ಅಂಕಣ

ಪೋಲಿಯೋ ಮುಕ್ತ ದೇಶದ ಮುಂದಿರುವ ಮತ್ತೊಂದು ದೊಡ್ಡ ಸವಾಲು….!

ಅದು ಅತಿ ವಿಕಾರವಾದ ಮುಖ. ಮುಖದ ತುಂಬೆಲ್ಲ ನೀರು ತುಂಬಿ ಹುಬ್ಬಿರುವ ಬೊಬ್ಬೆಗಳು. ಒಣ ಮೀನಿನಂತೆ ಸುಕ್ಕಾದ ಮೈಯ ಚರ್ಮ. ಹೆಬ್ಬೆರಳು ತೋರ್ಬೆರಳುಗಳ ವ್ಯತ್ಯಾಸ ಗುರುತಿಡಿಯಲಾಗದ ಕೈ ಬೆರಳುಗಳು. ಕಾಲಿನ ಪಾಡು ಭಾಗಶ ಹಾಗೆಯೇ! ಇಂತಹ ಒಬ್ಬ ವ್ಯಕ್ತಿ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ಜನರೆಲ್ಲ ಇವನಿಂದ ದೂರ ಓಡುತ್ತಿದ್ದರು. ಹಿಡಿ-ಹಿಡಿ ಶಾಪವನ್ನು ಹಾಕುತ್ತಿದ್ದರು. ಯಾರಾದರೂ ಈ ವಿಕಾರಿ ಮಾನವನನ್ನು ಹೇಗಾದರೂ ಮಾಡಿ ಊರ ಹೊರಗೆ ದಬ್ಬಿ ಬರಲು ಹೇಳುತಿದ್ದರು. ಇಂತಹ ಶಾಪ, ಕೋಪ, ದಿಕ್ಕಾರಗಳನ್ನು ಸಹಿಸುತಿದ್ದ ಆ ಜೀವ ನಿಧಾನವಾಗಿ ಮುನ್ನೆಡೆಯುತ್ತಿತ್ತು. ತನ್ನ ಗುಡಿಸಲನ್ನು ಸೇರುತಿತ್ತು. ಆ ಗುಡಿಸಲೋ, ಯಾರೂ ಬಾರದ ನಿರ್ಜನ ಪ್ರದೇಶದಲ್ಲಿರುತಿತ್ತು. ನಾಯಿಗಳು ಬಿಟ್ಟರೆ ಅಲ್ಲಿಗೆ ಯಾರೊಬ್ಬರೂ ಸುಳಿಯರು. ಎಲ್ಲಿಂದಲೋ ಸಿಕ್ಕಿದ ಅನ್ನದಲ್ಲೇ ತುಸು ತಿಂದು ಮಲಗಬೇಕಿತ್ತು. ಹೀಗೆ ಕೊರಗಿ, ನೊಂದು-ಬೆಂದ ಜೀವ, ಕೆಲದಿನಗಳ ನಂತರ ಅಸುನೀಗುತ್ತಿತ್ತು. ಆ ಜೀವ ಹಾರಿ ಹೋದಾಗಲಂತೂ ಇಡೀ ಊರಿಗೆ ಊರೇ ಸಂತಸ ಪಡುತ್ತಿತ್ತು. ನೆಮ್ಮದಿಯ ನಿಟ್ಟುಸಿರು ಬಿಡುತ್ತಿತ್ತು! ಮೂಢನಂಬಿಕೆಯ ಎಲ್ಲಾ ತರ್ಕಗಳಿಂದ ಆ ಜೀವವನ್ನು ಶಪಿಸಿ ಸುಮ್ಮನಾಗಬಿಡುತ್ತಿತು.

ಇದು ಯಾವುದೇ ಕರುಣಾಜನಕ ಕಥೆಯ ಆಯ್ದ ಭಾಗವಂತೂ ಅಲ್ಲ. ಹಲವು ದಶಕಗಳ ಹಿಂದೆ ಕಾರಣಾಂತರಗಳಿಂದ ಬರುತಿದ್ದ ಕುಷ್ಠರೋಗವೆಂಬ ಮಹಾಮಾರಿಗೆ ಸಿಲುಕಿ, ಮರುಗಿ ಕೊನೆಯಾಗುತಿದ್ದ ಅದೆಷ್ಟೋ ಜೀವಗಳ ನೋವಿನ ವ್ಯಥೆ. ಉಸಿರಾಡಲಾಲೂ ಹೆದರಿ, ಮುದುಡಿ ಕೂರಬೇಕಿದ್ದ ಬಹುಜನರ ಕಥೆ.

