ಅಂಕಣ

ನೀರೆಯರ ನೆಚ್ಚಿನ ಸೀರಿಯಲ್!

ಮಹಿಳೆಯರ ಪಾಲಿನ ಸಾರ್ವಕಾಲಿಕ ಸೀರಿಯಸ್ ಮ್ಯಾಟರ್’ಗಳಲ್ಲಿ ಸೀರಿಯಲ್ ಕೂಡಾ ಒಂದು! ಕೆಲವು ಮಹಿಳೆಯರಂತೂ ಸಿರಿ ಸಂಪತ್ತುಗಳಿಗಿಂತಲೂ ಹೆಚ್ಚಾಗಿ ಸೀರಿಯಲ್’ನಲ್ಲಿನ ಸಂಕಟಗಳ ಬಗ್ಗೆಯೇ ವಿಚಾರ ಮಾಡುತ್ತಿರುತ್ತಾರೆ. ಸೀರೆ ತೊಡುವವರೇ ಹೆಚ್ಚು ಇಷ್ಟಪಡುವ ಕಾರಣಕ್ಕೂ ಅದನ್ನು ‘ಸೀರಿಯಲ್’ ಎನ್ನುತ್ತಿರಬಹುದೇನೊ! ಹಾಗೆಂದು ಸೀರೆಯಲ್ಲೇ ಎಲ್ಲರೂ ಸೀರಿಯಲ್ ನೋಡುತ್ತಾರೆ ಎನ್ನಲಾಗದು ನೋಡಿ.

ಧಾರಾವಾಹಿಗಳು ಹೆಂಗಸರನ್ನು ಪರಸ್ಪರ ಬೆಸೆಯುವ ಬಹುಮುಖ್ಯ ಮಾಧ್ಯಮ. ನೆರೆಹೊರೆಯ ಹೆಂಗಸರೆಲ್ಲ ಸಮಾನಮನಸ್ಕರಾಗಿ, ಸಾಮರಸ್ಯದಿಂದ ಬೆರೆಯುವುದು ಹಾಗೂ ಚರ್ಚಿಸುವುದಿದ್ದರೆ ಅದು ಖಂಡಿತ ಧಾರಾವಾಹಿಗಳ ವಿಚಾರದಲ್ಲಿ ಮಾತ್ರ. ಅವರ ನಡುವಿನ ಪರಸ್ಪರ ಪೈಪೋಟಿ, ಅಸೂಯೆ, ಕರುಬುವಿಕೆ ತುಸು ಕಡಿಮೆಯಾಗುವುದೂ ಆಗಲೇ! ಅವಕಾಶ ಸಿಕ್ಕಾಗೆಲ್ಲಾ ಸೀರಿಯಲ್’ಗಳ ಬಗ್ಗೆಯೇ ಮಾತನಾಡುವುದರಿಂದ ಚಾಡಿಯ ರಾಡಿಯೆಬ್ಬಿಸಿ ಗೋಳು ಹೋಯ್ದುಕೊಳ್ಳುವ ಕೆಟ್ಟ ಗೀಳಿಗೆ ಬ್ರೇಕ್ ಬೀಳುವಂತಾಗುತ್ತದೆ. ಬರೀ ನಕಾರಾತ್ಮಕ ಅಂಶಗಳೊಂದಿಗೇ ನಖರಾ ಮಾಡುವ ಧಾರವಾಹಿಗಳ ಸಕಾರಾತ್ಮಕ ಪ್ರಭಾವ ಎಂದರೆ ಇದೇ ಇರಬೇಕು.

