ಅಂಕಣ

ಡಿಜಿಟಲೀಕರಣವೆಂಬ ಹೊಸದಿಗಂತದ ಬಾಗಿಲು ತೆರೆದ ನೋಟ್ ಬ್ಯಾನ್

ಐವತ್ತು ದಿನಗಳ ಹಿಂದೆ ಮೋದಿಯವರ ನೋಟು ನಿಷೇಧದ ಪ್ರಕ್ರಿಯೆಯನ್ನು ಇಡೀ ಭಾರತವೇ ಕೊಂಡಾಡಿದೆ. ಮೊದ ಮೊದಲು ಕಷ್ಟ ಆಯಿತು ಸತ್ಯ. ಅದರಲ್ಲಿ ಅನುಮಾನವೇ ಇಲ್ಲ. ಮೊದಲ ಎರಡು ದಿನ ಹೇಳ ತೀರದು ಅಷ್ಟೊಂದು ತೊಂದರೆ ಅನುಭವಿಸಿದ್ದಾರೆ. ಯಾರ ಬಳಿಯೂ ದಿನ ನಿತ್ಯದ ಖರ್ಚಿಗೆ ದುಡ್ಡಿರಲಿಲ್ಲ. ಮರುದಿನವೇ ಬ್ಯಾಂಕಿನ ಮುಂದೆ ನಿಷೇಧಿತ ನೋಟಿನ ಬದಲಾವಣೆಗಾಗಿ ಸರದಿ ಸಾಲು. ATM ಆಂತೂ ಇರಲೇ ಇಲ್ಲ ಬಿಡಿ. ಇನ್ನೂ ಸರಿ ಆಗಲೇ ಇಲ್ಲ. ದೇಶಾದ್ಯಂತ ಸುಮಾರು 2 ಲಕ್ಷ ATM ಗಳಿವೆ. ಎಲ್ಲವೂ ಸ್ಥಬ್ದ . ಭಾರತಕ್ಕೆ ATM ಬಂದಾಗಲೇ ಕೆಲವು ಜನ ಭಾರತ ಡಿಜಿಟಲೀಕರಣ ಆಗಿಯೇ ಬಿಟ್ಟಿತು ಅಂದುಕೊಂಡಿದ್ದರು. ದೇಶದಲ್ಲಿ ಮಳೆಗಾಲದ‌ ಸಮಯದಲ್ಲಿ ಹುಟ್ಟಿಕೊಳ್ಳುಬವ ನಾಯಿಕೊಡೆ( ಅಣಬೆ) ಯಂತೆ ಸೃಷ್ಟಿಯಾದವು. ಮೊದ ಮೊದಲು ಜನ ATM ಕಡೆಗೆ ಬರಲು ಹೆದರುತ್ತಾ ಇದ್ದರು. “ಅಯ್ಯೋ ಏನಾದರು ಹೆಚ್ಚು ಕಡಿಮೆ ಆದರೆ?” “ನನ್ನ ಹಣವು ಬೇರೆಯವರ ಪಾಲಾದರೆ?” ಅದೆಲ್ಲವನ್ನು ನಿಧಾನವಾಗಿ ಅರಿತುಕೊಂಡ ಮೇಲೆ ATM ಎನ್ನುವ Concept (ಪರಿಕಲ್ಪನೆ) ಭಾರತವನ್ನೇ ಬದಲಾಯಿಸಿ ಬಿಟ್ಟಿತು. ಇದರಿಂದ ಕೊಂಚ ಮಟ್ಟಿಗಿನ ಡಿಜಿಟಲೀಕರಣ ಯಶಸ್ವಿಯಾಯಿತು. ಆದರೂ ಪೂರ್ಣ ಪ್ರಮಾಣದಲ್ಲಿ ಇನ್ನೂ ಆಗಿಲ್ಲ. ಇಂಟರ್ನೆಟ್ ಎಲ್ಲಾ ಭಾರಿ ವೇಗದಲ್ಲಿ ಬಂದರೆ ಅದು ಮಾತ್ರ ಡಿಜಿಟಲೀಕರಣ ಎಂದು ಕೊಂಡಿದ್ದರು. “ಕೆಲವು‌ ಹಳ್ಳಿಗಳಿಗೆ ಇನ್ನೂ ರಸ್ತೆ ಯೇ ಇಲ್ಲ, ಇಂಟರ್ನೆಟ್ಟಂತೆ…!!!” ಎಂದು ವ್ಯಂಗ್ಯದ ಮಾತಾನ್ನಾಡಿದವರು ಅನೇಕರು . ನಮ್ಮಲ್ಲಿ ಯೋಜನೆಯೊಂದು ವಿಫಲವಾದರೆ ವ್ಯಂಗ್ಯವಾಡುವವರಿಗೆ ಬರವಿಲ್ಲ.