ಅಂಕಣ

ಇವರನ್ಯಾಕೆ ಮರೆತವು ಚರಿತ್ರೆಯ ಪುಟಗಳು.. ?

ಭಾರತದ ಇತಿಹಾಸವನ್ನು ಅವಲೋಕಿಸುತ್ತಾ ಹೋದರೆ, ಅದು ಬಹುತೇಕ ಯಾರದೋ ದಾರ್ಷ್ಟ್ಯಕ್ಕೋ, ಭಯಕ್ಕೋ, ಸ್ವಾರ್ಥಕ್ಕೋ. ಋಣಕ್ಕೋ ಬರೆದಂತಿದೆ. ನಮ್ಮ ಪೂರ್ವಿಕರ ಘನತೆ ಮತ್ತು ಶ್ರೇಷ್ಠತೆಯನ್ನು ಸಾರಬೇಕಾಗಿದ್ದ ಇತಿಹಾಸ, ಕೆಲವೇ ಕೆಲವು ವ್ಯಕ್ತಿಗಳನ್ನು ವೈಭವಿಕರಿಸುವಲ್ಲಿಗೆ ಸ್ಥೀಮಿತವಾಗಿದೆ. ಕೆಲವೊಂದೆಡೆ ಯಾರದ್ದೋ ಸಾಧನೆಗೆ ಯಾರದ್ದೋ ಹೆಸರಿಟ್ಟು ಇನ್ಯಾರಿಗೋ ಅದರ ಶ್ರೇಯಸ್ಸನ್ನು ಬರೆದುಕೊಟ್ಟ  ಪುರಾಣ ಗ್ರಂಥವೆನ್ನಿಸುತ್ತದೆ ನಮ್ಮ ಇತಿಹಾಸ. ಇದು ಪ್ರತಿಯೊಂದು ಶಿಕ್ಷಿತ ಮನಸ್ಸಿಗೂ ತಿಳಿದಿರುವ ಸಾರ್ವಕಾಲಿಕ ಸತ್ಯ. ನಿಜವಾದ ಭಾರತದ ಇತಿಹಾಸವನ್ನು ಇನ್ನಷ್ಟೇ ಬರೆಯ ಬೇಕಿದೆ. ಇಂದು ನಾನು ಪರಿಚಯಿಸುತ್ತಿರುವ ವ್ಯಕ್ತಿಯ ಕಥೆಯು ಅಷ್ಟೇ , ಇತಿಹಾಸ ಎಂಬ ಆಲದ ಮರದ ಕೆಳಗೆ ಹೂತು ಹೋದ ಬಿ.ಎನ್.ರಾವ್ ಎಂಬ ಸಾಧಕರ ಕಥೆಯಿದು.

ಭಾರತೀಯರು ಕೇವಲ ಹಾವಾಡಿಗರು, ದಾಸ್ಯಕ್ಕಷ್ಟೇ ಸೀಮಿತರೆಂದುಕೊಂಡಿದ್ದ ಆಂಗ್ಲ ಪ್ರಭುಗಳು ಕೂಡ ಈ ವ್ಯಕ್ತಿಯ ಮುಂದೆ ವಿನಮ್ರವಾಗಿ ವರ್ತಿಸುತ್ತ, ಇವರ ಮಾತಿಗೆ ಮರುಮಾತನಾಡುತ್ತಿರಲಿಲ್ಲವೆಂದರೆ ಅವರ ಘನತೆ, ವ್ಯಕ್ತಿತ್ವ, ಬುದ್ಧಿಮತ್ತೆ ಮತ್ತು ಪ್ರಬುದ್ಧತೆ ಎಷ್ಟರ ಮಟ್ಟಿಗಿದ್ದಿರಬೇಡ. ಭಾರತ ಮತ್ತು ಪಾಕಿಸ್ತಾನದಂತಹ ಬದ್ದ ವೈರಿ ದೇಶಗಳೂ ಕೂಡ ವಿಭಜನೆಯಾಗಿ 7 ದಶಕಗಳಾಗುತ್ತ ಬಂದರು ಸಿಂಧೂ ನದಿಯ ನೀರಿಗಾಗಿ ಇಂದಿಗೂ ಜಗಳಮಾಡಿಕೊಂಡಿಲ್ಲವೆಂದರೆ ಇನ್ನಾವ ಮಾದರಿಯಲ್ಲಿ ಅವರ ಮುಂದಾಲೋಚನೆಯಿತ್ತು ?ಅವರಿಗೆ ಅವರೇ ಸಾಟಿ. ಅವರು ನಮ್ಮವರು ,ಕನ್ನಡಿಗರೆಂಬುದೆ ನಮ್ಮ ಹೆಮ್ಮೆ. ಹಾಗಾದರೆ ಯಾರು ಈ ಬಿ.ಎನ್.ರಾವ್?

