ಅಂಕಣ

ಇದು ಇತಿಹಾಸ ಹೇಳದ ಪರಾಕ್ರಮಿಯ ಕಥೆ!

   ಕ್ರಿ.ಶ 1857. ಭಾರತೀಯರು ಬ್ರಿಟೀಷರ ವಿರುದ್ಧ ಮೊದಲ ಬಾರಿಗೆ ಸಂಘಟಿತರಾಗಿ ತಿರುಗಿ ಬಿದ್ದ ವರುಷವದು. ಭಾರತೀಯ ಮನ-ಮನೆಗಳಲ್ಲಿ ಸ್ವಾತಂತ್ರ್ಯವೆಂಬ ಕಿಚ್ಚನೆಬ್ಬಿಸಿದ್ದು ಮಂಗಳ ಪಾಂಡೆಯೆಂಬ ಭಾರತೀಯ ಬ್ರಿಟೀಷ್ ಸೇನಾ ಯೋಧ. ದಿನ ದಿನಕ್ಕೆ ಈ ಹೋರಾಟ ತೀವ್ರವಾಗುತ್ತ ಹೋಗುತ್ತದೆ. ಬ್ರಿಟೀಷರ ದಾಸ್ಯದಿಂದ್ದ ಬೇಸತ್ತಿದ್ದ ಅದೇಷ್ಟೋ ಜೀವಗಳು ಹೋರಾಟಕ್ಕೆ ಧುಮುಕುತ್ತವೆ.

   ಇದೇ ಸಮಯದಲ್ಲಿ ಅಂದಿನ ಪೂನಾದ ಇಂದಿನ ಪುಣೆಯ ಹಳ್ಳಿಯೊಂದರಲ್ಲಿ,  ಮೊಮ್ಮಗನೊಬ್ಬ ತಾತನ ತೊಡೆಯೇರಿ ಕುಳಿತು ಬ್ರಿಟೀಷರ ದೌರ್ಜನ್ಯ, ದಬ್ಬಾಳಿಕೆ,ಕ್ರೌರ್ಯಗಳ ಕಥೆ ಕೇಳಿಸಿಕೊಳ್ಳುತ್ತಿದ್ದ. ಅತ್ತ ತಾತ ಬ್ರಿಟೀಷರು ಭಾರತೀಯರ ಮೇಲೆ ನಡೆಸುತ್ತಿರುವ ದೌರ್ಜನ್ಯದ ಕಥೆಯನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಿದ್ದರೆ ಇತ್ತ ಹನ್ನೆರಡರ ಪೋರನ ರಕ್ತ ಕುದಿಯುತ್ತಿರುತ್ತದೆ. ತಾತ ಕಥೆ ನಿಲ್ಲಿಸಿದ ಕೂಡಲೆ ತಾತನ ತೊಡೆಯಿಂದ ಛಂಗನೆದ್ದು, “ತಾತ ನಾನು ದೊಡ್ಡವನಾಗಿ ಬ್ರಿಟೀಷರಿಂದ ಭಾರತೀಯರನ್ನು ರಕ್ಷಿಸುತ್ತೇನೆ, ಬ್ರಿಟೀಷರ ತಲೆ ತೆಗೆಯುತ್ತೇನೆ” ಎಂದು ಹೂಂಕರಿಸುತ್ತಾನೆ. ಪೋರನನ್ನು ದಿಟ್ಟಿಸಿದ ತಾತ, ಆವೇಶದಲ್ಲಿ ಮಾತನಾಡುತ್ತಿದ್ದಾನೆಂದು ನಿರ್ಲಕ್ಷಿಸುತ್ತಾರೆ. ಆದರೆ ಮುಂದೆ ಇದೇ ಪೋರ ಬೆಳೆದು ದೊಡ್ಡವನಾಗಿ ಸೂರ್ಯ ಮುಳುಗದ ರಾಜ್ಯದ ಅಧಿಪತಿಗಳ ಬೆನ್ಹುರಿಯಲ್ಲಿ ನಡುಕ ಹುಟ್ಟಿಸುತ್ತಾನೆಂದು ಅಂದು ಆ ಪೋರನ ತಾತ ಕೂಡ ಊಹಿಸಿರಲಿಲ್ಲ.

 

          ಆ ಪೋರನ ಹೆಸರು ವಾಸುದೇವ ಬಲವಂತ ಫಡಕೆ!

 

