ಅಂಕಣ

ಗ್ರಸ್ತ – ಹುಟ್ಟು ಮುಖ್ಯವಲ್ಲ, ಹುಟ್ಟಿನ ಪರಿಣಾಮ ಮುಖ್ಯ.

ಕಳೆದ ಒಂದೆರಡು ತಿಂಗಳಿನಿಂದ ಬರುತ್ತಿರುವ ಕನ್ನಡದ ಒಳ್ಳೊಳ್ಳೆ ಚಲನ ಚಿತ್ರಗಳು ಕನ್ನಡಿಗರ ಮನಸ್ಸನ್ನು ಗೆಲ್ಲುವಲ್ಲಿ‌ ಯಶಸ್ವಿಯಾಗಿವೆ. ಹಲವಾರು ದಿನಗಳಿಂದ ಒಳ್ಳೆ ಸಿನೆಮಾಗಳಿಗೆ ಕಾದು ಕುಳಿತಿದ್ದ ಮನಗಳಿಗೆ ಅಂತೂ ಒಂದಷ್ಟು ವಿಭಿನ್ನ ಸಿನೆಮಾಗಳು ತೃಪ್ತಿ ನೀಡಿದೆ. ಅಂತೆಯೇ ಸಾಹಿತ್ಯಾಸಕ್ತರಿಗೂ ಈಗ ಹಬ್ಬದೂಟದ ಸಂಭ್ರಮ.  ಹೌದು ಹಲವಾರು ಪುಸ್ತಕಗಳು ಕನ್ನಡಿಗರ ಸಾಹಿತ್ಯ ತೃಷೆಯನ್ನು ನೀಗಿಸಲು ಕೈ ಬೀಸಿ ಕರೆಯುತ್ತಿವೆ. ಉತ್ತರಕಾಂಡ ಸಾಹಿತ್ಯಾಸಕ್ತರಲ್ಲಿ ಹುಟ್ಟಿಸಿದ ಹೊಸ ಅಲೆಯನ್ನು ಮರೆಯಲಾದೀತೆ. ಇದರ ಸಾಲಿಗೆ ಸೇರಿಕೊಳ್ಳುವ ಇನ್ನೊಂದು ಪುಸ್ತಕವೇ “ಗ್ರಸ್ತ”.  “ಹುಟ್ಟು ಮುಖ್ಯವಲ್ಲ, ಹುಟ್ಟಿನ ಪರಿಣಾಮ ಮುಖ್ಯ” ಎಂಬ ಸಾಲುಗಳಿಂದಲೇ ಓದುಗನ ಮನಸೆಳೆವ ಗ್ರಸ್ತ ವಿಜ್ಞಾನ ಹಾಗೂ ತತ್ವಜ್ಞಾನಗಳ ನಡುವೆ ಸಾಗುವ ದೋಣಿ. ಕನ್ನಡ ಸಾಹಿತ್ಯ ನೆಲಕ್ಕಚ್ಚುತ್ತಿದೆಯೇನೋ ಎಂಬ ಭಯ ಈಗ ಮರೆಯಾಗಿ ಹೊಸತೊಂದು ವಿಶ್ವಾಸ ಮೂಡಿದಂತಾಗಿದೆ. ಕನ್ನಡ ಸಾಹಿತ್ಯ ಉದಯೋನ್ಮುಕ ಯುವ ಬರಹಗಾರರಿಂದ ಮತ್ತೆ ತನ್ನ ಬಾಹುಗಳನ್ನು ಎಲ್ಲೆಡೆಯೂ ಚಾಚುತ್ತಿದೆ.

