ಪ್ರವಾಸ ಕಥನ

ತಪೋವನದೆಡೆಗಿನ ತಪಸ್ಸಿನ ತಪೋಭಂಗ- 2

ಹಿಂದಿನ ಭಾಗ

‘ಚಂಬಾ’ ಹೃಷಿಕೇಶದಿಂದ 60 ಕಿಲೋಮೀಟರ್ ದೂರದಲ್ಲಿದೆ. ಈ ಊರಿಗೆ ನಾನು ಒಂದೈದು ಬಾರಿಯಾದರೂ ಹೋಗಿದ್ದೇನೆ. ಯಾವತ್ತೂ ಇಲ್ಲಿ ಮೋಡ ಮುಸುಕಿದ ವಾತಾವರಣವೇ. ನಮ್ಮಲ್ಲಿನ ಕುದುರೆಮುಖ, ಆಗುಂಬೆಯಂತೆ ಯಾವಾಗಲೂ ಜಿಟಿ ಜಿಟಿ ಮಳೆ, ಸುತ್ತಲೂ ಹಸಿರು, ಮೈ ಕಂಪಿಸುವ ಚಳಿ, ಆಹ್ಲಾದಕರವಾದ ವಾತಾವರಣ. ಹೀಗೆ ನಾವು ಚಂಬಾ ತಲುಪಿದಾಗ ಒಂದು ಗಂಟೆಯ ಸಮಯ. ಹತ್ತು ಗಂಟೆಗೆಲ್ಲ ಹೃಷಿಕೇಶ ತಲುಪಿ ಅಲ್ಲಿಂದ ಉತ್ತರಕಾಶಿಯ ಬಸ್ಸು ಹಿಡಿದಿದ್ದೆವು. ಹರಿದ್ವಾರದಿಂದ ಹೃಷಿಕೇಶ ಕೇವಲ 20 ಕಿಮೀ. ಟ್ರಾಫಿಕ್ ಇಲ್ಲದಿದ್ದರೆ ಅರ್ಧ ಗಂಟೆ ಸಾಕು. ಆದರೆ ಅಂದು ಮಳೆ ಜೋರಾಗಿ ಸುರಿಯುತ್ತಿತ್ತು ಜೊತೆಗೆ ಟ್ರಾಫಿಕ್ ಕೂಡ. ಹಾಗಾಗಿ ಒಂದೂವರೆ ಗಂಟೆ ಬೇಕಾಯಿತು.

ನನಗೆ ಅಮೋಘನಿಗೆ ನಾವು ಕುಳಿತಿರುವುದು ಬಸ್ಸಿನಲ್ಲಾ ಅಥವಾ ಸಮುದ್ರದ ತಟದಲ್ಲಾ ಎಂಬ ಅನುಮಾನ ಮೂಡಿತ್ತು. ಹೊರಗೆ ಜೋರಾಗಿ ಮಳೆ ಸುರಿಯುತ್ತಿದ್ದರೆ ಕಿಡಕಿಯ ಸಂದುಗಳಿಂದ, ಟಾಪ್ ನಿಂದ ಒಳಗೆ ಸೇರಿಕೊಂಡ ನೀರು ಏರಿಳಿತಗಳಲ್ಲಿ ಮುಂದಕ್ಕೂ ಹಿಂದಕ್ಕೂ ಹರಿದು ಪಚಕ್ ಪಚಕ್ಕನೆ ಸಿಡಿಯುತ್ತಿತ್ತು. ದೆಹಲಿಯ ಬಿಸಿಗೆ ಬೆಂದಿದ್ದ ಮೈ ಮತ್ತು ಮನ ಮಳೆಯ ಮಂದ್ರಕ್ಕೆ ತೆರೆದುಕೊಂಡು ಮುಗುಳ್ನಗತೊಡಗಿತು. ರಚ್ಚೆ ಹಿಡಿದು ಅಳುತ್ತಿರುವ ಮಗುವಿನಂತೆ ಎರಡು ಗಂಟೆಯಿಂದ ಮಳೆ ಸುರಿಯುತ್ತಲೇ ಇತ್ತು. ಈ ಮಳೆಯಲ್ಲಿ ನಾವು ಗಂಗೋತ್ರಿಯ ಕಡಿದಾದ ಗುಡ್ಡಗಳನ್ನು ಹತ್ತಿ ತಪೋವನವನ್ನು ತಲುಪಬಲ್ಲೆವಾ ಎಂಬ ಸಂಶಯ ಅದಾಗಲೇ ಮೂಡತೊಡಗಿತ್ತು. ಮನಸ್ಸಿನ ಛಲ ಮಾತ್ರ ಹಾಗೆಯೇ ಉಳಿದುಕೊಂಡಿತ್ತು.

