ಅಂಕಣ

ಆಹಾ! ಸಂಸ್ಕೃತದ ವೈಭವವೆ….

ಕಳೆದ ವಾರ ಉಡುಪಿಯಲ್ಲಿ ಮೂರು ದಿವಸಗಳ ಕಾಲ ಅಖಿಲ ಭಾರತ ಸಂಸ್ಕೃತ ಅಧಿವೇಶನವು ಬಹಳ ಅರ್ಥಪೂರ್ಣವಾಗಿ ನಡೆದದ್ದು ನಮಗೆಲ್ಲ ಗೊತ್ತಿರುವ ವಿಚಾರ. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರತಿನಿಧಿಗಳು, ಗಣ್ಯರು,ಮಠಾಧಿಪತಿಗಳು ಹಾಗು ಸಂಸ್ಕತಾಭಿಮಾನಿಗಳು ಪೊಡವಿಗೊಡೆಯನ ನಾಡಲ್ಲಿ ನಡೆದ ಈ ಮೂರು ದಿನಗಳ ಸಂಸ್ಕತೋತ್ಸವಕ್ಕೆ ಸಾಕ್ಷಿಯಾದರು. ಪ್ರಾಚೀನದಿಂದ ಆಧುನಿಕ ಭಾರತದ ಜ್ಞಾನಪರಂಪರೆಯನ್ನು ಸಾರುವ ಮೂಲಕ ಅಧಿವೇಶನದ ಕೇಂದ್ರಬಿಂದುವಾಗಿ, ಈ ಉತ್ಸವಕ್ಕೊಂದು ಮೆರಗನ್ನು ನೀಡಿದ್ದು ದೃಶ್ಯ-ಶ್ರವ್ಯ ಪ್ರದರ್ಶಿನಿ ‘ಪರಂಪರಾ’. ಇದರ ವೈಶಿಷ್ಟ್ಯತೆಯ ಕೆಲವು ತುಣುಕುಗಳನ್ನು ಅಕ್ಷರರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ.

‘ಪರಂಪರಾ’ದ ಭವ್ಯ ದ್ವಾರವನ್ನು ಪ್ರವೇಶಿಸುತ್ತಿದ್ದಂತೆ ಸ್ವಾಗತ ಕೋರಿದ್ದು ಕಡುಗೋಲಧಾರಿ ಶ್ರೀಕೃಷ್ಣನ ಸುಂದರವಾದ ಮೂರ್ತಿ ಹಾಗು ಭಾರತಮಾತೆಯ ಚಿತ್ರಪಟ. ಇವುಗಳಿಗೆ ಮನದಲ್ಲೆ ನಮಿಸಿ ಮುಂದಡಿಯುತ್ತಿದ್ದಂತೆ ಎದುರಾಗಿದ್ದು ಸಾಧಾರಣ ಗಾತ್ರದ ಟಿವಿ ಹಾಗು ಟಿವಿಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಕಾರ್ಟೂನ್‍ನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದ ಪುಟಾಣಿಗಳು. ಸಂಸ್ಕೃತ ಪಾಠವು ಬಾಲ್ಯದಿಂದಲೆ ಪ್ರಾರಂಭವಾಗಬೇಕೆಂಬ ಪರಿಕಲ್ಪನೆಯಂತೆ ಪ್ರದರ್ಶನಿಯು ಚಿಕ್ಕಮಕ್ಕಳ ವಿಭಾಗದಿಂದಲೆ ಪ್ರಾರಂಭಗೊಂಡಿತ್ತು. ಮಕ್ಕಳಿಗಾಗಿಯೆ ಸಂಸ್ಕೃತ ಭಾಷೆಯಲ್ಲಿ ಕಾರ್ಟೂನ್ ರೂಪದಲ್ಲಿ ನಿರ್ಮಿಸಲಾದ‘ಸಂಸ್ಕೃತಕಥಾಚಿತ್ರ’ಗಳ ಕುರಿತಾದ ಮಾಹಿತಿಯನ್ನು ಚಾರ್ಟ್‍ಗಳಲ್ಲಿ ನೀಡಲಾಗಿತ್ತು. ಈ ಕಥಾಚಿತ್ರಗಳು ಯೂಟ್ಯೂಬ್‍ನಲ್ಲಿ ಲಭ್ಯವಿದ್ದು, ಅದರ ಲಿಂಕ್‍ಗಳನ್ನು ಮಾತ್ರವಲ್ಲದೆ ಕ್ಯು.ಆರ್(QR CODE)ಕೋಡ್‍ಗಳನ್ನು ನೀಡಲಾಗಿದ್ದು ವಿಶೇಷ. ಇವುಗಳ ಜತೆಗೆ ಸಂಸ್ಕೃತ ಭಾಷೆಯ ಸಿನಿಮಾಗಳು ಹಾಗು ಕಿರುಚಿತ್ರಗಳ ಮಾಹಿತಿಯನ್ನು ನೀಡಲಾಗಿತ್ತು.

