ಅಂಕಣ

ಪ್ರಾಣವಲ್ಲ, ಮಾನಹಾನಿಯ ‘ಶೂ’ಟ್!

ಫಿರಂಗಿಗಳ ಬೂಟಿನೇಟಿನಿಂದ ಬಾಸುಂಡೆ ಬರಿಸಿಕೊಂಡು, ಬುಲೆಟಿನೇಟಿಗೆ ಸಿಕ್ಕು ನೆತ್ತರು ಹರಿಸಿಕೊಂಡು ನಮ್ಮ ನಾಯಕರು ದೇಶಕ್ಕೆ ಸ್ವಾತಂತ್ರ್ಯ ದಕ್ಕಿಸಿಕೊಟ್ಟರು. ಆದರೆ ಸದ್ಯ, ಅಧಿಕಾರದ ಸವಿಯುಣ್ಣುತ್ತಿರುವ ಕೆಲವು ನಾಯಕರು ತಮ್ಮ ಬೂಟಾಟಿಕೆ ಮೆರೆಯಲು ಮುಂದಾಗಿ ಜನರಿಂದ ಬೂಟಿನೇಟು ತಿಂದು ಅನ್ಯರೆಡೆಗೆ ಬೊಟ್ಟು ಮಾಡುತ್ತಾ ಬುಸುಗುಟ್ಟುತ್ತಿದ್ದಾರೆ. ಕ್ಷುಲ್ಲಕ ಗಿಲೀಟುಗಳೊಂದಿಗೆ ‘ಛೂ ಮಂತರ್’ ಮಾಡಿದಂತೆ ಮಾಡಿ ಚೇರು ಗಿಟ್ಟಿಸಿಕೊಂಡವರಿಗೆ ಜನ “‘ಶೂ’ ಮಂತರ್'”ನ ಮೂಲಕ ತಿರುಮಂತ್ರ ಹಾಕಿ ಅವಮಾನದಿಂದ ತಿಣುಕಾಡುವಂತೆ ಮಾಡಿದ್ದಾರೆ.

 

ಹಳ್ಳಿಗಳಲ್ಲಿ ಮಾತಿಗೆ ಮಾತು ಬೆಳೆದಾಗ ಅಥವಾ ಎಲ್ಲಾದರೂ ಬೀದಿ ಜಗಳ ತಾರಕಕ್ಕೇರಿ, ಅಸ್ತ್ರ ಹೂಡುವ ಹರಕತ್ತು ಕಾಣಿಸಿಕೊಂಡಾಗ ಕೈಯಲ್ಲಿ ಬೇರೆ ಯಾವುದೇ ಹತ್ಯಾರ ಇಲ್ಲದಿದ್ದರೆ ಕಡೆಗೆ ಕಾಲಿಗೆ ತೊಟ್ಟ ಎಕಡಾಗಳೇ ಕಡಕ್ ಆಗಿ ಬಳಸಲ್ಪಡುವುದು ತುಂಬಾ ಸಾಮಾನ್ಯ. ಪಟ ಪಟ ಸದ್ದಿನೊಂದಿಗೆ ಚಪ್ಪಲಿಯೇಟು ಬಿತ್ತೆಂದರೆ ಆ ಜಗಳದ ತೀವ್ರತೆ ಹೆಚ್ಚಿ, ಗಂಭಿರ ಸ್ವರೂಪ ಪಡೆದುಕೊಳ್ಳುತ್ತದೆ ಎಂದರ್ಥ. ಆದರೆ ಇದೊಂಥರ ಒರಟು ವೈಖರಿಯಾಯ್ತಲ್ಲವೇ?! ಅದರ ಸುಧಾರಿತ, ಪ್ರತಿಷ್ಠಿತ ಅಥವಾ ಕಾರ್ಪೊರೇಟ್ ರೂಪವೇ ಇತ್ತೀಚಿಗೆ ಕಾಣಿಸಿಕೊಳ್ಳುತ್ತಿರುವ, ಪ್ರಾಣಾಪಾಯವಿಲ್ಲದ ಆದರೆ ಮಾನವಿದ್ದರೆ ಹಾನಿಯಾಗಬಹುದಾದ ‘ಶೂ’ಟೌಟ್ ಎನ್ನಬಹುದು. ಕೆರ ಕಿತ್ತುಹೋಗುವಂತೆ ಹೊಡೆದಾಡಿಕೊಂಡರೂ ಕೊನೆಗೆ ಕಿತ್ತುಹೋದ ಕೆರವನ್ನೇ ಕಾಲಿಗೆ ಸಿಕ್ಕಿಸಿಕೊಂಡು ಕಾಲ್ಕೀಳುತ್ತಾರೆ. ಆದರೆ ಈ ಶೂ ಎಸೆತ ಹಾಗಲ್ಲ, ಒಮ್ಮೆ ಎಸೆದರೆ ಮತ್ತೆ ಮರಳಿ ಕಾಲು ಸೇರುವ ಸಾಧ್ಯತೆಯಿಲ್ಲ.

