ಪ್ರವಾಸ ಕಥನ

ಆಯಸ್ಕಾಂತೀಯ ರಾವಣ

“ಪೆರುವಿನ ಪವಿತ್ರ ಕಣಿವೆಯಲ್ಲಿ” ನೇಮಿಚಂದ್ರರವರ ಪ್ರವಾಸ ಕಥನ ನನಗೆ ತುಂಬಾ ಇಷ್ಟವಾದ ಪುಸ್ತಕಗಳಲ್ಲೊಂದು. ಮಹಿಳೆಯರಿಬ್ಬರೇ ಗುರುತು ಪರಿಚಯದವರಿಲ್ಲದ, ಎಷ್ಟೋ ಜನರು ಹೆಸರೂ ಸಹ ಕೇಳಿಲ್ಲದ ದೇಶಗಳಿಗೆ ಹೋಗಿ ಬಂದ ಸಾಹಸಗಾಥೆಯನ್ನು ಎಣಿಕೆಯಿಲ್ಲದಷ್ಟು ಸಲ ಓದಿ ಮುಗಿಸಿದ್ದೇನೆ. ಪೆರು ಹಾಗೂ ಬ್ರೆಝಿಲ್ ದೇಶಗಳ ರೋಮಾಂಚಕ ವಿವರಣೆಗಳನೇಕವಿದ್ದರೂ, ನಾಸ್ಕಾ ಲೈನ್ಸ್ ನನ್ನ ಕುತೂಹಲ ಕೆರಳಿಸಿವೆ. ಈ ಚಿತ್ರಗಳೆಲ್ಲ ಆಕಾಶದಿಂದ ನೋಡಿದಾಗ ಮಾತ್ರ ಕಾಣಬಹುದಾದ ಅಗಾಧ ಆಕಾರವನ್ನು ಹೊಂದಿವೆ. ನಾಸ್ಕಾ ಲೈನ್ಸ್ ಬಗ್ಗೆ ಇಂಟರ್ನೆಟ್ಟಿನಲ್ಲಿ ತುಂಬಾ ಮಾಹಿತಿ ಲಭ್ಯವಿದೆ. ಒಬ್ಬೊಬ್ಬ ಲೇಖಕ, ಅನ್ವೇಷಕರದ್ದೂ ಒಂದೊಂದು ಊಹೆ. ಬಹುಶಃ ಮಾನವನು ಎಂದಿಗೂ ಭೇದಿಸಲಾಗದ ರಹಸ್ಯ.

 

“ವಾಸ್ತವ ರಾಮಾಯಣ” (ಮೂಲ ಮರಾಠಿ ಲೇಖಕರು ಡಾ. ಪದ್ಮಾಕರ ಎ. ವರ್ತಕ, ಕನ್ನಡ ಭಾಷಾನುವಾದ: ಹೇಮಂತರಾಜ) ರಾಮಾಯಣವನ್ನು ಆ ಕಾಲದಲ್ಲಿ ನಡೆದಿರಬಹುದಾದ ಐತಿಹಾಸಿಕ ಘಟನೆಯೆಂದು ನಿರೂಪಿಸಿ ಅದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಒದಗಿಸಿರುವ ಗ್ರಂಥ. ಯಾವುದೇ ಪವಾಡಗಳನ್ನೊಳಗೊಂಡಿಲ್ಲದ, ವೈಜ್ಞಾನಿಕ ವಿಶ್ಲೇಷಣೆಗಳನ್ನು ಹೊಂದಿರುವ ಅಪರೂಪದ ಪುಸ್ತಕ. ಇದರಲ್ಲಿ ನಾಸ್ಕಾಲೈನ್ಸ್ ಬಗ್ಗೆ ಕೆಲ ವಿವರಗಳಿವೆ.

ಪಿಸ್ಕೊ ಉಪಸಾಗರದ ತೀರದಲ್ಲಿರುವ ಬೆಟ್ಟದ ಮೇಲ್ಮೈ ಮೇಲೆ ಪೂರ್ವ ದಿಕ್ಕಿನ ಗುರುತಾಗಿ ಕೊರೆದಂತಿರುವ, ವಿಲಕ್ಷಣವಾಗಿ ಹೊಳೆಯುವ ಪ್ರಚಂಡ ತ್ರಿಶೂಲದ ಆಕೃತಿಯಿದೆ. ಇದು ಯಾರಿಂದ, ಯಾವಾಗ, ಏತಕ್ಕಾಗಿ ಕೊರೆಯಲ್ಪಟ್ಟಿತೆಂಬುದು ಇಂದಿಗೂ ನಿಗೂಢವಾಗಿದೆ. ಆದರೆ ರಾಮಾಯಣದಲ್ಲಿ ಬರುವ ವಿವರಣೆಯೊಂದು ಇದನ್ನು ಉಲ್ಲೇಖಿಸುತ್ತದೆ ಎಂದು ಭಾವಿಸಬಹುದು. ಸೀತೆಯ ಶೋಧಕ್ಕಾಗಿ ಪೂರ್ವ ದಿಕ್ಕಿನತ್ತ ಹೊರಟ ವಾನರರಿಗೆ ಸುಗ್ರೀವನು ಈ ರೀತಿಯಾಗಿ ಹೇಳುತ್ತಾನೆ, ” ಆ ಪ್ರಚಂಡ ಪರ್ವತದ ಅಗ್ರಭಾಗದಲ್ಲಿ ಮೂರು ಟಿಸಿಲುಗಳುಳ್ಳ ತಾಲವೃಕ್ಷದ ಸುವರ್ಣ ಧ್ವಜವನ್ನು ಸ್ಥಾಪಿಸಲಾಗಿದೆ. ಅದು ಕೆಳಗಿನ ಹಿಡಿಕೆಯಿಂದೊಡಗೂಡಿ ಹೊಳೆಯುತ್ತಿರುತ್ತದೆ. “