ಕರಣಂ ಪವನ್ ಪ್ರಸಾದ್ ಅವರ ಹೆಸರು ಕೇಳಿದ ಮರುಕ್ಷಣವೇ ನನಗೆ ನೆನಪಾಗೋದು ಅವರ “ಕರ್ಮ” ಕಾದಂಬರಿ. ಮನದ ಮೂಲೆಯಲ್ಲಿ ಇನ್ನೂ ಈ ಕರ್ಮ ಕಾದಂಬರಿಯಲ್ಲಿ ಬರುವ ಪಾತ್ರಗಳು ಹಾಗೆ ಉಳಿದುಕೊಂಡಿವೆ. ಕರ್ಮ ಕಾದಂಬರಿ ನಿಜವಾಗಿಯೂ ನಾನು ಓದಿದ ಉತ್ತಮ ಕಾದಂಬರಿಗಳಲ್ಲಿ ಒಂದು. ತಮ್ಮ ಮೊದಲ ಪುಸ್ತಕದಲ್ಲೇ ಕರಣಂ ಪವನ್ ಪ್ರಸಾದ್ ಓದುಗನ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ತದನಂತರ ಬಂದ “ನನ್ನಿ” ಕಾದಂಬರಿಯೂ ವಿಭಿನ್ನ ಚಿಂತನೆಯನ್ನೊಳಗೊಂಡ ಕಾದಂಬರಿ. ಈ ಎರಡೂ ಪುಸ್ತಕಗಳನ್ನು ಓದಿದ ನಂತರ ತಿಳಿಯುವುದೇನೆಂದರೆ, ಕರಣಂ ಪವನ್ ಪ್ರಸಾದ್ ಅವರ ಅಧ್ಯಯನಶೀಲತೆ. ಅದೆಷ್ಟೋ ವಿಷಯಗಳ ರಿಸರ್ಚ್ ಮಾಡಿದ ನಂತರ ಹೊರ ಬಂದಂತಿರುತ್ತವೆ ಕಾದಂಬರಿಗಳು. ಹಾಗಾಗಿ ಅವುಗಳು ನಮ್ಮಲ್ಲಿ ಮೂಡಿಸುವ ಚಿಂತನೆಗಳು ಬಹಳಷ್ಟು. “ಕರ್ಮ” ಹಾಗೂ “ನನ್ನಿ” ಓದಿ ಮುಗಿಸಿದ ನಂತರ ಮತ್ತೊಂದು ಪುಸ್ತಕಕ್ಕಾಗಿ ಬಹಳಾ ದಿವಸ ಕಾದು ಕುಂತದ್ದೇನೋ ಸತ್ಯ. ಹಲವಾರು ಬಾರಿ ಪವನ್ ಅವರ ಬಳಿ ಯಾವಾಗ ಮುಂದಿನ ಪುಸ್ತಕ ಎಂದು ಕೇಳಿದ್ದೂ ಆಯ್ತು. ಸದ್ಯದಲ್ಲೇ ಎಂಬ ಉತ್ತರವನ್ನು ಇಟ್ಟುಕೊಂಡು ಕಾದಿದ್ದಾಯ್ತು.

ಅಂತೂ ಗ್ರಸ್ತ ಕಾದಂಬರಿ ಕೈಗೆ ಸಿಕ್ಕಿ, ಓದಿ ಮುಗಿಸಿದ್ದಾಯ್ತು. ಪುಸ್ತಕ ಓದಿ ಮುಗಿಸಿ ಮುಖಪುಟವನ್ನು ನೋಡಿದಾಗ ನೆನಪಾಗೋದು ಅವಿನಾಶ, ರೇಖಾ ಹಾಗೂ ಅದಿತಿ. ತಾನು ಕಾರಣವಲ್ಲದಿದ್ದರೂ ಬಿಡಿಸಲಾಗದ ಬಂಧನದೊಳಗೆ ಸಿಕ್ಕಿಹಾಕಿಕೊಳ್ಳುವ ಅವಿನಾಶನ ಪಾತ್ರ ಮನಸ್ಸಿನಲ್ಲಿ ಕೂತು ಬಿಡುತ್ತದೆ. ವಿಜ್ಞಾನ ತತ್ವಜ್ಞಾನದ ವಿಚಾರವಾಗಿ ಅವಿನಾಶನಲ್ಲಿ ಹುಟ್ಟುವ ದ್ವಂದತೆ ಹಾಗೂ ಅವನು ಕಂಡುಕೊಳ್ಳುವ ಉತ್ತರ ಕೆಲವೊಮ್ಮೆ ನನ್ನ ಪ್ರಶ್ನೆಗಳಿಗೂ ಉತ್ತರ ಸಿಕ್ಕಂತಾಗಿ ನೆಮ್ಮದಿಯೆನಿಸಿದ್ದು ಸತ್ಯ. ಕಾದಂಬರಿಯಲ್ಲಿ ಬಂದುಹೋಗುವ ಹಲವಾರು ವಿಜ್ಞಾನ ಹಾಗೂ ತತ್ವಜ್ಞಾನಕ್ಕೆ ಸಂಬಂಧಿಸಿದ ಸಾಲುಗಳು ಓದುಗನನ್ನು ದೊಡ್ಡದೊಂದು ಯೋಚನಾ ಲಹರಿಯ ಒಳಗೆ ತೇಲಿಸಿಬಿಡುತ್ತವೆ. “ಹುಟ್ಟಿಗೆ ಕಾರಣ ಯಾರೆಂದು ತಿಳಿದಿದೆ, ಆದರೆ ಸಾವಿಗೆ ಕಾರಣ ಯಾರೆಂದು ತಿಳಿದಿಲ್ಲ” ಎಂಬ ಸಾಲುಗಳು ಮನುಷ್ಯನು ತಿಳಿದುಕೊಳ್ಳಲಾಗದ ಹಲವಾರು ವಿಷಯಗಳನ್ನು ತನ್ನಲ್ಲಿ ತುಂಬಿಕೊಂಡಿವೆ. ಆತ್ಮ ಹಾಗೂ ವಿದ್ಯುತ್ ಶಕ್ತಿಯನ್ನು ಹೋಲಿಸಿ, ದೇಹ ಹಾಗು ಆತ್ಮದ ನಡುವೆ ಇರುವ ಸಂಬಂಧವನ್ನು ವಿವರಿಸಿರುವ ವಿಧಾನ ಬಹಳ ಚೆನ್ನಾಗಿದೆ. ಈ ಹೋಲಿಕೆಯನ್ನೆ ಆಧಾರವಾಗಿಟ್ಟುಕೊಂಡು ಅಧ್ಯಯನ ಮಾಡಿದರೆ ಹೊಸ ಹೊಸ ವಿಷಯಗಳು ಸಿಕ್ಕುವಲ್ಲಿ ಸಂದೇಹವಿಲ್ಲ.