ಊಪರ್ ತೊ ಬಹುತ್ ಬಾರಿಶ್ ಹೊ ರಹಾ ಹೇ.. ರಾಸ್ತಾ ಸಬ್ ಬಂದ್ ಹೋಜಾಯೆಗಾ.. ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ನನಗೂ, ಅಮೋಘನಿಗೂ ಅದೊಂಥರಾ ಥ್ರಿಲ್!! ಮಳೆ ಹೊಯ್ಯುವುದು, ಗುಡ್ಡ ಕುಸಿಯುವುದು, ರಸ್ತೆಗಳು ಬಂದ್ ಆಗುವುದು, ಗಂಗೆ ತುಂಬಿ ಹರಿಯುವುದು.. ಇದರಲ್ಲೆಲ್ಲ ಏನೋ ಕುತೂಹಲ ತುಂಬಿಕೊಂಡಿದ್ದೆವು. ಯಾಕೆಂದರೆ ಅದರ ತೀವ್ರತೆ, ಅತಿವೃಷ್ಟಿಗಳು ಸೃಷ್ಟಿಸುವ ಅನಾಹುತ ಇದ್ಯಾವುದನ್ನು ನಾನು ನೋಡಿಯೇ ಇರಲಿಲ್ಲ.

ಹೃಷಿಕೇಶ ತಲುಪಿದಾಗ ಮಳೆ ಸ್ವಲ್ಪ ಕಡಿಮೆಯಾಗಿತ್ತು. ನಾವು ಬೇಗ ಬೇಗ ಟಿಕೆಟ್ ತೆಗದುಕೊಂಡು ಬಸ್ ಹತ್ತಿದ್ದೆವು. ಗುಡ್ಡದಂಚಿನ ರಸ್ತೆಗಳಲ್ಲಿ ಓಡಾಡುವ ಬಸ್ ಗಳಾಗಿದ್ದರಿಂದ ತುಂಬಾ ಚಿಕ್ಕದಾಗಿದ್ದವು. ಸೀಟ್ ಗಳ ನಡುವಿನ ಅಂತರ ಕೂಡ ಬಹಳ ಕಡಿಮೆ. ನನ್ನಂಥ ಉದ್ದ ಕಾಲಿನ ಮನುಷ್ಯರಿಗೆ ಆ ಸೀಟುಗಳ ಮಧ್ಯೆ ಸಿಕ್ಕಿಸಿಕೊಳ್ಳುವುದು ಒಂದು ಯಮಯಾತನೆಯೇ. ಹಾಗೂ ಹೀಗೂ ಕಾಲು ಅತ್ತ ಇತ್ತ ಮಾಡಿ ಕುಳಿತದ್ದು ಆಯಿತು; ಬಸ್ ಹೊರಟದ್ದು ಆಯಿತು. ಪಹಾಡಿಯಲ್ಲಿ ಕೆಲವೇ ಬಸ್ ಗಳು ಮಾತ್ರ ಓಡಾಡುವುದರಿಂದ ಜನ ತುಂಬಿಕೊಂಡೆ ಇರುತ್ತಾರೆ. ಗುಡ್ಡದ ತಿರುವುಗಳಲ್ಲಿ ಬಸ್ ಆಕಡೆಯೂ ಈಕಡೆಯೂ ಹೊರಳಿದರೆ ಜನರು ಹಾಗೆಯೇ ಓಲಾಡುತ್ತಿದರು. ಜೊತೆಗೆ ಅವರ ಸಾಕುಪ್ರಾಣಿಗಳಾದ ಕುರಿ ಕೋಳಿಗಳು ಬಸ್ಸಿನ ಒಳಗೆ ಜಾಗ ಪಡೆದುಕೊಂಡು ನಮ್ಮ ಪ್ರವಾಸದ ವೈಭವವನ್ನು ಇನ್ನಷ್ಟು ಹೆಚ್ಚಿಸಿತ್ತು. ಅರ್ಧ ಗಂಟೆ ಕಳೆಯುತ್ತಲೇ ಕೆಲ ಜನರಿಗೆ ಹೊಟ್ಟೆ ತೊಳಸಿ, ಅವರು ಕಿಡಕಿಯಿಂದ ತಲೆ ಹೊರಗೆ ಹಾಕಿ, ವಿಚಿತ್ರ ಸದ್ದು ಮಾಡುತ್ತಾ ತಿಂದಿದ್ದೆಲ್ಲಾ ಕಕ್ಕಲು ಪ್ರಾರಂಭಿಸಿದಾಗಲಂತೂ ಮೈ ಮೇಲೆ ಮುಳ್ಳೆದ್ದು ನಿಲ್ಲುವಂತಾಗಿತ್ತು. ಮತ್ತೆ ಜಿಟಿ ಜಿಟಿ ಮಳೆ ಕೂಡ ಪ್ರಾರಂಭವಾಗಿತ್ತು. ಹೊರಗಿನ ಹಸಿರು, ಜಿಟಿ ಜಿಟಿ ಮಳೆ, ದೂರದಲ್ಲಿ ಹರಿಯುತ್ತಿರುವ ಕೆಂಪು ನೀರಿನ ಗಂಗೆ, ಸಮಯ ಬೇಗ ಬೇಗ ಕಳೆಯುತ್ತಿತ್ತು. ಒಂದು ಗಂಟೆಗೆಲ್ಲ ಚಂಬಾದ ಮಂಜಿನಲ್ಲಿ ಇಳಿದ ನನ್ನನ್ನು ಚಳಿ ತಣ್ಣಗೆ ಆವರಿಸಿತು. ಊಟದ ಸಮಯವಾದ್ದರಿಂದ ನಾನು ಅಮೋಘ ರಸ್ತೆಯ ಪಕ್ಕದ ಢಾಬಾಕ್ಕೆ ಹೋಗಿ ಬಿಸಿ ಬಿಸಿ ರೊಟ್ಟಿ, ನೆಂಚಿಕೊಳ್ಳಲು ದಾಲ್ ಮತ್ತು ಚೋಲೆ (ಕಾಬೂಲ್ ಕಡ್ಲೆಯ ಬಾಜಿ) ಜೊತೆಗೆ ಮಸಾಲೆ ಹಾಕಿ ಬೇಯಿಸಿದ ಮೆಣಸಿನಕಾಯಿ ಬಟ್ಟಲಿಗೆ ಹಾಕಿಕೊಂಡು ಕುಳಿತೆವು. ನಾಲ್ಕು ರೊಟ್ಟಿ ಹೊಟ್ಟೆಗೆ ಸೇರಿದಾಗ ಅದೇನೋ ಸುಖ. ಅದೊಂದು ಅದ್ಭುತ ಅನುಭವ. ಹೊರಗಿನ ಮಳೆ, ಮಂಜು ಮುಸುಕಿದ ಹಸಿರು, ಚಳಿ, ಬಿಸಿ ರೊಟ್ಟಿ.. ಜನ ಸ್ವಿಡ್ಜರ್ಲೆಂಡ್ ಎಂದು ದೇಶ ಬಿಟ್ಟು ಓಡುತ್ತಾರೆ. ಚಂಬಾ ಎಂಬ ಉತ್ತರಾಖಂಡದ ಪುಟ್ಟ ಊರು ಸ್ವಿಡ್ಜರ್ಲೆಂಡ್ ಗಿಂತ ಯಾವುದಕ್ಕೂ ಕಡಿಮೆಯಿಲ್ಲ ಎಂಬುದು ನನ್ನ ಅನಿಸಿಕೆ.

