Featured ಅಂಕಣ

ಹೊಸ ವರ್ಷದಲ್ಲಾದರೂ ಈ ಕುರಿತು ಗಂಭೀರ ಚರ್ಚೆ ನಡೆಯಲಿ

‘ಮೇರೆ ಪ್ಯಾರೆ ದೇಶ್ವಾಸ್ಯೋನ್…’ ಎನ್ನುತ್ತಲೇ ‘ಇನ್ನಾರಿಗೆ ಗುನ್ನ ಇಡುತ್ತಾರೊ’ ಎಂಬ ಅಚ್ಚರಿ ಹಾಗು ನೋಟು ಅಮಾನ್ಯೀಕರಣದಿಂದುಟಾದ ಪರಿಣಾಮಗಳ ಕುರಿತು ಮಾತನಾಡುತ್ತಾರೆಂಬ ಕುತೂಹಲದಿಂದಲೆ ಪ್ರಧಾನ ಮಂತ್ರಿಯವರ ಹೊಸ ವರ್ಷದ ಮುನ್ನಾದಿನದ ಭಾಷಣಕ್ಕೆ ಜನರು ಕಿವಿಯಾಗಿದ್ದುದು ಸುಳ್ಳಲ್ಲ. ಪ್ರಧಾನ ಮಂತ್ರಿಗಳು ಪ್ರಸ್ತಾಪಿಸಿದ ವಿಷಯಗಳ ಪೈಕಿ, ನೋಟು ಅಮಾನ್ಯೀಕರಣಕ್ಕೆ ಜನರು ಸ್ಪಂದಿಸಿದ ರೀತಿ ಹಾಗು ಹೊಸ ವರ್ಷಕ್ಕೆ ಉಡುಗೊರೆ ಎಂಬಂತೆ ಘೋಷಿಸಿದ ಹೊಸ ಯೋಜನೆಗಳ ಕುರಿತಾಗಿಯೆ ಜನರ ಹಾಗು ಮಾಧ್ಯಮಗಳ ಗಮನ ಕೇಂದ್ರಿಕೃತವಾದುದರಿಂದಾಗಿ ಅಷ್ಟೆ ಮಹತ್ವವಿರುವ,ಜನರ ತೆರಿಗೆ ಹಣದ ಉಳಿತಾಯದ ಮೂಲಕ ಆರ್ಥಿಕತೆಗೆ ಉತ್ತೇಜನ ನೀಡಲಿರುವ ಇನ್ನೊಂದು ಅಂಶ ಹಿನ್ನಲೆಗೆ ಸರಿಯಲ್ಪಟ್ಟಿತು. ಅದೆ ‘ಏಕಕಾಲದಲ್ಲಿ ವಿವಿಧ ಸ್ತರದ ಚುನಾವಣೆ’ಗಳನ್ನು ನಡೆಸುವುದರ ಕುರಿತಾದುದು. ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದು ಈಗ ನೆನಪಾಗಿರಬೇಕಲ್ಲ?.

