Featured ಅಂಕಣ

ದೇಶೀ ಅಖಾಡದಲ್ಲಿ ಬೆಳೆದು ವಿದೇಶಗಳಿಗೆ ರಫ್ತಾಗುತ್ತಿರುವ ವಿಜೇಂಧರರು..!!

ಕೆಲದಿನಗಳ ಹಿಂದಷ್ಟೇ ಬಾಕ್ಸರ್ ವಿಜೇಂದರ್ ಸಿಂಗ್ ಟಾಂಜೇನಿಯಾದ ಫ್ರಾನ್ಸಿಸ್ ಚೆಕಾ ಅವರನ್ನು ಎಡೆಮುರಿ ಕಟ್ಟಿ ಸೋಲಿಸಿ ಎಂಟನೇ ಬಾರಿಗೆ ಪ್ರೊ-ಬಾಕ್ಸಿಂಗ್ನ ಪಂದ್ಯವನ್ನು ಗೆದ್ದ ಘಳಿಗೆಯನ್ನು ಅಂದು ನಡೆಯುತ್ತಿದ್ದ ಇಂಡಿಯಾ ಹಾಗು ಇಂಗ್ಲೆಂಡ್ ಟೆಸ್ಟ್ ಸರಣಿಯ ಕೊನೆಯ ಪಂದ್ಯಕ್ಕಿಂತ ಹೆಚ್ಚಾಗಿ ಚರ್ಚಿಸಲಾಯಿತು. ಬಹುಷಃ ವರ್ಷ ಪೂರ್ತಿ ಕ್ರಿಕೆಟ್ನ ಜ್ವರದಲ್ಲೇ ಮುಳುಗುವ ಅದೆಷ್ಟೋ ಭಾರತೀಯರಿಗೆ ಹೀಗೆ ಆಗೊಮ್ಮೆ ಹೀಗೊಮ್ಮೆ ಇತರ ಕ್ರೀಡೆಗಳೂ ಸಂಜೆಯ ಚಹಾ-ಬಜ್ಜಿಗಳೊಟ್ಟಿಗೆ ಚರ್ಚೆಯ ವಿಷಯಗಳಾಗುವುದು ತೀರಾ ಅಪರೂಪವೆ ಬಿಡಿ. ಅದೆಷ್ಟೋ ಜನರಿಗೆ ಆ ಒಂದು ಗಳಿಗೆಗೆ ಮಾತ್ರ ಹೀರೊವಾಗುವ ಆ ಪರಕ್ರೀಡಾ ಪ್ರತಿಭೆ ಕೆಲವೇ ಘಂಟೆಗಳಲ್ಲಿ / ದಿನಗಳಲ್ಲಿ ನೋಡನೋಡುತ್ತಿದ್ದಂತೆ ಕಣ್ಮರೆಯಾಗಿಬಿಡುತ್ತಾನೆ. ಅವನ ಸ್ಥಾನವನ್ನು ಮತ್ತದೇ ಕ್ರಿಕೆಟ್ ಕಲಿಗಳು ತುಂಬಿರುತ್ತಾರೆ. ಗೆಲ್ಲುವವರೆಗೂ ‘ನೀನ್ಯಾರಯ್ಯ’ ಎನ್ನುತ್ತಾ, ಗೆದ್ದ ಮೇಲೆ ‘ಅಣ್ಣಯ್ಯ, ಅಪ್ಪಯ್ಯ’ ಎನ್ನುವ ಜನನಾಯಕರೂ ಸುದ್ದಿವಾಹಿನಿಗಳಲ್ಲಿ ಸುದ್ದಿ ಸದ್ದು ಮಾಡಿ ಮರೆಯಾಗುವುದರೊಳಗೆ ಇವರುಗಳಿಗೆ ಒಂದೆರೆಡು ಸಭೆ ಸನ್ಮಾನಗಳನ್ನು ಮಾಡಿ ಮುಗಿಸಿಬಿಟ್ಟರೆ ತಮ್ಮ ಕ್ರೀಡಾಮನೋವೈಷಾಲ್ಯತೆಯನ್ನು ಮೆರೆದಂತೆ ಅಂದುಕೊಳ್ಳುತ್ತಾರೆ. ಒಟ್ಟಿನಲ್ಲಿ ಕ್ಷಣಮಾತ್ರಕ್ಕೆ ಮಾತ್ರ ನಾಯಕನಂತಾಗಿ ಉಳಿದೆಲ್ಲ ಕಾಲ ತೆರೆಮರೆಗೆ ಸರಿಯುವ ಸಪೋರ್ಟಿಂಗ್ ಆರ್ಟಿಸ್ಟ್ ಗಳಂತಾಗುವ ಕ್ರೀಡೆಗಳಲ್ಲಿ ಬಾಕ್ಸಿಂಗ್ ಕೂಡ ಒಂದು. ಇದು ವಿಜೇಂದರ್ ಸಿಂಗ್ನ ಸತತ 8ನೇ ಗೆಲುವು. ಅಲ್ಲದೆ ಈತ ಇಲ್ಲಿಯವರೆಗೂ ಆಡಿರುವ ಪ್ರೊ-ಬಾಕ್ಸಿಂಗ್ ಪಂದ್ಯಗಳಲ್ಲಿ ಒಮ್ಮೆಯೂ ಸೋಲದ ಸರದಾರ! ಇಷ್ಟೊಂದು ಪ್ರತಿಭಾವಂತ ಆಟಗಾರ ನಮ್ಮ ಭಾರತದವನಾದರೆ ಮೊನ್ನೆ ಒಲಿಂಪಿಕ್ ಪಂದ್ಯದಲ್ಲೇಕೆ ದೇಶದ ಪರವಾಗಿ ಆಡಲಿಲ್ಲ? ದೇಶಕ್ಕೆ ಪದಕವನ್ನೇಕೆ ಗಳಿಸಿಕೊಡಲಿಲ್ಲ? ಎಂಬ ಪ್ರಶ್ನೆ ಹಲವರಲ್ಲಿ ಮೂಡಿರದೆ ಇರಲಿಕ್ಕಿಲ್ಲ.

ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮೊದಲು ಬಾಕ್ಸಿಂಗ್ನ ಪ್ರಕಾರಗಳ ಬಗ್ಗೆ ಸ್ವಲ್ಪ ತಿಳಿಯೋಣ. ಬಾಕ್ಸಿಂಗ್ ನಲ್ಲಿ ಎರಡು ಪ್ರಕಾರ. ಮೊದಲನೆಯದು ಅಮೆಚುರ್ ಹಾಗು ನಂತರದ್ದು ಪ್ರೊಫೆಷನಲ್ ಅಥವಾ ಪ್ರೊ-ಬಾಕ್ಸಿಂಗ್. ಈ ಅಮೆಚುರ್ ಬಾಕ್ಸಿಂಗ್ ಅನ್ನುವುದು ಹೆಸರೇ ಹೇಳುವಂತೆ ಒಂತರಾ ಬಲಿಯುತ್ತಿರುವ  ಹಲಸಿನ ಹಣ್ಣಿನ ಹಾಗೆ. ಇತ್ತ ಕಡೆ ಕಾಯಿಗೆ ಕಾಯಿಯೂ ಆಗದೆ ಹಣ್ಣಿಗೆ ಹಣ್ಣೂ ಆಗದ ಸ್ಥಿತಿ. ಇಲ್ಲಿ ನಿಯಮಗಳು ಕೊಂಚ ಹಿಡಿತಕ್ಕೊಳಪಟ್ಟಿರುತ್ತವೆ. ದೇಹದ ಕೆಲವೇ ಭಾಗಗಳಿಗೆ ಮಾತ್ರ ಪಂಚ್ ಕೊಡಬಹುದು, ಒಂದೇ ಬಣ್ಣದ ವಸ್ತ್ರಗಳನ್ನು ತೊಡುವಂತಿಲ್ಲ, ಗಡ್ಡ ಬಿಡುವಂತಿಲ್ಲ, ತಲೆಗೆ ಶಿರಸ್ತ್ರಾಣವನ್ನು (Helmet) ಧರಿಸಲೇ ಬೇಕು ಇತ್ಯಾದಿ ಇತ್ಯಾದಿ. ಆದರೆ ಪ್ರೊ-ಬಾಕ್ಸಿಂಗ್ ಇದಕ್ಕೆ ಕೊಂಚ ವ್ಯತಿರಿಕ್ತ. ಇಲ್ಲಿ ಶಿರಸ್ತ್ರಾಣವನ್ನು ಧರಿಸುವಂತೆಯೇ ಇಲ್ಲ! ದೇಹದ ಬಹುತೇಕ ಭಾಗಗಳಿಗೆ ಪಂಚ್ಗಳನ್ನು ಕೊಡಬಹುದು, ಅಲ್ಲದೆ ಬಾಕ್ಸರ್ಗಳ ಸಾಮರ್ಥ್ಯಕ್ಕನುಗುಣವಾಗಿ, 4, 6, 8  ಹೀಗೆ ಹೆಚ್ಚೆಂದರೆ ಒಟ್ಟು ಹನ್ನೆರೆಡು ಸುತ್ತುಗಳಿರಬಹುದು. ಈ ಹನ್ನೆರೆಡು ಸುತ್ತುಗಳಲ್ಲಿ ಒಬ್ಬ ಇನ್ನೊಬ್ಬನ ಮುಸುಡಿಗೆ ಪಂಚ್ಗಳಿಂದ ಚಚ್ಚಿ ಅವನನ್ನು ಮೂರ್ಛೆ ಹೋಗುವಂತೆಯೂ ಮಾಡಬಹುದು. ಇದಕ್ಕೆ ಪ್ರೊ-ಬಾಕ್ಸಿಂಗ್ ನಲ್ಲಿ ‘ನಾಕ್ ಔಟ್’ ಎನ್ನುತ್ತಾರೆ. ಒಂದು ವೇಳೆ ಒಬ್ಬ ಇನ್ನೊಬ್ಬನನ್ನು ‘ನಾಕ್ ಔಟ್’ ಮಾಡದಿದ್ದರೆ, ರೆಫೆರಿಗಳ ಅಂಕಗಳ ಆಧಾರದ ಮೇಲೆ ಗಲುವನ್ನು ನಿರ್ಧರಿಸಲಾಗುತ್ತದೆ. ಆದರೆ ಅಮೆಚುರ್ ಬಾಕ್ಸಿಂಗ್ ನಲ್ಲಿ ಮೂರು ನಿಮಿಷದ ಮೂರು ಅಥವಾ ನಾಲ್ಕು ಸುತ್ತುಗಳು. ಇಷ್ಟರಲ್ಲೇ ವಿಜಯಿಗಳು ಘೋಷಿತರಾಗಬೇಕು. ಅಲ್ಲದೆ ಇದು ಪ್ರೊ-ಬಾಕ್ಸಿಂಗ್ ನಷ್ಟು ಅಪಾಯಕಾರಿಯೂ ಅಲ್ಲ. ದೇಶದ ಹೆಸರಲ್ಲಿ ಸೆಣೆಸುವ ಅಷ್ಟೂ ಬಾಕ್ಸರ್ ಗಳು ಅಮೆಚುರ್ ಬಾಕ್ಸಿಂಗ್ ನ ಪ್ರಕಾರವನ್ನೇ ಅನುಸರಿಸಬೇಕು. 2012 ರ ಲಂಡನ್ ಒಲಿಂಪಿಕ್ಸ್ ನ ವರೆಗೂ ಕೇವಲ ಅಮೆಚುರ್ ಬಾಕ್ಸರ್ಗಳೆ ದೇಶಗಳಿಗೆ ಪದಕಗಳನ್ನು ಗಳಿಸಿ ಕೊಡುತ್ತಿದ್ದರು. 2016 ರ ರಿಯೋ ಒಲಿಂಪಿಕ್ಸ್ ನಲ್ಲಿ ಪ್ರೊ-ಬಾಕ್ಸರ್ಗಳಿಗೂ ಅವಕಾಶವನ್ನು ಕೊಟ್ಟಿದ್ದು ಮಾತ್ರ ಎಲ್ಲರ ಆಶ್ಚರ್ಯಕ್ಕೂ ಕಾರಣವಾಗಿತ್ತು.