ಕುಷ್ಠರೋಗ. ಇತಿಹಾಸದುದ್ದಕ್ಕೂ ಮಾನವನನ್ನು ಬಿಡದೆ ಕಾಡಿದ ಮಾರಕ ರೋಗ. ಇದಕ್ಕೆ ಸಾಕ್ಷಿ ಎಂಬಂತೆ ಪುರಾವೆಗಳು ಕ್ರಿಸ್ತ ಪೂರ್ವದಿಂದಲೂ ನಮಗೆ ದೊರಕಿವೆ. ಆದರೆ ಮೂಢನಂಬಿಕೆಯ ಪರಮಾವಧಿಯಲ್ಲಿ ನಮ್ಮಲ್ಲಿ ಈ ರೋಗವನ್ನು ಹೆಚ್ಚಾಗಿ ತಪ್ಪಾಗಿಯೇ ಅರಿಯಲಾಯಿತು. ಇದರಿಂದ ಒಂದು ಸೂಕ್ತ ಮದ್ದನು, ಸೂಕ್ತ ಸಮಯದಲ್ಲಿ, ಕಂಡು ಹಿಡಿಯಲಾಗಲಿಲ್ಲ ಎನ್ನಬಹುದು. ಕೋಟಿ-ಕೋಟಿ ಜನರನ್ನು ಬಲಿ ತೆಗೆದುಕೊಂಡ ಈ ಕುಷ್ಠರೋಗಕ್ಕೆ ‘ಮೈಕೋಬ್ಯಾಕ್ಟಿರಿಯಮ್ ಲೆಪ್ರಯ್’ ಎಂಬ ಬ್ಯಾಕ್ಟಿರಿಯವೇ ಕಾರಣವೆಂದು 1873 ರಲ್ಲಿ ನಾರ್ವೆಯ ವಿಜ್ಞಾನಿ ಹೆನ್ಸನ್ ಎಂಬಾತ ಕಂಡು ಹಿಡಿದ ಮೇಲೆ ಸಹಸ್ರ ವರ್ಷಗಳ ಜನರ ಮೂಢನಂಬಿಕೆ ಒಂದು ಮಟ್ಟಿಗೆ ಕಡಿಮೆಯಾಗತೊಡಗಿತು. ಇದು ಯಾವುದೇ ದುಷ್ಟ ಶಕ್ತಿಯಾಗಲಿ, ಅನುವಂಶೀಯವಾಗಲಿ ಅಥವಾ ಮತ್ಯಾವುದೇ ಪಾಪ ಪುಣ್ಯಗಳ ಫಲವಲ್ಲ ಎಂಬುದು ಮಂದಗತಿಯಲ್ಲಿ ಹಲವರಿಗೆ ಅರಿವಾಗತೊಡಗಿತು. ಒಮ್ಮೆ ಈ ಬ್ಯಾಕ್ಟೀರಿಯ ದೇಹದ ಒಳಗೆ ಸೇರಿ ಕುಷ್ಠ ರೋಗದ ಮೊದಲ ಲಕ್ಷಣಗಳು ಕಾಣತೊಡಗಲು ಒಂದು ವರ್ಷದಿಂದ ಇಪ್ಪತ್ತು ವರ್ಷಗಳೂ ತೆಗೆದುಕೊಳ್ಳಬಹುದು .ಅಲ್ಲಿಯವರೆಗೂ ಈ ಬ್ಯಾಕ್ಟೀರಿಯಾ ದೇಹವನ್ನು ಹಂತ ಹಂತವಾಗಿ ವ್ಯಾಪಿಸುತ್ತಲೇ ಇರುತ್ತದೆ. ಈ ಸಮಯವನ್ನು ‘ಇನ್ಕ್ಯುಬೇಷನ್ ಪಿರಿಯಡ್’ ಎಂದು ಕರೆಯಲಾಗುತ್ತದೆ. ಅಲ್ಲದೆ ರೋಗಿಯ ಕೆಮ್ಮು ಹಾಗು ಸೀನುವುದರ ಮೂಲಕ ಇದು ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಹೆಚ್ಚಾಗಿ ಉಷ್ಣವಲಯದ ದೇಶಗಳಲ್ಲಿ ಕಂಡು ಬರುವ ಈ ಬ್ಯಾಕ್ಟಿರಿಯಾದ ವಿರುದ್ಧ ಬಹಳಷ್ಟು ಪ್ರಯೋಗಗಳು ನಡೆದವು. ಹಲವಾರು ಪ್ರಯೋಗಗಳ ಪರಿಣಾಮ ಅಂತಿಮವಾಗಿ ಇಪ್ಪತ್ತನೇ ಶತಮಾನದದ ಎಪ್ಪತ್ತನೇ ದಶಕದಲ್ಲಿ ಯಶಸ್ವಿಯಾದ ಮಲ್ಟಿ-ಡ್ರಗ್-ಟ್ರೀಟ್ಮೆಂಟ್ (MTD) ಚಿಕಿತ್ಸೆಯನ್ನು ಕಂಡುಹಿಡಿಯಲಾಯಿತು. ಇದು ಇಂದಿಗೂ ಕುಷ್ಠ ರೋಗಕ್ಕೆ ಇರುವ ಅತಿ ಪರಿಣಾಮಕಾರಿಯಾದ ಚಿಕಿತ್ಸೆ.