ಊಟ ಮುಗಿಸಿ ಮೇಲೆದ್ದ ಡ್ರೈವರ್ ಹೊರಗೆ ನಿಂತು ಬೀಡಿ ಹಚ್ಚಿದ. ಆ ಇಬ್ಬನಿಯ ಮಬ್ಬಲ್ಲಿ ಆತ ಬಿಡುವ ಬೀಡಿಯ ಹೊಗೆ ಸುಳಿ ಸುಳಿಯಾಗಿ ಮಾಯವಾಗಿದ್ದು ಕಾಣುತ್ತಿರಲಿಲ್ಲವಾದರೂ ಅದರ ವಾಸನೆ ಮಾತ್ರ ಮೂಗಿಗೆ ಬಂದು ಬಡಿಯಿತು. “ಹಿಮಾಲಯಕ್ಕೆ ಬಂದಾದರೂ ಸ್ವಚ್ಛ ಗಾಳಿ ಸವಿಯೋಣ ಎಂದುಕೊಂಡರೆ”.. ಎಂದು ಗೊಣಗಿಕೊಳ್ಳುತ್ತಲೇ ನಾವಿಬ್ಬರು ಬಂದು ಬಸ್ ಹತ್ತಿದೆವು. ಬೀಡಿ ಸೇದಿ ಮುಗಿಸಿ, ಅದರ ಘಾಟು ಗಂಟಲಿಗೆ ಹಿಡಿದಿದ್ದರಿಂದಲೋ ಏನೋ ಕೆಮ್ಮಿ, ಒಮ್ಮೆ ಕ್ಯಾಕರಿಸಿ ಉಗುಳಿ ಬಸ್ ಹತ್ತಿದ.

ಅರವತ್ತರ ವಯಸ್ಸು.. ನೆರೆತಿರುವ ತಲೆಕೂದಲು.. ಮುಖದಲ್ಲಿ ತಾಳ್ಮೆ..ಅವನ ಮುಖದ ಮೇಲಿನ ತಾಳ್ಮೆಯೇ ಬಸ್ಸು ಓಡಿಸುವುದರಲ್ಲಿ ಕೂಡ ಇತ್ತು. ಡ್ರೈವರ್ ಸ್ವಲ್ಪ ಯಂಗ್ ಇದ್ದರೆ ಬೇಗ ಹೋಗುತ್ತಿದ್ದೇವೇನೋ ಎಂದು ಮಾತನಾಡಿಕೊಂಡೆವು. “ಇಲ್ಲ.. ಇಲ್ಲ.. ಗುಡ್ಡದ ಮೇಲೆ ಅನುಭವ ಇದ್ದವರೇ ಸರಿ.. ಇಲ್ಲವಾದರೆ ಬೇಗ ಹೋಗುವುದು ಮೇಲೆ..!!” ಎಂದು ಹೇಳಿಕೊಂಡು ಜೋರಾಗಿ ನಕ್ಕೆವು. ಸರಿ, ಬಸ್ಸು ಮತ್ತೆ ನಿಧಾನವಾಗಿ ಮುಂದೆ ಹೊರಟಿತು. ಮಳೆಯ ರಭಸ ಮಾತ್ರ ಹೆಚ್ಚತೊಡಗಿತ್ತು.