ಈ ಎರಡೂ ಬಗೆಯ ಬಾಕ್ಸಿಂಗ್ಗೆ ತಮ್ಮದೇ ಆದ ವೈಶಿಷ್ಟಗಳಿವೆ. ಪ್ರೊ-ಬಾಕ್ಸಿಂಗ್ನ ಕೆಲವು ಹಣಾಹಣಿಗಳು ಪ್ರಪಂಚದಾದ್ಯಂತ ಸುದ್ದಿ ಮಾಡಿ ನೋಡುಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುವುದಲ್ಲದೆ ಬಾಕ್ಸರ್ಗಳನ್ನು ಯಶಸ್ಸಿನ ಉತ್ತುಂಗಕ್ಕೆ ಹಾರಿಸುತ್ತವೆ. ‘ಶತಮಾನದ ಫೈಟ್’, ‘ದಿ ಗ್ರೇಟ್ / ಗ್ರೇಟೆಸ್ಟ್’, ‘ನಿರ್ವಿವಾದ(Undisputed)’ ಹೀಗೆ ವಿವಿಧ ಹೆಸರಿನ ಪ್ರೊ-ಬಾಕ್ಸಿಂಗ್ ಪಂದ್ಯಗಳು ಇತಿಹಾಸದ ಪುಟಗಳಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿವೆ. ಮೊಹಮ್ಮೆದ್ ಅಲಿ, ಮೈಕ್ ಟೈಸನ್, ಜಾಕ್ ಜಾನ್ಸನ್, ರಾಕಿ ಮರ್ಸಿಯಾನೊ, ಸೂನ್ನಿ ಲಿಸ್ಟನ್, ಜೋ ಲೂಯಿಸ್ ಹೀಗೆ ಹಲವಾರು ಲೆಜೆಂಡರಿ ಬಾಕ್ಸರ್ಗಳು ಇಂದಿಗೂ ಹಲವರ ಹಿರೋಗಳಾಗಿದ್ದಾರೆ. ಹೀಗೆ ಬಾಕ್ಸಿಂಗ್ನ ಎವರ್ಗ್ರೀನ್ ಹೀರೋಗಳಾಗಲು ಪ್ರೊ-ಬಾಕ್ಸಿಂಗ್ನ ಹಾದಿಯನ್ನು ಬಹುಷಃ ಎಲ್ಲಾ ಬಾಕ್ಸರ್ಗಳು ಬಯಸುವುದು ಸರ್ವೇ ಸಾಮಾನ್ಯ.


ಆಮೆಚುರ್ ಬಾಕ್ಸಿಂಗ್ನಲ್ಲಿ ಕ್ರೀಡಾಳುಗಳ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿದರೆ, ಪ್ರೊ-ಬಾಕ್ಸಿಂಗ್ ನಲ್ಲಿ ಹಣದ ಪ್ರವಾಹಕ್ಕೆ ಹವಣಿಸಲಾಗುತ್ತದೆ. ಹಾಗಾಗಿ ಪ್ರೊ-ಬಾಕ್ಸಿಂಗ್ ಹೆಚ್ಚಾಗಿ ಖಾಸಗಿ ಕ್ಲಬ್ಗಳಿಗೆ ಮಾತ್ರ ಆಡಲಾಗುತ್ತದೆ. ಹೀಗೆ ಕ್ಲಬ್ಗಳಿಗೆ ಆಡುವ ಬಾಕ್ಸರ್ಗಳ ಮುಂದೆ ಹರಿಯುವ ಹಣದ ಹೊಳೆಯನ್ನು ಕಂಡು, ಸರ್ಕಾರಿ ಕೋಟಾದಲ್ಲಿ ದೇಶಕ್ಕಾಗಿ ಆಡುವ ಬಾಕ್ಸರ್ ಗಳು ತಮ್ಮ ಕೈ-ಮೈ ಪರಚಿಕೊಳ್ಳುವುದು ಸಾಮಾನ್ಯದ ಸಂಗತಿ. ಹೀಗೆ ಮುಂದುವರೆದು ಯಾವುದಾದರೊಂದು ಪ್ರಮುಖ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಂಚೊ, ಬೆಳ್ಳಿಯೋ ಅಥವಾ ಅಕಸ್ಮಾತಾಗಿ ಚಿನ್ನವನ್ನೇನಾದರೂ ಗೆದ್ದರೆ ಆತನ ಮುಂದಿನ ಗುರಿ ತನ್ನನು ಖರೀದಿಸುವ ಯಾವುದಾದರೊಂದು ಕ್ಲಬ್ಗಳ ಅರಸುವಿಕೆಯಾಗಿರುತ್ತದೆ. ಮುಖದ ಮೇಲೆ ಹೆಚ್ಚು ಹೆಚ್ಚು ಪಂಚ್ಗಳನ್ನು ಚಚ್ಚಿಸಿ ಕೊಳ್ಳುವುದಾಗಿರುತ್ತದೆ. ಕಿಸೆಯ ತುಂಬ ನೋಟುಗಳನ್ನು ತುಂಬಿಕೊಳ್ಳುವುದಾಗಿರುತ್ತದೆ.

ಹೀಗೆ ದೇಶದ ಗರಡಿಯಲ್ಲಿ ಬೆಳೆದು ಪಳಗಿದ ಪಟುಗಳು ನೋಡ ನೋಡುತ್ತಲೇ ಪರಕೀಯರ ಪಾಲಾಗುತ್ತಾರೆ And/Or ಪಾಲಾಗಿದ್ದಾರೆ!!

