Featured ಅಂಕಣ

ಜಲ್ಲಿಕಟ್ಟಿಗೆ ಪಟ್ಟು ಹಿಡಿದ ತಮಿಳರನ್ನು ನೋಡಿಯಾದರೂ ತುಳುವರು ಫೇಸ್ಬುಕ್’ನಿಂದ ಆಚೆ ಬರಬೇಕಲ್ಲವೇ?

ತಮಿಳುನಾಡಿನಲ್ಲಿ ಕಾವೇರಿಗಾಗಿ ಜನ ಬೀದಿಗಿಳಿದಿದ್ದನ್ನು ನಾವು ನೋಡಿದ್ದೇವೆ. ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವುಂಟಾದಾಗಲೂ ಅಲ್ಲಿ ಜನ ರೊಚ್ಚಿಗೇಳುತ್ತಾರೆ. ಅಮ್ಮ ಸತ್ತಾಗಲೂ ಲಕ್ಷಾಂತರ ಅಭಿಮಾನಿಗಳು ಎದೆ ಬಡಿದುಕೊಂಡಿದ್ದರು. ಹೀಗಾಗಿ ಜನರು ರೊಚ್ಚಿಗೇಳುವುದು, ಬೀದಿಗಿಳಿಯುವುದು, ಬಂದ್ ಮಾಡುವುದೆಲ್ಲವೂ ಒಂದು ಲೆಕ್ಕದಲ್ಲಿ ಅವರಿಗೆ  ಸಾಮಾನ್ಯವಾದ ಸಂಗತಿ. ಇಂತದ್ದೆಲ್ಲಾ ವರ್ಷದಲ್ಲಿ ಒಂದೆರಡು ಬಾರಿಯಾದರೂ ಸಂಭವಿಸಲಿಲ್ಲ ಅಂದರೆ ಅದು ತಮಿಳುನಾಡಿಗೇ ಅವಮಾನ. ಇವೆಲ್ಲವೂ ಯಾವುದೋ ರಾಜಕೀಯ ಕಾರಣಕ್ಕೆ ಯಾ ತಮ್ಮ ಮೂಲಭೂತ ಹಕ್ಕಿನ ಕಾರಣಕ್ಕೋ ನಡೆಯುಂತವುಗಳು. ಆದರೆ ಅಂತಹಾ ಯಾವುದೇ ರಾಜಕೀಯ ಹಿನ್ನಲೆಯಿರದ ಬರೀ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ವಿಷಯವೊಂದಕ್ಕೆ ಜನರು ಸ್ವಯಂಪ್ರೇರಿತರಾಗಿ ಬೀದಿಗಿಳಿದಿದ್ದಾರೆಂದರೆ ನಿಜಕ್ಕೂ  ಅಚ್ಚರಿಯ ಸಂಗತಿ.