ಕುಷ್ಠ ರೋಗವೆಂಬುದು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಯಾರ ಹಂಗಿಲ್ಲದೆ ಕಾಡುವ ರೋಗ. ಇತ್ತೀಚಿನ ದಿನಗಳಲ್ಲಿ ಇದರ ಬಗ್ಗೆ ಸಾಕಷ್ಟು ಮಾಹಿತಿಗಳಿದ್ದರೂ ಸಹ ಒಮ್ಮೆ ಕುಷ್ಠ ರೋಗಿಯಾದರೆ ಆತ ಯಾರಿಗೂ ಬೇಡದಂತಾಗುತ್ತಾನೆ. ವಿಕಾರವಾದ ಅವನ ದೇಹ ಸ್ಥಿತಿಯೇ ಇದಕ್ಕೆ ಹೆಚ್ಚಿನ ಕಾರಣವಾಗಿರುತ್ತದೆ. ಅದು ಮಕ್ಕಳಿಗಾದರೆ ಅವುಗಳಿಗೆ ಶಾಲೆಗೇ ಹೋಗಲಾಗದ, ಇತರ ಮಕ್ಕಳೊಟ್ಟಿಗೆ ಆಡಲಾಗದ ಬವಣೆ. ದೊಡ್ಡವರಾದರೆ ಸಂಸಾರದ ದೋಣಿಯನ್ನು ಸಾಗಿಸಲು ಬೇಕಾದ ಕೆಲಸಕ್ಕೆ ಕುತ್ತು. ಇಂದು ಕುಷ್ಠ ರೋಗ ಸಂಪೂರ್ಣವಾಗಿ ಗುಣಮುಖವಾಗಬಲ್ಲದು ಎಂದು ಅರಿತಿದ್ದರೂ ಜನರಲ್ಲಿ ಭಯವೊಂದು ಮನೆಮಾಡಿದೆ. ಎಲ್ಲಿ ನಮ್ಮನ್ನು ಕೊಂದು ಬಿಡುತ್ತಾರೋ ಎಂಬಂತೆ ಕುಷ್ಠ ರೋಗಿಗಳನ್ನು ಕಾಣುವವರಿದ್ದಾರೆ. ಕುಷ್ಠರೋಗಿಗಳಿಗೆ ಸಿಗಬೇಕಾದ ತಕ್ಕ ಮಟ್ಟಿನ ಮೂಲಭೂತ ಸೌಕರ್ಯಗಳಾಗಲಿ, ಪ್ರೀತಿ ಸಾಂತ್ವಾನಗಳಾಗಲಿ, ಉತ್ಸಾಹ ಭರಿತ ಮಾತುಗಳಾಗಲಿ ಇತ್ತೀಚಿನ ದಿನಗಳಲ್ಲೂ ಹಲವೆಡೆ ದೊರಕದಾಗಿದೆ. ಕುಷ್ಠರೋಗವು ಔಷಧಿಗಳಿಂದ ಸಂಪೂರ್ಣವಾಗಿ ಗುಣಮುಖಗೊಂಡರೂ ಒಮ್ಮೆ ಜರ್ಜರಿತವಾದ ದೇಹ ಹಿಂದಿನ ಕಳೆಯನ್ನು ಪಡೆಯದು. ಹಚ್ಚೆ ಹೊತ್ತಿದಂತಹ ಕಲೆಗಳ ಕುರುಹುಗಳನ್ನು ಹೊತ್ತು ಇವರುಗಳು ಹೋದಡೆಯಲ್ಲ ನೋಡುಗರಿಗೆ ವಸ್ತುಸಂಗ್ರಹಾಲಯದ ಪ್ರದರ್ಶನದ ವಸ್ತುಗಳಾಗಿ ಬಿಡುತ್ತಾರೆ. ಜೀವನವಿಡಿ. ತಾನು ಮಾಡದ ತಪ್ಪಿಗೆ ಬಲಿಯಾಗಿ ನರಳುತ್ತಾರೆ. ಜೀವನವಿಡಿ!