ಬಿ ಎನ್ ರಾವ್, ಪೂರ್ತಿ ಹೆಸರು ಬೆನೆಗಲ್ ನರಸಿಂಹ ರಾವ್. 1887 ಫೆಬ್ರವರಿ 26 ರಂದು, ಮಂಗಳೂರಿನ ಬೆನೆಗಲ್ ಗ್ರಾಮದಲ್ಲಿ ಜನಿಸುತ್ತಾರೆ ಬಿ ಎನ್ ರಾವ್. ತಂದೆ ರಾಘವೆಂದ್ರ ಬೆನೆಗಲ್ ಸುತ್ತ ಮುತ್ತಲ ಹಳ್ಳಿಗಳ ಪ್ರಸಿದ್ಧ ವೈದ್ಯರಾಗಿರುತ್ತಾರೆ.1901 ರಲ್ಲಿ ಮಂಗಳೂರಿನ ಕೆನೆರಾ ಕಾಲೇಜ್’ನಲ್ಲಿ ಮೆಟ್ರಿಕುಲೇಷನ್ ಪಾಸ್ ಮಾಡಿದ ಬಿ.ಎನ್. ರಾವ್ , ಅಂದಿನ ಕಾಲದ ಮದ್ರಾಸ್ ಪ್ರಾಂತ್ಯಕ್ಕೆ (ಇಂದಿನ ಕಾಲಕ್ಕೆ ಹೇಳುವುದಾದರೆ ರಾಜ್ಯ ಎಸ್.ಎಸ್.ಎಲ್.ಸಿ.ಬೋರ್ಡ್) ಮೊದಲಿಗರಾಗಿ ತೇರ್ಗಡೆ ಹೊಂದುತ್ತಾರೆ. ಮದ್ರಾಸ್’ನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಫ್.ಎ ಪದವಿ ಪಡೆವ ರಾವ್, ಸ್ಕಾಲರ್’ಶಿಪ್ ಪಡೆದು ನಂತರದ ವಿದ್ಯಾಭ್ಯಾಸವನ್ನು ಇಂಗ್ಲೆಂಡ್’ನ ಕ್ರೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಮುಂದುವರಿಸುತ್ತಾರೆ.1909ರಲ್ಲಿ ಭಾರತೀಯ ನಾಗರೀಕ ಪರೀಕ್ಷೆಯನ್ನು (ಇಂದಿನ ಐ.ಎ.ಎಸ್.) ಪಾಸು ಮಾಡಿದ ರಾವ್’ರನ್ನು, ಅಂದಿನ ಬ್ರಿಟೀಷ್ ಸರ್ಕಾರ ಭಾರತದ ರಾಜಧಾನಿಯಾಗಿದ್ದ ಕೊಲ್ಕತ್ತಾ ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನಾಗಿ ನೇಮಿಸುತ್ತದೆ. ಕುಶಾಗ್ರ ಮತಿಗಳಾಗಿದ್ದ ರಾವ್ ದೊರಕಿದ ಪದವಿಯನ್ನು ಅಷ್ಟೇ ಪ್ರಬುದ್ಧವಾಗಿ ನಿರ್ವಹಿಸಿ ಭೇಷ್ ಎನಿಸಿಕೊಳ್ಳುತ್ತಾರೆ.