ಜಲ್ಲಿಕಟ್ಟು… ತಮಿಳುನಾಡಿನಲ್ಲಿ ಹಿಂದಿನ ಕಾಲದಿಂದಲೂ ಆಚರಣೆಯಲ್ಲಿರುವ ಒಂದು ಜನಪದೀಯ ಕ್ರೀಡೆ. ಮಹಾರಾಷ್ಟ್ರದಲ್ಲಿ  ದಹಿ ಹಂಡಿ , ಮಂಗಳೂರಿನಲ್ಲಿ  ಕಂಬಳ, ಆಂಧ್ರದಲ್ಲಿ  ಕೋಳಿ ಅಂಕ ಎಲ್ಲವೂ ಹೇಗೋ ಹಾಗೆಯೇ ತಮಿಳುನಾಡಿನಲ್ಲಿ ಜಲ್ಲಿಕಟ್ಟು. ವರ್ಷಕ್ಕೊಮ್ಮೆ ಪೊಂಗಲ್’ನ ಸಮಯದಲ್ಲಿ ನಡೆಯುವ ಈ ಕ್ರೀಡೆಯನ್ನು ತಮಿಳರು ಎಂದೂ ಮಿಸ್ ಮಾಡಿಕೊಳ್ಳಲಾರರು. ಜಲ್ಲಿಕಟ್ಟು ತಮಿಳರನ್ನು ಭಾವನಾತ್ಮಕವಾಗಿ ಎಷ್ಟು ಬೆಸೆದಿದೆಯೆಂಬುದಕ್ಕೆ ಸ್ವಯಂಪ್ರೇರಿತರಾಗಿ ಆ ಜಲ್ಲಿಕಟ್ಟಿಗಾಗಿ ಮರೀನಾ ಬೀಚ್’ನಲ್ಲಿ ಲಕ್ಷಕ್ಕೂ ಮಿಕ್ಕಿ ಜನ ಸೇರಿದ್ದೇ ಸಾಕ್ಷಿ. ಅದೂ ಸಹ ಯಾವುದೇ ರಾಜಕೀಯ ಪ್ರೇರಣೆಯಿಲ್ಲದೆ, ಅಬ್ಬರದ ಪ್ರಚಾರವಿಲ್ಲದೆ. ತಮಿಳರಿಗೂ ನಮಗೂ ನೀರಿನ ವಿಚಾರದಲ್ಲಿ ಏನೇ ಮನಸ್ತಾಪಗಳಿರಬಹುದು, ಆದರೂ ನನಗೆ ಅವರ ಈ ಹೋರಾಟದ ಮನೋಭಾವ ನಿಜಕ್ಕೂ ಇಷ್ಟವಾಯ್ತು.

ಆದರೆ ನಾ ಹೇಳಹೊರಟಿರುವುದು ಬೇರೆಯೇ ವಿಷಯದ ಬಗ್ಗೆ. ನಮ್ಮೂರಿನ ಕಂಬಳದ ಬಗ್ಗೆ. ತಮಿಳರಿಗೆ ಜಲ್ಲಿಕಟ್ಟು ಹೇಗೋ ಹಾಗೆಯೇ ನಮಗೆ, ಅಂದರೆ ತುಳುನಾಡಿನವರಿಗೆ ಕಂಬಳ ಅಂತ ಎಲ್ಲರಿಗೂ ಗೊತ್ತೇ ಇದೆ. ಜಲ್ಲಿಕಟ್ಟಿನ ಮೇಲೆ ತಮಿಳರಿಗೆ ಇದ್ದಷ್ಟು ಅಟಾಚ್’ಮೆಂಟ್ ಎಲ್ಲಾ  ತುಳುವರಿಗೆ ಕಂಬಳದ ಮೇಲೆ ಇದೆಯೋ ಇಲ್ಲವೋ ಗೊತ್ತಿಲ್ಲ.  ಭಾವನಾತ್ಮಕ ಸಂಬಂಧವಂತೂ ಇದೆ. ಅದರಲ್ಲೂ ಕಂಬಳದಲ್ಲಿ ಭಾಗವಹಿಸುವ ಕೋಣಗಳ ಮಾಲೀಕರು, ಅವುಗಳನ್ನು ಓಡಿಸುವವರು, ಮತ್ತವರ ಮನೆಯವರಿಗೆ ಕಂಬಳದ ಮೇಲೆ ಎಲ್ಲಿಲ್ಲದ ಪ್ರೀತಿಯಂತೂ ಇದ್ದೇ ಇದೆ. ಕಂಬಳದ ದಿನ ಕೋಣಕ್ಕೆ ಒಂದೆರಡು ಪೆಟ್ಟೂ ಹೊಡೆಯಬಹುದು ಆದರೆ ಇನ್ನುಳಿದ ದಿನಗಳಲ್ಲಿ ತಮ್ಮ ಸ್ವಂತ ಮಕ್ಕಳಂತೆ ಅವುಗಳಿಗೆ ಯಾವುದಕ್ಕೂ ಕಡಿಮೆಯಾಗದಂತೆ ಅವುಗಳನ್ನು ಸಾಕುತ್ತಾರೆ. ಅವುಗಳನ್ನು ಸಾಕುವುದಕ್ಕಾಗಿಯೇ ಲಕ್ಷಾಂತರ ರೂ ಖರ್ಚು ಮಾಡುತ್ತಾರೆ.  ಬೇಕಾದರೆ ದಕ್ಷಿಣಕನ್ನಡದಲ್ಲಿ ಕೋಣಗಳನ್ನು ಸಾಕುತ್ತಿರುವವರ ಹಟ್ಟಿಗೊಮ್ಮೆ ಭೇಟಿ ಕೊಟ್ಟು ನೋಡಿ. ನಿಮಗೆಯೇ ಆಶ್ಚರ್ಯವಾದೀತು, ಆ ರೀತಿಯಲ್ಲಿ ಆ ಕೋಣಗಳನ್ನು ಸಾಕಲಾಗುತ್ತದೆ.