ಆ ಯೋಜನೆಯನ್ನು ಯಶಸ್ವಿ ಮಾಡುವುದು ಹೇಗೆ ? ಹೇಗೆ ವಿಫಲವಾಯಿತು? ಯಾರು ಕಾರಣೀಕರ್ತರು ? ಇನ್ನೇನು ಮಾಡುವುದು? ಎಂದೆಲ್ಲಾ ಚಿಂತಿಸುವ ಅಥವಾ ಉತ್ತಮ ಸಲಹೆಗಳನ್ನು ಕೊಡುವ ಜನರೇ ಇಲ್ಲ‌. ಇದು ನಿಜಕ್ಕೂ ಬೇಸರ ತರುವಂತದ್ದು. ಮೊದಲು ಕಂಪ್ಯೂಟರೀಕರಣ ಆದಾಗಲಂತೂ ಕೆಲವು ಬುದ್ಧಿಜೀವಿಗಳು ಆಕಾಶವೇ ತಲೆ ಮೇಲೆ ಬಿದ್ದಂತೆ ಮಾಡಿದ್ದರು. 2000 ನೇ ಇಸವಿಗೆ ಎಲ್ಲಾ ಕಂಪ್ಯೂಟರ್ ಗಳು ಸ್ಥಗಿತವಾಗುತ್ತದಂತೆ‌.!!! Y2K ಎನ್ನುವ ನಾಮಕರಣದಿಂದ ಕಂಪ್ಯೂಟರ್ ಜಗತ್ತನ್ನೇ ತಲ್ಲಣಗೊಳಿಸಿತ್ತು. WhatsApp ಇಲ್ಲದ ಕಾಲದಲ್ಲೂ ಗಾಳಿಸುದ್ದಿ ಹಬ್ಬುತ್ತಿತ್ತು. ಕಾಲಕ್ರಮೇಣ ಎಲ್ಲವೂ ಸರಿಯಾಯಿತು. ATM ಎನ್ನುವ ಪರಿಕಲ್ಪನೆಯನ್ನು ಬಳಸುವ ನಾವು ಇನ್ನಾದರೂ ನಿಲ್ಲಿಸದಿದ್ದರೆ ಡಿಜಿಟಲೀಕರಣವು ಯಶಸ್ವಿಯಾಗಲು ಸಾಧ್ಯವೇ ಇಲ್ಲ. ATM ನ ಬಳಕೆಯು ಕಡಿಮೆ ಆಗುವುದರ ಜೊತೆಗೆ  ನಗದು ವ್ಯವಹಾರವೂ ಕಡಿಮೆ ಆಗುತ್ತದೆ. ATM ನಲ್ಲಿ ಹಣ ತುಂಬದೇ ಇರುವುದಕ್ಕೆ ಇದೂ ಒಂದು ಕಾರಣವೇ…!!! ಹೊಸ ನೋಟಿನ ಕೊರತೆ ಮಾತ್ರ ಅಲ್ಲವೇ ಅಲ್ಲ. ಜನವರಿಯ ನಂತರ ಬ್ಯಾಂಕಿನಲ್ಲಿ ನೋಟು ಬದಲಾವಣೆಯ ಕೆಲಸ ಇರುವುದಿಲ್ಲ. ಆ ಹಂತದಲ್ಲಿ ಕೆಲವೊಂದು ಸಮಸ್ಯೆಗಳು ದೂರವಾಗಬಹುದು. ನೋಟಿನ ಉಪಯೋಗವನ್ನು ಅಥವಾ ಬಳಕೆಯನ್ನು ಕಡಿಮೆ ಮಾಡಿಕೊಳ್ಳಲು ಇದು ಸರಿಯಾದ ಸಮಯ. ಇನ್ನಾದರೂ ನಾವು ಬದಲಾಗಲೇಬೇಕು.

