ಅಂಕಣ

ನಾಗರೀಕತೆಯ ಸಂಸ್ಕೃತಿಯನ್ನು ಹಾಳು ಮಾಡುತ್ತಿರುವ ವಿಕೃತ ಮನಸ್ಸುಗಳು.

ಭಾರತದಲ್ಲಿ ಅನೇಕ ಧರ್ಮಗಳಿವೆ. ಆ ಧರ್ಮಗಳಿಗೆ ಅನುಗುಣವಾಗಿ ಆಚರಣೆಗಳಿವೆ. ಅವುಗಳಲ್ಲಿ ಹೊಸ ವರ್ಷ ಎನ್ನುವುದು ಪ್ರಮುಖವಾದದ್ದು  ಹೊಸ ಬಟ್ಟೆ ತಂದು ಧರಿಸಿ ಊರೆಲ್ಲಾ ಸುತ್ತಿಕೊಂಡು ಸಂಭ್ರಮದ ದಿನ. ಹೊಸ ವರ್ಷ ಎಂದಾಗ ಎಲ್ಲರಿಗೂ ಭಾರೀ ಖುಷಿ ತರುವಂತದ್ದು.   ಅದು ಸಹಜ ಕೂಡ. ತಪ್ಪೇ ಇಲ್ಲ. ಕಳೆದ ವರ್ಷ ಆದದ್ದೆಲ್ಲಾ ಆಗಲಿ. ಮುಂದೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ.

            ಈ ಜನವರಿ 1 ಎನ್ನುವಾಗ ನೆನಪಿಗೆ ಬಂದದ್ದು ಅದು ಕ್ರೈಸ್ತ ಧರ್ಮದವರ ಹೊಸವರ್ಷದ ಸಂಭ್ರಮ. ಅವರು ಆಚರಿಸುವುದು ಅವರ ಇಚ್ಛೆ.  ಹಬ್ಬದಲ್ಲಿ ಅವರಿಗೆ ಪೂರ್ಣ ಸ್ವಾಂತಂತ್ರ್ಯ ಕೊಡಲೇಬೇಕು. ಪ್ರಪಂಚದಾದ್ಯಂತ ಸಂಭ್ರಮದ ಆಚರಣೆಯನ್ನು ಮಾಡುತ್ತಾರೆ. ಈ ಸಂಭ್ರಮದ ಆಚರಣೆಯ ಹೆಸರಿನಲ್ಲಿ ವಿಕೃತಿಯನ್ನು ಮಾಡುತ್ತಿದ್ದಾರೆ. ಮೋಜು ಮಸ್ತಿಯ ಹೆಸರಿನಲ್ಲಿ ಸಮಾಜವೇ ತಲೆ ತಗ್ಗಿಸುವ ಕಾರ್ಯವು ನಡೆಯುತ್ತಿದೆ. ಇದಕ್ಕೆ ಕಾರಣ ಇತ್ತೀಚೆಗೆ ನಡೆದ ಕೆಲವೊಂದು ಘಟನೆಗಳು.

         ಬೆಂಗಳೂರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರಿದೆ. IT city ಎಂಬ ನಾಮಧೇಯದಿಂದ  ವಿಶ್ವವಿಖ್ಯಾತಿಯನ್ನು ಪಡೆದಿದೆ. silicon city, garden city, cool city ಅಬ್ಬಾ ಇಷ್ಟೊಂದು ಹೆಸರಿನಿಂದ ಪ್ರಜ್ವಲಿಸುತ್ತಿದೆ. ಸ್ವಲ್ಪ ದಿನಗಳ ಹಿಂದೆ garbage city ಎಂದು ಅಂತರಾಷ್ಟ್ರೀಯ ಕುಖ್ಯಾತಿಯನ್ನೂ ಪಡೆದಿತ್ತು.  2-3 ಬಾರಿ ಬಾಂಬ್ ಸ್ಪೋಟ ಆದಾಗಲಂತೂ ಅದೆಷ್ಟು ಬೈದಿದ್ದಾರೋ ಜನಗಳು.ಈ ವಿಷಯಗಳೆಲ್ಲಾ  ದಿನಗಳು ಉರುಳಿದಂತೆ ಎಲ್ಲವೂ ಕಳೆದು ಹೋಗಿದೆ. ಅದೆಷ್ಟು ಜನಕ್ಕೆ  ಕೆಲಸ ಕೊಟ್ಟು ಸಲಹುತ್ತಿದೆ ಈ ಬೆಂಗಳೂರು.  ಇಲ್ಲಿನ ಜನಸಂಖ್ಯೆ ಸುಮಾರು ಒಂದು ಕೋಟಿ ದಾಟಿದೆ. ದೇಶದ IT ರಾಜಧಾನಿ. ಈ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಬೀರಿದೆ.