ಜಲ್ಲಿಕಟ್ಟಿಗೆ ನಿಷೇಧ ಹೇರಿದಂತೆ ಕಂಬಳಕ್ಕೂ ಈಗ ನಿಷೇಧ ಹೇರಲಾಗಿದೆ. ಕಂಬಳದ ಮೇಲೆ ಹಿಂದಿನಿಂದಲೂ ನಿಷೇಧದ ತೂಗುಗತ್ತಿ ನೇಲುತ್ತಿತ್ತು. ಕಳೆದ ವರ್ಷವೂ ಒಮ್ಮೆ ನಿಷೇಧ ಹೇರಿ ಬಳಿಕ ಷರತ್ತುಬದ್ಧ ಕಂಬಳ ನಡೆಸಲು ಅನುಮತಿ ನೀಡಲಾಗಿತ್ತು. ಈ ಬಾರಿ ಅದಕ್ಕೂ ಕಲ್ಲು ಹಾಕಿರುವ ಸುಪ್ರೀಂ ಕೋರ್ಟ್ ಕಂಬಳವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇಲ್ಲೂ ಕೂಡಾ ಕಂಬಳಕ್ಕೆ ಅಡ್ಡಲಾಗಿ ನಿಂತಿರುವುದು ಪೆಟಾ.