ಪೆರುವಿನ ತ್ರಿಶೂಲ, ಅಥವಾ ರಾಮಾಯಣದಲ್ಲಿ ವರ್ಣಿಸಿದಂತಹ ತಾಲವೃಕ್ಷ.

ಡಾ. ಪಿ.ಎ. ವರ್ತಕರ ಪ್ರಕಾರ, ಸುಗ್ರೀವನೋ, ವಾಲ್ಮೀಕಿಯೋ ದಕ್ಷಿಣ ಅಮೇರಿಕವನ್ನು ಸಂದರ್ಶಿಸಿರಬೇಕು, ಇಲ್ಲವಾದಲ್ಲಿ ಇಷ್ಟು ನಿಖರವಾದ ವರ್ಣನೆ ಸಾಧ್ಯವಿರಲಿಲ್ಲ.

ಹನುಮಂತನನ್ನು ನೆನಪಿಸುವಂತಹ ನಾಸ್ಕಾದ ಚಿತ್ರ.

 

  ಪುರಾಣಗಳ ಪ್ರಕಾರ ಅಸುರರ ರಾಜನಾದ ಬಲಿ ಚಕ್ರವರ್ತಿಯನ್ನು ವಾಮನನು ಪಾತಾಳಕ್ಕೆ ತಳ್ಳುತ್ತಾನೆ. ಭೌಗೋಳಿಕವಾಗಿ ನೋಡಿದರೆ, ಪೃಥ್ವಿಯಲ್ಲಿ ಭಾರತದ ವಿರುದ್ಧ ದಿಶೆಯಲ್ಲಿರುವುದು ದಕ್ಷಿಣ ಅಮೇರಿಕಾ. ಅಸುರರಷ್ಟೇ ಅಲ್ಲದೆ, ನಾಗರಂಥ ಇತರ ಜನಾಂಗದವರೂ ಪಾತಾಳದಲ್ಲಿ ವಾಸಿಸುತ್ತಿದ್ದರಲ್ಲದೇ, ಆಗಾಗ ಭೂಲೋಕಕ್ಕೆ ( ಅಂದರೆ ಭಾರತಕ್ಕೆ) ಬರುತ್ತಿದ್ದರು. ಅವರ ಬಳಿ ಆಕಾಶಯಾನದ ವಾಹನಗಳೂ (ರಾವಣನ ಪುಷ್ಪಕ ವಿಮಾನದಂತೆ) ಇದ್ದಿರಬಹುದು. ನಾಸ್ಕಾ ಲೈನ್ಸ್ ಈ ವಾಹನಗಳ ಓಡಾಟಕ್ಕೆ ಸಹಕಾರಿಯಾಗುತ್ತಿರಬಹುದು ( ವಿಮಾನ ನಿಲ್ದಾಣದಲ್ಲಿನ ರನ್ ವೇ ತರಹ). ವಿಚಿತ್ರ ಆಕೃತಿಯ ಬೃಹತ್ ಚಿತ್ರಗಳು ವೈಮಾನಿಕರಿಗೆ ಮಾರ್ಗದರ್ಶಿಯಾಗಿರಬಹುದು.

 

ನಾಸ್ಕಾದಿಂದ ೨೫೦ ಮೈಲಿ ದೂರದಲ್ಲಿರುವ ಮರುಭೂಮಿಯೊಂದರಲ್ಲಿ ೩೩೦ ಅಡಿ ಎತ್ತರದ ಮುಕುಟಧಾರಿಯೊಬ್ಬನ ಮೂರ್ತಿಯಿದೆ. ಇದು ಬಲಿಯದಿರಬಹುದೆಂಬ ಅಂದಾಜು. ಅಸುರರ ಶಿಲ್ಪಿಯಾದ ಮಯನಿಂದಲೇ ಅಲ್ಲಿಯ ಒಂದು ಜನಾಂಗ ಮಯಾನ್ ಶುರುವಾಗಿರಬಹುದೆ?