1930ರ ದಶಕದಲ್ಲಿ ,ಏಕಮೇವ ಸ್ವಾಮ್ಯವುಳ್ಳ ದೇಶದಿಂದ ಬಂದ ಆಂಗ್ಲರಿಗೆ ವಿವಿಧತೆಯಲ್ಲಿ ಏಕತೆಯಿದ್ದ ಭಾರತಕ್ಕೆ ಕಾನೂನು ರೂಪಿಸುವುದು ಕಷ್ಟವಾಗುತ್ತದೆ. ಅಖಂಡ ಭಾರತಕ್ಕೆ ಏಕಮೇವ ಕಾನೂನು ರೂಪಿಸುವಂತೆ ಅದೆಷ್ಟೋ ಆಂಗ್ಲ ಕಾನೂನು ತಜ್ಙರನ್ನು ಆಂಗ್ಲ ಸರ್ಕಾರ ಕೇಳಿಕೊಂಡರು, ಭಾರತದಂತಹ ಬಹುಧರ್ಮೀಯ ಮತ್ತು ಬಹು ಭಾಷಾ ರಾಷ್ಟ್ರಕ್ಕೆ ಏಕಮೇವ ಕಾನೂನು ರಚಿಸುವುದು ಹುಡುಗಾಟಿಕೆಯ ಮಾತಾಗಿರಲಿಲ್ಲ. ಇದೇ ಕಾರಣಕ್ಕೆ ಆಂಗ್ಲ ಕಾನೂನು ತಜ್ಙರಾರು ಆಂಗ್ಲ ಸರ್ಕಾರದ ಮನವಿಯನ್ನು ಒಪ್ಪಿಕೊಂಡಿರಲಿಲ್ಲ. ರಾವ್’ರವರ ಕಾರ್ಯವೈಖರಿಯನ್ನು ಬಹು ಹತ್ತಿರದಿಂದ ಗಮನಿಸುತ್ತಿದ್ದ ಆಂಗ್ಲ ಸರ್ಕಾರ 1935ರಲ್ಲಿ ಬಿ.ಎನ್.ರಾವ್’ರವರಿಗೆ ಭಾರತದ ಕಾನೂನು ರೂಪಿಸುವ ಕೆಲಸವನ್ನು ವಹಿಸುತ್ತದೆ. ಭಾರತದಂತಹ ವೈವಿಧ್ಯಮಯ ದೇಶದ ಕಾನೂನು ರೂಪಿಸುವುದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಅಂತಹ ಒಂದು ಕೆಲಸಕ್ಕೆ ಕೈ ಹಾಕುತ್ತಾರೆ ನಮ್ಮ ಬಿ.ಎನ್.ರಾವ್. ಏನೆಂದರೂ ನಾಲ್ಕಾರು ವರ್ಷದಲ್ಲಿ ಮುಗಿಸಿಕೊಡುತ್ತಾರೆಂದು ಕೊಂಡಿದ್ದ ಕೆಲಸವನ್ನು ದಾಖಲೆಯ ಎರಡೇ ವರುಷಗಳಲ್ಲಿ (1935-1937) ಭಾರತದ ಏಕಮೇವ ಕಾನೂನನನ್ನು ರಚಿಸಿ ಆಂಗ್ಲರ ಮುಂದಿಡುತ್ತಾರೆ ಬಿ.ಎನ್.ರಾವ್. ಆ ಕ್ಷಣಕ್ಕೆ ಬ್ರಿಟೀಷ್ ಸರ್ಕಾರ ಮಾತ್ರವಲ್ಲ ಇಡೀ ಜಗತ್ತೆ ರಾವ್’ರೆಡೆಗೊಂದು ಅಚ್ಚರಿಯ ನೋಟ ಬೀರುತ್ತದೆ. ಯಾವ ಕೆಲಸವನ್ನು ಅಸಾಧ್ಯವೆಂದು ಬ್ರಿಟೀಷ್ ಕಾನೂನು ತಜ್ಙರು ತಿರಸ್ಕರಿಸಿದ್ದರೋ., ಅದೇ ಕೆಲಸವನ್ನು ಭಾರತೀಯರೊಬ್ಬರು ಕನಿಷ್ಠಾವಧಿಯಲ್ಲಿ ಮುಗಿಸಿ ಕೊಟ್ಟಿದ್ದರು. ಇವರ ಈ ಸಾಧನೆಗೆ ಬ್ರಿಟೀಷ್ ಸರ್ಕಾರವೇ ತಲೆಬಾಗಿ, 1938ರಲ್ಲಿ ಗೌರವ ನೈಟ್ -ಹುಡ್ ಪದವಿ ನೀಡಿ ಗೌರವಿಸುತ್ತದೆ. ರಾವ್’ರವರ ಹೆಸರಿನ ಹಿಂದೆ ಸರ್ ಸೇರಿಕೊಳ್ಳುತ್ತದೆ. ಭಾರತೀಯ ಇತಿಹಾಸ ಮಾತ್ರ ಇವರನ್ನು ಉಲ್ಲೇಖಿಸುವುದನ್ನೇ ಮರೆಯುತ್ತದೆ.