 

ಗುಜರಾತಿನ ಒಂದು ಹಳ್ಳಿ ಇದೀಗ ಪೂರ್ಣ ಪ್ರಮಾಣದಲ್ಲಿ ಡಿಜಿಟಲೀಕರಣಗೊಂಡಿದೆ.  ಸಣ್ಣ ಅಂಗಡಿಯಿಂದ ಶುರುವಾಗಿ ಸಣ್ಣ ಉದ್ಯಮದವರೆಲ್ಲಾ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ICICI Bank ನವರು ಆ ಹಳ್ಳಿಯನ್ನು ದತ್ತು ಪಡೆದು ಇಡೀ ಭಾರತಕ್ಕೆ ಮಾದರಿ ಹಳ್ಳಿಯನ್ನಾಗಿಸಿದ್ದಾರೆ. ಹಳ್ಳಿಯ ಜನರೆಂದರೆ ಯಾರಿಗೂ ಬೇಡದವರು ಎನ್ನುವ ಮಾತಿಗೆ ಅಪವಾದಗಿದ್ದಾರೆ. ನಗರ ಪ್ರದೇಶದ ಜನರು ಮಾಡದ ಸಾಧನೆ ಅವರು ಮಾಡಿದ್ದಾರೆ.  ಡಿಜಿಟಲೀಕರಣವು ಭಾರತದಲ್ಲೂ ಸಾಧ್ಯವಿದೆ ಎನ್ನುವುದನ್ನು ಮಾಡಿ ತೋರಿಸಿದ್ದಾರೆ. ಅವರ ಈ ಕಾರ್ಯಸಾಧನೆಯನ್ನು ನಾವು ಮೆಚ್ಚಲೇಬೇಕು. ನೋಟ್ ಬ್ಯಾನ್ ಆದ ನಂತರ  ಡಿಜಿಟಲೀಕರಣದ ಮಾತು ಎಲ್ಲೆಲ್ಲೂ ಕೇಳಿ ಬರುತ್ತದೆ. ಅದರ ಫಲವಾಗಿ ಈಗ ಮಂಗಳೂರಿನಲ್ಲಿ ಸದ್ದಿಲ್ಲದೆ ಶುರುವಾಗಿದೆ ಡಿಜಿಟಲ್ ಯುಗ. ಇಲ್ಲಿನ ಆಟೋ ಚಾಲಕರು ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಕನಸನ್ನು ನನಸು ಮಾಡಲು ಹೊರಟಿದ್ದಾರೆ. ಕ್ಯಾಶ್ ಇಲ್ಲದೆ ಆಟೋ ಪ್ರಯಾಣ ಮಾಡುವಂತಿಲ್ಲ ಎನ್ನುವವರಿಗೆ ಕುಡ್ಲ ಸೌಹಾರ್ದ ಸಂಘದ ಮೂಲಕ ಆಟೋ ಚಾಲಕರು ಉದಾಹರಣೆ ಇದು ಮಂಗಳೂರಿನ ಆಟೋ ಸರ್ವಿಸ್. ಇಲ್ಲಿ 200ಕ್ಕೂ ಹೆಚ್ಚು ಆಟೋಗಳು ಪೇಟಿಎಂ ಮಾಡಿಕೊಂಡಿವೆ. ಪ್ರಧಾನಿ ಮೋದಿಯ ಡಿಜಿಟಲ್ ಇಂಡಿಯಾ ಕನಸು ನನಸು ಮಾಡುವ ಯೋಜನೆಗೆ ಕೈ ಜೋಡಿಸಿದ್ದಾರೆ. ‘ಚಲೋ ಕುಡ್ಲ’ ಎನ್ನುವ ಆ್ಯಪ್ ಮೂಲಕ ಆಟೋ ಚಾಲಕರು ಗ್ರಾಹಕರನ್ನು ಆಕರ್ಷಿಸಲು ಹೊರಟಿದ್ದಾರೆ. ಐ ಸರ್ಚ್ ಮಾನಿಟರಿಂಗ್ ಕಂಪನಿ ಆಟೋ ಚಾಲಕರಿಗೆ ತರಬೇತಿ ಮತ್ತು ತಂತ್ರಜ್ಞಾನ ಒದಗಿಸಿದೆ. ಕೇವಲ ವ್ಯವಹಾರಕ್ಕಷ್ಟೇ ಅಲ್ಲ, ಗ್ರಾಹಕರನ್ನು ಸೆಳೆಯುವುದರ ಜೊತೆಗೆ, ಇತರರಿಗೂ ಜಾಗೃತಿ ಮೂಡಿಸುತ್ತಿದ್ದಾರೆ ಈ ಚಾಲಕರು.