 

ನೇಮಿಚಂದ್ರರವರೂ ಸಹ ಪೆರುವಿನಲ್ಲಿ ಕೆಲವು ಕಡೆ  ಕಂಡದ್ದನ್ನು ಉಲ್ಲೆಖಿಸಿದ್ದಾರೆ. ಇತ್ತೀಚಿನ ಸಂಶೋಧನೆಯಲ್ಲಿ ನಾವು ಪೂಜೆಯಲ್ಲಿ ಬಳಸುವ ಮಂಡಲವೂ ಕಂಡು ಬಂದಿದೆ.

ಭೂಮಿಯ ಮೇಲೆ ಬರೆದ ಈ ರೀತಿಯ ಚಿತ್ರಗಳನ್ನು geoglyphs ಎನ್ನುತ್ತಾರೆ. ಈ ರೀತಿಯ ಚಿತ್ರಗಳು ಅನೇಕ ದೇಶಗಳಲ್ಲಿ ಕಂಡು ಬರುತ್ತವೆ. ಆದರೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಮ್ಮ ದೇಶದಲ್ಲಿ ಇಂತಹದ್ದೇನೂ ಇರುವ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ನಮ್ಮಲ್ಲಿರುವ ದೇವಾಲಯಗಳೆಲ್ಲ ಐತಿಹಾಸಿಕವಾದವುಗಳು. ಅನೇಕ ಪೌರಾಣಿಕ ಕಥೆಗಳನ್ನು ಶಿಲ್ಪಗಳ ರೂಪದಲ್ಲಿ ಕೆತ್ತಿಡಲಾಗಿದೆ, ಆದರೆ ಬರೀ ನೆಲದ ಮೇಲಿನ ಚಿತ್ರಗಳಿಲ್ಲ ಎಂದು ಭಾವಿಸಿದ್ದೆ. ಆದರೆ ಮಹಾರಾಷ್ಟ್ರದ ಕರಾವಳಿ ತೀರದಲ್ಲಿರುವ ರತ್ನಗಿರಿ ಜಿಲ್ಲೆಯಲ್ಲಿರುವ ಕೆಲವು ಹಳ್ಳಿಗಳಲ್ಲಿ ಕೆಲವು ಚಿತ್ರಗಳಿವೆಯೆಂದು ತಿಳಿದು ಬಂದಿತು. ರತ್ನಾಗಿರಿ ಜಿಲ್ಲೆಯ ಪ್ರವಾಸಿ ಕೈಪಿಡಿಯೊಂದರಲ್ಲಿ “ನಿವಳೆ” ಎಂಬ ಹಳ್ಳಿಗೆ ಹೋಗುವ ರಸ್ತೆಯ ಬದಿಗೆ ನೆಲದ ಮೇಲೆ ಕೊರೆದ ಕೆಲವು ಚಿತ್ರಗಳಿವೆ, ಅವನ್ನು ಪಾಷಾಣ ಶಿಲ್ಪಗಳೆಂದು ಗುರುತಿಸುತ್ತಾರೆ” ಎಂಬ ಮಾಹಿತಿ ಇತ್ತು. ಅಲ್ಲಿಯ ವಾರ್ತಾಪತ್ರಿಕೆಗಳಲ್ಲಿ ಅದರ ಬಗ್ಗೆ ಅನೇಕ ಮಾಹಿತಿಗಳನ್ನೊಳಗೊಂಡ ಲೇಖನಗಳು ಪ್ರಕಟವಾಗುತ್ತಿದ್ದವೆಂದು ತಿಳಿದು ಬಂದಿತು.

 

ದೀಪಾವಳಿ ರಜೆಗೆ ನಾವೆಲ್ಲರೂ ರತ್ನಾಗಿರಿಗೆ ಹೋಗಿದ್ದೆವು. ಕೆಲವು ಚಿತ್ರಗಳನ್ನಾದರೂ ನೋಡಬೇಕೆಂಬುದು ನಮ್ಮ ಅಭಿಲಾಷೆಯಾಗಿತ್ತು. ಆದರೆ ವಿಚಾರಿಸಿದ ಎಷ್ಟೋ ಜನರಿಗೆ ಅದರ ಬಗ್ಗೆ ಗೊತ್ತೇ ಇರಲಿಲ್ಲ. ಕೆಲವರಿಗೆ ಕೇಳಿ ತಿಳಿದಿತ್ತೇ ವಿನಃ ಪ್ರತ್ಯಕ್ಷ ಕಂಡವರು ಯಾರೂ ಸಿಗಲಿಲ್ಲ. ಬಹಳಷ್ಟು ಕಡೆ ವಿಚಾರಿಸಲಾಗಿ ಶ್ರೀ ಸುಧೀರ ರಿಸಬುಡ  ಎಂಬವರು ಪಾಷಾಣ ಶಿಲ್ಪಗಳ ಅನ್ವೇಷಣೆಯಲ್ಲಿ ತೊಡಗಿದ್ದಾರೆಂದು ತಿಳಿಯಿತು. ಅವರನ್ನು ಭೇಟಿಯಾಗುವಷ್ಟರಲ್ಲಿ ನಮ್ಮ ಒಂದು ದಿನದ ರಜೆ ಮಾತ್ರ ಉಳಿದಿತ್ತು.