    1845 ನವಂಬರ್ ನಾಲ್ಕರಂದು ಮಹರಾಷ್ಟ್ರದ ಹಳ್ಳಿಯೊಂದರಲಿ ಜನಿಸಿದ ಫಡಕೆ, ಹುಟ್ಟೂರಿನಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದ ನಂತರ ಪುಣೆಗೆ ತೆರಳಿ ಬ್ರಿಟೀಷ್ ಮಿಲಿಟರಿಯಲ್ಲಿ ಅಕೌಂಟೆಂಟ್ ಆಗಿ ವೃತ್ತಿ ಜೀವನವನ್ನು ಪ್ರಾರಂಭಿಸುತ್ತಾರೆ. ಕೆಲವೇ ದಿನಗಳಲ್ಲಿ ಫಡಕೆ, ಆಗಿನ ಕಾಲಕ್ಕೆ ಪುಣೆಯಲ್ಲಿ ಪ್ರಖ್ಯಾತ ಕುಸ್ತಿಪಟುವಾಗಿದ್ದ ಕ್ರಾಂತಿವೀರ ಲಾಹುಜಿ ವಸ್ತಾದ್ ಸಾಳ್ವೆಯೆಂಬ ಮಹಾನ್ ಕುಸ್ತಿಪಟು ಮತ್ತು ಸ್ವತಂತ್ರ ಭಾರತದ ಪರಿಕಲ್ಪನೆ ಹೊಂದಿದ್ದ ವ್ಯಕ್ತಿಯ ಸಹವಾಸಕ್ಕೆ ಬೀಳುತ್ತಾರೆ. ಸಾಳ್ವೆ ಫಡಕೆಯವರಿಗೆ ಗರಡಿ ಮನೆಯನ್ನು ಪರಿಚಯಿಸುತ್ತಾರೆ. ದಿನ ಕಳೆದಂತೆ ಕುಸ್ತಿಯ ಜೊತೆ ಭಾರತೀಯರಿಗೆ ಸ್ವತಂತ್ರ ಏಕೆ ಬೇಕೆಂಬ ಸ್ಪಷ್ಟ ಪರಿಕಲ್ಪನೆಯನ್ನು ಫಡಕೆಯವರ ತಲೆಯಲ್ಲಿ ಅಚ್ಚು ಒತ್ತುತ್ತಾರೆ ಸಾಳ್ವೆ. ನಿಧಾನವಾಗಿ ಫಡಕೆಯವರ ಮನ ಸ್ವತಂತ್ರ ಹೋರಾಟದೆಡೆಗೆ ಸೆಳೆಯಲಾರಂಭಿಸುತ್ತದೆ. ನಂತರದ ದಿನಗಳಲ್ಲಿ ಫಡಕೆ ಮಹಾದೇವ್ ಗೋವಿಂದ ರಾನಡೆಯಂತಹ ಮಹಾನ್ ವಾಗ್ಮಿಗಳ ಸ್ವತಂತ್ರ ಭಾರತದ ಅವಶ್ಯಕತೆಯ ಭಾಷಣಗಳನ್ನು ಕೇಳಲಾರಂಭಿಸುತ್ತಾರೆ. ಭಾಷಣಗಳಲ್ಲಿ ಪ್ರಸ್ತುತಪಡಿಸುತ್ತಿದ್ದ ಸ್ವಾತಂತ್ರ್ಯದ ಪರಿಕಲ್ಪನೆಯತ್ತ ಆಕರ್ಷಿತರಾಗುತ್ತಾರೆ ಫಡಕೆ.

 

      ಬೆಳಗ್ಗೆ ಗರಡಿಯಲ್ಲಿ ಅಭ್ಯಾಸ, ನಂತರ ಅಕೌಂಟೆಂಟ್ ಕೆಲಸ, ಸಂಜೆ ಬ್ರಿಟೀಷರ ದೌರ್ಜನ್ಯದ ಕಥೆ ಕೇಳುವುದು, ಇದು ಫಡಕೆಯವರ ದಿನಚರಿಯಾಗಿ ಬಿಡುತ್ತದೆ.  ಬ್ರಿಟೀಷರ ದಬ್ಬಾಳಿಕೆಯ ಪರಿಚಯವಾದಂತೆಲ್ಲ,  ಹನ್ನೆರಡನೆ ವಯಸ್ಸಿನಲ್ಲಿ ಕುದ್ದು ತಣ್ಣಗಾಗಿದ್ದ ರಕ್ತ ಮತ್ತೆ ಕುದಿಯಲಾರಂಭಿಸುತ್ತದೆ. ದಿನ ದಿನಕ್ಕೆ ಬ್ರಿಟೀಷರ ವಿರುದ್ಧದ ಆಕ್ರೋಶ ಇಮ್ಮಡಿಸುತ್ತಿರುತ್ತದೆ. ಆದರೆ ಆಕ್ರೋಶ ಸ್ಪೋಟಗೊಂಡಿದ್ದು ಮಾತ್ರ 1870ರಲ್ಲಿ ಫಡಕೆಯ ತಾಯಿ ವಿಧಿವಶರಾದಾಗ. ಅದೊಂದು ದಿನ ಫಡಕೆಯವರಿಗೆ , ತಾಯಿಗೆ ಹುಷಾರಿಲ್ಲ ಬೇಗ ಬರಬೇಕೆನ್ನುವ ಟೆಲಿಗ್ರಾಂ ಬರುತ್ತದೆ. ರಜೆ ಬೇಕೆಂದು ಪರಿ-ಪರಿಯಾಗಿ ಆಂಗ್ಲ ಅಧಿಕಾರಿಯನ್ನು ಬೇಡಿಕೊಂಡರು ರಜೆ ಮಂಜೂರು ಮಾಡಲಾಗುವುದಿಲ್ಲ ಎಂಬ ಖಡಾಖಂಡಿತ ಉತ್ತರ ದೊರೆಯುತ್ತದೆ ಫಡಕೆಗೆ. ಹತಾಶನಾಗಿ ಕೆಲಸದಲ್ಲಿ  ತೊಡಗಿಸಿಕೊಂಡಿರುವಾಗಲೇ ತಾಯಿ ತೀರಿ ಹೋದರೆಂಬ ಕಹಿ ಸುದ್ದಿ ಕಿವಿಗಪ್ಪಳಿಸುತ್ತದೆ, ಮೊದಲೇ ಬ್ರಿಟೀಷರ ವಿರುದ್ಧ ಕುದಿಯುತ್ತಿದ್ದ ಫಡಕೆಗೆ, ಕೊನೆಯ ಬಾರಿಗೆ ತಾಯಿಯ ಮುಖವನ್ನು ಸಹ ನೋಡದಂತೆ ಮಾಡಿದ ಬ್ರಿಟೀಷರನ್ನು ಸಿಗಿದು ಹಾಕುವಷ್ಟು ಕೋಪ ಉಕ್ಕುತ್ತದೆ. ಬ್ರೀಟೀಷರ ದಬ್ಬಾಳಿಕೆಯನ್ನು ವಿರೋಧಿಸುವ ಮೊದಲ ಹೆಜ್ಜೆಯಾಗಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೊರ ನಡೆಯುತ್ತಾರೆ ಫಡಕೆ. ಅಲ್ಲಿಂದ ನೇರವಾಗಿ ಅವರು ಧುಮುಕ್ಕಿದ್ದು   ಸ್ವತಂತ್ರ ಸಂಗ್ರಾಮಕ್ಕೆ.