ಈ ವಿಷಯದ ಕುರಿತು ಮಾತನಾಡುವ ಮುನ್ನ ಕೆಲವೊಂದು ಅಂಕಿ ಅಂಶಗಳನ್ನು ಗಮನಿಸೋಣ. 2013ರಲ್ಲಿ ಭಾರತವು ತ್ರಿಪುರ, ನಾಗಲ್ಯಾಂಡ್, ಮಿಜೊರಾಂ, ಚತ್ತೀಸಗಢ,ಮೇಘಾಲಯ, ದೆಹಲಿ, ಮಧ್ಯಪ್ರದೇಶ, ರಾಜಸ್ತಾನ,ಕರ್ನಾಟಕ ಹೀಗೆ ಒಟ್ಟು ಒಂಭತ್ತು ವಿಧಾನಸಭಾ ಚುನಾವಣೆಯನ್ನು ಕಂಡಿತು. ವರದಿಯ ಪ್ರಕಾರ ಆ ವರ್ಷ ನಡೆದ 224 ಕ್ಷೇತ್ರಗಳನ್ನೊಳಗೊಂಡಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ, ಚುನಾವಣಾ ಪ್ರಾಧಿಕಾರ ಖರ್ಚು ಮಾಡಿದ್ದು ಸುಮಾರು 180 ರಿಂದ 200 ಕೋಟಿ (ಇದು ಕಳೆದ ವಿಧಾನಸಭಾ ಚುನಾವಣೆಗಿಂತ ಮೂರು ಪಟ್ಟು ಹೆಚ್ಚು). ಇನ್ನು ಮಧ್ಯಪ್ರದೇಶ ಹಾಗು ರಾಜಸ್ಥಾನದಲ್ಲಿ ಕ್ರಮವಾಗಿ 200 ಹಾಗು 230 ವಿಧಾನಸಭಾ ಕ್ಷೇತ್ರಗಳಿರುವುದರಿಂದ ಅವುಗಳ ಚುನಾವಣಾ ಖರ್ಚು ಕೂಡ 200 ಕೋಟಿ ಎಂದು ಅಂದಾಜಿಸಿದರೆ ಒಟ್ಟು ಮೂರು ರಾಜ್ಯಗಳಿಂದ 600 ಕೋಟಿ ಆಯಿತು. ಇನ್ನುಳಿದ ಆರು ಸಣ್ಣ ರಾಜ್ಯಗಳಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಈ ಮೂರು ರಾಜ್ಯಗಳ ಅರ್ಧಕ್ಕಿಂತ ಕಡಿಮೆ ಹೌದಾದರು, ಈ ರಾಜ್ಯಗಳಲ್ಲಿ ನಕ್ಸಲೀಯರ ಹಾಗು ಬಂಡುಕೋರರ ದಾಳಿ ಹೆಚ್ಚಿರಿವುದರಿಂದ ಚುನಾವಣೆಯನ್ನು ಸರಕ್ಷಿತವಾಗಿ ನಡೆಸಲು ಕೈಗೊಳ್ಳಬೇಕಾದ ಭದ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಒಂದು ರಾಜ್ಯಕ್ಕೆ ಕನಿಷ್ಠ 80 ಕೋಟಿ ಎಂದು ಅಂದಾಜಿಸಿದರೆ ಆರು ರಾಜ್ಯಕ್ಕೆ 480 ಕೋಟಿ ಖರ್ಚಾಯಿತು. ಒಟ್ಟಿನಲ್ಲಿ 2013ರ ವಿಧಾನಸಭಾ ಚುನಾವಣೆಯ ಅಂದಾಜು ವೆಚ್ಚ ಸರಿ ಸುಮಾರು1100 ಕೋಟಿ.

ಈ ಚುನಾವಣಾ ಸರಣಿ ಮುಗಿಯುತ್ತಿದ್ದಂತೆ 2014ರ ಐತಿಹಾಸಿಕ ಲೋಕಸಭಾ ಚುನಾವಣೆಗೆ ಈ ದೇಶ ಸಾಕ್ಷಿಯಾಯಿತು. ಕೇವಲ ಫಲಿತಾಂಶದ ವಿಷಯದಲ್ಲಿ ಮಾತ್ರವಲ್ಲ, ಚುನಾವಣಾ ವೆಚ್ಚದಲ್ಲೂ ಇದೊಂದು ಐತಿಹಾಸಿಕ ಚುನಾವಣೆಯೆ. ಏಕೆಂದರೆ ಖರ್ಚಾದದ್ದು ಬರೊಬ್ಬರಿ 3,870 ಕೋಟಿ!. ಇನ್ನು 2015ಕ್ಕೆ ಹೋಗೋಣ. ಈ ವರ್ಷದಲ್ಲಿ ಎರಡು ಪ್ರಮುಖ ವಿಧಾನಸಭಾ ಚುನಾವಣೆಗಳು ನಡೆದವು. ಒಂದು ದೆಹಲಿ. ಅರೆ! 