            ಈಗ ಮತ್ತೆ ಕೆಟ್ಟ ಘಟನೆಯಿಂದ ಕುಖ್ಯಾತಿಯನ್ನು ಪಡೆದಿದೆ.  ಅತ್ಯಾಚಾರ ಅನಾಚಾರಗಳೇ ಹೆಚ್ಚಾಗಿ ಬಿಟ್ಟಿದೆ.  ಕೆಲವರಂತೂ ಬೆಂಗಳೂರಿನ ಬಗ್ಗೆ ಮನಬಂದಂತೆ ಮಾತನಾಡುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. December 31 ಬಂತೆಂದರೆ ಸಾಕು ಅದೇನು ಹುಚ್ಚು ಸಂಭ್ರಮ ಕೆಲವರಲ್ಲಿ .  ಅವರ ನಡವಳಿಕೆಗಳು ನಿಜವಾಗಿಯೂ ತಲೆತಗ್ಗಿಸುವಂತೆ ಮಾಡುತ್ತದೆ. ಡಿಸೆಂಬರ್ 31 ರಾತ್ರಿಯಿಡಿ ಕುಡಿದು ಕುಣಿದು ಕುಪ್ಪಳಿಸುತ್ತಾರೆ. ಹೊಸ ವರ್ಷದ ಹೆಸರಿನಲ್ಲಿ ಮೋಜು ಮಾಡುತ್ತಾರೆ. ರಾತ್ರಿಯಿಡಿ ನಡೆಯುತ್ತದೆ.  ಅತಿರೇಕದ  ಸಭ್ಯತೆ ಮೀರಿದ ವರ್ತನೆಗಳಿಗೆ ಕುಖ್ಯಾತಿ ಪಡೆದಿದೆ.  ಇಂತಹದ್ದು ದೇಶಾದ್ಯಂತ ನೆಡೆಯುತ್ತದೆ. ಕೇವಲ ಬೆಂಗಳೂರು ಮಾತ್ರ ಅಲ್ಲ. ಆದರೆ ಸುದ್ದಿಯಾದದ್ದು ಮಾತ್ರ ಬೆಂಗಳೂರು..!!!  ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲು ಕೆಲವೊಂದು ಸ್ಥಳಗಳಲ್ಲಿ ಅನುಮತಿ ಕೊಟ್ಟಿರುತ್ತಾರೆ.  ಕೊಟ್ಟ ಅನುಮತಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ ಕೆಲವು ಕಿಡಿಗೇಡಿಗಳು.  ಬೆಂಗಳೂರಿನ ಬ್ರಿಗೇಡ್ ರೋಡ್ ಎಂದರೆ ಅದು  ಹೈಫೈ ಜನ ಓಡಾಡುವ ರಸ್ತೆ ಎಂದೇ ಖ್ಯಾತಿ. ಅಲ್ಲಿಯೇ ಅತೀ ಹೆಚ್ಚು ಪಬ್ ಗಳಿವೆ ಬಾರ್ & ರೆಸ್ಟೊರೆಂಟ್ ಗಳಿವೆ. ಪ್ರತಿಷ್ಠಿತ ಮಾಲ್ ಗಳೂ ಇವೆ.