     1857ರ ಸ್ವಾತಂತ್ರ ಸಂಗ್ರಾಮ ವಿಫಲವಾದ್ದರಿಂದ, ಸ್ವಾತಂತ್ರ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಜನ ಅಧೀರರಾಗಿ ದಿಕ್ಕು ತೋಚದೆ, ಬ್ರಿಟೀಷರ ಬೂಟಿಗೆ ಮುತ್ತಿಕ್ಕಿ ಮತ್ತೆ ಬ್ರಿಟೀಷರ ದಾಸ್ಯಕ್ಕೆ ಬಿದ್ದಿರುತ್ತಾರೆ. ತಾತ್ಯಟೋಪಿಯಂತಹ ಕೆಲವು ಕ್ರಾಂತಿಕಾರಿಗಳು ತಿರುಗಿ ಬಿದ್ದಿದ್ದರೂ , ಅವರ ಹೋರಾಟವನ್ನು ಹತ್ತಿಕ್ಕಲು ಯಶಸ್ವಿಯಾಗಿರುತ್ತಾರೆ ಬ್ರಿಟೀಷರು.. ಆದರೂ ತಾತ್ಯ ಮತ್ತು ಮಂಗಳ ಪಾಂಡೆ ಹಚ್ಚಿದ್ದ ಸ್ವತಂತ್ರದ ಕಿಡಿ ಮಾತ್ರ ಭಾರತೀಯರ ಎದೆಗೂಡನ್ನು ಬೆಚ್ಚಗಾಗಿಸುತ್ತಲೇ ಇರುತ್ತದೆ. ಆ ಕಿಡಿಯನ್ನು ಸ್ವತಂತ್ರದ ಜ್ವಾಲೆಯನ್ನಾಗಿಸುವ ಒಂದು ಎಂಟೆದೆ ಬಂದೆ ಬರುವುದೆಂದು ನಂಬಿದ್ದ ಜನತೆಗೆ,  ಆಶಾಕಿರಣವಾಗಿ ಬಂದಿದ್ದು ಈ ಫಡಕೆ. ಕೆಲಸ ಬಿಟ್ಟ ನಂತರ ಫಡಕೆ ಮಾಡಿದ ಮೊದಲ ಕೆಲಸವೆಂದರೆ ಆತ್ಮಸ್ಥೈರ್ಯ ಕಳೆದುಕೊಂಡಿದ್ದ ಭಾರತೀಯರಿಗೆ ಮನೋಬಲ ತುಂಬುವ ಕೆಲಸ.

 

     ಬೆಳಗ್ಗೆ ಎದ್ದು ದೇವಸ್ಥಾನ, ಸಂತೆ ಬೀದಿಗಳು ಎಲ್ಲೆಲ್ಲಿ ಜನ ಸೇರುತ್ತಾರೋ ಅಲ್ಲೆಲ್ಲಾ ಹೋಗಿ ” ಇಂದು ಸಂಜೆ ನಿಮ್ಮೆಲ್ಲರ ಬದುಕು ಬದಲಿಸುವ ಭಾಷಣವಿದೆ ಬನ್ನಿ” ಎಂದು ಆಹ್ವಾನಿಸುವುದು ಮತ್ತು ಸಂಜೆ ಇವರೇ ದೇಶ ಭಕ್ತಿಯ ಭಾಷಣ ಮಾಡುವುದು. ತಮಟೆ ಹೊಡೆಯುವವರು ಇವರೇ , ಜನ ಸೇರಿಸುವವರು ಇವರೇ,  ರೋಮಾಂಚನವಾಗುವಂತೆ ಭಾರತೀಯ ಪರಂಪರೆ ಬಿಂನಿಸುವವರೂ ಇವರೇ.., ಬ್ರೀಟೀಷರು ಅದೇ ಪರಂಪರೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡುತ್ತಿರುವುದನ್ನು ಎಳೆ-ಎಳೆಯಾಗಿ ಬಿಡಿಸಿಟ್ಟು ಕೇಳುಗರ ರಕ್ತ ಕುದಿಯುಂತೆ ಮಾಡುತ್ತಿದ್ದದ್ದು ಇವರೇ. ದಿನಗಳೆದಂತೆ  ಸಾಮಾನ್ಯ ಜನರಿಂದ ಉತ್ತಮ.ಬೆಂಬಲ ವ್ಯಕ್ತವಾಗುತ್ತದೆ. ಆದರೆ ಇಂದಿನಂತೆಯೇ ಅಂದು ಕೂಡ ವಿದ್ಯಾವಂತ ಬುದ್ಧಿಜೀವಿಗಳು ಫಡಕೆಯವರಿಗೆ ನೆರವು ನೀಡದೆ ಅಪಹಾಸ್ಯ ಮಾಡುತ್ತಾರೆ. ಶ್ರೀಮಂತರಂತು ಫಡಕೆಯವರ ದೇಶಪ್ರೇಮವನ್ನೇ ಅನುಮಾನಿಸುತ್ತಾರೆ.