ಚಂಬಾದಿಂದ ಇಳಿಮುಖದಲಿ ನಮ್ಮ ಪ್ರಯಾಣ ಪ್ರಾರಂಭವಾಯಿತು. ಅಲ್ಲಿಂದ 20 ಕಿಮೀ ದೂರದಲ್ಲಿ Tehri ಎಂಬ ಊರಿದೆ. ಊರು ಇತ್ತು ಎನ್ನಬಹುದು. ಗಂಗಾ ನದಿಗೆ ಅಲ್ಲಿಯೇ ಆಣೆಕಟ್ಟು ಕಟ್ಟಲಾಗಿದೆ. ಮೂರೂ ಕಡೆ ಗುಡ್ಡಗಳಿಂದ ಆವೃತವಾದ ಆಯಕಟ್ಟಿನ ಜಾಗದಲ್ಲಿ ಒಂದು ಕಡೆ ಮಾತ್ರ ಚಿಕ್ಕ ಆಣೆಕಟ್ಟು ಕಟ್ಟಿ ಗಂಗೆಯನ್ನು ಬಂಧಿಸಿದ್ದಾರೆ. ಆದರೆ ಸಂಗ್ರಹವಾಗುವ ನೀರಿನ ಪ್ರಮಾಣ ಮಾತ್ರ ಅಪಾರ. ಅಲ್ಲಿನ ಹಿನ್ನೀರು ನೂರು ಕಿಲೋಮೀಟರ್ ಗಿಂತಲೂ ಹೆಚ್ಚು ದೂರ ಪ್ರತಿ ಗುಡ್ಡ ಕಂದರಗಳಲ್ಲಿ ತುಂಬಿ ನಿಲ್ಲುತ್ತದೆ. Tehri ಎಂಬ ದೊಡ್ಡ ಊರಿಗೆ ಊರೇ ಗಂಗಾ ನದಿಯಲ್ಲಿ ಶಾಶ್ವತ ಅವಶೇಷವಾಗಿ ನಿಂತಿದೆ. ಅದೇ ಊರಿನ ಅವಶೇಷಗಳ ಮೇಲೆ ಹರಿಯುತ್ತಿರುವ ಗಂಗೆಯ ಪಕ್ಕದಲ್ಲೇ ನಮ್ಮ ಪ್ರಯಾಣ ಸಾಗುತ್ತಿತ್ತು. ಎರಡು ಮೂರೂ ದಿನದಿಂದ ಮಳೆ ಸುರಿಯುತ್ತಿದ್ದುದರಿಂದ ಗಂಗಾ ನದಿ ಕೆಂಪಾಗಿ ಹರಿಯುತ್ತಿತ್ತು. ತೇಲಿ ಬರುತ್ತಿರುವ ಮರಗಳು, ಕಾಡಿನ ಅಳಿದುಳಿದ ಅಸ್ಥಿಪಂಜರಗಳು ಮಹಾನದಿಗೆ ಎಲ್ಲವೂ ಯಕಃಶ್ಚಿತ.

ಹಾ, ಒಂದು ವಿಷಯ ಹೇಳಲು ಮರೆತಿದ್ದೆ. ಬಸ್ಸಿನ ಒಳಗೆ ಜಾಗವಿಲ್ಲ ಎಂಬ ಕಾರಣದಿಂದ ನಮ್ಮ ಲಗ್ಗೇಜ್ ಬ್ಯಾಗ್ ಅನ್ನು ಬಸ್ಸಿನ ಡಿಕ್ಕಿಗೆ ಹಾಕಿದ್ದರು. ಮಳೆಗೆ ಅವೆಲ್ಲ ಒದ್ದೆಯಾಗಿ ಬಿಟ್ಟರೆ ಎಂಬ ಭಯದಿಂದ ಎರಡು ಮೂರೂ ಬಾರಿ ಕಂಡಕ್ಟರ್ ಬಳಿ ಕೇಳಿದ್ದೆ.. “ಭಾಯಿ ಸಾಬ್, ಹಾಗೇನು ಆಗುವುದಿಲ್ಲ ನಿಶ್ಚಿಂತೆಯಿಂದ ಕುಳಿತಿರಿ” ಎಂದು ಆತ ಧೈರ್ಯ ಹೇಳಿದ್ದ. ಗುಡ್ಡಗಾಡಿನ ವಿಶಾಲತೆಯಷ್ಟೇ ಅವರ ಹೃದಯ ವೈಶಾಲ್ಯತೆಯು ಕೂಡ. ಕೂಲಂಕುಷವಾಗಿ ವಿಷಯ ತಿಳಿದುಕೊಂಡು, ಪ್ರೀತಿಯಿಂದ ಉತ್ತರ ಕೊಡುತ್ತಾರೆ.

