃತ್ತ ಸೈನಿಕರು, ಅವರನ್ನು ಆಹ್ವಾನಿಸಿ ನಂತರ ಬರಬೇಡಿ ಎಂದಿದ್ದು ಕಾಲೇಜಿನ ಆಡಳಿತ ಮಂಡಳಿ ಎಂಬ ಸತ್ಯವನ್ನು ಅರಿತಿದ್ದರು, ಈಗ ನಿನ್ನ ಸಾವಿನ ಹೊಣೆಯನ್ನು ಒಬ್ಬ ವ್ಯಕ್ತಿಯ ಮೇಲೆ ಹಾಗು ನೀನು ಪ್ರತಿನಿಧಿಸಿದ ಸಂಘಟನೆಯ ಮೇಲೆ ಹೊರೆಸುತ್ತಿದ್ದಾರೆ ಈ ನೀಚರು. ತಾವು ವಿರೋಧಿಸಿದ ವ್ಯಕ್ತಿ ಕಾರ್ಯಕ್ರಮಕ್ಕೆ ಬರುವುದಿಲ್ಲವೆಂದು ಹಿಂದಿನ ದಿನವೆ ಗೊತ್ತಾದರು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ, ಉದ್ಧೇಶಪೂರ್ವಕವಾಗಿಯೆ ಪಕ್ಕದ ಊರಿನಿಂದಲು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಗಲಾಟೆ ಮಾಡಿಸುತ್ತಾರೆಂದಾದರೆ ಇವರ ಅಜಾಂಡವಾದರು ಏನು?. ಜಾತಿ, ಮತ, ಪಂಥ, ಪಕ್ಷಗಳನ್ನ ಮೀರಿ ದೇಶವನ್ನು ಕಾಯ್ದ ಸೈನಿಕರಿಗೆ ಒಳಗಡೆ ಸನ್ಮಾನ ನಡೆಯುತ್ತಿದ್ದರೆ, ಹೊರಗಡೆ ಪ್ರತಿಭಟಿಸುತ್ತಾರಲ್ಲ, ಇನ್ನಷ್ಟು ಕನ್ನಯ್ಯಾ ಕುಮಾರರನ್ನು ಸೃಷ್ಟಿಸಬೇಕಿಂದಿದ್ದಾರೆ ಇವರು?. ಬಿಡು ಇವರಿಗೆ ‘ಭಾರತ ಮಾತಾಕಿ ಜೈ’ಗಿಂತ ‘ಭಾರತ್ ಮುರ್ದಾಬಾದ್’ಎಂಬುದೆ ಅತ್ಯಂತ ಆಪ್ತವಾಗುತ್ತದೇನೊ!.

ಅಭಿಷೇಕ್, ನೀನು ಇದನ್ನೆಲ್ಲ ಧೈರ್ಯವಾಗಿ ಎದುರಿಸಬೇಕಿತಲ್ಲಾ?. ಯಾಕೆ ದುಡುಕಿಬಿಟ್ಟೆ?. ಒಂದು ಎಫ್‍ಐಆರ್ ಇಂದಾಗಿ ನಿನ್ನ ಇಡಿ ಜೀವನವೆ ಹಾಳಾಯಿತೆಂದು ಯಾವ ಮುಠ್ಠಾಳ ನಿನಗೆ ತಲೆಗೆ ತುಂಬಿದ?. ಹೆತ್ತವರು ತನ್ನ ಮಗನ ಶವ ನೋಡವಾಗ ಆಗುವ ಸಂಕಟಕ್ಕಿಂತ, ನಿನ್ನ ಸಂಕಟವೆ ನಿನಗೆ ಮಿಗಿಲಾಗಿ ಕಂಡಿತೇನು?. ಅಥವಾ ಆ ರೀತಿ ಅನ್ನಿಸುವಷ್ಟರ ಮಟ್ಟಿಗೆ ಮಾನಸಿಕ ಕಿರುಕುಳ ನೀಡಲಾಯಿತೇನು?. ಒಬ್ಬ ಸಂಘಟಕನಾಗಿ ಇಂಥಹ ಸವಾಲುಗಳನ್ನು ಎದುರಿಸುವಂಥಹ ಮಾನಸಿಕತೆಯನ್ನು ನೀನು ಹೊಂದಿರಬೇಕಿತ್ತಲ್ಲ?, ಸಂಘಟನೆ ನಿನಗೆ ಇದನ್ನು ಕಲಿಸಿರಬೇಕಿತ್ತಲ್ಲ?. ಇಲ್ಲವೆಂದಾದಲ್ಲಿ, ಆ ಸಂಘಟನೆಯ ಕಾರ್ಯವೈಖರಿಯ ಕುರಿತು ಚರ್ಚಿಸಬೇಕಾದ ತುರ್ತು ಅಗತ್ಯವಿದೆ. ನಾನು ಪ್ರಸ್ತಾಪಿಸಬೇಕಿರುವ ಎರಡನೆ ವಿಷಯವು ಇದೆ. ನಮ್ಮ ಮುಂದೆ ಅದ್ಭುತವಾದ ‘ಚಿಂತನೆ’ ಇರುವುದು ನಿಜ, ಆದರೆ ಆ ‘ಚಿಂತನೆ’ಯಿಂದ ನಮ್ಮ ವ್ಯಕ್ತಿತ್ವದ ಬೆಳವಣಿಗೆಯನ್ನು ನಾವು ಕಂಡುಕೊಳ್ಳುತ್ತಿದ್ದೇವೆ? ಎಂಬುದು ಸ್ವವಿಮರ್ಶೆಗೆ ಒಳಪಡಬೇಕಾದಂತಹ ವಿಚಾರ. ಈ ರೀತಿಯ ಅನೈಕತೆಯನ್ನು ನಾವು ಧೈರ್ಯದಿಂದ ಎದುರಿಸಬೇಕಾದಲ್ಲಿ ಮಾನಸಿಕ, ಬೌದ್ಧಿಕ ಹಾಗು ಶಾರೀರಿಕವಾಗಿ ಸದೃಢವಾದ ವ್ಯಕ್ತಿತ್ವವನ್ನು ಬೆಳೆಸುವ ‘ರಾಷ್ಟ್ರೀಯತೆ’ಯ ಶಿಕ್ಷಣವನ್ನ ನಾವು ಪಡೆಯಬೇಕು. ಇಂಥಹ ಶಿಕ್ಷಣವನ್ನ ನಾವು ಪಡೆಯುತ್ತಿದ್ದೇವೆಯೆ? ಅಥವಾ ಕೇವಲ ಚಿಂತನೆಯೊಂದಿಗೆ ಗುರುತಿಸಿಕೊಳ್ಳುವುದರಲ್ಲೆ ಖುಷಿ ಪಡುತ್ತಿದ್ದೇವೆಯೆ?. ಇಂದು ಯಾವ ‘ವಾಗ್ಮಿ’ಗೆ ಈ ಹೇಡಿಗಳು ಹೆದರಿದರೊ, ಅವರ ಗುಣಗಾನಕ್ಕಿಂತ ಮಿಗಿಲಾಗಿ, ಆ ‘ವಾಗ್ಮಿ’ಯಲ್ಲಿರುವ ವಿಚಾಧರೆಯನ್ನ, ವಿಷಯಜ್ಞಾನವನ್ನ ನಾವೆಲ್ಲರು ಪಡೆದುಕೊಂಡು ಬೌದ್ಧಿಕವಾಗಿ ಅಷ್ಟೆ ಸದೃಢಗೊಂಡು ಮನೆ ಮನೆಗು ರಾಷ್ಟ್ರೀಯತೆಯನ್ನು ತಲುಪಿಸುವ ಮೂಲಕ ಜನರನ್ನು ಜಾಗೃತಗೊಳಿಸಿ, ಈ ‘ಷಂಡತನ’ವನ್ನು ಬುಡಸಮೇತ ಕಿತ್ತು ಹಾಕಬೇಕಿದೆ ಅಲ್ಲವೆ?. ಇದೆ ನಮ್ಮ ಮಾರ್ಗವಾಗಬೇಕು ತಾನೆ?.