           ಅಂದು December 31 ರ ರಾತ್ರಿ. ಎಲ್ಲರೂ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಸುಮಾರು 11.45pm ರಿಂದ  ಅಲ್ಲಿ ಸೇರಿದ್ದ ಜನರು ಹುಚ್ಚೆದ್ದು ಕುಣಿಯಲಾರಂಭಿಸಿದರು. ಕಿರುಚಾಟ ಚೀರಾಟ ಮುಗಿಲು ಮುಟ್ಟುತ್ತಿತ್ತು. ಅಲ್ಲಿ ಸ್ನೇಹಿತರ ಗುಂಪು ಗುಂಪಾಗಿ ಅಲ್ಲಿ ಸೇರಿವುದು ರೂಢಿ. ಅದು ಮೂರ್ನಾಲ್ಕು ತಂಡಗಳಲ್ಲ. ಸಾವಿರಾರು ಸ್ನೇಹಿತರ ಗುಂಪು ಅಲ್ಲಿ ಸೇರಿರುತ್ತಾರೆ. ಲಕ್ಷಾಂತರ ಜನರು ಅಲ್ಲಿ ಸೇರಿ ಸಂಭ್ರಮಿಸುತ್ತಾರೆ. ಅಲ್ಲಿ ಹುಡುಗ ಹುಡುಗಿ ಎನ್ನುವ ಭೇದಭಾವವಿಲ್ಲ.  ಇಷ್ಟೊಂದು ‌ಜನ ಸೇರಿರುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಆಗದಂತೆ ಪೋಲೀಸರ ತಂಡವೇ ಇರುತ್ತದೆ. ಸಾಲದ್ದಕ್ಕೆ ನೂರಾರು ಸಿಸಿ ಕ್ಯಾಮರಾಗಳನ್ನು  ಹಾಕಿರುತ್ತಾರೆ . ಆದರೆ  ಎಲ್ಲವೂ ಸರಿ ಇರುವಾಗ  ಈ ವರ್ಷ ನಡೆದದ್ದೇ ಬೇರೆ. ಭಾರೀ ಪ್ರಮಾಣದಲ್ಲಿ  ಮಾದಕ ದ್ರವ್ಯಗಳು ಈ ಬಾರಿ ವಿನಿಮಯವಾಗಬಹುದು ಎಂದು ಪೋಲಿಸರಿಗೆ ಗುಪ್ತಚರ ಇಲಾಖೆಯು ಎಚ್ಚರಿಸಿತ್ತು. ಆದರೂ ಗೃಹ ಇಲಾಖೆ ಎಲ್ಲಿಯೂ ಯಾವುದೇ ಎಚ್ಚರಿಕೆ ವಹಿಸದೆ ಕೈ ಕಟ್ಟಿ ಕುಳಿತಿತ್ತು.