ಪೆಟಾದ ಮೂಲ ಉದ್ದೇಶ ಪ್ರಾಣಿಗಳ ಮೇಲೆ ಆಗುತ್ತಿರುವ ಹಿಂಸೆಯನ್ನು ತಡೆಯುವುದು ಆಗಿದೆ. ಒಳ್ಳೆಯದೇ ಅನ್ನೋಣ. ಆದರೆ ಯಾವ ದೃಷ್ಟಿಕೋನದಲ್ಲಿ ಎನ್ನುವುದು ಬಹಳ ಮುಖ್ಯವಾಗುತ್ತದೆ. ‘ಪ್ರಾಣಿ ದಯಾ ಸಂಘ’ಗಳಿಗೆ ದಿನನಿತ್ಯ ಕಡಿದು ತಿನ್ನಲ್ಪಡುವ ಕೋಳಿಗಳ ಮೇಲೆ ದಯೆ ಮೂಡದೇ ಕೋಳಿ ಅಂಕದಲ್ಲಿ ಗಾಯಗೊಳ್ಳುವ ಕೋಳಿಗಳ ಮೇಲೆ ದಯೆ ಮೂಡಿದರೆ ಅದಕ್ಕರ್ಥವುಂಟೇ? ಕೋಳಿ ಅಂಕದಲ್ಲಿ ಗಾಯಗೊಂಡು ಸಾವಿಗೀಡಾಗುವ ಕೋಳಿಗಳೂ ಸೇರುವುದು ಮನುಷ್ಯನ ಹೊಟ್ಟೆಯನ್ನೇ, ಅಂಗಡಿಯಲ್ಲಿ ಸಿಗುವ ಕೋಳಿ ಮಾಂಸ ಸೇರುವುದೂ ಮನುಷ್ಯನ ಹೊಟ್ಟೆಯನ್ನೇ. ಹಾಗಾಗಿ ಬರೀ ಕೋಳಿ ಅಂಕವನ್ನು ನಿಷೇಧಿಸಿದರೆ ಅದು ಹೇಗೆ ಪ್ರಾಣಿಗಳ ಮೇಲೆ ದಯೆ ಎಂದಾಗುತ್ತದೆ? ದಿನಂಪ್ರತೀ ಕಸಾಯಿಖಾನೆಯಲ್ಲಿ ಸಾವಿಗೀಡಾಗುತ್ತಿರುವ ದನಗಳ ಮೇಲೆ ಮೂಡದ ದಯೆ ಜಲ್ಲಿಕಟ್ಟಿನಲ್ಲಿ ಭಾಗವಹಿಸುವ ಹೋರಿಗಳ ಮೇಲೆ ಏಕೆ? ಕುದುರೆ ರೇಸಿನಲ್ಲಿ ಕುದುರೆಗಳೂ ಏಟು ತಿನ್ನುತ್ತಿವೆ, ಮನುಷ್ಯನ ಮನರಂಜನೆಗಾಗಿ ಅವುಗಳೂ ಬಳಕೆಯಾಗುತ್ತಿವೆ.  ಅವುಗಳ ಬಗ್ಗೆ ಚಕಾರವೆತ್ತದ ಪೆಟಾಕ್ಕೆ ಕಂಬಳದ ಬಗ್ಗೆ ಮಾತನಾಡಲು ಯಾವ ನೈತಿಕತೆಯಿದೆ?

ಕೋರ್ಟು ಕೂಡ ಈ ರೀತಿಯ ವಿಚಾರಗಳಲ್ಲಿ ತನ್ನ ದ್ವಂದ್ವ ನೀತಿಯನ್ನು ಕಾಲಕಾಲಕ್ಕೆ ತೋರಿಸುತ್ತಾ ಬಂದಿದೆ. ನ್ಯಾಯ ಎಲ್ಲರಿಗೂ ಒಂದೇ ಎನ್ನುವುದಾದರೆ ಪ್ರಾಣಿಹಿಂಸೆಯ ನೆಪದಲ್ಲಿ ಜಲ್ಲಿಕಟ್ಟು, ಕಂಬಳವನ್ನು ನಿಷೇಧಿಸಿದಂತೆ, ಕುದುರೆ ರೇಸ್, ಗೋಹತ್ಯೆಯನ್ನೂ, ಮಾಂಸಾಹಾರವನ್ನೂ  ಸಹ ಸಂಪೂರ್ಣವಾಗಿ ನಿಷೇಧಿಸಬೇಕು. ಹಬ್ಬದ ನೆಪದಲ್ಲಿ  ಲಕ್ಷಾಂತರ ಕುರಿಗಳು, ಆಡುಗಳು ಕೊಲೆಗೀಡಾಗದಂತೆಯೂ ತಡೆಯಬೇಕು. ಅದೂ ಅಲ್ಲದೇ, ನಮ್ಮ ನ್ಯಾಯಾಲಯಗಳು, ಕಂಬಳ ಜಲ್ಲಿಕಟ್ಟುವಿನಂತಹ ಭಾವನಾತ್ಮಕ ವಿಷಯಗಳ ಕುರಿತು ಸ್ಪಷ್ಟ  ಅಭಿಪ್ರಾಯವನ್ನು ಇದುವರೆಗೂ ಹೇಳಿಲ್ಲ. ಒಮ್ಮೆ ನಿಷೇಧ ಮಾಡುವುದು, ಮತ್ತೊಮ್ಮೆ ಷರತ್ತು ಬದ್ಧ ಅನುಮತಿ ನೀಡುವುದು, ಮತ್ತೆ ಸಂಪೂರ್ಣ ನಿಷೇಧ ಮಾಡುವುದು. ಹೀಗೆ ಕೋರ್ಟ್ ಕೂಡ ಜನರ ಜೊತೆಗೆ ಭಾವನತ್ಮಕ ಆಟವಾಡುತ್ತಾ ಸಾಗಿರುವುದು ವಿಪರ್ಯಾಸದ ಸಂಗತಿ.