ಅಖಂಡ ಭಾರತ ವಿಭಜನೆಗೊಂಡು, ಭಾರತ ಮತ್ತು ಪಾಕಿಸ್ತಾನಗಳೆಂಬ ಎರಡು ರಾಷ್ಟ್ರಗಳಾದ ದಿನದಿಂದಲೂ ಒಂದಿಲ್ಲ ಒಂದು ಕಾರಣಗಳಿಗೆ ಎರಡು ದೇಶಗಳ ನಡುವೆ ಒಂದಲ್ಲೊಂದು ವಿಷಯಕ್ಕೆ ತಿಕ್ಕಾಟ ನಡೆಯುತ್ತಲೆ ಇದೆ. ಆದರೆ ಭಾರತ ಮತ್ತು ಪಾಕಿಸ್ತಾನ ಒಂದೇ ನದಿಯ ನೀರನ್ನು ಉಪಯೋಗಿಸುತ್ತಿದ್ದರು, 70ವರ್ಷಗಳ ಇತಿಹಾಸದಲ್ಲಿ ನೀರಿಗಾಗಿ ಕಿತ್ತಾಡಿಕೊಂಡ ಉದಾಹರಣೆಯೇ ಇಲ್ಲ. ಯಾಕೆಂದರೆ ಭಾರತದಲ್ಲಿ ಹುಟ್ಟಿ ಪಾಕಿಸ್ತಾನದಲ್ಲಿ ಹರಿದು ಅರಬ್ಬಿಸಮುದ್ರವನ್ನು ಸೇರುವ ಸಿಂಧೂ ನದಿಯ ನೀರಾವರಿ ಯೋಜನೆ ಅಷ್ಟು ವ್ಯವಸ್ಥಿತವಾಗಿದೆ. ಆ ಯೋಜನೆಯನ್ನು ರೂಪಿಸಿದ್ದು ಕೂಡ ನಮ್ಮ ಬಿ.ಎನ್.ರಾವ್ ರವರೆ.1900ರ ನಂತರ ಸಿಂಧ್ (ಇಂದಿನ ಭಾರತ ಮತ್ತು ಪಾಕಿಸ್ತಾನಗಳ ಪಂಜಾಬ್) ಪ್ರಾಂತ್ಯದಲ್ಲಿ ಸಿಂಧೂ ನದಿ ನೀರಿಗಾಗಿನ ಬಡಿದಾಟ ತಾರಕ್ಕೇರಿರುತ್ತದೆ. ಬ್ರಿಟೀಷ್ ಸರ್ಕಾರ ಏನೆಲ್ಲಾ ಪ್ರಯತ್ನ ನಡಿಸಿದರೂ ನೀರಾವರಿ ಸಮಸ್ಯೆಯನ್ನು ಬಗೆಹರಿಸಲಾಗುವುದಿಲ್ಲ. 1935ರಲ್ಲಿ ಅಂದಿನ ಕಾಲದ ಮಹಾನ್ ಬ್ರಿಟೀಷ್ ಅಭಿಯಂತರರುಗಳಾದ ಸರ್ ಜಾನ್ ಎ’ರಂತವರನ್ನೊಳಗೊಂಡ ಕಮಿಟಿ ಸಹಿತ ಸೀಂಧ್ ನೀರಾವರಿ ಸಮಸ್ಯೆಯನ್ನು ಪರಿಹರಿಸಲಾಗದೆ ಕೈ ಚೆಲ್ಲುತ್ತಾರೆ. 1941ರಲ್ಲಿ ಈ ಕೆಲಸ ರಾವ್’ರವರ ಹೆಗಲೇರುತ್ತದೆ. ಸಿಂಧ್ ಪ್ರಾಂತ್ಯದ ನೀರಾವರಿ ಸಮಸ್ಯೆ ಮತ್ತು ಸಾಧ್ಯವಿರುವ ಪರಿಹಾರಗಳನ್ನೊಳಗೊಂಡ ವರದಿಯನ್ನು ತಯಾರಿಸುವ ಕೆಲಸವನೊಪ್ಪಿಕೊಂಡ ರಾವ್, ತಮ್ಮ ಅಗಾಧ ಗಣಿತದ ಪಾಂಡಿತ್ಯವನ್ನುಪಯೋಗಿಸಿ , ಇಪ್ಪತ್ತು-ಮೂವತ್ತು ವರ್ಷಗಳ ಅಂಕಿ ಅಂಶಗಳನ್ನು ಆಳವಾಗಿ ಅಭ್ಯಯಿಸಿದ ನಂತರ, ಬ್ರಿಟೀಷ್ ಸರ್ಕಾರಕ್ಕೆ ಸಿಂಧ್ ಪ್ರಾಂತ್ಯದ ನೀರಾವರಿ ಸಮಸ್ಯೆ ಮತ್ತು ಸಾಧ್ಯ ಪರಿಹಾರಗಳನೊಳಗೊಂಡ ಸಮಗ್ರ ವರದಿಯನ್ನು ನೀಡುತ್ತಾರೆ. ಇಂದಿಗೂ ಭಾರತ ಪಾಕಿಸ್ತಾನದ ನಡುವೆ ಸಿಂಧೂ ನದಿಯ ನೀರಿನ ಹಂಚಿಕೆಯಾಗುತ್ತಿರುವುದು ರಾವ್’ರವರ ವರದಿಯಾಧಾರದ ಮೇಲೆ ರೂಪಿತವಾಗಿರುವ ಯೋಜನೆಯಿಂದಲೇ. ಅಂತಹ ರಾವ್’ರ ಹೆಸರು ಇತಿಹಾಸದ ಪುಟಗಳಲ್ಲಿರದಿರುವುದು ನಮ್ಮ ದುರಾದೃಷ್ಟ.

ಸಿಂಧೂ ನದಿ ನೀರಿನ ಸಮಗ್ರ ವರದಿ ನೀಡಿದ ರಾವ್’ರನ್ನು ಬ್ರಿಟೀಷ್ ಸರ್ಕಾರ ಮತ್ತೆ ಕೊಲ್ಕೊತ್ತಾ ಸುಪ್ರಿಂಕೋರ್ಟ್’ನ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸುತ್ತದೆ. 1944 ರಲ್ಲಿ ವೃತ್ತಿಯಿಂದ ನಿವೃತ್ತಿಗೊಳ್ಳುವ ಬಿ.ಎನ್ ರಾವ್, ಜಮ್ಮು ಕಾಶ್ಮೀರದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗುತ್ತಾರೆ.