ಬಡಕುಟುಂಬದಲ್ಲಿ ಬೆಳೆದ ವಿಜೇಂದರ್, ಮುಂದೊಂದು ದಿನ ದೇಶದ  ದೊಡ್ಡ ಬಾಕ್ಸರ್ ಆಗುತ್ತೇನೆಂಬುದನ್ನು ಊಹಿಸಿರಲೂ ಸಾಧ್ಯವಿಲ್ಲ. ಆದರೆ ತನ್ನ ಹಿರಿಯ ಸಹೋದರನನ್ನು ಅನುಸರಿಸುತ್ತಾ ಬಾಕ್ಸಿಂಗ್ಗೆ ಸೇರಿದ ವಿಜೇಂದರ್, ಸಹೋದರ ಬಾಕ್ಸಿಂಗ್ನ ಕೋಟದ ಮೇಲೆ ಸರ್ಕಾರಿ ನೌಕರಿಯನ್ನು ಗಳಿಸಿಗೊಂಡಾಗ ಈತನಿಗೆ ಬಾಕ್ಸಿಂಗ್ ಇನ್ನೂ ಸನಿಹವಾಗಿರಬಹುದು. ನಂತರ ಸುಪ್ರಸಿದ್ದ ಭಿವಾನಿ ಬಾಕ್ಸಿಂಗ್ ಕ್ಲಬ್ಗೆ ಸೇರಿದ ಈತ ತನ್ನ ಬಾಕ್ಸಿಂಗ್ ಕಲೆಯನ್ನು ಇನ್ನೂ ವೃದ್ಧಿಸಿಕೊಳ್ಳುತ್ತಾನೆ ಅಲ್ಲದೆ 1997ರ ರಾಷ್ಟ್ರೀಯ ಮಟ್ಟದ ಸಬ್ ಜೂನಿಯರ್ ಪಂದ್ಯಾವಳಿಯಲ್ಲಿ ಬೆಳ್ಳಿಯ ಪದಕವನ್ನೂ ಗೆಲ್ಲುತ್ತಾನೆ. ಇದು ಅವನ ಬಾಕ್ಸಿಂಗ್ ಕೆರಿಯರ್ ನ ಮೊದಲ ಪದಕ.  ಅಲ್ಲಿಂದ ಮುಂದೆ ಒಂದರಿಂದೊಂದಂತೆ ರಾಶಿ ರಾಶಿ ಪಂಚ್ ಗಳನ್ನು ಹೊಡೆಯುತ್ತಾ, ಕೆಲ ಪಂಚ್ ಗಳನ್ನು ತಾನೂ ಗುದ್ದಿಸಿಕೊಳ್ಳುತ್ತಾ ಸಾಲು ಸಾಲು ಪದಕಗಳನ್ನು ಮುಡಿಗೇರಿಸಿಕೊಳ್ಳುತ್ತಾನೆ. ವರ್ಷ 2003 ರಲ್ಲಿ ಆಲ್ ಇಂಡಿಯಾ ಯುವ ಬಾಕ್ಸಿಂಗ್ ಚಾಂಪಿಯನ್ಶಿಪ್, ಅದೇ ವರ್ಷ ಹೈದ್ರಾಬಾದಿನಲ್ಲಿ ನೆಡೆದ ಆಫ್ರೋ-ಏಷ್ಯನ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ, 2006 ರ ಮೆಲ್ಬೋರ್ನ್ ಕಾಮನ್ ವೆಲ್ತ್ ಪಂದ್ಯಾವಳಿಯಲ್ಲಿ ಕಂಚಿನ ಪದಕ, ಅದೇ ವರ್ಷ ದೊಹಾದಲ್ಲಿ ನೆಡೆದ ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ, ನಂತರ 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ದೇಶದ ಒಲಿಂಪಿಕ್ಸ್ ಇತಿಹಾಸದ ಮೊದಲ ಕಂಚಿನ ಪದಕ, 2010ರಲ್ಲಿ ಡೆಲ್ಲಿಯಲ್ಲಿ ನೆಡೆದ ಕಾಮನ್ ವೆಲ್ತ್ ಚಾಂಪಿಯನ್ನಶಿಪ್ ನಲ್ಲಿ ಚಿನ್ನದ ಪದಕ ನಂತರದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ, ಅದೇ ವರ್ಷ ಚೀನಾದಲ್ಲಿ ನೆಡೆದ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ, 2014 ರ ಗ್ಲ್ಯಾಸ್ಕೋ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿಯ ಪದಕ. ಒಂದೇ ಎರಡೇ.. ಹೀಗೆ ದೇಶದ ಬಾಕ್ಸಿಂಗ್ ಇತಿಹಾಸದಲ್ಲಿ ಹಿಂದೆಂದೂ ಮಾಡದ ಸಾಧನೆಯನ್ನು ಸಾಧಿಸುತ್ತಾನೆ. ದೇಶದ ಕ್ರೀಡಾಪ್ರಿಯರ ಮನೆಮಾತಾಗುತ್ತಾನೆ.