 

        ಈ ನಾಡಜನಗಳು ತಮ್ಮ ಹೋರಾಟಕ್ಕೆ ಕೈ ಜೋಡಿಸುವುದು ಅನುಮಾನವಾದಾಗ, ಫಡ್ಕೆಯವರ ಕಣ್ಣಿಗೆ ಬಿದ್ದದ್ದು ‘ರಾಮೋಶಿ’ ಎಂಬ ಆದಿವಾಸಿ ಜನಾಂಗ. ವಿದ್ಯಾವಂತರಿಗೆ ಅರಿವಾಗದ ಸ್ವಾತಂತ್ರ್ಯದ ಮಹತ್ವ  ಅನಕ್ಷರಸ್ಥ ಆದಿವಾಸಿಗಳಿಗೆ ಬಹು ಬೇಗ ಅರಿವಾಗುತ್ತದೆ. ದೇಶಕ್ಕಾಗಿ,  ಫಡಕೆಗಾಗಿ ಜೀವ ನೀಡುವುದಕ್ಕೂ ತಯರಾಗುತ್ತದೆ ರಾಮೋಜಿ ಜನಾಂಗ. ಸ್ವಾತಂತ್ರಕ್ಕಾಗಿ, ದೇಶಕ್ಕಾಗಿ ತುದಿಯುತ್ತಿದ್ದ ಫಡಕೆಗೆ ಆದಿವಾಸಿಗಳ ಬೆಂಬಲ, ಸಾವಿರ ಆನೆಯ ಬಲ ತಂದು ಕೊಡುತ್ತದೆ. ಭಾರತೀಯ ಇತಿಹಾಸದಲ್ಲಿ ಯಾವುದೇ ರಾಜಮನೆತನದ ಹಿನ್ನಲೆ ಇಲ್ಲದೆ , ಯಾರ ಹಂಗಿಗೂ ಬೀಳದೆ ಸ್ವತಂತ್ರ ಸೇನೆ ಕಟ್ಟಿದ ಕೀರ್ತಿ ವಾಸುದೇವ ಬಲವಂತ ಫಡಕೆಯದು. ತದನಂತರದಲ್ಲಿ ಕೋಲಿ ಮತ್ತು ದಂಗ ಜನಾಂಗದವರು ಸಹ ಫಡಕೆಗೆ ಬ್ರಿಟೀಷರ ಹುಟ್ಟಡಗಿಸಲು ಹೆಗಲು ನೀಡುತ್ತಾರೆ. ಕೆಲವೇ ತಿಂಗಳುಗಳಲ್ಲಿ ಫಡಕೆ ಮುನ್ನೂರು ಜನಗಳ ಒಂದು ಉತ್ತಮ ಸೈನ್ಯವನ್ನು ಸಜ್ಜುಗೊಳಿಸುತ್ತಾರೆ. ಅಜಾನುಬಾಹುವಾಗಿದ್ದ ಫಡಕೆ, ಗರಡಿಮನೆಯಲ್ಲಿ ಪಳಗಿದ್ದರಿಂದ ಹೆಸರಿಗೆ ತಕ್ಕಂತೆ ಬಲವಂತರಾಫಿರುತ್ತಾರೆ. ಸ್ವತಃ ಫಡಕೆ ಯುದ್ಧ ಕೌಶಲ್ಯಗಳಲ್ಲಿ ಪರಿಣತಿ ಪಡೆದು ತನ್ನ ಸೈನ್ಯಕ್ಕೂ ಕಲಿಸುತ್ತಾರೆ. ನೋಡುಗರಿಗೆ ಶಿವಾಜಿ ಮತ್ತು ಶಿವಾಜಿಯ ಸೈನ್ಯವನ್ನು ನೆನಪಿಸುತ್ತದೆ ಫಡಕೆಯ ಸೈನ್ಯ.

 

       ಫಡಕೆಯವರ ಬಹಳ ದಿನಗಳ ಪರಿಶ್ರಮದ ಫಲವಾಗಿ ಕೊನೆಗೊಮ್ಮೆ 300 ಜನರ ಸಶಕ್ತ ಪಡೆಯೊಂದು ಬ್ರಿಟೀಷರ ತಲೆಗಳುದುರಿಸಲು ಸಜ್ಜಾಗುತ್ತದೆ. ಆದರೆ 300 ಜನರ ಸೈನ್ಯವನ್ನು ಸಾಕುವುದು ಅಷ್ಟು ಸುಲಭವಾಗಿರಲಿಲ್ಲ ಫಡಕೆಗೆ. ಹಣದ ಕೊರತೆ ಸೈನ್ಯವನ್ನು ಕಾಡಲಾರಂಭಿಸುತ್ತದೆ. ಸೈನ್ಯವನ್ನು ಪೋಷಿಸಲು ಮತ್ತು ಬ್ರಿಟೀಷರ ವಿರುದ್ಧದ ಮುಂದಿನ ಹೋರಾಟಗಳ ವೆಚ್ಚಕ್ಕೆ ತಗುಲುವ ಹಣಕ್ಕಾಗಿ ತಲೆಕೆಡಿಸಿಕೊಳ್ಳುತ್ತಿರುವಾಗ, ಫಡಕೆಯ ತಲೆಗೊಂದು ಮಾಸ್ಟರ್ ಪ್ಲ್ಯಾನ್ ಹೊಳೆಯುತ್ತದೆ. ಬ್ರಿಟೀಷರ ಖಜಾನೆ ದೋಚುವ ಮಹಾನ್ ಯೋಜನೆಯದು. ತಡ ಮಾಡುವುದಿಲ್ಲ ಫಡಕೆ. ಆಂಗ್ಲರು ಪುಣೆಯ ಧಮರಿಯೆಂಬ ಹಳ್ಳಿಯಲ್ಲಿ ತಾವು ಆ ಭಾಗದಲ್ಲಿ ವಸೂಲಿ ಮಾಡಿದ್ದ ಸುಂಕವನ್ನು ಸ್ಥಳಿಯ ಮುಖಂಡ ಬಾಲಚಂದ್ ಸಂಕ್ಲರ ಮನೆಯಲ್ಲಿ ಇರಿಸಿರುವುದನ್ನು ಪತ್ತೆ ಹಚ್ಚಿದ ಫಡಕೆ ಮತ್ತವನ ಸೈನ್ಯ ಮಿಂಚಿನ ವೇಗದಲ್ಲಿ ದಾಳಿ ಮಾಡಿ ಸುಂಕದ ಖಜಾನೆಯನ್ನು ಬರಿದು ಮಾಡುತ್ತಾರೆ. ಅದು ಫಡಕೆಯೆಂಬ ಗಂಡುಗಲಿ ಬ್ರಿಟೀಷ್ ರಾಜ್ಯಕ್ಕೆ ಕೊಟ್ಟ ಮೊದಲ ಮರ್ಮಾಘಾತ.