ಚಂಬಾದವರೆಗೆ ರಸ್ತೆಗಳು ಚೆನ್ನಾಗಿಯೇ ಇದ್ದವು. ಅಲ್ಲಿಂದ ಮುಂದೆ ಹೋದಂತೆ ಗುಡ್ಡದ ಗಾತ್ರ ಹೆಚ್ಚುತ್ತಾ ಹೋಗಿತ್ತು. ರಸ್ತೆಗಳು ಕಿರಿದು..

ಉತ್ತರಾಖಂಡವನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಒಂದು ಚಾರ್ ಧಾಮ್ (ಗಂಗೋತ್ರಿ, ಯಮುನೋತ್ರಿ, ಕೇದಾರ್ ನಾಥ್, ಬದ್ರಿನಾಥ್) ಇರುವ ಘರ್ ವಾಲ್. ಇನ್ನೊಂದು ನೈನಿತಾಲ್, ಮಸ್ಸೂರಿ, ಧನೋಲ್ಟಿ ಮುಂತಾದ ಪ್ರವಾಸಿ ತಾಣಗಳಿರುವ ಕುಮಾವು (Kumaon) ಎರಡು ಭಾಗಗಳಲ್ಲಿನ ಮಣ್ಣಿನ ಗುಣವೇ ಬೇರೆ. ಕುಮಾವು ಪ್ರದೇಶದಲ್ಲಿ ಮಳೆ ಬಂದಾಗ ಗುಡ್ಡಗಳು ಕುಸಿಯುವುದಿಲ್ಲ. ಆದರೆ ಘರ್ ವಾಲ್ ಪ್ರದೇಶದಲ್ಲಿ ಮಳೆ ಬಂದರೆ ಗೊಚ್ಚು ಮಣ್ಣಿನ ಗುಡ್ಡಗಳು ಕುಸಿಕುಸಿದು ಬೀಳುತ್ತವೆ. ಇದರೊಂದಿಗೆ ದೊಡ್ಡ ದೊಡ್ಡ ಕಲ್ಲು ಬಂಡೆಗಳು ಉರುಳಿ ಬರುತ್ತವೆ. ಅವುಗಳ ಜೊತೆಗೆ ಪೈನ್ ಮರಗಳು ಕೂಡ.
ಚಂಬಾದಿಂದ ಮುಂದೆ ಸಾಗಿದ ಒಂದು ತಾಸಿಗೆಲ್ಲ ಇಂಥ ಗುಡ್ಡ ಕುಸಿದ ಜಾಗಗಳು, ಕಿರಿದಾದ ರಸ್ತೆಯ ಅರ್ಧದವರೆಗೂ ಇರುವ ದೊಡ್ಡ ಕಲ್ಲು ಬಂಡೆಗಳು ಎಲ್ಲವನ್ನು ಕಂಡು ಕುಳಿತಲ್ಲೇ ಕೈಯಲ್ಲಿ ಬೆವರು ಮೂಡತೊಡಗಿತ್ತು. ಮಳೆಯ ರಭಸವು ಜೋರಾಗತೊಡಗಿತು.

ಡ್ರೈವರ್ ಗೆ ಅದೇನೋ ಮುನ್ಸೂಚನೆ ಬಂದಂತೆ ಆಕಡೆಯಿಂದ ಬರುತ್ತಿದ್ದ ಬಸ್ ನಿಲ್ಲಿಸಿ ಏನನ್ನೋ ಮಾತನಾಡುತ್ತಿದ್ದ. ಮಳೆಯ ರಭಸಕ್ಕೆ ಆತ ಮಾತನಾಡಿದ್ದು ಹಿಂದೆ ಕುಳಿತವರಿಗೆ ಸರಿಯಾಗಿ ಕೇಳಿಸಿತ್ತೋ ಇಲ್ಲವೋ, ಅಲ್ಪ ಸ್ವಲ್ಪ ಕೇಳಿದ್ದು ಅಂತೆ ಕಂತೆಗಳ ಸಂತೆಯಾಗಿ ಎಲ್ಲರ ಬಾಯಲ್ಲಿ ಹರಡುತ್ತಾ ನಮ್ಮ ಕಿವಿಯವರೆಗೂ ಬಂತು. ಮೇಲೆ ಬಹಳ ಮಳೆಯಾಗುತ್ತಿದೆಯಂತೆ,ರಸ್ತೆಗಳು ಬ್ಲಾಕ್ ಆಗಿವೆಯಂತೆ. ಸಂಜೆಯವರೆಗೆ ಮಳೆ ಇನ್ನು ಹೆಚ್ಚಾಗಬಹುದು.. ಅದು ಇದು…
ಬಂದದ್ದಾಗಿದೆ.. ಏನಾಗುವುದೋ ನೋಡಿಯೇ ಬಿಡೋಣ ಎಂದುಕೊಂಡು ನಾವು ಸುಮ್ಮನೆ ಕುಳಿತೆವು. ಆಗಾಗ ಹೊರಗೆ ಕೈ ಹಾಕಿ, ಮಳೆ ನೀರು ಬೊಗಸೆಯಲ್ಲಿ ತುಂಬಿಕೊಂಡು ಮುಖಕ್ಕೆ ಚಿಮುಕಿಸಿಕೊಂಡು ಆನಂದಿಸಿದೆ. ಪ್ರತಿ ಕ್ಷಣವೂ ಹಿಮಾಲಯದ ಸೌಂದರ್ಯವನ್ನು ನೋಡಬೇಕು ಎಂದುಕೊಂಡಿದ್ದ ನನಗೆ ಮಳೆಯ ಭರಾಟೆಗೆ ಬಸ್ಸಿನಿಂದ ಹತ್ತು ಮಾರು ದೂರವು ಕಾಣದಂತಾದಾಗ ಸುಮ್ಮನೆ ಕುಳಿತೆ.