1946 ರಲ್ಲಿ ಭಾರತಕ್ಕೆ ಅಧಿಕಾರ ಹಸ್ತಾಂತರಿಸುವುದು ಖಚಿತವಾದಾಗ ಬ್ರಿಟೀಷರು ಭಾರತದ ಸಂವಿಧಾನ ರಚಿಸುವ ನಿಟ್ಟಿನಲ್ಲಿ ಯೋಚಿಸತೊಡಗುತ್ತಾರೆ. ಅದರಂತೆಯೇ ಸಂವಿಧಾನ ಕರಡು ಸಮಿತಿಯೊಂದನ್ನು ರಚಿಸುವ ಕಾರ್ಯದಲ್ಲಿ ತೊಡಗುತ್ತಾರೆ. ಆದರೆ ಸಂವಿಧಾನದ ಆರಂಭಿಕ ಕರಡೊಂದನ್ನು ತಯಾರಿಸದೆ ಸಮಿತಿ ರಚಿಸುವುದು ಮೂರ್ಖತನವೆಂದು ಅರಿವಾಗಿ , ಅಂತಹ ಆರಂಭಿಕ ಕರಡು ಪ್ರತಿಯನ್ನು ರಚಿಸುವ ಚಾಣಾಕ್ಷರೊಬ್ಬರ ಹುಡುಕಾಟದಲ್ಲಿ ತೊಡಗುತ್ತದೆ ಆಂಗ್ಲ ಸರಕಾರ. ಆಗ ಮತ್ತೆ ಬ್ರಿಟೀಷರ ಮನಸ್ಸಿಗೆ ಬರುವುದು ಮತ್ತದೆ ಬಿ.ಎನ್.ರಾವ್ . ಮೂವತ್ತು ವರ್ಷಗಳಷ್ಟು ಕಾಲ ನ್ಯಾಯಾಂಗ ಸೇವೆ ಸಲ್ಲಿಸಿದ ರಾವ್’ರವರಿಗಿಂತ ಸೂಕ್ತ ವ್ಯಕ್ತಿ ದೊರೆಯಲಸಾಧ್ಯವೆಂದರಿವಾದ ಕೂಡಲೆ, ರಾವ್’ರವರನ್ನು ಕರೆದು ಭಾರತದ ಸಂವಿಧಾನದ ಕರಡನ್ನು ಸಿದ್ದಪಡಿಸುವಂತೆ ಕೇಳಿಕೊಂಡಿದ್ದಲ್ಲದೇ , ಸಂವಿಧಾನದ ಕರಡು ಸಮಿತಿಗೆ ರಾವ್’ರವರನ್ನು ಹಿರಿಯ ಸಲಹೆಗಾರರಾಗಿ ನೇಮಿಸುತ್ತದೆ ಬ್ರಿಟೀಷ್ ಸರ್ಕಾರ.

ಒಪ್ಪಿಕೊಂಡಂತೆ ಕೆಲವೇ ದಿನಗಳಲ್ಲಿ, ರಾವ್’ರವರು 246 ವಿಧಿಗಳು ಮತ್ತು 9 ಅನುಛ್ಛೇಧಗಳನ್ನೊಳಗೊಂಡ ಆರಂಭಿಕ ಕರಡನ್ನು ರಚಿಸಿ ಸಂವಿಧಾನದ ಕರಡು ಸಮಿತಿಗೆ ಸಲ್ಲಿಸುತ್ತಾರೆ. ಅಷ್ಟರಲ್ಲಿ ಭಾರತಕ್ಕೆ ಸ್ವತಂತ್ರ ದೊರಕುತ್ತದೆ, ಸ್ವತಂತ್ರ ಬಂದ ಹದಿನಾಲ್ಕೇ ದಿನದಲ್ಲಿ ಅಂದರೆ 1947 ಆಗಸ್ಟ್ 29ರಂದು ,  ಭಾರತದ ಸಂವಿಧಾನ ರಚಿಸುವ ಕರಡು ಸಮಿತಿಯನ್ನು ಡಾ||ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ರಚಿಸಲಾಗುತ್ತದೆ. 207 ಸದಸ್ಯರನ್ನೊಳಗೊಂಡ ಈ ಸಮಿತಿಗೆ ಕೂಡ ಹಿರಿಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸ ಬೇಕೆಂದು ಬಿ.ಎನ್. ರಾವ್’ರನ್ನು ಕೇಳಿಕೊಳ್ಳಲಾಗುತ್ತದೆ. ಈ ಸಮಿತಿ ಕೂಡ ಸಂವಿಧಾನ ರಚನೆಗೆ ಮೂಲವನ್ನಾಗಿ ತೆಗೆದುಕೊಂಡಿದ್ದು ಬಿ.ಎನ್. ರಾವ್’ರವರ ಆರಂಭಿಕ ಕರಡು ಪ್ರತಿಯನ್ನೇ. ಅನೇಕ ತಿದ್ದುಪಡಿಯನ್ನು ಕಂಡ ಬಿ.ಎನ್ .ರಾವ್’ರವರ ಕರಡು ಪ್ರತಿ, ಸುಮಾರು ಎರಡು ವರ್ಷಗಳ ನಂತರ ಅಂದರೆ 1949 ನವಂಬರ್ 26ರಂದು ಒಂದು ಪರಿಪೂರ್ಣ ಸಂವಿಧಾನವಾಗಿ ತಯಾರಾಗುತ್ತದೆ. ನಮ್ಮ ಸಂವಿಧಾನ ರಚನೆಗೆ ಬಿಎನ್ ರಾವ್, ಅಂಬೇಡ್ಕರ್ ಸೇರಿದಂತೆ 284 ಸದಸ್ಯರು ಅಹೋರಾತ್ರಿ ದುಡಿಯುತ್ತಾರೆ. ಹಾಗೆ ನೋಡಿದಲ್ಲಿ ಭಾರತದ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಕೊಡುಗೆಗಿಂತ ಬಿ.ಎನ್ ರಾವ್’ರವರ ಕೊಡುಗೆ ಒಂದು ಕೈ ಹೆಚ್ಚೆನಿಸುತ್ತದೆ. ಅವರ ಆರಂಭಿಕ ಕರಡು ಪ್ರತಿಯ ಆಧಾರದ ಮೇಲೆಯೇ ನಮ್ಮ ಇಂದಿನ ಸಂವಿಧಾನ ನಿಂತಿರುವುದು. ಅಂತಹ ಮೇಧಾವಿ ನಮ್ಮ ಬಿ.ಎನ್ ರಾವ್.