2013ರ ವಿಧಾನಸಭಾ ಚುನಾವಣೆಯ ಲೆಕ್ಕದಲ್ಲಿ ದೆಹಲಿ ವಿಧಾನಸಭಾ ಚುನಾವಣೆಯ ಲೆಕ್ಕವನ್ನು ಸೇರಿಸಿಯಾಗಿದೆ. ಮತ್ತೇಕೆ ಪುನರಾವರ್ತನೆಯಾಯಿತೆಂದು ಯೋಚಿಸಬೇಡಿ. ನಮ್ಮ ಅರವಿಂದ ಕೇಜ್ರಿವಾಲರ ಕೃಪಾಕಟಾಕ್ಷದಿಂದಾಗಿ2013ರಲ್ಲಿ ಚುನಾವಣೆಯನ್ನು ನೋಡಿದ ರಾಜಧಾನಿಯ ಜನತೆ 2015ರಲ್ಲೂ ಚುನಾವಣೆಗೆ ಗುಂಡಿ ಒತ್ತುವ ಮೂಲಕ2014ರ ಲೋಕಸಭಾ ಚುನಾವಣೆ ಸೇರಿದಂತೆ ಮೂರು ವರ್ಷದಲ್ಲಿ(2013,2014,2015) ಹ್ಯಾಟ್ರಿಕ್ ಸಾಧನೆ ಮಾಡಿದರು. ಇರಲಿ. ಇನ್ನು ಎರಡನೆಯದು ಬಿಹಾರ ವಿಧಾನಸಭಾ ಚುನಾವಣೆ. ಚುನಾವಣೆಯ ಸಮಯದಲ್ಲಿ ಅಲ್ಲಿನ ಚುನಾವಣಾಧಿಕಾರಿ ಮಾಧ್ಯಮಕ್ಕೆ ನೀಡಿದ ಹೇಳಿಕೆ ಪ್ರಕಾರ ವಿಧಾನಸಭಾ ಚುನಾವಣೆಯ ಖರ್ಚು ಬರೊಬ್ಬರಿ300 ಕೋಟಿ. ಈ 300 ಕೋಟಿಯಲ್ಲಿ 157 ಕೋಟಿ ವಾಹನಗಳಿಗೆ, ಇಂಧನಕ್ಕೆ, ಬೂತ್‍ನ ನಿರ್ಮಾಣಕ್ಕೆ,ಬ್ಯಾರಿಕೇಡ್ ಹಾಗು ದಾಖಲೆಗಳ ಮುದ್ರಣಕ್ಕಾದರೆ,ಸುಮಾರು 78 ಕೋಟಿ ಚುನಾವಣೆಯ ಭದ್ರತೆಗಂತೆ.

ಈ ಅಂಕಿ ಅಂಶಗಳೊಂದಿಗೆ ನಿಮಗೆ ಈಗಾಗಲೆ ತಿಳಿದಿರುವ ಮಾಹಿತಿಯನ್ನೊಮ್ಮೆ ಜ್ಞಾನಿಪಿಸುತ್ತೇನೆ ಕೇಳಿ. ಈ ಎಲ್ಲ ಚುನಾವಣೆಗಳನ್ನು ನಡೆಸುವುದು ಚುನಾವಣಾ ಪ್ರಾಧಿಕಾರವಾದರೂ, ಹಣ ಒದಗಿಸುವುದು ವಿಧಾನಸಭಾ ಚುನಾವಣೆಗಳಿಗೆ ಆಯಾ ರಾಜ್ಯಗಳು ಹಾಗು ಲೋಕಸಭಾ ಚುನಾವಣೆಗೆ ಕೇಂದ್ರ ಸರ್ಕಾರವಾಗಿರುತ್ತದೆ. ಅಂದರೆ ಎಲ್ಲ ಚುನಾವಣೆಗಳು ನಡೆಯುವುದು ತೆರಿಗೆಯ ರೂಪದಲ್ಲಿ ಸರ್ಕಾರದ ಖಜಾನೆಯಲ್ಲಿ ಸಂಗ್ರಹವಾದ ನಮ್ಮ ಹಣದಿಂದಲೆ!. ಈಗ ಆಲೋಚಿಸಿ ನೋಡಿ, ಈ ರೀತಿ ಪ್ರತಿವರ್ಷ ಚುನಾವಣೆಗೆ ಕೋಟಿ ಕೋಟಿ ಖರ್ಚು ಮಾಡುವ ಬದಲು ಏಕಕಾಲದಲ್ಲಿ ಲೋಕಸಭೆ ಹಾಗು ವಿಧಾನಸಭಾ ಚುನಾವಣೆಗಳನ್ನು ನಡೆಸುವಂತಹ ವ್ಯವಸ್ಥೆಯನ್ನು ಜಾರಿಗೆ ತಂದರೆ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ಉಳಿತಾಯ ಮಾಡಿದ್ದಂತಾಗುವುದಿಲ್ಲವೆ?.

