ಅಂಕಣ

ಕೀಮೋಗಾಗಿ ರಾಕಿಂಗ್ ಕೊಠಡಿಗಳು…

         ಬದುಕಿನ ಇನ್ನೊಂದು ಮುಖ ಕಾಣುವುದು ಬಹುಶಃ ಆಸ್ಪತ್ರೆಯಲ್ಲಿಯೇ ಇರಬೇಕು. ಅದರಲ್ಲೂ ಕ್ಯಾನ್ಸರ್ ಆಸ್ಪತ್ರೆಗಳಂತೂ ನೋವು, ಚಿಂತೆ, ಭಯ, ಸಿಟ್ಟು, ಅಸಹಾಯಕತೆ, ಅನಿಶ್ಚಿತತೆಯಿಂದಲೇ ತುಂಬಿಹೋಗಿರುತ್ತದೆ.  ಕೇವಲ ನೆಗೆಟಿವ್ ಎಮೊಷನ್’ಗಳನ್ನೇ ಹೊಂದಿರುವ ಒಂದು ಪ್ರಪಂಚದಂತೆ ಕಾಣುತ್ತದೆ. ಕ್ಯಾನ್ಸರ್ ಆಸ್ಪತ್ರೆಗೆ ಹೋದ ನಂತರವೇ ತಿಳಿಯುವುದು ಹೊರಗಿನ ಪ್ರಪಂಚ ಇದಕ್ಕಿಂತ ಎಷ್ಟು ಭಿನ್ನವಾಗಿದೆ, ಎಷ್ಟು ವರ್ಣಮಯವಾಗಿದೆ ಎಂದು.!! ಕ್ಯಾನ್ಸರ್ ಆಸ್ಪತ್ರೆಯಲ್ಲಿಯೇ ಬಣ್ಣವಿರದ ಬದುಕಿನ ಅನಾವರಣಗೊಳ್ಳುವುದು. ಎಷ್ಟೋ ಬಾರಿ ನಿದ್ದೆಯಿಂದೇಳುವುದೇ ಬೇಡ ಎನಿಸಿಬಿಡುತ್ತದೆ. ಹೊರಗಿನ ವಾಸ್ತವಕ್ಕೆ ಬರುವುದಕ್ಕಿಂತ ಅಲ್ಲೇ ಯಾವುದೋ ಕನಸುಗಳ ನಡುವೆ ಇರುವುದು ಒಳ್ಳೆಯದು ಎನಿಸಿ ಬಿಡುತ್ತದೆ. ಕ್ಯಾನ್ಸರ್ ಆಸ್ಪತ್ರೆಯ ಪರಿಸರವೂ ಅಂಥದ್ದೇ ಆಗಿರುತ್ತದೆ. ಅಲ್ಲಿ ನಮ್ಮ ಒಡನಾಟ ಇರುವುದು ಕೂಡ ಕೀಮೋ ಎಂಬ ನೋವುಣಿಸುವ ಚಿಕಿತ್ಸೆಯೊಂದಿಗೆ! ಅವೆಲ್ಲದರ ನಡುವೆ ಭರವಸೆಯನ್ನ ಜೀವಂತವಾಗಿಟ್ಟುಕೊಳ್ಳುವುದೇ ಒಂದು ದೊಡ್ದ ಸವಾಲಾಗಿರುತ್ತದೆ. ಆದರೆ  ಇತ್ತೀಚೆಗೆ ಕೆಲವರು ಈ ಸವಾಲನ್ನು ಸ್ವಲ್ಪ ತಿಳಿಯಾಗಿಸಲು  ನಿಸ್ವಾರ್ಥ ಸೇವೆ ಸಲ್ಲಿಸಲು ಆರಂಭಿಸಿದ್ದಾರೆ ಎನ್ನುವುದು ಕೂಡ ನಿಜ. ಕ್ಯಾನ್ಸರ್ ರೋಗಿಗಳ ಬದುಕಲ್ಲಿ ಬಣ್ಣ ತುಂಬಲು ಸಜ್ಜಾಗಿದ್ದಾರೆ!