ಅಷ್ಟರಲ್ಲಿ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯತ್ತ ನನ್ನ ದೃಷ್ಟಿ ಹರಿಯಿತು. ವಿದೇಶಿಗ. ಕೈಯಲ್ಲಿ ಐಪಾಡ್ ಹಿಡಿದು ಕುಳಿತಿದ್ದ. ಸಿಂಪಲ್ ಜುಬ್ಬಾ, ಪೈಜಾಮ. ಈತನನ್ನಾದರೂ ಮಾತನಾಡಿಸಿ ಸಮಯ ಕೊಲ್ಲೋಣ.. ಹಿಮಾಲಯದ ಬಗ್ಗೆ ಈತನ ಪ್ರೀತಿ ಏನೆಂದು ಕೇಳೋಣ ಎಂದು “ನಿಮ್ಮ ಹೆಸರೇನು?” ಎಂದೆ ಇಂಗ್ಲೀಷಿನಲ್ಲಿ.
ಮಳೆಯ ಸದ್ದಿಗೋ ಅಥವಾ ಆತ ಕಿವಿಯಲ್ಲಿ ತುರುಕಿಕೊಂಡ ಇಯರ್ ಫೋನ್ ಕಾರಣದಿಂದಲೋ ನಾನು ಹೇಳಿದ್ದು ಆತನಿಗೆ ಕೇಳಿಸಲಿಲ್ಲ. ಇಯರ್ ಫೋನ್ ತೆಗೆದು ಸ್ಸಾರಿ.. ಎಂದ.

ಫಾರಿನ್ ಎಂದರೆ ಇಂಗ್ಲೀಷ್ ಎಂಬ ಭಾವ ನನ್ನದು. ಅದು ಅಲ್ಲದೆ ಇಂಗ್ಲೀಷ್ ಎಂದರೆ ನನಗೆ ಪುಕುಪುಕು ಎಂಬುದು ನಿಜ. ಆದರೂ ನನಗೆ ತಿಳಿದಿರುವ ಹರುಕು ಮುರುಕು ಪದ ಸಂಗ್ರಹವನ್ನು ಬಳಸಿಕೊಂಡು ಮಾತು ಪ್ರಾರಂಭಿಸಿದೆ. ಈ ಅಂಗ್ರೇಜಿಗಳು ತಮ್ಮ ವೈಯಕ್ತಿಕ ಬದುಕಿಗೆ ಪ್ರಥಮ ಪ್ರಾಮುಖ್ಯತೆ ಕೊಡುತ್ತಾರೆ. ನಾವು ವಯಕ್ತಿಕ ವಿಷಯ ಕೇಳಿದರೆ “ಅವೆಲ್ಲ ನಿಮಗೇಕೆ?” ಎಂದು ಕೇಳಿಬಿಡುವವರೇ.

ಜುಬ್ಬಾ, ಪೈಜಾಮ, ಕೊರಳಲ್ಲೊಂದು ರುದ್ರಾಕ್ಷಿ ಸರ ಹಾಕಿ ಕುಳಿತಿದ್ದ ಆಸಾಮಿ, ಬೇಲಿಯ ಮೇಲಿನ ಓತಿಯಂತೆ ಕಂಡು ಬಂದಿದ್ದರಿಂದ ಇವನಿಂದ ನನಗೆ ಅಪಾಯವಿಲ್ಲ ಎಂದು ನಾನು ಧೈರ್ಯ ಮಾಡಿ ಮಾತಿಗಿಳಿದೆ.
ಹೆಸರು ಶಂಕರ ಎಂದ. ನ್ಯೂಜಿಲೆಂಡ್ ಇಂದ ಬಂದವನಂತೆ. ನನ್ನ ಹುಬ್ಬು ಮೇಲೇರಿತು. ನ್ಯೂಜಿಲೆಂಡಿನ ಈ ಮನುಷ್ಯ ಅದ್ಹೇಗೆ ಶಂಕರನಾಗಲು ಸಾಧ್ಯ?? ನಿಮ್ಮ ಮೊದಲ ಹೆಸರು ಅದೇನಾ ಎಂದು ಕೇಳಿದೆ. ಇಲ್ಲ ನಾನು ಹಿಂದೂ ಆಗಿ ಪರಿವರ್ತಿತನಾಗಿದ್ದೇನೆ. ಆಂತರಿಕ ಶಾಂತಿಗಾಗಿ ಹುಡುಕುತ್ತಿದ್ದೇನೆ. ಉತ್ತರ ಕಾಶಿಯಿಂದ ಮುಂದೆ ಇರುವ ಒಬ್ಬ ಸ್ವಾಮಿಗಳ ಆಶ್ರಮದಲ್ಲಿ ತನ್ನ ವಾಸ ಎಂದ.