ಆದರೆ,

ಅದು ಮೊನ್ನೆ ಆಗಸ್ಟ್ ತಿಂಗಳಲ್ಲಿ ನೆಡೆದ ರಿಯೋ ಒಲಿಂಪಿಕ್ಸ್ ಗಿಂತ ಸುಮಾರು ಒಂದು ವರ್ಷ ಹಿಂದಿನ ಸಮಯ. ಅದಾಗಲೇ ರಿಯೋ ಒಲಿಂಪಿಕ್ಸ್ ಗೆ ಭರ್ಜರಿ ಸಿದ್ದತೆಗಳು ನೆಡೆಯುತ್ತಿದ್ದವು. ಆಗ ಇದ್ದಕ್ಕಿದ್ದಂತೆ ಸುದ್ದಿಯೊಂದು ಟಿವಿ ಪರದೆಯ ಮೇಲೆ ಮೂಡುತ್ತದೆ. ಆ ಸುದ್ದಿಯನ್ನು ನೋಡಿದ ಬಾಕ್ಸಿಂಗ್ ಪ್ರಿಯರ ಎದೆಬಡಿತ ಅರೆಕ್ಷಣ ನಿಂತಿರಲೂ ಬಹುದು. ವಿಜೇಂದರ್ ಸಿಂಗ್ ಇನ್ನು ಮುಂದೆ ಆಮೆಚುರ್ ಬಾಕ್ಸಿಗ್ನ್ ಆಡುವುದಿಲ್ಲವೆಂದೂ, ಇನ್ನು ಮುಂದೆ ಈತ ಪೂರ್ಣಮಟ್ಟದ ಪ್ರೊಫೆಶನಲ್ ಬಾಕ್ಸರ್ ಆಗುತ್ತಾನೆಂದು ಬಿತ್ತರಿಸಲಾಗುತ್ತದೆ. 2012 ರ ಲಂಡನ್ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಆರು ಪದಕಗಳನ್ನು ಪಡೆದ ಭಾರತೀಯರು ಈ ಬಾರಿ ಮತ್ತಷ್ಟು ಪದಕಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಪದಕಗಳ ಸಂಖ್ಯೆ ಎರಡಂಕಿ ತಲುಪುವುದನ್ನು ಕಾಣಲು ಆತುರರಾಗಿದ್ದರು. ಅವರ ಆ ನಿರೀಕ್ಷೆಯಲ್ಲಿ ವಿಜೇಂದರ್ ಸಿಂಗ್ನ ಹೆಸರು ಮೊದಲ ಸ್ಥಾನದಲ್ಲಿತ್ತು. ಆದಾಗಲೇ ಹಲವು ಪ್ರಸಿದ್ಧ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ, 2008 ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ದೇಶದ ಮೊದಲ ಬಾಕ್ಸಿಂಗ್ ಪದಕವನ್ನೂ ತಂದುಕೊಟ್ಟಿದ್ದ  ವಿಜೇಂದರ್ ಸಿಂಗ್ನ ಮೇಲೆ ಭರವಸೆ ತುಸು ಜಾಸ್ತಿಯೇ ಇತ್ತೆನ್ನಬಹುದು. ಆದರೆ ಆ ವೇಳೆಯಲ್ಲಿ ಇನ್ನೂ ಒಲಿಂಪಿಕ್ಸ್ ಪಂದ್ಯಾವಳಿಗಳಲ್ಲಿ ಪ್ರೊ-ಬಾಕ್ಸಿಂಗ್ ನ ಸೇರ್ಪಡೆಯಾಗಿರಲಿಲ್ಲ, So, ವಿಜೇಂದರ್’ನ ಮನಸ್ಥಿತಿ ಆಮೆಚುರ್ ಬಾಕ್ಸಿಂಗ್ ನಿಂದ ದೂರವಾಗಿ ಪ್ರೊ ಬಾಕ್ಸಿಂಗ್ ನ ಗುಂಗಿನಲ್ಲಿತ್ತು. ವಿದೇಶಿ ಕ್ಲಬ್ ನೊಟ್ಟಿಗೆ ಬಹುವಾರ್ಷಿಕ ಒಪ್ಪಂದಕ್ಕೂ ಸಹಿ ಹಾಕಲಾಗಿತ್ತು. ಇನ್ನೇನಿದ್ದರೂ ಈತ ಒಲಿಂಪಿಕ್ ರಿಂಗ್ ನಲ್ಲಿ, ಭಾರತದ ಧ್ವಜವನ್ನು ಎದೆಯ ಮೇಲೆ ಹೊತ್ತು ಸೆಣೆಸುವ ಇತರ ಆಟಗಾರರನ್ನು ನೋಡಿ ಮರುಗುವುದಾಗಿತ್ತು. ಅವರುಗಳು ಸೋತು ಬಿದ್ದಾಗ, ದೇಶದವನಾಗಿ ದೇಶಕ್ಕಾಗಿ ಸೆಣೆಸಲಾಗಲಿಲ್ಲವಲ್ಲ ಎಂದು ಕೊರಗುವುದಾಗಿತ್ತು. 2016ರ ಒಲಿಂಪಿಕ್ಸ್ ಶುರುವಾಗುವ ಮುನ್ನವೇನೋ  ಪ್ರೊ-ಬಾಕ್ಸಿಂಗ್  ಓಲಿಂಪಿಕ್ಸ್ ಗೆ ಪಾದಾರ್ಪಣೆ ಮಾಡಿತಾದರೂ ತನ್ನ ಏಳನೇ ಪ್ರೊ ಬಾಕ್ಸಿಂಗ್ ನ ಸಿದ್ದತೆಯಲ್ಲಿ ಈತನಿಗೆ ಒಲಿಂಪಿಕ್ಸ್ ರಿಂಗ್ ನೊಳಗೆ ಬರಲಾಗಲಿಲ್ಲ.