ವಿಜ್ಞಾನವನ್ನು ಪ್ರತ್ಯೇಕಿಸಿ ಸಂಸ್ಕೃತವನ್ನು ಕಾಣಲು ಸಾಧ್ಯವಿಲ್ಲದ ಮಾತು. ಪ್ರಾಚೀನ ಕಾಲದಲ್ಲಿಯೇ ನಮ್ಮ ಋಷಿ ಪರಂಪರೆಯು ಈಗಿನ ಯಾವುದೆ ಉಪಕರಣಗಳಿಲ್ಲದೆ, ಆದರೆ ಇಂದಿನಿ ಆಧುನಿಕ ವಿಜ್ಞಾನಕ್ಕೆ ಸೆಡ್ಡು ಹೊಡೆಯುವಂತಹ ಆವಿಷ್ಕಾರಗಳನ್ನು, ಸಿದ್ಧಾಂತಗಳನ್ನು,ಪ್ರಮೇಯಗಳನ್ನು ಪ್ರತಿಪಾದಿಸುವುದರ ಕುರಿತಾಗಿ ಜಗತ್ತು ಇಂದಿಗು ನಿಬ್ಬರಗಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಸಂಸ್ಕೃತ ಸಾಹಿತ್ಯದಲ್ಲಿರುವ ವಿಜ್ಞಾನದ ವಿಷಯಗಳನ್ನು ಒಳಗೊಂಡಿರುವ ಚಾರ್ಟ್‍ಗಳನ್ನು ‘ವಿಜ್ಞಾನ ಪರಂಪರಾ’ವಿಭಾಗದಲ್ಲಿ ಜೋಡಿಸಲಾಗಿತ್ತು. ಖಗೋಲಶಾಸ್ತ್ರ, ಗಣಿತಶಾಸ್ತ್ರ,ರಸಾಯನಶಾಸ್ತ್ರ, ಲೋಹಶಾಸ್ತ್ರ, ಸಸ್ಯಶಾಸ್ತ್ರ,ಇಂಜಿನಿಯರಿಂಗ್, ಬೀಜಗಣಿತ, ರೇಖಾಗಣಿತ ಇತ್ಯಾದಿ ವಿಜ್ಞಾನದ ವಿಭಾಗಗಳಿಗೆ ಸಂಬಂಧಪಟ್ಟ ಸಂಸ್ಕೃತದ ಶ್ಲೋಕಗಳನ್ನು ಹಾಗು ಅವುಗಳ ಅರ್ಥವನ್ನು ಇಂಗ್ಲೀಷ್ ಹಾಗು ಕನ್ನಡ ಭಾಷೆಗಳಲ್ಲಿ ಚಿತ್ರಸಹಿತ ವಿವರಿಸಲಾಗಿತ್ತು. ಅಲ್ಲದೆ ಆಯ್ದುಕೊಂಡ ಶ್ಲೋಕಗಳು ಉಲ್ಲೇಖಿಸಲ್ಪಿಟ್ಟಿರುವ ಗ್ರಂಥದ ಹೆಸರು ಹಾಗು ಶ್ಲೋಕದ ಸಂಖ್ಯೆಯನ್ನು ನಮೂದಿಸಲಾಗಿತ್ತು.