ತಾಯಿಯ ಧೈರ್ಯ ಹಾಗೂ ಸ್ವಾಭಿಮಾನದ ಬದುಕನ್ನು ಕಂಡ ಅವಿನಾಶನಿಗೆ ರೇಖಾ ತನ್ನ ಮೇಲೆ ಸುಳ್ಳು ಆರೋಪವನ್ನು ಹೊರಿಸಿದ್ದಾಳೆ ಎಂದು ತಿಳಿದಿದ್ದರು ರೇಖಾಳನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಅವರಿಬ್ಬರ ನಡುವೆ ಮದುವೆ ನಡೆಯದಿದ್ದರೂ ಗಂಡ ಹೆಂಡತಿಯ ಪಾತ್ರ ವಹಿಸಿ ಬದುಕು ನಡೆಸಬೇಕಾಗುವ ಸಂದರ್ಭ ಬಂದೊದಗುತ್ತದೆ. ಎಲ್ಲವನ್ನೂ ತಿಳಿದಿದ್ದರೂ ಅಮ್ಮನ ಜೀವನವನ್ನು ಕಂಡ ಅವಿನಾಶ ಕೊನೇವರೆಗೂ ರೇಖಾಳ ಜೊತೆ ಏನನ್ನು ಹೇಳಿಕೊಳ್ಳದೆ ಇರುವ ಸಂದರ್ಭ ನಿಜವಾಗಿಯೂ ಜೀವನದ ಕೆಲವೊಂದು ಸಂದಿಗ್ಧ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಇದರ ಜೊತೆಗೆ ಭೌತಶಾಸ್ತ್ರದ ಕುರಿತಾಗಿ ಅವಿನಾಶನು ನಡೆಸುವ ಅಧ್ಯಯನ ಓದುಗರನ್ನು ಹೊಸ ಚಿಂತನೆಗಳತ್ತ ಸೆಳೆಯುತ್ತದೆ. ತಂತ್ರಜ್ಞಾನ ಕೇವಲ ವಿಜ್ಞಾನದ ವಿಷಯವನ್ನು ಬಳಸಿಕೊಂಡು ಬೆಳೆಯುತ್ತಿರುವ ಮಜಲು ಅಷ್ಟೇ. ತಂತ್ರಜ್ಞಾನ ಮಾತ್ರ ಬೆಳೆಯುತ್ತಿದೆ, ವಿಜ್ಞಾನ ಬೆಳೆಯುತ್ತಿಲ್ಲ. ಶಕ್ತಿಯನ್ನು ಬಳಸಿಕೊಂಡು ಹಲವಾರು ತಂತ್ರಜ್ಞಾನವನ್ನು ಬೆಳೆಸುತ್ತಿದ್ದೇವೆ ಹೊರತು, ಶಕ್ತಿಯ ಹೊಸ ಮೂಲಗಳನ್ನು ಕಂಡುಹಿಡಿಯುವ ಪ್ರಯತ್ನವನ್ನು ಮಾಡುತ್ತಿಲ್ಲ. ಹೌದು ವಿಜ್ಞಾನ ಕ್ಷೇತ್ರದಲ್ಲಿ ನಾವಿನ್ನು ಬಹಳಷ್ಟು ಗಂಭಿರವಾಗಿ ಅಧ್ಯಯನ ಮಾಡಬೇಕಾದ ವಿಷಯಗಳಿವೆ ಎಂಬ ವಾಸ್ತವವನ್ನು ಕರಣಂ ಪವನ್ ಪ್ರಸಾದ್ ಅವರು ಅವಿನಾಶನ ಮೂಲಕ ನೆನಪಿಸಿದ್ದಾರೆ. ನಮ್ಮ ಪರಂಪರೆಯಲ್ಲಿ, ವೇದ ಉಪನಿಷತ್’ಗಳಲ್ಲಿ, ಎಲ್ಲವನ್ನೂ ಯಾವಾಗಲೋ ವಿವರಿಸಿಬಿಟ್ಟಿದ್ದಾರೆ ಎಂದು ಹೇಳಿಕೊಳ್ಳುವುದು ಅದೆಷ್ಟರ ಮಟ್ಟಿಗೆ ಸರಿ ಎಂಬುದು ಈ ಕಾದಂಬರಿ ಓದಿದ ಮೇಲೆ ನಿಮಗೆ ತಿಳಿಯುತ್ತದೆ. ಭೌತಶಾಸ್ತ್ರದ ವಿಷಯಗಳಾದ ಕ್ವಾಂಟಮ್ ಸಿದ್ಧಾಂತ ಹಾಗೂ ಮೆಟಾಫಿಸಿಕ್ಸ್ ಜೊತೆ ಜೊತೆಗೆ ಉಪನಿಷದ್’ಗಳ ವಿಚಾರಗಳನ್ನು ಅವಿನಾಶ ತರ್ಕ ಮಾಡುತ್ತಾನೆ. ಕಾದಂಬರಿಯಲ್ಲಿ ಈ ವಿಷಯವಾಗಿ ಬರುವ ಒಂದು ಸಾಲು, “ನಮ್ಮ ಪುರಾತನ ಜ್ಞಾನ ಹೆಚ್ಚಾಗಿ ಅಭೌತಿಕವಾದ್ದನ್ನು ಸಾಕ್ಷಾತ್ಕರಿಸಿಕೊಳ್ಳಲು ಉಪಯೋಗವಾಯಿತು. ಅದನ್ನೇ ನಾವು ಮೆಟಾಫಿಸಿಕ್ಸ್, ಕ್ವಾಂಟಮ್ ಮೆಕ್ಯಾನಿಕ್ಸ್ ಅಂತೀವಿ ಈಗ”.

ರೇಖಳ ಮಗಳು ಅದಿತಿಯ ಪಾತ್ರ ಒಂದೊಂದು ಭಾಗದಲ್ಲೂ ವಿಭಿನ್ನ ನಿಲುವನ್ನು ಪಡೆದುಕೊಂಡು ಕೊನೆಗೆ ಪ್ರಕಟಗೊಳ್ಳುವ ಸತ್ಯದಿಂದಾಗಿ ಅದಿತಿಯ ಹುಟ್ಟಿನ ಮೂಲವನ್ನು ಹುಡುಕುವ ಓದುಗನಿಗೆ ಏನೋ ಒಂಥರಾ ನೆಮ್ಮದಿ ಸಿಕ್ಕರೂ, ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ತಾಯಿ ತೀರಿಕೊಂಡ ನಂತರದ ದಿನಗಳಲ್ಲಿ, ಪ್ರೊಫೆಸರ್ ಗೋಪಿನಾಥರ ದಾಕ್ಷಿಣ್ಯಕ್ಕೆ ಒಳಗಾಗುವ ಅವಿನಾಶನ ಬಗ್ಗೆ ಕರುಣೆಯುಂಟಾದರೂ ಗೋಪಿನಾಥರ ಪಾತ್ರ ಸಂದರ್ಭಕ್ಕನುಸಾರವಾಗಿ ಬದಲಾಗುತ್ತಾ ಹೋಗುತ್ತದೆ. ಕೆಲಸ ಹಾಗು ಬದುಕಿನ ವಿಷಯವಾಗಿ ಪಾತ್ರಗಳಲ್ಲಿ ಮೂಡುವ ಏಕತಾನತೆ  ಪ್ರತಿಯೊಬ್ಬ ವ್ಯಕ್ತಿಯನ್ನೂ ಬದುಕಿನ ಯಾವುದಾದರೂ ಒಂದು ಹಂತದಲ್ಲಿ ಆವರಿಸುವುದು ಸತ್ಯ ಸಂಗತಿ.

