ಅಂಕಣ

ಕೃತಿ ಬಿಡುಗಡೆಯೋತ್ತರ ಕಾಂಡ

ಕೊಂಡು ಓದುವವರ ಸಂಖ್ಯೆ ಕಂಡಾಪಟ್ಟೆ ಕಡಿಮೆಯಾಗಿದೆ ಎಂಬ ಆತಂಕದ ನಡುವೆಯೇ ಆಗೀಗ ಸಾಮಾಜಿಕ ತಾಣಗಳಲ್ಲೂ ಓದಿನ ಬಗ್ಗೆ ಗಂಭೀರ ಚರ್ಚೆ ನಡೆಯುವುದಿದೆ. ಇಷ್ಟದ ಪುಸ್ತಕ ಸಿಕ್ಕ ತಕ್ಷಣ ಅದರ ಪ್ರತಿಯ ಜೊತೆಗೊಂದು ‘ಸೆಲ್ಫಿ’ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದೂ ಇದೆ. ಇದೆಲ್ಲಾ ಪುಸ್ತಕಕ್ಕೆ ದೊರೆಯುವ ಉಚಿತ ಪ್ರಚಾರವೂ ಹೌದು. ಆದರೇನು ಮಾಡುವುದು ಕೆಲವು ಗೊಣಗುಟ್ಟಿಗಳಿಗೆ, ಅಲ್ಲೂ ಇಲ್ಲದ ಕೊಂಕು ತೆಗೆದು ತಮ್ಮ ನಾಲಾಯಕುತನ ಮೆರೆಯುವ ಮಂಕುಬುದ್ಧಿ. ಭೈರಪ್ಪನವರ ಕೃತಿಯ ಬಿಡುಗಡೆಯ ತರುವಾಯ ಈ ಎರಡೂ ಪ್ರಕ್ರಿಯೆ ಜೋರಾಗಿಯೇ ನಡೆಯುತ್ತದೆ.

‘ಮಾತಿಗಿಂತ ಕೃತಿಯೇ ಮೇಲು’ ಎಂಬ ನಾಣ್ಣುಡಿಗೆ ವಿರುದ್ಧವಾಗಿ ವರ್ತಿಸುವ ಕೆಲ ಸಾಹಿತಿಗಳೂ ಸಾರಸ್ವತ ಲೋಕದಲ್ಲಿದ್ದಾರೆ. ಅವರದ್ದು ಕೃತಿಯ ಕೊರತೆ, ಆದರೆ ಸದಾ ಮಾತಿನ ಕೊರೆತವಷ್ಟೇ!! ಭೈರಪ್ಪನವರ ಪುಸ್ತಕಗಳು ಕಾದ ಕಾವಲಿಯಿಂದ ಈಗಷ್ಟೇ ಎತ್ತಿ ಕೊಡುವ ಗರಿಗರಿಯಾದ, ಬಿಸಿ ಬಿಸಿ ದೋಸೆಯಂತೆ ದಾಖಲೆಯ ಮಾರಾಟವಾಗಿ ಹಲವು ಮುದ್ರಣಗಳನ್ನು ಕಾಣುತ್ತಿದ್ದರೆ ಕೆಲವರ ಹೊಟ್ಟೆಯಲ್ಲಿ ಉರಿಯೆದ್ದು ತಲೆಯ ಬೋಳು ಕಾದ ಕಾವಲಿಯಂತಾಗುವುದಿದೆ. ತಳಸ್ಪರ್ಶಿ ಚಿಂತನೆಯವರೆಂದು ಬೊಬ್ಬೆ ಹೊಡೆಯುತ್ತಿದ್ದವರೆಲ್ಲ ಅದ್ಯಾಕೋ ತಳ ಸೀದ ಪಾತ್ರೆಯಂತಾಗಿ ಇಲ್ಲದ ತಳಮಳ ಅನುಭವಿಸುತ್ತಾರೆ. ರಸಾಸ್ವಾದನೆಯ ಪ್ರಕ್ರಿಯೆಗಳೇ ಮೂಲ ದ್ರವ್ಯವಾಗಿರಬೇಕಾದ ಸಾಹಿತ್ಯದಲ್ಲೂ ವಿರಸದ ವೇದನೆ ಹಬ್ಬುವವರ ದೊಡ್ಡ ದಂಡು ಸಾಹಿತ್ಯದ ‘ದಂಡ’ನಾಯಕರಂತೆ ವರ್ತಿಸುತ್ತಿದ್ದಾರೆ. ಈ ಬಾರಿಯೂ ಅಷ್ಟೇ, ‘ಉತ್ತರಕಾಂಡ’ದ ಹೆಸರು ಕೇಳುತ್ತಲೇ ಕೆಲವರು ಕಾಂಡ ಕಡಿದ ಮರದಂತಾಗಿದ್ದರೆ, ಇನ್ನು ಕೆಲವರು ಕಾಂಡ ಕೊರೆಯುವ ಹುಳುಗಳಂತೆ ತಿರುಳನ್ನೇ ತೂತು ಮಾಡಲು ಪ್ರಯತ್ನಿಸುತ್ತಿದ್ದಾರೆ. ಅತ್ತ ಸಾಹಿತ್ಯಾಸಕ್ತರದ್ದು ‘ಉತ್ತರಕಾಂಡ’ವಾದರೆ ಇತ್ತ ಭೈರಪ್ಪ ದ್ವೇಷಿಗಳದ್ದು ಇಲ್ಲದ ಅನುಮಾನ ಹಾಗೂ ಸಲ್ಲದ ಪ್ರಶ್ನೆಗಳ ಕರ್ಮಕಾಂಡ.