ಭಾಸ್ಕಾರಾಚಾರ್ಯ, ವರಾಹಮಿಹಿರ ಸೇರಿದಂತೆ ಪ್ರಮುಖ ಪ್ರಾಚೀನ ವಿಜ್ಞಾನಿಗಳು, ಸಂಸ್ಕೃತದ ಕವಿಯತ್ರಿಯರು, ನಾಟಕಕಾರರು ಹಾಗು ಕಲೆಗಳ ಕುರಿತು ಮಾಹಿತಿ, ಇಂದು ಇಡಿ ವಿಶ್ವವೆ ಒಪ್ಪಿಕೊಂಡು ಅಳವಡಿಸಿಕೊಂಡಿರುವ ‘ಯೋಗಶಾಸ್ತ್ರ’, ಶಾಸನ ವ್ಯವಸ್ಥೆ, ರಾಜಕೀಯ, ಅರ್ಥಶಾಸ್ತ್ರ, ಉದ್ಯೋಗ,ಸಾಮಾಜಿಕ ಜೀವನ, ಪರರಾಷ್ಟ್ರವಿಷಯ ಮುಂತಾದ ಅನೇಕ ವಿಷಯಗಳನ್ನು ಒಳಗೊಂಡಿರುವ ಕೌಟಿಲ್ಯನ‘ಅರ್ಥಶಾಸ್ತ್ರ’, ಪ್ರಾಚೀನ ಕಾಲದಲ್ಲಿ ಗ್ರಹ, ನಕ್ಷತ್ರಗಳ ಗತಿಗಳನ್ನು ನೋಡಲು ಬಳಸುತ್ತಿದ್ದ ಸಮ್ರಾಟ್, ನಾಡಿ ಹಾಗು ಗೋಲಯಂತ್ರಗಳನ್ನೊಳಗೊಂಡ‘ಖಗೋಲಶಾಸ್ತ್ರ’, ಗಿಡಮೂಲಿಕೆಗಳ ಔಷಧೀಯ ಗುಣಗಳ ಕುರಿತು ಮಾಹಿತಿಯು ಸೇರಿದಂತೆ ಭಾರತದ ಪ್ರಾಚೀನ ವೈದ್ಯಕೀಯ ಶಾಸ್ತ್ರವಾದ‘ಆಯುರ್ವೇದಶಾಸ್ತ್ರ’ದ ವಿವಿಧ ಮಜಲುಗಳು, ಹೀಗೆ ಪ್ರಾಚೀನ ಭಾರತದ ಜ್ಞಾನಪರಂಪರೆಯ ಅಮೋಘ ದರ್ಶನ ಇಲ್ಲಿ ಲಭ್ಯವಿತ್ತು. ಅಲ್ಲದೆ ಇವುಗಳನ್ನು ವೀಕ್ಷಿಸಲು ಬರುತ್ತಿದ್ದ ಸಾಮಾನ್ಯ ಜನರಿಗೆ ಉಡುಪಿಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಅರ್ಥವಾಗುವ ರಿತಿಯಲ್ಲಿ ವಿವರಣೆಯನ್ನು ನೀಡುತ್ತಿದ್ದರು.