 

ಶ್ರೀ ಸುಧೀರ ರಿಸಬುಡ ಅವರು ವೃತ್ತಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಪ್ರಕೃತಿಯ ಆರಾಧಕರು.  ಬೆಟ್ಟ, ಗುಡ್ಡ, ಸಮುದ್ರ ತೀರಗಳಲ್ಲಿ ಅಲೆದಾಡುತ್ತ, ಅನೇಕ ವಿಷಯಗಳ ಸಂಗ್ರಹಣೆ, ಅಭ್ಯಾಸ ಅವರ ಹವ್ಯಾಸವಾಗಿದೆ. ಸಹ್ಯಾದ್ರಿ ಪರ್ವತಗಳ ತಪ್ಪಲಿನಲ್ಲಿ ಕಂಡು ಬರುವ ಪಕ್ಷಿಗಳಬಗ್ಗೆ ಅವರ ಪುಸ್ತಕವೊಂದು (ಮರಾಠಿಯಲ್ಲಿ) ಪ್ರಕಟವಾಗಿದೆ. ಕಳೆದ ಕೆಲವು ವರ್ಷಗಳಿಂದ ಕೆಲ ಸಮ ವಿಚಾರವುಳ್ಳವರೆಲ್ಲ ಸೇರಿಕೊಂಡು ಪಾಷಾಣ ಶಿಲ್ಪಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ರತ್ನಾಗಿರಿಯಿಂದ ಗೋವಾದವರೆಗೂ ಸುಮಾರು ಐವತ್ತಕ್ಕೂ ಹೆಚ್ಚು ಚಿತ್ರಗಳನ್ನು ಗುರುತಿಸಿದ್ದಾರೆ. ಎಷ್ಟೋ ಕಡೆ ಚಿತ್ರಗಳು ಹಾಳಾಗಿವೆ. ರೆಸ್ತೆ/ಕಟ್ಟಡಗಳಿಂದಾಗಿ ತುಂಡಾಗಿವೆ. ಇವರ ಅನೇಕ ಪ್ರಯತ್ನಗಳಿಂದಾಗಿ ಸರ್ಕಾರದ ಗಮನವೂ ಅತ್ತ ಸೆಳೆದಿದ್ದು ಜನರೂ ಸಹ ಸಹಕಾರಿಗಳಾಗಿದ್ದಾರೆ. ಸಾಧ್ಯವಾದಷ್ಟು ಚಿತ್ರಗಳನ್ನು ಗುರುತಿಸಿ ಸಂರಕ್ಷಿಸುವ ಉದ್ದೇಶದಿಂದ ಅನೇಕ ಸಂಶೋಧನೆಗಳನ್ನೂ ಮಾಡುತ್ತಿದ್ದಾರೆ. ಸಾಕಷ್ಟು ವಿಷಯ ಸಂಗ್ರಹವಾದ ನಂತರ ಅದನ್ನು ಪ್ರಕಟಿಸುವ ಯೋಚನೆಯೂ ಇದೆ. ಮೊದಮೊದಲಿಗೆ ಎಲ್ಲರಲ್ಲೂ ಈ ವಿಷಯವನ್ನು ಹಂಚಿಕೊಂಡಿದ್ದರ ದುಷ್ಪರಿಣಾಮವನ್ನೂ ಎದುರಿಸಿದ್ದಾರೆ. ಹಾಗಾಗಿ, ನಮಗೆ ಅವರ ಸಂಗ್ರಹ ನೋಡಲು ಸಿಕ್ಕರೂ ಅದರ photo ಅಥವಾ xerox ತೆಗೆದುಕೊಳ್ಳಲು ಅನುಮತಿ ಕೊಡಲಿಲ್ಲ, ಆದರೆ ಸಾಧ್ಯವಾದಷ್ಟು ವಿಷಯಗಳನ್ನು ವಿವರಿಸಿ ಹೇಳಿದರು. ನಮ್ಮಲ್ಲಿ ವೇಳೆ ಕಡಿಮೆಯಿದ್ದರಿಂದ, ರತ್ನಾಗಿರಿಗೆ ಸಮೀಪದ, ಸುಮಾರು ೬೦ ಕಿ.ಮೀ. ದೂರದಲ್ಲಿರುವ ಒಂದು ಚಿತ್ರ ನೋಡಿ ಬರಲು ಹೇಳಿ, ಹೋಗಬೇಕಾದ ದಾರಿಯನ್ನೂ ವಿವರಿಸಿದರು.

