ಅಂಕಣ

ಹೊಸ ವರ್ಷವ ಸ್ವಾಗತಿಸುವ ಕ್ಯಾಲೆಂಡರ್’ನ ಸ್ವಗತ

ಶತಮಾನವೆಂಬ ಸಂತತಿಯ ಕುಡಿಯೊಂದರ ಹದಿಹರೆಯವಿದು. ಸೂರ್ಯ ಎಂದಿನಂತೆಯೇ ಮುಳುಗೆದ್ದರೂ ನಿನ್ನೆಯದ್ದು ಹುಚ್ಚುಕೋಡಿ ಹದಿನಾರು ಕಳೆದು ಹದಿನೇಳರ ಹಾದಿ ತೆರೆದಿಟ್ಟ ತುಸು ವಿಶೇಷ ಬೆಳಗು. ಸಂಸ್ಕೃತಿ, ಸಂಪ್ರದಾಯಗಳ ವ್ಯಾಖ್ಯಾನದ ಹೊಸ ವರ್ಷದ ಭಿನ್ನ ನಂಬಿಕೆ ಒಂದೆಡೆಯಾದರೆ, ಇದೇ ಹೊಸವರ್ಷವೆಂಬ ಮೋಜು, ಮಸ್ತಿಯಲ್ಲಿ ಕುಡಿದು ಕುಪ್ಪಳಿಸಿ ಕೊನೆಗೆ ಗಸ್ತಿನಲ್ಲಿ ತಿರುಗಾಡುವ ಪೋಲಿಸರ ಕಣ್ಣಿಗೆ ಬೀಳದಂತೆ ತೂರಿಕೊಂಡು ಮನೆ ಸೇರುವ ಅಮಲಾವ್ರತ ಆಚರಣೆ ಇನ್ನೊಂದೆಡೆ. ಏನೇ ಆದರೂ ಕಾಲಗಣನೆಯ ಒಂದು ಲೆಕ್ಕಾಚಾರದ ಪ್ರಕಾರ 2017ರ ಸರದಿ ಆರಂಭವಾಗಿದೆಯೆನ್ನುವ ಗೋಡೆಯ ಮೇಲಿನ ಗರಿಗರಿ ಕ್ಯಾಲೆಂಡರ್ ಏನನ್ನೋ ಗೊಣಗುತ್ತಿದೆ. ಹೊಸ ವರ್ಷವನ್ನು ಸ್ವಾಗತಿಸುವುದು ಹಾಗಿರಲಿ ಸದ್ಯ ಕ್ಯಾಲೆಂಡರ್’ನ ಸ್ವಗತಕ್ಕೆ ನೀವೂ ತುಸು ಕಿವಿಗೊಡಿ.

“ಒಂದರ್ಥದಲ್ಲಿ ನಾನು ವರ್ಷಗಳ ಸಾಕು ತಾಯಿಯೇ ಸರಿ. ವರ್ಷಗಳನ್ನು ಖುದ್ದು ಹೆರದಿದ್ದರೂ ನಮ್ಮ ವಂಶದವರು ಅದೆಷ್ಟೋ ವರ್ಷಗಳನ್ನು ಜತನದಿಂದ ಪೋಷಿಸುತ್ತಾ ಬಂದಿದ್ದಾರೆ. ನೀವೇನಾದರೂ ನಮ್ಮ ವಂಶದ ಮೂಲ ಕೆದಕಿದರೆ ಅದು ಹೋಗಿ ನಿಲ್ಲುವುದು ಪಂಚಾಂಗಗಳಲ್ಲಿ. ವರ್ಷವನ್ನು ವ್ಯಾಖ್ಯಾನಿಸಲು ಬಗೆ ಬಗೆಯ ಹೇಳಿಕೆ, ಸಿದ್ಧಾಂತ ಹಾಗೂ ವಿವರಣೆಗಳನ್ನು ನೀಡುತ್ತಾರೆ. ಖಗೋಳ ಶಾಸ್ತ್ರದ ಹಿನ್ನೆಲೆಯಲ್ಲಿಯೂ ವಿವರಿಸುತ್ತಾರೆ. ಆದರೆ ಅವುಗಳ ಜೊತೆಗೆ, ನನ್ನ ಅಂದರೆ ಕ್ಯಾಲೆಂಡರ್’ನ ಪುಟಗಳು ಸರದಿಯಂತೆ ಮುಖಪುಟವಾಗಿ ಕಂಗೊಳಿಸುತ್ತಾ ಅಷ್ಟೂ ಪುಟಗಳು ತಮ್ಮ ಯಾದಿಯನ್ನು ಮುಕ್ತಾಯಗೊಳಿಸಿದರೆ ಅದು ಒಂದು ಸಂಪೂರ್ಣ ವರ್ಷ ಎಂಬ ವ್ಯಾಖ್ಯಾನವನ್ನೂ ಏಕೆ ಹೇಳಬಾರದು? ನೀವೆ ನೋಡಿ, ಜನರು ಹೊಸವರ್ಷಕ್ಕೆಂದು ಹೊಸ ಹೊಸ ಸಂಕಲ್ಪಗಳ ದೊಡ್ಡ ಪಟ್ಟಿಯನ್ನೇ ಮಾಡುತ್ತಾರೆ. ಆದರೆ ಪಟ್ಟಿಯಲ್ಲಿ ಸ್ಥಾನ ಪಡೆಯದ ಹೊರತಾಗಿಯೂ ಅವರು ತಪ್ಪದೇ ನೆರವೇರಿಸುವ ಸಂಕಲ್ಪವೆಂದರೆ ಅದು ನನ್ನನ್ನು ತಂದು ಗೋಡೆಗೆ ಜೋತುಹಾಕುವುದು. ಎಷ್ಟೋ ಜನರಿಗೆ ಅದಷ್ಟೇ ಆ ವರ್ಷದ ರೆಸೊಲ್ಯೂಷನ್! ಅಂದಮೇಲೆ ಪ್ರತೀ ವರ್ಷದ ಜೊತೆಗೂ ಅವಿನಾಭಾವ ಸಂಬಂಧವುಳ್ಳ ನಮ್ಮನ್ನು ಈ ವಿಷಯದಲ್ಲಿ ನಿರ್ಲಕ್ಷಿಸುವುದು ಎಷ್ಟು ಸರಿ?