ಇವಿಷ್ಟು ‘ಚುನಾವಣಾ’ ಪ್ರಸಂಗದ ಮುಖ್ಯಪಾತ್ರಧಾರಿಗಳ ಕಥೆಯಾದರೆ, ಇನ್ನು ವರ್ಷಪೂರ್ತಿ ನಡೆಯುವ ‘ಉಪ ಚುನಾವಣೆ’ಗಳದ್ದೆ ಇನ್ನೊಂದು ಕಥೆ. ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನೆ ಗಮನಿಸಿ. ಸಿದ್ಧರಾಮಯ್ಯನವರು ತಮ್ಮ ಸಂಪುಟಕ್ಕೆ ಸರ್ಜರಿ ಮಾಡಿದ ನಂತರ, “ನನ್ನನ್ನು ಒಂದು ಮಾತು ಕೇಳದೆ, ಸಂಪುಟದಿಂದ ಕೈಬಿಟ್ಟು ಮುಖ್ಯಮಂತ್ರಿಗಳು ಉದ್ಧಟತನ ತೋರಿದ್ದಾರೆಂದು” ಕಾರಣ ನೀಡಿ ಶ್ರೀನಿವಾಸ ಪ್ರಸಾದ್ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಇದನ್ನೆ ಬಕಪಕ್ಷಿಯಂತೆ ಕಾಯುತ್ತಿದ್ದ ಲಜ್ಜೆಗೆಟ್ಟ ರಾಜ್ಯ ಬಿಜೆಪಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡದ್ದು ಆಗಿದೆ. ಶ್ರೀನಿವಾಸ ಪ್ರಸಾದ್ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ಪರಿಣಾಮ ಈಗ ಮತ್ತೆ ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕು. ಸರ್ಕಾರದ ಅವಧಿ ಕೊನೆಗೊಳ್ಳುವುದು ‘ಒಂದು ವರ್ಷಕ್ಕಿಂತ’ ಕಡಿಮೆಯಿದ್ದರೆ ಉಪಚುನಾವಣೆಯನ್ನು ನಡೆಸದೆ ಇರುವ ಅಧಿಕಾರ ಚುನಾವಣಾ ಪ್ರಾಧಿಕಾರಕ್ಕಿದೆ. ಆದರೆ 2018ರ ವಿಧಾನಸಭಾ ಚುನಾವಣೆಗೆ ಇನ್ನು ಒಂದುವರೆ ವರುಷ ಇರುವುದರಿಂದ,ಆರು ತಿಂಗಳೊಳಗೆ ಅಲ್ಲಿ ಉಪಚುನಾವಣೆ ನಡೆಯಲೆಬೇಕು. ಹಾಗಾಗಿ ಒಂದುವರೆ ವರ್ಷದ ಒಳಗೆ ಎರಡೆರಡು ಚುನಾವಣೆ!. ಶ್ರೀನಿವಾಸ ಪ್ರಸಾದರೇನೊ‘ಕ್ಷೇತ್ರದ ಜನರನ್ನು ಮತ್ತೆ ಉಪಚುನಾವಣೆಗೆ ತಳ್ಳುವಂತೆ ಮಾಡಿದ್ದಕ್ಕೆ ಕ್ಷಮೆ ಕೋರುತ್ತೇನೆ’ಎಂದು ಸಲೀಸಾಗಿ ಹೇಳಿಬಿಟ್ಟರು. ಆದರೆ ಚುನಾವಣೆಯ ಹೊಡೆತ ಬೀಳುವುದು ನಮ್ಮ ಮೇಲೆ ತಾನೆ?. ಇವರಿಬ್ಬರ ‘ಅಹಂ’ನಿಂದಾಗಿ ಚುನಾವಣೆಯ ನೆಪದಲ್ಲಿ ಜನರ ದುಡ್ಡನ್ನು ಪೋಲು ಮಾಡುತ್ತಿರುವುದಕ್ಕೆ ಇವರಿಗೆ ಯಾವುದೆ ದಂಡವೂ ಇಲ್ಲ,ಶಿಕ್ಷೆಯು ಇಲ್ಲ. ಹೋಗಲಿ ಕನಿಷ್ಠ ಪ್ರಶ್ನಿಸುವವರು ಇಲ್ಲ.