 

    ಆಂಗ್ಲರಿಗೆ ಧಮರಿಯಲ್ಲಿ ಏನಾಯಿತೆಂದು ಅರಿವಾಗುವಷ್ಟರಲ್ಲಿ ಶಿರೂರು ಮತ್ತು ಖೆಡ್ ತಾಲ್ಲೂಕುಗಳ ಸುಂಕ ಖಜಾನೆಯನ್ನು ಬರಿದುಗೊಳ್ಳಿಸುತ್ತದೆ ಫಡಕೆಯ ಸೈನ್ಯ. ಇದು ಬಾದ್’ಷಾಗಳಂತೆ ಬೀಗುತ್ತಿದ್ದ ಬ್ರಿಟೀಷರ ಅಹಂಗೆ ಪೆಟ್ಟು ಕೊಡುತ್ತದೆ. ಬ್ರಿಟೀಷ್ ಸರ್ಕಾರ ಫಡಕೆ ಮತ್ತು ಅವನ ಸೈನ್ಯವನ್ನು ಡಕಾಯಿತರೆಂದು ಘೋಷಿಸಿ ತಲೆಗೆ ಬೆಲೆ ಕಟ್ಟುತ್ತಾರೆ. ಆದರೆ ಫಡಕೆಯನ್ನು ಹಿಡಿಯುವುದು ಆಂಗ್ಲರೆಂದುಕೊಂಡಷ್ಟು  ಸುಲಭವಾಗಿರಲಿಲ್ಲ. ಖಜಾನೆಯಿಂದ ದೋಚಿದ ಹಣವನ್ನು ತನ್ನ ಸೈನ್ಯಕ್ಕೆ ಮಾತ್ರ ವ್ಯಯಿಸದೆ, ಸ್ಥಳಿಯ ರೈತರ ಕಷ್ಟಗಳಿಗೆ ಸ್ಪಂದಿಸಲು ಸಹ ಬಳಸುತ್ತಿದ್ದರಿಂದ, ಫಡಕೆ ಸ್ಥಳಿಯ ನಾಯಕನಾಗಿ ಬೆಳೆದು ಬಿಡುತ್ತಾರೆ. ಸ್ಥಳಿಯ ಜನರ ಸಹಕಾರ ಫಡಕೆಯ ಶಕ್ತಿಯನ್ನು ಇಮ್ಮಡಿಗೊಳಿಸಿ ಬ್ರಿಟೀಷರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸುತ್ತದೆ.

 

      1879 ಮೇ ಹನ್ನೊಂದರಂದು ಬ್ರಿಟೀಷ್’ರ ನಿದ್ದೆಗೆಡಿಸಿದ ಫಡಕೆ ಸೈನ್ಯಕ್ಕೆ ಬರಸಿಡಿಲೊಂದು ಬಂದೆರಗುತ್ತದೆ. ಫಡಕೆಯ ಬಲಗೈ ಬಂಟ ರಾಮೋಶಿ ನಾಯಕ ದೌಲತ್ ರಾವ್ ನಾಯಕ್, ಕೊಂಕಣ ಪ್ರಾಂತ್ಯದಿಂದ ಅಂದಿನ ಕಾಲಕ್ಕೇ  ಸುಮಾರು ಒಂದೂವರೆ ಲಕ್ಷದಷ್ಟು ಖಜಾನೆಯ ಹಣವನ್ನು ಲೂಟಿ ಮಾಡಿಕೊಂಡು ಹಿಂದಿರುಗುವಾಗ, ಮೇಜರ್ ಡೇನಿಯಲ್ ನೇತ್ರುತ್ವದ ಬ್ರಿಟೀಷ್ ಸೈನ್ಯ ನಾಯಕ್ ಮತ್ತು ಅನುಯಾಯಿಗಳ ಮೇಲೆ ಮುಗಿ ಬೀಳುತ್ತಾರೆ, ಘನ-ಘೋರ ಕದನವೇರ್ಪಟ್ಟು, ಡೇನಿಯಲ್ ಗುಂಡಿಗೆ ನಾಯಕ್ ಬಲಿಯಾಗುವುದರೊಂದಿಗೆ ಕದನ ಮುಕ್ತಾಯವಾಗುತ್ತದೆ. ನಾಯಕ್’ರ ಮರಣ,  ಬ್ರಿಟೀಷರ ವಿರುದ್ಧದ ಫಡಕೆಯ ಹೋರಾಟಕ್ಕೆ ಹಿನ್ನೆಡೆಯುನ್ನುಂಟು ಮಾಡುತ್ತದೆ. ಆದರೆ ಧೃತಿಗೆಡದ ಫಡಕೆ ಕೆಲವೇ ದಿನಗಳಲ್ಲಿ 500 ರೋಹಿಲಿಗಳನ್ನು (ಒಂದು ಜನಾಂಗ) ಸೈನ್ಯಕ್ಕೆ ಸೇರಿಸಿಕೊಂಡು ಮತ್ತೆ ಬ್ರಿಟೀಷರ ವಿರುದ್ಧ ತೊಡೆ ತಟ್ಟಿ ನಿಲ್ಲುತ್ತಾರೆ.