ಹಿಂದೆಲ್ಲಾ ನಮಗೆ ಎಲ್ಲಿಲ್ಲದ ಗೌರವ, ಸ್ಥಾನಮಾನ. ಮನೆಗೆ ಬರುತ್ತಿದ್ದಂತೆ ರಜೆಯ ಹೆಗ್ಗುರುತುಗಳಾದ ನಮ್ಮ ಮೈಮೇಲಿನ ಕೆಂಪು ಗುರುತಿಗಾಗಿ ಹುಡುಕುವವರೇ ಹೆಚ್ಚಿದ್ದರು. ಮನೆಯ ಗೋಡೆಯನ್ನೇರುತ್ತಿದ್ದ ನಮ್ಮ ಪೂರ್ವಜರ ಠೀವಿಯೇ ಬೇರೆ. ಅವರ ಮೈಯ್ಯ ಪುಟಪುಟಗಳಲ್ಲೂ ಮನೆಯ ಹೆಚ್ಚಿನ ಆಗುಹೋಗುಗಳು ದಾಖಲಾಗಿರುತ್ತಿದ್ದವು. ತಲೆ ನೆರೆದು ಮುಪ್ಪಡರಿ ಜೀವಿತಾವಧಿ ಮುಗಿದ ಮೇಲೆಯೂ ಒಬ್ಬರ ಹಿಂದೆ ಒಬ್ಬರನ್ನಂತೆ ನಮ್ಮ ಹಿಂದಿನವರ ನಾಲ್ಕೈದು ತಲೆಮಾರುಗಳನ್ನು ಜೋಡಿಸಿ ಒಟ್ಟಿಗೆ ನೇತುಹಾಕಿಟ್ಟುಕೊಳ್ಳುತ್ತಿದ್ದರು. ಆ ನಾಲ್ಕೈದು ವರ್ಷಗಳಲ್ಲಿನ ಆ ಕುಟುಂಬದ ಪ್ರಮುಖ ದಾಖಲಿತ ವಿವರಗಳು ನಮ್ಮವರಲ್ಲಿ ಸುಭದ್ರ. ಹೆಂಗಸರ ದಿನದ ಲೆಕ್ಕವೂ ಗುಪ್ತ ಸಂಕೇತಗಳಲ್ಲಿ ಅಲ್ಲೇ ದಾಖಲಾಗಿರುತ್ತಿತ್ತು. ಯಾವುದೇ ವಿವರ ಬೇಕಿದ್ದರೂ ಮನೆಯ ಹಿರಿಯರು ನಮ್ಮನ್ನು ಗೋಡೆಯಿಂದ ಜತನವಾಗಿ ಕೆಳಗಿಳಿಸಿ ಪುಟಗಳನ್ನು ಹಿಂದಕ್ಕೆ ತಿರುವಿ ಹಾಕಿ ಪಡೆದುಕೊಳ್ಳುತ್ತಿದ್ದರು.

ಆದರೆ ಈಗ ಎಲ್ಲವೂ ಬದಲಾಗಿ ಹೋಯಿತು. ಮೊಬೈಲ್ ಎಂಬ ಮಾಯಾಂಗನೆ ಜನರ ಅಂಗೈಯಲ್ಲಿ ನುಲಿಯಲಾರಂಭಿಸಿದ ಮೇಲೆ ನಾವೂ ಒಂಥರಾ ಮೂಲೆಗುಂಪು! ಸುಮ್ಮನೆ ಗೋಡೆಯ ಮೇಲೆ ಕುಳಿತು ಧೇನಿಸುತ್ತಾ ಅಪರೂಪಕ್ಕೆ ಜನರ ಕೈ ಸೋಕಿಸಿಕೊಳ್ಳುವಂತಾಯಿತು. ಹೊಸ ತಲೆಮಾರಿನವರೊಂದಿಗೆ ಬಂಧದ ಬಳ್ಳಿ ಕಡಿದುಕೊಂಡು ಎಲ್ಲೋ ಹಳ್ಳಿಯಲ್ಲಿ ಉಳಿದು ಹೋದ ಹಳೆ ತಲೆಮಾರಿನ ಜನರಿಗೂ ನಮಗೂ ಅಷ್ಟೇನೂ ವ್ಯತ್ಯಾಸ ಕಾಣಿಸುತ್ತಿಲ್ಲ”

ಓವರ್ ಡೋಸ್: ಹೊಸ ವರ್ಷದ ಆರಂಭವೆಂದರೆ ಕೆಲವರಿಗಷ್ಟೇ ಡಿಸೆಂಬರ್ 31ರ ಮಧ್ಯರಾತ್ರಿ. ಇನ್ನುಳಿದವರಿಗೆ ಅದು ಬರೀ ‘ಮದ್ಯ’ರಾತ್ರಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Sandesh H Naik

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!