ಅಭಿಷೇಕ್, ನೀನು ಯಾರಿಗು ಕೇಡು ಭಯಸದ, ಒಳ್ಳೆಯ ಅಂಕಗಳನ್ನು ಪಡೆಯುತ್ತಿದ್ದ, ಮೆರಿಟ್ ಮೂಲಕವೆ ಕಾಲೇಜಿನ ಕಾಮರ್ಸ್ ಕ್ಲಬ್‍ನ ಅಧ್ಯಕ್ಷ ಸ್ಥಾನ ಪಡೆದ ಒಬ್ಬ ಮಾದರಿ ವಿದ್ಯಾರ್ಥಿ ಎಂದು ಕೇಳಲ್ಪಟ್ಟೆ. ಆದರೆ ಈ ಒಂದು ವಿಷಯದಲ್ಲಿ ಮಾತ್ರ ನೀನು ಯಾರಿಗೂ ಮಾದರಿ ಆಗುವುದು ಬೇಡವೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಮತ್ತು ಈ ಸಾಲುಗಳನ್ನು ದುಃಖತಪ್ತನಾಗೆ ಬರೆಯುತ್ತದ್ದೇನೆಂದು ನೆನಪಿಸುತ್ತೇನೆ. ಇರಲಿ, ನಿನ್ನ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಿ, ತಾವು ಮಾಡಿದ ತಪ್ಪಿನ ಅರಿವಾಗಿ, ಪಶ್ಚಾತ್ತಾಪ ಪಡುವ ಮೂಲಕ ನಿನ್ನ ಆತ್ಮಕ್ಕೆ ಶಾಂತಿ ದೊರೆಯಲೆಂದು ಆಶಿಸುತ್ತಾ ಪತ್ರವನ್ನು ಮುಗಿಸುತ್ತೇನೆ.

                                                                        ಇಂತಿ ದುಃಖತಪ್ತ

                                                                      ಚೈತನ್ಯ ಕುಡಿನಲ್ಲಿ

Facebook ಕಾಮೆಂಟ್ಸ್

ಲೇಖಕರ ಕುರಿತು

Chaithanya Kudinalli

ಓದಿದ್ದು ಬಿಎಸ್ಸಿ, ಪ್ರಸ್ತುತ ಪತ್ರಿಕೋದ್ಯಮ ವಿದ್ಯಾರ್ಥಿ. ಹಾಗಾಗಿ ಓದು, ಬರವಣಿಗೆ, ತಿರುಗಾಟ ಮತ್ತು ಫೋಟೊಗ್ರಫಿ ಹವ್ಯಾಸ ಮಾತ್ರವಲ್ಲ ಕಾಯಕ ಕೂಡ. ರಾಜಕಾರಣ, ಇತಿಹಾಸ, ಪ್ರಚಲಿತ ವಿದ್ಯಮಾನಗಳು, ಕಥೆ, ಕಾದಂಬರಿ, ಸಿನಿಮಾ ಇವು ಆಸಕ್ತಿದಾಯಕ ವಿಷಯಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!