ಈ ನಿಟ್ಟಿನಲ್ಲಿ ನಮ್ಮೆಲ್ಲರ ನಡುವೆಯೇ ಬಂದು, ಕುಷ್ಠ ರೋಗಿಗಳ ಶುಶ್ರೂಷೆಯನ್ನು ಮಾಡಿ, ಇವರಿಗಾಗೇ ಹಲವಾರು ಸಂಸ್ಥೆಗಳನ್ನು ನಿರ್ಮಿಸಿ, ಇವರ ಒಳಿತಿಗೆ ದಾರಿ ತೋರಿಕೊಟ್ಟ ಮಹಾತ್ಮ ಗಾಂಧೀಜಿ, ಮದರ್ ಥೆರೆಸಾ ಹಾಗು ಬಾಬಾ ಆಮ್ಟೆಯವರಂತಹ ಹಲವರ ಕಾರ್ಯ ಬಹಳ ಮಹತ್ತರವಾದುದು. ಮಹಾತ್ಮ ಗಾಂಧೀಜಿಯವರು ಕುಷ್ಠ ರೋಗದ ವಿರುದ್ಧ, ಕುಷ್ಠರೋಗಿಗಳ ಪಾಲನೆಯಲ್ಲಿ ತೋರುವ ತಾರತಮ್ಯದ ವಿರುದ್ಧ ಸಾಕಷ್ಟು ಹೋರಾಡಿದರೆ, ಮದರ್ ತೆರೇಸಾರವರು ‘ನಿರ್ಮಲ್ ಹೃದಯ್’ ಹಾಗು ಬಾಬಾ ಆಮ್ಟೆಯವರು ‘ಆನಂದವನ’ ಎಂಬ ಶುಶ್ರುಷಾ ಕೇಂದ್ರವನ್ನು ಕ್ರಮವಾಗಿ ಪಶ್ಚಿಮ ಬಂಗಾಲ ಹಾಗು ಮಹಾರಾಷ್ಟ್ರದಲ್ಲಿ ತೆರೆದು ಕುಷ್ಠರೋಗಿಗಳಿಗಾಗಿ ಶ್ರಮಿಸಿದರು.ಇದು ದೇಶದಲ್ಲಲ್ಲದೆ ವಿದೇಶಗಳಲ್ಲೂ ಹಲವಾರು ಕುಷ್ಠರೋಗ ನಿರ್ಮೂಲನ ಸಂಸ್ಥೆಗಳ ಸ್ಥಾಪನೆಗೆ ಕಾರಣವಾಯಿತು. ಈ ದಿಸೆಯಲ್ಲಿ WHO (World Health Organization) ಸಹ 2020ರ ವರೆಗೂ ಕುಷ್ಠ ರೋಗಿಗಳಿಗೆ ಔಷಧಗಳನ್ನು ಉಚಿತವಾಗಿ ಹಂಚುತ್ತಿರುವುದು ಸಹ ಶ್ಲಾಘನೀಯ ವಿಚಾರ. ಹೀಗೆ ಇನ್ನೂ ಹೆಚ್ಚು ಹೆಚ್ಚು ಸಂಸ್ಥೆಗಳು, ಸರ್ಕಾರಗಳು, ಹೆಚ್ಚಾಗಿ ನಾಗರೀಕರಾದ ನಾವುಗಳು ಕುಷ್ಠ ರೋಗಿಗಳ ಶ್ರೇಯಾಭಿವೃದ್ದಿಗೆ ನಮ್ಮ ಅಲ್ಪವನ್ನಾದರೂ ಮಾಡಬೇಕು. ಮಾನವರಾಗಿ ಮಾನವೀಯತೆಯ ತನವನ್ನು ಉಳಿಸಿಕೊಳ್ಳಬೇಕು.