2013ರ ಚುನಾವಣೆಯ ನಂತರ ರಾಜ್ಯದಲ್ಲಿ ಒಟ್ಟು ಆರು ಉಪ ಚುನಾವಣೆಗಳು ನಡೆದಿದ್ದು ಎರಡನ್ನು ಹೊರತುಪಡಿಸಿ ಉಳಿದ ಉಪ ಚುನಾವಣೆಗಳು ನಡೆದದ್ದು ರಾಜಕೀಯ ಮೇಲಾಟಗಳಿಂದಾಗಿಯೆ. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದೆ ಬಿಂಬಿತವಾಗಿರುವ ಇದೆ ಯಡಿಯೂರಪ್ಪ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಯನ್ನು ನಾಶಮಾಡುವ ಪಣತೊಟ್ಟು ಕೆಜೆಪಿ ಕಟ್ಟಿ, ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದರು. ನಂತರ ಅದೆ ಯಡಿಯೂರಪ್ಪ ಮೋದಿ ಅಲೆಯಿಂದಾಗಿ ಮತ್ತೆ ಬಿಜೆಪಿಯತ್ತ ವಾಲಿ, ಲೋಕಸಭೆ ಚುನಾವಣೆಗೆ ನಿಂತು, ಗೆದ್ದು ಬಂದರು. ಯಥಾ ರೀತಿ ಖಾಲಿಯಾದ ಶಾಸಕ ಸ್ಥಾನಕ್ಕೆ ನಿಯಮದಂತೆ ಉಪ ಚುನಾವಣೆ ನಡೆಯಿತು, ಆ ಜಾಗಕ್ಕೆ ತಮ್ಮ ಮಗನ್ನು ನಿಲ್ಲಿಸಿ ಗೆಲ್ಲಿಸಿದರು. ಇನ್ನು ಈ ಸಲ ಮುಖ್ಯಮಂತ್ರಿಪಟ್ಟದ ಮೇಲೆ ಕಣ್ಣಿಟ್ಟಿರುವ ಇವರು,ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಾರೆ, ಪರಿಣಾಮ ಮತ್ತೆ ಲೋಕಸಭಾ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತದೆ ಹಾಗು ತಮ್ಮ ಮಗನನ್ನು ಆ ಪಟ್ಟಕ್ಕೆ ವರ್ಗಾಯಿಸುತ್ತಾರೆ. ಇದಕ್ಕೆ ಸಂಬಂಧಪಟ್ಟಂತೆ ಕನ್ನಡದ ದೈನಿಕವೊಂದು ನೀಡಿದ ಆಘಾತಕಾರಿ(ಅರ್ಥಾತ್ ಜನಸಾಮಾನ್ಯರಿಗೆ ಮಾತ್ರ!) ವರದಿಯೊಂದನ್ನು ನಿಮ್ಮ ಜತೆ ಹಂಚಿಕೊಳ್ಳೂತ್ತೇನೆ. ಮಂತ್ರಿಗಿರಿಯ ಆಸೆಗಾಗಿ ಈಗಾಗಲೆ ಕರ್ನಾಟಕದ ಎಂಟು ಲೋಕಸಭಾ ಸದಸ್ಯರು ಶಾಸಕ ಸ್ಥಾನದ ಮೇಲೆ ಕಣ್ಣಿದ್ದು, ವರಿಷ್ಠರ ಸಮ್ಮತಿಗಾಗಿ ಕಾಯುತ್ತಿದ್ದಾರಂತೆ!. ಎಲ್ಲಾದರು ವರಿಷ್ಠರು ಸಮ್ಮತಿಕೊಟ್ಟು ಈ ಎಂಟು ಮಂದಿ 2018ರ ವಿಧಾನಸಭೆ ಚುನಾವಣೆಗೆ ನಿಂತರೆ, 2019ರ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಒಂದು ವರ್ಷವಿರುವಾಗಲೆ ಮತ್ತೆ ಎಂಟು ಉಪ ಚುನಾವಣೆಯನ್ನು ರಾಜ್ಯದ ಜನತೆ ಎದುರಿಸಬೇಕಾಗುತ್ತದೆ!.