 

ಬೂಟುಗಳ ವಿನ್ಯಾಸದಲ್ಲಿನ ಇತ್ತೀಚಿನ ಬದಲಾವಣೆಗಳು, ಬೂಟೆಸತಕ್ಕೆ ಪೂರಕವಾಗಿವೆ ಎನ್ನುವುದನ್ನು ಒಪ್ಪಲೇ ಬೇಕು. ಬೇಕಿದ್ದರೆ ನೀವೆ ನೋಡಿ! ಅಷ್ಟೇನು ಭಾರವಿರದ, ತೆಗೆಯಲು ಸುಲಭವಾಗುವ, ಗಾಳಿಯನ್ನು ಸೀಳಿಕೊಂಡು ಮುಂದಕ್ಕೆ ಚಲಿಸಲು ಅನುಕೂಲವಾಗುವ ಚೂಪಾದ ಮುಂಭಾಗವಿರುವ (ರಾಕೆಟ್’ನಲ್ಲೂ ಇಂಥ ರಚನೆ ಇರುವುದನ್ನು ನೆನಪಿಸಿಕೊಳ್ಳಿ) ವಿನ್ಯಾಸಗಳೇ ಅದಕ್ಕೆ ಸಾಕ್ಷಿ. ಅಲ್ಲದೇ ಸದಾ ಜೊತೆಗಿದ್ದು, ಅಗತ್ಯವಿದ್ದಾಗ ಪ್ರತಿರೋಧದ ರೂಪದಲ್ಲಿ ಪ್ರಯೋಗಿಸಬಹುದಾದ ಈ ಆಯುಧ ಒಂದರ್ಥದಲ್ಲಿ ಆಪತ್ಬಾಂಧವನೇ ಸರಿ!! ಖುಷಿಯಾದಾಗ ನೋಟು ಎಸೆಯುವ ಜನರಿರುವಂತೆಯೇ ರೊಚ್ಚಿಗೆದ್ದಾಗ ಬೂಟು ಎಸೆಯುವ ಜನರೂ ನಮ್ಮಲ್ಲಿದ್ದಾರೆ. ಆ ಮಟ್ಟಿಗಿನ ಸಮತೋಲನವೊಂದು ಈ ಲೋಕದಲ್ಲಿದೆ.

 