ಒಂದು ಕಾಲದಲ್ಲಿ (ಸುಮಾರು ೧೫ ನೆಯ ಶತಮಾನದ ಆಸುಪಾಸಿನಲ್ಲಿ) ಯುರೋಪಿನಲ್ಲಿ ಕುಷ್ಠರೋಗ ಅತಿ ವಿಪರೀತವಾಗಿದ್ದಿತ್ತು. ಆದರೆ ಕ್ರಮೇಣ ಇದ್ದಕ್ಕಿದಂತೆ ಇದು ಕ್ಷೀಣಿಸತೊಡಗುತ್ತದೆ. ಮುಂದೊಂದು ದಿನ ಅದು ಮರೆಯಾಗಿಯೂ ಬಿಡುತ್ತದೆ. ಆದರೆ ಇದಕ್ಕೆ ಕಾರಣವೇನೆಂಬುದು ಇಂದಿಗೂ ರಹಸ್ಯದ ಅಂಚಿನಲ್ಲೆ ಉಳಿದಿದೆ. ಹೀಗೆ ಯುರೋಪಿನಲ್ಲಿ ಕುಷ್ಠ ರೋಗ ಒಮ್ಮೆಲೇ ಕಡಿಮೆಯಾದದ್ದು ಇಂದಿಗೂ ಹಲವಾರು ವಿಜ್ಞಾನಿಗಳ ತಲೆಯನ್ನು ಕೊರೆಯುತ್ತಿದೆ ಅಲ್ಲದೆ ಇದು ಇನ್ನೂ ಹೆಚ್ಚಿನ ಪರಿಣಾಮಕಾರಿಯಾದ ಚಿಕಿತ್ಸೆಯನ್ನು ಕಂಡುಹಿಡಿಯಲು ಅವಕಾಶವನ್ನೂ ಕಲ್ಪಿಸಿಕೊಟ್ಟಿದೆ. ಕುಷ್ಠ ರೋಗದಿಂದ ಬಳಲುತ್ತಿರುವ ಅದೆಷ್ಟೋ ದೇಶಗಳಿಗೆ ಇಂತಹ ಸಂಶೋಧನೆಗಳು ಅತಿ ಸಹಾಯಕಾರಿಯಾಗಬಲ್ಲದು.

ಇಂದು ಪ್ರಪಂಚದ ಒಟ್ಟು ಕುಷ್ಠರೋಗ ಪ್ರಕರಣಗಳಲ್ಲಿ ಪ್ರತಿಶತ ಅರ್ಧದಷ್ಟು ಪ್ರಕರಣಗಳು ಭಾರತದಲ್ಲೇ ಕಾಣ ಸಿಗುವುದು ಅತಿ ಶೋಚನೀಯ ವಿಚಾರ. 2013-14 ರ ಒಂದು ವರ್ಷದಲ್ಲೇ ಸುಮಾರು ಒಂದುವರೆ ಲಕ್ಷ ಹೊಸ ಪ್ರಕರಣಗಳು ಬೆಳಕಿದೆ ಬಂದಿವೆ! ಇಲ್ಲಿನ ಹವಾಗುಣ ಹಾಗು ಜನರಿಗೆ ಕುಷ್ಠ ರೋಗದ ಬಗ್ಗೆ ಇರುವ ಅತ್ಯಲ್ಪ ತಿಳುವಳಿಕೆಯೇ ಇದಕ್ಕೆಲ್ಲ ಹೆಚ್ಚಿನ ಕಾರಣವೆನ್ನಬಹುದು. ‘ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನ ಕಾರ್ಯಕ್ರಮದ’ (NLEP) ಮೂಲಕ ದೇಶದಲ್ಲಿ ಇಂದು ಕುಷ್ಠ ರೋಗದ ವಿರುದ್ಧ ಸಮರವನ್ನೇ ಸಾರಲಾಗಿದೆ, ಪರಿಣಾಮವಾಗಿ 1981 ರಲ್ಲಿ ದೇಶದಲ್ಲಿ 57/10000ರಷ್ಟಿದ್ದ (10,000 