ಅಂಕಣ

ಕೀಲಿ ಕೈಯನ್ನೆಸೆದು ಪರಿಣಿತರಿಗಾದರು ದಿಟವರಿಸೋ..!

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೧

ಕದಕಗಳಿಯನು ಬಿಗಿದು ಬೊಮ್ಮ ಗುಡಿಯೊಳಗಿರಲಿ |
ಅದರ ಕೀಲ್ಕುಂಚಿಕೆಯ ಹೊರಕೆಸೆಯೆ ಸಾಕು ||
ಪದವಾಕ್ಯವಿದರಾಗ ವಾದಗಡಣೆಯ ಬಿಟ್ಟು |
ಒದವಿಪರು ದಿಟದರಿವ – ಮಂಕುತಿಮ್ಮ || ೦೪೧ ||

ಈ ಜಗದಲ್ಲಿ ಪಂಡಿತರು, ವಿದ್ವಾಂಸರೆಂದರೆ ಮನ್ನಣೆ ಹೆಚ್ಚು . ಓದರಿತವರಾದ ಅವರು ಅದನ್ನು ಮಿಕ್ಕವರಿಗು ಅರ್ಥವಾಗುವ ಹಾಗೆ ಸಂಕ್ಷಿಪ್ತಿಸಿ, ಸರಳೀಕರಿಸಿ ಹೇಳಬಲ್ಲ ಶಕ್ತಿ, ಸಾಮರ್ಥ್ಯವಿರುವಂತಹವರು. ಇನ್ನು ಪರಬ್ರಹ್ಮದಂತಹ ಗಹನ ತತ್ವಗಳ ಕುರಿತಾಗಲಿ, ಮೇಲುಸ್ತರದ ಸರಳ ಗ್ರಾಹ್ಯವಲ್ಲದ ವಿಷಯಗಳಾಗಲಿ ಅಥವಾ ಅದೇ ರೀತಿಯ ಸಂಕೀರ್ಣವಾದುದೆಲ್ಲವನ್ನು ವಿವರಿಸಿ ಹೇಳಿ ಜನಸಾಮಾನ್ಯರಿಗೆ ಅರ್ಥ ಮಾಡಿಸುವುದು ಅವರೇ ತಾನೆ?

ಆದರೆ ನೈಜ ಸ್ಥಿತಿಯನ್ನು ಗಮನಿಸಿದರೆ, ನಡೆಯುತ್ತಿರುವುದಾದರು ಏನು? ಆ ಪಂಡಿತ, ಕೋವಿದ, ವಿಶಾರದರೆನಿಸಿಕೊಂಡವರು ತಾವೋದಿಕೊಂಡದ್ದನ್ನು ತಂತಮ್ಮ ಮೂಗಿನ ನೇರಕ್ಕೆ ಅಳವಡಿಸಿಕೊಂಡು, ಮೂಲ ಸತ್ಯದ ಸುತ್ತಲು ಬೇರೇನೊ ಮುಸುಕು, ಕವಚ, ಪರದೆ ಹೊದಿಸಿ ತಮ್ಮದೆ ಸರಿಯಾದ ತತ್ವ, ಸಿದ್ದಾಂತ ಎಂದು ವಾದ ವಿವಾದಗಳಲ್ಲಿ ತೊಡಗಿಕೊಂಡು ತಂತಮ್ಮ ಬೇಳೆ ಬೇಯಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಆ ಪ್ರಕ್ರಿಯೆಯಲ್ಲಿ ಸುಳ್ಳು ನಿಜಗಳ ನಡುವಿನ ಗೆರೆಯನ್ನು ಗೌರವಿಸದೆ ತಮಗಿಚ್ಛೆ ಬಂದಂತೆ, ತಮಗೆ ಸೂಕ್ತವಾಗಿ ಕಂಡಂತೆ ಪ್ರಚಾರ ಮಾಡುತ್ತಿದ್ದಾರೆ. ಅದರಲ್ಲೂ ದೇವರ ವಿಷಯಕ್ಕೆ ಬಂದರೆ, ವಾದವಿವಾದಗಳು ಅದೆಷ್ಟು ತರದ ಕವಲು ದಾರಿ ಹಿಡಿದು, ಏನೆಲ್ಲಾ ತರದ ಜಿಜ್ಞಾಸೆ, ತಿಕ್ಕಾಟದ ಹಾದಿ ಹಿಡಿಯುವುದೆಂದು ಹೇಳಲು ಬರದು. ಈ ಹಿನ್ನಲೆಯಲ್ಲಿ ಮೇಲಿನ ಪದ್ಯವನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಬೇಕು.