ಮೊದಲು ಒಳ್ಳೆಯ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಯಾವುದೋ ದೇಶದ ಒಬ್ಬ ವ್ಯಕ್ತಿ ಶಾಂತಿಯನ್ನು ಹುಡುಕಿಕೊಂಡು, ಆಧ್ಯಾತ್ಮ ಶಕ್ತಿಯೆಡೆಗೆ ಸೆಳೆದು ಹೀಗೆ ಹಿಮಾಲಯಕ್ಕೆ ಬಂದು ಸಾಧುವಿನಂತೆ ಬದುಕುವುದನ್ನು ನೋಡಿ ಖುಷಿ ಪಡಬೇಕಾ ಅಥವಾ ನಾವು ನಮ್ಮ ಸಂಸ್ಕೃತಿ, ಸಂಸ್ಕಾರವನು ತಳ್ಳಿಕೊಂಡು ವಿದೇಶಿ ಸಂಸ್ಕೃತಿಗೆ ಮರುಳಾಗಿ ನಮ್ಮತನವನ್ನು ಬಿಡುತ್ತಿರುವುದೇಕೆ ಬೇಸರಿಸಬೇಕಾ ಅರ್ಥವಾಗಲಿಲ್ಲ.
ಯಾವುದೋ ದೇಶದ ದನದ ಮಾಂಸವನ್ನೂ ತಿಂದು ಬದುಕುವ ಮನುಷ್ಯರು ಎಲ್ಲವನ್ನು ಬಿಟ್ಟು ಸಸ್ಯಾಹಾರಿಗಳಾಗಿ, ಗಂಗೆಯ ಮಡಿಲಲ್ಲಿ ಸಾಧುವಾಗಿ ಓಡಾಡುತ್ತಿದ್ದಾರೆಂದರೆ ಹಿಮಾಲಯದ ಶಕ್ತಿಯೇ ಅಲ್ಲವೇ??

ನನ್ನ ಮನಸ್ಸು ಯೋಚನೆಗಿಳಿಯಿತು. ಎಸ್. ಎಲ್. ಭೈರಪನವರ ತಬ್ಬಲಿಯು ನೀನಾದೆ ಮಗನೆ ಕಾದಂಬರಿಯ ಕೆಲವು ಪಾತ್ರಗಳು, ಸನ್ನಿವೇಶಗಳು ನೆನಪಾಗಿ ಕಣ್ಣು ಸಣ್ಣಗೆ ತುಂಬಿಕೊಂಡಿತು.
ಮಳೆಗೆ ಮಾತ್ರ ಇದಾವುದರ ಅರಿವಿಲ್ಲದಂತೆ ಜೋರಾಗಿ ಸುರಿಯುತ್ತಲೇ ಇತ್ತು. ಅಮೋಘ ಪಕ್ಕದಲ್ಲಿ ಮಲಗಿ ಬಸ್ಸಿನ ಕುಲುಕಾಟಕ್ಕೆ ತಕ್ಕಂತೆ ಜೋಲಿ ಹೊಡೆಯುತ್ತಿದ್ದ.