ಮಂದಿಯಲ್ಲಿ 57 ಜನರಿಗೆ) ಕುಷ್ಠರೋಗದ ಪ್ರಕರಣಗಳು ಇಂದು 0.6/10000 ರಷ್ಟಾಗಿದೆ. ಕರ್ನಾಟಕದಲ್ಲಿ ಇದರ ಪ್ರಮಾಣ ೦.42/10000 ರಷ್ಟಿದೆ. ಆದರೆ ಭಾರತದಂತಹ ದೊಡ್ಡ ದೇಶದಲ್ಲಿ ಇಂತಹ ಸಣ್ಣ ಅಂಕೆ-ಅಂಶಗಳೂ ಕೆಲವೊಮ್ಮೆ ಬೆಚ್ಚಿ ಬೀಳಿಸುವಂತಿರುತ್ತವೆ. ಹೀಗೆ ಲಕ್ಷ-ಲಕ್ಷ ಪ್ರಕರಣಗಳು ಬೆಳಕಿಗೆ ಬಂದು ಭಯವನ್ನು ಮೂಡಿಸಿದರೆ ಇನ್ನೂ ಹಲವು ಪ್ರಕರಣಗಳು ಕಾಣದೆಯೆ ದೇಶವನ್ನು ಕಾಡುತ್ತಿವೆ. ಪರಿಣಾಮ ಕಾರ್ಯಗಳು ಮತ್ತಷ್ಟು ಹೆಚ್ಚುಗೊಳ್ಳಬೇಕಾಗಿದೆ. ಕುಷ್ಠರೋಗವನ್ನು ಬುಡಸಮೇತ ಕಿತ್ತೊಗೆಯುವವರೆಗೂ ನಾವುಗಳು ಕಾರ್ಯನಿರತರಾಗಬೇಕಿದೆ. ದಶಕಗಳ ಶ್ರಮದ ಪ್ರತಿಫಲವಾಗಿ ಇಂದು ಭಾರತ ಪೋಲಿಯೋ ಮುಕ್ತ ದೇಶವಾದಂತೆ ಮುಂದೊಂದು ದಿನ ಕುಷ್ಠರೋಗ ಮುಕ್ತ ದೇಶವಾಗಿಯೂ ಬೆಳೆಯಬೇಕಿದೆ. ಮಹಾತ್ಮಗಾಂಧಿಯವರ ಸ್ಮರಣೆಯಲ್ಲಿ ಹಾಗು ಕುಷ್ಠ ರೋಗಿಗಳ ಪರವಾದ ಅವರ ಅವಿರತ ಶ್ರಮದ ಪ್ರತೀಕವಾಗಿ ಪ್ರತಿ ವರ್ಷ ಜನವರಿಯ ಕೊನೆಯ ಭಾನುವಾರವನ್ನು ವಿಶ್ವದಾದ್ಯಂತ ಕುಷ್ಠರೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಇಂದು 64 ನೇ ವರ್ಷದ ಆಚರಣೆ. ಇದು ಕೇವಲ ಕುಷ್ಠ ರೋಗಿಗಳನ್ನು ಗುರುತಿಸುವ ಹಾಗು ಅವರನ್ನು ವಿಚಾರಿಸುವ ದಿನವಾಗದೆ ಅವರುಗಳ ಶ್ರೇಯಾಭಿವೃದ್ದಿ ಹಾಗು ಕುಷ್ಠರೋಗದ ಸಂಪೂರ್ಣ ನಿರ್ಮೂಲನೆ ಮಾಡಲು ಪಣತೊಡುವ ದಿನವಾಗಿದೆ. ದೇಶದ ಪ್ರಗತಿಯ ಬಯಸುವವರು ಈ ಮೂಲಕ ಪರೋಕ್ಷವಾಗಿಯೂ ಶ್ರಮಿಸಬೇಕಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!