ಮಂಕುತಿಮ್ಮನಿಗೆ ಈ ರೀತಿಯ ಹುರುಳಿಲ್ಲದ ವಾದವಿವಾದಗಳನ್ನೆಲ್ಲ ಕಂಡು ರೋಸೆದ್ದು ಹೋಗಿದೆ – ನಿಜವಾದ, ಸತ್ಯದ ಹೊರತಾಗಿ ಮಿಕ್ಕೆಲ್ಲವನ್ನು ಹೇಳುತ್ತಿರುವ ಈ ರೀತಿಯ ವಾಗ್ಯುದ್ಧಗಳ ದೆಸೆಯಿಂದ. ಅಂತೆಯೆ ಈ ಪಂಡಿತರೂ ಸಹ ನಿಜ ಹೇಳಬೇಕಾದರೆ, ‘ಮೊದಲು ಆ ಸತ್ಯ ಅವರಿಗೆ ಗೊತ್ತಿರಬೇಕಲ್ಲ?’ ಎಂಬ ಅರಿವೂ ಇದೆ. ಅವರ ತಡಕಾಟದಲ್ಲಿ ಅವರಿಗೇ ಸಿಗದ ಸತ್ಯವನ್ನು ಅವರು ಮತ್ತೊಬ್ಬರಿಗೆ ಹೇಗೆ ಹೇಳಿಯಾರು? ಆದರೆ ಹಾಗೆಂದು ಒಪ್ಪಿಕೊಂಡು ಎದುರಿನವರ ಕಣ್ಣಲ್ಲಿ ಸಣ್ಣವರಾಗುವ, ಅವಹೇಳನಕ್ಕೊಳಗಾಗುವ ಭೀತಿಗೊ ಏನೊ ಸತ್ಯವಲ್ಲವೆಂದು ಗೊತ್ತಿದ್ದೂ ಬಣ್ಣದ ಮಾತಿನ ಆಡಂಬರದಲ್ಲಿ (ಗಡನೆ) ಎಲ್ಲವನ್ನು ಮರೆಸಿಟ್ಟು ತಮ್ಮ ಕೆಲಸ ಮುಂದುವರೆಸಿದ್ದಾರೆ – ಜನರಿಗೆ ಸುಳ್ಳನ್ನೆ ನಿಜವೆನ್ನುವ ಹಾಗೆ ನಂಬಿಸುತ್ತ.