ಕೊನೆಗೆ ಅಂದರೆ 1950 ಜನವರಿ 24ರಂದು 284 ಸದಸ್ಯರ ಸಹಿಯನ್ನೊಳಗೊಂಡ , 395 ವಿಧಿಗಳು ಮತ್ತು 8 ಅನುಛ್ಛೇಧಗಳನ್ನೊಳಗೊಂಡ ಭಾರತದ ಸಂವಿಧಾನ, ಭಾರತೀಯ ಸಂಸತ್’ನಲ್ಲಿ ಅಂಗೀಕಾರಗೊಂಡು, ಜನವರಿ 26 1950ರಿಂದ ರಾಷ್ಟ್ರಕ್ಕೆ ಸಮರ್ಪಣೆಗೊಳ್ಳುತ್ತದೆ. ಈಗ ಹೇಳಿ, ಈ ರಾವ್ ಬಗ್ಗೆ ತಿಳಿದುಕೊಳ್ಳದಿರುವುದು ಎಷ್ಟು ನಾಚಿಕೆಗೇಡಿನ ವಿಷಯವಲ್ಲವೇ? ಅದು ಕೂಡ ಒಂದು ರೂಪಾಯಿ ವೇತನವನ್ನು ಪಡೆಯದೆ ಸಂವಿಧಾನದ ಪ್ರತಿಯನ್ನು ರಚಿಸಿಕೊಟ್ಟ ರಾವ್’ರವರನ್ನು ಚರಿತ್ರೆಯ ಪುಟಗಳಲ್ಲಿ ಸೇರಿಸದಿರುವುದು ಮಾತ್ರ ವಿಪರ್ಯಾಸವೇ ಸರಿ.  ಇಂದಿಗೂ ಸಹ ಅರ್ಧಸತ್ಯದಂತಿರುವ ಭಾರತಿಯ ಚರಿತ್ರೆಯನ್ನೋದಿ, ಭಾರತದ ಸಂವಿಧಾನವನ್ನು ಸಂಪೂರ್ಣವಾಗಿ ಬರೆದಿದ್ದು ಅಂಬೇಡ್ಕರ್ ಎನ್ನುವ ತಪ್ಪು ಕಲ್ಪನೆ ಜನಜನಿತವಾಗಿದೆ, ಭಾರತೀಯ ಸಂವಿಧಾನವನ್ನು ರಚಿಸಿದ್ದು 284 ಸದಸ್ಯರನ್ನೊಳಗೊಂಡ ಸಮಿತಿಯೇ ಹೊರತು ಯಾವೊಬ್ಬರು ವೈಯಕ್ತಿಕವಾಗಿ ರಚಿಸಿದ್ದಲ್ಲ.  ಹಾಗೇನಾದರು ವೈಯಕ್ತಿಕ ಕೊಡುಗೆ ಇದೆ ಸಂವಿಧಾನಕ್ಕೆ ಎನ್ನುವುದಾದರೆ ಅದು ಸಂವಿಧಾನದ ಆರಂಭಿಕ ಕರಡು ಪ್ರತಿಯನ್ನು ಏಕಾಂಗಿಯಾಗಿ ರಚಿಸಿದ ಬಿ.ಎನ್.ರಾವ್’ರವರಿಗೆ ಸಲ್ಲಬೇಕು. ಬಹುಶಃ ಕಾಲಕಾಲಕ್ಕೆ ಜನರನ್ನು ಜಾತಿಯಾಧಾರದ ಮೇಲೆ ಓಲೈಸಿಕೊಂಡು ಬಂದ ನೀತಿಗೆಟ್ಟ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳೇ ಈ ನಮ್ಮ ಮಿಥ್ಯ ಚರಿತ್ರೆಗೆ ನೇರ ಹೊಣೆಯಷ್ಟೆ.