  ನ್ಯಾನ್ಸಿ ಬ್ಯಾಲ್ಲಾರ್ಡ್ ಎಂಬ ೬೦ ವರ್ಷದ ನಿವೃತ್ತ ಆರ್ಟಿಸ್ಟ್’ಗೂ ಕ್ಯಾನ್ಸರ್’ಗೂ ಯಾವ ರೀತಿಯೂ ಸಂಬಂಧವಿರಲಿಲ್ಲ. ಆಕೆಯ ಕುಟುಂಬದಲ್ಲಿ ಕೂಡ ಯಾರೂ ಕ್ಯಾನ್ಸರ್’ಗೆ ಒಳಗಾಗಿರಲಿಲ್ಲ. ಆದರೆ ಬದುಕು ಯಾವಾಗ ಹೇಗೆ ಬದಲಾಗುತ್ತದೋ ಯಾರಿಗೆ ಗೊತ್ತು? ಒಂದು ದಿನ ಆಕೆ ತೆಗೆದುಕೊಂಡ ತಪ್ಪು ತಿರುವು (ರಾಂಗ್ ಟರ್ನ್) ಆಕೆಯ ಬದುಕಿನ ಉತ್ತಮ ತಿರುವು ಆಗಿದ್ದಂತೂ ಹೌದು!

    ಯಾವುದೋ ಕಾರಣಕ್ಕೆ ಆಸ್ಪತ್ರೆಗೆ ತೆರಳಿದ್ದ ನ್ಯಾನ್ಸಿ ಎಡಗಡೆ ಹೋಗುವ ಬದಲು ತಪ್ಪಾಗಿ ಬಲದಿಕ್ಕಿಗೆ ತಿರುಗಿ ಹೋಗಿದ್ದಳು. ಹಾಗೆ ಹೋಗಿ ಅವಳು ಸೇರಿದ್ದು ಕೀಮೋ ಕೊಠಡಿಯಲ್ಲಿ. ಅಲ್ಲಿದ್ದ ನರ್ಸ್ ಅದನ್ನು ಪೂರ್ತಿಯಾಗಿ ತೋರಿಸಿದಾಗ ’ಇಷ್ಟೊಂದು ನೀರಸ ಹಾಗೂ ಬೇಸರ ತರಿಸುವಂತಹ ಕೊಠಡಿಗಳಲ್ಲಿ ರೋಗಿ ಗುಣಮುಖವಾಗುವುದಾದರೆ ಹೇಗೆ?’ ಎಂದೆನಿಸಿತ್ತು. ಅಲ್ಲಿಂದಲೇ ಆಕೆಗೆ ಒಂದು ಹೊಸ ಯೋಚನೆ ಬಂದು ರೂಮ್ಸ್ ದಟ್ ರಾಕ್ ಫಾರ್ ಕೀಮೋ (RoomsThatRock4Chemo) (http://roomsthatrock4chemo.org/) ಎಂಬ ಸಂಸ್ಥೆ ಹುಟ್ಟಿಕೊಂಡಿದ್ದು. ಕ್ಯಾನ್ಸರ್’ನಂತಹ ಖಾಯಿಲೆಯಿರುವಾಗ ಅದರಿಂದ ಹೊರ ಬರಲು ಒಂದು ಉತ್ತಮ ವಾತಾವರಣ ತುಂಬಾ ಅವಶ್ಯಕ. ಅಂತಹದೇ ಒಂದು ವಾತಾವರಣವನ್ನು ಸೃಷ್ಟಿಸುವ ಕೆಲಸವನ್ನು ಈ ಸಂಸ್ಥೆ ನಡೆಸುತ್ತದೆ. ಅದೂ ಕೂಡ ಏನನ್ನೂ ಬಯಸದೇ. ಈ ಸಂಸ್ಥೆ ಆರಂಭಗೊಂಡು ಐದು ವರ್ಷಗಳಾಗಿವೆ ಇಲ್ಲಿಯ ತನಕ ವಿವಿಧ ಆಸ್ಪತ್ರೆಗಳಿಂದ ಸುಮಾರು ಅರ್ಧ ಮಿಲಿಯನ್’ನಷ್ಟು ರೋಗಿಗಳಿಗೆ ಇವರು ರಾಕಿಂಗ್ ಎನ್ನಿಸುವಂತಹ ಕೀಮೋ ಕೊಠಡಿಗಳನ್ನು ನೀಡಿದ್ದಾರೆ.