ಹಿಡಿದ ಕೆಲಸವನ್ನು ಮುಂದೂಡುವ ವೃಥಾ ವಿಳಂಬಧೋರಣೆಯು ಧಾರವಾಹಿಯ ಅಡ್ಡಪರಿಣಾಮವಾದರೆ, ಕೆಲವೊಮ್ಮೆ ಅದೇ ಕೆಲಸವನ್ನು ಬೇಗ ಬೇಗ ಮಾಡಿ ಮುಗಿಸುವಂತೆ ಪ್ರಚೋದಿಸುವುದು ಅದರ ನೇರ ಪರಿಣಾಮವೆನ್ನಬಹುದು. ಅಂತಿಮವಾಗಿ ಅದು ನಿರ್ಧಾರವಾಗುವುದು ಧಾರವಾಹಿ ಆರಂಭವಾಗುವ ಸಮಯದ ಅಧಾರದಲ್ಲಿ. ಒಂದು ನಿರ್ದಿಷ್ಟ ಅವಧಿಯಲ್ಲಿನ ಕಥೆಯ ಪ್ರಮಾಣ ಮತ್ತು ಆ ಸಂಬಂಧದ ದೃಶ್ಯಗಳು ಹಾಗೂ ನಡುವೆ ಪ್ರಸಾರವಾಗುವ ಜಾಹೀರಾತುಗಳನ್ನು ನೋಡುತ್ತಿದ್ದರೆ, ‘ಬಯಲೊಳು ಆಲಯವೋ, ಆಲಯದೊಳು ಬಯಲೋ’ ಎಂಬಂತೆ  “ಧಾರಾವಾಹಿಯೊಳು ಜಾಹೀರಾತೋ, ಜಾಹೀರಾತಿನೊಳು ಧಾರವಾಹಿಯೋ” ಎಂದು ಅರ್ಥವಾಗದೆ ತಲೆ ಚಚ್ಚಿಕೊಳ್ಳುವ ಅವಸ್ಥೆ ವೀಕ್ಷಕರದ್ದು. ಧಾರಾವಾಹಿಯ ದೆಸೆಯಿಂದ ಅದೆಷ್ಟು ಹಾಲು ಉಕ್ಕಿ ಒಲೆಗೆ ಹರಿದಿದೆಯೋ, ಇಸ್ತ್ರಿ ಹಾಕಲೆಂದು ತೆಗೆದ ಬಟ್ಟೆ ಸುಟ್ಟು ಹರಿದಿದೆಯೋ, ಪಾತ್ರೆಯ ತಳ ಸೀದು ಹೋಗಿದೆಯೋ ಲೆಕ್ಕ ಇಟ್ಟವರಾರು ಅಲ್ಲವೇ? ಇದು ಧಾರಾವಾಹಿಯಿಂದ ವ್ಯಾಪಾರಿಗಳಿಗೆ ಆಗುವ ಲಾಭವೆನ್ನಲಡ್ಡಿಯಿಲ್ಲ.

ಒಂದು ಗ್ರಾಂ ಚಿನ್ನವನ್ನು ಕುಟ್ಟಿ ತಟ್ಟಿ ಸುಮಾರು ಒಂದು ಚದರ ಮೀಟರ್’ ವಿಸ್ತೀರ್ಣದ ಹಾಳೆಯಾಗಿ ಹಿಗ್ಗಿಸಬಹುದಂತೆ. ಹೆಚ್ಚು ಹಿಗ್ಗುವ ಗುಣವುಳ್ಳ ವಸ್ತುವದು. ಆದರೆ ಅದಕ್ಕಿಂತಲೂ ಹೆಚ್ಚು ಹಿಗ್ಗಿಸಬಹುದಾದ ವಸ್ತುವೊಂದಿದ್ದರೆ ಅದು ನಮ್ಮ ಧಾರಾವಾಹಿಗಳ ಕಥಾವಸ್ತು. ಒಂದು ಎಳೆಯ ಕಥೆಯನ್ನೇ ಎಳೆದಾಡಿ ಎಳೆದಾಡಿ ಏಳೆಂಟು ವಾರ ತೋರಿಸುವ ಚಾಕಚಕ್ಯತೆ ಧಾರಾವಾಹಿಗಳಲ್ಲಿ ಮಾತ್ರ ಸಾಧ್ಯ. ಆದಾಗ್ಯೂ, ಒಂದಿನಿತೂ ನಿರಾಸಕ್ತರಾಗದೆ, ಕೊಂಚವೂ ಬೇಸರಗೊಳ್ಳದೆ ವೀಕ್ಷಿಸುವ ಹೆಂಗಸರಲ್ಲಿರುವ ತಾಳ್ಮೆಯ ಪ್ರಮಾಣವನ್ನು ಊಹಿಸುವುದೂ ಅಸಾಧ್ಯವೇ ಸರಿ. ಮಹಿಳೆಯರನ್ನು ಸಹನಾಮೂರ್ತಿಯೆನ್ನಲು ಪ್ರಾಯಶಃ ಇದೂ ಕೂಡಾ ಒಂದು ಕಾರಣವಾಗಿರಬಹುದು!!