 

ಓದುಗದೊರೆಗಳ ನಿರೀಕ್ಷೆಗೆ ಅನುಗುಣವಾಗಿ ಇರುವವನೇ ನಿಜವಾದ ಸಾಹಿತಿ ಆದರೆ ಓದುಗನನ್ನೇ ದೂರ ಮಾಡಿ ಅಧಿಕಾರದಲ್ಲಿರುವ ದೊರೆಯನ್ನು ಮೆಚ್ಚಿಸಲು ದರಕರಿಸುವ, ತಾವು ಮಾಡಿದ್ದಕ್ಕೆ ದಕ್ಕುವ ದರದ ದರ್ದಿಗೆ ಬೀಳುವ ಕೆಲವು ಸಾಹಿತಿಗಳು ಭೈರಪ್ಪನವರನ್ನು ಟೀಕಿಸುವಲ್ಲಿ ಪರಿಣತರು. ಇನ್ನು, ಒಳಗೇನಿದೆಯೆಂದು ನೋಡದೆ ಪುಸ್ತಕ ಕೊಂಡು ಓದುವುದೂ ಅಂಧಾಭಿಮಾನ ಎಂದವರ ಪ್ರಕಾರ, ಬಿಡುಗಡೆಯಾದ ಪುಸ್ತಕವನ್ನು ಪೂರ್ಣ ಸ್ಕ್ಯಾನ್ ಮಾಡಿ ಅದರೊಳಗೆ ಏನಿದೆಯೆಂದು ಓದುಗರಿಗೆ, ಕೊಳ್ಳುವ ಮುನ್ನವೇ ತಿಳಿಸುವ ವಿನೂತನ ಸ್ಕ್ಯಾನರ್’ಗಳನ್ನು ಕಂಡು ಹಿಡಿಯಬೇಕಾದೀತು. ಕೊಂಡು ಓದುವುದನ್ನೂ ಅಂಧಾಭಿಮಾನವೆಂದು ಕರೆಯುವ ದೃಷ್ಟಿಮಾಂದ್ಯರಿಗೆ, ಪುಸ್ತಕ ಖರೀದಿಸುವುದೇ ‘ಓದಿ ಅದರೊಳಗೆ ಏನಿದೆಯೆಂದು ತಿಳಿಯಲು’ ಎಂಬ ಸಣ್ಣ ಸತ್ಯ ಅರ್ಥವಾಗದೇ?! ಅಂಗಡಿಯ ಮುಂದೆ ಲೈನ್ ನಿಂತು ಖರೀದಿಸಿದವರಿಗಿಂತಲೂ ಆನ್’ಲೈನ್’ನಲ್ಲಿ ಬುಕ್ ಮಾಡಿ ಬುಕ್ ಪಡೆದುಕೊಂಡವರ ಸಂಖ್ಯೆಯೇ ಹೆಚ್ಚಂತೆ. ಇದೇ ಅಂಶವನ್ನು ಇಟ್ಟುಕೊಂಡು ಡಿಜಿಟಲ್ ಇಂಡಿಯಾ, ಮೋದಿಯ ಕ್ಯಾಶ್’ಲೆಸ್ ಕರೆ, ಬಂಡವಾಳಶಾಹಿ ಇನ್ನಿತ್ಯಾದಿ ಅಂಶಗಳಿಗೆ ಲಿಂಕ್ ಮಾಡಿ ವಿರೋಧಿಸುವ ಬಗೆ ಹೇಗೆ ಎಂಬ ಬಗ್ಗೆ ತೆರೆಮರೆಯಲ್ಲಿ ಭಾರಿ ಸಂಶೋಧನೆ ನಡೆಯುತ್ತಿರಬಹುದು.