ಸತತ ಮೂರು ಬಾರಿ ಕ್ಯಾನ್ಸರ್!! ಈ ಬಾರಿ ಆಕೆಗೆ ಯಾವುದೇ ಭರವಸೆ ಉಳಿದಿರಲಿಲ್ಲ. ತನ್ನ ಹೋರಾಟ ಬಿಟ್ಟು ಬಿಡುವ ಯೋಚನೆಯಲ್ಲಿದ್ದಳು ಆಕೆ! ಶುಕ್ರವಾರ ಕೀಮೋ ಮುಗಿಸಿ ಹೊರಟ ಆಕೆಗೆ ನರ್ಸ್ ’ಹ್ಯಾಪಿ ವೀಕೆಂಡ್’ ಎಂದು ವಿಶ್ ಮಾಡುವುದರ ಜೊತೆಗೆ ಸೋಮವಾರ ಮತ್ತೆ ಕೀಮೋಗೆ ಹಾಜರಾಗಲು ಹೇಳಿದ್ದಳು. ಆ ದಿನ ಸಂಜೆಯೇ ಅಲ್ಲಿ ಸುಮಾರು ೯೦ ಜನರ ಟೀಮ್ ತಯಾರಾಗಿತ್ತು. ಈ ವೀಕೆಂಡ್’ನಲ್ಲಿ ಅವರು ಕೀಮೋಥೆರಪಿ ತೆಗೆದುಕೊಳ್ಳುವವರ ಬದುಕು ಬದಲಿಸುವ ಪ್ರಯತ್ನದಲ್ಲಿದ್ದರು. ಅವರಿಗೊಂದು ಉತ್ತಮ, ವರ್ಣಮಯ ವಾತಾವರಣ ಕಲ್ಪಿಸ ಹೊರಟಿದ್ದರು. ಅಲ್ಲಿರುವ ಎಲ್ಲರೂ ಒಬ್ಬರನ್ನೊಬ್ಬರು ಬಲ್ಲವರೇನು ಆಗಿರಲಿಲ್ಲ. ಸ್ವಯಂಸೇವಕರಾಗಿ ಬಂದು ನ್ಯಾನ್ಸಿಯ ಕೈ ಜೋಡಿಸಿದವರಾಗಿದ್ದರು. ಶುಕ್ರವಾರ ಮಧ್ಯರಾತ್ರಿಯಿಂದ ಆರಂಭಗೊಂಡಿದ್ದ ಅವರ ಕೆಲಸ ಭಾನುವಾರ ಮಧ್ಯರಾತ್ರಿಗೆ ಮುಗಿದಿತ್ತು. ಸುಮಾರು ಎಂಟು ಕೊಠಡಿಗಳ ರೂಪುರೇಷೆಯನ್ನೇ ಬದಲಿಸಿದ್ದರು.

  ಸೋಮವಾರ ಬೆಳಿಗ್ಗೆ ಆಕೆ ಯಾವುದೇ ಆಸಕ್ತಿ ಇಲ್ಲದಂತೆ, ತಲೆ ತಗ್ಗಿಸಿಕೊಂಡು ನಿಧಾನವಾಗಿ ಬಂದು ಕೀಮೊ ಕೊಠಡಿಯನ್ನು ಹೊಕ್ಕಿದ್ದಳು. ಗುರುತು ಸಿಗದಷ್ಟರ ಮಟ್ಟಿಗೆ ಬದಲಾಗಿ ಹೋಗಿತ್ತು ಕೊಠಡಿ. ಇಡೀ ಕೊಠಡಿಗೆ ಬಣ್ಣ ಬಳಿಯಲಾಗಿತ್ತು. ಅಲ್ಲಲ್ಲಿ ಕೆಲ ಪೇಂಟಿಂಗ್’ಗಳನ್ನು ಹಾಕಲಾಗಿತ್ತು. ಜೊತೆಗೆ ಬಣ್ಣಗಳಿಂದ ಗೋಡೆಯ ಮೇಲೆ ವೈವಿಧ್ಯಮಯ ಚಿತ್ರಗಳನ್ನು ಬಿಡಿಸಲಾಗಿತ್ತು. ಅಲ್ಲಿಯ ಕರ್ಟನ್’ಗಳನ್ನೂ ಕೂಡ ಬದಲಾಯಿಸಲಾಗಿತ್ತು. ಆಗಲೇ ಆಕೆ ಇತರ ಕೊಠಡಿಗಳ ಬಗ್ಗೆ ಗಮನ ಹರಿಸಿದ್ದು. ಅಲ್ಲಿಯೂ ಕೂಡ ಕ್ಯಾನ್ಸರ್ ಪೇಷಂಟ್’ಗಳು ಅಶ್ಚರ್ಯದಿಂದ ಉದ್ಗರಿಸುತ್ತಿದ್ದರು. ಆ ದಿನ ಆಕೆಯಲ್ಲಿ ಮತ್ತೆ ಭರವಸೆ ಮೂಡಿತ್ತು, “ದಿಸ್ ಇಸ್ ಗ್ರೇಟ್.. ಐ ಯಾಮ್ ಗೋಯಿಂಗ್ ಟು ಬೀಟ್ ಇಟ್ ದಿಸ್ ಟೈಮ್” ಎಂದು ಹೇಳಿ ಬಿಕ್ಕಿದ್ದಳು! ನ್ಯಾನ್ಸಿ ಮತ್ತಾಕೆಯ ಟೀಮ್ ಕ್ಯಾನ್ಸರ್ ರೋಗಿಯ ಮನದಲ್ಲಿ ಮತ್ತೆ ಭರವಸೆ ತುಂಬುವಲ್ಲಿ ಯಶಸ್ವಿಯಾಗಿದ್ದರು.