ಇದು ಕೇವಲ ಬಾಕ್ಸಿಂಗ್ ಹಾಗು ಬಾಕ್ಸರ್ ಗಳ ವಿಷಯವಲ್ಲ. ಒಲಿಂಪಿಕ್ಸ್ ನಲ್ಲಿ ಸೆಣೆಸುವ ಅದಷ್ಟೂ ಕ್ರೀಡೆ ಹಾಗು ಕ್ರೀಡಾಳುಗಳಿಗೆ ಅನ್ವಹಿಸುವ ವಿಷಯ. ರಿಯೋ ಒಲಿಂಪಿಕ್ಸ್ ನಲ್ಲಿ ಒಂದು ಬೆಳ್ಳಿ ಹಾಗು ಒಂದು ಕಂಚಿನ ಪದಕಗಳನ್ನು ಗೆದ್ದು ತಂದ P.V ಸಿಂಧೂ ಹಾಗು ಸಾಕ್ಷಿ ಮಲಿಕ್ ರನ್ನು ರಿಯೋ ಒಲಿಂಪಿಕ್ಸ್ ಗೆ ಹೋಗುವ ಮುನ್ನ ಗುರುತೇ ಹಿಡಿಯದವರು, ಗೆದ್ದು ಬಂದ ಮೇಲಂತೂ ಕೋಟಿ ಕೋಟಿ ಹಣವನ್ನು ಅವರ ಮುಂದೆ ಸುರಿದು ಕುಣಿದು ಕುಪ್ಪಳಿಸಿದರು.. ಸಿಂಧು ಇದಾದ ನಂತರ ಸುಮಾರು ಅರ್ವತ್ತರಿಂದ ಅರವತೈದು ಕೋಟಿಯನ್ನು ಗಳಿಸಿದರೆ, ಕಂಚನ್ನು ಗೆದ್ದ ಸಾಕ್ಷಿಗೆ ಸುಮಾರು ಹತ್ತು ಕೋಟಿ ಸಿಕ್ಕಿರಬಹುದು. ಇದೆ ಹಣವನ್ನೇದಾರೂ ಒಲಿಂಪಿಕ್ಸ್ ನ ಮುಂಚೆಯೇ ಕ್ರೀಡಾಳುಗಳ ಉತ್ತಮ ಗುಣಮಟ್ಟದ ಕ್ರೀಡಾ ಉಪಕರಣಗಳಿಗೋ, ಒಳ್ಳೆಯ ಕೋಚ್ ಗಳಿಗೋ ಅಥವಾ ಕ್ರೀಡೆ ಎಂದರೆ ಕ್ರಿಕೆಟ್ ಎಂದರಿತಿರುವ ಹಲವಾರು ಶಾಲಾ ಕಾಲೇಜುಗಳಿಗೂ ಕೊಟ್ಟಿದ್ದರೂ ಇಂದು 130 ಕೋಟಿ ಜನಸಂಖ್ಯೆಯಲ್ಲಿ  ಕನಿಷ್ಠ 0.00000001 % ರಷ್ಟು ಪದಕಗಳನ್ನಾದರೂ, ಅಂದರೆ ಕಳೆದ ಲಂಡನ್ ಒಲಿಂಪಿಕ್ಸ್ ಗಿಂತ ಎರಡರಷ್ಟು ಪದಗಳನ್ನಾದರೂ ನಾವು ಗೆಲ್ಲಬಹುದಿತ್ತೇನೋ!

ಬ್ರಿಟನ್ 1996 ರ ಒಲಿಂಪಿಕ್ಸ್ ನ ಪದಕಗಳ ಪಟ್ಟಿಯಲ್ಲಿ 36 ನೇ ಸ್ಥಾನದಲಿದ್ದಿತ್ತು. ಆದರೆ, 2008 ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ 4ನೆ ಸ್ಥಾನ,  2012 ರ ಲಂಡನ್ ಒಲಿಂಪಿಕ್ಸ್ ನಲ್ಲಿ 3ನೆ ಸ್ಥಾನ ಹಾಗು ಕಳೆದ ರಿಯೋ ಒಲಿಂಪಿಕ್ಸ್ ನಲ್ಲಿ ಎರಡನೇ ಸ್ಥಾನವನ್ನು ಗಳಿಸಿದೆ. ಹಾಗು ಮುಂದಿನ 2020 ರ ಟೋಕಿಯೋ   ಒಲಿಂಪಿಕ್ಸ್ ನಲ್ಲಿ ಮೊದಲನೇ ಸ್ಥಾನಕ್ಕೂ ಕಣ್ಣಿಟ್ಟಿದೆ. ಜೆರ್ಮನಿ, ರಷ್ಯಾ, ಜಪಾನ್ ಗಳಂತ ಒಲಿಂಪಿಕ್ಸ್ ನ ಅತಿರಥ ಮಹಾರಥ ದೇಶಗಳನ್ನು ಕೇವಲ ಎರಡೇ ಒಲಿಂಪಿಕ್ಸ್ ನಲ್ಲಿ  ಹಿಂದಾಕುವುದು ಸುಲಭದ ಮಾತಲ್ಲ. ಹಾಗಾದರೆ ಬ್ರಿಟನ್ ನ ಈ ಪಾಟಿ ಸಾಧನೆಗೆ ಕಾರಣವಾದರು ಏನು? ನಾವು ಸುಮಾರು ನೂರು ವರ್ಷದಲ್ಲಿ ಕೇವಲ ಬೆರಳೆಣಿಕೆಯ ಪದಕಗಳನ್ನೇ ಮಾತ್ರ ಗಳಿಸಲು ಶಕ್ತರಾದೇವೇಕೆ? ಉತ್ತರ ಇಷ್ಟೇ. ನಮ್ಮಲ್ಲಿ ಒಲಿಂಪಿಕ್ಸ್ ಮುಗಿದ ಮೇಲೆ ಸುರಿಯುವ ಹಣದ ರಾಶಿ ಅಲ್ಲಿ ಒಲಿಂಪಿಕ್ಸ್ ಶುರುವಾಗುವ ಮೊದಲೇ ಸಂಸ್ಥೆ ಹಾಗು ಆಟಗಾರರ ಮುಂದೆ ಬಂದಿರುತ್ತದೆ.. ಹೀಗೆ ಅಲ್ಲಿ ಒಬ್ಬ ಅಥ್ಲೀಟ್ ಗೆ ಸರಾಸರಿ 5 ಕೋಟಿಯಷ್ಟನ್ನು ಖರ್ಚನ್ನು ಮಾಡಿದರೆ ನಮ್ಮಲ್ಲಿ ಖರ್ಚು ಮಾಡುವ ಮೊತ್ತ ಅಮ್ಮಮ್ಮ ಅಂದರೆ 5 ಲಕ್ಷ. ಅಲ್ಲದೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ವಾರ್ಷಿಕ ಬಜೆಟ್ ನಲ್ಲಿ ಸುಮಾರು 3,500 ಕೋಟಿಯಷ್ಟು ಹಣವನ್ನು ಕ್ರೀಡೆಗಾಗಿಯೇ ಮಾಡಿಪಾಗಿಟ್ಟರು ಅದು ಬ್ರಿಟನ್ ನ ಕ್ರೀಡಾ ಆಯವ್ಯಯಕ್ಕೆ ಹೋಲಿಸಿದರೆ ಕೇವಲ ಮೂರನೇ ಒಂದು ಬಾಗವಷ್ಟೇ! Okay, ಬ್ರಿಟನ್ನಂತಹ ಸದೃಢ ದೇಶದೊಟ್ಟಿಗೆ ನಮ್ಮ ನಮ್ಮ ಆಯವ್ಯಯಗಳನ್ನು ಹೋಲಿಸುವುದು ಬೇಡ. ಆದರೆ ಇತ್ತೀಚೆಗಷ್ಟೇ ನಮ್ಮ ಎಕಾನಮಿ ಬ್ರಿಟನ್ನ ಎಕಾನಾಮಿಯನ್ನು ಹಿಂದಿಕ್ಕಿರುವದನ್ನ ಮರೆಯುವುದೂ ಬೇಡ! ವಿಸ್ಮಯದ ಸಂಗತಿಯೆಂದರೆ, ಅವರು ಗೆಲ್ಲುವ ಪ್ರತಿ ಪದಕದ ಬೆಲೆ ೧೫೦ ಕೋಟಿಯಷ್ಟಿದ್ದರೆ ನಾವು ಗೆಲ್ಲುವ (ರಿಯೋ ಒಲಿಂಪಿಕ್ಸ್ ನ ಪದಕಗಳ ಆಧಾರದ ಮೇಲೆ) ಪ್ರತಿ ಪದಕದ ಬೆಲೆ ಬರೋಬ್ಬರಿ ೧೮೦೦ ಕೋಟಿಗಳು!!