ಅಷ್ಟರಲ್ಲಿ ಎದುರಿನಿಂದ ಬಂದ ಜೀಪೊಂದು ಪಕ್ಕದಲ್ಲಿ ಹಾದು ಹೋಗುವಾಗ ರಸ್ತೆಯಲ್ಲಿದ್ದ ಗುಂಡಿಗಿಳಿದು ಬಸ್ಸಿನತ್ತ ವಾಲಿ ಬಸ್ಸಿಗೆ ಗುದ್ದಿದ್ದರಿಂದ ನನ್ನೆದುರು ಇದ್ದ ಗಾಜು ಒಡೆದು ಪುಡಿಪುಡಿಯಾಗಿ ಬಿರುಸಾಗಿ ಒಳಗೆ ಬಂತು.
ಬಸ್ಸಿನಲ್ಲಿದ್ದವರೆಲ್ಲ ಒಮ್ಮೆಲೇ ಚೀರಿಕೊಂಡರು. ನನ್ನ ಜೊತೆ ಮಾತನಾಡುತ್ತಿದ್ದ ಶಂಕರನಿಗೆ ಜೋರಾಗಿ ಸಿಡಿದು ಬಂದ ಗಾಜು ಹಣೆಗೆ ಬಡಿದು ಚಿಕ್ಕ ಗಾಯವನ್ನು ಮಾಡಿತು. ನಮ್ಮ ಕಡೆಯಾದರೆ ಬಸ್ಸಿನವರು, ಜಿಪ್ಸಿಯವರು ಹೊಡೆದಾಟಕ್ಕೆ ನಿಂತಿರುತ್ತಿದ್ದರು. ಆದರೆ ಅಲ್ಲಿ ಅದು ಸರ್ವೇ ಸಾಮಾನ್ಯವೋ ಎಂಬಂತೆ, ತಲೆ ಹೊರ ಹಾಕಿದ ಡ್ರೈವರ್ “ದೆಕ್ಕೆ ಚಲನಾ ಭಾಯ್” ಎಂದಷ್ಟೇ ಹೇಳಿ ಗಾಡಿ ಪಕ್ಕ ಸರಿಸಿ ಪ್ರಯಾಣ ಮುಂದುವರೆಸಿದ್ದ. ಮೊದಲ ಚಿಕಿತ್ಸೆಯ ಯಾವುದೇ ಪರಿಕರವು ಇಲ್ಲದ್ದರಿಂದ ಶಂಕರ ತನ್ನ ಕರವಸ್ತ್ರ ತೆಗೆದು ಗಾಯವನ್ನು ಗಟ್ಟಿಯಾಗಿ ಹಿಡಿದು ಕುಳಿತುಕೊಂಡ. ನಾನು ಮಾತಿನಲ್ಲೇ ಆತನನ್ನು ಉಪಚರಿಸಿ ಸುಮ್ಮನೆ ಕುಳಿತುಕೊಂಡೆ. ಚಿಕ್ಕ ಜಾಗದಲ್ಲಿ ಕುಳಿತಿದ್ದರಿಂದ ಸೊಂಟ ಮತ್ತು ಕಾಲು ಎರಡು ನೋವು ಬಂದು ಆಕಡೆ ಈಕಡೆ ಮಿಸುಕಾಡುತ್ತಿರುವಾಗಲೇ ಮುಂದೆ ಉದ್ದನೆಯ ಟ್ರಾಫಿಕ್ ಕಂಡು ಬಂತು. ಆಗ ಮದ್ಯಾನ್ನ ನಾಲ್ಕು ಗಂಟೆಯ ಸಮಯ. ದರಾಸು ಬ್ಯಾಂಡ್ ಎಂಬ ಜಾಗದಲ್ಲಿ ನಮ್ಮ ಬಸ್ ನಿಂತಿತು. ಮುಂದೆ ದೊಡ್ಡ ಗುಡ್ಡ ಪಕ್ಕದಲ್ಲಿ ಗಂಗೆಯ ಬಿರಿಸು ಜೊತೆಗೆ ಜೋರಾದ ಮಳೆ. ಮುಂದೆಲ್ಲೋ ಗುಡ್ಡ ಕುಸಿದಿದೆ. ಜೆ. ಸಿ. ಬಿ ಬಂದು ರಸ್ತೆ ಬಿಡಿಸುವವರೆಗೆ ನಿಲ್ಲಬೇಕು ಎಂದಷ್ಟೇ ತಿಳಿಯಿತು. ಹೊರಗೆ ಇಳಿಯಲು ಕೂಡ ಸಾಧ್ಯವಾಗದಂತೆ ಮಳೆ ಸುರಿಯುತ್ತಿದ್ದರಿಂದ ಬಸ್ಸಿನಲ್ಲೇ ಕುಳಿತೆ ಹೊರಗೆ ನೋಡಿದೆ. ಬದಿಯಲ್ಲೇ ಇದ್ದ ಮರದಲ್ಲಿ ಮಂಗವೊಂದು ಮಳೆಯಲ್ಲಿ ತೋಯ್ದು ತೊಪ್ಪೆಯಾಗಿ ನಡುಗುತ್ತ ಕುಳಿತ ದೃಶ್ಯ ನನ್ನ ಮನವನ್ನು ಕಲಕಿತು. ಇನ್ನೊಂದು ನಾಲ್ಕು ತಾಸಿನಲ್ಲಿ ನನ್ನ ಪರಿಸ್ಥಿತಿಯು ಅಷ್ಟೇ ದಯನೀಯವಾಗುತ್ತದೆ ಎಂದು ಆ ಕ್ಷಣದಲ್ಲಿ ನನಗೆ ತಿಳಿದಿರಲಿಲ್ಲ.
—————————————————————-
ಮುಂದುವರೆಯುತ್ತದೆ

Facebook ಕಾಮೆಂಟ್ಸ್

ಲೇಖಕರ ಕುರಿತು

Gautam Hegde

ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!