ಉಡುಪಿಯ ಒಂದು ಸಣ್ಣ ಹಳ್ಳಿಯಲ್ಲಿ ಇದೀಗ ಎಲ್ಲವೂ online ಆಗುತ್ತಾ ಇದೆ. ಅದರ ಪ್ರಕ್ರಿಯೆಗೆ ವೇಗ ಸಿಕ್ಕಿದೆ. ಜನರಿಗೆ ಕಡ್ಡಾಯವಾಗಿ ಉಚಿತವಾಗಿ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆಯಲಾಗುತ್ತಿದೆ. ಡಿಜಿಟಲೀಕರಣದ ಉಚಿತ ತರಬೇತಿಯನ್ನು ನೀಡಲು ಪ್ರಾರಂಭಿಸಲಾಗಿದೆ. ಮನೆಗೆ ಕನಿಷ್ಠ ಒಂದು ಸ್ಮಾರ್ಟ್ ಫೋನ್ ನ್ನು ಬಡ್ಡಿ ರಹಿತ ಸಾಲ ನೀಡಿ ಖರೀದಿಸುವಂತೆ ಮಾಡಲಾಗುತ್ತಿದೆ. 10 ರೂ. ನಿಂದ ಮೇಲ್ಪಟ್ಟ ಎಲ್ಲಾ ವ್ಯವಹಾರವನ್ನು ಬ್ಯಾಂಕ್ ಅಥವಾ online ಮೂಲಕವೇ ಮಾಡಬೇಕೆಂದು ಪ್ರೊತ್ಸಾಹಿಸಲಾಗುತ್ತಿದೆ. ಎಲ್ಲಾ ಅಂಗಡಿಗಳಿಗೆ credit/debit card swiping machine ನ್ನು ಉಚಿತವಾಗಿ ನೀಡಲು ಚಿಂತನೆ ನಡೆದಿದೆ. ಇದೆಲ್ಲಾ ಸ್ವಲ್ಪ ದಿನಗಳಲ್ಲಿ ನಮ್ಮಕಣ್ಣ ಮುಂದೆ ನಡೆಯಲಿರುವವ ಕೆಲವೊಂದು ವಿಸ್ಮಯಗಳು. ಇದು ಕರ್ನಾಟಕದ ಮೊದಕ ಡಿಜಿಟಲ್ ಹಳ್ಳಿಯೆಂಬ ನಾಮಕರಣ ಆಗುತ್ತದೆ . ಕರಾವಳಿ ಜಿಲ್ಲೆಗಳು ಎಲ್ಲಾ ವಿಷಯದಲ್ಲೂ ಬಹಳ ಹಿಂದಿನಿಂದಲೂ ತನ್ನ ಮೊದಲ ಸ್ಥಾನಗಳನ್ನು ಉಳಿಸಿಕೊಂಡಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬ್ಯಾಂಕುಗಳ ತವರೂರು ಎಂದು ಹೆಸರು ಪಡೆದುಕೊಂಡಿದೆ. ಶಿಕ್ಷಣ, ವೈದ್ಯಕೀಯ, ಹೀಗೆ ಇನ್ನೂ ಹಲವು ಕಾರ್ಯಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದೆ. ಬುದ್ಧಿವಂತರ ಜಿಲ್ಲೆ ಎನ್ನುವ ಹೆಸರು ಗಳಿಸಿದ್ದಕ್ಕೆ ಸಾರ್ಥಕವಾಗುತ್ತದೆ.