ಅಂದೊಮ್ಮೆ ವಿಜೇಂದರ್ ಮಾಧ್ಯಮಗಳೊಟ್ಟಿಗೆ ‘ಕ್ರೀಡೆಯೆಂದರೆ ಕೇವಲ ಕ್ರಿಕೆಟ್ ಅಲ್ಲ, ನಾವುಗಳೂ ದೇಶಕ್ಕಾಗೆ ಸೆಣೆಸುವರು’ ಎಂದಿದ್ದ. ಅಂದು ಅವನಲ್ಲಿ ಇದ್ದಿದ್ದು ಹತಾಶೆ. ಹನ್ನೊಂದು ಜನರು ಸೆಣೆಸುವ ಒಂದು ಕ್ರೀಡೆಗೂ ಹಾಗು ಒಬ್ಬಂಟಿಯಾಗಿ ಕಾದಾಡುವ ಒಂದು ಕ್ರೀಡೆಗೂ ತುಲನೆ ಮಾಡುವ ನಮ್ಮ ಮನಸ್ಥಿತಿಯ ವಿರುದ್ಧವಿದ್ದ ಆಕ್ರೋಶ. ಅಷ್ಟಾದರೂ ಕೊನೆಗೆ ಕ್ರಿಕೆಟ್ಟೇ ಗ್ರೇಟ್, ಥ್ರಿಲ್ಲಿಂಗ್, ಅಂಡ್ ಎವ್ರಿಥಿಂಗ್ ಎನ್ನುತ್ತಾ ಜಾಹಿರಾತು ಕಂಪನಿಗಳು ಅವರ ಹಿಂದೆಯೇ ಓಡುತ್ತವೆ.  ದೇಶದ ಒಲಿಂಪಿಕ್ಸ್ ಇತಿಹಾಸದಲ್ಲೆ ಹಿಂದೆಂದೂ ಕಂಡರಿಯದ ಸಾಧನೆಗಳನ್ನು ಮಾಡಿದರೂ ಕೆಲವರ್ಷಗಳ ನಂತರ ಅವರನ್ನು ಗುರುತೇ ಹಿಡಿಯದ ಪ್ರಸ್ತುತ ಸ್ಥಿತಿಯಲ್ಲಿ ಇಂತಹ ಕ್ರೀಡಾಪಟುಗಳಿಗೆ ಹೆಚ್ಚೆಂದರೆ ಸರ್ಕಾರೀ ಕೋಟಾದಲ್ಲಿ ಒಂದು ಕೆಲಸವೂ ಅಥವಾ ಸಣ್ಣ ಮೊತ್ತದ ವೇತನವೋ ಸಿಕ್ಕರೆ ಅದೇ ಪುಣ್ಯ. ಇಂತಹ ಸ್ಥಿತಿಯಲ್ಲಿ ಯಾವುದೊ ಒಂದು ಸ್ಪೋರ್ಟ್ಸ್ ಕ್ಲಬ್ ನ ವ್ಯಕ್ತಿಗಳು ಬಂದು ದೊಡ್ಡ ದೊಡ್ಡ ಮೊತ್ತದ ಚೆಕ್ಕುಗಳನ್ನು ಅವರ ಮುಂದೆ ಇಟ್ಟಾಗ, ನಮ್ಮ ಯಾವ ಕ್ರೀಡಾಪಟು ತಾನೇ ಬೇಡವೆನ್ನುತ್ತಾನೆ? ವಿಜೇಂದರ್ ಸಿಂಗ್ ನೊಟ್ಟಿಗೂ ಆದದ್ದು ಇದೆ. ಬ್ರಿಟನ್ ನ Queensberry Promotions ಅಂದು ನಮ್ಮ ವಿಜೇಂದರ್ ನನ್ನು ಖರೀದಿಮಾಡಿತು. ಇದು ಕೇವಲ ವಿಜೇಂದರ್ ನ ಕಥೆಯಲ್ಲ. ೨೦೦೦ ರ ಸಿಡ್ನಿ ಒಲಿಂಪಿಕ್ಸ್ ನಲ್ಲಿ ಪದಕವನ್ನು ಗೆಲ್ಲಲು ಸಮೀಪಕ್ಕೆ ಬಂದು ನೋಡುಗರ ರೋಮುಗಳನು ಎದ್ದು ನಿಲ್ಲಿಸಿದ್ದ ಬಾಕ್ಸರ್ ಗುರುಚರಣ್ ಸಿಂಗ್, ೨೦೦೮ ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ  ಸಂಚಲನ ಮೂಡಿಸಿದ್ದ ಅಖಿಲ್ ಕುಮಾರ್ ಹಾಗು ಜಿತೇಂದರ್ ಕುಮಾರರೂ ಸಹ ಇಂದು ಪ್ರೊಫೆಷನಲ್ ಬಾಕ್ಸರ್ ಗಳಾಗಿದ್ದಾರೆ. ಬಾಕ್ಸಿಂಗ್ ಎಂಬ ಪದವೇ ಭಾರತದ ಒಲಿಂಪಿಕ್ ಇತಿಹಾಸದಲ್ಲಿ ಕೇಳುತ್ತಿರಲಿಲ್ಲ. ಆದರೆ ಇತ್ತೇಚೆಗೆ ಅದು ಹೆಚ್ಚೆಚ್ಚು ಸದ್ದು ಮಾಡುತ್ತಿದೆ. ಆದರೆ ಆ ಸದ್ದು ಗೆಲುವಿನ ಕಹಳೆಯಾಗುವ ಮೊದಲೇ ಕದ್ದು ಮರೆಯಾಗುತ್ತಿದೆ. ಇಂದು ಭಾರತ ವಿಶ್ವದ ಆರ್ಥಿಕತೆಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಿದೆ. ಜಗತ್ತಿನ ಹಿರಿಯಣ್ಣರ ಪಟ್ಟಿಯಲ್ಲಿ ಸ್ಥಾನವನ್ನೂ ಪಡೆಯುತ್ತಿದೆ. ಇಷ್ಟೆಲ್ಲಾ ಆಗುತ್ತಿದರೂ, ವಿಶ್ವದ ಆರನೇ ಒಂದು ಭಾಗದಷ್ಟು ಜನಸಂಖ್ಯೆಯನ್ನು ಹೊಂದಿದ್ದರೂ, ಒಲಿಂಪಿಕ್ಸ್ ನಲ್ಲಿ ಕೇವಲ ಒಂದೋ, ಎರಡೂ ಪದಕಗಳನ್ನು ಗೆಲ್ಲುತ್ತೇವೆ ಎಂದರೆ ಖಂಡಿತಾ ಹುಳುಕು ನಮ್ಮಲ್ಲಿಯೇ ಇದೆ. ಬ್ರಿಟನ್ ನಲ್ಲಿ ೧೮ ರಿಂದ ೩೫ ವಯೋಮಾನದ ‘ಯುವಕರ’ ಸಂಖ್ಯೆ ೧೮ ಕೋಟಿಯಷ್ಟಿದ್ದರೆ ನಮ್ಮಲಿ ಅದೇ ವಯೋಮಾನದ  ಯುವಕರ ಸಂಖ್ಯೆ ಬರೋಬ್ಬರಿ ೪೦ ಕೋಟಿಯಷ್ಟಿದೆ! ಅಷ್ಟಾಗಿಯೂ ನಮ್ಮಲಿ ಈ ಕ್ರೀಡಾ ಅಸಫಲತೆ ಏತಕ್ಕೆ?


