ಅಂಕಣ

೩೭. ಯಾಕೀ ಕಣ್ಣು ಮುಚ್ಚಾಲೆ ಆಟ ?

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೭

ಅವತರಿಸಿಹನು ಬೊಮ್ಮ ವಿಶ್ವದೇಹದೊಳೆನ್ನೆ |
ಅವನ ವೇಷಗಳೇಕೆ ಮಾರ್ಪಡುತಲಿಹವು ? ||
ತವಕಪಡನೇತಕೋ ಕುರುಹ ತೋರಲು ನಮಗೆ |
ಅವಿತುಕೊಂಡಿಹುದೇಕೊ ? – ಮಂಕುತಿಮ್ಮ || ೩೭ ||

ಪರಬ್ರಹ್ಮಕ್ಕೆ ಸಂಬಂಧಿಸಿದ ಪ್ರತಿಯೊಂದು ನಂಬಿಕೆಯ ಮೂಲಗಳನ್ನೆ ಶೋಧಿಸಿ ಕೆಣಕುತ್ತ, ಕವಿಯ ಪರಬ್ರಹ್ಮದ ಮೇಲಿನ ದೂರುಗಳು ಹೊಸಹೊಸ ಅಂಶಗಳ ರೂಪದಲ್ಲಿ ಅನಾವರಣವಾಗುತ್ತಲೆ ಹೋಗುತ್ತವೆ – ಹಿಂದಿನ ಹಲವಾರು ಕಗ್ಗಗಳ ಹಾಗೆ. ಬಾಹ್ಯಸ್ವರೂಪದಲ್ಲಿದು ದೂರಿನಂತೆ ಕಂಡರೂ ಅಂತರಾಳದಲ್ಲಿ ಬ್ರಹ್ಮದ ಕುರಿತಾಗಿರುವ ಕುತೂಹಲ ಮಾತ್ರವಲ್ಲದೆ ಆ ಜಿಜ್ಞಾಸೆ ಕವಿಯನ್ನು ಪದೇಪದೇ ಎಡಬಿಡದೆ ಕಾದಿರುವ ಬಗ್ಗೆ ಇಲ್ಲಿ ಗಮನೀಯ.

ಅವತರಿಸಿಹನು ಬೊಮ್ಮ ವಿಶ್ವದೇಹದೊಳೆನ್ನೆ |
ಅವನ ವೇಷಗಳೇಕೆ ಮಾರ್ಪಡುತಲಿಹವು ? ||

ಒಂದರ್ಥದಲ್ಲಿ ಇಲ್ಲಿ ಜಿಜ್ಞಾಸೆಗೆ ಪರಿಗಣಿತವಾದ ನಂಬಿಕೆ ಅದ್ವೈತ ಸಿದ್ದಾಂತದ ಮೂಲಭೂತ ಅಂಶ. ಅದರನುಸಾರ ಆ ಪರಬ್ರಹ್ಮನೆ ತಾನೆ ಪ್ರತಿಯೊಬ್ಬ ಜೀವಿಯಲ್ಲೂ ತನ್ನದೆ ಅಂಶದ ರೂಪದಲ್ಲಿ ಆವರಿಸಿಕೊಂಡಿರುವುದು ? ಈ ಪರಬ್ರಹ್ಮವೆನ್ನುವುದು ವಿಶ್ವದೇಹದ ಪ್ರತಿಯೊಂದು ಚರಾಚರದಲ್ಲಿ ಇರುವುದೇ ನಿಜವಾದರೆ, ಅವನು ಅದರೊಳಗೆಲ್ಲ ಸ್ವಯಿಚ್ಛೆಯಿಂದಲೆ ಇದ್ದಾನೆಂದು ಅರ್ಥವಲ್ಲವೆ ? ಹಾಗಿದ್ದ ಮೇಲೇಕೆ, ನಮ್ಮೊಳಗಿದ್ದೂ ನಮಗೇ ಕಾಣಿಸಿಕೊಳದಿರುವ ಜಗನ್ನಾಟಕ ? ತನ್ನನ್ನು ತೋರಿಕೊಳುವೆನೆಂದು ಹೇಳಿಕೊಳ್ಳುವ ಬಗೆ ಕೂಡ ಬೇರೆಬೇರೆ ವೇಷಗಳು, ಅವತಾರಗಳು, ಮಾರ್ಪಡಿಕೆಗಳಾಗಿ ಕಾಣಿಸಿಕೊಳ್ಳುತ್ತವೆಯೆ ಹೊರತು ಅವನ ನಿಜವಾದ, ಅಸಲಿ ರೂಪದಲ್ಲಲ್ಲ. ಮೊದಲಿಗೆ ಈ ರೀತಿಯ ಬಗೆಬಗೆಯ ವೇಷಾಂತರದಲ್ಲಿ ಬಹುರೂಪಿಯಂತೆ ಕಾಣಿಸಿಕೊಂಡ ಮೂಲೋದ್ದೇಶವೇನು ? ಅವನ ನೈಜ ಸ್ವರೂಪ ಎಲ್ಲಾ ಕಡೆ ಒಂದೇ ಅಸಲಿ ರೂಪದಲ್ಲಿ ಕಾಣಬಹುದಿತ್ತಲ್ಲ ? ಎಂಬ ಅನುಮಾನ ಮಂಕುತಿಮ್ಮನನ್ನು ಕಾಡಿದ್ದು ಇಲ್ಲಿ ಪ್ರತಿಬಿಂಬಿತ.