Cash less ಆದರೆ ನೋಟು ಮುದ್ರಿಸಲು ಬಳಸುವ ಚಿನ್ನವು ಬಂಧನದಿಂದ ಬಿಡುಗಡೆ ಆಗುತ್ತದೆ. ಅಂದರೆ ನೋಟು ಮುದ್ರಿಸಲು ಕೆಲವೊಂದು ನಿಯಮಗಳಿವೆ. ಅದರಲ್ಲಿ ಈ ಚಿನ್ನದ ವಿಷಯ. ಯಾಕೆ ಚಿನ್ನ ಬೇಕು ನೋಟು ಮುದ್ರಣಕ್ಕೆ ? ಕಾಗದ ಮತ್ತು ಶಾಯಿ( Ink) ಇದ್ದರೆ ಸಾಲದೇ ? ಎನ್ನುವ ಪ್ರಶ್ನೆಗಳು ಮೂಡುವುದು ಸಹಜ. ಯಾವುದೇ ದೇಶವಿರಬಹುದು ಅಲ್ಲಿ ನೋಟನ್ನು ಮುದ್ರಿಸುವ ಸಂದರ್ಭ ಎಷ್ಟು ಮೌಲ್ಯದ ನೋಟನ್ನು ಮುದ್ರಿಸುತ್ತರೋ ಅಷ್ಟು ಮೌಲ್ಯದ ಚಿನ್ನವನ್ನು ಮುದ್ರಣಾ ಹಕ್ಕನ್ನು ಹೊಂದಿರುವ ಬ್ಯಾಂಕ್ ನಲ್ಲಿ ಅಡವಿಡಲಾಗುತ್ತದೆ. ಅದನ್ನು ಯಾವ ಸಂದರ್ಭದಲ್ಲಿಯೂ ಬಳಸುವಂತಿಲ್ಲ. ಅಂತಹಾ ಚಿನ್ನದ ಸಂಗ್ರಹವು cash less ಆದರೆ ಅಲ್ಲಿಂದ ಹೊರಬರುತ್ತದೆ. ಎಲ್ಲವೂ online ಅಥವಾ card payment ಅಗಿ ಬಳಸಿದ್ದೇ ಆದಲ್ಲಿ ಅಡವಿಟ್ಟ ಚಿನ್ನವು ಹೊರಬರುತ್ತದೆ. ಚಿನ್ನವು ನಿತ್ಯ ಬಳಕೆಗೆ ಬರಲಾರಂಭಿಸುತ್ತದೆ                                 .