ಹುಟ್ಟಿನ ಅರ್ಥವನ್ನು ಹಾಗೂ ಪರಿಣಾಮವನ್ನು ಹುಡುಕುತ್ತಾ ಹೋಗುವ ಅವಿನಾಶ ಕೊನೆಯಲ್ಲಿ ಹೇಳುವ ಸಾಲು ಓದುಗನಲ್ಲಿ ದೊಡ್ಡದೊಂದು ಸಂಚಲನೆಯನ್ನು ಮೂಡಿಸುತ್ತದೆ. “ಹುಟ್ಟುವಾಗ ತಾಯನ್ನು ನರಳಿಸಿ, ಮಾತು ಹೊರಡದೆ ಜೀವವೇ ನರಳಿ, ದೇಹ ಬಲಿತಾಗ ಕಾಮಕ್ಕೆ ನರಳಿ, ಆ ಬಂಧ ಬಿಡಿಸಲಾಗದೆ ನರಳಿ, ಕೊನೆಗೂ ಸಾವಿನಲ್ಲಿ ನರಳುತ್ತೇವೆ. ಈ ನರಳಿಕೆಯನ್ನೇ ಬುದ್ಧ ಶೂನ್ಯ ಎಂದದ್ದು. ಹುಟ್ಟು ಎಂಬುದೇ ನರಳಿಕೆ. ಹುಟ್ಟಿದರೆ ತಾನೇ ಸಾವು. ಅದಕ್ಕಾಗಿಯೇ ಹುಟ್ಟಲೇಬಾರದು. ಪರಬ್ರಹ್ಮನಲ್ಲಿ ನರಳಿಕೆಯಿಲ್ಲ. ಏಕೆಂದರೆ ಪರಬ್ರಹ್ಮ ಹುಟ್ಟೇ ಇಲ್ಲ”.

ಒಟ್ಟಿನಲ್ಲಿ ಹೇಳುವುದಾದರೆ “ಗ್ರಸ್ತ” ಸಾಹಿತ್ಯಾಸಕ್ತರಿಗೆ ಬಹಳಷ್ಟು ವಿಚಾರ ಹಾಗೂ ಚಿಂತನೆಗಳನ್ನು ನೀಡುವಲ್ಲಿ ಸಂದೇಹವಿಲ್ಲ. ಕರಣಂ ಪವನ್ ಪ್ರಸಾದ್ ಅವರು ತಮ್ಮ ಕಾದಂಬರಿಗಳಿಗೆ ಇಡುವ ಹೆಸರುಗಳೇ ವಿಭಿನ್ನ ಸೃಜನಶೀಲತೆಯನ್ನು ಪ್ರತಿಬಿಂಬಿಸುತ್ತವೆ. ಗ್ರಸ್ತ ಕಾದಂಬರಿ ಓದಿ ಮುಗಿಸಿದ ನನಗೆ ಪವನ್ ಅವರ ಬಳಿ ಕೇಳಬೇಕೆಂದು ಮೂಡುವ ಪ್ರಶ್ನೆ ಮುಂದಿನ ಪುಸ್ತಕ ಯಾವುದೆಂದು. ಹಾಗೂ ಇನ್ಯಾವ ವಿಷಯದಲ್ಲಿ ಓದುಗನನ್ನು ಆಳವಾದ ಚಿಂತನೆಯತ್ತ ಕರೆದುಕೊಂಡು ಹೋಗುವಿರಿ ಎಂದು. ಇದೇ ರೀತಿ ವಿಭಿನ್ನ ಹಾಗೂ ವಿಶಿಷ್ಟ ಪುಸ್ತಕಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡುತ್ತಿರಿ ಎಂಬುದೆ ನನ್ನ ಹಾಗೂ ಪ್ರತಿಯೊಬ್ಬ ಓದುಗನ ಆಶಯ.

Facebook ಕಾಮೆಂಟ್ಸ್

ಲೇಖಕರ ಕುರಿತು

Manjunath Madhyasta

ಹೆಸರು ಮಂಜುನಾಥ್ ಮಧ್ಯಸ್ಥ. ಓದಿದ್ದು ವಿಜ್ಞಾನ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ. ಸಾಹಿತ್ಯ ಹಾಗೂ ಅಧ್ಯಾತ್ಮದಲ್ಲಿ ಬಹಳ ಆಸಕ್ತಿ. ಬರೆಯೋದು ನೆಚ್ಚಿನ ಹವ್ಯಾಸ. ಭೌತಶಾಸ್ತ್ರ ಹಾಗೂ ಖಗೋಳ ಶಾಸ್ತ್ರ ನನ್ನ ನೆಚ್ಚಿನ ವಿಷಯಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!