ಹೆಚ್ಚಿನ ದಿನ ನಾಳೆಯ ಸಂಚಿಕೆಯಲ್ಲಿ ಏನೋ ಆಗಲಿದೆ ಎಂಬ ಸಸ್ಪೆನ್ಸ್ ಸೃಷ್ಟಿಸಿ, ವೀಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿ ಅಂದಿನ ಎಪಿಸೋಡ್ ಮುಗಿಸಲಾಗುತ್ತದೆ. ಆದರೆ ಮರುದಿನ ಅಂಥದ್ದೇನೂ ಆಗದೆ, ಅದೊಂದು ಕನಸೆಂದೋ, ಊಹೆಯೆಂದೋ ತೋರಿಸಿ ಮತ್ತದೇ ಮಾಮೂಲಿ ಧಾಟಿಯಲ್ಲಿ ಕಥೆ ಮುಂದುವರಿಯುತ್ತದೆ. ಆದರೆ ಆ ಬಗ್ಗೆ ಇನ್ನಿಲ್ಲದ ನಿರೀಕ್ಷೆ ಇಟ್ಟುಕೊಂಡು ಅಕ್ಕಪಕ್ಕದವರ ಜೊತೆ ಸಿಕ್ಕ ಸಿಕ್ಕಲ್ಲೆಲ್ಲಾ ಮಾತನಾಡಿ ಏನಾಗುತ್ತೋ ಏನೋ ಎಂದು ಅಡಿಗಡಿಗೆ ಪರಿತಪಿಸುವ ಮಹಿಳೆಯರು ಕೊನೆಗೆ ಸ್ವಲ್ಪವೂ ನಿರಾಶೆಗೊಳ್ಳದೆ, ಅದರ ನಿರ್ದೇಶಕನ ಬಗ್ಗೆ ಕೋಪಗೊಳ್ಳದೆ, ಬೈಯ್ಯದೆ ತೆಪ್ಪಗೆ ಕುಳಿತು ನೋಡುತ್ತಾರೆಂದರೆ, ಕ್ಷಮಿಸುವ ಗುಣ ಅವರ ರಕ್ತದಲ್ಲಿ, ಹಿಮೊಗ್ಲೋಬಿನ್’ನ ಪ್ರಮಾಣಕ್ಕಿಂತಲೂ ಜಾಸ್ತಿಯೇ ಇದೆ. ಇವರು ನಿಜಾರ್ಥದ ಕ್ಷಮಯಾ ಧರಿತ್ರಿಯರೇ ಸರಿ!!

ಓವರ್ ಡೋಸ್: ನಾರಿಯರು ತಮ್ಮ ಜೀವಿತಾವಧಿಯಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳುವ ಎರಡು ವಿಚಾರಗಳೆಂದರೆ ಒಂದು ‘ಸೀರೆ’ ಮತ್ತೊಂದು ‘ಸೀರಿಯಲ್’!

Facebook ಕಾಮೆಂಟ್ಸ್

ಲೇಖಕರ ಕುರಿತು

Sandesh H Naik

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!