ನಾವು ಮಧ್ಯಾಹ್ನ ಸುಮಾರು ೨ ಗಂಟೆಗೆ ರತ್ನಾಗಿರಿಯಿಂದ ಹೊರಟೆವು. ಪಾವಸ್ (ಇಲ್ಲಿ ಸ್ವಾಮಿ ಸ್ವರೂಪಾನಂದರ ಸಮಾಧಿಯಿದ್ದು, ಸುಂದರ ಮಂದಿರವಿದೆ) ಮುಖಾಂತರ ಅಡಿವರೆ ಎಂಬ ಊರಿಗೆ ಹೋಗಬೇಕು. ಅಡಿವರೆಯ ಮಹಾಲಕ್ಷ್ಮಿಯ ದೇವಸ್ಥಾನ ಈ ಭಾಗದಲ್ಲಿ ತುಂಬಾ ಪ್ರಸಿದ್ಧವಾದುದು. ವೇಳೆಯ ಅಭಾವದಿಂದಾಗಿ ನಮಗದನ್ನು ನೋಡಲು ಆಗಲಿಲ್ಲ. ಅಡಿವರೆಯಿಂದ ೨೦ ಕಿ.ಮೀ. ದೂರದಲ್ಲಿದೆ “ದೇವಾಚೆ ಗೋಠಣೆ ” ಎಂಬ ಹಳ್ಳಿ. ಕಿರಿದಾದ ಘಟ್ಟದ ರಸ್ತೆ, ಆಗೊಂದು ಈಗೊಂದು ಬಸ್ಸುಗಳ ಓಡಾಟ, ಬಿಟ್ಟರೆ ಸುತ್ತಲೂ ನೈಸರ್ಗಿಕ ಸಿರಿ ಕಂಗೊಳಿಸುತ್ತಿತ್ತು.

 

ರಸ್ತೆಯ ಬದಿಗೇ ಬಸ್ ನಿಲ್ದಾಣ. ಆಗಷ್ಟೇ ಒಂದು ಬಸ್ ಬಂದು ಹೋಗಿತ್ತು. ಬಸ್ಸಿನಿಂದ ಇಳಿದ ಮಧ್ಯ ವಯಸ್ಸಿನ ಹೆಂಗಸೊಬ್ಬರು ನಮ್ಮನ್ನು ನೋಡಿ ಏನು, ಎತ್ತ ಎಂದು ವಿಚಾರಿಸಿದರು. ನಾವು ಪಾಷಾಣ ಶಿಲ್ಪ ನೋಡಲು ಬಂದವರೆಂದು ತಿಳಿದು ಆನಂದಗೊಂಡರು. ಹತ್ತಿರದ ಗಲ್ಲಿಯೊಂದನ್ನು ತೋರಿಸಿ, “ಇಲ್ಲೇ ಮುಂದೆ ಹೋದರೆ ಭಾರ್ಗವರಾಮನ ದೇವಸ್ಥಾನವಿದೆ, ನೀವು ದೇವರ ದರ್ಶನ ಮಾಡಿ ಇನ್ನೊಂದು ಬಾಗಿಲಿನಿಂದ ಹೊರ ಬಿದ್ದರೆ ಮತ್ತೆ ಇದೇ ರಸ್ತೆಗೆ ಬರುತ್ತೀರ. ಹೀಗೆ ಏರಿ ಮೇಲೆ ನಡೆದು ಹೋಗಿ, ನನ್ನ ಮನೆ ಹತ್ತಿರದಲ್ಲೇ ಇದೆ. ನಾನು ನಿಮಗೆ ಜೊತೆಯಾಗಿ ಯಾರನ್ನಾದ್ರೂ ಕಳಿಸ್ತೇನೆ” ಎಂದರು. ಚಿತ್ರ ಎಷ್ಟು ದೂರವಿದೆ ಎಂದು ಕೇಳಿದ್ದಕ್ಕೆ, ” ಈ ಬೆಟ್ಟ ಹತ್ತಿ ಹೋದರೆ ಸಾಕು, ಆದರೆ ನಿಮಗೆ ಹುಡುಕೋದು ಕಷ್ಟವಾಗುತ್ತದೆ, ಹಾಗಾಗಿ ಜೊತೆ ಬೇಕು” ಎಂದರು.

 