ಇವುಗಳನ್ನೆಲ್ಲಾ ಅವಲೋಕಿಸಿದ ಮೇಲೆ ತಿಳಿಯುವುದೇನೆಂದರೆ, ಭಾರತದಲ್ಲಿ ಚುನಾವಣೆಗ ಸಂಬಂಧಪಟ್ಟಂತ ಕಾನೂನುಗಳು ಜನಸ್ನೇಹಿಯಾಗಿರುವುದರ ಹೊರತಾಗಿ, ರಾಜಕಾರಣಿಗಳಿಗೆ‘ಅಧಿಕಾರಸ್ನೇಹಿ’ಯಾಗಿದೆ ಎಂದು. ಒಂದೆ ಅಭ್ಯರ್ಥಿ ಒಂದು ಚುನಾವಣೆಗೆ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಬಹುದಂತೆ. ಆದರೆ ಚುನಾವಣೆ ಆದ ಬಳಿಕ ಒಂದೆ ಕ್ಷೇತ್ರವನ್ನು ಪ್ರತಿನಿಧಿಸಬೇಕಂತೆ. ಎರಡರಲ್ಲಿ ಒಂದು ಗೆದ್ದರೂ ಶಾಸಕ/ಲೋಕಸಭಾ ಸದಸ್ಯ ಸ್ಥಾನ ಗ್ಯಾರೆಂಟಿಯಂತೆ, ಅಕಸ್ಮಾತ್ ಎರಡೂ ಗೆದ್ದರೆ, ಒಂದು ಕ್ಷೇತ್ರವನ್ನು ಬಿಡಬೇಕೆಂತೆ ಮತ್ತೆ ಅಲ್ಲಿ ಉಪ ಚುನಾವಣೆ ಆಗಬೇಕಂತೆ. ಇದ್ಯಾವ ನ್ಯಾಯ ಸ್ವಾಮಿ?.

ಒಟ್ಟಿನಲ್ಲಿ ‘ಅಧಿಕಾರ’ವೆಂಬ ಅಫೀಮಿನಲ್ಲಿ ಸದಾ ತೇಲಾಡಲು ಅನುಕೂಲವಾಗುವ ರೀತಿಯಲ್ಲಿ ತಮಗೆ ಬೇಕಾದಂತೆ ನಿಯಮಗಳನ್ನು ತಿದ್ದುಕೊಂಡಿದ್ದಾರೆ ನಮ್ಮ ಜನಪ್ರತಿನಿಧಿಗಳು. ಒಂದು ವೇಳೇ ಈ ರೀತಿ ‘ಸ್ಥಾನ ಬದಲಾಯಿಸಿದ್ದಕ್ಕಾಗಿ ಅಥವಾ ರಾಜಕೀಯ ಮೇಲಾಟದಿಂದಾಗಿ ಉಪ ಚುನಾವಣೆ ನಡೆದರೆ, ಉಪ ಚುನಾವಣೆಯ ಖರ್ಚನ್ನು ಉಪಚುನಾವಣೆಗೆ ಕಾರಣರಾದ ರಾಜಕಾರಣಿ/ಪಕ್ಷ ಭರಿಸಬೇಕೆಂಬ’ ಕಠಿಣ ನಿಯಮವಿದ್ದಿದ್ದರೆ ಈ ಪಾಟಿ ಉಪ ಚುನಾವಣೆಗಳು ನಡುಯುತ್ತಿದ್ದವೆ? ಜತೆಗೆ ಲೋಕಸಭೆ ಹಾಗು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವುದರಿಂದ ಈ ರೀತಿ ವಿಧಾನಸಭೆಯಿಂದ ಲೋಕಸಭೆಗೆ, ಲೋಕಸಭೆಯಿಂದ ವಿಧಾನಸಭೆಗೆ ಹಾರುವುದನ್ನು ತಪ್ಪಿಸಬಹುದಲ್ಲವೆ?.  ಯೋಚಿಸಬೇಕಾದ ವಿಚಾರ.