   ಪ್ರತಿ ಬಾರಿ ಕೀಮೋ ಕೊಠಡಿಯ ರೂಪುರೇಷೆಯನ್ನು ಬದಲಾಯಿಸಿದಾಗಲೂ ನಿಮಗೆ ಹೇಗೆ ಅನಿಸುತ್ತದೆ? ಎಂದು ಪ್ರಶ್ನಿಸಿದರೆ ನ್ಯಾನ್ಸಿ ಹೇಳುವುದು “ಕೃತಜ್ಞತಾ ಭಾವ” ಎಂದು. ಇಂತಹ ಒಂದು ಅದ್ಭುತ ಯೋಚನೆಯನ್ನು ಆಕೆ ಹುಟ್ಟಿ ಹಾಕಿದ್ದರೂ ಕೂಡ ಇತರ ಸ್ವಯಂಸೇವಕರ ಸಮಯ, ಪ್ರತಿಭೆ ಹಾಗೂ ಹಣವಿಲ್ಲದೇ ಇದ್ದಿದ್ದರೆ ಇದೆಲ್ಲವೂ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಆ ಎಲ್ಲ ಸ್ವಯಂಸೇವಕರಿಗೆ, ಹಣ ಸಹಾಯ ಮಾಡುವವರಿಗೆ ತಾನು ಕೃತಜ್ಞಳಾಗಿರುತ್ತೇನೆ ಎನ್ನುತ್ತಾಳೆ ನ್ಯಾನ್ಸಿ. ನಿಜ ಹೇಳಬೇಕೆಂದರೆ ಆಕೆ ಕೂಡ ಆ ಕೃತಜ್ಞತೆಗೆ ಅರ್ಹಳೇ! ಆಕೆಯ ಯೋಚನೆಯಿಂದಲೇ ಕ್ಯಾನ್ಸರ್ ರೋಗಿಗಳ ಬದುಕಲ್ಲಿ ಬದಲಾವಣೆ ಬರುವಂತಾಗಿದ್ದು. ಆಕೆಯ ಸಂಸ್ಥೆಯಿಂದಲೇ ಸಾವಿರಾರು ರೋಗಿಗಳು ಮತ್ತೆ ಭರವಸೆಯನ್ನು ಪಡೆದುಕೊಳ್ಳುವಂತಾಗಿದ್ದು! ಅಲ್ಲಿ ಬದಲಾದ ಕೊಠಡಿ ಅಷ್ಟೇ ಅಲ್ಲ, ಯಾರೋ ಅಪರಿಚಿತರು ಒಂದಿಷ್ಟು ಜನ ನಮ್ಮ ಬದುಕು ಬದಲಿಸಲು, ನಮ್ಮಲ್ಲಿ ಭರವಸೆ ತುಂಬಲು, ಒಂದು ಒಳ್ಳೆಯ ವಾತಾವರಣವನ್ನು ಕೊಡಲು ಇಷ್ಟೆಲ್ಲಾ ಶ್ರಮಿಸುತ್ತಿದ್ದಾರೆ ಎನ್ನುವ ವಿಷಯವೇ ಕ್ಯಾನ್ಸರ್ ರೋಗಿಗಳ ಮೇಲೆ ಬಹಳ ಪರಿಣಾಮ ಬೀರುತ್ತದೆ. ಇನ್ನಷ್ಟು ಹುರುಪು ನೀಡುತ್ತದೆ. ನ್ಯಾನ್ಸಿಯ ಕೈ ಜೋಡಿಸಿದ ಎಷ್ಟೋ ಸ್ವಯಂಸೇವಕರು ಕೂಡ ಕ್ಯಾನ್ಸರ್’ಗೆ ತುತ್ತಾಗಿದ್ದ ತಮ್ಮ ಕುಟುಂಬದವರನ್ನು ನೆನೆಸಿಕೊಳ್ಳುತ್ತಾ, “ ನಮ್ಮವರಿಗೂ ಇಂತಹ ಕೀಮೋ ರೂಮ್ ದೊರಕಿದ್ದಿದ್ದರೆ ಪ್ರಾಯಶಃ ಅವರು ಕೂಡ ಭರವಸೆ ಕಳೆದುಕೊಳ್ಳುತ್ತಿರಲಿಲ್ಲವೇನೋ, ಭರವಸೆ ಕಳೆದುಕೊಂಡು ಕ್ಯಾನ್ಸರ್’ಗೆ ಶರಣಾಗುತ್ತಿರಲಿಲ್ಲವೇನೋ” ಎಂದಿದ್ದಾರೆ. ಆದರೇನಂತೆ ಈಗ ಅವರು ನ್ಯಾನ್ಸಿಯೊಂದಿಗೆ ಸೇರಿ ಹಲವಾರು ಕ್ಯಾನ್ಸರ್ ರೋಗಿಗಳ ಸಹಾಯ ಮಾಡಿದ್ದಾರೆ.