 

     ದಿನಗಳೆದಂತೆ ಫಡಕೆ ಮತ್ತವರ ಸೈನ್ಯ ಬ್ರಿಟೀಷರಿಗೆ ಸಿಂಹ ಸ್ವಪ್ನವಾಗುತ್ತಾರೆ. ಸರ್ಕಾರದ ಮೂಲಾಧಾಯವಾಗಿದ್ದ ಸುಂಕದ ಖಜಾನೆಗಳನ್ನೇ ದೋಚುವ ಮೂಲಕ ಬ್ರಿಟೀಷರಿಗೆ ಮರ್ಮಾಘಾತ ನೀಡುತ್ತಿರುತ್ತಾರೆ ಫಡಕೆ. ಜೊತೆಗೆ ಸ್ಥಳಿಯವಾಗಿ ದಿನೇ ದಿನೇ ಬೆಳೆಯುತ್ತಿದ್ದ ಫಡಕೆಯವರ ವರ್ಚಸ್ಸು ಮತ್ತು ಬೆಳೆಯುತ್ತಿದ್ದ ಫಡಕೆಯ ಸೈನ್ಯದ ಸಂಖ್ಯೆ ಬ್ರಿಟೀಷರ ನಿದ್ದೆಗೆಡಿಸುತ್ತದೆ. ಭಾರತವನ್ನು ಆಕ್ರಮಿಸಿಕೊಂಡ ಮೇಲೆ ಮೊದಲ ಬಾರಿಗೆ ತಮ್ಮ ಬುಡ ಅಲುಗುತ್ತಿರುವ ಅನುಭವವಾಗುತ್ತದೆ ಬ್ರಿಟೀಷರಿಗೆ. ಇನ್ನು ಫಡಕೆಯನ್ನು ಬೆಳೆಯಲು ಬಿಟ್ಟರೆ ನಮಗೆ ಉಳಿಗಾಲವಿಲ್ಲವೆಂದರಿತ  ಬ್ರಿಟೀಷ್ ಸರ್ಕಾರ ತನ್ನ ಸೈನ್ಯದೊಂದಿಗೆ  ಗನೂರೆಂಬಲ್ಲಿ  ಫಡಕೆಯ ಮೇಲೆರಗುತ್ತದೆ. ಕಾಳಗದಲ್ಲಿ ಫಡಕೆ ಬ್ರಿಟೀಷರಿಗೆ ಅಪಾರ ನಷ್ಟವನ್ನುಂಟುಮಾಡಿ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಾನೆ.  ಇದರಿಂದ ರೊಚ್ಚಿಗೆದ್ದ ಬ್ರಿಟೀಷ್ ಗವರ್ನರ್ ರಿಚೆಡ್ ಟೆಂಪಲ್,  ಫಡಕೆಯ ತಲೆ ತಂದುಕೊಟ್ಟವರಿಗೆ ಐವತ್ತು ಸಾವಿರ ನಗದು ಬಹುಮಾನ ಘೋಷಿಸುತ್ತಾನೆ. ಬ್ರಿಟೀಷರ ಈ ನರಿಬುದ್ಧಿಗೆ ಖಾರವಾಗಿ ಪ್ರತಿಕ್ರಯಿಸುವ ಗಂಡುಗಲಿ ಫಡಕೆ, ರಿಚೆಡ್ ಟೆಂಪಲ್ ತಲೆಗೆ ಒಂದು ಲಕ್ಷ ಬಹುಮಾನವೆಂದು ಕರಪತ್ರ ಹಂಚಿ ಬಿಡುತ್ತಾನೆ. ರಿಚೆಡ್ ನಡುಗಿ ಹೋಗುತ್ತಾನೆ. ಮೊದಲ ಬಾರಿಗೆ ಸೂರ್ಯ ಮುಳುಗದ ರಾಜ್ಯಕ್ಕೆ ಗ್ರಹಣದಂತೆ ಗೋಚರಿಸುತ್ತಾರೆ ಫಡಕೆ.

 