ಅದೆಲ್ಲಾ ಸರಿದು ಸತ್ಯದ ನಿಜರೂಪ ಅನಾವರಣವಾಗಬೇಕೆಂದರೆ, ಅದು ಬೇರಾರಿಗು ಸಾಧ್ಯವಿಲ್ಲ – ಸಾಕ್ಷತ್ ಆ ಪರಬ್ರಹ್ಮನ ಹೊರತಾಗಿ. ಅವನೊ, ಯಾರಿಗೂ ಕಾಣಿಸನೆಂಬ ವ್ರತದ ಹಠ ಹಿಡಿದು ಕೂತಿದ್ದಾನಲ್ಲಾ? ಸರಿ, ಕನಿಷ್ಠ ಗುಡಿಯೊಂದೊರಳಗೆ ಕೂತು ಕದವಿಕ್ಕಿಕೊಂಡಂತೆ ಅವನು ಅವಿತೆ ಕುಳಿತಿರಲಿ ; ಆದರೆ ಆ ಕದ ತೆರೆಯಬಲ್ಲ ಕೀಲಿ ಕೈ (ಕೀಲ್ಕುಂಚಿಕೆ) ಗೊಂಚಲನ್ನು ಮಾತ್ರ ಬಾಗಿಲಿನ ಹೊರಗೆಸೆಯಲಿ. ಆಗಲಾದರು ಈ ಪದವಾಕ್ಯವಿದರು (ಪಂಡಿತ, ವಿದ್ವಾಂಸರು) ಅದನ್ನೆತ್ತಿಕೊಂಡು, ಗುಡಿಯ ಒಳಹೊಕ್ಕು ನಿಜವಾದ ಸತ್ಯ ದರ್ಶನ ಮಾಡಿಬಂದು ತದನಂತರ ಆ ಸತ್ಯವನ್ನು ಮಾತ್ರ ಎಲ್ಲರಿಗು ಬಿತ್ತರಿಸಲಿ. ಆಗ ಅವರೆಲ್ಲ ದಿಟದರಿವನ್ನು (ಸತ್ಯದ ಜ್ಞಾನ) ಎಲ್ಲರಿಗು ಒದಗಿಸುವರು (ಒದವಿಪರು) ಎಂದು ಆಶಿಸುತ್ತಾನೆ ಮಂಕುತಿಮ್ಮ. ಇಲ್ಲಿ ಎಲ್ಲರಿಗೂ ಕಾಣಿಸಿಕೊಳ್ಳದಿದ್ದರೂ ಸರಿ, ಕನಿಷ್ಠ ಪರಿಣಿತ ಮತಿಗಳ ಗುಂಪಿಗಾದರು ಸತ್ಯದರ್ಶನ ಮಾಡಿಸಿ, ಅದು ಮಾತ್ರವೆ ವಿತರಣೆಯಾಗುವಂತೆ ಮಾಡಲಿ ಎನ್ನುವ ರಾಜೀ ಮನೋಭಾವದ ಇಂಗಿತವೂ ಇಣುಕುತ್ತದೆ. ಇಲ್ಲಿ ಕೀಲಿಕೈ ಅಂದರೆ ಅಜ್ಞಾನವನ್ನು ತೊಲಗಿಸಬಲ್ಲ ಜ್ಞಾನದರ್ಶನದ ಮಾರ್ಗ ಎಂದು ಅರ್ಥೈಸಬೇಕು.

ಪರಬ್ರಹ್ಮದ ಮೂಲ ಇಂಗಿತ ಮತ್ತು ಅದನ್ನು ಬೋಧಿಸುವವರ, ಉಪದೇಶಿಸುವವರ ಇಂಗಿತ ಭಾವ ಹೀಗಾದರೂ ಒಂದೇ ಇರಲಿ. ಪರಬ್ರಹ್ಮ ತಾನಾಗೇ ಸತ್ಯ ದರ್ಶನ ಮಾಡಿಸದಿದ್ದರು ಸರಿಯೇ, ಅರ್ಹರ ಮೂಲಕವಾದರೂ ಅದನ್ನು ಗೊಂದಲ, ಮೋಸಗಳಿಗೆ ಅವಕಾಶವಿರದಂತೆ ಸರಿಯಾಗಿ ಮಾಡಿಸಲಿ – ಎಂದು ದುಂಬಾಲು ಬೀಳುತ್ತದೆ ಕವಿ ಮನ. ಇದೆಲ್ಲದರ ಹಿಂದೆ ಮತ್ತೆ ಮತ್ತೆ ಎದ್ದು ಕಾಣುವ ಒಂದು ಮುಖ್ಯ ಅಂಶವೆಂದರೆ – ಪರಬ್ರಹ್ಮದ ಅಸ್ತಿತ್ವದ ಕುರಿತಾದ ಪ್ರಶ್ನೆ ಕವಿಮನಸನ್ನು ಕಾಡಿದ ಬಗೆ. ಆ ಪ್ರತಿಯೊಂದು ಶೋಧನೆಯು ಬಗೆಬಗೆಯ ಕಗ್ಗದ ಮೊಗ್ಗುಗಳಾಗಿ ಹೊರಬಿದ್ದ ಅಮೂಲ್ಯ ರತ್ನಗಳಾಗಿವೆ.

ಕಗ್ಗವನ್ನು ಕನ್ನಡದ ಭಗವದ್ಗೀತೆಯೆಂದು ಕಾರಣವಿಲ್ಲದೆ ಹೇಳುವರೇ ?

– ನಾಗೇಶ ಮೈಸೂರು

#ಕಗ್ಗಕೊಂದು-ಹಗ್ಗ
#ಕಗ್ಗ-ಟಿಪ್ಪಣಿ

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!