ನರಸಿಂಹರಾವ್’ರವರು ಸಂವಿಧಾನದ ಕೆಲಸ ಮುಗಿಸಿದ ನಂತರ, ವಿಶ್ವಸಂಸ್ಥೆಗೆ ಭಾರತದ ಶಾಶ್ವತ ಪ್ರತಿನಿಧಿಯಾಗಿ ಆಯ್ಕೆಯಾಗುತ್ತಾರೆ. ಅದೇ ಸಮಯದಲ್ಲಿ ಬರ್ಮಾ ದೇಶ, ತನ್ನ ಸಂವಿಧಾನದ ಕರಡನ್ನು ಸಿದ್ಧಪಡಿಸಿಕೊಡಲು ರಾವ್’ರನ್ನು ಕೇಳಿಕೊಳ್ಳುತ್ತದೆ. ಆ ಕೆಲಸವನ್ನು ಸಹ ರಾವ್’ರವರು ಅತಿ ಕನಿಷ್ಠಾವಧಿಯಲ್ಲಿ ರಚಿಸಿಕೊಡುವುದರ ಮೂಲಕ ಆ ದೇಶದ ಗೌರವಕ್ಕೆ ಭಾಜನರಾಗುತ್ತಾರೆ. ಬೇರೆ ದೇಶವೊಂದಕ್ಕೆ ಸಂವಿಧಾನ ಬರೆದು ಕೊಡುವಂತಹ ಮಹಾನ್ ಮೇಧಾವಿ ಬಿ .ಎನ್.ರಾವ್ , ನಮ್ಮ ಚರಿತ್ರೆಯ ಪುಟಗಳಿಗೆ ಬೇಡವಾದರೆ ?

  ವಿಶ್ವ ಸಂಸ್ಥೆಯಲ್ಲಿ ಒಂದೊಂದೆ ಹುದ್ದೆಗಳನ್ನೇರುತ್ತಾ ಹೋಗಿ 1950ರಲ್ಲಿ , ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ಲಿನ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಬಿ.ಎನ್.ರಾವ್. ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ಲಿನ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಭಾರತೀಯ ಕೂಡ ಬಿ.ಎನ್.ರಾವ್’ರವರೆ. ರಾವ್’ರವರು  ಅಧ್ಯಕ್ಷರಾಗಿದ್ದಾಗ ಭಾರತಕ್ಕೆ ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ಲಿನ ಸದಸ್ಯ ರಾಷ್ಟ್ರವಾಗುವ ಅದ್ಭುತ ಅವಕಾಶ ಒದಗಿ ಬರುತ್ತದೆ. ಆದರೆ ನೆಹರು ಎಂಬ ಬೇಜವಬ್ದಾರಿ ಪ್ರಧಾನಿಯಿಂದಾಗಿ ಭಾರತ ಅಂತಹ ಸುವರ್ಣಾವಕಾಶವನ್ನು ಕಳೆದುಕೊಳ್ಳುತ್ತದೆ. ಅಂದು ನೆಹರು ಮಾಡಿದ ಉದಾಸೀನತೆಯ ಫಲ , ಎಪ್ಪತ್ತು ವರ್ಷ ಕಳೆದರೂ, ಜಗತ್ತಿನ ಸೂಪರ್ ರಾಷ್ಟ್ರಗಳ ಪಟ್ಟಿಯಲ್ಲಿ ಇಂದಿಗೂ ಭಾರತದ ಹೆಸರಿಲ್ಲ. 1952ರಲ್ಲಿ ರಾವ್’ರವರಿಗೆ ವಿಶ್ವ ಸಂಸ್ಥೆಯ ಮಹಾ ಕಾರ್ಯದರ್ಶಿಯಾಗುವ ಅವಕಾಶ ಕೂದಲೆಳೆಯಲ್ಲಿ ತಪ್ಪಿ ಹೋಗುತ್ತದೆ. ಆದರೇನಂತೆ, ಅದೇ ವರ್ಷ ಹೇಗ್ ನಗರದಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಆಯ್ಕೆಯಾಗುತ್ತಾರೆ. ಅದೊಂದು ಭಾರತೀಯರಿಗೆ ಹೆಮ್ಮೆಯ ಕ್ಷಣ. ಎಲ್ಲಿಯ ಮಂಗಳೂರು ಎಲ್ಲಿಯ ವಿಶ್ವ-ಸಂಸ್ಥೆ. ರಾವ್’ರವರ ಪ್ರತಿ ಸಾಧನೆಯನ್ನು ಓದುವಾಗ , ರಾವ್’ರವರಿಲ್ಲದ ಭಾರತದ ಇತಿಹಾಸವೇ ಸಂಪೂರ್ಣ ಸುಳ್ಳೇನೋ ಎನಿಸುತ್ತದೆ.

ಇಂತಹ ಮಹಾನ್ ಮೇಧಾವಿ ,ಬ್ರಿಟೀಷರಿಂದಲೇ ಸರ್ ಎಂದು ಕರೆಸಿಕೊಂಡ ಸರ್, ಸಂವಿಧಾನ ರಚನೆಯ ಮೂಲ ಪುರುಷ, ಭಾರತದ ಕೀರ್ತಿಯನ್ನು ವಿಶ್ವ-ಸಂಸ್ಥೆಯ ಮೂಲಕ ಜಗತ್ತಿಗೆ ಸಾರಿದ ಹೆಮ್ಮೆಯ ಕನ್ನಡಿಗ ಬಿ.ಎನ್.ರಾವ್, ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವಾಗಲೇ, ನವೆಂಬರ್ 30, 1953ರಲ್ಲಿ ತಮ್ಮ 66ನೇ ವಯಸ್ಸಿನಲ್ಲಿ ಜ್ಯೂರಿಕ್’ನಲ್ಲಿ ತಮ್ಮ ಕೊನೆಯುಸಿರೆಳೆಯುತ್ತಾರೆ. ಅಲ್ಲಿಗೆ ಸ್ವತಂತ್ರ ಪೂರ್ವ ಭಾರತವನ್ನು ಬೆಳಗಿದ ಮತ್ತೊಂದು ದಿವ್ಯ ಚೇತನ ಭಗವಂತನಲ್ಲಿ ಲೀನವಾಗುತ್ತದೆ.