ಕೇವಲ ಪ್ರಾಚೀನ ಭಾರತದಲ್ಲಿನ ಸಂಸ್ಕೃತದ ವೈಭವಕ್ಕೆ ಸೀಮಿತಗೊಳಿಸಿಕೊಳ್ಳದೆ, ಆಧುನಿಕ ಭಾರತದಲ್ಲಿ ಅಂದರೆ ಪ್ರಸ್ತುತ ಸಂಸ್ಕೃತದ ಭಾಷೆಗೆ ಸಂಬಂಧಪಟ್ಟಂತೆ ನಡೆಯುತ್ತಿರುವ ಕಾರ್ಯಗಳ ಕುರಿತಾಗಿಯೂ ಜನರಿಗೆ ಮಾಹಿತಿಯನ್ನು  ನೀಡಿದ್ದು‘ಪರಂಪರಾ’ದ ಹೆಗ್ಗಳಿಕೆ. ಸಂಸ್ಕೃತ ಭಾಷೆ ಕೇವಲ ತಾಳೇಗರಿಗೆ ಸೀಮಿತಾದುದಲ. ‘ವಿಕಿಸ್ತೋತ್ರ’, ‘ವಿಕಿಸೂಕ್ತಯಃ’, ‘ವಿಕಿಶಬ್ದಕೋಶಃ’, ‘ವಿಕಿಪುಸ್ತಕಾನಿ’ಸೇರಿದಂತೆ ಹತ್ತು ಸಾವಿರಕ್ಕು ಮಿಕ್ಕಿ ಲೇಖನಗಳು‘ಸಂಸ್ಕೃತ ವಿಕಿಪೀಡಿಯಾ’ದಲ್ಲಿ ಲಭ್ಯವಿದೆ ಎಂಬ ಅಚ್ಚರಿಯ ಸಂಗತಿಯನ್ನು ‘ಸಂಸ್ಕೃತ ವಿಕಿಪೀಡಿಯಾ’ವಿಭಾಗ ತಿಳಿಸಿದರೆ, ಇಂದು ಇಡಿ ಜಗತ್ತೆ ಸಂಸ್ಕೃತವನ್ನು ಪುರಸ್ಕರಿಸುತ್ತಿರುವ ಮಾಹಿತಿಯನ್ನು ಒದಗಿಸುತ್ತಿತ್ತು ‘ಸಂಸ್ಕೃತವಿಶ್ವಮ್’. ಮನೆ,ಮನಗಳಿಗೆ ಅಂಚೆ ಮೂಲಕ ಸಂಸ್ಕೃತವನ್ನು ತಲುಪಿಸುವ ಸಂಸ್ಕೃತ ಭಾರತಿಯ ಯೋಜನೆ ಹಾಗು ಇಂದು ಸಂಸ್ಕೃತದ ಅಧ್ಯಯನಕ್ಕೆ ವಿದ್ಯಾಲಯಗಳಲ್ಲಿರುವ ಅವಕಾಶಗಳ ಕುರಿತಾಗಿಯು ಮಾಹಿತಿಯು ಇಲ್ಲಿ ಲಭ್ಯವಿತ್ತು.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಹಯೋಗದಲ್ಲಿ ಪ್ರಾಣಿ-ಪಕ್ಷಿ, ಗಿಡಗಳು, ಅಡುಗೆಗೆ ಸಂಬಂಧಪಟ್ಟ ವಸ್ತುಗಳು, ದಿನಬಳಕೆ, ಮನೆ ಹಾಗು ಕಚೇರಿಯಲ್ಲಿ ಬಳಸುವ ವಸ್ತುಗಳನ್ನು ಮತ್ತು ಅವುಗಳ ಸಂಸ್ಕೃತದ ಹೆಸರುಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಜತೆಗೆ ಬಾಲಸಾಹಿತ್ಯ, ವ್ಯಾಕರಣ, ಸಂಸ್ಕøತ ವಿಜ್ಞಾನ, ಕಥೆ,ಕಾದಂಬರಿ ಸೇರಿದಂತೆ ವಿವಿಧ ಸಂಸ್ಕೃತ ಸಾಹಿತ್ಯಗಳು, ಸಿಡಿಗಳ ಪ್ರದರ್ಶನ ಹಾಗು ಮಾರಾಟ ವ್ಯವಸ್ಥೆಯನ್ನು ಮಾಡಲಾಗಿತ್ತು. ಖರೀದಿಯು ಭರದಿಂದಲೆ ಸಾಗಿತ್ತು.