          ಆ ಸಿಸಿ ಕ್ಯಾಮರಾವನ್ನು ಕಣ್ಣು ತಪ್ಪಿಸಿ ಮನಬಂದಂತೆ ಕುಣಿಯಲಾರಂಭಿಸಿದರು. ಆ ಗುಂಪಿನೊಂದಿಗೆ ಕಿಡಿಗೇಡಿಗಳು ಸೇರಿದ್ದರು. ಯಾರು ಸಭ್ಯರು ಯಾರು ಕಿಡಿಗೇಡಿಗಳು ಎನ್ನುವುದ ಹೇಳುವುದು ಕಷ್ಟಸಾಧ್ಯ. ಅವರ ಕೀಟಲೆಗಳನ್ನು ನೋಡಿಯೇ ಕಿಡಿಗೇಡಿಗಳು ಎನ್ನಬಹುದು. ಅಂದು ಅಲ್ಲಿ ಸೇರಿದ್ದ ಕೆಲವು ಕಿಡಿಗೇಡಿಗಳ  ತಂಡ ಅಟ್ಟಹಾಸವನ್ನೇ ನಡೆಸಿದ್ದರು. ಸಭ್ಯತೆ ಮೀರಿ ವರ್ತಿಸಿತ್ತಿದ್ದರು. ಹುಡುಗಿಯರ ಗುಂಪಿನ ನಡುವೆ ಸೇರಿ ಅಸಭ್ಯತನವನ್ನು ಪ್ರದರ್ಶಿದ್ದರು. ಯುವತಿಯರು ರಕ್ಷಣೆಗಾಗಿ ಅಂಗಲಾಚುತ್ತಿದ್ದರು.. ಆದರೆ ಹೊಸ ವರ್ಷದ ಸಂಭ್ರಮದ  ಕಿರುಚಾಟದಲ್ಲಿ ಯಾರೊಬ್ಬರ ಅಸಹಾಯಕತೆಯ ಆರ್ತನಾದ ಕೇಳಲೇ ಇಲ್ಲ..!!!  ಮೊದ ಮೊದಲು ಪೋಲಿಸರು ಕೇಳಿಸಿದರೂ ಕೇಳದವರಂತೆ ವರ್ತಿಸಿ ಛೀಮಾರಿ ಹಾಕಿಸಿಕೊಂಡ ಮೇಲೆ ಲಾಠಿ ಹಿಡಿದು ಚದುರಿಸಲಾರಂಭಿಸಿದರು. ನಿಧಾನವಾಗಿ ಅವರ ಅರಿವಿಗೆ ಬಂದ ನಂತರ ಸ್ವಯಂಪ್ರೇರಿತರಾಗಿ ರಕ್ಷಣೆಗೆ ಇಳಿದರು. ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಂತೆ ಪೋಲೀಸರು ವರ್ತಿಸಿದ್ದರು. ಈ ಸುದ್ದಿ ದೇಶದಾದ್ಯಂತ ಸದ್ದು ಮಾಡಿ ಎಲ್ಲಾ ಸೋಮಾರಿಗಳನ್ನು ಬಡಿದೆಬ್ಬಿಸಿತ್ತು. ರಾಷ್ಟ್ರೀಯ ಮಾಧ್ಯಮಗಳಂತೂ  ಬೆಂಗಳೂರು ಸೇಫಲ್ಲ ಎನ್ನುವ ಶೀರ್ಷಿಕೆ ಕೊಟ್ಟು ಮನಬಂದಂತೆ  ನಿಂಧಿಸಿಬಿಟ್ಟರು.  ದೆಹಲಿ ನಂತರದ ಸ್ಥಾನವು ಬೆಂಗಳೂರಿಗೆ ಸಲ್ಲಬೇಕು ಎಂದವು. ಆಗ ನಮ್ಮ ಸಚಿವರು ನಿದ್ದೆಯಿಂದ ಎದ್ದ ಹಾಗೆ “ಇಂತಹಾ ಪಾರ್ಟಿಗಳಲ್ಲಿ ಇದೆಲ್ಲಾ common”. ಎಂದು ನಿರ್ಲಕ್ಷ್ಯದ ಉತ್ತರ ಕೊಟ್ಟರು. ರಾಜ್ಯದಾದ್ಯಂತ      ಈ ಹೇಳಿಕೆಗೆ  ಉಗಿದು ಉಪ್ಪಿನಕಾಯಿ ಹಾಕಿದ ಮೇಲೆ “ಕ್ರಮ ತೆಗೆದುಕೊಳ್ಳುತ್ತೇವೆ.” ಎಂದರು.