 

ನಮ್ಮ ಸೋ ಕಾಲ್ಡ್ ಜನಪ್ರತಿನಿಧಿಗಳೂ ಅಷ್ಟೇ.. ತಮಿಳುನಾಡಿನ ಜನಪ್ರತಿನಿಧಿಗಳಂತಹಾ ಇಚ್ಚಾಶಕ್ತಿಯನ್ನು ಇದುವರೆಗೆ ಒಬ್ಬರೂ ತೋರಿಸಿಲ್ಲ.  ಪನ್ನೀರ್ ಸೆಲ್ವಂರನ್ನೇ ನೋಡಿ, ಮರೀನಾ ಬೀಚ್’ನಲ್ಲಿ ಪ್ರತಿಭಟನಾಕಾರರಿಗೆ ಎರಡು ದಿನದಲ್ಲಿ ಜಲ್ಲಿಕಟ್ಟು ಕುರಿತಾದ ಬಿಕ್ಕಟ್ಟನ್ನು ಬಗೆಹರಿಸುತ್ತೇನೆ ಎಂದು ಹೇಳಿ ದೆಹಲಿಗೆ ಬಂದ ಸೆಲ್ವಂ  ಹೆಚ್ಚು ಕಡಿಮೆ ಎರಡು ದಿನದಲ್ಲಿ ಎಲ್ಲಾ ಬಿಕ್ಕಟ್ಟನ್ನು ಪರಿಹರಿಸಿ ಸರಕಾರದ ವತಿಯಿಂದಲೇ ಜಲ್ಲಿಕಟ್ಟನ್ನು ನಡೆಸಿಕೊಟ್ಟರು. ಸೆಲ್ವಂ ತೋರಿಸಿದ ಒಂದು ಪರ್ಸೆಂಟ್ ಇಚ್ಚಾಶಕ್ತಿಯನ್ನಾದರೂ ನಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯ ತೋರಿಸಿದರಾ? ಸಿದ್ಧರಾಮಯ್ಯರಂತೆ “ಕಂಬಳ ನಡೆಸುವುದಕ್ಕೆ ನಮ್ಮ ಮುಂದೆ ಯಾರೂ ಪ್ರಸ್ತಾಪ ಮಾಡಿಲ್ಲ, ಮಾಡಿದರೆ ಪರಿಶೀಲಿಸಲಾಗುವುದು” ಅಂತ ಸೆಲ್ವಂ ಕೂಡಾ ಹೇಳಿ ಹಾಯಾಗಿರುತ್ತಿದ್ದರೆ ಇವತ್ತು ಜಲ್ಲಿಕಟ್ಟಿಗೆ ಸುಗ್ರೀವಾಜ್ಞೆ ಮೂಲಕ ಅನುಮತಿ ಸಿಕ್ಕುತ್ತಿತ್ತಾ?  ಜನರು  ವಾರದಿಂದ ಬಾಯಿ ಬಡಿದುಕೊಳ್ಳುತ್ತಿದ್ದರೂ ಸಹ ಇಲ್ಲಿನ ಯಾವುದಾದರೂ ಜನಪ್ರತಿನಿಧಿ ಬಾಯಿ ಬಿಟ್ಟಿದ್ದಾರಾ?