ಇವೆಲ್ಲವುಗಳ ಮಧ್ಯೆ ಪ್ರದರ್ಶಿನಿಗೆ ಇನ್ನಷ್ಟು ಮೆರಗನ್ನು ನೀಡಿದ ಎರಡು ವಿಷಯಗಳೆಂದರೆ ಭಾರತ ಸರ್ಕಾರದ ರಾಷ್ಟ್ರೀಯ ಪಾಂಡುಲಿಪಿ ಮಿಶನ್ ಏರ್ಪಡಿಸಿದ್ದ ಸುಮಾರು 12ನೇ ಶತಮಾನಗಳಷ್ಟು ಪುರಾತನವಾದುದು ಸೇರಿದಂತೆ ಸುಮಾರು 30ಕ್ಕೂ ಮಿಕ್ಕಿ ಪ್ರಾಚೀನ ತಾಳೆಗರಿ ಗ್ರಂಥಗಳ ಪ್ರದರ್ಶನ‘ನಮಾಮಿ’ ಮತ್ತು ಉಪಗ್ರಹಗಳಾದ ‘ಆರ್ಯಭಟ’, ‘ರೋಹಿಣಿ’, ‘ಭಾಸ್ಕರ’ ಮತ್ತು ಚಂದ್ರಯಾನ,ಮಂಗಳಯಾನ ಹಾಗು ಜಿಎಸ್‍ಎಲ್‍ವಿ ರಾಕೆಟ್‍ಗಳ ಮಾದರಿಗಳ ಪ್ರದರ್ಶನ ‘ಇಸ್ರೊ’.

ಹೀಗೆ ‘ಪರಂಪರಾ’ಗೊಮ್ಮೆ ಪ್ರದಕ್ಷಿಣೆ ಹಾಕುವುದು ಭಾರತದ ಜ್ಞಾನಪರಂಪರೆ ಎಂಬ ದೇಗುಲಕ್ಕೆ ಸುತ್ತುಬಂದ ಅನುಭವವನ್ನು ನೀಡುವುದರ ಜತೆಗೆ ಆ ಪರಂಪರೆಯ ವಿಶಾಲತೆಗಿನ ಅರಿವು ಹಾಗು ಅದನ್ನು ಉಳಿಸುವ ಹೊಣೆಗಾರಿಕೆಯ ಕುರಿತು ಮನಸ್ಸಿನಲ್ಲಿ ಜಾಗೃತಿ ಮೂಡಿಸುತ್ತಿದ್ದುದು ಸುಳ್ಳಲ್ಲ.

Facebook ಕಾಮೆಂಟ್ಸ್

ಲೇಖಕರ ಕುರಿತು

Chaithanya Kudinalli

ಓದಿದ್ದು ಬಿಎಸ್ಸಿ, ಪ್ರಸ್ತುತ ಪತ್ರಿಕೋದ್ಯಮ ವಿದ್ಯಾರ್ಥಿ. ಹಾಗಾಗಿ ಓದು, ಬರವಣಿಗೆ, ತಿರುಗಾಟ ಮತ್ತು ಫೋಟೊಗ್ರಫಿ ಹವ್ಯಾಸ ಮಾತ್ರವಲ್ಲ ಕಾಯಕ ಕೂಡ. ರಾಜಕಾರಣ, ಇತಿಹಾಸ, ಪ್ರಚಲಿತ ವಿದ್ಯಮಾನಗಳು, ಕಥೆ, ಕಾದಂಬರಿ, ಸಿನಿಮಾ ಇವು ಆಸಕ್ತಿದಾಯಕ ವಿಷಯಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!