       ದೇಶಾದ್ಯಂತ ಫಡಕೆಯದ್ದೆ ಚರ್ಚೆ ಪ್ರಾರಂಭವಾಗುತ್ತದೆ. ಅದೆಷ್ಟೋ ಬಿಸಿ ನೆತ್ತರ ಯುವಕರು ಫಡಕೆಯ ದಾರಿಯನುಸರಿಸಿ ಬ್ರಿಟೀಷರಿಗೆ ತಲೆನೋವಾಗುತ್ತಾರೆ. ದಿನದಿನಕ್ಕೆ ಫಡಕೆ ಬ್ರಿಟೀಷರಿಗೆ ಕಂಟಕವಾಗುತ್ತ ಹೋಗುತ್ತಾರೆ. ಫಡಕೆಯನ್ನು ನೇರವಾಗಿ ಎದುರಿಸುವುದು ಅಸಾಧ್ಯವೆಂದರಿತ ಮೇಜರ್ ವಿಲಿಯಂ ಮತ್ತು ಅಂದಿನ  ಹೈದರಾಬಾದ್ ಕಮೀಷನರ್ ಅಬ್ದುಲ್ ಹಕ್, ಮೋಸದಿಂದ ಫಡಕೆಯನ್ನು ಹಿಡಿಯಲು ಉಪಾಯ ಒಂದನ್ನು ಹುಡುಕುತ್ತಾರೆ. ಬಹುಮಾನದ ಆಸೆಗೆ ಬಿದ್ದ ಫಡಕೆಯ ಆಪ್ತನೊಬ್ಬ ಫಡಕೆಯ ಸುಳಿವು ನೀಡುತ್ತಾನೆ. ಫಡಕೆಯ ಬಲದ ಅರಿವಿದ್ದ ರಿಚರ್ಡ್ , 1870 ಜುಲೈ 20ರಂದು ಕಲಡ್ಗಿಯ ಬಳಿಯ ದೇವಸ್ಥಾನವೊಂದರಲ್ಲಿ ಮಲಗಿದ್ದ ಫಡಕೆಯನ್ನು ನೂರಾರು ಬ್ರಿಟೀಷ್ ಸೈನಿಕರ ಜೊತೆ ಸುತ್ತುವರೆಯುತ್ತಾನೆ. ಧಿಡೀರ್ ದಾಳಿಯಿಂದ ಕ್ಷಣಕಾಲ ಕಂಗಾಲಾದರು, ಏಕಾಂಗಿಯಾಗಿ ನೂರು ಸೈನಿಕರ ಮೇಲೆರಗುತ್ತಾರೆ ಫಡಕೆ. ಆಯಾಸಗೊಂಡ ಫಡಕೆಯನ್ನು ಬಂಧಿಸುವಷ್ಟರಲ್ಲಿ ಹಲವು ಬ್ರಿಟೀಷ್ ಸೈನಿಕರಿಗೆ ಯಮಲೋಕದ ಹಾದಿ ತೋರಿಸಿರುತ್ತಾರೆ. ಫಡಕೆಯನ್ನು ಬಂಧಿಸಲು ಇಡೀ ಸೈನ್ಯ ಹರಸಾಹಸ ಪಡುತ್ತದೆ.  ಹಲವು ಗಂಟೆಗಳ ಪ್ರತಿರೋಧದ ನಂತರ ಫಡಕೆ ಬಂಧಿತರಾಗುತ್ತಾರೆ. ಪುಣೆಯ ಬೀದಿಗಳಲ್ಲಿ ಫಡಕೆಯನ್ನು ಎಳೆದು ತರುವುದು ಮದಗಜವನ್ನು ಎಳೆದು ತರುವ ನೆನಪು ತರಿಸುತ್ತದೆ.

 

       ಫಡಕೆ ಬ್ರಿಟೀಷರಿಗೆ ಯಾವ ಮಟ್ಟಿಗೆ ಭಯ ಹುಟ್ಟಿಸಿದ್ದರೆಂದರೆ, ಫಡಕೆಯವರನ್ನು  ಭಾರತೀಯ ಜೈಲುಗಳಲ್ಲಿಟ್ಟರೆ,  ಜೈಲಿನಿಂದಲೇ ಬ್ರಿಟೀಷರ ವಿರುದ್ಧ ಭಾರತೀಯರನ್ನು ಪ್ರಚೋದಿಸಬಹುದೆಂಬ ಗುಮಾನಿಯಿಂದ ದೂರದ ಅಡೆನ್ (ಯೆಮೆನ್ ನಗರ) ಜೈಲಿನಲ್ಲಿರಿಸುತ್ತಾರೆ. ಆದರೆ ಫಡಕೆಯವರನ್ನು ಬಂಧಿಸಲು ಕಾರಾಗೃಹದ ಸರಳಗಳಿಗೂ ತಾಕತ್ತಿರಲಿಲ್ಲ. ಜೈಲಿನ ಸರಳುಗಳನ್ನು ಮುರಿದು ಯೆಮೆನ್’ನಿಂದ ಕಾಲ್ಕೀಳುತ್ತಾರೆ ಫಡಕೆ. ಆದರೆ ಕಾಣದ ಯೆಮೆನ್ ಯೆಂಬ ಮರುಭೂಮಿಯಿಂದ ಬ್ರಿಟೀಷರ ಕಣ್ತಪ್ಪಿಸಿ ಬರಲು ಸಾಧ್ಯವಾಗುವುದಿಲ್ಲ. ಬ್ರಿಟೀಷರು ಮತ್ತೆ ಫಡಕೆಯವರನ್ನು ಸರಳುಗಳ ಹಿಂದೆ ತಳ್ಳುತ್ತಾರೆ. ಯಾಕೋ ಅಲ್ಲಿಂದಾಚೆಗೆ ಫಡಕೆ ಮೌನವಾಗುತ್ತಾರೆ. ಬಂಧಿಖಾನೆಯಲ್ಲಿಯೇ ಅಮರಣಾಂತ ಉಪವಾಸದ ಮೊರೆ ಹೋಗುತ್ತಾರೆ ಫಡಕೆ. 1883 ಜುಲೈ ಹದಿಮೂರರಂದು, ಭಾರತೀಯ ಸ್ವಾತಂತ್ರ ಸಂಗ್ರಾಮದ ಭಾಷ್ಯ ಬರೆದ, ಬ್ರಿಟೀಷರ ನಿದ್ದೆ ಕೆಡಿಸಿದ್ದ, ಭಾರತೀಯರ ತಾಕತ್ತನ್ನು ಏಕಾಂಗಿಯಾಗಿ ಬ್ರಿಟೀಷರಿಗೆ ತೋರಿಸಿದ ಫಡಕೆಯೆಂಬ ಮಹಾನ್ ದೇಶಪ್ರೇಮಿಯ ಉಸಿರು ಇಹಲೋಕವನ್ನು ತೊರೆಯುತ್ತದೆ. ಅದರೊಂದಿಗೆ ಆದ್ಯ ಕ್ರಾಂತಿಕಾರಿಯೊಬ್ಬನನ್ನು ಭಾರತಾಂಭೆ ಕಳೆದುಕೊಳ್ಳುತ್ತಾಳೆ. ಆದರೆ ಮುಂದೆ ಬಂದ ಅದೆಷ್ಟೋ ಕ್ರಾಂತಿಕಾರಿಗಳಿಗೆ ಪ್ರೇರಣೆಯಾಗಿದ್ದು,  ಸ್ಪೂರ್ತಿಯಾಗಿದ್ದು ಮಾತ್ರ ಈ ಫಡಕೆಯೇ.