ಇನ್ನು ಈ ಬೂಟುಗಳ ಸುಯೋಗವಂತೂ ಹೇಳತೀರದು. ಬಾಹ್ಯಾಕಾಶ ಕೇಂದ್ರಗಳು ರಾಕೆಟ್ ಉಡಾಯಿಸಿ ಮಹಾನ್ ಸಾಧನೆ ಮಾಡಿದರೂ ನಮ್ಮ ಮಾಧ್ಯಮಗಳು ಅದರ ವೀಡಿಯೋವನ್ನು ಎಲ್ಲೋ ಒಂದ್ ನಾಲ್ಕೈದು ನಿಮಿಷ ತೋರಿಸಿ ಕೈತೊಳೆದುಕೊಂಡು ಬಿಡುತ್ತವೆ. ಇದನ್ನೂ ಮೀರಿದ ಕವರೇಜ್ ಸಿಗುವುದೇನಿದ್ದರೂ, ಒಬ್ಬರ  ಮೇಲೆ ಸಾರ್ವಜನಿಕವಾಗಿ ಎಸೆಯಲ್ಪಡುವ ಬೂಟುಗಳಿಗೆ!! ಅದರ ಫೂಟೇಜ್ ಸಿಕ್ಕರಂತೂ ಮೀಡಿಯಾಗಳಿಗೆ ಖುಷಿಯೋ ಖುಷಿ. ಝೂಮ್ ಆದ ಕ್ಯಾಮೆರಾ ಕಣ್ಣಿನ ಮೂಲಕ ಕ್ಲೋಸ್ ಅಪ್ ಶಾಟ್’ನಲ್ಲಿ ಕಾಣಿಸಿಕೊಳ್ಳುವ ಬೂಟನ್ನು ಅದು ಉಡಾಯಿಸಲ್ಪಟ್ಟ ಪಥ ಸಹಿತ ಕೆಂಪು ಬಣ್ಣದ ವೃತ್ತ,  ಹಾಗೂ ಬಾಣದ ಗುರುತುಗಳ ಪ್ರಭಾವಳಿಯೊಂದಿಗೆ ರೋಚಕವಾಗಿ ಹಾಗೂ ನಿರಂತರವಾಗಿ ತೋರಿಸಲಾಗುತ್ತದೆ.

 

ಎಲ್ಲರ ಮನೆಯಲ್ಲೂ ಷೋಕೇಸ್ ಇರುವುದು ಸಹಜ. ಆದರೆ ಇನ್ನು ಮುಂದೆ ಕೆಲವು ರಾಜಕಾರಣಿಗಳು ತಮ್ಮ ಮನೆಯಲ್ಲೊಂದು ಪ್ರತ್ಯೇಕವಾದ ‘ಶೂ’ ಕೇಸ್’ನ್ನೂ ಮಾಡಿಟ್ಟುಕೊಳ್ಳಬೇಕಾದೀತು! ಬೂಟಿನೇಟಿಗೆ ಬೆದರಿದವರು

“ಆ ಬುಲೆಟೇಟಿಗಿಂತ…

ಈ ಬೂಟೇಟೆ ಜೋರಾಗಿ

ಎದೆಯಲ್ಲಿ ಗಡ ಗಡ….!

ಎಂದು ಹಾಡುತ್ತಾ ಎಲ್ಲಿಂದಲೇ ಬೂಟು ಬಂದು ಬಿದ್ದರೂ ತಪ್ಪಿಸಿಕೊಳ್ಳುವಂತೆ ದೇಹವನ್ನು flexible ಆಗಿಟ್ಟುಕೊಳ್ಳುವುದೆಂತು ಎಂಬ ಬಗ್ಗೆ ಗಂಭೀರವಾಗಿ ಯೋಚಿಸಲೇಬೇಕಾಗಿದೆ.

ಓವರ್ ಡೋಸ್: ಬುಲೆಟ್ ಬಿದ್ರೆ ಆತನ ಪ್ರಾಣವೇ ಹೋಗುತ್ತದೆ. ಆದರೆ ಬೂಟ್ ಎಸೆತದಲ್ಲಿ ಅದು ಬಿದ್ದವನದ್ದೇ ಮಾನ ಹೋಗಬೇಕೆಂದೇನಿಲ್ಲ, ಒಮ್ಮೊಮ್ಮೆ ಬೂಟಿನ ಮಾನವೂ ಹೋಗುವುದಿದೆ!!

Facebook ಕಾಮೆಂಟ್ಸ್

ಲೇಖಕರ ಕುರಿತು

Sandesh H Naik

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!