ತೆರಿಗೆ ಸಂಗ್ರಹದಲ್ಲಿ ಭಾರೀ ಹೆಚ್ಚಳ ಆಗಿದೆ. ಈ ವಿಷಯವನ್ನು ಕೇಳಿದ ಕೂಡಲೇ ಕೆಲವರಿಗೆ ಆಶ್ಚರ್ಯವಾಗಬಹುದು. ಇದು ನಾನು ಅಥವಾ ಇನ್ಯಾರೋ ಹೇಳಿದ್ದಲ್ಲ. ಸ್ವತಃ ಹಣಕಾಸು ಸಚಿವರೇ ಸ್ಪಷ್ಟಪಡಿಸಿದ್ದಾರೆ. ನೋಟು ಬ್ಯಾನ್ ಆದ ಮೇಲೆ ತೆರಿಗೆ ಸಂಗ್ರಹ ದುಪ್ಪಟ್ಟಾಗಿದೆ. ನೇರ ತೆರಿಗೆ ಅಂದರೆ ಆದಾಯದಂತಹ ತೆರಿಗೆಯಲ್ಲಿ 14% , ಪರೋಕ್ಷ ತೆರಿಗೆ ಅಂದರೆ ಕೆಲವೊಂದು ವಸ್ತುಗಳನ್ನು ಖರೀದಿಸಿದಾಗ ಅದರಲ್ಲಿ ಪರೋಕ್ಷವಾಗಿ ತೆರಿಗೆ ಕಟ್ಟಬೇಕಾಗುತ್ತದೆ.ಅದನ್ನು ನಾವು ನೇರವಾಗಿ ಸರಕಾರಕ್ಕೆ ತೆರಿಗೆಯನ್ನು ಕಟ್ಟುವುದಿಲ್ಲ ಕಂಪನಿಗಳ ಮೂಲಕ ಕಟ್ಟಲಾಗುತ್ತದೆ. ಆ ಪರೋಕ್ಷ ತೆರಿಗೆ ಸುಮಾರು 26% ಹೆಚ್ಚಳವಾಗಿದೆ. ಸೇವಾ ತೆರಿಗೆಯಲ್ಲಿ 25% ಹೆಚ್ಚಳವಾದರೆ ಅಬಕಾರಿ ತೆರಿಗೆಯಲ್ಲಿ ಸುಮಾರು 45% ಹೆಚ್ಚಳವಾಗಿದೆ. ಇದು ಅಭಿವೃದ್ಧಿಗೆ ಪೂರಕವಲ್ಲವೇ..? ಅಧಿಕ ತೆರಿಗೆ ಸಂಗ್ರಹವಾದರೆ ದೇಶದ ಸಕಲ ಅಭಿವೃದ್ಧಿಗಳು ಚಾಲನೆಗೊಳ್ಳುತ್ತದೆ.  ವಿಪಕ್ಷಗಳದ್ದು ಒಂದೇ ಮಾತು ಸಾಮಾನ್ಯ ಜನರಿಗೆ ತೊಂದರೆ ಆಗುತ್ತಿದೆ ಎಂದು. ಆದರೆ ಹೊರಗಡೆ ನಡೆಯುತ್ತಿರುವುದೇ ಬೇರೆ. ಇಂದು ನಾವು ಕಷ್ಟ ಪಟ್ಟರೆ ಮುಂದೆ ಸುಖಮಯ ಜೀವನ ಕಾದಿದೆ ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಎಲ್ಲವೂ ಬ್ಯಾಂಕ್ ಮೂಲಕ ವ್ಯವಹಾರಗಳು ನಡೆದರೆ ಲೆಕ್ಕಾಚಾರವು ಪಾರದರ್ಶಕವಾಗಿರುತ್ತದೆ. ಭ್ರಷ್ಟಾಚಾರದಲ್ಲಿ ತೀವ್ರ ಸ್ವರೂಪದ ಕುಂಠಿತವನ್ನು ಕಾಣುತ್ತದೆ.

            .

‘ಬಡವ ನೀ ಮಡಗ್ದಾಂಗಿರು ಎನ್ನುವ ಮಾತಿಗೆ ಈಗ ಇನ್ನೊಂದು ವಾಕ್ಯವನ್ನು ಸೇರಿಸಿದ್ದಾರೆ. ಶ್ರೀಮಂತ ನಿನಗೆ ಮೋದಿ ಮಾಡುಗ್ತಾನಿರು ಎನ್ನುವ ಹಾಸ್ಯದ ಮಾತು ಅಲ್ಲಿ ಇಲ್ಲಿ ಸಂಚರಿಸಿ ನಗೆಯ ಹೊನಲು ಹರಿಸುತ್ತಿದೆ. “ಮೋದಿ ಮಾಡಿದ್ದು ತಪ್ಪಲ್ಲ, ಸರಿಯಾಗಿಯೇ ಇದೆ”  ಎನ್ನುವವರ ಸಂಖ್ಯೆ  ದಿನದಿಂದ ದಿನಕ್ಕೆ ಏರುತ್ತಲೇ ಇದೆ. ನೋಟು ನಿಷೇಧ ಮಾಡದೇ ಇದ್ದರೆ ನಾವಿಂದು ಡಿಜಿಟಲೀಕರಣವನ್ನು ಮಾತನಾಡಲು ಮಾತ್ರ ಬಳಸುತ್ತಿದ್ದೆವು. “ಮೊದಿಯವರನ್ನು ನೋಡಿ ನೀನು ಕಲಿಯುವುದು ತುಂಬಾ ಇದೆ” ಈ ಮಾತು ಯಾರಿಗೆ ಹೇಳಿದ್ದು ಗೊತ್ತಾ ? ಮುಲಾಯನ್ ಸಿಂಗ್ ಯಾದವ್ ತನ್ನ ಮಗನಿಗೆ ಅಖಿಲೇಶ್ ಬುದ್ಧಿವಾದವನ್ನು ಹೇಳುವಾಗ ಈ ಮಾತನ್ನು ಹೇಳಿದ್ದರು. ಅಂದರೆ ನಾವು ನೀವು ಅರ್ಥ ಮಾಡಿಕೊಳ್ಳಬೇಕಾದದ್ದು ಇಷ್ಟು. ಮೋದಿಯವರನ್ನು ರಾಜಕೀಯವಾಗಿ ವಿರೋಧಿಸುವ ನಾಯಕರೇ ತಮ್ಮ ಮಕ್ಕಳಿಗೆ ಮೋದಿಯವರನ್ನು ಒಬ್ಬ ಮಾದರಿ ವ್ಯಕ್ತಿಯನ್ನಾಗಿ ತೋರಿಸುತ್ತಿದ್ದಾರೆ. ಭಾರತದ ಭವಿಷ್ಯವನ್ನು ಗಮನಿಸುತ್ತಿರುವವರಿಗೆ  ಸ್ಪಷ್ಟವಾದ ಅರಿವಿದೆ. ಡಿಜಿಟಲೀಕರಣದಿಂದ ಮಾತ್ರ ಭ್ರಷ್ಟಾಚಾರದ ನಿರ್ಮೂಲನೆ ಸಾಧ್ಯ. online ಬಗ್ಗೆ ಮಾಹಿತಿ ಇರುವವರು ಯಾರಿಗೆ ಅಗತ್ಯವಿದೆಯೋ ಅವರಿಗೆ ಅರಿವು ಮೂಡಿಸುವ ಕೆಲಸಗಳು ನಡೆಯಬೇಕು.

 

ಏನೇ ಆಗಲಿ ಅದು ಎಲ್ಲರಿಗೂ ಒಳ್ಳೆಯದೇ ಆಗುವುದು. ಎಲ್ಲವೂ ಪ್ರಧಾನಿಯೇ ಮಾಡಲು ಸಾಧ್ಯವಿಲ್ಲ. ನಾವೂ ಸಹಕಾರ ನೀಡಬೇಕು. ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ ಕಾರ್ಯದಲ್ಲಿ ನಾವೂ ಭಾಗಿಯಾಗಬೇಕು. ಅದು ನಮ್ಮ ಕರ್ತವ್ಯ ಕೂಡ. ನಮ್ಮ ಇಂದಿನ ಜನಾಂಗವು ಸ್ವಾತಂತ್ತ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ . ಆದರೇನಂತೆ ಸದೃಢ ಭಾರತಕ್ಕಾದರೂ ಶ್ರಮಿಸುವ ಕಾರ್ಯವನ್ನು ಒಂದಾಗಿ ಮಾಡೋಣ. ಭಾರತವನ್ನು ವಿಶ್ವಗುರುವನ್ನಾಗಿಸುವತ್ತ ಪಣ ತೊಡೋಣ. ಯಾರೇನೇ ಅಂದರೂ ಇದೀಗ ಭಾರತದ ಹೊಸ ದಿಗಂತದ ಬಾಗಿಲು ತೆರೆದು ನಿಂತಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Jagath Bhat

ಜಗತ್ ಭಟ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಯಕ್ಷಗಾನ, ಛಾಯಾಗ್ರಹಣ ಮತ್ತು ಬರವಣಿಗೆ ಇವರ ಹವ್ಯಾಸ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!