ನಾವು ಆಕೆ ಹೇಳಿದಂತೆ ದೇವಸ್ಥಾನಕ್ಕೆ ಹೋದೆವು. ಚಿಕ್ಕವಾದರೂ ಚೊಕ್ಕವಾದ ಪರಶುರಾಮನ ಪುರಾತನ ದೇವಸ್ಥಾನ. ಹೇಳಿಕೊಳ್ಳುವಂಥ ಶಿಲ್ಪಕಲೆಯೇನೂ ಇರಲಿಲ್ಲ, ಆದರೆ ಕಬ್ಬಿಣದ ಸುಮಾರು ೧೦-೧೨ ಫೂಟ್ ಎತ್ತರದ ದೀಪಸ್ತಂಭ ಗಮನ ಸೆಳೆಯುವಂತಿತ್ತು. ಆ ಮಹಿಳೆ ಹೇಳಿದಂತೆ ಕಿರಿದಾದ ಏರು ಕಚ್ಚಾ ರಸ್ತೆಯಲ್ಲಿ ಹೊರಟೆವು. ಒಂದು ಬದಿಗೆ ಕೆಲವು ಮನೆಗಳು ಕಾಣಿಸಿದವು. ನಾವು ಬೆಟ್ಟದ ತುದಿಗೆ ಬಂದರೂ ಆ ಮಹಿಳೆ ಅಥವಾ ಬೇರೆ ಯಾವ ಹುಡುಗನು ಎಲ್ಲೂ ಕಾಣಲಿಲ್ಲ. ಆರಾಮಾಗಿ ಕಾರಿನಲ್ಲಿ ಬಂದವರಿಗೆ ಬೆಟ್ಟ ಹತ್ತಿ ಸುಸ್ತಾಗಿತ್ತು. ಕೆಳಗಿನಿಂದ ದೊಡ್ಡ ಮರಗಳು ಕಾಣುತ್ತಿದ್ದರೂ ಮೇಲೆ ಹತ್ತಿದ ನಂತರ ಗೊತ್ತಾಗಿದ್ದು, ಆ ಮರಗಳೆಲ್ಲ ಬೆಟ್ಟದ ಅಂಚಿಗೇ ಇವೆ. ಎದುರಿಗೆ ಕಂಡಿದ್ದು ವಿಶಾಲವಾದ ಬಯಲು ಪ್ರದೇಶ. ಎಲ್ಲೆಲ್ಲೂ ದಟ್ಟವಾಗಿ ಬೆಳೆದ ಹುಲ್ಲುಗಾವಲು. ಸುಮಾರು ೨-೩ ಅಡಿ ಎತ್ತರದವರೆಗೂ ಬೆಳೆದ ಹುಲ್ಲು, ಬಿಸಿಲಿನಿಂದಾಗಿ ಒಣಗಿ ಹೋಗಿತ್ತು. ಈ ಹುಲ್ಲಿನ ಕೆಳಗೆ ನಮಗೆ ಚಿತ್ರ ಕಾಣುವುದೆಂತೆಂದು ಒಂದು ಕ್ಷಣ ಬೇಜಾರಾಯಿತು. ಆದರೂ ಚಿತ್ರ ಕಾಣುವುದಿಲ್ಲವಾಗಿದ್ದರೆ ಶ್ರೀ ರಿಸಬುಡ ಅವರು ಮೊದಲೇ ಹೇಳಿರುತ್ತಿದ್ದರು ಎಂದು ಸಮಾಧಾನಗೊಂಡರೂ, ಅದನ್ನು ಹುಡುಕುವುದು ಹೇಗೆಂಬ ಪ್ರಶ್ನೆ ಮಾತ್ರ ಹಾಗೆ ಉಳಿಯಿತು. ಒಬ್ಬೊಬ್ಬರು ಒಂದೊಂದು ದಿಕ್ಕಿನತ್ತ ಸ್ವಲ್ಪ ಮುಂದೆ ಹೋಗಿ ಯಾರಾದರೂ ಕಾಣುತ್ತಾರಾ ಎಂದು ಹುಡುಕಿದೆವು. ಅಷ್ಟರಲ್ಲೇ ದೂರದಿಂದ ಕೆಲವು ದನ ಕಾಯುವ ಹುಡುಗರು ಕಾಣಿಸಿದರು. ಅವರದ್ದು ತೀರ ಗ್ರಾಮೀಣ ಭಾಷೆಯಾಗಿದ್ದು,  ನಾವು ಪಾಷಾಣ ಶಿಲ್ಪ ನೋಡಲು ಬಂದಿರುವುದೆಂದು ತಿಳಿಯಲು ಸ್ವಲ್ಪ ಹೊತ್ತು ಬೇಕಾಯಿತು. ಅವರಲ್ಲೊಬ್ಬನು ನಮ್ಮ ಜೊತೆಗೆ ಬಂದು ತೋರಿಸುತ್ತೇನೆಂದು ಹೇಳಿದ. ಬಹುಶಃ ಅವನಿಲ್ಲದಿದ್ದರೆ ನಮಗೆ ಪತ್ತೆಯೇ ಆಗುತ್ತಿರಲಿಲ್ಲ. ಮೈಗಂಟಿಕೊಳ್ಳುತ್ತಿದ್ದ ಹುಲ್ಲನ್ನು ಬದಿಗೆ ಸರಿಸುತ್ತ ಅವನ ಹಿಂದೆಯೇ ನಡೆದೆವು. ಸುಮಾರು ದೂರ ನಡೆದ ಮೇಲೆ ಬರೀ ನೆಲ ಕಂಡಿತು. ಅಲ್ಲಿತ್ತು ಅಂಗಾತ ಮಲಗಿದ ಆರಡಿ ಎತ್ತರದ ಮನುಷ್ಯನ ಚಿತ್ರ. ಪೆರು ಹಾಗೂ ಆಸ್ಟ್ರೇಲಿಯಾಗಳಲ್ಲಿ ಮಾನವಾಕೃತಿಗಳಿವೆ, ಆದರೆ ಆಕಾರದಲ್ಲಿ ಅವು ತೀರಾ ದೊಡ್ಡವು.