             ಇನ್ನಾದರೂ ನಾವು ನಮ್ಮ ಲಕ್ಷ್ಯವನ್ನು ತಪ್ಪದಂತೆ ಇಟ್ಟುಕೊಳ್ಳಬೇಕು. ಅಂತಹಾ ಆಚರಣೆಗಳಿಂದ ದೂರವಿದ್ದರೆ ನಿಜಕ್ಕೂ ಕೆಲವೊಂದು ಕೆಟ್ಟ ಘಟನೆಗಳಿಗೆ ಆಹ್ವಾನವೇ ಸಿಗುವುದಿಲ್ಲ. ಅದಕ್ಕೆ ಅವಕಾಶವನ್ನು ನಾವು ಕೊಡಬಾರದು. ಅದೆಷ್ಟೇ ಪೋಲಿಸ್ ಭದ್ರತೆ ಒದಗಿಸಿದರೂ ಕೆಟ್ಟ ಘಟನೆಗಳು ನಡೆಯುತ್ತದೆ ಎಂದರೆ ಕಾರ್ಯಕ್ರಮದ‌ ಆಯೋಜನೆಗೆ ಅವಕಾಶವೇ ಕೊಡಬಾರದು.  ಎಲ್ಲಾ ನಡೆದ ಮೇಲೆ ಕ್ರಮ ಕೈಗೊಳ್ಳುವುದಕ್ಕಿಂತಲೂ ಮೊದಲೇ ಅದನ್ನು ನಿಷೇಧಿಸಿ ಮುಂದೆ ಸಂಭವಿಸುವ ಅನಾಹುತಗಳನ್ನು ತಪ್ಪಿಸಬಹುದು. ಇನ್ನೊದು ಅರ್ಥದಲ್ಲಿ ಹೇಳುವುದಾದರೆ  ಹೊಸ ವರ್ಷದ ಆಚರಣೆಯಲ್ಲಿ ಅನಾಹುತವೇ ಹೆಚ್ಚು. ಅದು ನಮ್ಮ ಭಾರತೀಯ ಸಂಸ್ಕೃತಿಯೂ ಅಲ್ಲ.

           ಭಾರತ ದೇಶದಲ್ಲಿ ಅದೆಷ್ಟು ಮೂಢ ನಂಬಿಕೆಗಳಿದ್ದರೂ ಹೆಣ್ಣುಮಕ್ಕಳಿಗೆ ಅಪಾರ ಗೌರವವಿದೆ. ಇಲ್ಲಿ ಬಿಟ್ಟರೆ ವಿಶ್ವದ ಯಾವ ದೇಶದಲ್ಲಿಯೂ ಗೌರವವಿಲ್ಲ. ಎಲ್ಲಿ ನಾರಿಯರನ್ನು ಪೂಜಿಸುತ್ತಾರೋ ಅಲ್ಲಿ ದೇವರು ವಾಸಿಸುತ್ತಾರೆ ಎಂದು ನಂಬಿರುವ ದೇಶ ನಮ್ಮದು.  ಇತಿಹಾಸದ ಪುಟಗಳನ್ನು ಬಿಡಿಸಿ ನೋಡಿದಾಗ ಸ್ತ್ರೀಯರ ರಕ್ಷಣೆಗಾಗಿ ಮಹಾಯುದ್ಧವನ್ನೇ ಮಾಡಿದ ನಿದರ್ಶನಗಳಿವೆ . ಇನ್ನಾದರೂ ಕೆಟ್ಟ ಘಟನೆಗಳಿಗೆ ಅವಕಾಶ ಕೊಡುವುದು ಬೇಡ .ದೇಶ ನಿರ್ಮಾಣ‌ ಕಾರ್ಯದಲ್ಲಿ ಯುವಕ ಯುವತಿಯರ ಎಷ್ಟು ಪಾಲಿದೆಯೋ ಅಷ್ಟೇ ಪಾಲು ಪೋಷಕರದ್ದೂ ಇದೆ.  ತಮ್ಮ ಮಕ್ಕಳ ತಪ್ಪನ್ನು ತದ್ದಿ ಸರಿ ದಾರಿಯಲ್ಲಿ ನಡೆಯುವಂತೆ ಮಾಡುವುದು. ಕಳೆದ ಬಾರಿ ಮೋದಿಯವರು ತಮ್ಮ ಭಾಷಣದಲ್ಲಿ  ಹೇಳಿದ್ದರು. “ಕೇವಲ ಹೆಣ್ಣುಮಕ್ಕಳನ್ನು ಮಾತ್ರ ಪ್ರತಿಯೊಂದು ವಿಷಯದಲ್ಲಿ ಪ್ರಶ್ನಿಸುವುದಲ್ಲ. ಅದರ ಜೊತೆಗೆ ನಿಮ್ಮ ಗಂಡುಮಕ್ಕಳ ದಿನನಿತ್ಯದ ಚಟುವಟಿಕೆಗಳನ್ನೂ ಪ್ರಶ್ನಿಸಿ” ಎಂದು.  ಇದು ಅಂದಿನಿಂದಲೇ ಮಾಡಿದ್ದರೆ ಬಹುಷಃ ಇಂದು ದೇಶದಲ್ಲಿ ಯಾರೂ ತಲೆ ತಗ್ಗಿಸುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಮತ್ತು ಬೆಂಗಳೂರಿಗೆ ಕಪ್ಪು ಚುಕ್ಕಿಯೂ ಬೀಳುತ್ತಿರಲ್ಲಿಲ್ಲ.