ರಾಜಕಾರಣಿಗಳ ಹುಚ್ಚಾಟದಿಂದಾಗಿ ಚುನಾವಣೆಯ ನೆಪದಲ್ಲಿ ದುಂದುವೆಚ್ಚವಾಗುತ್ತಿರುವ ಜನರ ತೆರಿಗೆ ಹಣವನ್ನು ಉಳಿಸುವ ಸಲುವಾಗಿ ಚುನಾವಣೆಗೆ ಸಂಬಂಧಪಟ್ಟಂತೆ ಇರುವ ಅವೈಜ್ಞಾನಿಕ ನಿಯಮಗಳ ಕುರಿತು, ಏಕಕಾಲಕ್ಕೆ ವಿವಿಧ ಸ್ತರದ ಚುನಾವಣೆಗಳನ್ನು  ನಡೆಸುವುದರ ಕುರಿತು ಹಾಗು ಉಪಚುನಾವಣೆಗೆ ಕಠಿಣ ನಿಯಮವನ್ನು ಅಳವಡಿಸುವುದರ ಕುರಿತು ಗಂಭೀರ ಚರ್ಚೆ ನಡೆಯುವಂತಹ ಅಗತ್ಯವಿದೆ. ಪ್ರಧಾನ ಮಂತ್ರಿಯವರು ಕಳೆದ ವರ್ಷದ ಆರಂಭದಲ್ಲೆ  ಈ ವಿಚಾರವನ್ನು ಪ್ರಸ್ತಾಪಿಸಿದ್ದರು ಅಲ್ಲದೆ ಮಾನ್ಯ ರಾಷ್ಟ್ರಪತಿಗಳು ಇದಕ್ಕೆ ದನಿಗೂಡಿಸಿದ್ದರು. ತದನಂತದ ನಡೆದ ಉರಿದಾಲಿ, ಸರ್ಜಿಕಲ್ ದಾಳಿ ಹಾಗು ನೋಟು ಅಮಾನ್ಯೀಕರಣದ ಗಂಭಿರತೆಯಿಂದಾಗಿ ಈ ಚರ್ಚೆ ಹಿನ್ನಲೆಗೆ ಸರೆದಿದ್ದರಿಂದ, ಹೊಸ ವರ್ಷದಲ್ಲಾದರು ಈ ಕುರಿತು ಚರ್ಚೆ ನಡೆಯಲೆಂದು ತಮ್ಮ ಭಾಷಣದಲ್ಲಿ ಅವರೆ ಈ ವಿಷಯವನ್ನು ಮತ್ತೆ ಪ್ರಸ್ತಾಪಿಸಿದ್ದಾರೆ.

ಹೌದು ಹೊಸವರ್ಷದಲ್ಲಾದರೂ ಈ ಕುರಿತು ಪಕ್ಷಾತೀತವಾಗಿ, ಅರ್ಥಪೂರ್ಣ ಚರ್ಚೆ ನಡೆದು, ಹೊಸ ನಿಯಮಗಳು ಆದಷ್ಟು ಬೇಗ ಅನುಷ್ಠಾನಗೊಳ್ಳುವಂತಾಗಲಿ, ಯಾಕೆಂದರೆ ನೆನಪಿರಲಿ,ಪ್ರತಿವರ್ಷ ಭಾತರದ ಜಿಡಿಪಿ ಮಾತ್ರ ಏರುತ್ತಿಲ್ಲ,ಅದರೊಂದಿಗೆ ಚುನಾವಣಾ ವೆಚ್ಚವೂ ಏರುತ್ತಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Chaithanya Kudinalli

ಓದಿದ್ದು ಬಿಎಸ್ಸಿ, ಪ್ರಸ್ತುತ ಪತ್ರಿಕೋದ್ಯಮ ವಿದ್ಯಾರ್ಥಿ. ಹಾಗಾಗಿ ಓದು, ಬರವಣಿಗೆ, ತಿರುಗಾಟ ಮತ್ತು ಫೋಟೊಗ್ರಫಿ ಹವ್ಯಾಸ ಮಾತ್ರವಲ್ಲ ಕಾಯಕ ಕೂಡ. ರಾಜಕಾರಣ, ಇತಿಹಾಸ, ಪ್ರಚಲಿತ ವಿದ್ಯಮಾನಗಳು, ಕಥೆ, ಕಾದಂಬರಿ, ಸಿನಿಮಾ ಇವು ಆಸಕ್ತಿದಾಯಕ ವಿಷಯಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!