 

ಭೈರಪ್ಪನವರ ಕಾದಂಬರಿ ಬಿಡುಗಡೆಯಾದರೆ ಸಿದ್ಧಾಂತಗಳಿಗೆ ಜೋತು ಬಿದ್ದವರ ಕೆಲವರ ಪೀಕಲಾಟ ಹೇಳತೀರದು. ಹೊರಗಡೆಯೆಲ್ಲಾ ದೂಷಣೆಯ ಧೂಳೆಬ್ಬಿಸುತ್ತಾ ಧೂರ್ತತನ ಮೆರೆದವರಿಗೂ ಕೊನೆಗೆ ಯಾರ ಗಮನಕ್ಕೂ ಬರದಂತೆ ಪುಸ್ತಕ ಖರೀದಿಸಿ ಕದ್ದುಮುಚ್ಚಿ ಓದಬೇಕಾದ ದುರವಸ್ಥೆ. ಓದಿ ಮೆಚ್ಚಲಲ್ಲದಿದ್ದರೂ ಕನಿಷ್ಟ ಇಲ್ಲದ ಹುಳುಕುಗಳನ್ನು ಹುಡುಕುವ ಕಾರಣಕ್ಕಾದರೂ ಹಾಗೆ ಮಾಡಲೇಬೇಕಾದ ಅನಿವಾರ್ಯ.

 

ಓವರ್ ಡೋಸ್: ನಮ್ಮಲ್ಲಿ ಸಾಹಿತಿಗಳು ಬೇಕಾದಷ್ಟಿದ್ದಾರೆ. ಅದರಲ್ಲಿ ‘ಬರೆಯುವ ಸಾಹಿತಿಗಳು’ ಹಲವರು, ಜನರು ಓದುವಂತೆ ಬರೆಯುವವರು ಕೆಲವರು ಹಾಗೂ ಜನರೇ ಮುಗಿಬಿದ್ದು ಖರೀದಿಸಿ ಓದುವಂತದ್ದನ್ನು ಬರೆಯುವವರು ಬೆರಳೆಣಿಕೆಯಷ್ಟು ಮಾತ್ರ!!

Facebook ಕಾಮೆಂಟ್ಸ್

ಲೇಖಕರ ಕುರಿತು

Sandesh H Naik

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!