ಮತ್ತೊಂದು ಜನವರಿ 26 ಬರುತ್ತಿದೆ, ಮತ್ತೊಂದು ಗಣರಾಜ್ಯೋತ್ಸವ ಬರುತ್ತಿದೆ , ಈ ಬಾರಿಯಾದರು ನಾವು ಸಂವಿಧಾನದ ಪರಿಕಲ್ಪನೆಗೆ ಅರ್ಥಕೊಟ್ಟ ರಾವ್’ರವರನ್ನು ಒಂದು ದಿನದ ಮಟ್ಟಿಗಾದರು ನೆನೆಸಿಕೊಳ್ಳೋಣ , ಅವರಿಗೆ ಶಿರಬಾಗಿ ನಮಿಸೋಣ. ಭಾರತದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಬೆನೆಗಲ್ ನರಸಿಂಹ ರಾವ್’ರಂತಹ ಮಹಾನ್ ಸಾಧಕರು ಬೆರಳಣಿಕೆಯಷ್ಟೇ ಇರುವುದು. ಅಂತಹ ಮಹಾನ್ ಚೇತನವನ್ನು ಇತಿಹಾಸದ ಪುಟಗಳಲ್ಲಿ ಸೇರಿಸುವ ಕೆಲಸ ಆದಷ್ಟು ಬೇಗ ಆಗಲಿ. ಅಲ್ಲಿಯವರೆಗೂ , ನೀವೀಗ ಆ ಮಹಾನ್ ಚೇತನದ ಬಗ್ಗೆ ತಿಳಿದುಕೊಂಡಿದ್ದನ್ನು ಸಾಧ್ಯವಾದಷ್ಟು ಮಟ್ಟಿಗೆ, ಸಾಧ್ಯವಾದಷ್ಟು ಮಂದಿಗೆ ತಲುಪಿಸಿ. ಆ ಮೂಲಕ ಬಿ.ಎನ್. ರಾವ್’ರವರನ್ನು ಭಾರತದ ಪ್ರತಿಯೊಂದು ಮಗುವು ತಿಳಿಯುತ್ತಾ – ಓದುತ್ತಾ ಬೆಳೆಯಲಿ. ಯಾರಿಗೆ ಗೊತ್ತು ನಾಳೆ ಆ ಕಂದಮ್ಮಗಳಲ್ಲಿ ಮತ್ತೊಬ್ಬ ಬಿ.ಎನ್.ರಾವ್ ಹುಟ್ಟಿ ಬರಬಹುದು.

  ಹ್ಯಾಟ್ಸ್ ಆಫ್ ಟು ಯು ಸರ್.ಬಿ.ಎನ್.ರಾವ್.

Facebook ಕಾಮೆಂಟ್ಸ್

ಲೇಖಕರ ಕುರಿತು

Arjun Devaladakere

ಹೆಸರು ಅರ್ಜುನ್ ದೇವಾಲದಕೆರೆ , ಸ್ವಂತ ಊರು ಸಕಲೇಶಪುರ ತಾಲ್ಲೂಕಿನ ದೇವಾಲದಕೆರೆ ಎಂಬ ಮಲೆನಾಡ ಸ್ವರ್ಗ. ವಾಣಿಜ್ಯ ಮತ್ತು ವ್ಯವಹಾರ ವಿಷಯದಲ್ಲಿ ಉನ್ನತ ಪದವೀಧರ. ಸಧ್ಯಕ್ಕೆ ಬೆಂಗಳೂರಿನ ಒಂದು ಬಹುರಾಷ್ಟ್ರೀಯ ಸಾಫ್ಟ್ ವೇರ್ ಕಂಪೆನಿಯ ಉದ್ಯೋಗಿ. ಸಮಾಜಮುಖಿ ಬರಹ ಹವ್ಯಾಸ. ಸಧ್ಯ ಚಿಕ್ಕಮಗಳೂರು ಜಿಲ್ಲಾಪತ್ರಿಕೆ ದರ್ಪಣದ ಕಾಯಂ ಅಂಕಣಕಾರ. ಸತ್ಯ ಘಟನೆ ಆಧಾರಿತ "ಅವಳು" ಕಾದಂಬರಿ ಬಿಡುಗಡೆಗೆ ಸಿದ್ದವಾಗಿದೆ. ಕ್ರಿಕೆಟ್, ಫುಟ್ ಬಾಲ್ ,ಫೋಟೋಗ್ರಫಿ ಮತ್ತು ನಾಟಕಗಳಲ್ಲಿ ಅಭಿನಯ ಇತರೆ ಹವ್ಯಾಸಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!