      ಪ್ರಪಂಚದ ಮೂಲೆ ಮೂಲೆಗೆ ಈ ಸಂಸ್ಥೆ ತಲುಪುವಂತಾಗಬೇಕು, ಇದರ ಅಂಗಸಂಸ್ಥೆಗಳು ಎಲ್ಲೆಡೆ ಹರಡಿ ಕ್ಯಾನ್ಸರ್’ನಿಂದ ಬಳಲುತ್ತಿರುವವರಿಗೆ ಸಹಾಯಕವಾಗಬೇಕು, ಅವರಿಗೆ ಒಂದು ಉತ್ತಮ ವಾತಾವರಣ ನಿರ್ಮಿಸಿಕೊಡಬೇಕು ಎನ್ನುವುದು ನ್ಯಾನ್ಸಿಯ ಕನಸು. ಅದರಲ್ಲೂ ಕ್ಯಾನ್ಸರಿನಿಂದ ಬಳಲುತ್ತಿರುವ ಮಕ್ಕಳಿಗೆ ಇಂತಹ ವರ್ಣಮಯ ವಾತಾವರಣದ ಅವಶ್ಯಕತೆ ಸಾಕಷ್ಟಿದೆ. ಅವರಿಗೆ ಅದು ಸಿಗುವಂತಾಗಬೇಕು ಎನ್ನುತ್ತಾಳೆ ನ್ಯಾನ್ಸಿ. ಆಕೆಯ ಕನಸು ಆದಷ್ಟು ಬೇಗ ನನಸಾಗಿ ಸದ್ಯ ಅಮೇರಿಕಾಗೆ ಮಾತ್ರ ಸೀಮಿತವಾಗಿರುವ ಆಕೆಯ ಸಂಸ್ಥೆ ಭಾರತವನ್ನೂ ಪ್ರವೇಶಿಸಲಿ, ಇಲ್ಲಿಯೂ ಕ್ಯಾನ್ಸರ್ ರೋಗಿಗಳಲ್ಲಿ ಭರವಸೆ ತುಂಬುವಂತಾಗಲಿ ಎನ್ನುವುದೇ ನಮ್ಮ ಆಶಯ!

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!