ತವಕಪಡನೇತಕೋ ಕುರುಹ ತೋರಲು ನಮಗೆ |
ಅವಿತುಕೊಂಡಿಹುದೇಕೊ ? – ಮಂಕುತಿಮ್ಮ || ೩೭ ||

ಎಲ್ಲರೂ, ಎಲ್ಲವೂ ಅವನೆಂದು ಹೇಳುತ್ತಲೇ, ನಮ್ಮೊಳಗಿದ್ದೂ ಕೂಡ ತನ್ನ ಇರುವಿಕೆಯ ಸ್ವರೂಪದ ರೂಪುರೇಷೆಯ ಗುರುತನ್ನು ತೋರಬೇಕೆಂಬ ತವಕ, ಕಾತುರ ಯಾಕೆ ಅವನಲ್ಲಿ ಕಾಣುತ್ತಿಲ್ಲಾ? ಒಳಗೆಲ್ಲೊ ಏನೊ ಇದೆಯೆಂಬ ಅಪ್ರತ್ಯಕ್ಷ ಸುಳಿವುಗಳನ್ನು ಮಾತ್ರ ಕೊಡುತ್ತ ಕೈಗೆ ಸಿಗದೆ ಅವಿತುಕೊಂಡಿರುವ ಕಾರಣವಾದರೂ ಏನಿರಬಹುದು? ಎಂದು ಪರಬ್ರಹ್ಮನಿರುವಿಕೆಯ ಕುರಿತಿರುವ ಗೊಂದಲ, ತಳಮಳವನ್ನು ಮತ್ತೆ ಮತ್ತೆ ಧ್ವನಿಸುತ್ತಾನೆ ಮಂಕುತಿಮ್ಮ. ಹಾಗೆ ಮಾಡುತ್ತಲೆ ಪರಬ್ರಹ್ಮದ ಗಹನ ತತ್ವ ಜಿಜ್ಞಾಸೆಯನ್ನು, ಹುಲು ಮಾನವ ಜಗದ ಲೌಕಿಕದ ಕೊಂಡಿಯ ಜತೆಗೆ ಜೋಡಿಸಲು ಯತ್ನಿಸುತ್ತಾನೆ. ಅವೆರಡರ ನಡುವಿರುವ ‘ಸರಪಣಿಯ ಕಳುವಾದ ಕೊಂಡಿಗಳನ್ನು’ (ಮಿಸ್ಸಿಂಗ್ ಲಿಂಕ್ಸ್) ಹುಡುಕಲು ಚಡಪಡಿಸುತ್ತಾನೆ ತನ್ನ ಬಗೆಬಗೆಯ ತೀಕ್ಷ್ಣ ಪ್ರಶ್ನೆಗಳ ಮುಖೇನ.

ಹೀಗೆ ಸುಮಾರು ಕಗ್ಗಗಳಲ್ಲಿ ಕಾಣುವ ಬೊಮ್ಮನ ಕುರಿತಾದ ಪ್ರಸ್ತಾವನೆಯಲ್ಲಿ, ಕವಿ ತಾನರೆದು ಜೀರ್ಣಿಸಿಕೊಂಡ ಸಾರವನ್ನು ನಾಲ್ಕೇ ಸಾಲುಗಳಲ್ಲಿ ಓದುಗರಿಗೆ ಮುಟ್ಟಿಸುವ ಬಗೆ ಮಾತ್ರ ಅನನ್ಯ.

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!