ಆದರೆ ಅವರಿವರನ್ನು ದೂರಿಕೊಂಡಿರುವುದಕ್ಕೆ ಇದು ಸೂಕ್ತ ಸಮಯವಲ್ಲ. ನಮಗೆ ಇದು ಬೇಕು ಅಂತಾದರೆ ನಾವೇ ಚಳಿ ಬಿಟ್ಟು ಏಳಬೇಕಾಗಿದೆ.   ಬರೀ ಫೇಸ್ಬುಕ್ಕಿನ #SaveKambala #KambalaBeku ಹೋರಾಟಕ್ಕಷ್ಟೇ ನಮ್ಮನ್ನು ಸೀಮಿತಗೊಳಿಸದೆ ಮನೆಯಿಂದ ಆಚೆ ಬರಬೇಕಿದೆ.   ಈ ವಿಚಾರದಲ್ಲಿ ಸ್ವಯಂಪ್ರೇರಿತರಾಗಿ ಹೋರಾಟಕ್ಕಿಳಿದ ತಮಿಳರು ನಮಗೆ ಮಾದರಿಯಾಗಬೇಕಿದೆ. ತಮಿಳರು  ಮರೀನಾ ಬೀಚ್’ನಲ್ಲಿ ಲಕ್ಷ ಸಂಖ್ಯೆಯಲ್ಲಿ  ಸೇರಿದಂತೆ ಮಂಗಳೂರಿಗರು ಪಣಂಬೂರ್ ಬೀಚ್’ನಲ್ಲಿ ಸೇರಬೇಕಾಗಿದೆ. ಇವತ್ತು ಬರೀ ಕಂಬಳವನ್ನು ನಿಷೇಧಿಸಿ ಎಂದವರು ನಾಳೆ ನಮ್ಮ ಹಬ್ಬ ಹರಿದಿನಗಳನ್ನು ನಿಷೇಧಿಸಿ ಎನ್ನಬಹುದು. ಒಂದಲ್ಲಾ ಒಂದು ಕಾರಣವನ್ನು ಹಿಡಿದುಕೊಂಡು ಜಾತ್ರೆ, ಭೂತಕೋಲ ಮುಂತಾದವನ್ನು ನಿಷೇಧಿಸಬೇಕೆಂದು ಕೋರ್ಟ್ ಮೆಟ್ಟಿಲೇರಬಹುದು.  ಅದಾಗಬಾರದು ಎಂದಾದರೆ ನಾವು ಈ ಕೂಡಲೇ ಹೋರಾಟವನ್ನು ಆರಂಭಿಸಲೇಬೇಕು. ಯಾರು ಬೆಂಬಲಿಸುತ್ತಾರೋ, ಯಾರು ಬಿಡುತ್ತಾರೋ.. ಅದು ಮತ್ತಿನದ್ದು..  ಬರೀ ಕೋರ್ಟ್ ತೀರ್ಪಿನ ಕುರಿತು ಮಾತ್ರವಲ್ಲದೆ ಕೇವಲ ಒಂದು ಸಮುದಾಯವನ್ನು ಮಾತ್ರ ಟಾರ್ಗೆಟ್ ಮಾಡಿ ಪ್ರಾಣಿಗಳ ಮೇಲೆ ದಯೆ ತೋರುತ್ತಿರುವ ಪೆಟಾ ವಿರುದ್ಧವೂ ಹೋರಾಡಿ ಅದರ ಡಬ್ಬಲ್ ಸ್ಟಾಂಡ’ರ್ಡ್’ನ್ನು ಬಟಾಬಯಲು ಮಾಡಬೇಕಿದೆ. ಈ ನಿಟ್ಟಿನಲ್ಲಿ ನಮಗೆ ತಮಿಳರೇ ಮಾದರಿಯಾಗಲಿ.

 

#Kambala #KambalaBeku #SaveKambala #SaveCulture #Jallikattu

 

ಚಿತ್ರಕೃಪೆ: ಪ್ರತೀಕ್ ಪುಂಚತ್ತೋಡಿ

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!