ಇದು ಕೇವಲ ಅಕಾಡೆಮಿ ಹಾಗು  ಸರ್ಕಾರಗಳ ತಪ್ಪೆಂದು ಜವಾಬ್ದಾರಿಯಿಂದ ಜಾರಿಕೊಳ್ಳಲಾಗುವುದಿಲ್ಲ. ಪ್ರತಿ ಕ್ರೀಡಾಳುಗಳ ಮೊದಲ ಆದ್ಯತೆ ಎಂದಿಗೂ ದೇಶವೇ ಆಗಿರಬೇಕು. ಮದ್ಯವನ್ನು ಹೀರುತ್ತಾ, ತಾನು ತಿನ್ನುವ ಏಟಿಗೆ ಕೇಕೆ ಆಕುತ್ತಾ ಕುಣಿಯುವ ಜನಗಳಿಗಿಂತ, ದಿನದ ಜಂಜಾಟದಲ್ಲಿ ಅದೆಷ್ಟೇ ಬಿಸಿಯಾಗಿದ್ದರೂ ಮನಸ್ಸಿನ ಎಲ್ಲೋ ಒಂದು ಕಡೆ ನಮ್ಮ ಕ್ರೀಡಾಪಟುಗಳು ಗೆಲ್ಲಲಿ ಎಂದು ಹಾರೈಸುವ ನಮ್ಮ ಭಾರತೀಯರ ಕೀರ್ತಿಯನ್ನು ಎತ್ತಿ ಹಿಡಿಯುವುದಾಗಿರಬೇಕು. ಎಷ್ಟಾದರೂ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಮಾರ್ಕೆಟ್ ವ್ಯಾಲ್ಯೂ ಹೆಚ್ಚಿದೆ ಅಂದರೆ ಅದು ದೇಶದ ಅಖಾಡದೊಳಗೆ ಅಂಬೆಗಾಲಿಟ್ಟು, ಬೆಳೆದಿದ್ದರಿಂದಲ್ಲವೇ? ದೇಶದ ಹೆಸರೇಳಿ ಸೆಣೆಸಲು ಅವಕಾಶ ಪಡೆದಿದ್ದರಿಂದಲ್ಲವೇ? ಯೋಚಿಸಿ..

 

Reference : Hindustan Times, ABP Live & Internet

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!