ಬೆಟ್ಟದ ಮೇಲಿನ ಹುಲ್ಲುಗಾವಲು. ಮಧ್ಯದಲ್ಲಿ ಕಾಣುವ ಮರದಿಂದ ಎಡಕ್ಕೆ ತಿರುಗಿ ಮುಂದೆ ಹೋದರೆ ಚಿತ್ರವಿರುವ ಜಾಗ ಸಿಗುತ್ತದೆ

ಬೆಟ್ಟದ ಮೇಲೆ ಎಲ್ಲಿ ನೋಡಿದರೂ ಹುಲ್ಲು ಬೆಳೆದಿತ್ತು, ಆದರೆ ಈ ಚಿತ್ರದ ಸುತ್ತಮುತ್ತ ಮಾತ್ರ ಇರಲಿಲ್ಲ.

 

ದೇವಾಚೆ ಗೋಠಣೆಯಲ್ಲಿ ನಾವು ಕಂಡ ಮಾನವಾಕೃತಿ.

ಇದರ ವಿಶೇಷತೆ ಏನೆಂದರೆ ಇಲ್ಲಿ ಆಯಸ್ಕಾಂತ ತನ್ನ ಕಾಂತಿವಲಯವನ್ನು ಕಳೆದುಕೊಳ್ಳುತ್ತದೆ. ಶ್ರೀ ರಿಸಬುಡ ಅವರು ಮೊದಲೇ ಸೂಚಿಸಿದ್ದಂತೆ ನಾವು compass  ತಂದಿದ್ದೆವು. ಅಲ್ಲದೇ  mobile ನಲ್ಲಿ compass app ಕೂಡ ಇತ್ತು. ಎಲ್ಲ ಕಡೆಗೆ  compass ಇಟ್ಟು ನೋಡಿ ನಿಸರ್ಗದ ಈ ವೈಚಿತ್ರ್ಯವನ್ನು ಅನುಭವಿಸಿದೆವು. ಶರೀರದ ಮಧ್ಯಭಾಗದಲ್ಲಿ ಆಯಸ್ಕಾಂತ ಸರಿಯಾಗಿ ೧೮೦° ತಿರುಗಿತ್ತು. ಅಂದರೆ ದಕ್ಷಿಣವನ್ನು ಉತ್ತರವೆಂದು ಗುರುತಿಸಿತು. ಯಾವ ಕಾಲದಲ್ಲಿ ಯಾರು ಈ ನೈಸರ್ಗಿಕ ವೈಚಿತ್ರವನ್ನು ಗುರುತಿಸಿದ್ದಾರೋ ತಿಳಿಯಲು ಮಾರ್ಗವಿಲ್ಲ.

 

ಎರಡೂ ಆಯಸ್ಕಾಂತಗಳು ಬೇರೆ ಬೇರೆ ದಿಕ್ಕುಗಳನ್ನು ತೋರಿಸುತ್ತಿವೆ

ನಾವಲ್ಲಿರುವಾಗಲೇ ಕೆಳಗೆ ಭೇಟಿಯಾದ ಆ ಮಹಿಳೆ ನಮ್ಮತ್ತ ಬಂದರು. “ಯಾಕೋ ಯಾವ ಹುಡುಗರೂ ಸಿಗಲಿಲ್ಲ, ಹಾಗಾಗಿ ನಾನೇ ಬಂದೆ. ಅಷ್ಟರಲ್ಲಿ ನಿಮಗೆ ಈ ಹುಡುಗ ಸಿಕ್ಕಿದ್ದು ಒಳ್ಳೆಯದಾಯಿತು.” ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ನಾವು ನಡೆದೆವು. ದಾರಿಯಲ್ಲಿ ಇನ್ನೊಂದಿಷ್ಟು ಮಾಹಿತಿಗಳು ಅವರಿಂದ ದೊರಕಿತು. ಈ ಬೆಟ್ಟದ ಬುಡದಲ್ಲಿ ಝರಿಯೊಂದು ಹರಿಯುತ್ತದೆ. ಎರಡು ವರ್ಷದ ಹಿಂದೆ ಅದಕ್ಕೊಂದು ಒಡ್ಡು ಕಟ್ಟುವ ಕೆಲಸ ಶುರುವಾಗಿತ್ತು. ಆಗ ಬಂದ ಎಂಜಿನಿಯರುಗಳು ಸರ್ವೆ ಮಾಡುತ್ತಿದ್ದಾಗ, ಕೆಲವೊಂದು ಕಡೆ ಅವರಿಗೆ ಆಯಸ್ಕಾಂತದ ತಪ್ಪು ಕಂಡು ಬಂದಿತು. ಅದರ ಮೂಲವನ್ನು ಹುಡುಕುತ್ತಾ ಬಂದಾಗ ಈ ಚಿತ್ರ ಕಾಣಿಸಿತು. ಆಮೇಲಿಂದ ಸುಮಾರು ಜನ ನೋಡಲು ಬರುತ್ತಿದ್ದಾರೆ.