 

      ಅಂತಹ ಫಡಕೆಯೆಂಬ ಮಹಾನ್ ಚೇತನ ಭರತ ಭೂಮಿಯನ್ನು ಮೆಟ್ಟಿ. ನವಂಬರ್ ನಾಲ್ಕಕ್ಕೆ ನೂರ ಎಪ್ಪತ್ತು ವರ್ಷವಾಗಿದೆ. ಆದರೆ ವಿಪರ್ಯಾಸವೇನೆಂದರೆ ದೇಶಕ್ಕಾಗಿಯೇ ಬದುಕಿ, ದೇಶಕ್ಕಾಗಿಯೇ ಮಡಿದು, ಸ್ವತಂತ್ರ ಭಾರತದ ಹೋರಾಟಕ್ಕೆ ಭಾಷ್ಯ ಬರೆದ ಧೀಮಂತ ಚೇತನದ ಬಗ್ಗೆ ಅದೆಷ್ಟೋ ಭಾರತೀಯರಿಗೆ ಇಂದಿಗೂ ತಿಳಿದಿಲ್ಲ. ತಿರುಚಿರುವ ಇತಿಹಾಸಗಳಾವುವು ಇವರ ಬಗ್ಗೆ ತಿಳಿಸುವುದು ಇಲ್ಲ. ಇನ್ನು ನಮ್ಮ ಸರ್ಕಾರಗಳಂತು ದೇಶಕ್ಕಾಗಿ ಕಿಂಚಿತ್ತು ದುಡಿಯದ, ಸ್ವಾರ್ಥ ಸಾಧನೆಗಾಗಿ ಬಡಿದಾಡಿದವರ ಜಯಂತಿಗಳನ್ನು ಆಚರಿಸಿ,  ಹಿಡಿತದಲ್ಲಿರುವ ಕಾನೂನು-ಸುವ್ಯಸ್ಥೆಯನ್ನು ಹಾಳುಗೆಡುವುದರಲ್ಲಿ ತಲ್ಲೀನವಾಗಿವೆ. ಅವರಿಂದ ಇಂತಹ ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆಯನ್ನು ನಿರೀಕ್ಷಿಸುವುದು ಮೂರ್ಖತನವಷ್ಟೆ. ಫಡಕೆ ಸಾಯುವಾಗ ಅವರಿಗೆ ಮೂವತ್ತೆಂಟು ವರ್ಷ ವಯಸ್ಸು. ಅದೊಂದು ಸಾಯುವ ವಯಸ್ಸೆ ಅಲ್ಲ ಬಿಡಿ. ತನ್ನ ಜೀವನವನ್ನೇ ಭಾರತೀಯರಿಗಾಗಿ ಮುಡಿಪಾಗಿಟ್ಟ ಆ ಮಹಾನುಬಾವನನ್ನು ವರುಷಕ್ಕೊಂದು ಬಾರಿಯಾದರು ನೆನೆಯದಿದ್ದರೆ ಕೃತಘ್ನರಾಗಿಬಿಡುತ್ತೇವೆ ನಾವು. ಮತ್ತೊಮ್ಮೆ ಹುಟ್ಟಿ ಬಾ ಫಡಕೆ.

 

ಮುಂದಿನ ಸಂಚಿಕೆಯಲ್ಲಿ ಭಾರತದ ಇನ್ನೊಬ್ಬ ಬಾಜಿಗರ್ ನನ್ನು ಪರಿಚಯಿಸುತ್ತೇನೆ ಕಾಯುತ್ತಿರಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Arjun Devaladakere

ಹೆಸರು ಅರ್ಜುನ್ ದೇವಾಲದಕೆರೆ , ಸ್ವಂತ ಊರು ಸಕಲೇಶಪುರ ತಾಲ್ಲೂಕಿನ ದೇವಾಲದಕೆರೆ ಎಂಬ ಮಲೆನಾಡ ಸ್ವರ್ಗ. ವಾಣಿಜ್ಯ ಮತ್ತು ವ್ಯವಹಾರ ವಿಷಯದಲ್ಲಿ ಉನ್ನತ ಪದವೀಧರ. ಸಧ್ಯಕ್ಕೆ ಬೆಂಗಳೂರಿನ ಒಂದು ಬಹುರಾಷ್ಟ್ರೀಯ ಸಾಫ್ಟ್ ವೇರ್ ಕಂಪೆನಿಯ ಉದ್ಯೋಗಿ. ಸಮಾಜಮುಖಿ ಬರಹ ಹವ್ಯಾಸ. ಸಧ್ಯ ಚಿಕ್ಕಮಗಳೂರು ಜಿಲ್ಲಾಪತ್ರಿಕೆ ದರ್ಪಣದ ಕಾಯಂ ಅಂಕಣಕಾರ. ಸತ್ಯ ಘಟನೆ ಆಧಾರಿತ "ಅವಳು" ಕಾದಂಬರಿ ಬಿಡುಗಡೆಗೆ ಸಿದ್ದವಾಗಿದೆ. ಕ್ರಿಕೆಟ್, ಫುಟ್ ಬಾಲ್ ,ಫೋಟೋಗ್ರಫಿ ಮತ್ತು ನಾಟಕಗಳಲ್ಲಿ ಅಭಿನಯ ಇತರೆ ಹವ್ಯಾಸಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!