        ಇಂತಹಾ ಕೆಟ್ಟ ಘಟನೆಗಳಿಗೆ ಮತ್ತೊಂದು ಕಾರಣವೂ ಇದೆ . ದೇಶದಲ್ಲಿ ಕಾನೂನು ಬಿಗಿಯಾಗಿಲ್ಲ ಏನೇ ತಪ್ಪು ಮಾಡಿದರೂ ಅದನ್ನು ಬೆಂಬಲಿಸುವ ರಾಜಕೀಯದ ನಾಟಕ ಕಂಪನಿಗಳಿವೆ . ಶಿಕ್ಷೆಯಿಂದ ಭಾರಿ ಸುಲಭವಾಗಿ ತಪ್ಪಿಸಿಕೊಳ್ಳಬಹುದಾಗಿದೆ. ಅದು ಕೆಲವು ವಿಕೃತ ಮನಸ್ಸನ್ನು ಮತ್ತಷ್ಟು  ಕೇಕೆ ಹಾಕುವಂತೆ ಮಾಡಿದೆ. ಶಿಕ್ಷೆಯ ಪ್ರಮಾಣವನ್ನು ಕ್ರೂರವಾಗಿ ಹೆಚ್ಚಿಸಿದ್ದೇ ಆದರೆ ಮುಂದಿನ ದಿನಗಳಲ್ಲಿ ಕೆಟ್ಟ ಘಟನೆಗಳಿಗೆ ಎಳ್ಳು ನೀರು ಬಿಡಬಹುದು ಅದಕ್ಕಾಗಿ ನಿಷ್ಟಾವಂತ ಅಧಿಕಾರಿಗಳು, ರಾಜಕಾರಣಿಗಳು ಬೇಕಷ್ಟೇ . ಅದರ ಜೊತೆಗೆ ಪ್ರಜ್ಞಾವಂತ ನಾಗರೀಕರ‌ ಬೆಂಬಲವೂ ಬೇಕಿದೆ. ಪಾಶ್ಚಿಮಾತ್ಯದ ಸಂಸ್ಕೃತಿಯನ್ನು ದೂರವಿಟ್ಟರೆ ಯಾವ ದುರ್ಘಟನೆಗಳೂ ನಡೆಯುದಿಲ್ಲ.

Facebook ಕಾಮೆಂಟ್ಸ್

ಲೇಖಕರ ಕುರಿತು

Jagath Bhat

ಜಗತ್ ಭಟ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಯಕ್ಷಗಾನ, ಛಾಯಾಗ್ರಹಣ ಮತ್ತು ಬರವಣಿಗೆ ಇವರ ಹವ್ಯಾಸ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!