 

 

ಅವರನ್ನು ಬೀಳ್ಕೊಟ್ಟು ನಾವು ಬೆಟ್ಟ ಇಳಿಯತೊಡಗಿದೆವು. ಆದರೆ ನನಗೊಂದು ಅನುಮಾನ ಇದ್ದೇ ಇತ್ತು. ಈ ಹಳ್ಳಿಯ ಜನರಿಗೆ ಇದರ ಬಗ್ಗೆ ಗೊತ್ತೇ ಇರಲಿಲ್ಲವೆಂಬುದು ನಂಬಲು ಕಷ್ಟವಿತ್ತು. ಕೆಳಗಿಳಿದು ಬರುವಾಗ ಮನೆಯ ಹರಟೆ ಹೊಡೆಯುತ್ತ ಕುಳಿತಿದ್ದ ವಯಸ್ಸಾದ ಹೆಂಗಸರು ಕಂಡರು. ಅವರು ನಮ್ಮತ್ತಲೇ ನೋಡುತ್ತ ಮಾತಾಡಿಕೊಳ್ಳುತ್ತಿದ್ದರು. ನಾನು ಅವರತ್ತ ನೋಡಿದಾಗ ಸ್ನೇಹದ ನಗೆ ಬೀರಿದರು. ಯಾವುದೇ ಊರಿನ ಹಿರಿತಲೆಗಳಲ್ಲಿ ತಮ್ಮ ಊರಿನ ಬಗೆಗೆ ಅನೇಕ ದಂತಕಥೆಗಳಿರುತ್ತವೆ ಎನ್ನುವುದು ನನ್ನ ನಂಬಿಕೆ. ನಾವು ಅವರನ್ನು ಮಾತಾಡಿಸಿದೆವು. ಭಾರ್ಗವರಾಮ ದೇವಸ್ಥಾನದ ಮಹಿಮೆಯನ್ನೆಲ್ಲ ಹೇಳಿದರು. “ಈಗ ನಮ್ಮ ಊರು ಭಣಭಣ ಅಂತಿದೆ, ಯುಗಾದಿಗೆ ಬಂದರೆ ಇಲ್ಲಿ ನಿಲ್ಲಲೂ ಜಾಗವಿರುವುದಿಲ್ಲ. ಆಗ ಜಾತ್ರೆಯಿರುತ್ತದೆ, ನೀವೆಲ್ಲರೂ ತಪ್ಪದೇ ಬನ್ನಿ. ಇಲ್ಲಿ ಹೋಟೆಲುಗಳಿಲ್ಲ, ಆದರೆ ನಮ್ಮ ಮನೆಗಳಲ್ಲಿಯೇ ಉಳಿದುಕೊಳ್ಳಬಹುದು”, ಆತ್ಮೀಯವಾಗಿ ಸ್ವಾಗತಿಸಿದರು. ನಾವು ಈಗಷ್ಟೇ ನೋಡಿಬಂದ ಮಾನವಾಕೃತಿಯ ಬಗ್ಗೆ ವಿಚಾರಿಸಿದಾಗ ಆಕೆ ತನ್ನ ಬೊಚ್ಚು ಬಾಯಿ ತೆರೆದು ನಗುತ್ತಾ ಹೇಳಿದರು “ಅಯ್ಯೊ ಆ ರಾವಣ ಕೃತಯುಗದ ಕಾಲದಿಂದ ಇಲ್ಲೇ ಬಿದ್ಕೊಂಡಿದಾನೆ, ಈ ಜನ್ರೆಲ್ಲ ಈಗ ನೋಡ್ತಿದಾರೆ “

ಪರಶುರಾಮನಿಗೆ ಹೆದರಿ ಅಡಗಿಕೊಂಡ ರಾವಣನ ಕಥೆ ನೆನಪಾಯಿತು.

ಪೆರು/ಆಸ್ಟ್ರೇಲಿಯಾದ ಚಿತ್ರಗಳು ಇಂಟರ್ನೆಟ್ ಕೃಪೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Usha Jogalekar

ಉತ್ತರ ಕರ್ನಾಟಕದ ಗದಗಿನಲ್ಲಿ ಬೆಳೆದಿದ್ದು. ಸದ್ಯಕ್ಕೆ ಪುಣೆಯಲ್ಲಿ ವಾಸ. ಕಂಪ್ಯೂಟರ್ ಎಂಜಿನಿಯರಿಂಗ್ ಮಾಡಿ ಕಾಲೇಜೊಂದರಲ್ಲಿ ಅಸಿಸ್ಟಂಟ್ ಪ್ರೊಫೆಸರ್. ಓದು, ಭರತನಾಟ್ಯ, ಪ್ರವಾಸ ಆಸಕ್ತಿಯ ವಿಷಯಗಳು. ಚಿಕ್ಕ ಕಥೆ, ಲೇಖನ ಬರೆಯುವ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!